ನಿಮ್ಮ ನಿಷ್ಠುರತೆಯ ಗೋಡೆಯನ್ನು ಬೀಳಿಸಿ!
ನಾವು ಅರಳಲು ಅವಕಾಶ ನೀಡದ ಅಡ್ಡಿಯನ್ನು ಸೃಷ್ಟಿಸುವ ಅನಮ್ಯತೆಯನ್ನು ಅನೇಕ ಹಂತಗಳಲ್ಲಿ ನಾವು ಹೇಗೆ ಬೆಳೆಸಿಕೊಳ್ಳುತ್ತೇವೆ ಎಂಬುದರ ಬಗ್ಗೆ ಸದ್ಗುರು ಮಾತನಾಡುತ್ತಾರೆ.
ಅರ್ಥಕೋಶ: ಅನಮ್ಯತೆ = ಬಗ್ಗಿಸಲಾಗದ ಸ್ವಭಾವ
ಪ್ರಶ್ನೆ: ನೀವು ನೀಡಿರುವ ಬೋಧನೆಗಳು ಮತ್ತು ಅಭ್ಯಾಸಗಳು ನನ್ನ ಅನಮ್ಯತೆಯನ್ನು ಮುರಿದು, ನಾನು ಅರಳಲು ಸಹಾಯ ಮಾಡುತ್ತವೆಯೇ?
ಸದ್ಗುರು: ನಿಮ್ಮ ವಿಕಸನಕ್ಕೆ ಅಡ್ಡಿಯಾಗಿರುವುದು ನಿಮ್ಮ ಅನಮ್ಯತೆಯೆಂದು ನೀವು ಅರ್ಥಮಾಡಿಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ನೀವು ಅನೇಕ ಆಯಾಮಗಳಲ್ಲಿ ಅನಮ್ಯರಾಗಬಹುದು. ಯೋಗಾಸನಗಳ ಅಭ್ಯಾಸದ ಸಮಯದಲ್ಲಿ, ನೀವು ದೈಹಿಕವಾಗಿ ಎಷ್ಟು ಅನಮ್ಯರಾಗಿದ್ದೀರಿ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಿ. ನಿಮ್ಮ ಮನಸ್ಸು ಮತ್ತು ಭಾವನೆಗಳಲ್ಲಿನ ಅನಮ್ಯತೆಯನ್ನು ತಿಳಿದುಕೊಳ್ಳಲು ನಿಮಗೆ ಸ್ವಲ್ಪ ಹೆಚ್ಚು ಅರಿವಿರಬೇಕಾಗುತ್ತದೆ. ತಮ್ಮ ಆಲೋಚನೆಗಳು ಮತ್ತು ಭಾವನೆಗಳಲ್ಲಿ ಬಹಳ ಅನಮ್ಯರಾಗಿರುವವರು ತಾವು ಪರಿಪೂರ್ಣರೆಂದು ನಂಬುತ್ತಾರೆ, ಏಕೆಂದರೆ ಅವರು ಬೇರೆ ಯಾವುದೇ ರೀತಿಯಲ್ಲಿ ನೋಡುವುದಕ್ಕೆ, ಯೋಚಿಸುವಕ್ಕೆ ಅಥವಾ ಭಾವಿಸುವುದಕ್ಕೆ ಅವಕಾಶ ಕೊಟ್ಟುಕೊಳ್ಳುವುದಿಲ್ಲ. ನೀವು ಅಂತಹವರನ್ನು ಭೇಟಿಯಾದಾಗ, ಅವರು ಮೊಂಡರು ಎಂದು ನಿಮಗನಿಸಿದರೆ, ಅವರಿಗೆ ತಾವು ಪರಿಪೂರ್ಣರು ಎಂದೆನಿಸುತ್ತದೆ. ಅಂತೆಯೇ, ನಿಮ್ಮ ಪ್ರಾಣಶಕ್ತಿಯಲ್ಲಿಯೂ ಅನಮ್ಯತೆ ಇರಬಹುದು. ಯಾರ ಪ್ರಾಣಶಕ್ತಿಯು ತುಂಬಾ ನಮ್ಯವಾಗಿರುತ್ತದೆಯೋ, ಬಹಳ ಸರಳವಾದ ಕ್ರಿಯಾವನ್ನು ಆರಂಭಿಸಿದ ಮೊದಲ ದಿನದಲ್ಲಿಯೇ ಆ ಶಕ್ತಿಯು ಹರಿಯಲು ಮತ್ತು ಪರಿವರ್ತಿಸಲು ಪ್ರಾರಂಭಿಸುತ್ತದೆ. ಆದರೆ, ಇನ್ನೊಬ್ಬ ವ್ಯಕ್ತಿಗೆ, ದೀರ್ಘಕಾಲದವರೆಗೆ ಅಭ್ಯಾಸ ಮಾಡಿದ ನಂತರವೂ ಯಾವ ಬದಲಾವಣೆಯೂ ಆಗುವುದಿಲ್ಲ. ಇದು ಶಕ್ತಿಗಳು ಎಷ್ಟು ಮೆತುವಾಗಿವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆಯಷ್ಟೆ. ಈ ಎಲ್ಲಾ ಆಯಾಮಗಳಲ್ಲಿನ ಅನಮ್ಯತೆಯು ನಿಜವಾಗಿಯೂ ಪ್ರತ್ಯೇಕವಾಗಿಲ್ಲ; ಅವು ಪರಸ್ಪರ ಸಂಬಂಧ ಹೊಂದಿವೆ. ಒಂದು ಆಯಾಮದಲ್ಲಿನ ಅನಮ್ಯತೆಯು ಇತರ ಆಮಾಯಮಗಳಲ್ಲಿ ಅಭಿವ್ಯಕ್ತವಾಗುತ್ತದೆ.
ಪತಂಜಲಿಯವರ ಮಾರ್ಗದಲ್ಲಿ, ಯೋಗವು ಎಂತಹ ಒಂದು ವ್ಯವಸ್ಥೆಯೆಂದರೆ, ಅದರಲ್ಲಿ ನೀವು ಯಾವ ರೀತಿಯ ಮೂರ್ಖರಾಗಿದ್ದರೂ, ನಿಮ್ಮ ಅರಿವಿನ ಮಟ್ಟವೇನೇ ಇದ್ದರೂ ಅಥವಾ ನಿಮಗೆ ಯಾವ ರೀತಿಯ ಕರ್ಮ ಬಂಧನಗಳಿದ್ದರೂ ನಿಮಗೆ ಒಂದು ಮಾರ್ಗವಿದೆ. ನೀವು ಕನಿಷ್ಠ ನಿಮ್ಮ ದೇಹವನ್ನು ಬಾಗಿಸಲು ಸಿದ್ಧರಿದ್ದರೆ, ನೀವು ಆಗಲೇ ಒಂದು ಕರ್ಮವನ್ನು ಮುರಿದಿದ್ದೀರಿ. ನಿಮ್ಮ ಹಣೆಯು ನಿಮ್ಮ ಮೊಣಕಾಲಿಗೆ ಮುಟ್ಟಿದರೆ, ನೀವು ಭೌತಿಕ ಕರ್ಮವನ್ನು ಮುರಿದಿದ್ದೀರಿ. ಇದು ತಮಾಷೆಯಲ್ಲ. ಇದನ್ನು ಹಿಂದೆಂದೂ ಮಾಡದವರಿಗೆ ಇದೊಂದು ಸಾಧನೆಯೇ. ಈ ಸರಳ ಮಿತಿಯು ಸಮಯ ಕಳೆದಂತೆ ಹೆಚ್ಚಾಗಿದ್ದಿರಬಹುದು. ಇಂದು ನಿಮ್ಮಲ್ಲಿರುವ ಅಲ್ಪ ಸ್ವಲ್ಪ ನಮ್ಯತೆ ಕೂಡ ಸಮಯ ಕಳೆದಂತೆ ಕಡಿಮೆಯಾಗುತ್ತದೆ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣವಾಗಿ ಅನಮ್ಯವಾದಂತಹ ದಿನ ಬರುತ್ತದೆ.
ನಿಮ್ಮ ಜೀವನದಲ್ಲೇ, 10 ಅಥವಾ 11ನೇ ವಯಸ್ಸಿನಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವೆಷ್ಟು ನಮ್ಯವಾಗಿದ್ದಿರಿ ಎಂದು ನೋಡಿಕೊಳ್ಳಿ. 20ನೇ ವಯಸ್ಸಿನಲ್ಲಿ, ನಿಮ್ಮ ನಮ್ಯತೆ ಗಣನೀಯವಾಗಿ ಕಡಿಮೆಯಾಗಿದ್ದು ಮತ್ತು 30ನೇ ವಯಸ್ಸಿಗೆ ಅದು ಸಂಪೂರ್ಣವಾಗಿ ಇಲ್ಲವಾಗಿರುತ್ತದೆ. ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಅನಮ್ಯತೆಯೂ ತೀವ್ರವಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನವರಿಗೆ ಅವರ ಜೀವನ ಹಿಂದಕ್ಕೆ ಹೋಗುತ್ತಿದೆ. ಅವರು ಬೆಳೆಯುತ್ತಿಲ್ಲ, ಅವರು ಹಿಂದಕ್ಕೆ ಹೋಗುತ್ತಿದ್ದಾರೆ. ಅವರದ್ದೇ ಆದ ಕೆಲ ಸಂಪತ್ತನ್ನೂ ಕೂಡ ಅವರು ಬೆಳೆಸುವುದಿಲ್ಲ. ಹೆಚ್ಚಿನವರಿಗೆ ಇರುವ ಅನುಕೂಲತೆಯು ಅವರಿಗೆ ಶಾಪವಾಗಿ ಪರಿಣಮಿಸುತ್ತದೆ. ಹಣ, ಪ್ರಭಾವ, ಸೌಕರ್ಯ ಮತ್ತು ಬುದ್ಧಿವಂತಿಕೆಯು ಆಶೀರ್ವಾದವಾಗಿ ಬರುತ್ತವೆ, ಆದರೆ ಹೆಚ್ಚಿನವರಿಗೆ ಅವು ಶಾಪವಾಗುತ್ತವೆ. ನಿಮ್ಮ ಪ್ರಜ್ಞೆಯ ಪರಮ ಸ್ವರೂಪವನ್ನು ಹೊಂದಲು ಅಥವಾ ಶಾಂತಿಯುತ ಮತ್ತು ಪ್ರೇಮಮಯಿಯಾಗಲು ನೀವು ನಿಮ್ಮ ಬುದ್ಧಿವಂತಿಕೆಯನ್ನು ಬಳಸುತ್ತಿಲ್ಲ. ನಿಮ್ಮನ್ನು ಹುಚ್ಚರನ್ನಾಗಿಸಿಕೊಳ್ಳಲು ನಿಮ್ಮ ಬುದ್ಧಿವಂತಿಕೆಯನ್ನು ಬಳಸುತ್ತಿದ್ದೀರಿ. ಜೀವಕ್ಕೆ ವಿರುದ್ಧವಾಗಿ ಹೋಗುವ ಯಾರಾದರೂ, ಯಾವುದು ಜೀವದ ಮೂಲವೇ ಆಗಿದೆಯೋ ಅದರ ವಿರುದ್ಧವಾಗಿ ಹೋಗುವ ಯಾರಾದರೂ ಸಂಪೂರ್ಣವಾಗಿ ಮೂರ್ಖರೇ ಸರಿ.
ನೀವು ಸೃಷ್ಟಿಕರ್ತನ ಪರವೋ ವಿರುದ್ಧವೋ?
ನಿಮ್ಮ ಜೀವನದ ಪ್ರತಿ ಕ್ಷಣ, ನೀವು ಸೃಷ್ಟಿಕರ್ತನ ಪರವಾಗಿದ್ದೀರೋ ಅಥವಾ ಸೃಷ್ಟಿಕರ್ತನ ವಿರುದ್ಧವಾಗಿದ್ದೀರೋ ಎಂದು ನೋಡಿಕೊಳ್ಳುತ್ತಿದ್ದರೆ, ಎಲ್ಲವೂ ನೆಲೆಗೊಳ್ಳುತ್ತದೆ. ನೀವು ಈ ಒಂದು ಸಾಧನೆಯನ್ನು ಮಾಡಿದರೆ ನಿಮ್ಮ ಮನಸ್ಸು ನೆಲೆಗೊಳ್ಳುತ್ತದೆ. ಆದರೆ ಅದಕ್ಕೆ ಅವಿರತ ಪ್ರಯತ್ನ ಬೇಕು. ಇಲ್ಲದಿದ್ದರೆ, ಅದು ಸಾಧ್ಯವಾಗುವುದಿಲ್ಲ. ಪ್ರತಿ ಕ್ಷಣ ಮತ್ತು ಪ್ರತಿ ಉಸಿರಿನೊಂದಿಗೆ ಅದನ್ನು ಮಾತ್ರ ನೋಡಿಕೊಳ್ಳುತ್ತಿರಿ. ಇದನ್ನು ನೋಡಲು ನೀವು ಅವಿರತವಾಗಿ ಪ್ರಯತ್ನಿಸುತ್ತಿದ್ದರೆ, ನಿಮಗಿಷ್ಟು ಸಾಕು. ಅದು ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ಸ್ಪಷ್ಟಗೊಳಿಸುತ್ತದೆ. ನಾಳೆಯೇ ನೀವು ಸಮಾಧಿಗೆ ಸಿದ್ಧರಾಗುತ್ತೀರಿ.
ಇದು ನಿಜಕ್ಕೂ ಬಹಳ ಸರಳ, ಆದರೆ ವ್ಯಕ್ತಿಯೊಬ್ಬರ ವ್ಯಕ್ತಿತ್ವದಿಂದಾಗಿ ಇದು ಅತ್ಯಂತ ಜಟಿಲವಾಗುತ್ತದೆ. ಆಧ್ಯಾತ್ಮಿಕ ಹಾದಿಯಲ್ಲಿ ಎದುರಿಸುವ ಜಟಲತೆಗಳು ಮಾರ್ಗದ ಕಾರಣದಿಂದ ಜಟಿಲವಾಗಿಲ್ಲ. ಅದು ಜಟಲವಾಗಿರುವುದು ನಿಮ್ಮ ಮನಸ್ಸಿನ ಅವ್ಯವಸ್ಥೆಯಿಂದಾಗಿ ಮಾತ್ರ. ಮಾರ್ಗವು ಬಹಳ ಸರಳ, ಆದರೆ ನೀವು ಅಲ್ಲಿರುವುದರಿಂದ ಅದು ಅತ್ಯಂತ ಜಟಿಲವಾಗಿದೆ. ನಿಮ್ಮೊಳಗೆ ಏನೂ ಹರಿಯದು. ಸಾವಿನ ನಂತರ ದೇಹ ಸೆಡೆಯುವ ರೀತಿ ನೀವು ಅನಮ್ಯರಾಗುತ್ತೀರಿ. ನಿಮ್ಮ ಮನಸ್ಸಿನ ಹುಚ್ಚುತನವನ್ನು ಅಡಗಿಸಲು ನಿಮಗೆ ಗುರುಗಳ ಅನುಗ್ರಹ ಬೇಕು. ನೀವು ಇದಕ್ಕೆ ಅನುಮತಿಸಿದರೆ, ಮಾರ್ಗವು ತುಂಬಾ ಸರಳ, ಏಕೆಂದರೆ ಮಾರ್ಗವೇ ಗಮ್ಯಸ್ಥಾನ.
ನೀವು ಸುಮ್ಮನೆ ಕುಳಿತುಕೊಂಡರೆ, ನಿಮ್ಮ ಇಡೀ ಚೇತನ ಅಸ್ತಿತ್ವದೊಂದಿಗೆ ಮಿಡಿಯುತ್ತದೆ. ನೀವು ಬೇರೆ ರೀತಿಯಲ್ಲಿರಲು ಪ್ರಯತ್ನಿಸದ ಹೊರತು ಬೇರೆ ದಾರಿಯಿಲ್ಲ. ನೀವು ಜೀವಿಸಿರುವ ಅಸ್ತಿತ್ವದಿಂದ ನೀವು ಹೇಗೆ ದೂರವಿರಬಹುದು? ಅದು ಸಾಧ್ಯವಾದರೂ ಹೇಗೆ? ಅದು ಒಳಗೂ ಹೊರಗೂ, ಎಲ್ಲ ರೀತಿಯಲ್ಲೂ ನಿಮ್ಮನ್ನು ಆವರಿಸುತ್ತದೆ. ಯಾರಿಗೂ ಅದರಿಂದ ಎಂದಿಗೂ ದೂರವಿರಲು ಸಾಧ್ಯವಿಲ್ಲ. ಬಹುಶಃ ಅರಿವಿಲ್ಲದೆ, ದೂರವಿರಲು ನೀವು ಎಲ್ಲವನ್ನೂ ಮಾಡುತ್ತಿದ್ದೀರಿ. ಅದನ್ನು ಮಾಡುವುದನ್ನು ನಿಲ್ಲಿಸಿ, ಎಲ್ಲವೂ ಸರಿಯಾಗಿರುತ್ತದೆ. ಆದ್ದರಿಂದ, ಆ ಎಲ್ಲಾ ಅಸಂಬದ್ಧ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಲೆಂದೇ ನಾವು ನಿಮಗೆ ಕ್ರಿಯಾಗೆ ದೀಕ್ಷೆ ನೀಡಿರುವುದು.
ಸೃಷ್ಟಿಯನ್ನೇ ಸಕ್ರಿಯಗೊಳಿಸುವುದು
ಹಾಗೆ ನೋಡಿದರೆ, ಇವೆಲ್ಲದರ ಅಗತ್ಯವಿಲ್ಲ. ಆದರೆ ದುರದೃಷ್ಟವಶಾತ್, ಈಗ ಅದರ ಅಗತ್ಯವಿದೆ. ಮನಸ್ಸು ಬಹಳ ಕ್ರೂರವಾಗುವಷ್ಟು ನೀವು ನಿಮ್ಮ ಪ್ರಾಣಶಕ್ತಿಯನ್ನು ನಿಗ್ರಹಿಸಿದ್ದೀರಿ. ಹೀಗಾಗಿ ಅದು ಅಹಂಕಾರವನ್ನು ಬೆಂಬಲಿಸಲು ಬೇಕಾಗಿರುವುದನ್ನು ಹೊರತುಪಡಿಸಿ ಬೇರೆ ಏನೂ ಕಾರ್ಯ ನಿರ್ವಹಿಸದಿರುವ ಹಂತಕ್ಕೆ ಜೀವವನ್ನು ನಿಗ್ರಹಿಸುತ್ತದೆ. ನಿಮ್ಮ ಪ್ರಾಣಶಕ್ತಿಗಳು ನಿಮ್ಮ ಅಹಂಗೆ ಅನುಕೂಲಕರವಾಗುವಷ್ಟರ ಮಟ್ಟಿಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಶಕ್ತಿ ಸ್ಪಲ್ಪ ಹೆಚ್ಚಾದರೆ, ನಿಮ್ಮ ಅಹಂಕಾರವು ನುಚ್ಚುನೂರಾಗುತ್ತದೆ. ನಿಮ್ಮೊಳಗೆ ಪ್ರಾಣಶಕ್ತಿಯು ಮೇಲೇರಿದ ಕ್ಷಣ, ಎಲ್ಲವೂ ಕರಗಿ ಹೋಗುತ್ತದೆ. ಇದು ಅಹಂಕಾರಕ್ಕೆ ಚೆನ್ನಾಗಿ ತಿಳಿದಿದೆ. ಅದಕ್ಕಾಗಿಯೇ ಅದು ಶಕ್ತಿಯನ್ನು ನಿಗ್ರಹಿಸಿದೆ. ನಿಮ್ಮಲ್ಲಿ ಶಕ್ತಿ ಇಲ್ಲದಿದ್ದರೆ, ಅಗಲೂ ನಿಮ್ಮ ಅಹಂ ದುರ್ಬಲವಾಗುತ್ತದೆ; ಅದನ್ನು ನಿಮ್ಮ ಅಹಂ ಸಹಿಸದು. ಆದ್ದರಿಂದ, ತನ್ನನ್ನು ಬೆಂಬಲಿಸುವ ಮತ್ತು ಚೆನ್ನಾಗಿ ಪೋಷಿಸುವ ಶಕ್ತಿಯ ಪ್ರಮಾಣವನ್ನಷ್ಟೆ ಅದು ಅನುಮತಿಸುತ್ತದೆ. ಶಕ್ತಿಯು ಹೆಚ್ಚಾದರೆ, ಅಹಂ ಚೂರುಚೂರಾಗುತ್ತದೆ. ಕುಂಡಲಿನಯು ಮೇಲೇರಲು ಆರಂಭಿಸಿದರೆ, ಎಲ್ಲವೂ ಚೂರುಚೂರಾಗಿ ಏನೂ ಉಳಿದಿರುವುದಿಲ್ಲ. ನೀವು ನಿಮ್ಮ ಸುತ್ತಲಿನ ಎಲ್ಲದರೊಂದಿಗೆ ವಿಲೀನಗೊಳ್ಳುವ ಶಕ್ತಿಯಾಗಿರುತ್ತೀರಿ. ಇನ್ನು ಮುಂದೆ ನಿಮ್ಮದೇ ಸ್ವಇಚ್ಛೆ ಎನ್ನವುದೇನೂ ಇರುವುದಿಲ್ಲ.
ನಿಮ್ಮ ಸ್ವಇಚ್ಛೆಯನ್ನು ನೀವು ಬಿಟ್ಟುಕೊಡುವುಲು ಸಿದ್ಧರಿಲ್ಲದ ಕಾರಣ, ನಿಮ್ಮ ಶಕ್ತಿಯನ್ನು ಪ್ರಚೋದಿಸಲು ನಾವು ಈ ಸಾಧನದ ಮೂಲಕ ನಿಮ್ಮನ್ನು ಪ್ರೋತ್ಸಾಹಿಸುತ್ತಿದ್ದೇವೆ. ಆ ಕಾರಣಕ್ಕಾಗಿಯೇ ಆಸನ ಮತ್ತು ಕ್ರಿಯಾದ ಮಾರ್ಗ. ನೀವೇ ಅದನ್ನು ಮಾಡಲು ಸಾಧ್ಯವಾಗದ ಕಾರಣ, ಸೃಷ್ಟಿಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಸಕ್ರಿಯಗೊಳಿಸಿ, ಅದು ಹರಿದಾಡಲು ಆರಂಭಿಸಿದರೆ, ಅದು ಎಲ್ಲವನ್ನೂ ನೆಲೆಗೊಳಿಸುತ್ತದೆ. ಅದೊಂದು ಪ್ರವಾಹದಂತೆ. ಆದ್ದರಿಂದ ನಿಮ್ಮ ಸಾಧನೆ ಎಲ್ಲೋ ತಲುಪುವುದರ ಬಗ್ಗೆಯಲ್ಲ. ಅದೊಂದು ಮಾರ್ಗವಷ್ಟೆ, ನಿಮ್ಮ ಕ್ಷುಲ್ಲಕ ರಚನೆಗಳನ್ನು ಅಳಿಸಿಹಾಕಿ, ನೀವು ಹೇಗಿರಬೇಕೆಂದು ಸೃಷ್ಟಿಕರ್ತನು ಉದ್ದೇಶಿಸದ್ದನೋ ನಿಮ್ಮನ್ನು ಹಾಗೆ ಬಿಡಲು ಬಹು ದೊಡ್ಡದಾದ ಪ್ರವಾಹವನ್ನು ಬಡಿದೆಬ್ಬಿಸುವ ಮಾರ್ಗ.
ಸಂಪಾದಕರ ಟಿಪ್ಪಣಿ: ಮಿಸ್ಟಿಕ್ ಮ್ಯೂಸಿಂಗ್ಸ್ನಿಂದ ಆಯ್ದ ಭಾಗ. ಈ ಪುಸ್ತಕ ನಮ್ಮ ಭಯ, ಕೋಪ, ಭರವಸೆಗಳು ಮತ್ತು ಒದ್ದಾಟಗಳಿಗೆ ಉತ್ತರಿಸುತ್ತ ಬಹಳ ಚತುರತೆಯಿಂದ ನಮ್ಮನ್ನು ಪರಿವರ್ತಿಸುವ ವಾಸ್ತವತೆಯೆಡೆಗೆ ಮಾರ್ಗದರ್ಶಿಸುತ್ತದೆ. ಸದ್ಗುರು ನಮ್ಮನ್ನು ತರ್ಕದ ಅಂಚಿನಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ ಮತ್ತು ಜೀವನ, ಸಾವು, ಪುನರ್ಜನ್ಮ, ಸಂಕಟ, ಕರ್ಮ ಮತ್ತು ಆತ್ಮದ ಪ್ರಯಾಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರ ಉತ್ತರಗಳೊಂದಿಗೆ ನಮ್ಮನ್ನು ಆಕರ್ಷಿಸುತ್ತಾರೆ.ಮಾದರಿ ಪಿಡಿಫ್ ಡೌನ್ಲೋಡ್ ಮಾಡಿಕೊಳ್ಳಿ ಅಥವಾಇ-ಬುಕ್ಅನ್ನು ಖರೀದಿಸಿ.