ದೈವದ ಪಥದಲ್ಲಿ - ಮಾ ಚಂದ್ರಹಾಸ
1995 ರಲ್ಲಿ ಬ್ರಹ್ಮಚರ್ಯದ ದೀಕ್ಷೆ ಮತ್ತು 2003 ರಲ್ಲಿ ಸನ್ಯಾಸತ್ವದ ದೀಕ್ಷೆಯನ್ನು ಪಡೆದು, ಈಶದ ಆರಂಭಿಕ ದಿನಗಳಿಂದಲೂ ತಮ್ಮನ್ನು ತಾವು ತೊಡಗಿಸಿಕೊಂಡವರು ಮಾ ಚಂದ್ರಹಾಸ. ತಮ್ಮನ್ನು ಆಧ್ಯಾತ್ಮದ ಹಾದಿಯಲ್ಲಿ ರೂಪಿಸಿದ ಕೆಲವು ಅರ್ಥಪೂರ್ಣ ಕ್ಷಣಗಳನ್ನು ಮತ್ತು ಅವರ ಪರಿವರ್ತನೆಗೆ ಕಾರಣವಾದ ಕೆಲವು ಗಹನವಾದ ಘಟನೆಗಳನ್ನು ಅವರಿಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಸನ್ಯಾಸ, ನಾನು???
ಮಾ ಚಂದ್ರಹಾಸ: “ನಾನು ಸನ್ಯಾಸಿಯಾಗಬೇಕು“ ಎಂದು ಹಠಾತ್ತನೆ ಒಂದು ದಿನ ಎದ್ದು ನಿಂತು ತುಂಬಿದ ಹೋಲ್ನೆಸ್ ಕ್ಲಾಸಿನಲ್ಲಿ ಹೇಳಿದೆ. ಬಹುಶಃ ನನ್ನ ಬಗ್ಗೆ ತಿಳಿದಿದ್ದ ಎಲ್ಲರಿಗೂ ಅಂದು ಆಘಾತವಾಗಿರುತ್ತದೆ. ನಾನು ಈ ಮಾತುಗಳನ್ನು ಹೇಳಿದೆನೇ ಎಂದು ಸ್ವಯಂ ನಾನೇ ಆಶ್ಚರ್ಯಚಕಿತಳಾಗಿದ್ದೆ. ಏಕೆಂದರೆ ನಾನು ನನ್ನ ಸುತ್ತಲಿನ ಎಲ್ಲರೊಡನೆ ಅಥವಾ ಎಲ್ಲದರೊಂದಿಗೆ ಆಳವಾದ ಬಾಂಧವ್ಯವನ್ನು ಬೆಳೆಸಿಕೊಂಡು ಬಿಡುತ್ತೇನೆ. ನನ್ನ ಈ ಗುಣ ಸಂಪೂರ್ಣವಾಗಿ ಅಂದಿನ ಹೋಲ್ನೆಸ್ ಕಾರ್ಯಕ್ರಮದಲ್ಲಿ ಬಹಿರಂಗವಾಗಿತ್ತು.
ಒಂದು ಘಟನೆಯನ್ನು ಇಲ್ಲಿ ಹೇಳಲೇಬೇಕು.. ಒಂದು ದಿನ ಸದ್ಗುರುಗಳು ಒಂದು ಹಾವನ್ನು ಶಿಬಿರದ ಸ್ಥಳಕ್ಕೆ ತಂದು “ಯಾರಾದರೂ ಈ ಹಾವನ್ನು ಉಪಚರಿಸಿ ನೋಡಿಕೊಳ್ಳುತ್ತೀರ? ಇದು ಸಾಯುವ ಸ್ಥಿತಿಯಲ್ಲಿದೆ. ನಿಮ್ಮಲ್ಲಿ ಯಾರಾದರೂ ಇದಕ್ಕೆ ಊಟೋಪಚಾರ ಮಾಡಿದರೆ ಇನ್ನೂ ಕೆಲವು ದಿನಗಳು ಇದು ಬದುಕುಳಿಯಬಹುದು“ ಎಂದು ಕೇಳಿದರು.
ಅವರು ಆ ಹಾವನ್ನು ಈಶ ಯೋಗ ಕೇಂದ್ರದ ಒಂದು ಮರದ ಕೆಳಗಿನ ಬಿಲದಲ್ಲಿ ನೋಡಿದ್ದರು. ಅದು ಆರಡಿ ಉದ್ದವಿತ್ತು. ನಮಗೆಲ್ಲಾ ಅದನ್ನು ಉಪಚರಿಸುವುದಿರಲಿ ಅದರ ಹತ್ತಿರ ಹೋಗುವುದಕ್ಕೂ ಭಯ.
ಸ್ವಲ್ಪ ಕಾಲ ಮೌನ ಆವರಿಸಿತು. ಆಗ ನಾನು ಏನೂ ಯೋಚಿಸದೆ, “ನಾನು ಮಾಡುತ್ತೇನೆ“ ಎಂದುಬಿಟ್ಟೆ. ನನಗೆ ತೋಚಿದ್ದು ಇಷ್ಟೇ, ಸದ್ಗುರು ಯಾರಿಗಾದರೂ ಏನನ್ನಾದರೂ ಮಾಡಲು ಹೇಳಿದಾಗ ಯಾರೂ ಮುಂದೆ ಬರದಿದ್ದರೆ, ನಾನು ಆ ಕೆಲಸ ಮಾಡಬೇಕು, ಅದೇನೇ ಆದರೂ ಸರಿ. ನಾನು ನನ್ನ ಜೀವಮಾನದಲ್ಲೇ ಯಾವುದೇ ಹಾವನ್ನು ಎಂದೂ ಕೈಯಿಂದ ಮುಟ್ಟಿದವಳಲ್ಲ. ಆದರೆ ಅಂದು ಸದ್ಗುರುಗಳು ಅದನ್ನು ನನ್ನ ಕೈಲಿಟ್ಟರು ಮತ್ತು ನಾನು ನನ್ನ ಕೈಗೆ ಸುತ್ತಿಕೊಂಡಿದ್ದ ಆ ಆರಡಿ ನಾಗರಹಾವನ್ನು ಹಿಡಿದುಕೊಂಡು ಅಲ್ಲಿ ನಿಂತಿದ್ದೆ. “ಅದು ನಿನ್ನ ಕೈಯಿಂದ ಊಟ ಮಾಡುವುದನ್ನು ನಿಲ್ಲಿಸಿದರೆ, ಅದನ್ನು ಕಾಡಿನಲ್ಲಿ ಬಿಟ್ಟುಬಿಡು“ ಎಂದವರು ಆದೇಶಿಸಿದರು.
ಅದೊಂದು ಪಾಪದ, ತೂಕಡಿಕೆಯ ಹಾವಾಗಿತ್ತು. ನಾನದನ್ನು ಒಂದು ಬಟ್ಟೆಯ ಚೀಲಕ್ಕೆ ಹಾಕಿ ಕ್ಲಾಸಿನಲ್ಲಿ ಒಂದು ಕಡೆ ನೇತುಹಾಕಿದೆ. ಶಿಬಿರಾರ್ಥಿಗಳಲ್ಲಿ ಕೆಲವರು ಭಯಗೊಂಡು, ನಾನು ಆ ಹಾವನ್ನು ಅಲ್ಲಿಂದ ಹೊರಹಾಕದಿದ್ದರೆ, ನನ್ನನ್ನೂ, ನನ್ನ ಹಾವನ್ನೂ ಆಚೆ ಬಿಸಾಡುತ್ತೇವೆ ಎಂದು ಹೆದರಿಸಿದರು. ಸದ್ಗುರುಗಳಿಗೆ ಅವರ ಪ್ರತಿಕ್ರಿಯೆಗಳು ತಮಾಷೆಯಾಗಿತ್ತು. ಅವರು ಎಲ್ಲರನ್ನೂ “ಅದು ರಾತ್ರಿಯ ವೇಳೆ ನಿಮ್ಮ ಪಕ್ಕದಲ್ಲೇ ಬಂದು ಮಲಗುತ್ತದೆ” ಎಂದು ಹೇಳಿ ಇನ್ನಷ್ಟು ಹೆದರಿಸಿದರು. ನಾವು ಹಕ್ಕಿಗಳ ಮೊಟ್ಟೆಗಳನ್ನು ಹಾವಿನ ಬಾಯಿಗೆ ಇಂಜೆಕ್ಷನ್ ಮೂಲಕ ಕೊಡುತ್ತಿದ್ದೆವು, ಮತ್ತು ಸಣ್ಣ ಸಣ್ಣ ಕಪ್ಪೆಗಳನ್ನು, ಹುಳುಗಳನ್ನೂ ತಿನ್ನಲು ಕೊಡುತ್ತಿದ್ದೆವು. ಮೊದಲೆರಡು ದಿನ ಅದು ಎಲವನ್ನೂ ತಿನ್ನುತ್ತಿತ್ತು. ಆದರೆ ಮೂರನೆಯ ದಿನ ಎಲ್ಲವನನ್ನೂ ಉಗಿಯಲು ಪ್ರಾರಂಭಿಸಿತು. ಆದ್ದರಿಂದ ಮನಸ್ಸಿಲ್ಲದ ಮನಸ್ಸಿನಿಂದ, ಭಾರವಾದ ಹೃದಯದೊಂದಿಗೆ ಅದನ್ನು ಕಾಡಿನಲ್ಲಿ ಬಿಟ್ಟುಬಂದೆವು.
“ಹಾವನ್ನು ನನ್ನ ಕೈಯಲ್ಲಿ ಕೊಡಿ” ಎಂದು ನಾನು ಅಂಗಲಾಚಿದೆ. ಅವರದನ್ನು ನನಗೆ ಕೊಡಲಿಲ್ಲ. ಬಹಳ ಬೇಡಿಕೊಂಡ ನಂತರ ಅದನ್ನು ನನ್ನ ಕೈಯಲ್ಲಿ ಕೊಟ್ಟರು. ಬದುಕಿದ್ದಾಗ ಇದ್ದಿದ್ದಕ್ಕಿಂತ ಈಗದು ಬಹಳ ಬೇರೆಯೇ ರೀತಿಯದಾಗಿತ್ತು. ಅದನ್ನು ನಾವು ಮೊದಲು ನೋಡಿದ ಜಾಗದಲ್ಲೇ ಮಣ್ಣು ಮಾಡಿದೆವು. ನನಗೆ ನನ್ನ ಸ್ವಂತ ಮಗುವನ್ನೇ ಮಣ್ಣು ಮಾಡಿದೆನೇನೋ ಎಂದನಿಸಿತು. ಸ್ವಲ್ಪ ಸಮಯದವರೆಗೆ ಅಲ್ಲಿಂದ ಅಲುಗಾಡಲೂ ನನಗಾಗಲಿಲ್ಲ.
ನಾನಿದಿದ್ದು ಈ ರೀತಿ.
ಇದಕ್ಕೆ ಒಂದು ವರ್ಷ ಮುಂಚೆಯೂ ಕೂಡ, ಭಾವ ಸ್ಪಂದನ ಕಾರ್ಯಕ್ರಮದಲ್ಲಿ ಒಂದು ದಿನ ಸದ್ಗುರುಗಳ ಮುಂದೆ ಏನನ್ನೋ ಘೋಷಿಸಲು ಎದ್ದುನಿಂತಿದ್ದೆ. ಆ ಸಮಯದಲ್ಲಿ ನನ್ನ ಆಸೆ ಇದಿದ್ದು ಮದುವೆಯಾಗಬೇಕು ಮತ್ತು ಒಂದು ದೊಡ್ಡ ಮನೆಯನ್ನು ಹೊಂದಬೇಕು ಎಂಬುದಾಗಿತ್ತು. ನಾನು ಅಪೇಕ್ಷಿಸುತ್ತಿದ್ದ ಗಂಡನ ರೀತಿ ಮತ್ತು ನನ್ನ ಕನಸಿನ ಮನೆಯ ಒಂದೊಂದು ಅಂಗುಲವನ್ನೂ ನಾನಂದು ವರ್ಣಿಸಿದ್ದೆ. ಹಾಗಾಗಿ ಒಂದೇ ವರ್ಷದಲ್ಲಿ ನಾನು ಈ ರೀತಿ 180-ಡಿಗ್ರಿ ಯೂಟರ್ನ್ ತೆಗೆದುಕೊಂಡು ವೈರಾಗ್ಯದ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದ್ದು ಬಹಳ ಅನಿರೀಕ್ಷಿತವಾಗಿತ್ತು. ಆದರೆ ನಿಜ ಏನೆಂದರೆ ನಾನು ನನ್ನೊಳಗೆ ಸುಡುತ್ತಿದ್ದೆ.
“ಸಾಯುವ ಮುಂಚೆ ನಾನು ಕಾವಿ ಬಟ್ಟೆಯನ್ನು ಸದ್ಗುರುಗಳ ಕೈಯಿಂದಲೇ ಪಡೆಯಬೇಕು ಎಂಬುದಷ್ಟೇ ನನಗಾಗ ಮರುಕಳಿಸುತ್ತಿದ್ದ ಆಲೋಚನೆಯಾಗಿತ್ತು. ಆದರೆ ನನ್ನ ಅಸಮಾಧಾನಕ್ಕೆ, ಸದ್ಗುರುಗಳು ಸೇರಿದಂತೆ ಹಲವಾರು ಹೋಲ್ನೆಸ್ ಶಿಬಿರಾರ್ಥಿಗಳು ನನ್ನನ್ನು ಬ್ರಹ್ಮಚರ್ಯದಿಂದ ಮನತಿರುಗಿಸುವ ಮಾತುಗಳನ್ನೇ ಆಡುತ್ತಿದ್ದರು. ಆದರೆ ನಾನು ಪಟ್ಟು ಬಿಡಲಿಲ್ಲ, ಮತ್ತು ಕಡೆಗೂ ಸದ್ಗುರುಗಳು ಅದಕ್ಕೆ ಮಣಿದರು. 1995 ರಲ್ಲಿ, ಈಶದ ಮೊದಲ ಬ್ರಹ್ಮಚಾರಿಗಳ ಬ್ಯಾಚ್-ನಲ್ಲಿ ನನಗೂ ಬ್ರಹ್ಮಚರ್ಯದ ದೀಕ್ಷೆ ದೊರೆಯಿತು. ಮತ್ತು 2003 ರಲ್ಲಿ ಈಶದ ಮೊದಲ ಸನ್ಯಾಸಿಗಳ ಬ್ಯಾಚ್-ನಲ್ಲೇ ನನಗೂ ಸನ್ಯಾಸದ ದೀಕ್ಷೆಯೂ ದೊರೆಯಿತು. ಸನ್ಯಾಸ ದೀಕ್ಷೆಯ ನಂತರ ನಾನು ಸದ್ಗುರುಗಳಿಂದ ಕಾವಿ ಬಟ್ಟೆ ಸ್ವೀಕರಿಸಿದಾಗ ನಾನು ನಡುಗಿಹೋದೆ. “ನಿಜವಾಗಿಯೂ ನಾನು ಈ ಅಸಮಾನ್ಯವಾದ ಗೌರವಕ್ಕೆ ಯೋಗ್ಯಳೇ?” ಎಂದು ಯೋಚಿಸುತ್ತಾ ನಾನಂದು ಆ ಪವಿತ್ರ ವಸ್ತ್ರಗಳನ್ನು ಅವರಿಂದ ಪಡೆದುಕೊಂಡೆ.
ಹೋಲ್ನೆಸ್ ಕಾರ್ಯಕ್ರಮದಿಂದ ಸನ್ಯಾಸದವರೆಗಿನ ಈ ಹಾದಿ, ಬದುಕಿನೊಂದಿಗೆ ಸ್ವಚ್ಛಂದವಾದ ಮತ್ತು ಆಳವಾದ ಸಂಬಂಧವನ್ನು ಹೊಂದುವುದರ ನಿಜವಾದ ಅರ್ಥವನ್ನು ಕಲಿಯುವ ಬಗ್ಗೆಯಾಗಿತ್ತು ಎಂದು ನನ್ನ ಅನಿಸಿಕೆ.
ಹೋಲ್ನೆಸ್ ನ ಉನ್ಮತ್ತತೆ
ಹೋಲ್ನೆಸ್ ಕಾರ್ಯಕ್ರಮದ ಉದ್ದಕ್ಕೂ ನನ್ನ ಚೈತನ್ಯವು ಯಾವಾಗಲೂ ಉತ್ಕೃಷ್ಟವಾಗಿರುತ್ತಿತ್ತು. ಬಹಳಷ್ಟು ದಿನ, ನಾನು ತರಗತಿಯ ಸಮಯದಲ್ಲಿ ಸದ್ಗುರುಗಳ ಪಾದಗಳ ಬಳಿಯೇ ಕುಳಿತಿರುತ್ತಿದ್ದೆ, ಮತ್ತು ಕೆಲವೊಂದು ಸಲ ಅವರ ಪಾದಗಳನ್ನು ಹಿಡಿದು ಕೂತಿರುತ್ತಿದ್ದೆ. ನಾನವರ ಪಾದಗಳ ಬಳಿ ಇಲ್ಲದೇ ಇದ್ದಾಗ, ನಾವು ಒಳಪಟ್ಟಿದ್ದ ಪ್ರಕ್ರಿಯೆಯ ತೀವ್ರತೆಯಿಂದಾಗಿ, ನಾನು ತರಗತಿಯ ತುಂಬೆಲ್ಲಾ ಉರುಳಾಡಿ, ಒದ್ದಾಡಿ ಅಥವಾ ಛಾವಣಿಗೆ ಆಧಾರವಾಗಿದ್ದ ಕಂಬದ ತುದಿಗೆ ಏರಿ ಕುಳಿತಿರುತ್ತಿದ್ದೆ. ಒಮ್ಮೆ ಪ್ರಕ್ರಿಯೆಯನ್ನು ಮುಗಿಸಿ ಸದ್ಗುರುಗಳು ತರಗತಿಯಿಂದ ಆಚೆ ಹೊರಟಾಗ, ಕಂಬ ಹತ್ತಿ ಕುಳಿತಿರುತ್ತಿದ್ದ ನನಗೆ ಕೆಳಗಿಳಿದು ಬರುವುದು ಬಹಳ ಕಷ್ಟವಾಗುತ್ತಿತ್ತು - ಏಕೆಂದರೆ ಅಷ್ಟು ಹೊತ್ತಿಗೆ ನಾನು ನನ್ನ ಸಹಜ ಸ್ಥಿತಿಗೆ ಮರಳಿರುತ್ತಿದ್ದೆ.
ಕೆಲವೊಮ್ಮೆ ಸದ್ಗುರುಗಳು ತಮ್ಮ ಆಧ್ಯಾತ್ಮಿಕ ಉಪಸ್ಥಿತಿಯಿಂದ ನನ್ನನ್ನು ಚಕಿತಗೊಳಿಸುತ್ತಿದ್ದರು. ನಮ್ಮ ಹೋಲ್ನೆಸ್ ಕಾರ್ಯಕ್ರಮದ ಎರಡನೇ ತಿಂಗಳಲ್ಲಿ ಸದ್ಗುರುಗಳು ನಮಗೆಲ್ಲಾ, “ನಾನು 24 ಘಂಟೆಗಳೂ ನಿಮ್ಮ ಜೊತೆಗೇ ಇರುತ್ತೇನೆ” ಎಂದು ಹೇಳಿದರು. ನನ್ನ ಮನಸ್ಸಿನಲ್ಲಿ, “ಅವರು ಮನೆಗೆ ಹೋಗುತ್ತಾರೆ ತಾನೇ? 24 ಘಂಟೆಗಳೂ ನಮ್ಮ ಜೊತೆ ಹೇಗಿರುತ್ತಾರೆ?” ಎಂಬ ಪ್ರಶ್ನೆ ಕಾಡಿತು. ಅದೇ ರಾತ್ರಿ ಗಾಢವಾದ ವಿಭೂತಿಯ ವಾಸನೆಯಿಂದ ನನಗೆ ನಿದ್ದೆಯಿಂದ ಎಚ್ಚರವಾಯಿತು. ನಿದ್ದೆಯ ಮಂಪರಿನಲ್ಲಿ ವಿಭೂತಿಯ ಸುವಾಸನೆ ಎಲ್ಲಿಂದ ಬರುತ್ತಿರಬಹುದು ಎಂದುಕೊಂಡು ಹಾಗೆಯೇ ಮಲಗಿದೆ. ಮತ್ತದೇ ಪರಿಮಳದಿಂದ ಎಚ್ಚರವಾಯಿತು. 2-3 ಬಾರಿ ಇದೇ ಪುನರಾವರ್ತನೆಯಾಯಿತು. “ಯಾರಪ್ಪಾ ಇಷ್ಟೊಂದು ವಿಭೂತಿಯನ್ನು ಹಚ್ಚಿಕೊಂಡು ಹೀಗೆ ವಾಸನೆ ಹರಡುತ್ತಿದ್ದಾರೆ?“ ಎಂದು ಯೋಚಿಸಿದೆ. ಮರುಕ್ಷಣವೇ ನಾನು ಮಲಗಿರುವವರ ಮುಖಗಳ ಮೇಲೆ ಟಾರ್ಚ ಬಿಡುತ್ತಾ ವಿಭೂತಿಯ ಪರಿಮಳದ ಮೂಲವನ್ನು ಕಂಡುಹಿಡಿಯಲು ಹುಡುಕುತ್ತಾ ಹೋದೆ. ಆದರೆ ಅದನ್ನು ವಿವರಿಸುವಂತಹ ಯಾವುದೇ ವಿಷಯ ಸಿಗಲಿಲ್ಲ. ಗೊಂದಲದಲ್ಲಿಯೇ ಮತ್ತೆ ನಿದ್ದೆಗೆ ಜಾರಿದೆ.
ಮರುದಿನ ಬೆಳಗಿನ ತರಗತಿಯಲ್ಲಿ, ಮೊದಲನೆಯದಾಗಿ ನಾನು ಸದ್ಗುರುಗಳನ್ನು ವಿಭೂತಿಯ ಪರಿಮಳದ ಮೂಲದ ಬಗ್ಗೆ ಕೇಳಿದೆ. “ನನ್ನನ್ನೇಕೆ ಕೇಳುತ್ತಿದ್ದೀಯಾ? ಹೋಗಿ ನಿನ್ನ ಟಾರ್ಚನ್ನು ಹಿಡಿದು ಕಂಡುಹಿಡಿ”, ಎಂದು ಹೇಳಿ ನನ್ನನ್ನು ಮತ್ತೂ ಚಕಿತಗೊಳಿಸಿದರು.
ಮನಸ್ಸಿಲ್ಲದ ಶಿಕ್ಷಕಿ
ಹೋಲ್ನೆಸ್ ಶಿಬಿರದ ಎರಡನೇ ತಿಂಗಳಲ್ಲಿ, ಸದ್ಗುರುಗಳು ನನ್ನ ಹೆಸರನ್ನು ಶಿಕ್ಷಕರ ತರಬೇತಿಯ ಪಟ್ಟಿಯಲ್ಲಿ ಸೇರಿಸಿದರು. ನಾನು ಸೌಮ್ಯವಾಗಿ ನಿರಾಕರಿಸಿದರೂ ಸಹ ಒಪ್ಪಿಕೊಂಡೆ. ತರಬೇತಿಯಲ್ಲಿ ನಾನು ಸಂತೋಷದಿಂದಿದ್ದೆ ಮತ್ತು ಒಂದು ಹಂತದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದೆ ಮತ್ತು ಇನ್ನೊಂದು ಹಂತದಲ್ಲಿ, ಏನಾಗುತ್ತಿದೆ ಎಂಬುದರ ಹೆಚ್ಚಿನ ಸ್ಪಷ್ಟತೆಯೇ ಇರುತ್ತಿರಲಿಲ್ಲ. ಬೇರೆಲ್ಲರೂ ದಿನದ ಕೊನೆಯಲ್ಲಿ ಈಶ ಯೋಗದ ಕ್ಲಾಸ್ ಬಗ್ಗೆ ಚರ್ಚಿಸುತ್ತಿದ್ದರು. ಆದರೆ ನನಗೆ ಈ ತರಗತಿ ಒಂದು ನೃತ್ಯದಂತಿತ್ತು ಅಷ್ಟೆ. ನಿಜ ಹೇಳಬೇಕೆಂದರೆ, ಕೆಲವು ಸಲ ನನಗೆ ಕಳೆದುಹೋದ ಅನುಭವವಾಗುತ್ತಿತ್ತು. ಹಾಗೂ ಹೀಗೂ, ಕಡೆಗೆ ನಾನು ಈಶ ಯೋಗ ತರಗತಿಗಳನ್ನು ನಡೆಸುವಷ್ಟು ಸಮರ್ಥಳಾದೆ ಮತ್ತು ಶಿಕ್ಷಕರ ಅಂಗವಸ್ತ್ರವನ್ನೂ ಸ್ವೀಕರಿಸಿದೆ. ನಾನು ನನ್ನ ಮೊದಲ ಪರಿಪೂರ್ಣ ತರಗತಿಯನ್ನು 1996 ರಲ್ಲಿ ಕೊಯಮತ್ತೂರಿನ ಟಾಟಾಬಾದ್ ಹಾಲ್ ಒಂದರಲ್ಲಿ ನಡೆಸಿಕೊಟ್ಟೆ. ನನಗೆ ಈಶ ಯೋಗವನ್ನು ಹೇಳಿಕೊಡುವುದು ಒಂದು ಅತೀತವಾದ ಪ್ರಕ್ರಿಯೆಯೆನಿಸುತ್ತದೆ, ಏಕೆಂದರೆ, ನಾನಿಲ್ಲದೆಯೂ ಅದು ನಡೆಯುತ್ತದೆ.
ಸದ್ಗುರುಗಳು ತರಗತಿಯನ್ನು ನಡೆಸಿದಾಗ
ಒಮ್ಮೆ ಹೊಸದಾಗಿ ಬಂದ ಶಿಕ್ಷಕರೊಬ್ಬರ ಜೊತೆ ತರಗತಿಯನ್ನು ನಡೆಸಿಕೊಡುತ್ತಿದ್ದೆ. ಕ್ಲಾಸ್ ನಡೆಯುತ್ತಿದ್ದ ಸ್ಥಳದಲ್ಲೇ ಬೇರೊಂದು ಮಹಡಿಯಲ್ಲಿದ್ದ ಒಬ್ಬ ಸ್ವಯಂಸೇವಕರ ಮನೆಯಲ್ಲಿ ನಾವು ತಂಗಿದ್ದೆವು. ಒಂದು ದಿನ, ಹೊಸ ಶಿಕ್ಷಕರು ಒಬ್ಬರೇ ತರಗತಿಯನ್ನು ನಡೆಸಲು ಕಲಿಯಲಿ ಎಂಬ ಉದ್ದೇಶದಿಂದ, ನಾನು ಸ್ವಲ್ಪ ಸಮಯ ತರಗತಿಯ ಒಳಗಡೆ ಹೋಗಲಿಲ್ಲ. ಬದಲಿಗೆ, ಮಹಡಿಯ ಮೇಲೆ ಬಾಲ್ಕನಿಯಲ್ಲೇ ಅಡ್ಡಾಡುತ್ತಿದ್ದೆ. ಹಾಗೇ ರಸ್ತೆಯಿಂದ ಕೇಳಿಬರುತ್ತಿದ್ದ ಸಂಗೀತಕ್ಕೆ ಗುನುಗುನಿಸುತ್ತಾ ನಿಂತೆ.
ಸ್ವಲ್ಪ ಸಮಯದ ನಂತರ, ಕೆಲವು ಸ್ವಯಂಸೇವಕರು ಓಡಿಬಂದು, ಕ್ಲಾಸಿನಲ್ಲಿ ಎದುರಾದ ಒಂದು ಪರಿಸ್ಥಿತಿಯನ್ನು ಸುಧಾರಿಸ ಬೇಕೆಂದು ಹೇಳಿದರು. ಒಬ್ಬ ಮಹಿಳಾ ಶಿಬಿರಾರ್ಥಿ, ಅಲ್ಲಿನ ಶಕ್ತಿ ಸಂಚಲನದಿಂದಾಗಿ, ಯಾರ ಕೈಗೂ ಸಿಗದೇ, ವಿಪರೀತವಾಗಿ ಬಡಿದಾಡುತ್ತಿದ್ದಳು. ಆದ್ದರಿಂದ ನಾನು ಒಳಗೆ ಹೋಗಲೇಬೇಕಾಯಿತು. ತರಗತಿಯು ಶಾಂತವಾಗಿ ಮತ್ತೆ ಒಂದು ಹಂತಕ್ಕೆ ಬಂದಾಗ, ಸಹಶಿಕ್ಷಕರು ನಾನೇ ತರಗತಿಯನ್ನು ಮುಂದುವರಿಸಬೇಕೆಂದು ಕೋರಿಕೊಂಡರು. ಬೇರೆ ದಾರಿ ಕಾಣದೆ, ನಾನು ಹೋಗಿ ಶಿಕ್ಷಕರ ಕುರ್ಚಿಯಲ್ಲಿ ಕುಳಿತುಕೊಂಡೆ. ಹೊರಗಡೆಯ ಸಂಗೀತದ ಹುಳು ನನ್ನ ತಲೆಯಲ್ಲಿ ಇನ್ನೂ ಕೊರೆಯುತ್ತಿತ್ತು. ಹಾಗಾಗಿ ಅರಿವಿಲ್ಲದೇ ನಾನದನ್ನು ಗುನುಗುತ್ತಿದ್ದೆ. ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ನಾನು ಕೇಳಿದ ಹಾಡಿಗೆ ತಾಳ ಹಾಕುತ್ತಿದ್ದುದು ಅರಿವಿಗೆ ಬಂತು. ತರಗತಿಯು ಮುಗಿದ ನಂತರ, ಒಬ್ಬ ಮಹಿಳೆ, ನಾನು ಕುಳಿತಿದ್ದ ಕುರ್ಚಿಯಲ್ಲಿ ಸದ್ಗುರುಗಳು ಕುಳಿತಿದ್ದನ್ನು ನೋಡಿದಾಗಿ ಹೇಳಿದಳು. ನಾನು ಮುಕ್ತಾಯದ ಪ್ರಾರ್ಥನೆಗೆ ಕುಳಿತಾಗ ಅವರು ಅಲ್ಲಿಂದ ಹೊರಟುಹೋದರು ಎಂದೂ ಆಕೆ ಹೇಳಿದಳು. ಇಂತಹ ಅನುಭವಗಳು ಹೊಸತೇನಾಗಿರಲಿಲ್ಲ. ಹಾಗಾಗಿ ಆ ಸಮಯದಲ್ಲಿ ನಾನದಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡಲಿಲ್ಲ.
ಒಂದು ವಾರದ ನಂತರ, ನಾನು ಆಶ್ರಮಕ್ಕೆ ಹಿಂದಿರುಗಿ ಟ್ರಯಾಂಗಲ್ ಬ್ಲಾಕ್ (ಕಟ್ಟಡ) ಪ್ರವೇಶಿಸುವಾಗ, ಸದ್ಗುರುಗಳು ಭೇಟಿಯಾದರು. ಬೇರೆ ವಿಷಯಗಳ ನಡುವೆಯೇ ಸದ್ಗುರುಗಳು, ಒಂದು ನಿರ್ದಿಷ್ಟ ದಿನಾಂಕವನ್ನು ಹೇಳಿ, ಆಗ್ರಹಪೂರ್ವಕವಾಗಿ “ನೀನು ಆ ದಿನ ಯಾವ ವಿಷಯವನ್ನು ಬೆಳಗಿನ ಸೆಷನ್ ನಲ್ಲಿ ಹೇಳಿಕೊಡುತ್ತಿದ್ದೆ?” ಎಂದು ಕೇಳಿದರು. ನಾನು ಒಂದು ಕ್ಷಣ ತಬ್ಬಿಬ್ಬಾದೆ - ಏಕೆಂದರೆ, ಅದೇ ದಿನ ನಾನು ಆ ಅನಗತ್ಯ ಸಂಗೀತಕ್ಕೆ ತಾಳ ಹಾಕುತ್ತಾ ಕುಳಿತಿದ್ದುದು. ಮತ್ತು ಆ ಮಹಿಳೆ ನನ್ನ ಜಾಗದಲ್ಲಿ ಸದ್ಗುರು ಕುಳಿತ್ತಿದ್ದರು ಎಂದು ಹೇಳಿದ್ದು. “ಈ ಕ್ಷಣ ಅನಿವಾರ್ಯ” ಎಂದು ಭಯದಿಂದಲೇ ಉತ್ತರಿಸಿದೆ. “ಹಾಗಾದರೆ, ನೀವು ಈ ಕ್ಷಣದ್ಲಲೇ ಇರಿ, ಮಾ” ಎಂದವರು ಹೇಳಿದರು.
ನನ್ನ ಗುರುಗಳ ಕನಸನ್ನು ಹಳ್ಳಿ ಹಳ್ಳಿಗೂ ಕೊಂಡೊಯ್ಯುವುದು
1997 ರಲ್ಲಿ, ನನ್ನ ಅಪಾರ ಸಂತೋಷಕ್ಕೆ, ಸದ್ಗುರುಗಳು ನನ್ನನ್ನು ಮಹಿಳಾ ಬಂಧೀಖಾನೆಗೆ ತರಬೇತಿ ನೀಡಲು ಕಳುಹಿಸಿದರು. ಅದೊಂದು ರೀತಿಯ ಸತ್ವಪರೀಕ್ಷೆಯೂ ಆಗಿತ್ತು, ಆದರೆ ಮತ್ತೊಂದು ಕಡೆ ಅತ್ಯಂತ ತೃಪ್ತಿ ನೀಡುವಂತಹ ಜವಾಬ್ದಾರಿಯೂ ಆಗಿತ್ತು. ಒಂದು ಸಲ ನಾನು ಕೊಯಮತ್ತೂರಿನಲ್ಲಿ ಬುದ್ಧಿಮಾಂದ್ಯ ಮತ್ತು ವಿಕಲಚೇತನರ ಅನಾಥಾಶ್ರಮದಲ್ಲಿ 21-ದಿನಗಳ ಶಿಬಿರವನ್ನು ನಡೆಸಿದೆ. ಅದು ನನ್ನ ಜೀವನದ ಅತ್ಯಂತ ಹೃದಯಸ್ಪರ್ಶಿ ಕ್ಷಣಗಳಾದವು. 2003 ರಲ್ಲಿ ಸದ್ಗುರುಗಳು ನನಗೆ ಆಕ್ಷನ್ ಫಾರ್ ರೂರಲ್ ರೆಜುವಿನೇಷನ್ (ARR) - ಅಂದರೇ ಹಳ್ಳಿಗಳ ಪುನಃಶ್ಚೇತನ ಕಾರ್ಯದ ತರಗತಿಗಳನ್ನು ತೆಗೆದುಕೊಳ್ಳಲು ತಮಿಳುನಾಡಿನ ಹಳ್ಳಿಗಳಿಗೆ ಕಳುಹಿಸುವಾಗ, “ಹೋಗಿ ಆ ಹಳ್ಳಿಗಳನ್ನು ಪುನಃಶ್ಚೇತನಗೊಳಿಸಿ. ಆ ಹಳ್ಳಿಗಳು ಹಸಿರಿನಿಂದ ಕಂಗೊಳಿಸಿ, ಅಲ್ಲಿನ ಜನರು ಸಂತೋಷ ಮತ್ತು ಆರೋಗ್ಯದಿಂದ ಇರುವಂತೆ ಮಾಡಿ“ ಎಂದು ಹೇಳಿ ಕಳುಹಿಸಿದರು. ನಾನು ಪ್ರತಿಯೊಂದು ಹಳ್ಳಿಯ ಒಳಗೆ ಹೋದ ಕೂಡಲೇ ಸದ್ಗುರುಗಳ ಕನಸು ನನಸಾಗುವುದನ್ನು ಕಲ್ಪಿಸಿಕೊಳ್ಳುತ್ತಿದ್ದೆ, ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ನಾನು ನೋಡಿದ ಪ್ರಕಾರ, ಭಾರತದ ಹಳ್ಳಿಗಳು ನೋಡಲು ಸುಂದರವಾಗಿಲ್ಲ: ಏಕೆಂದರೆ ನಮ್ಮ ಕಣ್ಣಿಗೆ ಕಾಣಿಸುವುದ್ದೇನಿದ್ದರೂ ಕಣ್ಣುಗಳೆಲ್ಲಾ ಗುಳಿ ಬಿದ್ದು ಅಪೌಷ್ಟಿಕತೆಯಿಂದ ಬಳಲುತ್ತಾ ತಮ್ಮ ಶಕ್ತಿಯನ್ನೂ ಮೀರಿ ದುಡಿಯುತ್ತಿರುವ ಗಂಡಸರೂ ಮತ್ತು ಹೆಂಗಸರು, ಗಲೀಜು ರಸ್ತೆಗಳು, ಬಯಲು ಶೌಚಗಳು ಮತ್ತು ಅನಾರೋಗ್ಯಕರವಾದ ಪರಿಸರದ್ಲಲಿ ಆಟವಾಡುತ್ತಿರುವ ಕೆದರಿದ ತಲೆ ಮತ್ತು ಬಡಕಲು ದೇಹದ ಮಕ್ಕಳು ಮಾತ್ರ. ಅವರೆಲ್ಲಾ ತಮ್ಮ ಅಸಂತೋಷದಲ್ಲಿ ಎಷ್ಟರ ಮಟ್ಟಿಗೆ ತಳವೂರಿಬಿಟ್ಟಿದ್ದರೆಂದರೆ, ಅವರನ್ನೆಲ್ಲಾ ಕ್ಲಾಸಿಗೆ ಬರುವಂತೆ ಮಾಡುವುದೇ ಒಂದು ದೊಡ್ಡ ಸಾಹಸವಾಯಿತು.
ಮೊದಲ ವಾರದಲ್ಲಿ, ಗೋಪಿಚೆಟ್ಟಿಪಾಳ್ಯದ ಸ್ವಯಂಸೇವಕರ ಸಹಾಯದಿಂದ, ಏನಿಲ್ಲವೆಂದರೂ 45 ಹಳ್ಳಿಗಳಲ್ಲಿ 500 ಮನೆಗಳಿಗೆ ಹೋಗಿ ಹಳ್ಳಿಯ ಪ್ರಮುಖ ಮತ್ತು ಪ್ರಭಾವೀ ಜನರನ್ನು ಶಿಬಿರಕ್ಕೆ ಆಹ್ವಾನಿಸಿದೆವು. ಅಥಣಿಯಲ್ಲಿ ನಡೆದ ಮೊದಲ ಆರು ದಿನಗಳ ಶಿಬಿರದಲ್ಲಿ ಬೇರೆ ಬೇರೆ ಹಳ್ಳಿಗಳಿಂದ ಸುಮಾರು 120 ಜನ ಬಂದು ನೋಂದಾಯಿಸಿಕೊಂಡರು. ನಂತರ ಅವರು ಇನ್ನಷ್ಟು ಜನರನ್ನು ನೊಂದಾಯಿಸಿಕೊಳ್ಳಲು ನಮಗೆ ಸಹಾಯ ಮಾಡಿದರು. ಒಂದು ತಿಂಗಳು ಕಳೆಯುವಷ್ಟರಲ್ಲಿ ನಾನು ಶಿಬಿರದಲ್ಲಿ ದಿನಕ್ಕೆ ಮೂರು ಕ್ಲಾಸ್ ಅನ್ನು ತೆಗೆದುಕೊಳ್ಳತ್ತಿದ್ದೆ, ಕೆಲವೊಮ್ಮೆ ನಾಲಕ್ಕೂ ಆಗುತ್ತಿತ್ತು. ಆರು ತಿಂಗಳಲ್ಲಿ 100ಕ್ಕಿಂತ ಹೆಚ್ಚು ಕ್ಲಾಸ್ ಗಳನ್ನು ಯಾವುದೇ ಸಹಶಿಕ್ಷಕರ ಸಹಾಯವಿಲ್ಲದೇ, ಕೆಲವೇ ಸ್ವಯಂಸೇವಕರ ಸಹಾಯದಿಂದ ಪೂರೈಸಿದೆ.
ಮೊದಲ ಆರು ತಿಂಗಳು ನನ್ನ ಮುಖ್ಯ ದಿನಚರಿ - ಮೂರು ಕ್ಲಾಸುಗಳನ್ನು (ಬೇರೆ ಬೇರೆ ಹಳ್ಳಿಗಳಲ್ಲಿ) ತೆಗೆದುಕೂಳ್ಳುವುದು, ಬೇರೆ ಬೇರೆ ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಜನರನ್ನು ಆಹ್ವಾನಿಸುವುದೇ ಆಗಿತ್ತು. ಮತ್ತು ಬಿಡುವಿನ ಸಮಯದಲ್ಲಿ, ಕೆಲವೊಮ್ಮೆ ಮಧ್ಯರಾತ್ರಿಯ ತನಕ ಜನ ತಮ್ಮ ತೊಂದರೆ-ತಾಪತ್ರಯಗಳನ್ನೆಲ್ಲಾ ಹಂಚಿಕೊಳ್ಳುವುದನ್ನು ಕೇಳುತ್ತಾ ಕೂರುವುದೇ ಆಗಿತ್ತು. ನಾನು ಒಮ್ಮೆ ಸದ್ಗುರುಗಳ ಬಳಿ “ಸದ್ಗುರು, ಈ ಜನ ವಿಪರೀತವಾಗಿ ತಮ್ಮ ವೈಯಕ್ತಿಕ ತೊಂದರೆಗಳನ್ನು ಹೇಳಿಕೊಳ್ಳುತ್ತಾರೆ, ನನಗೆ ಅಷ್ಟೆಲ್ಲಾ ಕೇಳುವುದು ಕಷ್ಟವಾಗುತ್ತದೆ” ಎಂದು ಹೇಳಿದೆ.
ಅದಕ್ಕವರು, “ತಮ್ಮ ಭಾವನೆಗಳನ್ನು ಹೊರಹಾಕಲು ಇದ್ದ ಸಾಂಪ್ರದಾಯಿಕ ಹಳ್ಳಿಯ ಛಾವಡಿಗಳು, ಕೂಡುಕುಟುಂಬಗಳು, ಹಬ್ಬಗಳ ಆಚರಣೆಗಳೆಲ್ಲವೂ ಕಡಿಮೆಯಾಗುತ್ತಿವೆ. ನಿನ್ನ ಬಳಿ ಅದನ್ನು ಹಂಚಿಕೊಳ್ಳುವುದು ಅವರ ಸ್ವಾಸ್ಥ್ಯಕ್ಕೂ ಒಳ್ಳೆಯದು, ಆದ್ದರಿಂದ ಹೊಂಚಿಕೊಳ್ಳಲಿ ಬಿಡು” ಎಂದರು. ಬಹಳಷ್ಟು ಗ್ರಾಮಸ್ಥರು ನನ್ನ ಬಳಿ ಕಷ್ಟಸುಖಗಳನ್ನು ಹಂಚಿಕೊಂಡು ತಮ್ಮ ಖಿನ್ನತೆಯಿಂದ ಹೊರಬರುವುದನ್ನು ನಾನು ಕೂಡ ಗಮನಿಸಿದೆ. ಹಾಗಾಗಿ ಸಾಧ್ಯವಾದಷ್ಟೂ ನಾನು ಅವರಿಗೆ ಲಭ್ಯವಿರಲು ಪ್ರಯತ್ನಿಸುತ್ತಿದ್ದೆ.
ಸದ್ಗುರುಗಳ ಸಲಹೆಯ ಮೇರೆಗೆ ನಾನು ಬೇರೆ ಬೇರೆ ಮನೆಗಳಲ್ಲಿ ಊಟಕ್ಕೆ ಹೋಗುವುದನ್ನು ರೂಢಿಸಿಕೊಂಡೆ. “ಯಾರೇ ನಿನ್ನನ್ನು ಊಟಕ್ಕೆ ಕರೆದರೂ ಎಂದೂ ಇಲ್ಲ ಎನ್ನಬೇಡ” ಎಂದವರು ಒಮ್ಮೆ ಹೇಳಿದ್ದರು. ಅವರೆಲ್ಲಾ ಬಡವರಾಗಿದ್ದರೂ ಸಹ ಒಬ್ಬ ಸನ್ಯಾಸಿಗೆ ಊಟ ಬಡಿಸಲು ಕಾತುರರಾಗಿರುತ್ತಿದ್ದರು. ಹಾಗಾಗಿ ನಾನು ಹಲವಾರು ಬಾರಿ ಅಪೌಷ್ಟಿಕವಾದ ಆಹಾರವನ್ನು ಸೇವಿಸುತ್ತಿದ್ದೆ. ಕೆಲವು ಸಲ ನಾನು ಕ್ಲಾಸಿಗೆ ಆಮಂತ್ರಿಸಲು ಹೋದಾಗ, ಗೃಹಿಣಿಯರು, ನಾನು ”ಆಗಲಿ” ಎನ್ನಬಹುದು ಎಂಬ ಕಲ್ಪನೆ ಇಲ್ಲದೆ, ಔಪಚಾರಿಕವಾಗಿ ಊಟ ಮಾಡುವಂತೆ ಹೇಳುತ್ತಿದ್ದರು. ಆದರೆ ಅಲ್ಲಿ ನಿನ್ನೆಯ ತಂಗಳು ಅಥವಾ ಬರೀ ಅನ್ನ ಮತ್ತು ರಸಂ ಮಾತ್ರ ಇರುತ್ತಿತ್ತು - ಹಾಗಾಗಿ ಅವರು ಪೇಚಾಡಿಕೊಳ್ಳುತ್ತಿದ್ದರು. ಆದರೆ ನಾನು ಮಾತ್ರ ಸಂತೋಷದಿಂದ ಅದನ್ನೇ ಸ್ವೀಕರಿಸುತ್ತಿದ್ದೆ, ಮತ್ತು ನಮ್ಮ ಸಂಬಂಧ ಎಂದೆಂದಿಗೂ ಬೆಸೆದುಕೊಂಡು ಬಿಡುತ್ತಿತ್ತು.
ಗ್ರಾಮಸ್ಥರೊಂದಿಗಿನ ಒಡನಾಟದ ಅನುಭವ ಮಾತಿಗೆ ಮೀರಿದ್ದು. ಅವರು ಬಹಳ ಸರಳ ಸ್ವಭಾವದವರು, ಆದರೆ, ಬಹಳ ಶೀಘ್ರ ಮತ್ತು ಸೂಕ್ಷ್ಮಗ್ರಾಹಿಗಳು. ಅವರನ್ನು ಕ್ಲಾಸಿಗೆ ಕರೆತರುವುದು ಮಹಾ ಸಾಹಸದ ಕಾರ್ಯವೇ ಆದರೂ ಸಹ, ಒಮ್ಮೆ ಅವರು ಬಂದರೆಂದರೆ, ಮೊದಲನೆ ದಿನವೇ ಸರಾಗವಾಗಿ ಹೊಂದಿಕೊಳ್ಳುತ್ತಿದ್ದರು. ಎರಡನೇ ದಿನದಿಂದ ಅವರು ಸದ್ಗುರುಗಳ ಜೊತೆ ಆಳವಾಗಿ ಬೆಸೆದುಕೊಳ್ಳುತ್ತಿದ್ದರು, ಮತ್ತು ಶಿಬಿರ ಮುಗಿಯುವಷ್ಟರಲ್ಲಿ ಅವರು ಸಂಪೂರ್ಣವಾಗಿ ಪರಿವರ್ತಿತರಾಗುತ್ತಿದ್ದರು. ಅವರ ಪರಿಶ್ರಮ, ಪ್ರೀತಿ ಮತ್ತು ಪರಿವರ್ತನೆ ಎಲ್ಲವೂ ನನ್ನನ್ನು ಮೂಕವಿಸ್ಮಿತವಾಗಿಸುತ್ತಿತ್ತು. ನಾನು ಆ ಹಳ್ಳಿಗರ ಜೊತೆ ಕಳೆದ ಆ ಮೂರು ವರ್ಷಗಳ ಅನುಭವವೇ ನನ್ನ ಇಂದಿನ ಈ ವ್ಯಕ್ತಿತ್ವವನ್ನು ಬಹಳಷ್ಟು ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ.
ಕೆಲವು ಇಣುಕು ನೋಟಗಳು ನಾನಿಲ್ಲಿ ಹಂಚಿಕೊಳ್ಳುತ್ತೇನೆ:
10 ವರ್ಷಗಳ ನಂತರ ಅವನು ಕೆಲಸಕ್ಕೆ ಹಿಂದಿರುಗಿದ
ಹತ್ತು ವರ್ಷಗಳ ಹಿಂದೆ, ಒಂದು ತೆಂಗಿನಕಾಯೋ ಅಥವಾ ತೆಂಗಿನಗರಿಯೋ (ನನಗೆ ಸರಿಯಾಗಿ ನೆನಪಿಲ್ಲ) ಒಬ್ಬ ವ್ಯಕ್ತಿಯ ಕುತ್ತಿಗೆಯ ಮೇಲೆ ಬಿದ್ದು, ಅವನನ್ನು ಸಂಪೂರ್ಣವಾಗಿ ಅಸಮರ್ಥನನ್ನಾಗಿಸಿತ್ತು. ಅಂದಿನಿಂದ ಅವನ ಹೆಂಡತಿ ಬಹಳ ಕಷ್ಟಪಟ್ಟು ದುಡಿದು ಇಬ್ಬರ ಊಟ ಬಟ್ಟೆ ನೋಡಿಕೊಳ್ಳುತ್ತಿದ್ದಳು. ನಂತರ ಒಂದು ದಿನ ಅವನು ಈಶ ಯೋಗ ಶಿಬಿರಕ್ಕೆ ಸೇರಿಕೊಂಡನು. ಎರಡನೇ ದಿನದ ನಂತರ ಅವನು ಗುಣಮುಖನಾಗುತ್ತಿದ್ದಾನೆ ಎಂದೂ, ಮತ್ತೆ ಕೆಲಸಕ್ಕೆ ಹೋಗಲು ಬಯಸುತ್ತಿದ್ದೇನೆಂದೂ ಹೇಳಿದನು. ನಾನು ಮೊದಲು ಈ ವಿಷಯದಲ್ಲಿ ಸ್ವಲ್ಪ ನಿಧಾನಿಸು ಎಂದು ಹೇಳಿದೆ. ಆದರೆ ಐದನೆಯ ದಿನ ಅವನು ಮತ್ತೆ ಎಂದಿನಂತೆ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದ.
ಹತ್ತು ದಿನಗಳ ಅಭ್ಯಾಸ ತಪ್ಪಿದಾಗ
ನಾನು ಆಗಾಗ ಒಬ್ಬ ವೃದ್ಧ ದಂಪತಿಗಳನ್ನು ಭೇಟಿ ಮಾಡುತ್ತಿದ್ದೆ. ಅವರು ಸದ್ಗುರುಗಳ ಬಗ್ಗೆ ಬಹಳ ಪೂಜ್ಯಭಾವ ಹೊಂದಿದ್ದರು ಮತ್ತವರು ತಮ್ಮ ಅಭ್ಯಾಸಗಳನ್ನು ತಪ್ಪದೇ ಮಾಡುತ್ತಿದ್ದರು. ಇತ್ತೀಚಿಗೆ ಹತ್ತು ವರ್ಷಗಳ ನಂತರ ನಾನು ಮತ್ತೆ ಅದೇ ಹಳ್ಳಿಗೆ ಕೆಲಸದ ಮೇಲೆ ಹೋಗಿದ್ದಾಗ ಅವರನ್ನು ಮತ್ತೆ ಭೇಟಿಯಾದೆ. ನನ್ನನ್ನು ಕಂಡ ಕೂಡಲೇ ಆ ವ್ಯಕ್ತಿ ಸಡಗರದಿಂದ ಬರಮಾಡಿಕೊಂಡ. ಅವನ ಹೆಂಡತಿ ಆಗಲೇ ತೀರಿಹೋಗಿದ್ದಳು. ನಾವು ಹಾಗೇ ಮಾತಿಗೆ ಕುಳಿತಾಗ, ಆತ ತನ್ನ ಹೆಂಡತಿಯ ಅನಾರೋಗ್ಯದ ಬಗ್ಗೆ ಹೇಳಿಕೊಂಡು ದುಃಖಿಸಿದ. ನಂತರ ಆತನ ಮಕ್ಕಳು ನನಗೆ ಹೇಳಿದ್ದೇನೆಂದರೆ, ಹೆಂಡತಿಯ ಸಾವಿನ ಕುರಿತು ಆ ವೃದ್ಧ ಕೇವಲ ಇಬ್ಬರ ಮುಂದಷ್ಟೇ ಅತ್ತಿದ್ದಂತೆ - ಒಂದು ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮುಂದೆ ಮತ್ತು ನನ್ನ ಮುಂದೆ. ಆತನಿಗೆ ನನ್ನ ಬಗ್ಗೆ ಇದ್ದ ಆಪ್ಯಾಯತೆಯನ್ನು ಕಂಡು ನಾನು ಭಾವುಕಳಾದೆ. ನಂತರ ಅವನು “ಕ್ಷಮಿಸಿ, ಕ್ಷಮಿಸಿ” ಎನ್ನಲು ಶುರು ಮಾಡಿದ. ನಾನು ಏತಕ್ಕೆಂದು ಕೇಳಿದೆ. ಅದಕ್ಕೆ ಆತ “ನಾನು ನನ್ನ ಅಭ್ಯಾಸಗಳನ್ನು ಇಷ್ಟು ವರ್ಷಗಳೂ ಸಹ ಒಂದು ದಿನವೂ ತಪ್ಪಿಸದೇ ಮಾಡುತ್ತಿದ್ದೆ, ಆದರೆ ನನ್ನ ಹೆಂಡತಿಯ ಸಾವಿನ ಹತ್ತಿರದ ಆ ಹತ್ತು ದಿನಗಳಂದು ಯಾವುದೇ ಅಭ್ಯಾಸಗಳನ್ನು ಮಾಡಲಾಗಲಿಲ್ಲ” ಎಂದ. ಇಂತಹ ಅದ್ಭುತ ವ್ಯಕ್ತಿಯನ್ನು ನೋಡಿ ನನಗೆ ಮಾತೇ ಹೊರಡಲಿಲ್ಲ. ಸರಿಯಾಗಿ ಕಾಲುಮಡಚಿ ಕೂರಲೂ ಆಗದ, 80 ವರ್ಷಗಳ ಅಂಚಿನಲ್ಲಿದ್ದ ಆ ವ್ಯಕ್ತಿ, ಹತ್ತು ದಿನಗಳ ಅಭ್ಯಾಸವನ್ನು ತಪ್ಪಿಸಿದಕ್ಕೆ ಮರುಗುತ್ತಿದ್ದ. ನಾನು ಬಹಳ ವಿನೀತಳಾದೆ.
ಕ್ಲಾಸನ್ನು ಹೊರಗಡೆ ನಡೆಸಿದ್ದು
ಒಮ್ಮೆ, ಒಬ್ಬ ಕುಡುಕ ನನ್ನ ಕ್ಲಾಸಿಗೆ ಬಂದ. ಆದರೆ, ಮೊದಲ ದಿನ ನಾನು ಅವನನ್ನು ಒಳಗೆ ಬಿಡಲಿಲ್ಲ. ಅವನು ಹೊರಗಡೆಯೇ ಕುಳಿತು ಎಲ್ಲವನ್ನೂ ಕೇಳಿಸಿಕೊಂಡು, ಎಲ್ಲಾ ಅಭ್ಯಾಸಗಳನ್ನೂ ಕಿಟಕಿಯಿಂದಲೇ ಗಮನಿಸಿದ. ಹೊರಗೆ ಕುಳಿತೇ ಎಲ್ಲಾ ಅಬ್ಯಾಸಗಳನ್ನು ಮಾಡಿದ. ಮಾರನೇ ದಿನ ಅವನು ಗಂಭೀರವಾಗಿ ಬಂದ. “ಇಂದು ನೀವು ನನಗೆ ಇಲ್ಲ ಎನ್ನುವ ಹಾಗಿಲ್ಲ. ನಿನ್ನೆ ನಾನು ಇಡೀ ಕ್ಲಾಸಿಗೆ ಹಾಜರಾಗಿದ್ದೆ” ಎಂದು ಬೇಡಿಕೊಂಡ.
ಅವನು ತನ್ನ ಬದ್ಧತೆಯಿಂದ ನನ್ನನ್ನು ಕಟ್ಟಿಹಾಕಿದ. ನಾನು ಆತನನ್ನು ಒಳಗೆ ಸೇರಿಸಿದೆ. ಅವನ ಇಡೀ ಜೀವಮಾನದಲ್ಲೇ, ಆ ಆರು ದಿನಗಳಷ್ಟೇ ಅವನು ಕುಡಿಯದೆ ಇದ್ದದ್ದು ಎನಿಸುತ್ತದೆ. ದೀಕ್ಷೆಯ ನಂತರ ಅವನು ಎಷ್ಟು ಭಾವುಕನಾದನೆಂದರೆ, ಅಂದು ಘಂಟೆಗಟ್ಟಲೆ ಅತ್ತ. ಅವನು ತನ್ನ ಅಭ್ಯಾಸಗಳನ್ನು ಮುಂದುವರಿಸಿದ ಮತ್ತು ತನ್ನ ಕುಡಿತದ ಚಟದಿಂದ ಸಂಪೂರ್ಣವಾಗಿ ಹೊರಬಂದ. ಅವನು ಮತ್ತೆ ತನ್ನ ಕೆಲಸಕ್ಕೆ ಹಿಂದಿರುಗಿದ ಮತ್ತು ಅವನನ್ನು ಬಿಟ್ಟು ಹೋಗಿದ್ದ ಅವನ ಹೆಂಡತಿ ಮತ್ತೆ ಹಿಂದಿರುಗಿದಳು.
ನನ್ನ ಗುರುಗಳ ಆದೇಶವನ್ನು ಮೀರಿ ನಡೆದಾಗ
ಆರು ತಿಂಗಳ ನಂತರ, ಬೇರೆ ಶಿಕ್ಷಕರು ನನ್ನ ಜೊತೆ ಕೈ ಜೋಡಿಸಿದರು ಮತ್ತು ನಾವು ನಮ್ಮ ಕಾರ್ಯಾಚರಣೆಯನ್ನು ಮತ್ತೂ ಹಲವಾರು ಹಳ್ಳಿಗಳಿಗೆ ವಿಸ್ತರಿಸಿದೆವು. ಗ್ರಾಮೀಣ ಸ್ವಯಂಸೇವಕರು ಮತ್ತು ಜನ ಎಷ್ಟು ಪ್ರೀತಿ ಹಾಗು ನಂಬಿಕೆಯನ್ನು ಇಟ್ಟುಕೊಂಡಿದ್ದರೆಂದರೆ, 2006 ರಲ್ಲಿ, ಎಂಟು ಲಕ್ಷ ಸಸಿಗಳನ್ನು ನೆಟ್ಟಿದ್ದಕ್ಕಾಗಿ ಈಶ ಸಂಸ್ಥೆ ಗಿನ್ನಿಸ್ ರೆಕಾರ್ಡ್ ಪಡೆದಾಗ, ಈರೋಡ್ ಜಿಲ್ಲೆ ಒಂದರಲ್ಲೇ ನಾವು 90,000 ಸಸಿಗಳನ್ನು ನೆಟ್ಟಿದ್ದೆವು - ಅಂದರೆ ಒಟ್ಟಾರೆಯಲ್ಲಿ 10% ನಷ್ಟು ಸಸಿಗಳನ್ನು ಒಂದೇ ಜಿಲ್ಲೆಯಲ್ಲಿ ನೆಡಲಾಗಿತ್ತು. ಇದಾದ ನಂತರ ಸದ್ಗುರುಗಳ ಆದೇಶವೇನೂ ಇಲ್ಲದೆ, ಸ್ವಯಂ ಪ್ರೇರೆಣೆಯಿಂದ ನಾನು ಅವರ ಹುಟ್ಟುಹಬ್ಬದ ಉಡುಗೊರೆಯಾಗಿ, 50 ಲಕ್ಷ ಸಸಿಗಳನ್ನು ನೆಡುವ ನಿರ್ಧಾರ ಮಾಡಿದೆ. ನಾನು ಇದಕ್ಕಾಗಿ ಊರೂರು ಅಲೆದೆ. ಆದರೆ ಅದು ಸಾಧ್ಯವಾಗಲಿಲ್ಲ. ಬದಲಿಗೆ ನನ್ನ ಆರೋಗ್ಯ ಎಷ್ಟು ಹದಗೆಟ್ಟಿತೆಂದರೆ, ನಾನು ಚೇತರಿಸಿಕೊಳ್ಳಲು ಸದ್ಗುರುಗಳು ನನ್ನನ್ನು ಆಶ್ರಮಕ್ಕೆ ವಾಪಸ್ಸು ಕರೆಸಿಕೊಂಡರು. ನಾನು ARR ಕಾರ್ಯಕ್ರಮವನ್ನು ಆಶ್ರಮದಿಂದಲೇ ಮುಂದುವರಿಸಿದೆ.
ಕೆಲವೇ ದಿನಗಳಲ್ಲಿ ಚೆನ್ನೈ ಗ್ರಾಮೋತ್ಸವ ಕಾರ್ಯಕ್ರಮವನ್ನು ಘೋಷಿಸಲಾಯಿತು, ಮತ್ತು ನಾವು ನೂರಾರು ಆಟಗಾರರನ್ನು ಆಹ್ವಾನಿಸಿದ್ದೆವು. ಅದಲ್ಲದೆ, ಸಾವಿರಾರು ಗ್ರಾಮಸ್ಥರು ತಮ್ಮ ಸ್ವ-ಖರ್ಚಿನಲ್ಲೇ ಬರಲು ತಯಾರಾಗಿದ್ದರು. ಆದರೆ, ಚೆನ್ನೈನಲ್ಲಿ ಕಾರ್ಯಕ್ರಮದ ಎಲ್ಲಾ ಉಸ್ತುವಾರಿ ನೋಡಿಕೊಳ್ಳಲು ಯಾರಾದರೂ ಇರಲೇಬೇಕಿತ್ತು. ಗ್ರಾಮೀಣ ಜನತೆ ನನ್ನನ್ನು ಬಹಳ ಹಚ್ಚಿಕೊಂಡಿದ್ದರಿಂದ ನಾನೇ ಹೋಗಬಹುದೆ ಎಂದು ಸದ್ಗುರುಗಳನ್ನು ಕೇಳಿದೆ. ಆದರೆ ಅವರು, “ಗ್ರಾಮೋತ್ಸವ ನಡೆಯುತ್ತದೆ, ಆದರೆ ನೀನು ಇಲ್ಲೇ ಇರಬೇಕು” ಎಂದರು. ಆದರೆ, ನಾನು ಒತ್ತಾಯಪೂರ್ವಕವಾಗಿ ಕೇಳಿದಾಗ, “ಸರಿ, ಹೋಗು! ಆದರೆ, ನಂತರ ನಿನ್ನ ಆರೋಗ್ಯದ ಬಗ್ಗೆ ನನ್ನನ್ನು ಕೇಳಬೇಡ” ಎಂದು ಹೇಳಿ ಹೊರಟುಬಿಟ್ಟರು.
500,000 ಜನಸ್ತೋಮದೊಂದಿಗೆ, ಗ್ರಾಮೋತ್ಸವವು ಅದ್ಧೂರಿಯಾಗಿ ನಡೆಯಿತು. ಇಂತಹ ಬೃಹತ್ ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿ ಗ್ರಾಮಸ್ಥರ ಯೋಗಕ್ಷೇಮದ ವ್ಯವಸ್ಥೆಯನ್ನೆಲ್ಲಾ ನೋಡಿಕೊಂದಡಿದ್ದು, ಎಲ್ಲವೂ ನನಗೆ ಬಹಳ ಖುಷಿ ತಂದಿತ್ತು. ಆದರೆ ಹಿಂದಿರುಗುವಾಗ, ನನ್ನ ಆರೋಗ್ಯ ಎಷ್ಟು ಹದಗೆಟ್ಟಿತೆಂದರೆ, ನನ್ನನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು ಮತ್ತು ತಕ್ಷಣ ಒಂದು ಶಸ್ತ್ರಚಿಕಿತ್ಸೆಯನ್ನೂ ಮಾಡಬೇಕೆಂದು ಹೇಳಿದರು. ಆದರೆ ಸದ್ಗುರುಗಳು ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಿ ನನ್ನನ್ನು ಒಂದು ವಿಶೇಷ ಪಥ್ಯದಲ್ಲಿಟ್ಟರು ಮತ್ತು ಕೆಲವು ಸಾಧನೆಗಳನ್ನು ಹೇಳಿಕೊಟ್ಟರು. 40 ದಿನಗಳ ನಂತರ ನಾನು ಚೆಕ್-ಅಪ್ ಗೆ ಹೋದಾಗ, ಎಲ್ಲವೂ ಸರಿಯಾಗಿದೆ ಎಂದರು. ಆದರೆ ನಾನು ಆಗ ಒಂದು ಮುಖ್ಯವಾದ ಪಾಠ ಕಲಿತೆ.
2006 ರಲ್ಲಿ, ನಾನು ಆಶ್ರಮದಲ್ಲೇ ಇರಲು ಹಿಂದಿರುಗಿದೆ. ನಂತರದ ವರ್ಷಗಳಲ್ಲಿ ಅಕ್ಷಯ (ಆಶ್ರಮದ ಪಾಕಶಾಲೆ) ಮತ್ತು ಪ್ರಾದೇಶಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತಿದ್ದೆ. ಶಿವಾಂಗ ಸಾಧನವನ್ನು ಮೊಟ್ಟ ಮೊದಲ ಬಾರಿ ಮಹಿಳೆಯರಿಗೆ ನೀಡುವಾಗ ಸದ್ಗುರುಗಳು ಗ್ರಾಮೀಣ ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕೆಂದು ಬಯಸಿದರು. ಆಗ ನಾನು ಮತ್ತೆ ಗ್ರಾಮಗಳಿಗೆ ತೆರಳಿ ಮಹಿಳೆಯರಿಗೆ ಈ ಸಾಧನೆಯನ್ನು ಕಲಿತು, ಅದರ ಪರಿಸಮಾಪ್ತಿಗೆ ಆಶ್ರಮಕ್ಕೆ ಬರಲು ಹುರಿದುಂಬಿಸಿದೆ. 2011 ರಲ್ಲಿ ಸುಮಾರು 1,400 ಮಹಿಳೆಯರು ಥೈಪುಸಮ್ ದಿನದಂದು ಆಶ್ರಮಕ್ಕೆ ಬಂದಿದ್ದರು. ನಾನದನ್ನು ಕಂಡು ಮನಸ್ಸಿನಲ್ಲೇ ಸಂತೋಷದಿಂದ ಕುಣಿದಾಡುತ್ತಿದ್ದೆ.
ಈಗ ನಾನು ಈಶ ತೋಟವೊಂದನ್ನು ನೋಡಿಕೊಳ್ಳುತ್ತಿದ್ದೇನೆ. ಅಲ್ಲಿ ನಾನು ಶೂನ್ಯ ಬಂಡವಾಳದ ಸಾವಯವ ಕೃಷಿ ಮಾಡುತ್ತೇನೆ. ಮತ್ತು ಪ್ರೊಜೆಕ್ಟ್ ಗ್ರೀನ್ ಹ್ಯಾಂಡ್ಸ್ ಕಾರ್ಯಾಗಾರದಲ್ಲಿ ಕಲಿತ ಅಂತರಬೆಳೆ ಪದ್ಧತಿಯನ್ನು ನಾನಿಲ್ಲಿ ಅಳವಡಿಸಿಕೊಂಡಿದ್ದೇನೆ. ನನ್ನ ತೋಟದ ಸಣ್ಣ ಸಣ್ಣ ಸಸಿಗಳನ್ನು ನೋಡಿದಾಗ ಪುಳಕಗೊಳ್ಳುತ್ತೇನೆ, ಮತ್ತು ಅದರ ಬೆಳೆಗಳನ್ನು ಅಕ್ಷಯಕ್ಕೆ ತಲುಪಿಸುತ್ತೇನೆ. ಈ ಪದ್ಧತಿಗಳು ಅದ್ಭುತ. ನಾನು ಬರೀ ಸಗಣಿ ಮತ್ತು ಗೋಮೂತ್ರವನ್ನು ಮಾತ್ರ ಜೈವಿಕ ಗೊಬ್ಬರವಾಗಿ ಬಳಸುತ್ತೇನೆ. ಒಂದೇ ಒಂದು ಎಕರೆ ಭೂಮಿಯಿಂದ, ಕಳೆದ ತಿಂಗಳು ನಾವು 2.1 ಟನ್ ಮೂಲಂಗಿ ಮತ್ತು 650 ಕೇಜಿ ಕೊತ್ತಂಬರಿಯನ್ನು ಬೆಳೆದಿದ್ದೆವು. ಟೊಮ್ಯಾಟೋ ಮತ್ತು ಬೆಂಡೆಕಾಯಿಯನ್ನೂ ಸಹ ಸದ್ಯದಲ್ಲೇ ಬೆಳೆಯುತ್ತಿದ್ದೇವೆ. ರೈತನಾಗಿರುವುದರ ಹೆಮ್ಮೆಯನ್ನು ನಾನು ಅನುಭವಿಸುತ್ತಿದ್ದೇನೆ.
ಅಂತಃ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಪಯಣ
ಒಂದು ಸಲ ಯಾವುದೋ ಪೆಟ್ಟಿನಿಂದಾಗಿ, ನನ್ನ ಬಲತೋಳು ಬಹಳ ನೋಯುತ್ತಿತ್ತು. ಆಗ ನಾನು ಹೇಗಿದ್ದೆನೆಂದರೆ, ಡಾಕ್ಟರ್ ಏನಾದರೂ ಗಾಯಕ್ಕೆ ಉರಿಯುವ ಆಯಿನ್ಟ್ಮೆಂಟ್ ಹಚ್ಚಬೇಕೆಂದರೆ, ನನ್ನನ್ನು ನಾಲ್ಕು ಜನ ಗಟ್ಟಿಯಾಗಿ ಹಿಡಿದುಕೊಳ್ಳಬೇಕಿತ್ತು. ನನ್ನ ನೋವು ಸಹಿಷ್ಣುತೆ ಅಷ್ಟು ದುರ್ಬಲವಾಗಿತ್ತು. ಹಾಗಾಗಿ ಈ ನೋವಿನ ಉಪಶಮನಕ್ಕಾಗಿ ನಾನು ಮತ್ತೆ ಸದ್ಗುರುಗಳ ಮೊರೆ ಹೋದೆ. ಅವರು ತಮಾಷೆಯಾಗಿ ನಕ್ಕು, ಯಾವುದೇ ಔಷಧೋಪಚಾರ ಬೇಡ, ನೋವು-ನಿವಾರಕಗಳೂ ಬೇಡ ಎಂದುಬಿಟ್ಟರು. ನನ್ನ ನೋವು ಸರ್ವಿಕಲ್ ಸ್ಪಾನ್ಡಿಲೈಟಿಸ್ ಆಗಿ ನೋವು ತಾಳಲಾರದಷ್ಟು ಜಾಸ್ತಿಯಾಯಿತು. ವೆದ್ಯರೂ ಸಹ ನಾನೇಕೆ ಯಾವುದೇ ಔಷಧಗಳನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ಆಶ್ಚರ್ಯಪಡುತ್ತಿದ್ದರು. ನಾನು ಮೂರನೇ ಬಾರಿ ಸದ್ಗುರುಗಳ ಬಳಿ ತೆರಳಿದೆ. ಅವರು ಮತ್ತೆ ನಕ್ಕರು, ಆದರೆ, ಈ ಬಾರಿ ವಿಜಿ ಅಕ್ಕ ನನ್ನ ಸಹಾಯಕ್ಕೆ ಬಂದು ನನ್ನನ್ನು ಬೆಂಬಲಿಸಿದರು. ಆಗ ಸದ್ಗುರುಗಳು ನಮ್ಮ ಬೇಡಿಕೆಗೆ ಮಣಿದು ಕೆಲವು ಸಾಧನಗಳನ್ನು ನನಗೆ ಕಲಿಸಿದರು. ನಂತರ ಕೆಲವೇ ದಿನಗಳಲ್ಲಿ ನನ್ನ ನೋವು ಮಾಯವಾಯಿತು. ಸದ್ಗುರು ಮೊದಲೇ ಏಕೆ ಈ ಸಾಧನಗಳನ್ನು ನನಗೆ ಹೇಳಿಕೊಡಲಿಲ್ಲ ಎಂದು ಯೋಚಿಸುತ್ತಿದ್ದೆ. ನನ್ನ ನೋವು ಸಹಿಷ್ಣುತೆಯ ತೀವ್ರತೆ ಬದಲಾಗಿರುವುದು ನಂತರ ನನ್ನ ಅರಿವೆ ಬಂತು. ಹೀಗೆ ಅವರು ನನ್ನ ಅನೇಕ ಸೀಮಿತ ಪರಿಧಿಗಳಿಂದ ಹೊರಬರಲು ನನಗೆ ಸಹಾಯ ಮಾಡಿದರು.
ನನ್ನ ಪರಿವರ್ತನೆಯ ನಿಜವಾದ ಪರೀಕ್ಷೆಯಾಗಿದ್ದು ನನ್ನ ತಾಯಿಯ ಸಾವಿನ ಸುದ್ದಿ ಬಂದಾಗ. ನನಗೆ ನೋವಾಗಿದ್ದು ನಿಜ, ಆದರೆ ನಾನು ಅದರಿಂದ ಅಂತರವನ್ನು ಕಾಯ್ದುಕೊಂಡು ನನ್ನ ದಿನನಿತ್ಯದ ಕಾರ್ಯಕಲಾಪಗಳನ್ನು ಮುಂದುವರಿಸಿದೆ. ಆಗಲೇ ನಾನು ಎಷ್ಟು ಬದಲಾಗಿದ್ದೇನೆ ಎಂಬ ಅರಿವು ನನಗಾಗಿದ್ದು. ಈಗ ನಾನು ಬಹಳಷ್ಟು ರೀತಿಗಳಲ್ಲಿ ಬೇರೆಯದ್ದೇ ಮನುಷ್ಯಳಾಗಿದ್ದೇನೆ. ಮತ್ತು ಯಾವಾಗಲೂ ಯಾವುದಕ್ಕಾದರೂ ಅಂಟಿಕೊಂಡಿರುತ್ತಿದ್ದ ಒಬ್ಬ ಅಪ್ರಬುದ್ಧ ಹುಡುಗಿಯಾಗಿದ್ದ ನಾನು - ಈಗ ನನ್ನ ಎಲ್ಲಾ ಸಾಮಾಜಿಕ ಪರಿಸ್ಥಿತಿಗಳಿಂದ ಅಂತರವನ್ನು ಕಾಯ್ದುಕೊಂಡಿದ್ದೇನಾದರೂ, 25 ವರ್ಷಗಳ ಹಿಂದೆ ಇದ್ದಷ್ಟೇ ತೀವ್ರವಾಗಿ ಎಲ್ಲದರಲ್ಲೂ ತೊಡಗಿಸಿಕೊಳ್ಳುತ್ತೇನೆ. ಸದ್ಗುರುಗಳಿಗೆ ನನ್ನ ಕೃತಜ್ಞತೆಗಳನ್ನು ಹೇಗೆ ತಿಳಿಸಲಿ? ನಾನು ನನ್ನ ದಾರಿಯಿಂದ ದೂರ ಸರಿದಾಗೆಲ್ಲಾ ನನ್ನನ್ನು ಬೆಂಬಲಿಸಿ ಮತ್ತೆ ನನ್ನ ದಾರಿಗೆ ಹಿಂದಿರುಗಲು ಕಾಲಾವಕಾಶವನ್ನು ಅವರು ಕೊಟ್ಟರು. ನನಗೆ ನನ್ನ ಸರ್ವಸ್ವವೂ ಸದ್ಗುರುಗಳೇ.
ನಾನು ಎಂದಿಗಾದರೂ ಅವರ ಋಣವನ್ನು ಹೇಗೆ ತೀರಿಸಲಿ?