ಗುರು ಪೌರ್ಣಮಿಯ ಮಹತ್ವ: ಅನುಗ್ರಹವನ್ನು ಗಳಿಸುವ ದಿನ
ವರ್ಷದ ಇತರ ಪೌರ್ಣಮಿಗಳು ಮತ್ತು ಇತರ ಸಮಯಗಳಿಗೆ ಹೋಲಿಸಿದರೆ ಗುರು ಪೌರ್ಣಮಿಯ ಮಹತ್ವವೇನು? ಗ್ರಹಣಶೀಲತೆ ಮತ್ತು ವಿಮೋಚನೆಯ ಈ ಸಮಯದ ಹಿಂದಿನ ಖಗೋಳಿಕ ಸ್ಥಾನಮಾನಗಳು ಹಾಗೂ ಅದರ ಅತೀಂದ್ರಿಯ ಮಹತ್ವವನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ, ಮತ್ತು ಅನುಗ್ರಹಕ್ಕೆ ಲಭ್ಯವಾಗುವ ಮೂಲಕ ಈ ಸಮಯವನ್ನು ನಾವು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಅವರು ತಿಳಿಸಿಕೊಡುತ್ತಾರೆ.
The Importance of Guru Purnima in Hindi
ಗುರು ಪೌರ್ಣಮಿಯ ಖಗೋಳಿಕ ಮಹತ್ವ
ಸದ್ಗುರು: ಎಲ್ಲಾ ಪೌರ್ಣಮಿಗಳಲ್ಲಿ , ಈ ನಿರ್ದಿಷ್ಟ ಪೌರ್ಣಮಿಯನ್ನು ಗುರುಗಳಿಗೆ ಏಕೆ ಮುಡಿಪಾಗಿಡಲಾಗಿದೆ? ಮೂಲಭೂತವಾಗಿ, ಗ್ರಹಣಶೀಲತೆಯ ದೃಷ್ಟಿಯಿಂದ, ಸೂರ್ಯನ ಸುತ್ತಲಿನ ಭೂಮಿಯ ಕಕ್ಷೆಯಲ್ಲಿ ವಿವಿಧ ಬಿಂದುಗಳು ಕೆಲವು ನಿರ್ದಿಷ್ಟವಾದ ಗುಣಗಳನ್ನು ಹೊಂದಿವೆ. ಅನೇಕ ಋಷಿಮುನಿಗಳು ಮತ್ತು ಸಂತರು ತಮ್ಮ ಜ್ಞಾನೋದಯವನ್ನು ಕಂಡುಕೊಂಡಂತಹ ವರ್ಷದ ಕೆಲವು ದಿನಗಳಿವೆ. ಆ ದಿನಗಳ ಕಾರಣದಿಂದಾಗಿಯೇ ಅವರಿಗೆ ಜ್ಞಾನೋದಯವಾಯಿತೆಂದಲ್ಲ - ಅವರು ಆ ಪ್ರಕ್ರಿಯೆಯಲ್ಲಿದ್ದರು, ಮತ್ತು ಅವರದಕ್ಕೆ ತೀರ ಹತ್ತಿರದಲ್ಲಿದ್ದರು - ಆದರೆ ಕೆಲವು ನಿರ್ದಿಷ್ಟ ದಿನಗಳಲ್ಲಿ ಪ್ರಕೃತಿಯಿಂದಾಗುವ ಸ್ವಲ್ಪ ಸಹಾಯದಿಂದಾಗಿ ಅದು ಸುಲಭವಾಗಿ ಅರಳುತ್ತದೆ.ಗುರು ಪೌರ್ಣಮಿಯಂದು, ಚಂದ್ರ ಮತ್ತು ಇತರ ಗ್ರಹಗಳ ನಡುವೆ ಒಂದು ನಿರ್ದಿಷ್ಟವಾದ ಮೈತ್ರಿ ಏರ್ಪಟ್ಟಿರುತ್ತದೆ, ಮತ್ತದು ನಾವು ಗುರು ಎಂದು ಕರೆಯುವ ಆಯಾಮದೆಡೆಗೆ ಜನರಲ್ಲಿ ಒಂದು ರೀತಿಯ ಗ್ರಹಣಶೀಲತೆಯನ್ನು ಉಂಟುಮಾಡುತ್ತದೆ.
ನಮ್ಮ ಸಂಪ್ರದಾಯದಲ್ಲಿ, ಜನರು ಈ ಗ್ರಹಣಶೀಲತೆಯ ಸಮಯವನ್ನು ತಮ್ಮಿಂದ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಮ್ಮಲ್ಲಿ ಜನರು ಆ ದಿನವನ್ನು ಹೊರಗಡೆ ಬೆಳದಿಂಗಳಿನಲ್ಲಿ ಕಳೆಯುತ್ತಿದ್ದರು ಮತ್ತು ಸಾಧ್ಯವಾದರೆ ಒಬ್ಬ ಗುರುವಿನೊಂದಿಗೆ ಇರುತ್ತಿದ್ದರು. ಇಡೀ ರಾತ್ರಿಯನ್ನು ಧ್ಯಾನ ಮಾಡುವುದರಲ್ಲಿ ಅಥವಾ ಹಾಡು, ನೃತ್ಯ ಮತ್ತು ಉನ್ಮತ್ತರಾಗುವುದರಲ್ಲಿ ಕಳೆಯಲಾಗುತ್ತಿತ್ತು.
ಗುರು ಪೌರ್ಣಮಿ: ಅನುಗ್ರಕ್ಕೆ ಅತಿಮುಖ್ಯವಾದ ದಿನ
ವರ್ಷದ ಈ ಸಮಯ ಆದಿಯೋಗಿಯ ಗಮನ ಈಗ ಸಪ್ತರ್ಷಿಗಳೆಂದು ನಾವು ಕೊಂಡಾಡುವ ಅವನ ಮೊದಲ ಏಳು ಶಿಷ್ಯಂದಿರ ಮೇಲೆ ಬಿದ್ದಂತಹ ಸಮಯ. ಯೋಗ ಸಂಪ್ರದಾಯದಲ್ಲಿ, ಶಿವನನ್ನು ಒಬ್ಬ ದೇವರಾಗಿ ಪೂಜಿಸಲಾಗುವುದಿಲ್ಲ, ಆದರೆ ಆದಿಯೋಗಿ - ಮೊದಲ ಯೋಗಿ ಎಂದು ಪರಿಗಣಿಸಲಾಗುತ್ತದೆ ಮತ್ತು ಯೋಗ ವಿಜ್ಞಾನಗಳ ಹುಟ್ಟಿಗೆ ಮೂಲವಾದ ಮೊದಲ ಗುರು - ಆದಿ ಗುರು ಎಂದು ಪರಿಗಣಿಸಲಾಗುತ್ತದೆ.
ಹಾಗಾಗಿ, ತನ್ನ ಸುತ್ತಮುತ್ತಲಿನ ಸಂಗತಿಗಳೆಡೆಗೆ ಸಂಪೂರ್ಣವಾಗಿ ಉದಾಸೀನನಾದ ಒಬ್ಬ ವಿರಾಗಿ ಮತ್ತು ಯೋಗಿಯು, ಮೆಲ್ಲನೆ ಅವುಗಳಲ್ಲಿ ತೊಡಗಿಕೊಳ್ಳಲು ಪ್ರಾರಂಭಿಸಿದಂತಹ ತಿಂಗಳಿನಲ್ಲಿ ನಾವಿದ್ದೇವೆ. ಅನುಭವವನ್ನು ಹಂಚಿಕೊಳ್ಳುವ ಅವನ ಸಂಕಲ್ಪ ನಿಧಾನವಾಗಿ ಅರಳಲು ಪ್ರಾರಂಭಿಸಿದ್ದು ಇದೇ ತಿಂಗಳಿನಲ್ಲಿ.
ಸಪ್ತರ್ಷಿಗಳು ಆದಿಯೋಗಿಯ ಒಂದು ಕ್ಷಣದ ಗಮನವೂ ದೊರೆಯದೆ, ಸತತ ಎಂಬತ್ನಾಲ್ಕು ವರ್ಷಗಳ ಕಾಲ ಕೆಲವು ಸರಳವಾದ ಪೂರ್ವಸಿದ್ಧತಾ ಕ್ರಮಗಳನ್ನು ಅಭ್ಯಾಸ ಮಾಡಿದ್ದರು. ನಂತರ, ದಕ್ಷಿಣಾಯನದಂದು - ಈ ಏಳು ಜನರು ಹೊಳೆಯುವ ಸ್ಫಟಿಕಗಳಂತಾಗಿರುವುದನ್ನು ಆದಿಯೋಗಿ ಗಮನಿಸಿದನು. ಆನಂತರ, ಇಪ್ಪತ್ತೆಂಟು ದಿನಗಳವರೆಗೆ, ಅವನಿಗೆ ತನ್ನ ಗಮನವನ್ನು ಅವರಿಂದ ದೂರವಿರಿಸಲು ಸಾಧ್ಯವಾಗಲಿಲ್ಲ. ಅವರ ಮೇಲಿನ ಅವನ ಗಮನವು ತದೇಕಚಿತ್ತವಾಗಿತ್ತು.
ನಂತರ, ಬೇಸಿಗೆಯ ಅಯನ ಸಂಕ್ರಾಂತಿಯ ನಂತರದ ಮೊದಲ ಹುಣ್ಣಿಮೆಯಂದು, ಅವನು ತನ್ನಲ್ಲಿನ ಜ್ಞಾನವನ್ನು ಧಾರೆಯೆರೆಯಲು ನಿರ್ಧರಿಸಿದನು. ಅವನು ಒಬ್ಬ ಗುರುವಾಗಲು ನಿರ್ಧರಿಸಿದನು. ಈ ಹುಣ್ಣಿಮೆಯನ್ನು ಗುರು ಪೌರ್ಣಮಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಸಂಪೂರ್ಣ ಕಟುಹೃದಯದ ಬೈರಾಗಿಯೂ ಸಹ ನಿರ್ಲಕ್ಷಿಸಲಾಗದೆ, ಕರುಣಾಮಯಿಯಾಗಿ ಮಾರ್ಪಾಡಾದ ತಿಂಗಳು ಎಂದು ಈ ತಿಂಗಳನ್ನು ಪರಿಗಣಿಸಲಾಗುತ್ತದೆ. ಜಗತ್ತು ಎಂದಿಗೂ ಮುಟ್ಟಲು ಸಾಧ್ಯವಾಗದಂತಹ ರೀತಿಯಲ್ಲಿ ತನ್ನನ್ನು ತಾನು ಕಠಿಣಗೊಳಿಸಿಕೊಂಡಂತವನೂ ಸಹ ಸಡಿಲಗೊಂಡು, ಕರುಣೆಯನ್ನು ಹೊಂದಿ, ಈ ಹಿಂದೆ ಆ ತರದ ಯಾವುದೇ ಉದ್ದೇಶವಿಲ್ಲದಿದ್ದರೂ, ಒಬ್ಬ ಗುರುವಾಗಲು ನಿರ್ಬಂಧಿಸಲ್ಪಟ್ಟ ಸಮಯವಿದು.
ಆದ್ದರಿಂದ, ಈ ತಿಂಗಳನ್ನು, ಗುರುವಿನ ಕೃಪೆಯನ್ನು ಸ್ವೀಕರಿಸಲು ಮತ್ತು ಅದರ ಪ್ರಕ್ರಿಯೆಗೆ ನಿಮ್ಮನ್ನು ಗ್ರಹಣಶೀಲರನ್ನಾಗಿಸಿಕೊಳ್ಳಲು ಅತ್ಯುತ್ತಮವಾದ ಸಮಯವೆಂದು ಪರಿಗಣಿಸಲಾಗುತ್ತದೆ. ಆ ಕೃಪೆಯನ್ನು ಗಳಿಸಲು ಇದೊಂದು ಉತ್ತಮವಾದ ಸಮಯ.
ಗುರು ಪೌರ್ಣಮಿ: ನಿಮ್ಮ ಗ್ರಹಣಶಕ್ತಿಯನ್ನು ವರ್ಧಿಸಿಕೊಳ್ಳುವುದು
“ನಾನೇನು ಮಾಡಬೇಕು?” ಎಂಬುದೇ ಎಂದಿನ ಪ್ರಶ್ನೆ. ನೀವು ನಿಮ್ಮ ಸ್ವಂತದ್ದೇನನ್ನೂ ಮಾಡದಿದ್ದರೆ, ನೀವು ನಿಮ್ಮ ಬಗ್ಗೆ ಕಡಿಮೆ ಯೋಚಿಸಿದರೆ, ಅದು ಗ್ರಹಣಶೀಲರಾಗಲು ಅತ್ಯುತ್ತಮವಾದ ಮಾರ್ಗ. ಯೋಗ ಸಾಧನೆಗಳು ಯಾವಾಗಲೂ ಈ ರೀತಿಯಾಗಿಯೇ ರಚಿತವಾಗಿರುತ್ತವೆ, ಮತ್ತು ಅದು ನಿಮ್ಮನ್ನು ಆ ಕ್ರಿಯೆಯಲ್ಲಿ ಯಾವ ರೀತಿ ಮಗ್ನವಾಗಿಸುತ್ತದೆ ಎಂದರೆ, ನಿಮ್ಮ ದೈನಂದಿನ ಜೀವನ ಪ್ರಕ್ರಿಯೆಯಲ್ಲಿ - ನೀವು ಯಾರು, ನೀವು ಏನು ಮತ್ತು ನಿಮ್ಮ ಜೀವನ ಏನು ಎಂಬುದನ್ನು ನೀವು ಮರೆತೇಬಿಡುತ್ತೀರಿ. ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ನೀವು ಸಂಪೂರ್ಣವಾಗಿ ತಲ್ಲೀನರಾಗಿರುತ್ತೀರಿ. ಅನುಗ್ರಹವನ್ನು ಸ್ವೀಕರಿಸಲು ಅದು ಅತ್ಯುತ್ತಮ ಮಾರ್ಗ.
ನೀವು ಯಾರು ಮತ್ತು ನೀವು ಏನು ಎಂಬುದರ ಅರಿವು ನಿಮ್ಮಲ್ಲಿ ಇಲ್ಲದಿದ್ದಾಗ ನೀವು ಉತ್ತಮವಾಗಿ ಉಸಿರಾಡುತ್ತೀರಿ ಎನ್ನುವುದು ನಿಮಗೆ ಗೊತ್ತೆ? ಜನರು ನಿದ್ದೆ ಮಾಡುವಾಗ ಎಷ್ಟು ಸರಾಗವಾಗಿ ಉಸಿರಾಡುತ್ತಾರೆ ಎಂದು ನೀವು ನೋಡಿದ್ದೀರಾ? ನೀವು ದಿನವಿಡೀ ಅವರ ಉಸಿರಾಟವನ್ನು ಗಮನಿಸಿದರೆ, ಅದು ವಿವಿಧ ರೀತಿಯ ಪ್ರಕ್ಷುಬ್ಧತೆಗಳಿಗೆ ಒಳಗಾಗುತ್ತಿರುತ್ತದೆ. ನೀವು ನಿಮ್ಮನ್ನು ಹೆಚ್ಚು ಸೀಮಿತಗೊಳಿಸಿಕೊಂಡಷ್ಟೂ, ನಿಮ್ಮ ಉಸಿರಾಟದ ಪ್ರಕ್ರಿಯೆ ಅಷ್ಟೇ ಹೆಚ್ಚು ಸೀಮಿತವಾಗುತ್ತದೆ. ನೀವು ನಿದ್ದೆ ಮಾಡುವಾಗ ನಿಮ್ಮ ಉಸಿರಾಟ ಹೇಗೆ ನಡೆಯುತ್ತದೆಯೋ, ಅದೇ ರೀತಿಯಲ್ಲಿ ಅದು ಎಲ್ಲಾ ಸಮಯದಲ್ಲೂ ನಡೆಯಬೇಕು.
ಮನುಷ್ಯನ ಪ್ರಜ್ಞೆಗೆ ಬೆಳೆಯುವ ಅವಕಾಶ ಮಾಡಿಕೊಡುವ ವಿಚಾರವಾಗಿ ಝೆನ್ ಪದ್ಧತಿಯಲ್ಲಿ ಒಂದು ಸುಂದರವಾದ ಕಥೆಯಿದೆ. ಒಬ್ಬ ಶಿಷ್ಯ ಒಂದು ಸಾರಿ ಒಬ್ಬ ಝೆನ್ ಮಾಸ್ಟರ್ ನ ಬಳಿ ಹೋಗಿ, “ನನ್ನ ಆಧ್ಯಾತ್ಮಿಕ ಬೆಳವಣಿಗೆಗಾಗಿ ನಾನೇನು ಮಾಡಬೇಕು?” ಎಂದು ಕೇಳುತ್ತಾನೆ. “ನೆಲವನ್ನು ಗುಡಿಸು, ಸೌದೆಯನ್ನು ಕಡಿ, ಅಡುಗೆ ಬೇಯಿಸು, ಅಷ್ಟೆ.” ಎಂಬ ಉತ್ತರ ಬರುತ್ತದೆ.
“ಅದಕ್ಕಾಗಿ ನಾನು ಇಲ್ಲಿಗೇಕೆ ಬರಬೇಕು? ನಾನದನ್ನು ಮನೆಯಲ್ಲಿಯೇ ಮಾಡಬಹುದಲ್ಲ." ಎಂದು ನೀವು ಯೋಚಿಸಬಹುದು. ಆದರೆ ನಿಮ್ಮ ಮನೆಯಲ್ಲಿ ನೀವು ಕಸ ಗುಡಿಸುವುದು ನಿಮ್ಮ ಸ್ವಂತ ನೆಲದ ಬಗ್ಗೆಯಾಗಿರುತ್ತದೆ. ನೀವು ಪಕ್ಕದ ಮನೆಯ ಕಸವನ್ನೇನು ಗುಡಿಸುವುದಿಲ್ಲ. ನಿಮ್ಮ ಸ್ವಂತ ಬಳಕೆಗಾಗಿ ನೀವು ಸೌದೆಯನ್ನು ಕಡಿಯುತ್ತೀರಿ, ನೀವು ನಿಮಗಾಗಿ ಮತ್ತು ನಿಮ್ಮವರು ಎಂದು ಪರಿಗಣಿಸುವವರಿಗಾಗಿ ಆಹಾರವನ್ನು ಬೇಯಿಸುತ್ತೀರಿ. ನೀವು ನಿಮ್ಮ ಪ್ರತಿಯೊಂದು ಚಟುವಟಿಕೆಯನ್ನೂ ಸಹ ನೀವು ಯಾರೆಂಬುದನ್ನು ವರ್ಧಿಸಿಕೊಳ್ಳಲು ಬಳಸುತ್ತಿದ್ದೀರೇ ವಿನಃ ನಿಮ್ಮನ್ನು ಇಲ್ಲವಾಗಿಸಿಕೊಳ್ಳಲು ಅಲ್ಲ. ನಮ್ಮ ಕರ್ಮವನ್ನು ಒಂದು ಬಂಧನ ಅಥವಾ ವಿಮೋಚನೆಯ ಪ್ರಕ್ರಿಯೆಯನ್ನಾಗಿ ಮಾಡಿಕೊಳ್ಳುವುದರ ನಡುವಿನ ವ್ಯತ್ಯಾಸವೇ ಇದು. ಒಂದೋ ನೀವು ಕರ್ಮವನ್ನು ಸಂಪಾದಿಸುತ್ತಿದ್ದೀರಿ ಅಥವಾ ನಿಮ್ಮ ಕರ್ಮವೇ ಯೋಗವಾಗುತ್ತಿದೆ.
ಆದ್ದರಿಂದ, ಕೇವಲ ನೆಲವನ್ನು ಗುಡಿಸುವುದು, ಆಹಾರವನ್ನು ಬೇಯಿಸುವುದು, ಒಂದು ಮಾವಿನ ಮರವನ್ನು ನೆಡುವುದು - ನಿಮ್ಮ ಶತ್ರು ಮತ್ತು ಅವನ ಮಕ್ಕಳು ಆ ಮಾವಿನಹಣ್ಣನ್ನು ತಿನ್ನಬಹುದು, ಪರವಾಗಿಲ್ಲ. ಯಾರು ತಿನ್ನುತ್ತಾರೆ ಎನ್ನುವುದನ್ನು ನೋಡಬೇಡಿ, ಸುಮ್ಮನೆ ಗಿಡವನ್ನು ನೆಡಿ. ಆಗ, ಚಟುವಟಿಕೆಯು ವಿಲೀನವಾಗುವ ಒಂದು ಪ್ರಕ್ರಿಯೆಯಾಗುತ್ತದೆ. ಇಲ್ಲದಿದ್ದರೆ, ಪ್ರತಿಯೊಂದು ಚಟುವಟಿಕೆಯೂ ನಿಮ್ಮನ್ನು ನೀವು ಬಂಧಿಸಿಕೊಳ್ಳುವ ಒಂದು ವಿಧಾನವಾಗುತ್ತದೆ. ದುರದೃಷ್ಟವಶಾತ್, ಚಟುವಟಿಕೆಗಳು ಜನರನ್ನು ಸಿಲುಕಿಸುತ್ತಿವೆ. ಕೆಲಸ ಮಾಡುವ ಮಾನವ ಸಾಮರ್ಥ್ಯವನ್ನು ಸ್ವತಃ ನಮ್ಮನ್ನು ಬಂಧಿಸಿಕೊಳ್ಳಲು ಬಳಸಲಾಗುತ್ತಿದೆ. ಮತ್ತು ನಮ್ಮ ಬುದ್ಧಿಮತ್ತೆಯನ್ನು ನಮಗೆ ನಾವೇ ದುಃಖವನ್ನು ಸೃಷ್ಟಿಸಿಕೊಳ್ಳಲು ಬಳಸಲಾಗುತ್ತಿದೆ.
ಒಮ್ಮೆ ನೀವು ಹೀಗೆ ಮಾಡಲು ಪ್ರಾರಂಭಿಸಿದಾಗ, ನಿಮಗೇ ತಿಳಿಯದಂತೆ, ನೀವು ನಿಮ್ಮ ಸಾಮರ್ಥ್ಯದ ಶತ್ರುಗಳಾಗುತ್ತೀರಿ. ಅದೊಂದು ದುಃಸ್ಥಿತಿ. ನೀವು ನಿಮ್ಮ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಗೆ ವಿರುದ್ಧವಾಗಿದ್ದರೆ, ನೀವು ಹಿಂಬಡ್ತಿಯನ್ನು ಕೋರುತ್ತಿದ್ದೀರಿ, ಪ್ರಗತಿಯನ್ನಲ್ಲ. ನೀವು ವಿಕಸನ ಹೊಂದಲು ಬಯಸುತ್ತಿಲ್ಲ, ಬದಲಿಗೆ ಕೆಳ ಮಟ್ಟದ್ದಾದ ಒಂದು ಜೀವನಕ್ಕೆ ಹಿಂಬಡ್ತಿಯನ್ನು ಕೋರುತ್ತಿದ್ದೀರಿ ಎಂದರ್ಥ.
ನಿಮ್ಮ ಬೆಳವಣಿಗೆಗೆ ಗುರು ಪೌರ್ಣಮಿಯ ಪ್ರಾಮುಖ್ಯತೆ
"ನಾನು ಮಗುವಿನಂತೆ ಇರಬೇಕೆಂದು ಬಯಸುತ್ತೇನೆ" ಎಂದು ಜನ ಹೇಳುವುದು ಈಗ ಒಂದು ಫ್ಯಾಷನ್ ಆಗಿಬಿಟ್ಟಿದೆ. ಆಧ್ಯಾತ್ಮಿಕ ನಾಯಕರೆಂದು ಕರೆಸಿಕೊಳ್ಳುತ್ತಿರುವವರೂ ಸಹ "ನಾನು ಮಗುವಿನಂತೆ ಇದ್ದೇನೆ" ಎಂದು ಹೇಳುತ್ತಿದ್ದಾರೆ. ನೀವು ಮಗುವಾಗಿದ್ದಾಗ, ನೀವು ತ್ವರಿತವಾಗಿ ಬೆಳೆದು ದೊಡ್ಡವರಾಗಬೇಕೆಂದು ಬಯಸಿದ್ದಿರಿ, ಏಕೆಂದರೆ ದೊಡ್ಡವರು ಹೊಂದಿದ್ದ ಎಲ್ಲಾ ಸಾಮರ್ಥ್ಯಗಳು ನಿಮ್ಮನ್ನು ತುಂಬಾ ಚಿಕ್ಕದಾಗಿ ಮತ್ತು ನಿಷ್ಪ್ರಯೋಜಕವಾಗಿ ಕಾಣುವಂತೆ ಮಾಡಿದ್ದವು. ನೀವು ಬೆಳೆದು ದೊಡ್ಡವರಾದ ಮೇಲೆ, ಮತ್ತು ನಿಮಗೆ ಆ ಬೆಳವಣಿಗೆಯನ್ನು ಹೇಗೆ ನಿರ್ವಹಿಸುವುದು ಎಂದು ತಿಳಿದಿಲ್ಲವಾದ್ದರಿಂದ, ನೀವು ಮತ್ತೆ ಮಗುವಾಗಲು ಬಯಸುತ್ತಿದ್ದೀರಿ ಅಷ್ಟೆ.
ಮಕ್ಕಳು ಬಹಳ ಚಂದ ಏಕೆಂದರೆ ಅವರು ಬೆಳೆದು ದೊಡ್ಡವರಾದಂತೆಲ್ಲಾ ಅವರಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ, ಆದ್ದರಿಂದ ಈಗ ಅವರಿರುವ ರೀತಿಯಲ್ಲಿ ನಾವು ಅವರನ್ನು ಇಷ್ಟಪಡುತ್ತೇವೆ ಮತ್ತು ಮಹತ್ವ ನೀಡುತ್ತೇವೆ. ಆದರೆ ನೀವು ಎಂದೆಂದಿಗೂ ಹಾಗೆಯೇ ಇದ್ದರೆ, ಅದಕ್ಕೆ ಯಾವುದೇ ಮೌಲ್ಯವೂ ಇರುವುದಿಲ್ಲ.
ಬೆಳೆದು ದೊಡ್ಡವರಾಗುವುದಕ್ಕೆ ಮೌಲ್ಯವಿದೆ. ನಿಮ್ಮ ಮನಸ್ಸು ಮತ್ತು ದೇಹವನ್ನು ಬಳಸಿ ಅನೇಕ ಕಾರ್ಯಗಳನ್ನು ಮಾಡಲು ಸಮರ್ಥರಾಗುವುದು ಮೌಲ್ಯಯುತವಾದದ್ದು. ನಿಮ್ಮ ಮನಸ್ಸು ಮತ್ತು ದೇಹವನ್ನು ಹೇಗೆ ಬಳಸಿಕೊಳ್ಳಬೇಕೆಂಬುದು ನಿಮಗೆ ತಿಳಿದಿಲ್ಲದಿದ್ದರೆ ಮತ್ತು ಅವುಗಳಿಂದ ದುಃಖ ಮತ್ತು ಬಂಧನಗಳನ್ನು ನೀವು ಸೃಷ್ಟಿಸಿಕೊಂಡಿದ್ದರೆ ಮಾತ್ರ, ನೀವು ಬೆಳೆದು ದೊಡ್ಡವರಾಗಬಾರದಿತ್ತು ಎಂದು ಬಯಸುತ್ತೀರಿ. ಇಲ್ಲದಿದ್ದರೆ, ಪ್ರತಿಯೊಬ್ಬರೂ ಸಹ ಬೆಳೆಯಲು ಇಷ್ಟಪಡುತ್ತಾರೆ. ಯಾರೂ ಕೂಡ ಹಿಂದಕ್ಕೆ ಹೋಗಲು ಬಯಸುವುದಿಲ್ಲ.
ಆದ್ದರಿಂದ, ಈ ತಿಂಗಳು ಅನುಗ್ರಹದ ತಿಂಗಳು. ಅನುಗ್ರಹವು ಬೆಳವಣಿಗೆಗೆ ಗೊಬ್ಬರವಿದ್ದಂತೆ, ಮತ್ತು ಅದರಿಂದ ಒಬ್ಬ ಮನುಷ್ಯ ಬೇರೆಯದ್ದೇ ಒಂದು ಅಸ್ತಿತ್ವ, ಸಾಮರ್ಥ್ಯ ಮತ್ತು ಸಾಧ್ಯತೆಯ ಆಯಾಮಕ್ಕೆ ತನ್ನನ್ನು ತಾನೇ ತಳ್ಳಬಹುದು. ಆದ್ದರಿಂದ ಅನುಗ್ರಹವನ್ನು ಬಳಸಿಕೊಳ್ಳಲು ನಾವೇನು ಮಾಡಬೇಕು? ಮಾಡಲು ಏನೂ ಇಲ್ಲ. ನೀವು ಮಾಡುವ ಕೆಲಸಗಳು ‘ನಾನು’ ಎಂಬುದರ ಪರಿಧಿಯೊಳಗೆ ಕಡಿಮೆಯಾದಷ್ಟೂ, ಮತ್ತು ಆ ಪರಿಧಿಯಿಂದ ಹೊರಗೆ ಅವು ಹೆಚ್ಚಾದಷ್ಟೂ, ನೀವು ಅನುಗ್ರಹಕ್ಕೆ ಹೆಚ್ಚು ಪಾತ್ರರಾಗುತ್ತೀರಿ.
ಗುರು ಪೌರ್ಣಮಿ: ವಿಮೋಚನೆಯ ರಾತ್ರಿ
ಆಧ್ಯಾತ್ಮದ ಹಾದಿಯಲ್ಲಿರುವ ಜನರಿಗೆ, ಗುರು ಪೌರ್ಣಮಿಯು ವರ್ಷದ ಅತಿದೊಡ್ಡ ದಿನ, ಏಕೆಂದರೆ ಅವರು ಆದಿಗುರು ಮತ್ತು ಹಾದಿಯಲ್ಲಿ ಸಿಗುವ ಇತರ ಎಲ್ಲಾ ಗುರುಗಳ ಅನುಗ್ರಹವನ್ನು ಪಡೆಯಲು ಬಯಸುತ್ತಾರೆ.
15000 ವರ್ಷಗಳ ಹಿಂದೆ ಗುರು ಪೌರ್ಣಮಿಯ ಆ ಹುಣ್ಣಿಮೆಯ ರಾತ್ರಿಯಂದು, ಆದಿಯೋಗಿಯು ಏಳು ಋಷಿಗಳತ್ತ ಅವನ ಗಮನವನ್ನು ಹರಿಸಿದಾಗ, ಮಾನವತೆಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ, ಮನುಷ್ಯರಿಗೆ ಅವರೊಂದು ಪೂರ್ವನಿಗದಿತವಾದ ಜೀವವಲ್ಲ ಎನ್ನುವುದನ್ನು ನೆನಪಿಸಲಾಯಿತು. ಅವರು ಶ್ರಮಿಸಲು ಸಿದ್ಧರಿದ್ದರೆ, ಅಸ್ತಿತ್ವದ ಪ್ರತಿಯೊಂದು ಬಾಗಿಲೂ ಅವರಿಗಾಗಿ ತೆರೆದಿದೆ. ಮನುಷ್ಯರು ಪ್ರಕೃತಿಯ ಸರಳ ನಿಯಮಗಳಿಂದ ಸೀಮಿತವಾಗಿರಬೇಕಿಲ್ಲ.
ಮನುಷ್ಯ ಅತಿ ಹೆಚ್ಚು ಸಂಕಟಪಡುವ ಒಂದು ವಿಷಯವೆಂದರೆ ಬಂಧನ. ನಾವು ಭಾರತದಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಅಮೇರಿಕಾದ ಕಾರಾಗೃಹಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ ಮತ್ತು ನನ್ನ ಅನುಭವದಲ್ಲಿ, ನಾನು ಜೈಲಿಗೆ ಪ್ರವೇಶಿಸಿದಾಗಲೆಲ್ಲಾ, ಆ ಗಾಳಿಯಲ್ಲೇ ನೋವು ತುಂಬಿರುತ್ತದೆ. ಅದು ನನಗೆಂದಿಗೂ ವಿವರಿಸಲು ಸಾಧ್ಯವಾಗದಂತಹ ವಿಷಯ. ನಾನು ಭಾವನಾತ್ಮಕ ತರದವನಲ್ಲ, ಆದರೆ ಅಲ್ಲಿನ ಗಾಳಿಯಲ್ಲಿ ಎಷ್ಟು ನೋವು ತುಂಬಿದೆಯೆಂದರೆ, ನಾನು ಕಣ್ಣೀರು ಸುರಿಸದೆ ಒಮ್ಮೆಯೂ ಸಹ ಜೈಲಿನೊಳಕ್ಕೆ ಪ್ರವೇಶಿಸಿಲ್ಲ. ಬಂಧನದ ನೋವೆಂದರೆ ಇದೇ. ಇದರ ಅರಿವಿನಲ್ಲಿ ಮತ್ತು ಮನುಷ್ಯನ ಈ ಮೂಲಭೂತ ಪ್ರಕೃತಿಯನ್ನು ಅರ್ಥಮಾಡಿಕೊಂಡೇ ಆದಿಯೋಗಿಯು ವಿಮೋಚನೆಯ ಬಗ್ಗೆ ಮಾತನಾಡಿರುವುದು.
ಈ ನಮ್ಮ ಸಂಸ್ಕೃತಿಯು ವಿಮೋಚನೆಯನ್ನು ಅತ್ಯುನ್ನತ ಗುರಿ ಮತ್ತು ಏಕೈಕ ಗುರಿಯನ್ನಾಗಿಸಿಕೊಂಡಿತು. ನಿಮ್ಮ ಜೀವನದಲ್ಲಿ ನೀವು ಮಾಡುವ ಪ್ರತಿಯೊಂದೂ ಸಹ ನಿಮ್ಮ ಪರಮ ವಿಮೋಚನೆಯೆಡೆಗೆ ಮಾತ್ರವೇ ಆಗಿರುತ್ತದೆ, ಏಕೆಂದರೆ ಬಂಧವನ್ನು ವಿಧಿಸುತ್ತಿರುವ ವಿಷಯ ಏನೇ ಆಗಿರಲಿ - ಜೈಲಿನ ಕಾವಲುಗಾರರು, ಮದುವೆ, ಶಾಲೆಯಲ್ಲಿನ ಶಿಕ್ಷಕರು ಅಥವಾ ಪ್ರಕೃತಿಯ ನಿಯಮಗಳು - ಅದು ಯಾವುದೇ ಆಗಿರಲಿ - ಒಬ್ಬ ಮನುಷ್ಯ ಸಹಿಸಿಕೊಳ್ಳಲು ಸಾಧ್ಯವಿಲ್ಲದ ವಿಷಯವೆಂದರೆ ಅದು ಬಂಧನ. ಏಕೆಂದರೆ ಅವನು ಸ್ವಾಭಾವಿಕವಾಗಿ ಹಂಬಲಿಸುವುದು ವಿಮೋಚನೆಗಾಗಿ.
ಈ ದಿನದಂದು ಮೊದಲ ಬಾರಿಗೆ, ಕೆಲವು ಸಾವಿರ ವರ್ಷಗಳ ಹಿಂದೆ, ಆದಿಯೋಗಿಯು ಈ ಬಂಧನವನ್ನು ಮೀರುವುದು ಹೇಗೆಂಬುದಕ್ಕೆ ಅನೇಕ ವಿಧಾನಗಳನ್ನು ನೀಡಿದ. ಆದಿಯೋಗಿಯು ಏನಾಗಿರುವನೋ ಅದಕ್ಕೆ ನಾನು ತಲೆಬಾಗುತ್ತೇನೆ, ಆದರೆ ಆ ಏಳು ಋಷಿಮುನಿಗಳ ಮೇಲಿನ ನನ್ನ ಮೆಚ್ಚುಗೆ ಆದಿಯೋಗಿಯ ಬಗೆಗಿನ ನನ್ನ ಮೆಚ್ಚುಗೆಯನ್ನೂ ಮೀರಿದೆ, ಏಕೆಂದರೆ ಆದಿಯೋಗಿ ಅವರನ್ನು ನಿರ್ಲಕ್ಷಿಸಲಾಗದಂತಹ ರೀತಿಯಲ್ಲಿ ಅವರು ತಮ್ಮನ್ನು ತಾವು ಸಿದ್ಧಪಡಿಸಿಕೊಂಡರು.
ಬೇರೆ ಯಾವುದೇ ಗುರು ಅಥವಾ ಯೋಗಿಯು ತಾನು ಬಯಸಿದ ಏನನ್ನಾದರೂ ಹಂಚಿಕೊಳ್ಳಬಲ್ಲ, ತಾನು ನೀಡುವುದನ್ನೆಲ್ಲಾ ಗ್ರಹಿಸುವಷ್ಟು ಸಮರ್ಥರಾದ ಏಳು ಜನರನ್ನು ಕಂಡುಕೊಂಡಿದ್ದಾನೆ ಎಂದು ನನಗನಿಸುವುದಿಲ್ಲ. ಅನೇಕ ಯೋಗಿಗಳು ಮತ್ತು ಗುರುಗಳು ಸಂಪೂರ್ಣವಾದ ಹಾಗೂ ಅಸಾಧಾರಣರಾದ ಭಕ್ತರನ್ನು ಕಂಡುಕೊಂಡಿದ್ದಾರೆ, ಮತ್ತು ಅವರೊಂದಿಗೆ ಅವರು ತಮ್ಮ ಅನುಗ್ರಹವನ್ನು ಹಂಚಿಕೊಂಡು ಅವರನ್ನು ಸಫಲಗೊಳಿಸಿದ್ದಾರೆ. ಆದರೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಬಹುದಾದ ಏಳು ಜನರನ್ನು ಇನ್ನೂ ಯಾರೂ ಸಹ ಕಂಡುಕೊಂಡಿಲ್ಲ. ಅದು ಈವರೆಗಿನ್ನೂ ಸಂಭವಿಸಿಲ್ಲ… ನಾವಿನ್ನೂ ಅದಕ್ಕಾಗಿ ಶ್ರಮಿಸುತ್ತಲೇ ಇದ್ದೇವೆ.
ಸಂಪಾದಕರ ಟಿಪ್ಪಣಿ: ಆದಿಯೋಗಿಯ ಉಪಸ್ಥಿತಿಯಲ್ಲಿ ಗುರು ಪೌರ್ಣಮಿಯನ್ನು ಸದ್ಗುರುಗಳೊಂದಿಗೆ ಆಚರಿಸಿ. ಈಶ ಯೋಗ ಕೇಂದ್ರಕ್ಕೆ ಖುದ್ದಾಗಿ ಬನ್ನಿ ಅಥವಾ ಉಚಿತ ಲೈವ್ ವೆಬ್‌ಸ್ಟ್ರೀಮ್ ಅನ್ನು ವೀಕ್ಷಿಸಿ.