ನೀವು ನಿಮ್ಮ ಜೀವನದ ಕೊನೆಯ ಘಟ್ಟವನ್ನ ಹೇಗೆ ಜೀವಿಸಬೇಕು?
ನಾವು ಈ ಭೂಮಿಯ ಮೇಲೆ ನಮ್ಮ ಜೀವನದ ಕೊನೆಯ ಹಂತವನ್ನು ಹೇಗೆ ಜೀವಿಸಬೇಕು ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ.
ಪ್ರಶ್ನೆ: ಸದ್ಗುರು, ನಾವು ಈ ಭೂಮಿಯ ಮೇಲೆ ನಮ್ಮ ಜೀವನದ ಕೊನೆಯ ಘಟ್ಟದ ಬದುಕಿಗೆ ಆಧ್ಯಾತ್ಮಿಕವಾಗಿ, ದೈಹಿಕವಾಗಿ ಮತ್ತು ನೈತಿಕವಾಗಿ ಯಾವ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಬೇಕು?
ಸದ್ಗುರು: ಅದು ಕೊನೆಯ ಹಂತ, ಹಾಗಾಗಿ ನಿಧಾನವಾಗಿ ನಡೆಯಬೇಡಿ. ಬೀಡು ಬೀಸಾಗಿ ಸಾಗಿರಿ. ಮೊದಲ ಹೆಜ್ಜ ಮತ್ತು ಕೊನೆಯ ಹೆಜ್ಜೆಯ ನಡುವೆ ಭೇದವನ್ನು ಸೃಷ್ಠಿಸಿಕೊಳ್ಳದಿರಿ.ನೀವು ಪ್ರಾರಂಭದಲ್ಲಿ ಭೇದವನ್ನು ಸೃಷ್ಠಿಸಿಕೊಂಡಿದ್ದರೆ, ಕೊನೆಯ ಪಕ್ಷ ಈಗಲಾದರೂ ಹಾಗೆ ಮಾಡದಿರುವುದನ್ನು ಕಲಿಯಿರಿ. ನಿಮ್ಮ ಬಳಿ ಇನ್ನು ನೂರು ಹೆಜ್ಜೆಗಳು ಉಳಿದಿರಬಹುದು ಅಥವಾ ಒಂದೇ ಹೆಜ್ಜೆ ಇರಬಹುದು – ಒಂದೇ ರೀತಿಯಲ್ಲಿ ನಡೆಯಿರಿ, ಭೇದವನ್ನು ಸೃಷ್ಟಿಸದಿರಿ. ಜನರು, “ಕೊನೆಯ ಪಕ್ಷ ನಿಮ್ಮ ಜೀವನದ ಕೊನೆಗಾದರೂ, ನೀವು ದೇವರ ಬಗ್ಗೆ ಯೋಚಿಸಬೇಕು” ಎಂದು ಹೇಳುತ್ತಾರೆ. ನೀವು ನಿಮ್ಮ ಜೀವನವನ್ನು ಕುರುಡಾಗಿ ಜೀವಿಸಿದ್ದರೆ ಮತ್ತು ಕೊನೆಯ ಕ್ಷಣದಲ್ಲಿ “ರಾಮ, ರಾಮ” ಎಂದು ಹೇಳಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಯೋಚಿಸಿದರೆ, ಅದು ಕೆಲಸ ಮಾಡುವುದಿಲ್ಲ.ನೀವು ಬಿಜು ಪಟ್ನಾಯಕರ ಹೆಸರನ್ನು ಕೇಳಿದ್ದೀರಾ? ಅವರು ಒರಿಸ್ಸಾ ಮುಖ್ಯಮಂತ್ರಿಯಾಗಿದ್ದರು. ಅವರು ರಾಜಕೀಯದ ಕ್ಷೇತ್ರದಲ್ಲಿದ್ದರೂ, ತಮ್ಮದೇ ರೀತಿಯಲ್ಲಿ ಜೀವನವನ್ನು ಕಳೆದರು. ಅವರು ತಮ್ಮ ಮರಣ ಶಯ್ಯೆಯಲ್ಲಿದ್ದಾಗ, ಜನರು ಭಗವದ್ಗೀತೆಯನ್ನು ತಂದು ಅವರಿಗೆ ಓದಲುನೀಡಿದರು. ಆಗ ಅವರು, “ಆ ಎಲ್ಲಾ ಅಸಂಬದ್ಧಗಳನ್ನು ನನಗೆ ಹೇಳಬೇಡಿ. ನಾನು ನನ್ನ ಜೀವನವನ್ನು ಚೆನ್ನಾಗಿ ಜೀವಿಸಿದ್ದೇನೆ” ಎಂದರು.
ಪೂರ್ಣಾವಧಿ ಪೂವಗ್ರಹಿಕೆಗಳು
ಹಾಗಾದರೆ ನಾನು ಏನುಮಾಡಬೇಕು? ಒಂದು ಸಂಸ್ಕೃತ ಶ್ಲೋಕವಿದೆ, “ಬಾಲಸ್ತಾವತ್ಕ್ರೀಡಾಸಕ್ತ:” – ನೀವು ಒಂದು ಮಗುವಾಗಿದ್ದಾಗ, ಆಟ ಆಡುವುದರಲ್ಲಿ ನೀವು ಸಂಪೂರ್ಣವಾಗಿ ತೊಡಗಿಕೊಂಡಿದ್ದಿರಿ; ನಿಮ್ಮ ಆಟ ಪೂರ್ಣಾವಧಿಯದ್ದಾಗಿತ್ತು. ನೀವು ಯೌವನಾವಸ್ಥೆಗೆ ಬಂದಾಗ, ಆ ಎಲ್ಲಾ ಮಕ್ಕಳಾಟಗಳು ನಿಮಗೆ ಸ್ವಲ್ಪ ಕ್ಷುಲ್ಲಕವಾಗಿ ಕಂಡಿತು. ನೀವು ಹೆಚ್ಚು ಗಂಭೀರ ಮತ್ತು ಕಾರ್ಯೋನ್ಮುಖರಾಗುತ್ತಿರುವಿರಿ ಎಂದು ಭಾವಿಸಿದಿರಿ. ನಂತರ ಏನಾಯಿತು? ನಿಮ್ಮ ಬುದ್ಧಿಶಕ್ತಿಯು ಹಾರ್ಮೋನುಗಳಿಂದ ಅಪಹರಿಸಲ್ಪಟ್ಟಿತು. ಆನಂತರ ನಿಮಗೆ ಯಾವುದನ್ನೂ ಸ್ಪಷ್ಟವಾಗಿ ನೋಡಲಾಗಲಿಲ್ಲ! ಇದ್ದಕ್ಕಿದ್ದಂತೆ, ನೀವು ಒಬ್ಬ ಗಂಡಸು ಅಥವಾ ಹೆಂಗಸನ್ನು ನೋಡಿದ ಕೂಡಲೇ, ನಿಮಗೆ ಏನೇನೋ ಆಯಿತು. ಆನಂತರ ವಯಸ್ಸಾಯಿತು. ವಯಸ್ಸಾದವರು ಸುಮ್ಮನೆ ಚಿಂತಿಸುತ್ತಿರುತ್ತಾರೆ. ಒಂದು ಮಗು ಯಾವಾಗಲೂ ಆಟದಲ್ಲೇ ಮಗ್ನವಾಗಿರುತ್ತದೆ. ನೀವು ಅದರೊಂದಿಗೆ ಪರಮತತ್ವದ ಬಗ್ಗೆ ಮಾತನಾಡಲಾಗದು. ಯೌವನ ಸಂಪೂರ್ಣವಾಗಿ ಹಾರ್ಮೋನುಗಳಿಂದ ಅಪಹೃತವಾಗಿರುತ್ತದೆ. ನೀವು ಅದರ ಬಗ್ಗೆ ಅವರ ಹತ್ತಿರ ಮಾತನಾಡಲಾಗುವುದಿಲ್ಲ. ವೃದ್ಧರಿಗೆ ಸ್ವರ್ಗದಲ್ಲಿ ತಮ್ಮ ಸ್ಥಾನಮಾನವೇನು ಎಂಬ ಚಿಂತೆ. ನೀವು ಅದರ ಬಗ್ಗೆ ಅವರ ಹತ್ತಿರವೂ ಮಾತನಾಡಲಾಗುವುದಿಲ್ಲ. ಹಾಗಾದರೆ ಕೇಳುವವರು ಯಾರಾದರೂ ಇದ್ದಾರಾ? ಒಂದು ಮಗುವೂ ಅಲ್ಲದ, ಯುವಕನೂ ಅಲ್ಲದ, ವೃದ್ಧನೂ ಅಲ್ಲದವನು, ಕೇವಲ ಒಂದು ಜೀವವಾಗಿರುವವನು – ಅಂತಹವನೊಂದಿಗೆ ಮಾತ್ರ ನೀವು ಮಾತನಾಡಬಹುದು.
ಜೀವದ ಒಂದು ತುಣುಕು
ಮತ್ತು ನೀವಿಲ್ಲಿ ಜೀವದ ಒಂದು ತುಣುಕಾಗಿ ಇದ್ದರೆ, ಜೀವನದ ಎಲ್ಲಾ ಅಂಶಗಳೂ ನಿಮಗೆ ಸಂಭವಿಸುತ್ತವೆ. ನೀವಿಲ್ಲಿ ಒಬ್ಬ ಗಂಡಸಾಗಿ ಕುಳಿತರೆ, ಕೆಲವು ಸಂಗತಿಗಳು ನಿಮಗೆ ಸಂಭವಿಸುತ್ತವೆ. ನೀವಿಲ್ಲಿ ಒಬ್ಬ ಹೆಂಗಸಾಗಿ ಕುಳಿತರೆ, ಇನ್ನು ಬೇರೆ ಕೆಲವು ಸಂಗತಿಗಳು ನಿಮಗೆ ಸಂಭವಿಸುತ್ತವೆ. ನೀವಿಲ್ಲಿ ಒಂದು ಮಗುವಾಗಿ ಕುಳಿತರೆ, ನಿಮಗೆ ಬೇರೇನೋ ಸಂಭವಿಸುತ್ತದೆ. ನೀವಿಲ್ಲಿ ವೈದ್ಯರಾಗಿ ಕುಳಿತರೆ, ಅಥವಾ ಇಂಜನಿಯರ್ ಆಗಿ ಕುಳಿತರೆ, ಅಥವಾ ಕಲಾವಿದರಾಗಿ ಕುಳಿತರೆ, ಇದು ಅಥವಾ ಅದಾಗಿ ಕುಳಿತರೆ – ನಿಮಗೆ ವಿಭಿನ್ನ ಸಂಗತಿಗಳು ಸಂಭವಿಸಬಹುದು. ಕೇವಲ ನೀವಿಲ್ಲಿ ಒಂದು ಜೀವವಾಗಿ ಕುಳಿತರೆ ಮಾತ್ರ, ಜೀವಕ್ಕೆ ಏನೇನು ಸಂಭವಿಸಬೇಕೋ ಅದೆಲ್ಲವೂ ನಿಮಗೆ ಸಂಭವಿಸುವುದು.
ನೀವು ಎರಡು ದಿನ ವಯಸ್ಸಿನವರಾಗಿರಬಹುದು ಅಥವಾ ನಿಮಗೆ ಇನ್ನೆರಡೇ ದಿನ ಉಳಿದಿರಬಹುದು, ಯಾವುದರೊಂದಿಗೂ ಗುರುತಿಸಿಕೊಳ್ಳದೇ, ಸುಮ್ಮನೆ ಜೀವದ ಒಂದು ತುಣುಕಾಗಿರುವುದು ಹೇಗೆ ಎನ್ನುವ ಬಗ್ಗೆ ವಿಚಾರಮಾಡಿ, ಭೂಮಿ ಅಥವಾ ಸ್ವರ್ಗದೊಂದಿಗೆ ಗುರುತಿಸಿಕೊಳ್ಳದೇ, ಸುಮ್ಮನೆ ಇರುವುದನ್ನು ಕಲಿಯಿರಿ. ಆಗ, ನಮಗೆ ಬದುಕಿರಲು ಒಂದು ದಿನವಿದೆಯೋ ಅಥವಾ ನೂರು ವರ್ಷಗಳಿವೆಯೋ ಎನ್ನುವುದರಿಂದ ಪ್ರಯೋಜನವೇನು? ಅದು ಮುಖ್ಯವಲ್ಲದಿದ್ದಾಗ, ಈ ಜೀವಕ್ಕೆ ಏನಾಗಬೇಕೋ ಅದೆಲ್ಲವೂ ಹೇಗಾದರೂ ನಿಮಗೆ ಆಗುತ್ತದೆ. ಮತ್ತು ಅದೇ ಅಂಗೀಕಾರ.
Editor’s Note: Check out “Unraveling Death”, the latest DVD from Sadhguru.