2012 ರಲ್ಲಿ ಸದ್ಗುರುಗಳು ನಡೆಸಿಕೊಟ್ಟ ಮಹಾಭಾರತ ಕಾರ್ಯಕ್ರಮದ ಈ ಆಯ್ದ ತುಣುಕಿನಲ್ಲಿ, ಅವರು ಸಮಯದ ಸ್ವರೂಪವನ್ನು ವಿಶ್ಲೇಷಿಸುತ್ತ, ಹೇಗೆ ಸೃಷ್ಟಿಯ ಈ ಮೂಲಭೂತವಾದ ಅಂಶದ ಬಗ್ಗೆ ಭಾರತದ ಋಷಿಗಳು ಅಪೂರ್ವವಾದ ಜ್ಞಾನವನ್ನು ಹೊಂದಿದ್ದರೆಂಬುದನ್ನು ವಿವರಿಸುತ್ತಾರೆ. 108 ರ ಮಹತ್ವ ಮತ್ತದು ರುದ್ರಾಕ್ಷಿ ಮಾಲೆಗಳ ಮಣಿಗಳ ಸಂಖ್ಯೆ ಹಾಗೂ ಇನ್ನೂ ಅನೇಕ ವಿಷಯಗಳಲ್ಲಿ ಏಕೆ ಕಾಣಸಿಗುತ್ತದೆ ಎಂಬುದರ ಬಗ್ಗೆ ಅವರು ಇಲ್ಲಿ ಮಾತನಾಡುತ್ತಾರೆ. 108, ಕೇವಲ ಮಾನವರಿಗೆ ಮಾತ್ರವಲ್ಲದೇ, ಭೂಮಿ ಮತ್ತು ಸೌರವ್ಯೂಹದ ವ್ಯಾಪ್ತಿಯಲ್ಲೂ ಸಹ ಹೇಗೆ ಪ್ರಮುಖವಾದುದ್ದೆಂಬುದನ್ನು ಸದ್ಗುರುಗಳು ವಿವರಿಸುತ್ತಾರೆ.

ఆధ్యాత్మికతలో 108 అనే సంఖ్య ప్రాధాన్యత ఏమిటి?

ಸದ್ಗುರು: ಸೃಷ್ಟಿಗೆ ಮುಂಚಿನ ಅನಂತತೆಯಿಂದ ಸೃಷ್ಟಿಯ ಮೂರು ಸಾಧ್ಯತೆಗಳು ಉದ್ಭವಿಸಿದವು. ಅಪರಿಮಿತವಾದಂತಹ ಆಕಾಶದಿಂದ ಅದು - ಸಮಯ, ಶಕ್ತಿ ಮತ್ತು ಗುರುತ್ವಾಕರ್ಷಣೆಯ ರೂಪದಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ನಿರ್ಧರಿಸಿತು. ಈ ಮೂರು ಮೂಲಭೂತ ಅಂಶಗಳು, ಸಮಯಾತೀತ ಹಾಗೂ ಅಪರಿಮಿತವಾದ ಆಕಾಶವನ್ನು, ಸಮಯ-ನಿರ್ಬಂಧಿತ ಮತ್ತು ಸೀಮಿತ ಸೃಷ್ಟಿಯಲ್ಲಿ ಕಟ್ಟಿಹಾಕಿದವು. ಈ ಮೂರರ ಪೈಕಿ, ಸಮಯ - ನಿಷ್ಕರುಣೆಯುಳ್ಳ ಸಮಯ - ಹಿಗ್ಗುತ್ತದೆ ಮತ್ತು ಸದೆ ಬಡಿಯುತ್ತದೆ, ಪೋಷಿಸುತ್ತದೆ ಮತ್ತು ಕಂಗಾಲಾಗಿಸುತ್ತದೆ, ಮೇಲೇರಿಸುತ್ತದೆ ಮತ್ತು ಕೆಳಕ್ಕೆ ಬೀಳಿಸುತ್ತದೆ. ಸಮಯ ಯಾರಿಗೂ ವಿಶ್ರಾಂತಿ ನೀಡುವುದಿಲ್ಲ. ಒಂದು ಹುಳ ಅಥವಾ ಒಂದು ಹಕ್ಕಿ, ಬೇಟೆ ಅಥವಾ ಬೇಟೆಗಾರ, ಆಳುವವನು ಅಥವಾ ಆಳಾಗಿರುವವನು, ಗುಲಾಮ ಅಥವಾ ಚಕ್ರವರ್ತಿ, ಸುಂದರ ಆಕೃತಿಗಳು ಮತ್ತು ಅದ್ಭುತವಾದ ಅರಮನೆಗಳು, ಪ್ರಖ್ಯಾತಿಯ ಉತ್ತುಂಗ ಅಥವಾ ಅಪಖ್ಯಾತಿಯ ಆತಂಕ – ಎಲ್ಲವೂ ಸಹ ಶೂನ್ಯತೆಗೆ, ಬೂದಿ ಮಣ್ಣಿಗೆ ಪುನಃ ಹಿಂದಿರುಗುತ್ತದೆ.

ಕಾಲ ಎಂದಿಗೂ ನಿಲ್ಲದು

ಕಾಲ ಅಥವಾ ಸಮಯ ಎನ್ನುವುದು ಸದಾ ಸಾಗುತ್ತಿರುವಂತಹ ಅಂಶ. ಒಂದೋ ನೀವು ಕಾಲದೊಂದಿಗೆ ಪಯಣಿಸಿ ಸುಂದರವಾದ ಜೀವನವನ್ನು ನಡೆಸಬಹುದು ಅಥವಾ ಈ ನಿರಂತರವಾದ ಕಾಲಚಕ್ರದಿಂದ ಸದೆಬಡಿಸಿಕೊಳ್ಳಬಹುದು. ಕಾಲದ ಪ್ರಕ್ರಿಯೆಯಿಂದ ಒಂದೋ ನೀವು ನಾಶವಾಗುತ್ತೀರಿ ಅಥವಾ ನಿಮ್ಮ ಗುರಿಯನ್ನು ಮುಟ್ಟುತ್ತೀರಿ. ಒಂದೋ ನೀವು ಕಾಲದ ಪ್ರಕ್ರಿಯೆಯ ಬಲೆಗೆ ಬೀಳುತ್ತೀರಿ ಅಥವಾ ಮೋಕ್ಷ ಹೊಂದಲು ನೀವದನ್ನು ಉಪಯೋಗಿಸಿಕೊಳ್ಳುತ್ತೀರಿ. ಇದು ಸೃಷ್ಟಿಯ ಅತ್ಯಂತ ಪ್ರಮುಖ ಆಯಾಮ - ಬಹುತೇಕ ಜನರು ನಂಬಿರುವಂತೆ ಇದು ಕೇವಲ ಮಾನವ ಪರಿಕಲ್ಪನೆಯಲ್ಲ. ಕಾಲವಿಲ್ಲದೇ ಹೋಗಿದ್ದರೆ, ಆದಿ ಮತ್ತು ಅಂತ್ಯವಿರುತ್ತಿರಲಿಲ್ಲ. ಆದಿ ಮತ್ತು ಅಂತ್ಯವಿಲ್ಲದೇ ಹೋಗಿದ್ದರೆ, ಈ ಸೃಷ್ಟಿಯಿರುತ್ತಿರಲಿಲ್ಲ.

ನಮ್ಮ ಅಸ್ತಿತ್ವವಿರುವುದು ಕಾಲದಲ್ಲಿ. ನಾವು ಜನಿಸಿದ್ದು ಕಾಲದಲ್ಲಿ. ನಾವು ಸಾಯುವುದೂ ಸಹ ಕಾಲದಲ್ಲಿ. ಕಾಲದ ಮಹತ್ವವನ್ನು, ಕಾಲದ ನಿಯಮಗಳನ್ನು, ಕಾಲದ ಧರ್ಮವನ್ನು ಅರ್ಥಮಾಡಿಕೊಂಡು ಕಾಲಧರ್ಮದೊಂದಿಗೆ ಹೊಂದಿಕೊಂಡಿರುವಂತಹವರು ಕೇವಲ "ಜಯ" ಅಷ್ಟೇ ಅಲ್ಲ, ಅವರು "ವಿಜಯ". ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು. ಇದಕ್ಕೆ ಪ್ರತಿಯಾಗಿ, ಕಾಲಧರ್ಮದೊಂದಿಗೆ ಹೊಂದಿಕೊಂಡಿರದೇ ಇರುವವರು, ಬದುಕಿನ ಪ್ರಕ್ರಿಯೆಯಿಂದಾಗಿ ನುಚ್ಚು ನೂರಾಗುತ್ತಾರೆ. ಜೀವನವು ಕಾಲದ ಒಂದು ಆಟವಷ್ಟೆ. ಇದನ್ನರಿತ ನಮ್ಮ ಋಷಿಮುನಿಗಳು ಮತ್ತು ಯೋಗಿಗಳು ಕಾಲದ ಕಡೆಗೆ ಅಪಾರವಾದ ಗಮನವನ್ನು ನೀಡಿದ್ದಾರೆ. ಕಾಲದ ಬಗ್ಗೆ ನಮಗಿರುವ ಕಲ್ಪನೆಯು ಮೂಲಭೂತವಾಗಿ ನಮ್ಮ ಸುತ್ತಲಿರುವ ಪ್ರತ್ಯಕ್ಷ ಸೃಷ್ಟಿಯಾದ ಈ ಗ್ರಹ ಮತ್ತು ಸೌರಮಂಡಲ ಜೊತೆಗೆ ನಮಗಿರುವ ಸಂಬಂಧವನ್ನಾಧರಿಸಿದೆ.

108 ರ ಮಹತ್ವ


 
ಪ್ರಾಚೀನ ಭಾರತೀಯ ಖಗೋಳಶಾಸ್ತ್ರ ಗ್ರಂಥವಾದ ಸೂರ್ಯ ಸಿದ್ಧಾಂತದ ಪ್ರಕಾರ, ಸೂರ್ಯನ ಬೆಳಕು ಅರ್ಧ ನಿಮಿಷದಲ್ಲಿ 2,202 ಯೋಜನಗಳನ್ನು ಕ್ರಮಿಸುತ್ತದೆ. ಒಂದು ಯೋಜನವು ಒಂಬತ್ತು ಮೈಲಿಗಳಿಗೆ ಸಮ. 2,202 ಯೋಜನಗಳು 19,818 ಮೈಲಿಗಳಿಗೆ ಸಮವಾಗುತ್ತದೆ. ಒಂದು ನಿಮಿಷವು (ಸದ್ಗುರುಗಳು ಇಲ್ಲಿ ಹೇಳುತ್ತಿರುವ ’ನಿಮಿಷ’ ಮತ್ತು ಈಗ ಕನ್ನಡದಲ್ಲಿ ಉಪಯೋಗಿಸಲ್ಪಡುತ್ತಿರುವ ನಿಮಿಷ(ಮಿನಿಟ್) ಎರಡೂ ಬೇರೆ ಬೇರೆ) ಒಂದು ಸೆಕೆಂಡಿನ 16/75 ಕ್ಕೆ ಸಮ. ಅರ್ಧ ನಿಮಿಷದ ಅವಧಿ ಒಂದು ಸೆಕೆಂಡಿನ 8/75 ಕ್ಕೆ ಸಮ, ಅಂದರೆ 0.106666 ಸೆಕೆಂಡ್‌ಗಳು. 0.10666 ಸೆಕೆಂಡ್‌ಗಳಲ್ಲಿ 19,818 ಮೈಲಿಯ ವೇಗವು ಪ್ರತಿ ಸೆಕೆಂಡಿಗೆ 185,793 ಮೈಲಿಗಳಷ್ಟಾಗುತ್ತದೆ. ಇದು ಸರಿಸುಮಾರು ಆಧುನಿಕ ಲೆಕ್ಕಾಚಾರಗಳಿಗೆ ಅನುಗುಣವಾಗಿದೆ. ಅದರ ಪ್ರಕಾರ, ಬೆಳಕಿನ ವೇಗ ಪ್ರತಿ ಸೆಕೆಂಡಿಗೆ 186,282 ಮೈಲಿಗಳು. ಆಧುನಿಕ ವಿಜ್ಞಾನವು ಈ ಅಂಕಿಯನ್ನು ತಲುಪಲು ಬಹಳಷ್ಟು ಕಷ್ಟಪಟ್ಟಿದ್ದು, ಎಲ್ಲಾ ರೀತಿಯ ಉಪಕರಣಗಳನ್ನೂ ಅದು ಬಳಸಿಕೊಂಡಿದೆ. ಆದರೆ ಕೆಲವು ಸಾವಿರ ವರ್ಷಗಳ ಹಿಂದೆ ನಮ್ಮ ಪೂರ್ವಜರು, ಮಾನವ ಜೀವವ್ಯವಸ್ಥೆ ಹಾಗೂ ಸೌರಮಂಡಲ ಒಟ್ಟಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಸರಳವಾದ ಅವಲೋಕನವನ್ನು ಮಾಡುವ ಮೂಲಕ ಈ ಸಂಖ್ಯೆಯನ್ನು ಕಂಡುಕೊಂಡಿದ್ದರು.

ಸೂರ್ಯ ಮತ್ತು ಭೂಮಿಯ ನಡುವಿನ ಅಂತರ, ಚಂದ್ರ ಮತ್ತು ಭೂಮಿಯ ನಡುವಿನ ಅಂತರ, ಭೂಮಿ ತಿರುಗುವ ರೀತಿ ಮತ್ತದರ ಪ್ರಭಾವ - ಇವೆಲ್ಲವನ್ನೂ ಬಹಳ ಗಮನವಿಟ್ಟು ನೋಡಲಾಗಿದೆ. ಸೂರ್ಯನ ವ್ಯಾಸವನ್ನು 108 ರಿಂದ ಗುಣಿಸಿದಾಗ ಅದು ಸೂರ್ಯ ಮತ್ತು ಭೂಮಿಯ ನಡುವಿನ ಅಂತರಕ್ಕೆ ಸಮವಾಗುತ್ತದೆ. ಚಂದ್ರನ ವ್ಯಾಸವನ್ನು 108 ರಿಂದ ಗುಣಿಸಿದಾಗ ಅದು ಚಂದ್ರ ಮತ್ತು ಭೂಮಿಯ ನಡುವಿನ ಅಂತರಕ್ಕೆ ಸಮವಾಗುತ್ತದೆ. ಸೂರ್ಯನ ವ್ಯಾಸವು ಭೂಮಿಯ ವ್ಯಾಸದ 108 ಪಟ್ಟಿನಷ್ಟಿದೆ. ಅದಕ್ಕಾಗೇ ನಮ್ಮ ಮಾಲೆಗಳಲ್ಲಿ 108 ಮಣಿಗಳಿರುವುದು.

ನಾನು ಇಂತಹದ್ದೇ ಇನ್ನೂ ಅನೇಕ ಅಸಾಧಾರಣ ಸಂಖ್ಯೆಗಳ ಬಗ್ಗೆ ಹೇಳುತ್ತಾ ಹೋಗಬಹುದು. ಆದರೆ ಇಲ್ಲಿ ಅತ್ಯಂತ ಪ್ರಮುಖವಾದ ವಿಷಯವೆಂದರೆ, ಕಾಲ ಮತ್ತು ಮಾನವ ಶರೀರದ ರಚನೆಯ ನಡುವೆ ಇರುವ ಆಳವಾದ ಸಂಬಂಧ. ನಿಮಗೆ ತಿಳಿದಿರುವಂತೆ, ನಮ್ಮ ಭೂಮಿ ಗೋಳಾಕಾರದಲ್ಲಿದ್ದು, ಕೊಂಚ ಬಾಗಿರುವ ಕಕ್ಷೆಯನ್ನು ಹೊಂದಿದೆ. ಅದು ಚಲಿಸಿದಂತೆಲ್ಲಾ, ತಿರುಗಿದಂತೆಲ್ಲಾ, ಅದೊಂದು ವೃತ್ತವನ್ನು ನಿರ್ಮಿಸುತ್ತದೆ. ಭೂಮಿ ಈ ಸುತ್ತನ್ನು ಪೂರ್ಣಗೊಳಿಸಲು 25,920 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಮಗಿಂದು ತಿಳಿದಿದೆ. ಭೂಮಿಯ ಮೇಲೆ ಚಂದ್ರನ ಗುರುತ್ವಾಕರ್ಷಣೆಯ ಕಾರಣದಿಂದಾಗಿ ಈ ಬಾಗುವಿಕೆ ಉಂಟಾಗುತ್ತದೆ. 25,920 ವರ್ಷಗಳನ್ನು ಒಂದು ಯುಗದ ಆವರ್ತನವೆಂದು ಕರೆಯಲಾಗುತ್ತದೆ. ಈ ಪ್ರತಿಯೊಂದು ಆವರ್ತನಗಳು ಎಂಟು ಯುಗಗಳನ್ನು ಹೊಂದಿದೆ.

ಭೂಮಿ ಮತ್ತು ಮನುಷ್ಯ

ಭೂಮಿಯ ಅಕ್ಷಭ್ರಮಣದ ಆವರ್ತನದ ಬಗ್ಗೆ ಮತ್ತೊಮ್ಮೆ ದೃಷ್ಟಿಹರಿಸೋಣ - 25,920 ರನ್ನು 60 ರಿಂದ (ಒಬ್ಬ ಆರೋಗ್ಯವಂತ ವ್ಯಕ್ತಿಯ ಹೃದಯದ ಬಡಿತವು ಪ್ರತಿ ನಿಮಿಷಕ್ಕೆ 60) ಭಾಗಿಸಿದಾಗ ಸಿಗುವ ಉತ್ತರ 432. 432 ಎಂಬ ಸಂಖ್ಯೆ ಅನೇಕ ಸಂಸ್ಕೃತಿಗಳಲ್ಲಿ ಕಂಡುಬರುತ್ತದೆ - ನಾರ್ಸ್ ಸಂಸ್ಕೃತಿ, ಪುರಾತನ ಯಹೂದಿ ಸಂಸ್ಕೃತಿ, ಈಜಿಪ್ಟಿನ ಸಂಸ್ಕೃತಿ, ಮೆಸೊಪಟ್ಯಾಮಿಯಾನ್ ಸಂಸ್ಕೃತಿ ಮತ್ತು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕೂಡ ಈ ಸಂಖ್ಯೆ ಕಂಡುಬರುತ್ತದೆ. ಏತಕ್ಕಾಗಿ 432? ನೀವು ಉತ್ತಮ ಆರೋಗ್ಯವನ್ನು ಹೊಂದಿದ್ದು,  ಒಳ್ಳೆಯ ಸ್ಥಿತಿಯಲ್ಲಿದ್ದರೆ, ನಿಮ್ಮ ಹೃದಯವು ಪ್ರತಿ ನಿಮಿಷಕ್ಕೆ(ಮಿನಿಟ್) 60 ಬಾರಿ ಬಡಿಯುತ್ತದೆ. ಅಂದರೆ ಪ್ರತಿ ಗಂಟೆಗೆ ಇದು 3600 ಬಡಿತವಾಗುತ್ತದೆ; ಪ್ರತಿದಿನಕ್ಕಿದು 3600 x 24, 86,400 ಬಡಿತಕ್ಕೆ ಸಮವಾಗುತ್ತದೆ. ನೀವು 864 ರನ್ನು 2 ರಿಂದ ಭಾಗಿಸಿದಾಗ, ನಿಮಗೆ ಮತ್ತೆ ಸಿಗುವ ಉತ್ತರ 432.

ನೀವು ಸಮಯವನ್ನು ಸವಾರಿ ಮಾಡುತ್ತಿದ್ದಲ್ಲಿ ಮಾತ್ರ ಅಸಾಮಾನ್ಯವಾಗಿ ಜೀವಿಸುತ್ತೀರಿ. ಮನಷ್ಯರು ಮತ್ತವರ ಮೆದುಳನ್ನು ಅದ್ಭುತವಾಗಿ ಜೀವಿಸುವ ಸಲುವಾಗಿಯೇ ರಚಿಸಲಾಗಿರುವುದು.

ನೀವು ಆರೋಗ್ಯ ಅತ್ಯುತ್ತಮವಾಗಿದ್ದರೆ, ನಿಮ್ಮ ಉಸಿರಾಟದ ಗತಿ ಪ್ರತಿ ನಿಮಿಷಕ್ಕೆ(ಮಿನಿಟ್) 15 ರಷ್ಟಿರುತ್ತದೆ.  ನೀವು ಸಾಕಷ್ಟು ಸಾಧನೆಯನ್ನು ಮಾಡಿದ್ದರೆ, ಅದು ಬರೀ 12 ಆಗಿರಬಹುದು. ನಿಮಿಷಕ್ಕೆ 15 ಉಸಿರುಗಳೆಂದರೆ, ಗಂಟೆಗೆ 900 ಉಸಿರು ಮತ್ತು ದಿನಕ್ಕೆ 21,600 ಉಸಿರುಗಳಾದವು. 216 ರನ್ನು 2 ರಿಂದ ಗುಣಿಸಿದಾಗ ಮತ್ತೆ 432 ಸಿಗುತ್ತದೆ. ನೀವು ಭೂಮಿಯ ಸುತ್ತಳತೆಯನ್ನು ಪರಿಗಣಿಸಿದಾಗ, ನಾಟಿಕಲ್ ಮೈಲ್ (ಸಮುದ್ರಯಾನದಲ್ಲಿ ಬಳಸುವಂತದ್ದು) ಎಂದು ಕರೆಯಲ್ಪಡುವ ಅಳತೆಯ ಮಾನದಂಡವಿದೆ;  ಅದು ಈ ಭೂಗ್ರಹ ಹೇಗಿದೆ ಎಂಬುದರ ಮೇಲೆ ಆಧರಿಸಿದ ನಿಜವಾದ ಮೈಲಿ ಆಗಿದೆ. ಲೆಕ್ಕಾಚಾರ ಹಾಗೂ ಗಣನೆ ಮಾಡಲು ಸುಲಭವಾಗಲೆಂಬ ಕಾರಣಕ್ಕಾಗಿ ಅಳತೆಯ ಇತರ ಮಾನದಂಡಗಳನ್ನು ರಚಿಸಲಾಯಿತು.

ಒಂದು ವೃತ್ತದಲ್ಲಿ 360° ಇವೆ ಎಂದು ನಿಮಗೆ ತಿಳಿದಿದೆ. ಅಂತೆಯೇ, ಭೂಮಿಗೂ 360° ಇದೆ, ಮತ್ತು ಪ್ರತಿ ಡಿಗ್ರಿಯನ್ನು 60 ನಿಮಿಷಗಳಾಗಿ ವಿಭಜಿಸಲಾಗಿದೆ. ಇದರ ಒಂದು ನಿಮಿಷ(ಮಿನಿಟ್) ಒಂದು ನಾಟಿಕಲ್ ಮೈಲ್‌ಗೆ ಸಮ. ಭೂಮಧ್ಯರೇಖೆಯಲ್ಲಿ ಭೂಮಿಯ ಸುತ್ತಳತೆ 21,600 ನಾಟಿಕಲ್ ಮೈಲ್‌ಗಳಷ್ಟಿದೆ ಎಂದು ಇದರರ್ಥ. ಇದು ನೀವು ಪ್ರತಿದಿನದ ತೆಗೆದುಕೊಳ್ಳುವ ಉಸಿರುಗಳ ಸಂಖ್ಯೆಯೂ ಕೂಡ ಆಗಿದೆ! ಹಾಗಿದ್ದರೆ ಭೂಮಿ ಸಮಯಕ್ಕೆ ಸರಿಯಾಗಿ ತಿರುಗುತ್ತಿದೆ ಮತ್ತು ನೀವು ಚೆನ್ನಾಗಿದ್ದೀರಿ ಎಂದಾಯಿತು. ಒಂದು ವೇಳೆ ಭೂಮಿ ಸಮಯಕ್ಕೆ ಸರಿಯಾಗಿ ತಿರುಗದೇ ಹೋಗಿದ್ದರೆ, ಅದು ನಮಗೆ ಪೂರಕವಾಗಿರುತ್ತಿರಲಿಲ್ಲ. ಅಂತೆಯೇ, ನೀವು ಭೂಮಿಯೊಂದಿಗೆ ಹೊಂದಿಕೊಂಡಿಲ್ಲದಿದ್ದರೂ, ಅದು ನಿಮಗೆ ಒಳ್ಳೆಯದಲ್ಲ.

ಇದೆಲ್ಲದರಿಂದ ನಿಮಗೆ ತಿಳಿಯಬಯಸುವುದೇನೆಂದರೆ, ಕಾಲವೆನ್ನುವುದು ನಾವು ಕಂಡುಹಿಡಿದಂತಹ ಒಂದು ಪರಿಕಲ್ಪನೆಯಲ್ಲ ಎಂದು - ಕಾಲ ನಮ್ಮ ಜೀವವ್ಯವಸ್ಥೆಯಲ್ಲಿ, ನಮ್ಮ ರಚನೆಯ ರೀತಿಯಲ್ಲಿ ಆಳವಾಗಿ ಬೇರೂರಿದೆ. ಮಹಾಭಾರತದಲ್ಲಿ, ಯುಗಗಳು ಮತ್ತವುಗಳ ಕಾರ್ಯವೈಖರಿಯ ಬಗ್ಗೆ ಬಹಳಷ್ಟನ್ನು ಹೇಳಲಾಗಿದೆ. ಮನುಷ್ಯ ಜೀವನದ ಮೇಲಿರುವ ಕಾಲದ ಪ್ರಭಾವದ ಬಗ್ಗೆ ನೀವು ಬೇರೆ ದೃಷ್ಟಿಕೋನದಿಂದ ನೋಡಬೇಕು. ಇದು ಯಾರೋ ಕಲ್ಪಿಸಿಕೊಂಡಿರುವಂತದ್ದಲ್ಲ - ಇದೊಂದು ಅದ್ಭುತವಾದ ಹಾಗೂ ಆಳವಾದ ವಿಜ್ಞಾನ. ಯೋಗ ಶಾಸ್ತ್ರವು ಇದರೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ. ನಾವಿದರ ಬಗ್ಗೆ ಸಿದ್ಧಾಂತಗಳನ್ನು ಪ್ರತಿಪಾದಿಸುವುದಿಲ್ಲವಷ್ಟೆ.  ಕೇವಲ ಅಭ್ಯಾಸದಿಂದ, ಶರೀರವನ್ನು ಸೃಷ್ಟಿಯ ಸಮಯ ಮತ್ತು ಆಕಾಶಕ್ಕೆ ಹೊಂದಿಕೊಳ್ಳುವಂತೆ ಮಾಡಲು ನಾವಲ್ಲಿ ಪ್ರಯತ್ನಿಸುತ್ತೇವೆ. ಏಕೆಂದರೆ ಅವುಗಳೊಂದಿಗೆ ಹೊಂದಿಕೊಳ್ಳದೆ ನೀವು ಬದುಕಿನಲ್ಲಿ ಬಹಳ ದೂರ ಕ್ರಮಿಸಲು ಸಾಧ್ಯವಿಲ್ಲ. ನೀವು ಕಾಲದ ಜೊತೆ ಸಾಗದಿದ್ದರೆ, ನೀವು ಸಾಧಾರಣ ಜೀವನ - ಬಹುಶಃ ನರಳಾಟದ ಜೀವನವನ್ನು ನಡೆಸುತ್ತೀರಿ. ನೀವು ಸಮಯವನ್ನು ಸವಾರಿ ಮಾಡುತ್ತಿದ್ದಲ್ಲಿ ಮಾತ್ರ ಅಸಾಮಾನ್ಯವಾಗಿ ಜೀವಿಸುತ್ತೀರಿ. ಮನಷ್ಯರು ಮತ್ತವರ ಮೆದುಳನ್ನು ಅದ್ಭುತವಾಗಿ ಜೀವಿಸುವ ಸಲುವಾಗಿಯೇ ರಚಿಸಲಾಗಿರುವುದು.

ಬೆಳಕಿನ ಕಿರಣಗಳ ವೇಗದ ಬಗ್ಗೆ ಸೂರ್ಯ ಸಿದ್ಧಾಂತದಲ್ಲಿರುವ ಸಂಖ್ಯೆಗಳು (ಸಂಕ್ಷಿಪ್ತವಾಗಿ):

0.5 ನಿಮಿಷದಲ್ಲಿ 2202 ಯೋಜನಗಳಿವೆ.
1 ಯೋಜನ = 9 ಮೈಲಿಗಳು
1 ನಿಮಿಷ = 16/75 ಸೆಕೆಂಡ್‌ಗಳು
0.5 ನಿಮಿಷದಲ್ಲಿ 2202 ಯೋಜನಗಳು =  0.5 x (16/75) ಸೆಕೆಂಡ್‌ಗಳಲ್ಲಿ 2202 x 9 ಮೈಲಿಗಳು
0.10666 ಸೆಕೆಂಡ್‌ಗಳಲ್ಲಿ = 19,818 ಮೈಲಿಗಳು
= 185,793 ಮೈಲಿಗಳು / ಸೆಕೆಂಡ್

1 ಮೈಲಿ = 1.6 ಕಿಮಿ
185,793 ಮೈಲಿ / ಸೆಕೆಂಡ್ = 297,269 ಕಿಮಿ / ಸೆಕೆಂಡ್
ಬೆಳಕಿನ ವೇಗ (ಸೂರ್ಯ ಸಿದ್ಧಾಂತ) = 297,269 ಕಿಮಿ / ಸೆಕೆಂಡ್
ಬೆಳಕಿನ ವೇಗ (ಆಧುನಿಕ ಭೌತಶಾಸ್ತ್ರ) = 299,792 ಕಿಮಿ / ಸೆಕೆಂಡ್

 

*ನಾಲ್ಕು ಯುಗಗಳಿವೆ: ಕಲಿ ಯುಗ, ದ್ವಾಪರ ಯುಗ, ತ್ರೇತಾ ಯುಗ ಮತ್ತು ಕೃತ ಯುಗ. 25920-ವರ್ಷದ ಚಕ್ರದಲ್ಲಿ ಇವೆಲ್ಲವೂ ಎರಡು ಬಾರಿ ಸಂಭವಿಸುತ್ತವೆ. 

ಯುಗಗಳು ಮತ್ತು 108 ರ ಮಹತ್ವ, ಹಾಗೂ ಇನ್ನೂ ಅನೇಕ ಅತೀಂದ್ರಿಯ ವಿಷಯಗಳ ಬಗ್ಗೆ ತಿಳಿಯಲು “Yugas – The Tides of Time” ಡಿವಿಡಿಯನ್ನು Isha Downloads ನಲ್ಲಿ ಖರೀದಿಸಿ ಡೌನ್‌ಲೋಡ್ ಮಾಡಿಕೊಳ್ಳಿ.

Yugas – The Tides of Time

ಸಂಪಾದಕರ ಟಿಪ್ಪಣಿ: ಈ ಲೇಖನದ ಮೂಲ ಆವೃತ್ತಿ ಡಿಸೆಂಬರ್ 2014ರ ಈಶ ಫಾರೆಸ್ಟ್ ಫ್ಲವರ್‌ ಮ್ಯಾಗ್‌ಸೀನ್‌ನಲ್ಲಿ ಪ್ರಕಟವಾಗಿರುತ್ತದೆ. PDF ಕಾಪಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ December 2014 issue of Forest Flower. ಪ್ರಿನ್‌ಟೆಡ್ ಕಾಪಿಗಳು ಸಹ ಲಭ್ಯವಿವೆ  Print subscriptions .