ಮುಂಬರುವ ವರ್ಷ ನೀವು ತ್ಯಜಿಸಲು ನಿರ್ಧಾರ ಮಾಡಬೇಕಾದ, ನಿಮ್ಮ ಆಹಾರ ಕ್ರಮದಲ್ಲಿ ಅಡಗಿರುವಂತಹ ಅತ್ಯಂತ ವಿಷಕಾರಿಯಾದ ಕೆಲ ತಿನಿಸುಗಳ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ. ಹಾಗೆಯೇ, ನೀವು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬಹುದಾದ ಕೆಲ ಆರೋಗ್ಯಕರ ಆಯ್ಕೆಗಳನ್ನೂ ಸಹ ನಾವಿಂದು ಸೂಚಿಸುತ್ತಿದ್ದೇವೆ.

#1 ಸಕ್ಕರೆ: ಯಾವುದೇ ಪೋಷಕಾಂಶಗಳನ್ನೂ ನೀಡದ ಖಾಲಿ ಕ್ಯಾಲೋರಿಗಳು

ಹಿಂದಿನ ಕಾಲದಲ್ಲಿ, ಸಕ್ಕರೆಯನ್ನು ಸಂಸ್ಕರಿಸದೇ, ಅದರ ಮೂಲ ಸ್ವರೂಪದಲ್ಲಿಯೇ ಉಪಯೋಗಿಸಲಾಗುತ್ತಿತ್ತು. ಶೋಧಿಸಿದ ಕಬ್ಬಿನ ರಸವನ್ನು ಕುದಿಸಿ, ಅದು ಗಟ್ಟಿಯಾದ ಬಳಿಕ ಹರಳಿನ ಗಾತ್ರಕ್ಕೆ ಪುಡಿ ಮಾಡಿ, ಅದನ್ನು ಸಕ್ಕರೆಯಾಗಿ ಬಳಸಲಾಗುತ್ತಿತ್ತು. ಆದರೆ ಇಂದು ಎಲ್ಲಾ ಕಡೆ ದೊರೆಯುವ ಸಕ್ಕರೆಯು ರಾಸಾಯನಿಕವಾಗಿ ಶುದ್ಧೀಕರಿಸಿ ಸಂಸ್ಕರಿಸಲ್ಪಡುತ್ತದೆ. ಅಮೇರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್-ರವರ (NIH) ಪ್ರಕಾರ, ಈ ಸಂಸ್ಕರಣಾ ಪ್ರಕ್ರಿಯೆಯು ಸರಿಸುಮಾರು ಎಲ್ಲಾ ಜೀವಸತ್ವ ಮತ್ತು ಖನಿಜಗಳನ್ನು ತೆಗೆದುಹಾಕಿ, ಸಕ್ಕರೆಯ ಪೌಷ್ಟಿಕಾಂಶದ ಮೌಲ್ಯವನ್ನು ತೀವ್ರವಾಗಿ ಕಡಿಮೆ ಮಾಡುವ ಕಾರಣ, ಸಂಸ್ಕರಿಸಿದಂತಹ ಸಕ್ಕರೆ “ಖಾಲಿ ಕ್ಯಾಲೋರಿ”ಗಳನ್ನು ಮಾತ್ರ ನೀಡುತ್ತದೆ.

ನೈಸರ್ಗಿಕ ಸಕ್ಕರೆ ಮತ್ತು ಸೇರಿಸಿದ ಸಕ್ಕರೆ: ಪರ ವಿರೋಧಗಳು

ಹಣ್ಣು, ತರಕಾರಿ ಮತ್ತು ಹಾಲಿನ ಉತ್ಪನ್ನಗಳ ಅವಿಭಾಜ್ಯ ಅಂಗವಾಗಿ ಕಂಡುಬರುವ ಪ್ರಕೃತಿಸಿದ್ಧವಾದ ಸಕ್ಕರೆಯನ್ನು "ನೈಜ" ಅಥವಾ "ನೈಸರ್ಗಿಕವಾಗಿ ದೊರೆಯುವ ಸಕ್ಕರೆ"ಯೆಂದು ಹೇಳಲಾಗುತ್ತದೆ. ತಂಪು ಪಾನೀಯ, ತಿಂಡಿತಿನಿಸು ಮತ್ತು ಹಣ್ಣಿನ ಪಾನೀಯಗಳಿಗೆ ಸೇರಿಸಲಾದ ಸುಕ್ರೋಸ್ ಮತ್ತು ಇತರೆ ಸಂಸ್ಕರಿಸಿದ ಸಕ್ಕರೆಯನ್ನು "ಬಾಹ್ಯ" ಅಥವಾ "ಸೇರಿಸಿದ ಸಕ್ಕರೆ"ಯೆಂದು ಹೇಳಲಾಗುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಶನ್ (AHA) ಇವೆರಡನ್ನೂ ಬೇರೆ ಬೇರೆಯಾಗಿ ಪರಿಗಣಿಸುತ್ತದೆ. ವಿಪರೀತವಾದ ಸಕ್ಕರೆಯ ಸೇವನೆ ರಕ್ತದ ಕೊಳವೆಗಳನ್ನು ಗಟ್ಟಿಯಾಗಿಸಲು(ಎಥೆರೋಸ್ಕ್ಲೀರೋಸಿಸ್) ಕಾರಣವಿರಬಹುದು, ಮಧುಮೇಹವನ್ನು ಉಲ್ಬಣಿಸಬಹುದು ಹಾಗೂ ಅಪೌಷ್ಟಿಕತೆಗೆ ಕಾರಣವಾಗಲೂಬಹುದು ಎನ್ನುವುದಕ್ಕೆ ಸಾಕ್ಷ್ಯಿಗಳಿರಬಹುದು ಎಂದು ಅವರ ವರದಿಯು ಸೂಚಿಸುತ್ತದೆ.

ಸಕ್ಕರೆಗೆ ಪರ್ಯಾಯ ಪದಾರ್ಥಗಳು

 

ಬೆಲ್ಲ

  • ಪ್ರಾಚೀನ ಕಾಲದಲ್ಲಿ ಉಪಯೋಗಿಸಲಾಗುತ್ತಿದ್ದ ಸಂಸ್ಕರಿಸದಿರುವ ಕಚ್ಚಾ ಸಕ್ಕರೆಯೇ ಬೆಲ್ಲ. ಇದನ್ನು ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಆಹಾರ ಮತ್ತು ಪಾನೀಯಗಳನ್ನು ಸಿಹಿಯಾಗಿಸಲು ವ್ಯಾಪಕವಾಗಿ ಬಳಸಲಾಗುತ್ತಿತ್ತು.
  • ಬೆಲ್ಲವು ಕಬ್ಬಿನ ರಸದಲ್ಲಿರುವ ಖನಿಜಗಳು, ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಉಳಿಸಿಕೊಳ್ಳುತ್ತದೆ.  
  • ಒಣ ಕೆಮ್ಮನ್ನು ಗುಣಪಡಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಬೆಲ್ಲವನ್ನು ಪ್ರಾಚೀನ ಭಾರತೀಯ ಔಷಧ ಪದ್ಧತಿಯಾದ ಆಯುರ್ವೇದದಲ್ಲಿ ಬಳಸಲಾಗುತ್ತದೆ.

ಗಮನಿಸಿ: ಇಂದಿನ ದಿನಗಳಲ್ಲಿ, ಕೆಲವು ರೀತಿಯ ಬೆಲ್ಲಗಳಲ್ಲಿಯೂ ಸಹ ಸೂಪರ್-ಫಾಸ್ಫೇಟ್ ರಾಸಾಯನಿಕವನ್ನು ಬೆರೆಸಲಾಗುತ್ತದೆ. ಬಿಳಿಯಾಗಿ, ಆಕರ್ಷಕವಾಗಿ ಕಾಣುವ ಬೆಲ್ಲವೆಂದರೆ ಅದು ಸೂಪರ್-ಫಾಸ್ಫೇಟ್ ಬೆಲ್ಲ. ಅದನ್ನು ಬಳಸಬೇಡಿ. ಅದರ ಬದಲಾಗಿ ನೋಡಲು ಚೆನ್ನಾಗಿಲ್ಲದ, ಕಂದು ಅಥವಾ ಕಪ್ಪು ಬಣ್ಣದ ಬೆಲ್ಲವನ್ನು ಉಪಯೋಗಿಸಿ.

ಜೇನುತುಪ್ಪ

  • ಜೇನುತುಪ್ಪವು ಸಕ್ಕರೆಗೆ ಅದ್ಭುತ ಮತ್ತು ಪ್ರಾಕೃತಿಕವಾದ ಪರ್ಯಾಯವಾಗಿದೆ.
  • ಜೇನುತುಪ್ಪವನ್ನು ದಿನಂಪ್ರತಿ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ವಿಶೇಷವಾಗಿ ಹೆಚ್ಚಿನ ಕಫ ಮತ್ತು ಆಸ್ತಮಾ ಸಮಸ್ಯೆ ಇರುವವರಿಗೆ ಇದು ಬಹಳ ಪರಿಣಾಮಕಾರಿ.
  • ಹೃದಯ ಮತ್ತು ಮೆದುಳಿಗೆ ಜೇನುತುಪ್ಪವು ಬಹಳ ಉತ್ತಮವಾಗಿದ್ದು, ಮನಸ್ಸನ್ನು ಅದು ಚುರುಕಾಗಿರಿಸುತ್ತದೆ.
  • ಜೇನುತುಪ್ಪವನ್ನು ಹೇಗೆ ಸೇವಿಸಲಾಗತ್ತದೆ ಎಂಬುದರ ಆಧಾರದ ಮೇಲೆ ಅದು ಮನುಷ್ಯರ ವ್ಯವಸ್ಥೆಯ ಮೇಲೆ ವಿವಿಧ ಪರಿಣಾಮಗಳನ್ನು ಬೀರುತ್ತದೆ. ಅದನ್ನು ಅದರ ಕಚ್ಚಾ ರೂಪದಲ್ಲಿ  ಸೇವಿಸಬಹುದು, ತಣ್ಣಗಿನ ಅಥವಾ ಬೆಚ್ಚಗಿನ ನೀರಿನಲ್ಲಿ ಬೆರೆಸಿಯೂ ಸಹ ಸೇವಿಸಬಹುದು.
  • ಪ್ರತಿದಿನ ಜೇನುತುಪ್ಪವನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಸೇವಿಸಿದಾಗ, ಅದು ರಕ್ತಪರಿಚಲನಾ ವ್ಯವಸ್ಥೆಯಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಿ ರಕ್ತಹೀನತೆಯ ಸಮಸ್ಯೆಯನ್ನು ಪರಿಹರಿಸುತ್ತದೆ.
     

ಗಮನಿಸಿ: ಜೇನುತುಪ್ಪವನ್ನು ಬಿಸಿ ಮಾಡಬಾರದು. ಹಾಗೆ ಮಾಡಿದಲ್ಲಿ, ಅದು ವಿಷವಾಗುತ್ತದೆ. ಹಾಗೆಯೇ, ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಬೇಕು, ಕುದಿಯುವ ನೀರಿನಲ್ಲಲ್ಲ. ಒಂದು ವರ್ಷದೊಳಗಿನ ಮಕ್ಕಳಿಗೂ ಕೂಡ ಜೇನುತುಪ್ಪವನ್ನು ನೀಡಬಾರದು.

# 2 ಹಾಲು: ಬಹಳಷ್ಟು ವಯಸ್ಕರಲ್ಲಿ ಜೀರ್ಣವಾಗದ ಪದಾರ್ಥ

ಮೂರು ವರ್ಷದೊಳಿಗಿನ ಮಕ್ಕಳಲ್ಲಿ ಮಾತ್ರ ಹಾಲನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಬೇಕಾದ ಎಂಜೈಮುಗಳಿರುತ್ತವೆ. ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಪ್ರಪಂಚದಾದ್ಯಂತ ಬಹುತೇಕ ವಯಸ್ಕರಿಗೆ ಹಾಲು ಹೆಚ್ಚಾಗಿ ಅಜೀರ್ಣಕಾರಿಯಾಗಿದೆ. ಜೀರ್ಣವಾಗದ ಹಾಲು ಕಫವನ್ನು ಹೆಚ್ಚಿಸುತ್ತದೆ ಮತ್ತು ಸೋಮಾರಿತನವನ್ನು ಉಂಟುಮಾಡುತ್ತದೆ. ಹೌದು, ಸಾಂಪ್ರದಾಯಿಕವಾಗಿ ಹಾಲಲ್ಲಿ ಕ್ಯಾಲ್ಸಿಯಂ ಹೇರಳವಾಗಿ ದೊರೆಯುತ್ತದೆ ಎಂದು ನಂಬಲಾಗಿದೆ. ಆದರೆ ಕ್ಯಾಲ್ಸಿಯಂ-ಅನ್ನು ಪಡೆಯಲು ಇನ್ನೂ ಹಲವಾರು ಉತ್ತಮ ಆಹಾರ ಮೂಲಗಳಿವೆ. 

ಹಾಲಿನ ಪರ್ಯಾಯಗಳು

ದೈನಂದಿನ ಕ್ಯಾಲ್ಸಿಯಂ ಅಗತ್ಯವನ್ನು ಪೂರೈಸಲು ಧಾನ್ಯಗಳು (ಕೆಳಗೆ ನೋಡಿ), ಬೇಳೆಕಾಳುಗಳು ಮತ್ತು ಬೀಜಗಳು ಹಾಲಿನ ಉತ್ತಮ ಪರ್ಯಾಯವಾಗಿವೆ. ಉದಾಹರಣೆಗೆ:

ಕಡಲೆಕಾಯಿ ಬೀಜ

  • ಕಡಲೆಕಾಯಿ ಸಂಪೂರ್ಣವಾದ ಒಂದು ಆಹಾರ ಕ್ರಮವಾಗಿದೆ.
  • ಹಸಿ ಕಡಲೆಕಾಯಿಯು ಒಂದು ಪರಿಪೂರ್ಣ ಆಹಾರವಾಗಿರುವ ಕಾರಣ, ಭಾರತದಲ್ಲಿ ಅನೇಕ ಯೋಗಿಗಳು ಕೇವಲ ಕಡಲೆಕಾಯಿಯನ್ನಷ್ಟೇ ತಿನ್ನುವ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿರುತ್ತಾರೆ.

ಗಮನಿಸಿ: ಕಡಲೆಕಾಯಿಯನ್ನು ಕನಿಷ್ಠ ಆರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಆಯುರ್ವೇದದಲ್ಲಿ ಪಿತ್ತವೆಂದು ಕರೆಯಲ್ಪಡುವ ಕೆಲವು ಅಂಶಗಳನ್ನು ಇದು ತೆಗೆದುಹಾಕುತ್ತದೆ. ನೀವು ಕಡಲೆಕಾಯಿಯನ್ನು ನೆನೆಸದೆ ತಿಂದರೆ, ಅದು ಚರ್ಮದ ಮೇಲಿನ ದದ್ದುಗಳಿಗೆ ಮತ್ತು ವಾಕರಿಕೆಗೆ ಕಾರಣವಾಗುತ್ತದೆ.

ಹುರಳಿಕಾಳು

  • ಕಬ್ಬಿಣ ಮತ್ತು ಕ್ಯಾಲ್ಸಿಯಂ-ಅನ್ನು ಸಮೃದ್ಧವಾಗಿ ಹೊಂದಿದ್ದು, ಪ್ರೋಟೀನ್ ಹೇರಳವಾಗಿರುವ ಸಸ್ಯಾಹಾರಿ ಆಹಾರಗಳ ಪೈಕಿ ಇದೂ ಒಂದು.
  • ಆದಾಗ್ಯೂ, ಕ್ಯಾಲ್ಸಿಯಂ ಮತ್ತು ಕಬ್ಬಿಣವು ಸೇರಿ ಒಂದು ರಾಸಾಯನಿಕ ಸಂಯುಕ್ತ ವಸ್ತುವಾಗಿ, ಇದನ್ನು ನಮ್ಮ ದೇಹವು ಹೀರಿಕೊಳ್ಳಲು ಬಾರದಂತೆ ಮಾಡುತ್ತದೆ. 
  • ಹುರಳಿಕಾಳನ್ನು ಮೊಳಕೆಯೊಡಿಸುವುದು ಆಹಾರ ಸಂಸ್ಕರಣೆಯ ಒಂದು ಸರಳ ವಿಧಾನವಾಗಿದ್ದು, ಇದು ಕಬ್ಬಿಣ ಮತ್ತು ಕ್ಯಾಲ್ಸಿಯಂ-ನ ಲಭ್ಯತೆಯನ್ನು ಹೆಚ್ಚಿಸುತ್ತದೆ, ಮತ್ತು ಇದರಿಂದಾಗಿ ಪೌಷ್ಟಿಕಾಂಶದ ಮೌಲ್ಯವೂ ಸಹ ಹೆಚ್ಚಾಗುತ್ತದೆ. ಮೊಳಕೆಯೊಡೆದ ಹುರಳಿಕಾಳು ಸುಲಭವಾಗಿ ಜೀರ್ಣವಾಗುತ್ತದೆ.

ಗಮನಿಸಿ: ಹುರಳಿಕಾಳು ದೇಹದಲ್ಲಿನ ಉಷ್ಣಾಂಶದ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮಳೆ ಮತ್ತು ಚಳಿಗಾಲದಲ್ಲಾಗುವ ಕೆಮ್ಮು ಶೀತಗಳಿಂದ ಇದು ರಕ್ಷಣೆಯನ್ನು ನೀಡುತ್ತದೆ. ಆದರೆ ಬೇಸಿಗೆಯಲ್ಲಿ ಅದು ನಿಮ್ಮ ದೇಹದ ಉಷ್ಣಾಂಶವನ್ನು ಹೆಚ್ಚಿಸಿದಲ್ಲಿ, ಮೊಳಕೆಯೊಡೆದ ಹೆಸರುಕಾಳುಗಳನ್ನು ತಿನ್ನುವ ಮೂಲಕ ಅದನ್ನು ಸರಿದೂಗಿಸಬೇಕಾಗುತ್ತದೆ.

#3 ಸಂಸ್ಕರಿಸಿದ ಧಾನ್ಯಗಳು: ಪೋಷಕಾಂಶಗಳು, ಖನಿಜಗಳು ಮತ್ತು ನಾರನ್ನು ತೆಗೆದುಹಾಕಲಾಗಿರುವ ಧಾನ್ಯಗಳು

ಒಂದು ಧಾನ್ಯವು ಅದರ ನೈಸರ್ಗಿಕ ಸ್ಥಿತಿಯಲ್ಲಿ, ರಚನಾತ್ಮಕವಾಗಿ ಮೂರು ಅಂಶಗಳಿಂದ ನಿರ್ಮಿಸಲ್ಪಟ್ಟಿರುತ್ತದೆ.

  • ಭ್ರೂಣಾಹಾರ / ಎಂಡೋಸ್ಪರ್ಮ್: ಬೀಜದ ಆಹಾರ ಪೂರೈಕೆಯ ಘಟಕ
  • ಜೀವಾಣು / ಜರ್ಮ್: ಸಸ್ಯದ ಭ್ರೂಣ
  • ತವಡು / ಬ್ರ್ಯಾನ್: ಸಸ್ಯದ ಭ್ರೂಣ ಮತ್ತು ಭ್ರೂಣಾಹಾರದ ಸುತ್ತಲೂ ಇರುವ ರಕ್ಷಾಕವಚ

ಎಂಡೋಸ್ಪರ್ಮ್-ನಲ್ಲಿ ಪಿಷ್ಟ(ಸ್ಟಾರ್ಚ್) ಹೇರಳವಾಗಿದೆ. 

ಎಂಡೋಸ್ಪರ್ಮ್-ನ ಪ್ರಧಾನ ಅಂಶವೆಂದರೆ ಸ್ಟಾರ್ಚ್. ಇದು ಮೊಳಕೆಯೊಡೆಯುವ ಬೀಜಕ್ಕೆ ಶಕ್ತಿಯನ್ನು ಪೂರೈಸುವ ಕಾರ್ಯವನ್ನು ನಿರ್ವಹಿಸುತ್ತದೆ. ವಿಟಮಿನ್-ಗಳು, ಖನಿಜಗಳು, ನಾರಿನಂಶ, ಅಥವಾ ಫೈಟೊಕೆಮಿಕಲ್ಸ್-ಗಳು ಜೀವಾಣು ಮತ್ತು ತವಡಿಗೆ ಹೋಲಿಸಿದರೆ ಎಂಡೋಸ್ಪರ್ಮ್-ನಲ್ಲಿ ವಿರಳವಾಗಿರುತ್ತವೆ.

ತವಡು ಮತ್ತು ಜೀವಾಣು ಪೋಷಕಾಂಶಗಳನ್ನು ಹೊಂದಿರುತ್ತವೆ.

ಎಂಡೋಸ್ಪರ್ಮ್-ಗೆ ವ್ಯತಿರಿಕ್ತವಾಗಿ, ತವಡು ಮತ್ತು ಜೀವಾಣುವಿನಲ್ಲಿ ಹೇರಳವಾದ ಪೋಷಕಾಂಶಗಳಿವೆ. ವಿಟಮಿನ್ ಬಿ ಜೀವಸತ್ವ, ಅಮೈನೋ ಆಮ್ಲಗಳು, ಫೈಟೊಕೆಮಿಕಲ್ಸ್-ಗಳು ಮತ್ತು ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಸಿಯಮ್, ಸೋಡಿಯಂ ಮತ್ತು ಕಬ್ಬಿಣದಂತಹ ಖನಿಜಗಳು ಅವುಗಳಲ್ಲಿ ಸಮೃದ್ಧವಾಗಿವೆ.

ಧಾನ್ಯಗಳನ್ನು ಸಂಸ್ಕರಿಸಿದಾಗ ಅವುಗಳ ಪೌಷ್ಟಿಕಾಂಶದ ಮೌಲ್ಯವು ಕಡಿಮೆಯಾಗುತ್ತದೆ.

ಆದಾಗ್ಯೂ, ಧಾನ್ಯಗಳನ್ನು ವಾಣಿಜ್ಯಿಕವಾಗಿ ಮಾರುವ ಮುನ್ನ, ಅವುಗಳ ಮೇಲ್ಮೈಗುಣ ಮತ್ತು ಸಂಗ್ರಹಾಯುಷ್ಯವನ್ನು ಹೆಚ್ಚಿಸುವ ಸಲುವಾಗಿ ಅವುಗಳನ್ನು ಅನೇಕಸಲ ಸಂಸ್ಕರಿಸಲಾಗುತ್ತದೆ. ಸಂಸ್ಕರಿಸಿದ ಧಾನ್ಯಗಳೆಂದು ಕರೆಯಲ್ಪಡುವ ಈ ಧಾನ್ಯಗಳು, ತವಡು ಮತ್ತು ಜೀವಾಣುಗಳನ್ನು ಬೇರ್ಪಡಿಸುವ ಮತ್ತು ತೆಗೆದುಹಾಕುವ ಪ್ರಕ್ರಿಯೆಯ ಮೂಲಕ ಹಾದು ಹೋಗುತ್ತವೆ. ಕೊನೆಯಲ್ಲಿ ಕೇವಲ ಪಿಷ್ಟದ ಎಂಡೋಸ್ಪರ್ಮ್ ಮಾತ್ರ ಉಳಿದಿರುತ್ತದೆ. ಇದರ ಪರಿಣಾಮವಾಗಿ ಧಾನ್ಯದಲ್ಲಿನ ಹೆಚ್ಚಿನ ಪೋಷಕಾಂಶಗಳು, ಖನಿಜಗಳು ಮತ್ತು ಆಹಾರದ ನಾರು ಕಳೆದುಹೋಗಿರುತ್ತದೆ.

ಇಂದಿನ ದಿನಗಳಲ್ಲಿ ವಾಣಿಜ್ಯಿಕವಾಗಿ ಮಾರಾಟವಾಗುವ ಬಹುತೇಕ ಧಾನ್ಯಗಳು ಕೆಲವು ಸಂಸ್ಕರಣಾ ಪ್ರಕ್ರಿಯೆಗೆ ಒಳಪಟ್ಟಿರುತ್ತವೆ. ಇದಕ್ಕೆ ಸಾಮಾನ್ಯವಾದ ಉದಾಹರಣೆ ಎಂದರೆ ಬಿಳಿ ಅಕ್ಕಿ ಮತ್ತು ಮೈದಾಹಿಟ್ಟು.

ಸಂಸ್ಕರಿಸಿದ ಧಾನ್ಯಗಳಿಗೆ ಪರ್ಯಾಯಗಳು

ಕೆಂಪಕ್ಕಿ ಮತ್ತು ಸಂಸ್ಕರಿಸದೇ ಇರುವ ಗೋಧಿಯಂತಹ ಧಾನ್ಯದ ಉತ್ಪನ್ನಗಳು ಈ ದಿನಗಳಲ್ಲಿ ಹೆಚ್ಚಾಗಿ ಲಭ್ಯವಾಗುತ್ತಿವೆ. ಹೃದ್ರೋಗ, ಕ್ಯಾನ್ಸರ್, ಸ್ಥೂಲಕಾಯ, ಟೈಪ್-2 ಡೈಯಾಬಿಟೀಸ್ ಮತ್ತು ಇನ್ನಿತರೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಅನೇಕ ಧಾನ್ಯಗಳು ಸಹಕಾರಿಯಾಗಿವೆ. ಬಹುತೇಕವಾದ ಈ ಅಂಶಗಳು ತವಡು ಮತ್ತು ಜೀವಾಣುವಿನಲ್ಲಿವೆ. ಆದರೆ ಸಂಸ್ಕರಣೆಯ ಸಮಯದಲ್ಲಿ ಹೆಚ್ಚುಕಡಿಮೆ ಇವುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. 

ನಮ್ಮ ಆಹಾರದಲ್ಲಿ ಒಂದು ಅಥವಾ ಎರಡಕ್ಕಿಂತ ಹೆಚ್ಚು ಧಾನ್ಯಗಳಿರುವಂತೆ ನಾವು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ನಮ್ಮ ಆಹಾರಕ್ರಮದ ಪ್ರಮುಖ ಅಂಶವಾಗಬಹುದಾದಂತಹ, ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿದಂತ, ಆದರೆ ನಿರ್ಲಕ್ಷಸಿಲ್ಪಟ್ಟಿರುವ ಅನೇಕ ರೀತಿಯ ಧಾನ್ಯಗಳು ನಮ್ಮಲ್ಲಿ ಲಭ್ಯವಿವೆ.

ರಾಗಿ

  • ಹಿಂದಿಯಲ್ಲೂ ಸಹ ರಾಗಿ ಎಂದು ಕರೆಯಲ್ಪಡುವ ಈ ಧಾನ್ಯವು ಅತ್ಯಂತ ಪೌಷ್ಟಿಕವಾದದ್ದೆಂದು ಪರಿಗಣಿಸಲ್ಪಟ್ಟಿದೆ. 
  • ರಾಗಿಯಲ್ಲಿನ ಪ್ರೋಟೀನ್ ಅಂಶವು ಹೆಚ್ಚಿನ ಜೈವಿಕ ಮೌಲ್ಯವನ್ನು ಹೊಂದಿರುವುದರಿಂದಾಗಿ ನಮ್ಮ ಶರೀರ ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. 
  • ನಮ್ಮ ದೇಹಾರೋಗ್ಯಕ್ಕೆ ಪ್ರಧಾನವಾದ ಹಲವು ಅಮೈನೊ ಆಮ್ಲಗಳು ರಾಗಿಯಲ್ಲಿ ಕಂಡುಬರುತ್ತವೆ. ಬಹುತೇಕ ಇತರೆ ಧಾನ್ಯಗಳಲ್ಲಿ ಈ ಅಮೈನೊ ಆಮ್ಲಗಳ ಕೊರತೆಯಿರುತ್ತದೆ. 
  • ರಾಗಿಯಲ್ಲಿ ಖನಿಜಗಳು ಸಮೃದ್ಧವಾಗಿ ಕಂಡುಬರುತ್ತವೆ. ವಿಶೇಷವಾಗಿ, ಇತರ ಧಾನ್ಯಗಳಿಗೆ ಹೋಲಿಸಿದಾಗ ರಾಗಿಯಲ್ಲಿ ಕ್ಯಾಲ್ಸಿಯಂ ಐದರಿಂದ ಮೂವತ್ತು ಪಟ್ಟು ಹೆಚ್ಚು ಸಾಂದ್ರತೆಯಲ್ಲಿ ಲಭ್ಯವಿದೆ. 
  • ರಂಜಕ ಮತ್ತು ಕಬ್ಬಿಣದ ಅಂಶಗಳು ಸಹ ಇದರಲ್ಲಿ ಅಧಿಕವಾಗಿವೆ.

ಗಮನಿಸಿ: ರಾಗಿಯನ್ನು ಬಳಸಿ ರೊಟ್ಟಿ, ದೋಸೆ, ಗಂಜಿ, ಬಿಸ್ಕತ್ತು ಮತ್ತು ರುಚಿಕರವಾದ ಲಡ್ಡುಗಳನ್ನು ಮಾಡಬಹುದು.

ಸಜ್ಜೆ

  • ಹಿಂದಿಯಲ್ಲಿ ಬಾಜ್ರಾ ಎಂದು ಕರೆಯಲ್ಪಡುವ ಸಜ್ಜೆಯಲ್ಲಿ ವಿಟಮಿನ್ ಬಿ ಜೀವಸತ್ವ ಹೇರಳವಾಗಿದ್ದು, ಪೊಟ್ಯಾಸಿಯಮ್, ರಂಜಕ, ಮೆಗ್ನೀಸಿಯಮ್, ಕಬ್ಬಿಣ, ಸತು, ತಾಮ್ರ ಹಾಗೂ ಮ್ಯಾಂಗನೀಸ್ ಹೆಚ್ಚಿನ ಪ್ರಮಾಣದಲ್ಲಿವೆ. 
  • ಇದರಲ್ಲಿ ಅಂಟುಪದಾರ್ಥ(Gluten) ಇಲ್ಲದಿರುವುದ ಕಾರಣ ಗೋಧಿಯ ಅಲರ್ಜಿ ಇರುವವರಿಗೆ ಇದು ಸೂಕ್ತವಾಗಿದೆ.
  • ಪೌಷ್ಟಿಕಾಂಶದ ವಿಷಯದಲ್ಲಿ ಇದು ಅಕ್ಕಿ ಮತ್ತು ಗೋಧಿಗಿಂತ ಉತ್ತಮವಾಗಿದೆ ಎಂದು ಕಂಡುಬಂದಿದೆ. 
  • ಗೋಧಿಯನ್ನು ಬಳಸುವ ಆಹಾರ ಕ್ರಮಕ್ಕಿಂತ, ಸಜ್ಜೆ ಮತ್ತು ಬೇಳೆಕಾಳುಗಳನ್ನು ಒಳಗೊಂಡ ಆಹಾರ ಕ್ರಮವು ಮನುಷ್ಯರ ಬೆಳವಣಿಗೆಯನ್ನು ವೃದ್ಧಿಸುವಲ್ಲಿ ಸ್ವಲ್ಪಮಟ್ಟಿಗೆ ಉತ್ತಮವಾದುದ್ದೆಂದು ಭಾರತದಲ್ಲಿನ ಸಂಶೋಧನೆಯ ಆಧಾರದ ಮೇಲೆ ನಡೆಸಲಾದ ಒಂದು ಅಧ್ಯಯನವು ತೋರಿಸಿಕೊಟ್ಟಿದೆ.

#4 ಟೀ / ಕಾಫಿ: ದೀರ್ಘಾವಧಿಯಲ್ಲಿ ಚೈತನ್ಯವನ್ನು ನಾಶಮಾಡುತ್ತದೆ

ಚಹಾ ಮತ್ತು ಕಾಫಿ ನರ ಉತ್ತೇಜಕಗಳು. ನರ ಉತ್ತೇಜಕಗಳು ಸ್ವಲ್ಪ ಕಾಲ ನಿಮ್ಮಲ್ಲಿ ಶಕ್ತಿಯಿರುವಂತೆ ಮಾಡುತ್ತವೆ, ತದನಂತರದಲ್ಲಿ, ಶರೀರದ ಶಕ್ತಿಯ ಮಟ್ಟವು ಕುಸಿಯುತ್ತದೆ. ಇವುಗಳನ್ನು ಹೆಚ್ಚಾಗಿ ಸೇವಿಸಿದರೆ, ದೀರ್ಘಾವಧಿಯಲ್ಲಿ ಇವು ನಿಮ್ಮ ದೇಹಬಲವನ್ನು ನಾಶಮಾಡುತ್ತವೆ ಮತ್ತು ನಿಮ್ಮ ದೇಹದ ಶಕ್ತಿ ಶೇಖರಣಾ ಸಾಮರ್ಥ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.

ಪರ್ಯಾಯವಾದ ಶಕ್ತಿದಾಯಕ ಪಾನೀಯಗಳು 

 

ಬೂದಗುಂಬಳಕಾಯಿ

  • ಪ್ರತಿದಿನ ಬೆಳಿಗ್ಗೆ ಒಂದು ಗ್ಲಾಸ್ ಬೂದಗುಂಬಳಕಾಯಿಯ ರಸವನ್ನು ಕುಡಿಯುವುದು ನಿಮ್ಮನ್ನು ತುಂಬ ಚುರುಕಾಗಿಸುವುದಲ್ಲದೇ ನಿಮ್ಮ ನರಗಳನ್ನೂ ಸಹ ಶಾಂತವಾಗಿರಿಸುತ್ತದೆ. 
  • ಬೂದಗುಂಬಳಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ಬೌದ್ಧಿಕ ಸಾಮರ್ಥ್ಯಗಳು ಬಹಳವಾಗಿ ಹೆಚ್ಚಾಗುತ್ತವೆ.

ನಿಂಬೆ–ಶುಂಠಿ ಟೀ

ಈ ನಿಂಬೆ-ಶುಂಠಿಯ ಟೀ, ಕೆಫೀನ್-ನ ಅಡ್ಡಪರಿಣಾಮಗಳಿಲ್ಲದೆಯೇ ನಿಮ್ಮನ್ನು ತಾಜಾ ಮತ್ತು ಉತ್ತೇಜಿತರಾಗಿರುವಂತೆ ಮಾಡುತ್ತದೆ.

ಮಾಡುವ ವಿಧಾನ

  • ಒಂದು ಪಾತ್ರೆಯಲ್ಲಿ ನಾಲ್ಕೂವರೆ ಕಪ್-ಗಳಷ್ಟು ನೀರನ್ನು ಕುದಿಸಿ.
  • ನೀರು ಬಿಸಿಯಾಗುತ್ತಿರುವಾಗ, ಎರಡು ಇಂಚಿನಷ್ಟು ಶುಂಠಿಯನ್ನು 25 – 30 ತುಳಸಿ ಎಲೆಗಳೊಂದಿಗೆ ಜಜ್ಜಿ.
  • ಈ ಮಿಶ್ರಣವನ್ನು ಎರಡು ಟೀ. ಚಮಚದಷ್ಟು ಒಣಕೊತ್ತಂಬರಿ ಬೀಜದ ಜೊತೆಗೆ ಕುದಿಯುತ್ತಿರುವ ನೀರಿಗೆ ಹಾಕಿ.
  • ಎರಡರಿಂದ ಮೂರು ನಿಮಿಷಗಳವರೆಗೆ ಇದನ್ನು ಕುದಿಯಲು ಬಿಡಿ.
  • ಜರಡಿಯಲ್ಲಿ ಈ ಪಾನೀಯವನ್ನು ಸೋಸಿ, ಇದಕ್ಕೆ 1 ಟೀ. ಚಮಚ ನಿಂಬೆ ರಸ ಹಾಗೂ ಬೆಲ್ಲವನ್ನು ಬೆರಸಿ ಬಿಸಿಯಿರುವಾಗಲೇ ಕುಡಿಯಿರಿ.

ತಿನ್ನುವುದರಲ್ಲಿನ ಆನಂದ

ನಿಮ್ಮ ದೈನಂದಿನ ಆಹಾರದಲ್ಲಿ ಪೌಷ್ಠಿಕಾಂಶದ ಉತ್ತಮ ಸಮತೋಲನವನ್ನು ಖಚಿತಪಡಿಸಿಕೊಳ್ಳುವುದು ಎಷ್ಟು ಮುಖ್ಯವೋ, ಅಂತೆಯೇ ನೀವು ತಿನ್ನುವ ಆಹಾರದ ಬಗ್ಗೆ ಸಂಶಯಗ್ರಸ್ತರಾಗಿರಬಾರದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವುದೂ ಸಹ ಅಷ್ಟೇ ಮುಖ್ಯ.

"ನಾನಿದನ್ನು ತಿನ್ನುವುದಿಲ್ಲ, ನಾನದನ್ನು ತಿನ್ನುವುದಿಲ್ಲ, ನಾನು ಈ ರೀತಿ ತಿನ್ನಬೇಕು, ನಾನು ಆ ರೀತಿ ತಿನ್ನಬೇಕು." ಎನ್ನುವ ಹುಚ್ಚಾಟಿಕೆಗಳನ್ನೆಲ್ಲ ತಿನ್ನುವ ಆಹಾರ ಜೊತೆ ಮಾಡಬೇಡಿ. ಸರಿಯಾಗಿ ತಿನ್ನುವುದಕ್ಕಿಂತ ಸಂತೋಷವಾಗಿ ತಿನ್ನುವುದು ಬಹಳ ಮುಖ್ಯ. ನೀವು ತಿನ್ನುವ ಆಹಾರ ನಿಮ್ಮ ಮೇಲೆ ಪ್ರಭಾವ ಬೀರುತ್ತದೆಯಾದರೂ ಅದೇ ನಿರ್ಣಾಯಕ ಅಂಶವಲ್ಲ. ನಿಮ್ಮಲ್ಲಿ ಒಂದಾಗಿ, ನಿಮ್ಮ ಒಂದು ಭಾಗವಾಗಲು, ನಿಮ್ಮ ಜೀವದೊಂದಿಗೆ ಬೆರೆತು ನೀವಾಗಿ ಹೋಗಲು ಬೇರೊಂದು ಜೀವವು ಇಚ್ಛಿಸುತ್ತಿದೆ ಎನ್ನುವ ಪ್ರಜ್ಞೆ ನಿಮ್ಮಲ್ಲಿದ್ದರೆ, ಅದೇ ತಿನ್ನುವುದರಲ್ಲಿರುವ ನಿಜವಾದ ಸಂತೋಷ. “ಒಬ್ಬ ಮನುಷ್ಯನಿಗೆ ತಿಳಿದಿರುವ ಅತಿ ದೊಡ್ಡ ಆನಂದವೆಂದರೆ, ಯಾವುದೋ ಒಂದು ರೀತಿಯಲ್ಲಿ, ಅವನಲ್ಲದಿರುವ ಇನ್ನೊಂದು ಜೀವವು ಅವನ ಒಂದು ಭಾಗವಾಗುವುದಕ್ಕೆ ಇಚ್ಛಿಸುತ್ತಿದೆ ಎಂದು ತಿಳಿದಿರುವುದಾಗಿದೆ.” - ಸದ್ಗುರು

ಆದ್ದರಿಂದ ನಿಮ್ಮಲ್ಲಿ ಶಕ್ತಿಯನ್ನು ತುಂಬುವ ಆಹಾರದ ಮೇಲೆ ಗಮನ ಹರಿಸಿ ಮತ್ತು ನಿಮ್ಮನ್ನು ಆಲಸಿಯನ್ನಾಗಿಸುವ ಆಹಾರವನ್ನು ತ್ಯಜಿಸಲು ಪ್ರಯತ್ನಿಸಿ. ಬರಲಿರುವ ವರ್ಷವು ನಿಮಗೆ ಸಂತೋಷ ಹಾಗೂ ಆರೋಗ್ಯವನ್ನು ತರಲೆಂದು ಹಾರೈಸುತ್ತೇವೆ!

ಈಗಲೇ ಡೌನ್-ಲೋಡ್ ಮಾಡಿಕೊಳ್ಳಿ

ಈ ಪುಸ್ತಕವನ್ನು ನಿಮ್ಮಿಷ್ಟದ ಬೆಲೆಗೆ ಕೊಂಡುಕೊಳ್ಳಿ ಅಥವಾ ಉಚಿತವಾಗಿ ಪಡೆಯಲು “Claim for Free” ಒತ್ತಿ. “ಫುಡ್ ಬಾಡಿ” ಪುಸ್ತಕವು ದೇಹಕ್ಕೆ ಆರಾಮದಾಯಕವಾದ ಆಹಾರಗಳತ್ತ ಗಮನ ಹರಿಸುತ್ತದೆ ಮತ್ತು ಆ ಆಹಾರಗಳನ್ನು ಸೇವಿಸುವ ಸರಿಯಾದ ಕ್ರಮಗಳ ಬಗ್ಗೆ ವಿಚಾರಮಾಡುತ್ತದೆ. ಮೂವತ್ಮೂರು ಪುಟಗಳ ಈ ಪುಸ್ತಕವು ನಿಮ್ಮ ದೇಹಕ್ಕೆ ಯಾವುದು ಸೂಕ್ತವಾದ ಆಹಾರ ಎಂದು ತಿಳಿಯುವ ಸಲುವಾಗಿ ಇಡುವ ಮೊದಲ ಹೆಜ್ಜೆಯಾಗಿದೆ.

ಸಂಪಾದಕರ ಟಿಪ್ಪಣಿ: ಈ ಲೇಖನವು ಈಶ ಹಠ ಯೋಗ ಸ್ಕೂಲ್-ನ ಇಪ್ಪತ್ತೊಂದು ವಾರಗಳ ಹಠ ಯೋಗ ಟೀಚರ್ಸ್ ಟ್ರೈನಿಂಗ್ ಕಾರ್ಯಕ್ರಮದಲ್ಲಿ ಸದ್ಗುರುಗಳು ನೀಡಿದ ಪ್ರವಚನೆಯ ಆಯ್ದ ಭಾಗವಾಗಿದೆ. ಈ ಕಾರ್ಯಕ್ರಮವು ಯೋಗ ಪದ್ಧತಿಯ ಆಳವಾದ ತಿಳುವಳಿಕೆಯನ್ನು ಗಳಿಸಲು ಸಾಟಿಯಿಲ್ಲದ ಅವಕಾಶವನ್ನು ಹಾಗೂ ಹಠ ಯೋಗವನ್ನು ಹೇಳಿಕೊಡುವ ಕುಶಲತೆಯನ್ನು ನಿಮಗೆ ನೀಡುತ್ತದೆ. ಮುಂದಿನ ಇಪ್ಪತ್ತೊಂದು ವಾರಗಳ ಹಠ ಯೋಗ ಟೀಚರ್ಸ್ ಟ್ರೈನಿಂಗ್ ಕಾರ್ಯಕ್ರಮವು ಜುಲೈ 16, 2019ರಿಂದ ಡಿಸೆಂಬರ್ 11, 2019ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ,   www.ishahathayoga.com ವೆಬ್ಸೈಟ್-ಅನ್ನು ನೋಡಿ ಅಥವಾ info@ishahatayoga.com ಇಮೇಲ್ ವಿಳಾಸಕ್ಕೆ ಬರೆಯಿರಿ.