ಸದ್ಗುರು: ಅದೃಷ್ಟವನ್ನು ನಂಬಿಕೊಂಡವರು ಯಾವಾಗಲೂ ನಕ್ಷತ್ರಗಳು, ಗ್ರಹಗಳು, ಸ್ಥಳಗಳು, ಅದೃಷ್ಟದ ಚಪ್ಪಲ್ಲಿ, ಅದೃಷ್ಟದ ಸೋಪ್‌ಗಳು, ಅದೃಷ್ಟದ ಸಂಖ್ಯೆಗಳು – ಇನ್ನೂ ಅನೇಕ ರೀತಿಯ ವಸ್ತುಗಳಿಗೆ ಇಳಿಬಿದ್ದಿರುತ್ತಾರೆ. ಅದೃಷ್ಟದ ಹುಡುಕಾಟದಲ್ಲಿ ಮತ್ತು ಅದಕ್ಕಾಗಿ ಕಾಯುವ ಪ್ರಕ್ರಿಯೆಯಲ್ಲಿ, ಅವರು ತಾವಾಗಿಯೇ ಸುಲಭವಾಗಿ ಸೃಷ್ಟಿಸಬಹುದಾದ ವಿಷಯಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಜೀವನದ ಎಲ್ಲಾ ವಿಷಯಗಳನ್ನು ನಿರ್ಮಿಸಿಕೊಳ್ಳಬೇಕಾದವರು ನೀವೇ. ನಿಮ್ಮ ಶಾಂತಿ ಮತ್ತು ನಿಮ್ಮ ಗೊಂದಲಗಳು, ನಿಮ್ಮ ವಿವೇಕ ಮತ್ತು ಹುಚ್ಚುತನ, ನಿಮ್ಮ ಸಂತೋಷ ಮತ್ತು ದುಃಖಗಳೆಲ್ಲವೂ ನಿಮ್ಮದೇ ಜವಾಬ್ದಾರಿಯಾಗಿದೆ. ನಿಮ್ಮೊಳಗಿನ ದೆವ್ವವೂ ದೈವವೂ ನಿಮ್ಮದೇ ಜವಾಬ್ದಾರಿ.  

ಆಕಸ್ಮಿಕವಾಗಿ ಕೆಲವು ಒಳ್ಳೆಯ ವಿಷಯಗಳು ಘಟಿಸಬಹುದು. ಆದರೆ ನೀವು ಆ ಅವಕಾಶಕ್ಕಾಗಿ ಕಾಯುತ್ತಾ ಕುಳಿತರೆ, ಆ ಒಳ್ಳೆಯ ವಿಷಯಗಳು ನೀವು ನಿಮ್ಮ ಗೋರಿಯಲ್ಲಿರುವಾಗ ಮಾತ್ರ ಸಂಭವಿಸಬಹುದು, ಏಕೆಂದರೆ ಅವು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತವೆ.

ನಿಮ್ಮ ಶಕ್ತಿಗಳಿಗೆ ಅವುಗಳ ಸಂಪೂರ್ಣ ಸಾಮರ್ಥ್ಯಕ್ಕೆ ವ್ಯಕ್ತವಾಗುವ ಅವಕಾಶವನ್ನು ಮಾಡಿಕೊಡುವ ಬದಲು, ನಿಮ್ಮ ಸುತ್ತಲು ಅಗತ್ಯವಾದ ಆಂತರ್ಯ ಹಾಗೂ ಬಾಹ್ಯ ವಾತಾವರಣವನ್ನು ಸೃಷ್ಟಿಸುವ ಮೂಲಕ ಸರಿಯಾದ ಸನ್ನಿವೇಶಗಳು ಸೃಷ್ಟಿಯಾಗುವಂತೆ ಮಾಡುವ ಬದಲು, ದುರದೃಷ್ಟವಶಾತ್, ಅದನ್ನು ನಮಗೆ ಒದಗಿಸಬಹುದಾದ ಬೇರೆ ಇನ್ನೇನಕ್ಕಾಗೋ ನಾವು ಯಾವಾಗಲೂ ಹುಡುಕುತ್ತಿರುತ್ತೇವೆ. 

ಇಂದಿನ ದಿನವನ್ನು, ಬೆಳಗ್ಗೆಯಿಂದ ಸಂಜೆಯವರೆಗೆ ನೀವು ಹೇಗೆ ಅನುಭವಿಸಿದಿರಿ ಎನ್ನುವುದು ಖಂಡಿತವಾಗಿಯೂ ನಿಮ್ಮ ಕೈಯಲ್ಲೇ ಇದೆ. ನಿಮ್ಮ ಸುತ್ತಲಿನ ಜನರೊಂದಿಗೆ ನೀವೆಷ್ಟು ಘರ್ಷಣೆಯನ್ನು ಮಾಡಿಕೊಂಡಿರಿ ಎನ್ನುವುದು, ಕೇವಲ ಆ ಸನ್ನಿವೇಶಗಳು ಹಾಗೂ ಜನರನ್ನು, ಅವರೊಳಗಿನ ಮಿತಿ ಮತ್ತು ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನೀವೆಷ್ಟು ವಿವೇಚನಾರಹಿತವಾಗಿರುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆ. ನೀವು ಧರಿಸಿರಬಹುದಾದಂತಹ ಯಾವುದೇ ಅದೃಷ್ಟದ ಯಂತ್ರಗಳಿಂದ ಖಂಡಿತವಾಗಿಯೂ ಅದು ನಿರ್ಧಾರವಾಗುವುದಿಲ್ಲ. ನೀವೆಷ್ಟು ವಿವೇಚನೆಯಿಂದ, ಬುದ್ಧಿವಂತಿಕೆಯಿಂದ, ಮತ್ತು ನಿಮ್ಮ ಸುತ್ತಲಿನ ಜೀವನವನ್ನು ಎಷ್ಟು ಕಾಳಜಿಯಿಂದ ನೋಡುತ್ತೀರಿ ಎಂಬುದರ ಮೇಲೆ ಮಾತ್ರ ಅದು ಅವಲಂಬಿಸಿರುತ್ತದೆ.
 

ನಿಮ್ಮ ಜೀವನದಲ್ಲಿ ಉತ್ತಮವಾದ ಸಂಗತಿಗಳು ನಡೆಯುತ್ತಿದ್ದು, ಅದರ ಕಾರಣ ನಿಮಗೆ ಗೊತ್ತಿಲ್ಲದೇ ಇದ್ದರೆ, ನೀವು ಹಳಸಿದ ಆಹಾರವನ್ನು ತಿನ್ನುತ್ತಿದ್ದೀರಿ ಎಂದು ನಾನು ಹೇಳುತ್ತೇನೆ.

ಒಮ್ಮೆ, ಇಬ್ಬರು ವ್ಯಕ್ತಿಗಳು ಏರ್ಪೋರ್ಟ್‌ನಲ್ಲಿ ಭೇಟಿಯಾದರು. ಒಬ್ಬ ನಿಜವಾಗಿಯೂ ದುಃಖಿತನಾಗಿ ಕಾಣುತ್ತಿದ್ದ. ಹಾಗಾಗಿ ಇನ್ನೊಬ್ಬ “ಯಾಕೆ ಹೀಗಿದ್ದೀಯ? ನಿನಗೇನಾಯ್ತು?” ಎಂದು ಕೇಳಿದ.

ಅದಕ್ಕೆ ಆ ವ್ಯಕ್ತಿ, “ಏನಂತ ಹೇಳೋದು? ನನ್ನ ಮೊದಲನೇ ಹೆಂಡತಿ ಕ್ಯಾನ್ಸರ್‌ನಿಂದ ಸತ್ತಳು. ನನ್ನ ಎರಡನೇ ಹೆಂಡತಿ ನನ್ನ ನೆರೆಮನೆಯವನ ಜೊತೆ ಓಡಿಹೋದಳು. ನನ್ನ ಮಗ ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದರಿಂದ ಜೈಲಿನಲ್ಲಿದ್ದಾನೆ. ನನ್ನ ಹದಿನಾಲ್ಕು ವರ್ಷದ ಮಗಳು ಈಗ ಗರ್ಭಿಣಿ. ನನ್ನ ಮನೆಗೆ ಸಿಡಿಲು ಬಡಿಯಿತು. ಇವತ್ತು ಶೇರ್ ಮಾರ್ಕೆಟ್‌ನಲ್ಲಿ ನನ್ನೆಲ್ಲಾ ಶೇರ್‌ಗಳು ಬಿದ್ದು ಹೋದವು ಮತ್ತು ನನ್ನ ವೈದ್ಯಕೀಯ ವರದಿ ನನಗೆ ಏಡ್ಸ್ ಇದೆ ಎಂದು ಹೇಳುತ್ತಿದೆ.” ಎಂದನು.

ಇದನ್ನು ಕೇಳಿದ ಇನ್ನೊಬ್ಬ ವ್ಯಕ್ತಿ “ಅಬ್ಬಾ! ಎಂಥಾ ದುರಾದೃಷ್ಟ ಬಂದಿದೆ ನಿಮಗೆ! ಅಂದಹಾಗೆ, ನೀವೇನು ಮಾಡಿಕೊಂಡಿದ್ದೀರಿ? ನಿಮ್ಮ ವೃತ್ತಿ ಏನು?” ಎಂದು ಕೇಳಿದ.

ಅದಕ್ಕೆ ಆ ವ್ಯಕ್ತಿ “ನಾನು ಅದೃಷ್ಟದ ಹರಳುಗಳನ್ನ ಮಾರುತ್ತೇನೆ”. ಎಂದ.

ಇಲ್ಲಿ ವಿಷಯ ಏನೆಂದರೆ, ನೀವೊಂದು ನಿರ್ದಿಷ್ಟ ರೀತಿಯಲ್ಲಿದ್ದರೆ, ಕೆಲವು ವಿಷಯಗಳು ನಿಮ್ಮತ್ತ ಆಕರ್ಷಿತವಾಗುತ್ತವೆ. ನೀವು ಮತ್ತಿನ್ಯಾವುದೋ ರೀತಿಯಲ್ಲಿದ್ದರೆ, ಕೆಲವು ಇತರ ವಿಷಯಗಳು ನಿಮ್ಮ ಕಡೆಗೆ ಆಕರ್ಷಿತವಾಗುತ್ತವೆ. ಒಂದು ಹೂಬಿಡುವ ಪೊದೆ ಮತ್ತು ಒಂದು ಒಣಗಿದ ಮುಳ್ಳಿನ ಪೊದೆ ಒಂದು ಕಡೆ ಇದ್ದರೆ, ಎಲ್ಲಾ ಜೇನ್ನೊಣಗಳು ಹೂಬಿಡುವ ಪೊದೆಯ ಕಡೆಗೆ ಆಕರ್ಷಿತವಾಗುತ್ತವೆ. ಹೂಬಿಡುವ ಪೊದೆ ಅದೃಷ್ಟವನಲ್ಲ, ಬದಲಾಗಿ, ಸುಗಂಧವನ್ನು ಹೊಂದಿದೆ. ನೀವು ಆ ಸುಗಂಧವನ್ನು ನೋಡಲು ಸಾಧ್ಯವಾಗದೇ ಇರಬಹುದು, ಆದರೆ ಅದು ಎಲ್ಲವನ್ನೂ ತನ್ನತ್ತ ಸೆಳೆಯುತ್ತದೆ. ಜನರು ಮುಳ್ಳು ಪೊದೆಗಳಿಂದ ದೂರ ಸರಿಯುತ್ತಾರೆ ಏಕೆಂದರೆ ಅದು ಇನ್ನೊಂದು ರೀತಿಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಬಹುಶಃ ಇವೆರಡಕ್ಕೂ ತಾವು ನಿರ್ಮಿಸುತ್ತಿರುವ ವಾತಾವರಣದ ಬಗ್ಗೆ ಪ್ರಜ್ಞೆ ಇಲ್ಲದಿರಬಹುದು, ಆದರೆ ನಡೆಯಬೇಕಾದ ಸಂಗತಿಗಳು ಅವು ನಡೆಯಬೇಕಾದ ರೀತಿಯಲ್ಲೇ ನಡೆಯುತ್ತಿವೆ.

ಹಾಗಾಗಿ, ನಿಮ್ಮ ಜೀವನದಲ್ಲಿ ಉತ್ತಮವಾದ ಸಂಗತಿಗಳು ನಡೆಯುತ್ತಿದ್ದು, ಅದರ ಕಾರಣ ನಿಮಗೆ ಗೊತ್ತಿಲ್ಲದೇ ಇದ್ದರೆ, ನೀವು ಹಳಸಿದ ಆಹಾರವನ್ನು ತಿನ್ನುತ್ತಿದ್ದೀರಿ ಎಂದು ನಾನು ಹೇಳುತ್ತೇನೆ. ಇದರರ್ಥ ನಿಮ್ಮ ಆಹಾರವನ್ನು ನೀವು ಬೇರೆಲ್ಲೋ, ಬಹಳ ಹಿಂದೆಯೇ ಬೇಯಿಸಿದ್ದೀರಿ ಮತ್ತು ಈಗಲೂ ಒಳ್ಳೆಯ ಆಹಾರವನ್ನೇ ತಿನ್ನುತ್ತಿದ್ದೀರಿ. ಆದರೆ ಅದು ಹಳಸಿದೆ, ಮತ್ತು ದಿನದಿಂದ ದಿನಕ್ಕೆ, ಹೆಚೆಚ್ಚು ಹಳಸಿಹೋಗುತ್ತಿದೆ. ಅದೇ ನಿಮ್ಮ ಜೀವನದಲ್ಲಿ ಉತ್ತಮವಾದ ಸಂಗತಿಗಳು ನಡೆಯುತ್ತಿದ್ದು, ಅದರ ಕಾರಣ ನಿಮಗೆ ತಿಳಿದಿದ್ದರೆ, ನೀವು ನಿಮ್ಮ ಆಹಾರವನ್ನು ಇಂದು ಪ್ರಜ್ಞಾಪೂರ್ವಕವಾಗಿ ಬೇಯಿಸಿದ್ದೀರಿ ಎಂದರ್ಥ. ಆದರೆ ನಿಮ್ಮ ಜೀವನದಲ್ಲಿ ನಿಜವಾಗಿಯೂ ಕೆಟ್ಟ ಪರಿಸ್ಥಿತಿಗಳು ಎದುರಾಗುತ್ತಿದ್ದು, ಮತ್ತು ಏಕೆ ಹಾಗಾಗುತ್ತಿದೆ ಎಂದು ನಿಮಗೆ ಗೊತ್ತಿಲ್ಲದೇ ಇದ್ದರೆ, ನೀವು ಹಳಸಿ ಕೊಳೆತುಹೋಗಿರುವ ಆಹಾರವನ್ನು ತಿನ್ನುತ್ತಿದ್ದೀರಿ ಎಂದರ್ಥ.
 

 

ಅದೃಷ್ಟ – ನೀವು ಕುರುಡಾದಾಗ

"ದೃಷ್ಟಿ" ಎಂದರೆ "ನೋಡುವುದು", “ಅದೃಷ್ಟಿ" ಎಂದರೆ "ನೋಡಲು ಸಾಧ್ಯವಾಗದಿರುವುದು" ಎಂದರ್ಥ. ಸದ್ಯದಲ್ಲಿ ನೀವು ನಿಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದೀರಿ. ನಿಮಗೆ ನೋಡಲು ಸಾಧ್ಯವಿದಿದ್ದರೆ, ಯಾವ ಸಂಗತಿ ಘಟಿಸಿದರೂ ಸಹ ಅದು ಯಾವ ಕಾರಣಕ್ಕಾಗಿ ನಡೆಯಿತು ಎನ್ನುವುದು ನಿಮಗೆ ತಿಳಿದಿರುತ್ತಿತ್ತು. ನಿಮಗೆ ನೋಡಲು ಸಾಧ್ಯವಾಗದಿದ್ದಾಗ, ಯಾವುದೇ ವಿಷಯಗಳಾಗಲಿ, ಅವು ಗೊತ್ತುಗುರಿಯಿಲ್ಲದೆ ಅಥವಾ ಆಕಸ್ಮಿಕವಾಗಿ ಸಂಭವಿಸುತ್ತಿವೆ ಎಂದು ನೀವು ಭಾವಿಸುತ್ತೀರಿ. ಅದೊಂದು ಅದೃಷ್ಟ ಇಲ್ಲವೇ ದುರದೃಷ್ಟವೆಂದು ನೀವು ತಿಳಿಯುತ್ತೀರಿ. ಇದು ಅದೃಷ್ಟಕ್ಕೆ ನೀಡಬಹುದಾದ ಸೂಕ್ತವಾದ ವಿವರಣೆ.

ಆಧ್ಯಾತ್ಮಿಕರಾಗುವುದರ ಅರ್ಥ ನೀವು ನಿಮ್ಮ ಜೀವನವನ್ನು 100% ನಿಮ್ಮ ಕೈಗೆ ತೆಗೆದುಕೊಂಡಿದ್ದೀರಿ ಎಂದು.

ಆಧ್ಯಾತ್ಮಿಕರಾಗುವುದರ ಅರ್ಥ ನೀವು ನಿಮ್ಮ ಜೀವನವನ್ನು 100% ನಿಮ್ಮ ಕೈಗೆ ತೆಗೆದುಕೊಂಡಿದ್ದೀರಿ ಎಂದು. ನಿಮ್ಮ ಜೀವನವನ್ನು 100% ನಿಮ್ಮ ಕೈಗೆ ತೆಗೆದುಕೊಂಡಾಗ ಮಾತ್ರ, ನೀವು 100% ಜಾಗೃತರಾಗುತ್ತೀರಿ ಮತ್ತು ನಿಮ್ಮ ಜೀವನದಲ್ಲಿ ದೈವವು ಉದ್ಭವಿಸುವ ಸಾಧ್ಯತೆ ಸೃಷ್ಟಿಯಾಗುತ್ತದೆ.

ಇದು ನಿಮ್ಮ ಜೀವನವನ್ನು ನೀವು ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಳ್ಳುವ ಸಮಯ. ಅದೃಷ್ಟ, ನಕ್ಷತ್ರಗಳು ಮತ್ತು ಗ್ರಹಗಳಿಗೆ ಜೋತುಬೀಳಬೇಡಿ. ಇವೆಲ್ಲಾ ನಿರ್ಜೀವ ವಸ್ತುಗಳು. ಮಾನವ ಸ್ವಭಾವವು ನಿರ್ಜೀವ ವಸ್ತುಗಳ ಹಣೆಬರಹವನ್ನು ನಿರ್ಧರಿಸಬೇಕೆ ಅಥವಾ ನಿರ್ಜೀವ ವಸ್ತುಗಳು ಮಾನವ ಸ್ವಭಾವದ ಹಣೆಬರಹವನ್ನು ನಿರ್ಣಯಿಸಬೇಕೇ? ಅದು ಯಾವ ರೀತಿಯಲ್ಲಿರಬೇಕು? ನಿರ್ಜೀವ ವಸ್ತುಗಳಿಗೆ ಏನಾಗಬೇಕು ಎಂಬುದನ್ನು ಮಾನವ ಸ್ವಭಾವವು ನಿರ್ಧರಿಸಬೇಕು ಅಲ್ಲವೇ? ಆದರೆ ಒಂದು ನಕ್ಷತ್ರವು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತಿದ್ದೇ ಆದರೆ, ನಿರ್ಜೀವ ವಸ್ತುಗಳು ನಿಮ್ಮ ವಿಧಿಯನ್ನು ನಿರ್ಧರಿಸುತ್ತಿವೆ ಎಂದರ್ಥ.

ನಿಮ್ಮ ಮೇಲೆ ಪ್ರಭಾವ ಬೀರಲು ಇಂತಹ ವಿಷಯಗಳಿಗೆ ಅವಕಾಶ ಮಾಡಿಕೊಡಬೇಡಿ, ಏಕೆಂದರೆ ಒಮ್ಮೆ ನೀವದರಲ್ಲಿ ಸಿಲುಕಿಕೊಂಡಾಗ, ನೀವೊಂದು ರೀತಿಯ ತುಳಿತಕ್ಕೆ ಒಳಗಾಗುತ್ತೀರಿ ಮತ್ತು ನಿಮ್ಮ ಜೀವನದಲ್ಲಿ ನೀವು ಮಾಡಬಹುದಾದ ಸಂಗತಿಗಳು ಸೀಮಿತವಾಗಿಬಿಡುತ್ತವೆ. ಅದನ್ನು ಮೀರಿ ಹೋಗಲು ನಿಮಗೆ ಸಾಧ್ಯವಾಗುವುದಿಲ್ಲ. ಅದು ನಿಮ್ಮ ಬೆಳವಣಿಗೆ ಮತ್ತು ಸಾಧ್ಯತೆಯನ್ನು ನಿರ್ಬಂಧಿಸುತ್ತದೆ.
 

ನಿಮ್ಮ ಸುತ್ತಲಿನ ಜನರೊಂದಿಗೆ ನೀವೆಷ್ಟು ಘರ್ಷಣೆಯನ್ನು ಮಾಡಿಕೊಂಡಿರಿ ಎನ್ನುವುದು, ಕೇವಲ ಆ ಸನ್ನಿವೇಶಗಳು ಹಾಗೂ ಜನರನ್ನು, ಅವರೊಳಗಿನ ಮಿತಿ ಮತ್ತು ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನೀವೆಷ್ಟು ವಿವೇಚನಾರಹಿತವಾಗಿರುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆ.

ಆಕಸ್ಮಿಕವಾಗಿ ಕೆಲವು ಒಳ್ಳೆಯ ವಿಷಯಗಳು ಘಟಿಸಬಹುದು. ಆದರೆ ನೀವು ಆ ಅವಕಾಶಕ್ಕಾಗಿ ಕಾಯುತ್ತಾ ಕುಳಿತರೆ, ಆ ಒಳ್ಳೆಯ ವಿಷಯಗಳು ನೀವು ನಿಮ್ಮ ಗೋರಿಯಲ್ಲಿರುವಾಗ ಮಾತ್ರ ಸಂಭವಿಸಬಹುದು, ಏಕೆಂದರೆ ಅವು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತವೆ.

ನೀವು ಆಕಸ್ಮಿಕವಾಗಿ ನಿಮ್ಮ ಜೀವವವನ್ನು ನಡೆಸಿದಾಗ, ನೀವು ಭಯ ಮತ್ತು ಆತಂಕದಲ್ಲಿ ಜೀವಿಸುತ್ತೀರಿ. ಅದೇ ನೀವು ಜೀವನದ ಮೇಲಿನ ಪ್ರೀತಿ ಹಾಗೂ ಸಾಮರ್ಥ್ಯದ ಮೂಲಕ ಬದುಕಿದಾಗ, ಏನು ನಡೆಯುತ್ತಿದೆ ಅಥವಾ ನಡೆಯುತ್ತಿಲ್ಲ ಎನ್ನುವುದು ನಿಮಗೆ ಮುಖ್ಯವಾಗುವುದಿಲ್ಲ. ಕನಿಷ್ಟಪಕ್ಷ ನಿಮಗೇನಾಗುತ್ತಿದೆ ಎಂಬುದರ ಮೇಲೆ ನೀವು ನಿಯಂತ್ರಣವನ್ನು ಹೊಂದಿರುತ್ತೀರಿ. ಹಾಗಿದ್ದಾಗ ಅದು ಹೆಚ್ಚು ಸ್ಥಿರವಾದ ಜೀವನವಾಗಿರುತ್ತದೆ.

ಸಂಪಾದಕರ ಟಿಪ್ಪಣಿ: ಹಠ ಯೋಗ ಮುಕ್ತಿಗೆ ಒಂದು ದ್ವಾರವಾಗಿದ್ದು, ನಮ್ಮ ಪ್ರಚೋದನೆಯನ್ನು ಮೀರಿ ಅರಿವಿನ ಕಡೆಗೆ ಸಾಗುವ ಸಾಧ್ಯತೆಯನ್ನು ಅದು ನೀಡುತ್ತದೆ ಎಂದು ಸದ್ಗುರುಗಳು ವಿವರಿಸುತ್ತಾರೆ. ಈ ಲೇಖನವನ್ನು ಓದಿ: Project Human : Moving from Compulsiveness to Consciousness