ಜೀವನೋಪಾಯ ಮುಖ್ಯವೋ? ಆತ್ಮ ಸಾಕ್ಷಾತ್ಕಾರವೋ?
ಸದ್ಗುರುಗಳು, ಸಮಯದ ನಿರ್ವಹಣೆಯ ಬಗ್ಗೆಯ ಪ್ರಶ್ನೆಯೊಂದನ್ನು ಉತ್ತರಿಸತ್ತಾ, ಜೀವನೋಪಾಯಕ್ಕೆ ಮೇಲೇರಲು ಶ್ರಮಿಸುವುದು ಒಳ್ಳೆಯದೋ ಅಥವಾ ಆತ್ಮ ಸಾಕ್ಷಾತ್ಕಾರಕ್ಕಾಗಿ ಶ್ರಮಿಸುವುದು ಒಳ್ಳೆಯದೋ, ಎಂಬುದನ್ನು ವಿವರಿಸುತ್ತಾರೆ.
ಪ್ರಶ್ನೆ: ನಾವು ನಮ್ಮ ಆತ್ಮ ವಿಶ್ವಾಸವನ್ನು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ವೃತ್ತಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಿದ್ದರೆ, ಅದಕ್ಕಾಗಿ ತುಂಬಾ ಸಮಯ ವಿನಿಯೋಗವಾಗುತ್ತದೆ. ಹೀಗಿದ್ದಾಗ, ಆತ್ಮ ಸಾಕ್ಷಾತ್ಕಾರಕ್ಕಾಗಿ ಸಮಯವನ್ನು ಹೇಗೆ ಒದಗಿಸಿಕೊಳ್ಳುವುದು?
ಸದ್ಗುರು: ನಿಮ್ಮೆಲ್ಲರಿಗೂ ಆತ್ಮ ಸಾಕ್ಷಾತ್ಕಾರದ ಬಗ್ಗೆ ಇರುವ ಕಲ್ಪನೆಯನ್ನು, ಮೊದಲು ಸ್ಪಷ್ಟಪಡಿಸಿಕೊಳ್ಳೋಣ. ನಿಮ್ಮ ಹತ್ತಿರ ಸೆಲ್ಫೋನ್ ಅಥವಾ ಕ್ಯಾಮೆರಾ ಇದೆಯೇ? ಅವು ಅಥವಾ ಇನ್ಯಾವುದೇ ಉಪಕರಣವಾಗಲಿ, ನೀವು ಅದರ ಬಗ್ಗೆ ಎಷ್ಟು ಹೆಚ್ಚು ತಿಳಿದುಕೊಳ್ಳುತ್ತೀರೋ, ಅಷ್ಟು ಸಮರ್ಥವಾಗಿ ಅದನ್ನು ಬಳಸಬಹುದು ಎನ್ನುವುದು ಸತ್ಯವಲ್ಲವೆ? ಕ್ಯಾಮೆರಾ ಉಪಯೋಗಿಸಲು ಗೊತ್ತಿಲ್ಲದವರಿಗೆ ನೀವು ಕೊಟ್ಟರೆ ಅವರಿಗೆ ಅದನ್ನು ಚಲಾಯಿಸಲು ಕೂಡಾ ಸಾಧ್ಯವಾಗದು. ಆದರೆ ಅದರ ಬಗ್ಗೆ ತಿಳಿದವರಿಗೆ ಕೊಟ್ಟರೆ, ಅದರಲ್ಲಿ ಚಮತ್ಕಾರವನ್ನೇ ಸೃಷ್ಟಿಸುತ್ತಾರೆ, ಅದನ್ನು ನೋಡಿ ಆನಂದಿಸಲು ಜನ ಗಂಟೆಗಟ್ಟಲೆ ಕತ್ತಲೆಯಲ್ಲಿ ಕುಳಿತುಕೊಳ್ಳಲು ತಯಾರಿರುತ್ತಾರೆ.
ನೀವು ನನ್ನೊಂದಿಗೆ ಕಾರಿನಲ್ಲಿ ಸವಾರಿಗೆ ಬಂದರೆ, ಒಂದು ಕಾರಿನ ಜೊತೆ ಏನೇನೆಲ್ಲ ಮಾಡಬಹುದು ಎನ್ನುವುದನ್ನು ನಿಮಗೆ ತೋರಿಸುತ್ತೇನೆ. ನೀವು ಒಂದು ವಸ್ತುವಿನ ಬಗ್ಗೆ ಹೆಚ್ಚೆಚ್ಚು ತಿಳಿದಷ್ಟು, ಅದನ್ನು ಹೇಗೆಲ್ಲಾ ಬಳಸಬಹುದು ಎನ್ನುವುದರ ತಿಳಿವು ಬಹಳಷ್ಟು ವೃದ್ಧಿಸುತ್ತದೆ. ನಾವು ಉಪಯೋಗಿಸುವ ಎಲ್ಲಾ ವಸ್ತುಗಳಿಗೂ ಇದು ಅನ್ವಯಿಸುವಾಗ, ನಮ್ಮನ್ನೇ ತಿಳಿಯಲು ಕೂಡ ಅನ್ವಯಿಸಬೇಕು ಅಲ್ಲವೇ? ನೀವು ನಿಮ್ಮನ್ನು ಹೆಚ್ಚೆಚ್ಚು ಅರಿತುಕೊಂಡಷ್ಟೂ, ನೀವು ನಿಮ್ಮನ್ನು ಚೆನ್ನಾಗಿ ನಿಭಾಯಿಸಬಹುದು. ಆತ್ಮ ಸಾಕ್ಷಾತ್ಕಾರ ಹಿಮಾಲಯದ ಗುಹೆಯಲ್ಲೆಲ್ಲೊ ನಡೆಯುವಂಥದ್ದು ಎಂದುಕೊಳ್ಳಬೇಡಿ. ಅದು ಅಲ್ಲಿಯೂ ನಡೆಯುತ್ತದೆ. ಆದರೆ, ನಿಮ್ಮ ಸನ್ನಿವೇಶಕ್ಕೆ ಅನ್ವಯಿಸಿಕೊಂಡು, ನೀವದನ್ನು ಅರ್ಥ ಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ.
ಆತ್ಮ ಸಾಕ್ಷಾತ್ಕಾರ ಎಂದರೆ ನಿಮ್ಮನ್ನು ನೀವು ಅರಿತುಕೊಳ್ಳುವುದು. ಹಾಗಿದ್ದಾಗ, ಅದು ಹೇಗೆ ನಿಮ್ಮ ವೃತ್ತಿಗೆ ವಿರೋಧವಾಗುತ್ತದೆ? ನೀವು ಜೀವನದಲ್ಲಿ ಮಾಡಬಯಸುವ ಯಾವುದೇ ವಿಷಯಕ್ಕೇ ಆಗಲಿ ಅದು ಹೇಗೆ ವ್ಯತಿರಿಕ್ತವಾಗುತ್ತದೆ? ನಾನು ನಿಮ್ಮನ್ನು ಕೇಳ ಬಯಸುತ್ತೇನೆ, ನೀವು ನಿಮ್ಮ ಬಗ್ಗೆ ತಿಳಿದುಕೊಳ್ಳದೆಯೇ, ಉತ್ತಮ ಬಾಳ್ವೆ ನಡೆಸಲು ಹೇಗೆ ಸಾಧ್ಯ? ಜೀವನ ಪ್ರಕ್ರಿಯೆಯ ಬಗ್ಗೆ ಏನನ್ನೂ ಅರಿತುಕೊಳ್ಳದೆಯೇ ಹೇಗೆ ಆತ್ಮವಿಶ್ವಾಸದಿಂದ ಇರುವುದು ಎನ್ನುವುದನ್ನು ಜನರು ಒಬ್ಬರಿಗೊಬ್ಬರು ಕಲಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಪಷ್ಟತೆ ಇಲ್ಲದ ಆತ್ಮವಿಶ್ವಾಸ ದುರಂತಕ್ಕೆ ದಾರಿ.
ದುರದೃಷ್ಟವೆಂದರೆ, ಆತ್ಮವಿಶ್ವಾಸ ಸ್ಪಷ್ಟತೆಗೆ ಪರ್ಯಾಯ ಎಂದು ತಿಳಿಯಲಾಗಿದೆ. ನಾವು ನಿಮ್ಮ ಕಣ್ಣಿಗೆ ಪಟ್ಟಿ ಕಟ್ಟಿ ಸುತ್ತಲೂ ನಡೆದಾಡಲು ಹೇಳಿದರೆ, ನೀವು ಸ್ವಲ್ಪ ಸೂಕ್ಷ್ಮಗ್ರಾಹಿಯಾಗಿದ್ದರೆ, ನಿಮ್ಮ ಕೈ, ಕಾಲುಗಳ ಮೂಲಕ ಸುತ್ತಮುತ್ತಲಿನ ಜಾಗದ ಅನುಭವಪಡೆದು ನಿಧಾನವಾಗಿ ನಡೆಯುತ್ತೀರಿ. ಇದರ ಬದಲಾಗಿ, ನೀವು ಅತಿಯಾದ ಆತ್ಮವಿಶ್ವಾಸದಿಂದ ಗಮನ ಹರಿಸದೆಯೆ ನಡೆದರೆ, ಹಾದಿಯಲ್ಲಿರುವ ಕಲ್ಲುಗಳು ಕರುಣೆ ತೋರುವುದಿಲ್ಲ. ಅದೇ ರೀತಿ ನಿಮ್ಮಲ್ಲಿ ಸ್ಪಷ್ಟತೆ ಇಲ್ಲದೆ ಬರಿ ಆತ್ಮವಿಶ್ವಾಸವಿದ್ದರೆ ಜೀವನವೂ ನಿಮಗೆ ಕರುಣೆ ತೋರುವುದಿಲ್ಲ. ನಿಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಲು, ಏನೇ ಮಾಡಿದರೂ ಅದರಲ್ಲಿ ಯಶಸ್ಸು ಕಾಣಲು, ಜೀವನದಲ್ಲಿ ಏನನ್ನೇ ಆಗಲಿ ಅಚ್ಚುಕಟ್ಟಾಗಿ ಮಾಡಲು, ನಿಮಗೆ ಸ್ಪಷ್ಟತೆ ಇರಬೇಕೇ ವಿನಹ ಆತ್ಮವಿಶ್ವಾಸ ಅಲ್ಲ.
“ನಿಮ್ಮ” ಬಗ್ಗೆ ನೀವು ಹೆಚ್ಚು ತಿಳಿದಷ್ಟೂ, ನೀವು ಹೆಚ್ಚೆಚ್ಚು ಸಾಧಿಸಬಹುದು. ಬೇರೆ ಉಪಕರಣಗಳನ್ನು ನೀವು ಹೊರಗಡೆಯಿಂದಷ್ಟೆ ತಿಳಿಯಬಹುದು. ಆದರೆ, “ನಿಮ್ಮ” ಬಗ್ಗೆ ನೀವು ಆಂತರ್ಯದಲ್ಲಿಯೇ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ನೀವು ಅದನ್ನು ಆಂತರ್ಯದಿಂದ ಅರಿತುಕೊಳ್ಳಬಹುದು. ನೀವು ಹಾಗೆ ಸಂಪೂರ್ಣವಾಗಿ ತಿಳಿದುಕೊಂಡರೆ ಅದು ಚಮತ್ಕಾರದ ರೀತಿ ಇರುತ್ತದೆ. ನೀವು ಏನೇ ಮಾಡಿದರೂ ಅದು ಚಮತ್ಕಾರವೇ ಆಗಿರುತ್ತದೆ. ನೀವು ಕೇವಲ ಕುಳಿತು, ಕಣ್ಣು ಮುಚ್ಚಿಯೂ ಕೆಲಸ ಸಾಧಿಸಬಹುದು. ನೀವು ಮಲಗಿದ್ದರೂ ಸಹ ಮಾಡಬಹುದು. ನೀವು ಎಚ್ಚರವಿರಲಿ ಅಥವಾ ಮಲಗಿರಲಿ, ನಿಮಗೆ ಮಾನವ ವ್ಯವಸ್ಥೆಯ ಪೂರ್ಣ ಅರಿವಿದ್ದರೆ ನೀವು ವಿಸ್ಮಯಗೊಳ್ಳುವಂಥ ಕೆಲಸಗಳನ್ನು ಮಾಡಬಹುದು.
Editor’s Note: In modern societies, enhancing the quality of our life has become one of our main objectives. In this pursuit, we tend to emphasize enhancing external situations: our job, business, family and the abounding accumulation of material things; in spite of all the efforts, our personal and professional lives are too often painfully lacking happiness and fulfilment.
In the ebook “Inner Management”, Sadhguru shifts our focus to the inside, pointing out a way to establish a true sense of inner peace and wellbeing. Download now.