ನಿಮಗೆ ಕಾಳಜಿ ಇರುವ ಕೆಲಸವನ್ನು ಮಾಡಿ
ಕೆಲಸದ ಮೂಲಕ ಸಂತೃಪ್ತಿಯನ್ನು ಕಂಡುಕೊಳ್ಳಲು ಸಾಧ್ಯವೇ? ನಾವು ಮಾಡುವ ಕೆಲಸ ನಮ್ಮ ಜೀವನವನ್ನು ಹೇಗೆ ವರ್ಧಿಸಬಹುದು ಎಂಬುದನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ.
ಪ್ರಶ್ನೆ: ನಮಸ್ಕಾರ ಸದ್ಗುರು. ನನಗೆ ನಿಮ್ಮ ಗುರಿ ಮತ್ತು ಯೋಜನೆಯಲ್ಲಿ ಪಾಲ್ಗೊಳ್ಳಬೇಕೆಂಬ ಆಸೆಯಿದೆ, ಮತ್ತು ನೀವು ಹೇಳುವಂತೆ ಒಂದು ಪರಿಪೂರ್ಣ ಜೀವನವನ್ನು ನಡೆಸಬೇಕೆಂದಿದೆ. ಮತ್ತು ಎಲ್ಲರಿಗೂ ಒಳ್ಳೆಯದಾಗಬೇಕೆಂದು ನಾನು ಬಯಸುತ್ತೇನೆ. ಆದರೆ ನಾನು ಈ ಹಾದಿಯಲ್ಲಿ ಕೊನೆಯವರೆಗೂ ಸಾಗುತ್ತೇನೆಯೋ ಇಲ್ಲವೋ ಎಂಬ ಭಯ ನನ್ನಲ್ಲಿ ಎಲ್ಲೋ ಒಂದು ಕಡೆಯಿದೆ. ಅದು ನನ್ನನ್ನು ಮುಂದಿನ ಹೆಜ್ಜೆ ಇಡದಂತೆ ಮಾಡುತ್ತಿದೆ. ನಾನು ಈ ಭಯದಿಂದ ಹೇಗೆ ಹೊರಬರಲಿ?
ಸದ್ಗುರು: ಜಗತ್ತನ್ನು ಆನಂದಮಯಗೊಳಿಸುವ ಇಂತಹ ಬೃಹತ್ ಗುರಿಯನ್ನು ಇಟ್ಟುಕೊಂಡಿರುವ ನಾವು, ಸಾಗುವ ಹಾದಿಯಲ್ಲಿ ಎಲ್ಲೋ ಒಂದು ಕಡೆ ಸತ್ತುಹೋಗುತ್ತೇವೆ ಎಂಬುದನ್ನು ನಾನು ನಿಮಗೆ ಖಂಡಿತವಾಗಿ ಹೇಳಬಲ್ಲೆ. ಹಾಗಾಗಿ ಕೊನೆಮುಟ್ಟುವ ಬಗ್ಗೆ ಚಿಂತಸಬೇಡಿ. ನಾಳೆಯೇ ಇಡೀ ಜಗತ್ತು ಆನಂದಮಯವಾಗಿಬಿಡುತ್ತದೆ ಎಂದು ನೀವು ಭಾವಿಸುತ್ತೀರಾ? ಇಪ್ಪತ್ತೈದನೇ ವಯಸ್ಸಿನಲ್ಲಿ, ನಾನು ಪರಮಾನಂದದ ಸ್ಥಿತಿಯಲ್ಲಿ ಕುಳಿತಿದ್ದಾಗ, ನಾನು ನಿಜವಾಗಿಯೂ ಇಡೀ ಜಗತ್ತನ್ನು ಆನಂದಮಯವನ್ನಾಗಿಸುತ್ತೇನೆಂದು ಭಾವಿಸಿದ್ದೆ, ಮತ್ತು ಎಲ್ಲರೂ ತಮ್ಮ ಶ್ರೇಯಸ್ಸಿಗಾಗಿ ಏನನ್ನಾದರೂ ಮಾಡುತ್ತಾರೆ ಎಂದು ಭಾವಿಸಿದ್ದೆ. ಇದು ಮೂರು ದಶಕಗಳ ಹಿಂದೆ ನನ್ನ ಭಾವನೆಯಾಗಿತ್ತು. ಆದರೆ, ಜಗತ್ತಿನಲ್ಲಿ ಸ್ವ-ಹಿಂಸಕರು ಬೇಕಾದಷ್ಟು ಜನರಿದ್ದಾರೆ ಎಂದು ಈಗ ನನಗೆ ಅರಿವಾಗಿದೆ. ನಾವು ಕೆಲವು ಲಕ್ಷ ಜನರನ್ನು ತಲುಪಿದ್ದೇವಷ್ಟೆ, ಆದರೆ ಅದು ಇಡೀ ಜಗತ್ತಲ್ಲ.ನಿಮಗೆ ಕಾಳಜಿ ಇರುವ ಕೆಲಸವನ್ನು ಮಾಡಿ
ನನಗೆ ಕಾಳಜಿ ಇರುವ ಕೆಲಸವನ್ನು ನೀವು ಮಾಡಲು ಹೋಗಬೇಡಿ. ನಿಮಗೆ ಕಾಳಜಿ ಇರುವ ಕೆಲಸವನ್ನು ನೀವು ಮಾಡಿ. ನಿಮಗೆ ಕಾಳಜಿ ಇರುವ ಕೆಲಸವನ್ನು ನೀವು ಮಾಡದೇ ಇದ್ದರೆ, ನೀವು ಚೆನ್ನಾಗಿ ಜೀವಿಸಿದಿರೋ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಲು ನೀವು ನಿಮ್ಮ ಜೀವನದ ಕೊನೆಯವರೆಗೆ ಕಾಯಬೇಕಾಗಿಲ್ಲ – ಅದು ಈಗಾಗಲೇ ವ್ಯರ್ಥವಾದ ಜೀವನವಾಗಿರುತ್ತದೆ. ಯಾವುದಾದರೂ ಕೆಲಸ ಮುಖ್ಯವೆಂದು ನಿಮಗನಿಸಿದರೆ, ಅದನ್ನು ನೀವು ಮಾಡಲೇಬೇಕು.
ವಾಸ್ತವವಾಗಿ, ನನ್ನ ಜೀವನವನ್ನು ನೋಡುವುದಾದರೆ, ನಾನು ಕಣ್ಣುಗಳನ್ನು ಮುಚ್ಚಿದರೆ, ಒಂದು ದಿನ ನಾನು ಮತ್ತೆ ಅವನ್ನು ತೆರೆಯದೇ ಹೋಗಬಹುದು. ನನ್ನ ಮಟ್ಟಿಗೆ ಹೇಳುವುದಾದರೆ, ಚಟುವಟಿಕೆಯನ್ನುವುದು ಜಗತ್ತಿನ ಅವಶ್ಯಕತೆಗಳನ್ನು ಆಧರಿಸಿದೆ. ಇಲ್ಲದಿದ್ದರೆ, ನಾನು ಏಕಾಂಗಿಯಾಗಿದ್ದಾಗ ನಾನು ಅತ್ಯುತ್ತಮವಾಗಿರುತ್ತೇನೆ. ಹಾಗಾಗಿ, ನಾನೇಕೆ ಜನರೊಂದಿಗಿರಬೇಕು? ನಾನೇಕೆ ಏನನ್ನಾದರೂ ಮಾಡಬೇಕು? ಆದರೆ ಜಗತ್ತಿನಲ್ಲಿನ್ನೂ ತುಂಬಾ ಕೆಲಸವಾಗಬೇಕಾಗಿದೆ, ಹಾಗಾಗಿ ನಾವು ದಿನಕ್ಕೆ ಇಪ್ಪತ್ತು ಗಂಟೆಗಳ ಕಾಲ ಕೆಲಸಮಾಡುತ್ತಿದ್ದೇವೆ. ನಾನು ಬೆಳಿಗ್ಗೆ ಎದ್ದಾಗ, ನನ್ನ ಗಮನದ ಅಗತ್ಯವಿರುವ ಯಾವುದೋ ಒಂದು ಸಂಗತಿಯನ್ನು ಯಾರೋ ಒಬ್ಬರು ತಂದು ಕಾಯುತ್ತಿರುತ್ತಾರೆ.
ಈ ನನ್ನ ಎಲ್ಲಾ ಚಟುವಟಿಕೆ, ನನಗೆ ಚಟುವಟಿಕೆಯ ಅವಶ್ಯಕತೆಯಿದೆ ಎಂದಲ್ಲ. ನೀವು ನನ್ನನ್ನು ಯಾವುದೇ ಚಟುವಟಿಕೆಯಿಲ್ಲದೇ ಸುಮ್ಮನೆ ಬಿಟ್ಟರೆ, ನಾನು ಚೆನ್ನಾಗಿರುತ್ತೇನೆ. ನಾನು ಒಂದು ಪದವನ್ನೂ ಆಡಬೇಕಿಲ್ಲ ಅಥವಾ ಬರೆಯಬೇಕಿಲ್ಲ. ನಾನೇನನ್ನೂ ಮಾಡಬೇಕಾಗಿಲ್ಲ. ಇದೀಗ, ಮಾಡಬೇಕಾದ್ದು ತುಂಬಾ ಇದೆ, ಆದ್ದರಿಂದ ಚಟುವಟಿಕೆಯ ಅಗತ್ಯವಿದೆ. ಚಟುವಟಿಕೆ ಎಂದಿಗೂ ನಿಮ್ಮ ಬಗ್ಗೆಯಾಗಿರಬಾರದು. ನೀವು ಹೇಗಿದ್ದೀರಿ ಎಂಬುದಷ್ಟೆ ನಿಮ್ಮ ಬಗ್ಗೆಯಾಗಿರಬೇಕು. ನೀವು ಮಾಡುವ ಚಟುವಟಿಕೆಗಳು ನೀವು ಇರುವ ಸಂದರ್ಭಗಳಿಗೆ ತಕ್ಕಂತಿರಬೇಕು. ದುರದೃಷ್ಟವಶಾತ್, ಹೆಚ್ಚಿನ ಮನುಷ್ಯರಿಗೆ, ಅವರ ಚಟುವಟಿಕೆಗಳು ಕೇವಲ ತಮ್ಮ ಬಗ್ಗೆಯೇ ಆಗಿರುತ್ತವೆ. ಅವರು ಜಗತ್ತಿನಲ್ಲಿ ಏನನ್ನಾದರೂ ಮಾಡುತ್ತಿರುತ್ತಾರೆ ಏಕೆಂದರೆ ಅವರಿಗೆ ತಮಗೋಸ್ಕರ ಏನನ್ನಾದರೂ ಸಾಧಿಸಬೇಕಾಗಿರುತ್ತದೆ, ಆದರೆ ಇದು ಸರಿಯಾದ ವಿಧಾನವಲ್ಲ. ಈ ಮೂಲಭೂತ ನ್ಯೂನತೆಯಿಂದಾಗಿಯೇ ಹೆಚ್ಚಿನ ಮಾನಸಿಕ ಕಾಯಿಲೆಗಳು ಉದ್ಭವಿಸುತ್ತವೆ - ಏನೆಂದರೆ ಜನರು ತಾವು ಏನಾದರೊಂದು ಆಗಬೇಕು ಎಂಬ ಉದ್ದೇಶದಿಂದ ಜಗತ್ತಿನಲ್ಲಿ ಏನನ್ನಾದರೂ ಮಾಡುತ್ತಿದ್ದಾರೆ. ಮೊದಲು ನೀವಂದುಕೊಂಡಂತೆ ಇರಿ - ನಂತರ ಚಟುವಟಿಕೆಯನ್ನು ಮಾಡಿ. ನೀವಿದನ್ನು ಅನುಸರಿಸಿದರೆ, ಏನಾಗಬೇಕೋ ಅದು ಆಗುತ್ತದೆ.
ನೀವು ಮಾಡಬೇಕೆಂದುಕೊಂಡ ಕೆಲಸದ ಮೌಲ್ಯವನ್ನು ತಿಳಿದರೆ, ಅದು ಅಗತ್ಯವಾಗಿ ಆಗಬೇಕು ಎಂದು ನೀವು ಭಾವಿಸುವುದಾದರೆ, ನೀವದನ್ನು ಮಾಡಲೇಬೇಕು. ಹೇಗೆ ಮತ್ತು ಯಾವ ಮಟ್ಟದಲ್ಲಿ ಎಂಬುದು ನಿಮಗೆ ಬಿಟ್ಟಿದ್ದು. ಪರಿವರ್ತನೆಯನ್ನು ತರಲು ಪ್ರತಿಯೊಬ್ಬರೂ ತಮ್ಮದೇ ಆದ ಏನೋ ಒಂದನ್ನು ಮಾಡಿದರೆ, ಅದು ಅವರವರ ತೃಪ್ತಿಗಾಗಿ ಮಾಡಿದ ಕೆಲಸವಾಗುತ್ತದೆ ಅಷ್ಟೆ. ನಿಮಗೆ ನಿಜವಾಗಿಯೂ ಪರಿವರ್ತನೆಯನ್ನು ತರಬೇಕೆಂದಿದ್ದರೆ, ನಾವು ನಮ್ಮೆಲ್ಲಾ ಬಲವನ್ನೂ ಒಗ್ಗೂಡಿಸಬೇಕು. ಆದರೆ ಆ ನಿಮ್ಮ ಕೆಲಸ ನಿಮ್ಮನ್ನು ಪರಿಪೂರ್ಣತೆಗೆ ಕೊಂಡೊಯ್ಯುವ ಬಗ್ಗೆಯಾಗಿರಬಾರದು. ನೀವು ಪರಿಪೂರ್ಣರಾಗಿದ್ದೀರಿ, ಹಾಗಾಗಿ ನೀವು ಆ ಕೆಲಸವನ್ನು ಮಾಡುತ್ತೀರಿ ಎಂದಾಗಬೇಕು. ನಿಮಗೆ ಬೇಕಾದ ಕೆಲಸವನ್ನು ಮಾಡಬೇಡಿ, ಬದಲಿಗೆ ಅಗತ್ಯವಾಗಿರುವ ಕೆಲಸವನ್ನು ಮಾಡಿ. ಅದು ಅಗತ್ಯವಾಗಿದ್ದರೆ, ಪ್ರತಿಯೊಬ್ಬ ಜವಾಬ್ದಾರಿಯುತ ಮನುಷ್ಯನೂ ಸಹ ತಯಾರಾಗಿ ನಿಂತು ಅದನ್ನು ಮಾಡಬೇಕು. ಅದು ನೀವು ಕೈಗೊಳ್ಳುವ ಯಾವುದೋ ಒಂದು ಜೀವಿತೋದ್ದೇಶವಾಗಿರಬಾರದು. ಅದು ನಿಮ್ಮ ಮಾನವೀಯತೆಯ ಒಂದು ಅಭಿವ್ಯಕ್ತಿಯಾಗಬೇಕು. ಮತ್ತು ಈ ರೀತಿಯ ಕೆಲಸದ ಒಂದು ವಿಶೇಷತೆಯೇನೆಂದರೆ, ಅದು ನಿಮ್ಮನ್ನು ಅಪಾರವಾಗಿ ಸುಧಾರಿಸುತ್ತದೆ ಕೂಡ.
Editor’s Note: This article is an excerpt from a volunteers’ meet with Sadhguru at the Isha Institute of Inner-sciences in McMinnville, Tennessee, USA, in January 2016. A version of this article was originally published in Isha Forest Flower April 2016. Download as PDF on a “name your price, no minimum” basis or subscribe to the print version.