ಎಲ್ಲವನ್ನೂ ನಮ್ಮ ಬೆಳವಣಿಗೆಗೆ ಉಪಯೋಗಿಸಿಕೊಳ್ಳುವುದು ಹೇಗೆ?
ನಮ್ಮ ಜೀವನದ ಕಷ್ಟಗಳನ್ನು ನಮ್ಮ ಬೆಳವಣಿಗೆಗಾಗಿ ಹೇಗೆ ಬಳಸಿಕೊಳ್ಳಬಹುದು? ಎಂಬ ಪ್ರಶ್ನೆಗೆ ಸದ್ಗುರುಗಳು, ‘ಅದಕ್ಕಾಗಿ ಯಾರೊಬ್ಬರೂ ಯಾವುದೇ ಉಪಕಾರ ಅಥವಾ ಸ್ವಯಂ-ತ್ಯಾಗಕ್ಕಾಗಿ ಪ್ರಯತ್ನಿಸುವ ಅಗತ್ಯವಿಲ್ಲ. ಆಯಾ ಸಮಯಕ್ಕೆ ಏನು ಅಗತ್ಯವಿರುತ್ತದೆಯೋ ಅದನ್ನಷ್ಟೇ ಮಾಡಿ’ ಎನ್ನುತ್ತಾರೆ.
ಪ್ರಶ್ನೆ: ನಮ್ಮ ಬೆಳವಣಿಗೆಗೆ ಎಲ್ಲ ತರಹದ ಅವಕಾಶಗಳನ್ನೂ, ನಮಗೆ ಜೀವನದಲ್ಲಿ ಬರುವ ಕಷ್ಟಗಳನ್ನೂ ಸಹ ಮೆಟ್ಟಿಲುಗಳಂತೆ ಹೇಗೆ ಬಳಸಿಕೊಳ್ಳುವುದು?
ಸದ್ಗುರು: ಎಲ್ಲವನ್ನೂ ಹಾಗೂ ಎಲ್ಲರನ್ನೂ ನಿಮ್ಮ ಬೆಳವಣಿಗೆಗಾಗಿ ಹೇಗೆ ಬಳಸಿಕೊಳ್ಳುವುದು? ಮೊದಲನೆಯದಾಗಿ ನೀವು ಕೃತಜ್ಞತಾ ಭಾವದಲ್ಲಿ ಬೆಳೆಯಬೇಕು, ದಯಾಪರ ಭಾವದಲ್ಲಿ ಅಲ್ಲ. ನೀವು ದಯಾಪರ ಮನೋಭಾವದಲ್ಲಿ ಇರುವುದನ್ನು ನಾನು ಬಯಸುವುದಿಲ್ಲ. ನೀವು ಸಂಪೂರ್ಣವಾಗಿ ಕೃತಜ್ಞತಾ ಭಾವನೆಯಲ್ಲಿರಬೇಕು. ದಯಾಪರ ಮನೋಭಾವದಲ್ಲಿರುವ ಜನರು ಸ್ವಲ್ಪ ಸಮಯದ ನಂತರ ಕಾಳಜಿಯನ್ನು ಕಳೆದುಕೊಳ್ಳುತ್ತಾರೆ. ಗೌತಮ ಬುದ್ಧ ಒಂದು ಸೂತ್ರವನ್ನು ಕೊಡುತ್ತಾ, “ನಿಮ್ಮ ಆಹಾರವನ್ನು ಮತ್ತೊಬ್ಬರಿಗೆ ಕೊಡುವುದರಿಂದ ನೀವು ಶಕ್ತಿಶಾಲಿಗಳಾಗುತ್ತೀರ ಹೊರತು ಎಂದಿಗೂ ದುರ್ಬಲರಾಗುವುದಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಕಷ್ಟ” ಎಂದು ತಿಳಿಸುತ್ತಾನೆ. ಅದು ಹೇಗೆ ಒಬ್ಬರು ತಮ್ಮ ಆಹಾರವನ್ನು ಕೊಡುವುದರ ಮೂಲಕ ಶಕ್ತಿಶಾಲಿಗಳಾಗುತ್ತಾರೆ? ನಿಮ್ಮ ಹತ್ತಿರ ಹೇರಳವಾಗಿರುವ ಯಾವುದಾದರೂ ವಸ್ತುವನ್ನು ನೀವು ಕೊಡುವುದರಲ್ಲಿ ಯಾವುದೇ ವಿಶೇಷತೆಯಿರವುದಿಲ್ಲ. ಅದು ತಮ್ಮ ಜೀವನೋಪಾಯವೇ ಆಗಿದ್ದರೂ ಸರಿಯೆ, ಮತ್ತೊಬ್ಬ ವ್ಯಕ್ತಿಯಲ್ಲಿ ಅದರ ಅಗತ್ಯತೆ ಹೆಚ್ಚಿದ್ದಲ್ಲಿ, ಅಂತಹವರಿಗೆ ಕೊಡುವುದರ ಮೂಲಕ ಮನುಷ್ಯರು ದೈವತ್ವಕ್ಕೆ ಹತ್ತಿರವಾಗುತ್ತಾರೆ.
ಸನ್ಯಾಸಿಗಳು ಹೆಚ್ಚಿನ ಸಮಯ ಹಸಿವೆಯಿಂದಿರುತ್ತಾರೆ. ಅವರು ದಿನಕ್ಕೆ ಒಂದು ಬಾರಿ ಮಾತ್ರ ತಮ್ಮ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಾರೆ. ಇಂದು, ಯಾರೋ ಅವರಿಗೆ ಸ್ವಲ್ಪ ಆಹಾರ ನೀಡಬಹುದು, ನಾಳೆ ಇನ್ಯಾರೊ ಇನ್ನೂ ಕಡಿಮೆ ನೀಡಬಹುದು. ಏನೇ ಆಗಲಿ, ದಿನಕ್ಕೆ ಒಂದು ಮನಯಲ್ಲಷ್ಟೇ ಬಿಕ್ಷೆ ಬೇಡುವ ವಾಡಿಕೆಯಿತ್ತು. ಕೆಲವು ಬಾರಿ ಯಾವುದೇ ಭಿಕ್ಷೆ ಸಿಗದ ದಿನಗಳೂ ಇರುತ್ತಿದ್ದವು. ಜನರು ಭಿಕ್ಷೆ ನೀಡಲು ಹೆಚ್ಚು ಜಾಗರೂಕರಾಗಲಾರಂಭಿಸಿದ ಕಾರಣ ಸನ್ಯಾಸಿಗಳು ನಿರಂತರವಾಗಿ ಹಸಿವಿನಿಂದ ಬಳಲುತ್ತಿದ್ದರು. ಹಾಗಾಗಿ, ಕಾಲಾನಂತರದಲ್ಲಿ, ಒಂದು ದಿನಕ್ಕೆ ಒಂದು ಮನೆಯ ಬದಲಾಗಿ ಮೂರು ಮನೆಗಳ ನಿಯಮವನ್ನು ಪಾಲಿಸತೊಡಗಿದರು. ಗೌತಮನು “ನಿಮ್ಮ ಸ್ವಂತ ಆಹಾರವನ್ನು ಬೇರೆಯವರಿಗೆ ಕೊಟ್ಟರೆ, ನೀವು ಬಲಶಾಲಿಗಳಾಗುತ್ತೀರ, ದುರ್ಬಲರಲ್ಲ” ಎಂದು ಹೇಳುತ್ತಿದ್ದನು. ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದರೂ, ಇದು ನಿಜ.
ಆಶ್ವಿಟ್ಜ್‌ನ ಒಂದು ಘಟನೆ
ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ಕುಖ್ಯಾತಿ ಪಡೆದ ಸೈನ್ಯ ಶಿಬಿರ ಆಶ್ವಿಟ್ಜ್ ನಲ್ಲಿ ನಡೆದ ಅದ್ಭುತವಾದ ಒಂದು ನೈಜ ಕಥೆಯಿದು. ಸೆರೆ ಶಿಬಿರದಲ್ಲಿ ಪ್ರತಿದಿನ ಒಬ್ಬೊಬ್ಬರನ್ನೇ ಅವರ ಗುರುತಿನ ಸಂಖ್ಯೆಯನ್ನು ಹಿಡಿದು ಕರೆಯಲಾಗುತ್ತಿತ್ತು ಮತ್ತು ಸಾಯಿಸಲಾಗುತ್ತಿತ್ತು. ಯಾವುದೇ ಕ್ರಮಬದ್ದತೆಯಿಲ್ಲದೆ ಮನಬಂದಂತೆ ಸಂಖ್ಯೆಯನ್ನು ಕರೆಯಲಾಗುತ್ತಿತ್ತು. ಯಾರು ದುರ್ಬಲರಾಗಿದ್ದರೋ ಅಥವಾ ಯಾರಿಗೆ ವಯಸ್ಸಾದ ಕಾರಣ ಕೆಲಸ ಮಾಡಲು ಅಶಕ್ತರಾಗಿದ್ದರೋ, ಅವರನ್ನು ಆರಿಸಲಾಗುತ್ತಿತ್ತು. ಒಂದು ಬಾರಿ ಸಂಖ್ಯೆಯನ್ನು ಕರೆದರೆಂದರೆ, ಅವರು ಸತ್ತರೆಂದೇ ಅರ್ಥ.
ಒಬ್ಬ ವ್ಯಕ್ತಿ ತನ್ನ ಸಂಖ್ಯೆ ಆಯ್ಕೆಯಾದಾಗ, ಭಯಬೀತನಾದ. ಅವನಿಗೆ ಸಾಯಲು ಇಷ್ಟವಿರಲಿಲ್ಲ. ಅವನ ಪಕ್ಕದಲ್ಲಿ ಒಬ್ಬ ಕ್ರಿಸ್ತಧರ್ಮಪ್ರಚಾರಕ ಇದ್ದ. ಅವನ ಸಂಖ್ಯೆ ಇನ್ನೂ ಬಂದಿರಲಿಲ್ಲ. ಆದರೆ, ಭಯಭೀತನಾದ ವ್ಯಕ್ತಿಯನ್ನು ಕಂಡು, “ಹೆದರಬೇಡ, ನಿನ್ನ ಬದಲು ನಾನು ಹೋಗುತ್ತೇನೆ” ಎಂದ. ಇದನ್ನು ಕೇಳಿದ ವ್ಯಕ್ತಿಗೆ ನಾಚಿಕೆಯಾಯಿತು, ಅದೇ ಸಮಯ ಆ ಪ್ರಸ್ತಾವವನ್ನು ತಿರಸ್ಕರಿಸಲೂ ಸಾಧ್ಯವಾಗಲಿಲ್ಲ. ತಾನು ಬದುಕಲು ಬಯಸಿದ. ಅದರ ಕಾರಣ ಆ ಕ್ರಿಸ್ತಧರ್ಮಪ್ರಚಾರಕ ಕೊಲ್ಲಲ್ಪಟ್ಟ.
ನಂತರ, ಜರ್ಮನ್ನರು ಯುದ್ಧದಲ್ಲಿ ಸೋತರು ಮತ್ತು ಇವನನ್ನು ಬಿಡುಗಡೆ ಮಾಡಲಾಯಿತು. ಅನೇಕ ವರ್ಷಗಳ ಕಾಲ, ಇವನು ಈ ಸೋಲು ಮತ್ತು ಅವಮಾನದ ಭಾವನೆಯ ತೊಳಲಾಟದಲ್ಲೇ ಬದುಕಿದ. ಬಹಳ ಸಮಯದ ನಂತರ ಆ ಘಟನೆಯನ್ನು ಜನರಲ್ಲಿ ಹಂಚಿಕೊಂಡ. ಇವನಿಗೆ ತನ್ನ ಜೀವನವೇ ಮತ್ತೊಬ್ಬನ ದಾನವಾಗಿದ್ದರಿಂದ, ಬದುಕುವ ಅಗತ್ಯವೇ ಕಾಣಲಿಲ್ಲ. ಮತ್ತೊಬ್ಬ ಮನುಷ್ಯನ ಶ್ರೇಷ್ಠತೆಯಿಂದಾಗಿ ಇವನು ಇಂದು ಬದುಕುತ್ತಿದ್ದಾನೆ. ಇಲ್ಲದಿದ್ದರೆ, ಇವನು ಎಂದಿಗೋ ಸಾಯಬೇಕಿತ್ತು – ಅಂದು ಇವನ ಸಂಖ್ಯೆಯನ್ನು ಕರೆಯಲಾಗಿತ್ತು.
ಆ ಮಿಶಿನರಿ ವ್ಯಕ್ತಿಗೆ ಇವನ ಪರಿಚಯವೇ ಇರಲಿಲ್ಲ – ಇವನ ಸ್ನೇಹಿತನೋ, ತಂದೆಯೋ, ಮಗನೋ ಅಥವಾ ಮತ್ತೇನೋ ಆಗಿರಲಿಲ್ಲ. ಕೇವಲ ಇವನನ್ನು ಅವನ ಭಯ ಹಾಗೂ ಚಿಂತೆಯಿಂದ ದೂರಮಾಡುವ ಸಲುವಾಗಿ ಆ ನಿರ್ಧಾರ ತೆಗೆದುಕೊಂಡ. ಯಾರು ಈ ಕಠಿಣ ನಿರ್ಧಾರ ತೆಗೆದುಕೊಂಡು ಮುನ್ನಡೆದನೋ ಅವನು ಜೀವನವನ್ನು ಬಲ್ಲವನು, ಹಿಂದಕ್ಕೆ ಉಳಿದ ವ್ಯಕ್ತಿಯಲ್ಲ. ಕೇವಲ ಆ ಮುನ್ನಡೆದ ವ್ಯಕ್ತಿ ಮಾತ್ರ ಅಂತಹ ಶಕ್ತಿ ಮತ್ತು ಧೈರ್ಯವನ್ನು ಹೊಂದಿರುತ್ತಾನೆ. ಯಾರು ತನ್ನನ್ನು ತಾನೇ ರಕ್ಷಿಸಿಕೊಳ್ಳಬಯಸುವನೋ, ಅವನಿಗೆ ಈ ಅನುಭವವಾಗುವುದಿಲ್ಲ.
ಇದರರ್ಥ ನೀವು ನಿಮ್ಮನ್ನೇ ತ್ಯಾಗಮಾಡಬೇಕೆಂದೋ ಅಥವಾ ಆ ರೀತಿಯ ಯಾವುದೇ ಮೂರ್ಖ ನಿಲುವನ್ನು ತಾಳಬೇಕೆಂದೋ ಅಲ್ಲ. ಅವನು ಸಾಯುವ ಸಮಯದಲ್ಲಿ ಯಾವುದೇ ತ್ಯಾಗದ ಬಗ್ಗೆ ಚಿಂತಿಸಿರಲಿಲ್ಲ. ಮತ್ತೊಬ್ಬರಿಗಾಗಿ ತನ್ನನ್ನು ತ್ಯಾಗ ಮಾಡುವ ಕಾತುರದಲ್ಲಿರಲಿಲ್ಲ. ಆ ಕ್ಷಣದಲ್ಲಿ, ಏನು ಅಗತ್ಯವಿದೆ ಎಂಬುದನ್ನು ಮನಗಂಡು ಯಾವುದೇ ವಿಚಾರ ಮಾಡದೇ ಸೂಕ್ತ ನಿರ್ಧಾರ ಮಾಡಿದ. ಇದು ಅದ್ಭುತ ವಿಚಾರ. ನೀವು ಯಾವುದೋ ಬಲವನ್ನು ಪಡೆಯುವ ಸಲುವಾಗಿ ಅಥವಾ ಸ್ವರ್ಗ ಪ್ರಾಪ್ತಿಯ ಸಲುವಾಗಿ ನಿಮ್ಮನ್ನು ತ್ಯಾಗ ಮಾಡಲು ಪ್ರಯತ್ನಿಸಿದರೆಂದರೆ, ಅದು ಸರಿಯಾದುದ್ದಲ್ಲ.
ಸ್ವರ್ಗ ಪ್ರಾಪ್ತಿಯ ಕುರಿತಾದ ಯಾವುದೇ ಪ್ರಸ್ತಾವವಿಲ್ಲದೆ ನಿಮ್ಮ ಜೀವನವನ್ನು ನಡೆಸಲು ಸಾಧ್ಯವಾಯಿತೆಂದರೆ, ನೀವು ಸರಿಯಾದ ಹಾದಿಯಲ್ಲಿ ಇದ್ದೀರಿ ಎಂದರ್ಥ. ಒಂದು ವೇಳೆ ಸ್ವರ್ಗ ಪ್ರಾಪ್ತಿಯ ಪ್ರಸ್ತಾಪವನ್ನು ಇಟ್ಟುಕೊಂಡು ಆ ನಿಟ್ಟಿನಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರೂ, ಸರಿಯಾದ ದಾರಿಯಲ್ಲಿ ಜೀವನ ಸಾಗಿಸಿದಿರೆಂದರೆ, ಅದೂ ಕೂಡ ಸರಿಯೇ. ಅಂತಹ ಯಾವುದೇ ಒಪ್ಪಂದದ ಅಗತ್ಯವಿಲ್ಲದೇ ನಾನು ಸಾಧಿಸುತ್ತೀನಿ ಎಂಬ ಪಕ್ವತೆ ನಿಮ್ಮಲ್ಲಿ ಬಂದರೆ ಒಳ್ಳೆಯದು. ನಮಗೇನಾದರೂ ದೊರೆತರಷ್ಟೇ ಕೆಲಸ ಮಾಡುತ್ತೇವೆ ಎಂಬ ಸೀಮಿತ ಮನೋಭಾವದಿಂದ ನೀವು ಹೊರಕ್ಕೆ ಬಂದಿದ್ದರೆ, ಯಾವುದೇ ಹೆಚ್ಚಿನ ಲಾಭಕ್ಕೆ ಆಸೆ ಪಡದೆಯೇ ಹೆಚ್ಚಿನ ಕೆಲಸ ಮಾಡಲು ಸಿದ್ಧರಿದ್ದರೆ, ನಿಮ್ಮಲ್ಲಿ ವಿಶಿಷ್ಟ ರೀತಿಯ ಬಲವಿರುತ್ತದೆ. ಯಾವ ಮನುಷ್ಯನು ಅಗತ್ಯವಿರುವಷ್ಟು ಮಾತ್ರ ಮಾಡುತ್ತಾನೆಯೋ, ಅದಕ್ಕಾದ ಫಲವನ್ನಷ್ಟೇ ಪಡೆಯಬಹುದು. ಅವನು ತನ್ನ ಜೀವನ ಪೂರ್ತಿ ಭಿಕ್ಷುಕನಾಗಿಯೇ ಉಳಿಯುತ್ತಾನೆ. ತನ್ನ ನಿಜವಾದ ಬಲವೇನೆಂಬುದನ್ನು ತಿಳಿಯಲಾಗುವುದಿಲ್ಲ. ಅವನಿಗೆ ದೈವತ್ವದ ಬಗ್ಗೆ ಏನೂ ತಿಳಿಯಲಾಗುವುದಿಲ್ಲ, ಏಕೆಂದರೆ, ದೈವತ್ವ ಯಾವುದೇ ಉದ್ದೇಶವಿಲ್ಲದೆ ಕಾರ್ಯ ಮಾಡುತ್ತದೆ. ಸರಿಯಾಗಿ ಗಮನಿಸಿ, ಪ್ರಪಂಚದಲ್ಲಿ ಎಲ್ಲವೂ ಯಾವುದೇ ಉದ್ದೇಶವಿಲ್ಲದೆಯೇ ನಡೆಯುತ್ತದೆ.
Editor’s Note: Excerpted from Mystic’s Musings. Not for the faint-hearted, this book deftly guides us with answers about reality that transcend our fears, angers, hopes, and struggles. Sadhguru keeps us teetering on the edge of logic and captivates us with his answers to questions relating to life, death, rebirth, suffering, karma, and the journey of the Self. Download the sample pdf or purchase the ebook.