ಕುಂಡಲಿನಿ ಯೋಗ: ಪ್ರಯೋಜನಕಾರಿಯೋ ಅಥವಾ ಅಪಾಯಕಾರಿಯೋ?
ಸದ್ಗುರುಗಳು ಕುಂಡಲಿನಿ ಯೋಗದ ಲಾಭಗಳು ಮತ್ತು ಅಪಾಯಗಳ ಬಗ್ಗೆ ವಿವರಿಸುತ್ತಾ ಈ ಶಕ್ತಿಯುತ ಪ್ರಕ್ರಿಯೆಯನ್ನು ಅತ್ಯಂತ ಜವಾಬ್ದಾರಿ ಮತ್ತು ಪವಿತ್ರ ಭಾವನೆಯಿಂದ ಕಾಣುವುದರ ಮಹತ್ವವನ್ನು ತಿಳಿಸುತ್ತಾರೆ.
ಸದ್ಗುರು: ಯೋಗ ಪರಂಪರೆಯಲ್ಲಿ ಸರ್ಪವು ನಿಮ್ಮೊಳಗಿನ ಅವ್ಯಕ್ತ ಶಕ್ತಿಯಾದ ಕುಂಡಲಿನಿಯ ಸಂಕೇತವಾಗಿದೆ. ಕುಂಡಲಿನಿಯ ಗುಣವೆಂದರೆ, ಅದು ನಿಶ್ಚಲವಾಗಿದ್ದಾಗ ಅದು ಇದೆಯೋ ಇಲ್ಲವೋ ಎಂಬುದು ನಿಮಗೆ ಗೊತ್ತಾಗುವುದಿಲ್ಲ. ಅದು ಚಲಿಸಲು ಪ್ರಾರಂಭಿಸಿದಾಗ, ನಿಮ್ಮೊಳಗೆ ಅಷ್ಟೊಂದು ಶಕ್ತಿಯಿರುವ ಸಂಗತಿ ನಿಮ್ಮ ಅರಿವಿಗೆ ಬರುತ್ತದೆ. ಅದು ಚಲಿಸುವವರೆಗೆ ಬಹುತೇಕ ಇಲ್ಲವೇನೋ ಎಂಬಂತಿರುತ್ತದೆ. ಈ ಕಾರಣದಿಂದಲೇ, ಕುಂಡಲಿನಿಯನ್ನು ಸರ್ಪದಿಂದ ಸಂಕೇತಿಸಲಾಗುತ್ತದೆ. ಏಕೆಂದರೆ, ಸುರುಳಿ ಸುತ್ತಿಕೊಂಡು ಮಲಗಿರುವ ಹಾವನ್ನು ಅದು ಚಲಿಸದ ವಿನಃ ಗುರುತಿಸುವುದು ಕಷ್ಟಕರ. ಹಾಗೆಯೇ, ಸುರುಳಿ ಸುತ್ತಿಕೊಂಡು ಸುಪ್ತವಾಗಿರುವ ಶಕ್ತಿಯನ್ನು, ಅದು ಚಲಿಸದ ವಿನಃ ಗುರುತಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಕುಂಡಲಿನಿಯು ಸಕ್ರಿಯವಾದಾಗ, ನೀವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಹ ಪವಾಡ ಸದೃಶ ಸಂಗತಿಗಳು ನಿಮ್ಮೊಳಗೆ ಆಗಲು ಪ್ರಾರಂಭವಾಗುವುದು. ಸಂಪೂರ್ಣವಾಗಿ ಹೊಸ ಸ್ತರದ ಶಕ್ತಿ ಅನಾವರಣಗೊಂಡು, ನಿಮ್ಮ ಶರೀರ ಮತ್ತು ಉಳಿದೆಲ್ಲವೂ ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸುವುದು.
ಕುಂಡಲಿನಿ ಮತ್ತು ಗ್ರಹಣಸಾಮರ್ಥ್ಯ
ಚೈತನ್ಯ ಶಕ್ತಿಯ ಉನ್ನತ ಸ್ಥಿತಿಗಳು ಎಂದರೆ ಗ್ರಹಣಶಕ್ತಿಯ ಉನ್ನತ ಸ್ಥಿತಿಗಳೂ ಆಗಿವೆ. ನಿಮ್ಮ ಗ್ರಹಿಕೆಯ ಸಾಮರ್ಥ್ಯವನ್ನು ಉತ್ತಮಗೊಳಿಸುವುದೇ ಇಡೀ ಯೋಗ ವಿಜ್ಞಾನದ ಗುರಿಯಾಗಿದೆ. ಆಧ್ಯಾತ್ಮಿಕ ಪ್ರಕ್ರಿಯೆಯೆಂದರೆ ಅದೇ – ನಿಮ್ಮ ಗ್ರಹಿಕೆಯನ್ನು ಉತ್ತಮಪಡಿಸುವುದು, ಏಕೆಂದರೆ ನೀವು ಏನನ್ನು ಗ್ರಹಿಸುತ್ತೀರೋ ಅದನ್ನು ಮಾತ್ರವೇ ತಿಳಿಯುತ್ತೀರಿ. ಈ ಕಾರಣಕ್ಕಾಗಿಯೇ ಶಿವ ಮತ್ತು ಸರ್ಪದ ಸಾಂಕೇತಿಕತೆ. ಅದು ಅವನ ಶಕ್ತಿಗಳು ಅತ್ಯುನ್ನತ ಸ್ಥಿತಿಯನ್ನು ತಲುಪಿರುವುದನ್ನು ಸಂಕೇತಿಸುತ್ತದೆ. ಅವನ ಶಕ್ತಿಗಳು ತಲೆಯ ಮೇಲ್ಭಾಗಕ್ಕೆ ತಲುಪಿದೆ ಮತ್ತು ಅವನ ಮೂರನೆಯ ಕಣ್ಣು ತೆರೆದಿದೆ.
ಕುಂಡಲಿನಿ ಮತ್ತು ಮೂರನೆಯ ಕಣ್ಣು
ಮೂರನೆಯ ಕಣ್ಣು ಎಂದರೆ, ಯಾರದೋ ಹಣೆ ಬಿರುಕು ಬಿಟ್ಟು ಏನೋ ಒಂದು ಹೊರಗೆ ಬಂದಿದೆ ಎಂದರ್ಥವಲ್ಲ. ಗ್ರಹಿಕೆಯ ಇನ್ನೊಂದು ಆಯಾಮ ತೆರೆದುಕೊಂಡಿದೆ ಎನ್ನುವುದು ಅದರ ಅರ್ಥ. ನಮ್ಮ ಎರಡು ಕಣ್ಣುಗಳು ಭೌತಿಕವಾದುದನ್ನು ಮಾತ್ರ ಕಾಣಬಲ್ಲವು. ನಾನು ಕಣ್ಣುಗಳನ್ನು ನನ್ನ ಹಸ್ತಗಳಿಂದ ಮುಚ್ಚಿದರೆ, ಅವುಗಳು ಅದರಾಚೆಗೆ ನೋಡಲಾಗುವುದಿಲ್ಲ. ಅವು ಅಷ್ಟೊಂದು ಸೀಮಿತ ಸಾಮರ್ಥ್ಯದ್ದಾಗಿವೆ. ಮೂರನೆಯ ಕಣ್ಣು ತೆರೆದರೆ, ಜೀವನವನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕಾಣುವಂತಹ ಆಂತರಿಕ ದೃಷ್ಟಿಯುಳ್ಳ ಗ್ರಹಿಕೆಯ ಮತ್ತೊಂದು ಆಯಾಮ ತೆರೆದು, ಗ್ರಹಿಸಬಹುದಾದ ಎಲ್ಲವನ್ನೂ ಗ್ರಹಿಸಲು ಸಾಧ್ಯವಾಗುತ್ತದೆ.
ಕುಂಡಲಿನಿ ಯೋಗ: ಮೊದಲು ಸಿದ್ಧತೆ!
ಇತ್ತೀಚಿನ ದಿನಗಳಲ್ಲಿ, ಅನೇಕ ಪುಸ್ತಕಗಳು ಮತ್ತು ಯೋಗ ಕೇಂದ್ರಗಳು ಕುಂಡಲಿನಿ ಯೋಗ ಮತ್ತು ಅದರ ಲಾಭಗಳ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಪ್ರಚಾರ ಮಾಡುತ್ತಿವೆ. “ಕುಂಡಲಿನಿ” ಎಂಬ ಪದವನ್ನು ಉಚ್ಛರಿಸಲೂ ಸಹ ನಾವು ಒಂದು ಪವಿತ್ರ ಭಾವನೆಯನ್ನು ತಂದುಕೊಂಡ ನಂತರವೇ ಉಚ್ಛರಿಸುತ್ತೇವೆ. ಏಕೆಂದರೆ ಅದು ಅಷ್ಟೊಂದು ಮಹತ್ತಾದ ಸಂಗತಿಯಾಗಿದೆ. ಕುಂಡಲಿನಿಯನ್ನು ಪ್ರಚೋದಿಸಬೇಕಾದರೆ, ಮೊದಲು ಶರೀರ, ಮನಸ್ಸು ಮತ್ತು ಭಾವನಾತ್ಮಕ ಸ್ತರಗಳಲ್ಲಿ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಏಕೆಂದರೆ, ಹೆಚ್ಚುವರಿ ಧಾರಣ ಸಾಮರ್ಥ್ಯವಿಲ್ಲದ ಶರೀರಕ್ಕೆ ಶಕ್ತಿಯನ್ನು ತುಂಬಲು ಪ್ರಯತ್ನಿಸಿದರೆ, ಶರೀರಕ್ಕೆ ಹಾನಿಯಾಗುತ್ತದೆ. ಸರಿಯಾದ ಮಾರ್ಗದರ್ಶನ ಮತ್ತು ಸಹಾಯವಿಲ್ಲದೆ ಕುಂಡಲಿನಿ ಯೋಗವನ್ನು ಮಾಡಿ, ತಮ್ಮ ಮಾನಸಿಕ ಸಮತೋಲನ ಮತ್ತು ದೈಹಿಕ ಸಾಮರ್ಥ್ಯಗಳನ್ನು ಕಳೆದುಕೊಂಡ ಹಲವಾರು ಜನರು ನನ್ನ ಬಳಿಗೆ ಬಂದಿದ್ದಾರೆ. ಸೂಕ್ತವಾದ ಪೋಷಕ ಪರಿಸರವಿಲ್ಲದಿದ್ದರೆ, ಕುಂಡಲಿನಿಯನ್ನು ಪ್ರಚೋದಿಸುವುದು ಬೇಜವಾಬ್ದಾರಿತನ ಮತ್ತು ಅಪಾಯಕಾರಿ.
ಕುಂಡಲಿನಿ ಯೋಗ ಅತ್ಯಂತ ಅಪಾಯಕಾರಿ ಪದ್ಧತಿ
ಸಾರಭೂತವಾಗಿ, ಕುಂಡಲಿನಿ ಯೋಗವು ಅತ್ಯಂತ ಅಪಾಯಕಾರಿ ಪದ್ಧತಿಯಾಗಿದೆ. ಅದು ಅತ್ಯಂತ ಶಕ್ತಿಯುತವಾಗಿರುವುದರಿಂದಲೇ, ನಾನು ಅದನ್ನು ಅಪಾಯಕಾರಿ ಎಂದು ಹೇಳುತ್ತಿರುವುದು. ಶಕ್ತಿಯುತವಾದುದನ್ನು ಅಸಮರ್ಪಕವಾಗಿ ನಿರ್ವಹಿಸಿದರೆ ಅದು ಯಾವಾಗಲೂ ಅತ್ಯಂತ ಅಪಾಯಕಾರಿಯಾಗುತ್ತದೆ. ಉದಾಹರಣೆಗೆ, ವಿದ್ಯುತ್ ಶಕ್ತಿಯನ್ನು ಅನೇಕ ರೀತಿಗಳಲ್ಲಿ ಉತ್ಪಾದಿಸಲಾಗುತ್ತದೆ. ಅವುಗಳಲ್ಲಿ ನ್ಯೂಕ್ಲಿಯರ್ ರಿಯಾಕ್ಟರ್ಗಳಿಂದ (nuclear reactors) ವಿದ್ಯುತ್ ಅನ್ನು ಉತ್ಪಾದಿಸುವ ರೀತಿಯೂ ಒಂದು. ಅದು ನಮಗೆ ಈವರೆಗೆ ತಿಳಿದಿರುವ ವಿದ್ಯುತ್ ಉತ್ಪಾದನಾ ತಂತ್ರಜ್ಞಾನಗಳಲ್ಲಿ ಅತ್ಯಂತ ಪರಿಣಾಮಕಾರಿಯಾದುದು. ಆದರೆ ಅದು ಅತ್ಯಂತ ಅಪಾಯಕಾರಿಯೂ ಹೌದು, ಅಲ್ಲವೇ? ಎಲ್ಲವೂ ಸರಿಯಾಗಿದ್ದರೆ, ಅದು ಭೂಮಿಯ ಮೇಲೆ ಶಕ್ತಿಯನ್ನು ಉತ್ಪಾದಿಸುವ ಅತ್ಯಂತ ಸುಲಭವಾದ ಮತ್ತು ಉತ್ತಮವಾದ ವಿಧಾನವಾಗಿದೆ. ಅದರಲ್ಲಿ ತಪ್ಪಾದರೆ, ನೀವು ಸರಿಪಡಿಸಲಾಗದಂತಹ ಸಮಸ್ಯೆಗಳು ಉಂಟಾಗುತ್ತವೆ. ಕುಂಡಲಿನಿ ಯೋಗದ ವಿಷಯವೂ ಹಾಗೆಯೇ. ಅದು ಅತ್ಯಂತ ಶಕ್ತಿಯುತ ಮತ್ತು ಅತ್ಯಂತ ಅಪಾಯಕಾರಿ. ಸಾಕಷ್ಟು ಸಿದ್ಧತೆಯಿಲ್ಲದೆ, ತಜ್ಞರ ನಿರಂತರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಿಲ್ಲದೆ, ಯಾರೂ ಅದನ್ನು ಪ್ರಯತ್ನಿಸಬಾರದು. ಆದರೆ, ಸಮಸ್ಯೆಯೆಂದರೆ ಅದರ ಬಗ್ಗೆ ಪುಸ್ತಕಗಳನ್ನು ಬರೆಯಲಾಗಿದೆ ಮತ್ತು ಎಲ್ಲರೂ ಅತ್ಯುನ್ನತ ಯೋಗವನ್ನು ಮಾತ್ರ ಮಾಡಲು ಸಿದ್ಧರಾಗಿದ್ದಾರೆ. ‘ಅ’ ಇಂದ ಪ್ರಾರಂಭಿಸಲು ಯಾರಿಗೂ ಇಷ್ಟವಿಲ್ಲ, ಎಲ್ಲರಿಗೂ ‘ಳ’ ವೇಬೇಕು. ಈ ಧೋರಣೆಯೇ ಅಪಾಯಕಾರಿ.
ಶಾಸ್ತ್ರೀಯ ಯೋಗ ಸಂಪ್ರದಾಯಗಳಲ್ಲಿ, ನಾವು ಕೌಟುಂಬಿಕ ಪರಿಸ್ಥಿತಿಗಳಲ್ಲಿ ಬದುಕುವ ಜನರಿಗೆ ನಿರ್ದಿಷ್ಟ ರೀತಿಯ ಯೋಗವನ್ನು ಹೇಳಿಕೊಡುತ್ತೇವೆ. ಮತ್ತು ಸಂನ್ಯಾಸಿಗಳಿಗೆ ಬೇರೆ ರೀತಿಯ ಯೋಗವನ್ನು ಹೇಳಿಕೊಡಲಾಗುತ್ತದೆ. ಕೌಟುಂಬಿಕ ಪರಿಸ್ಥಿತಿಗಳಲ್ಲಿರುವವರಿಗೆ ಸಂನ್ಯಾಸಿಗಳಿಗೆ ಇರುವ ಪದ್ಧತಿಗಳನ್ನು ಬೋಧಿಸುವುದಿಲ್ಲ. ಅದು ಅತ್ಯಂತ ಶಕ್ತಿಯುತ ಪದ್ಧತಿಯಾದರೂ ಅದು ನಿರ್ದಿಷ್ಟ ಆಯಾಮದ ಶಿಸ್ತು ಮತ್ತು ಏಕಾಗ್ರತೆಯನ್ನು ಬೇಡುತ್ತದೆ. ಅದಕ್ಕೆ ನಿಮ್ಮ ಎಂದಿನ ಜೀವನ ಪದ್ಧತಿ ಪೂರಕವಾಗಿರುವುದಿಲ್ಲ. ನೀವು ಆ ರೀತಿಯ ಯೋಗವನ್ನು ಮಾಡಿದರೆ, ಅದು ನಿಮ್ಮ ಬಾಹ್ಯ ಜೀವನವನ್ನು ತಕ್ಷಣ ಕಳಚಿಹಾಕುತ್ತದೆ.
ಇದರರ್ಥ ಕುಂಡಲಿನಿ ಯೋಗದಲ್ಲಿ ಏನೋ ದೋಷವಿದೆ ಎಂದಲ್ಲ. ಅದೊಂದು ಅದ್ಭುತವಾದ ಪ್ರಕ್ರಿಯೆ. ಆದರೆ ಅದನ್ನು ಸರಿಯಾಗಿ ಮಾಡಬೇಕು, ಏಕೆಂದರೆ ಶಕ್ತಿಗೆ ತನ್ನದೇ ಆದ ವಿವೇಚನೆಯಿಲ್ಲ. ನೀವು ಅದರಿಂದ ನಿಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು ಅಥವಾ ಅದರಿಂದ ನಿಮ್ಮ ಜೀವನವನ್ನು ನಾಶ ಪಡಿಸಿಕೊಳ್ಳಬಹುದು. ವಿದ್ಯುತ್ ಶಕ್ತಿ ನಮ್ಮ ಜೀವನವನ್ನು ಸುಗಮಗೊಳಿಸುತ್ತಿದೆಯೆಂಬುದು ಸತ್ಯ. ಹಾಗೆಂದು ನೀವು ನಿಮ್ಮ ಬೆರಳನ್ನು ಅದಕ್ಕೆ ತಾಗಿಸಿದರೆ, ಏನಾಗುತ್ತದೆಂದು ನಿಮಗೆ ತಿಳಿದಿದೆ! ಶಕ್ತಿಗೆ ವಿವೇಚನೆಯಿಲ್ಲ. ನೀವು ಅದನ್ನು ಹೇಗೆ ಬಳಸಿದರೆ ಹಾಗೆ. ಕುಂಡಲಿನಿಯೂ ಸಹ ಹಾಗೆಯೇ. ನೀವು ಈಗಲೂ ಅದನ್ನು ಬಳಸುತ್ತಿದ್ದೀರಿ, ಆದರೆ ಬಹಳ ಸಣ್ಣ ಪ್ರಮಾಣದಲ್ಲಿ. ನೀವದನ್ನು ಹೆಚ್ಚಿಸಿದರೆ, ಅಸ್ತಿತ್ವದ ಮಿತಿಗಳನ್ನು ಮೀರಿಹೋಗಬಹುದು.
ಕುಂಡಲಿನಿ ಯೋಗ: ಮಿತಿಗಳನ್ನು ಕೆಡಹುವ ವಿಜ್ಞಾನ
ಎಲ್ಲಾ ರೀತಿಯ ಯೋಗದ ಗುರಿಯೂ ಅದೇ ಆಗಿದೆ. ಆದರೆ ಕುಂಡಲಿನಿ ಯೋಗವು ನಿರ್ದಿಷ್ಟವಾಗಿ ಅದರ ಕುರಿತಾದದ್ದಾಗಿದೆ. ವಾಸ್ತವವಾಗಿ, ಜೀವನದ ಗುರಿಯೂ ಅದೇ. ಜನರು, ಯಾವುದೋ ಒಂದು ರೀತಿಯಲ್ಲಿ, ತಮ್ಮ ಜೀವನವನ್ನು ಈಗ ಅನುಭವಿಸುತ್ತಿರುವುದಕ್ಕಿಂತ ಹೆಚ್ಚು ತೀವ್ರವಾಗಿ ಅನುಭವಿಸಬೇಕೆಂದು ಬಯಸುತ್ತಿರುತ್ತಾರೆ. ಒಬ್ಬರು ಕುಣಿಯಬೇಕೆಂದು ಬಯಸಿದರೆ, ಇನ್ನೊಬ್ಬರು ಮದ್ಯಪಾನ ಮಾಡಬೇಕೆಂದು ಬಯಸುತ್ತಾರೆ, ಮತ್ತೊಬ್ಬರು ಪ್ರಾರ್ಥಿಸಲು ಇಚ್ಛಿಸುತ್ತಾರೆ – ಅವರು ಇದನ್ನೆಲ್ಲಾ ಏಕೆ ಮಾಡುತ್ತಾರೆ? ಅವರು ಜೀವನವನ್ನು ಇನ್ನಷ್ಟು ತೀವ್ರವಾಗಿ ಅನುಭವಿಸಲು ಬಯಸುತ್ತಿದ್ದಾರೆ. ಎಲ್ಲರೂ ಕುಂಡಲಿನಿಯನ್ನು ಪ್ರಚೋದಿಸಲು ಬಯಸುತ್ತಿದ್ದಾರೆ, ಆದರೆ ಅವರು ಅದನ್ನು ಅಡ್ಡಾದಿಡ್ಡಿಯಾಗಿ ಮಾಡುತ್ತಿದ್ದಾರೆ. ನಾವು ಅದನ್ನು ವೈಜ್ಞಾನಿಕವಾಗಿ ಸರಿಯಾದ ರೀತಿಯಲ್ಲಿ ಮಾಡಿದರೆ, ಅದನ್ನು ’ಯೋಗ’ ಎಂದು ಕರೆಯುತ್ತೇವೆ.
ಸಂಪಾದಕರ ಟಿಪ್ಪಣಿ: “ಮಿಸ್ಟಿಕ್ಸ್ ಮ್ಯೂಸಿಂಗ್ಸ್’ ಪುಸ್ತಕ ತಂತ್ರ, ಚಕ್ರಗಳು ಹಾಗು ಕುಂಡಲಿನಿಯ ಬಗ್ಗೆ ಸದ್ಗುರುಗಳ ಹೆಚ್ಚಿನ ಒಳನೋಟಗಳನ್ನು ಹೊಂದಿದೆ. ಉಚಿತ ಮಾದರಿಯನ್ನು ಓದಿ ಅಥವಾ ಪುಸ್ತಕವನ್ನು ಖರೀದಿಸಿ.