ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದಾಗ ನಿರೀಕ್ಷೆಗಳನ್ನಿಟ್ಟುಕೊಳ್ಳಬಹುದೇ?
ಆಧ್ಯಾತ್ಮದ ಫಥದಲ್ಲಿ ನಿರಾಶೆ ಹಾಗೂ ಸಿಲುಕಿಕೊಂಡಂತಹ ಭಾವವನ್ನು ಅನುಭವಿಸುತ್ತಿರುವ ಒಬ್ಬ ಅನ್ವೇಷಕನಿಗೆ ಸದ್ಗುರುಗಳು ಈ ಲೇಖನದಲ್ಲಿ ಪ್ರತಿಕ್ರಿಯಿಸುತ್ತಾರೆ.
ಆಧ್ಯಾತ್ಮದ ಪಥದಲ್ಲಿ ಸಾಗುವಾಗ ಗುರುತಿಸಲು ಸಾಧ್ಯವಾಗುವಂತಹ ಪ್ರಗತಿಯನ್ನು ಕಾಣಲಾಗದಿರುವುದರ ಕುರಿತು ಒಬ್ಬ ಅನ್ವೇಷಕ ತನ್ನ ನಿರಾಶೆಯನ್ನು ಇಲ್ಲಿ ವ್ಯಕ್ತಪಡಿಸುತ್ತಾನೆ. ಆಧ್ಯಾತ್ಮದ ಮಾರ್ಗದಲ್ಲಿ ತಾವು ತಲುಪಿದ ಮಟ್ಟದ ಬಗ್ಗೆ ಚಿಂತಿಸುತ್ತಿರುವವರಿಗೆ ಸದ್ಗುರುಗಳು ಚಿಂತೆ ಹಾಗೂ ನಿರೀಕ್ಷೆಗಳೆಲ್ಲವನ್ನೂ ಬದಿಗಿಟ್ಟು ಸುಮ್ಮನೆ ಸಾಧನೆಯನ್ನು ಮಾಡುತ್ತಾ ಹೋಗಿ ಎಂದು ಹೇಳುತ್ತಾರೆ.
ಪ್ರಶ್ನೆ: ನಾನು ಕಳೆದ ಒಂದೂವರೆ ವರ್ಷದಿಂದ ಯೋಗವನ್ನು ಮಾಡುತ್ತಿದ್ದೇನೆ. ನಾನು ಹೆಚ್ಚು ಕಾದಂತೆಲ್ಲ, ಅದು ನನ್ನನ್ನು ಅಷ್ಟೇ ಹೆಚ್ಚು ಕಂಗೆಡಿಸುತ್ತದೆ. ಆಧ್ಯಾತ್ಮದ ಪಥದಲ್ಲಿ ನಾನು ಎಲ್ಲಿದ್ದೇನೆ ಮತ್ತು ಯಾವ ಮಟ್ಟವನ್ನು ತಲುಪಿದ್ದೇನೆ ಎಂಬುದನ್ನು ನಾನು ಹೇಗೆ ತಿಳಿಯುವುದು?
ಸದ್ಗುರು: ಆಧ್ಯಾತ್ಮದಲ್ಲಿನ ಎಲ್ಲಾ ಹಂತಗಳೂ ತುಲನಾತ್ಮಕವಷ್ಟೆ. ಕೇವಲ ಒಂದು ವರ್ಷದ ಮುಂಚೆ ಯೋಗಭ್ಯಾಸವನ್ನು ಶುರುಮಾಡಿದವರಿಗಿಂತ ಒಂದು ಹೆಜ್ಜೆ ಮುಂದಿರಲು ನೀವು ಬಯಸುತ್ತೀರಾ? ಎಲ್ಲಿಯವರೆಗೆ ಈ ಬೇರೆ ಬೇರೆ ಹಂತಗಳ ಕಲ್ಪನೆ ನಿಮ್ಮ ತಲೆಯಲ್ಲಿರುತ್ತದೋ ಅಲ್ಲಿಯವರೆಗೆ ನಿಮ್ಮಲ್ಲಿ ಆಧ್ಯಾತ್ಮಿಕತೆ ಮೂಡುವುದಿಲ್ಲ. ನಿಮ್ಮ ಹತಾಶೆ ಸಾಕಷ್ಟು ಹೆಚ್ಚಾಗಿ, “ಈ ಯೋಗವೆಲ್ಲಾ ಸಾಕು, ಹೇಗಿದ್ದರೂ ಇದರಿಂದ ನನ್ನಲ್ಲಿ ಯಾವ ಬದಲಾವಣೆ ಆಗಿಲ್ಲ” ಎನ್ನುವ ಆಲೋಚನೆ ನಿಮ್ಮಲ್ಲಿ ಬಂದರೂ ಸಹ ನೀವು ಸುಮ್ಮನೆ ನಿಮ್ಮ ಯೋಗಭ್ಯಾಸಗಳನ್ನು ಮಾಡುತ್ತಾ ಹೋಗಿ. ಯೋಗದ ಸಂಪೂರ್ಣ ಪ್ರಕ್ರಿಯೆಯು ಯಾವ ರೀತಿಯಲ್ಲಿ ರಚನೆಯಾಗಿದೆಯೆಂದರೆ, ನೀವು ಜಾಗೃತವಾಗಿರದ ವಿನಃ ನಿಮಗದನ್ನು ಮಾಡಲು ಸಾಧ್ಯವಾಗುವುದಿಲ್ಲ. ನೀವು ಜಾಗೃತವಾಗಿದ್ದು, ಎಲ್ಲೋ ತಲುಪಿಬಿಡುವ ಆಸಕ್ತಿಯನ್ನು ಇಟ್ಟುಕೊಳ್ಳದೆ, ಯಾವುದಾದರೊಂದು ಸರಳ ಪ್ರಕ್ರಿಯೆಯನ್ನು ಮಾಡಿದ ದಿನದಂದು, ನಿಮ್ಮೊಳಗೆ ಏನೋ ಒಂದು ಸ್ಫೋಟಗೊಳ್ಳುತ್ತದೆ. ನೀವು ಎಲ್ಲಿಯವರೆಗೆ "ಆಧ್ಯಾತ್ಮದಲ್ಲಿ ನಾನು ಯಾವ ಮಟ್ಟದಲ್ಲಿದ್ದೇನೆ? ನಾನು ಮುಂದೆ ಹೋಗುತ್ತಿದ್ದೇನೆಯೇ?" ಎಂಬ ಆಲೋಚನೆಯಲ್ಲಿರುತ್ತೀರೋ ಅಲ್ಲಿಯವರೆಗೆ ನೀವು ಎಲ್ಲೂ ತಲುಪುವುದಿಲ್ಲ. ಕೇವಲ ಅಗ್ಗದ ಸ್ಫರ್ಧೆಯಲ್ಲಿರುತ್ತೀರಿ ಅಷ್ಟೆ. ಆದ್ದರಿಂದ ಈ ಬೇರೆ ಬೇರೆ ಹಂತಗಳ ಬಗ್ಗೆಯೆಲ್ಲಾ ಮರೆತು ಬಿಡಿ.
ಬಂಧನವೋ ಅಥವಾ ಬಂಧವಿಮುಕ್ತಿಯೋ?
ಯಾವುದರಲ್ಲೂ ಸಿಲುಕಿಕೊಳ್ಳದೆ ಸಂಪೂರ್ಣವಾಗಿ ಒಳಗೊಳ್ಳುವುದೇ ಯೋಗದ ಸಾರ. ನೀವು ಸುಮ್ಮನೆ ನಿಮ್ಮ ಬೆಳಗಿನ ಯೋಗಾಭ್ಯಾಸವನ್ನು ಮಾಡುತ್ತಾ ಹೋಗಿ. ಮತ್ತು ನಿಮಗೆ ಕಲಿಸಿಕೊಡಲಾದ ಇತರ ಅಂಶಗಳ ಅರಿವನ್ನು ದಿನಪೂರ್ತಿ ಇಟ್ಟುಕೊಳ್ಳಿ. ನೀವದನ್ನು ಯಾವ ರೀತಿಯಲ್ಲಿ ಮಾಡಬೇಕೆಂದರೆ, ನಿಮ್ಮ ಜೀವನದ ಪ್ರತಿಯೊಂದು ಅಂಶವೂ ಯೋಗವಾಗಬೇಕು. ಕೂರುವುದು, ನಿಲ್ಲುವುದು, ತಿನ್ನುವುದು, ಮಲಗುವುದು ಎಲ್ಲವೂ ಯೋಗವೆ. ಯೋಗವೆಂದರೆ ನಿಮ್ಮನ್ನು ನಿಮ್ಮ ಉನ್ನತ ಸ್ವಭಾವಕ್ಕೆ ತಲುಪಲು ಅವಕಾಶ ಮಾಡಿಕೊಡುವಂತಹ ಒಂದು ಪ್ರಕ್ರಿಯೆ. ನೀವು ನಿಮ್ಮ ದೇಹ, ಮನಸ್ಸು, ಭಾವನೆ ಮತ್ತು ಪ್ರಾಣಶಕ್ತಿಗಳನ್ನು ಜೀವನ ಚಕ್ರದಲ್ಲಿ ಬಂಧಿಯಾಗಿ ಅಸ್ತವ್ಯಸ್ತವಾಗಲು ಬಳಸಬಹುದು, ಇಲ್ಲವೇ ಅದೇ ಅಂಶಗಳನ್ನು ಬಳಸಿಕೊಂಡು ಬಂಧವಿಮುಕ್ತಿಯನ್ನು ಪಡೆಯಬಹುದು ಮತ್ತು ಇನ್ನೂ ಹೆಚ್ಚಿನ ವಿಸ್ಮಯ ಹಾಗೂ ಪರಮಾನಂದದ ಆಯಾಮಗಳನ್ನು ತಲುಪಬಹುದು. ಬಂಧನಕ್ಕೊಳಗಾಗಲು ಮತ್ತು ಬಂಧವಿಮುಕ್ತಿಗೊಳ್ಳಲು ಇರುವ ಸಾಧನಗಳು ಬೇರೆ ಬೇರೆಯೇನಲ್ಲ.
ನಿಮ್ಮ ದೇಹ, ಮನಸ್ಸು, ಭಾವನೆ ಮತ್ತು ಪ್ರಾಣಶಕ್ತಿಗಳೆಲ್ಲವೂ ಕೆಲಸ ಮಾಡುತ್ತಿವೆ, ಆದರೆ ಅವು ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತವೆ. ಕೆಲವರಲ್ಲಿ ದೇಹವು ಪ್ರಬಲವಾದ ಅಂಶವಾಗಿರಬಹುದು, ಕೆಲವರಲ್ಲಿ ಅವರ ಮನಸ್ಸು ಪ್ರಬಲವಾಗಿರಬಹುದು, ಇನ್ನು ಕೆಲವರಲ್ಲಿ ಭಾವನೆಗಳು ಪ್ರಧಾನವಾಗಿರಬಹುದು, ಮತ್ತು ಉಳಿದವರಲ್ಲಿ ಅವರ ಪ್ರಾಣಶಕ್ತಿಯು ಪ್ರಧಾನವಗಿರಬಹುದು. ಈ ಮಿಶ್ರಣದ ಅನುಪಾತವು ಪ್ರತಿ ವ್ಯಕ್ತಿಯಲ್ಲೂ ವಿಶಿಷ್ಟವಾಗಿರುತ್ತದೆ, ಆದರೆ ಅದೇ ನಾಲ್ಕು ಅಂಶಗಳು ಎಲ್ಲರಲ್ಲೂ ಇವೆ. ಆ ನಾಲ್ಕು ಆಂಶಗಳು ನಿಮ್ಮಲ್ಲಿ ಸರಿಯಾದ ಅನುಪಾತದಲ್ಲಿ ಕಾರ್ಯನಿರ್ವಹಿಸಬೇಕೆಂದರೆ ನೀವು ಯೋಗವನ್ನು ಮಾಡಬೇಕು, ಇಲ್ಲವಾದರೆ ನೀವು ಮುಂದುವರೆಯುವುದಿಲ್ಲ.
ನಿಮ್ಮ ಅಭ್ಯಾಸವನ್ನು ಒಂದು ಅರ್ಪಣೆಯನ್ನಾಗಿಸಿ
ನಿಮ್ಮಲ್ಲಿನ ಮೂಲಭೂತ ಅಂಶಗಳನ್ನು ತೆರೆಯುವ ಸಲುವಾಗಿ ಯೋಗದ ಪ್ರಾಥಮಿಕ ಅಭ್ಯಾಸಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಅಭ್ಯಾಸಗಳು ಕೆಲಸ ಮಾಡಲು ಬೇರೆ ಬೇರೆ ವ್ಯಕ್ತಿಗಳಲ್ಲಿ ನಿರ್ದಿಷ್ಟವಾದ ಸಮಯವನ್ನು ತೆಗೆದುಕೊಳ್ಳಲು ಹಲವಾರು ಕಾರಣಗಳಿವೆ. ಅದರ ಬಗ್ಗೆ ಚಿಂತಿಸಬೇಡಿ. ನೀವು ಯೋಗ ಮಾಡುವ ಬದ್ಧತೆಯನ್ನು ತೆಗೆದುಕೊಂಡಿದ್ದೀರಿ, ಹಾಗಾಗಿ ಕೇವಲ ಅದನ್ನು ಮಾಡಿ. ಸುಮ್ಮನೆ ನಿಮಗದನ್ನು ಮಾಡುವುದು ಹೇಗೆಂದು ತಿಳಿಯದೇ ಇದ್ದಲ್ಲಿ, ಅದನ್ನು ಒಂದು ಸಮರ್ಪಣೆಯ ರೀತಿಯಲ್ಲಿ ಮಾಡಿ. "ಇದು ನನಗಾಗಿ ಅಲ್ಲ. ನನ್ನ ಗುರುವಿಗೆ ಅರ್ಪಿಸುತ್ತ ಪ್ರತಿನಿತ್ಯ ನಾನು ಯೋಗ ಮಾಡುತ್ತೇನೆ." ಎಂಬುದಾಗಿ ಮಾಡಿ. ನಿಮ್ಮ ಮನದಲ್ಲಿನ ಸ್ಪರ್ಧಾತ್ಮಕ ಮನೋಭಾವವನ್ನು ತೊಡೆದುಹಾಕಲು ಇದೊಂದು ಸುಲಭವಾದ ದಾರಿ.
"ನಾನು ಯಾವ ಮಟ್ಟದಲ್ಲಿದ್ದೇನೆ? ನನಗಿಂತ ಮೊದಲು ಅಥವಾ ನಂತರ ಯೋಗಾಭ್ಯಾಸವನ್ನು ಶುರುಮಾಡಿದವರಿಗಿಂತ ನಾನು ಉತ್ತಮವಾಗಿದ್ದೇನೆಯೇ?" ಎಂಬಿತ್ಯಾದಿ ಪ್ರಶ್ನೆಗಳನ್ನು ನೀವು ಕೇಳುತ್ತಲೇ ಇದ್ದರೆ, ಅದು ಕೊನೆಯೇ ಇಲ್ಲದ ಆಲೋಚನಾ ಪ್ರಕ್ರಿಯೆಯಾಗಬಹುದು. ಈ ಅಸಂಬದ್ಧಗಳನೆಲ್ಲಾ ಕಿತ್ತುಹಾಕಿ, ಸುಮ್ಮನೆ ಯೋಗಾಭ್ಯಾಸಗಳನ್ನು ದಿನಂಪ್ರತಿ ಮಾಡಲು ಒಂದು ಸುಲಭವಾದ ಮಾರ್ಗವೆಂದರೆ ಅದನ್ನು ಒಂದು ಸಮರ್ಪಣೆಯಾಗಿ ಮಾಡುವುದಾಗಿದೆ. ಅದು ಆಧ್ಯಾತ್ಮವಾಗಿರಲಿ ಅಥವಾ ಬೇರೆಯೇ ವಿಷಯವಾಗಿರಲಿ, ನೀವು ಆಸೆಪಡುತ್ತೀರಿ ಎಂಬ ಕಾರಣಕ್ಕೆ ಜೀವನವು ನಿಮಗೆ ಫಲ ಕೊಡುವುದಿಲ್ಲ. ನೀವು ನಿಮ್ಮನ್ನು ಸಮರ್ಥರಾಗಿಸಿಕೊಂಡರೆ ಮಾತ್ರ ಜೀವನವು ನಿಮಗೆ ಫಲ ನೀಡುತ್ತದೆ. ಅದು ಹಣ, ಪ್ರೀತಿ, ಅಥವಾ ಆಧ್ಯಾತ್ಮಿಕ ಪ್ರಕ್ರಿಯೆ - ಏನೇ ಆಗಿರಬಹುದು, ಈ ಪ್ರಪಂಚದಲ್ಲಿ ಯಾವುದಾದರೂ ಫಲ ನೀಡುವುದು ನೀವು ಸರಿಯಾದುದನ್ನು ಮಾಡಿದರೆ ಮಾತ್ರ, ಇಲ್ಲದಿದ್ದರೆ ಇಲ್ಲ.
ಒಂದು ದಿನ, ಒಬ್ಬ ವ್ಯಕ್ತಿ ಗಲೀಜು ಗುಂಡಿಯೊಂದರಲ್ಲಿ ಬಿದ್ದು, ಅವನ ಕುತ್ತಿಗೆವರೆಗೆ ಕೊಚ್ಚೆಯಲ್ಲಿ ಮುಚ್ಚಿಹೋದ. ಅವನು ಅದರಿಂದ ಹೊರ ಬರಲು ಬಹಳಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ನಂತರ ಅವನು "ಬೆಂಕಿ, ಬೆಂಕಿ!" ಎಂದು ಕಿರುಚಾಡಲು ಶುರು ಮಾಡಿದ. ಅಕ್ಕ-ಪಕ್ಕದವರು ಅವನ ಕಿರುಚಾಟ ಕೇಳಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ಅವರು ಬೇಗನೆ ಬಂದು ಎಲ್ಲಾ ಕಡೆ ಬೆಂಕಿಗಾಗಿ ಹುಡುಕಾಡಿದರು - ಆದರೆ ಎಲ್ಲಿಯೂ ಬೆಂಕಿ ಕಾಣಿಸಲಿಲ್ಲ. ನಂತರ ಅವರಿಗೆ ಆ ಮನುಷ್ಯ ಗಲೀಜು ಗುಂಡಿಯಲ್ಲಿರುವುದು ಕಂಡಿತು. ಅವರು ಅವನನ್ನು ಮೇಲಕ್ಕೆತ್ತಿ "ನೀನು ’ಬೆಂಕಿ, ಬೆಂಕಿ’ ಎಂದು ಏಕೆ ಕಿರುಚಿಕೊಂಡೆ? ಎಲ್ಲಿದೆ ಬೆಂಕಿ?” ಎಂದು ಕೇಳಿದರು. ಅದಕ್ಕವನು "’ಗಲೀಜು, ಗಲೀಜು’ ಎಂದು ಕಿರುಚಿದಿದ್ದರೆ ನೀವು ಬರುತ್ತಿದ್ದಿರಾ?" ಎಂದು ಎದುರುತ್ತರ ನೀಡಿದ. ಹಾಗಾಗಿ ನೀವು ಸರಿಯಾದುದನ್ನು ಮಾಡಬೇಕು, ಇಲ್ಲವಾದರೆ ನಿಮಗೆ ಸರಿಯಾದ ವಿಷಯಗಳು ಸಂಭವಿಸುವುದಿಲ್ಲ.
ಸಂಪಾದಕರ ಟಿಪ್ಪಣಿ: ಎಲ್ಲಾ ಮಿತಿಗಳನ್ನು ಮೀರಿ ಹೋಗುವ ಅಪರೂಪದ ಸಾಧ್ಯತೆಯನ್ನು ನೀಡುತ್ತಾ, ಸದ್ಗುರುಗಳು ಆಧ್ಯಾತ್ಮದ ಅನ್ವೇಷಕರನ್ನು ಪರಮಮುಕ್ತಿಯ ಕಡೆಗಾದ ಅತೀಂದ್ರಿಯ ಪಯಣದಲ್ಲಿ ಕೊಂಡೊಯ್ಯುತ್ತಾರೆ. “A Guru Always Takes You For a Ride” ಎಂಬ ಇಪುಸ್ತಕದಲ್ಲಿ ಸದ್ಗುರುಗಳು ಗುರು-ಶಿಷ್ಯರ ಸಂಬಂಧದ ಬಗ್ಗೆ ಅಪರೂಪದ ಒಳನೋಟವನ್ನು ನೀಡುತ್ತಾರೆ. ನಿಮ್ಮಿಷ್ಟದ ಬೆಲೆಯನ್ನು ನೀಡಿ ಅದನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
A version of this article was originally published in Isha Forest Flower June 2009.