ಯಾರಾದರೂ ನಿಮ್ಮನ್ನು ನಿರಾಸೆಗೊಳಿಸಿದಾಗ ಏನು ಮಾಡಬೇಕು?
ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ನಿರಾಸೆಗೊಳಿಸಿದರು ಎಂಬ ಭಾವನೆ ಕಾಡುತ್ತಿದೆಯೇ? ಹಾಗಾದರೆ ಮೊದಲು ನಿಮ್ಮ ಊಹೆ ಮತ್ತು ನಿರೀಕ್ಷೆಗಳನ್ನು ಪರಿಶೀಲಿಸಿಕೊಳ್ಳಿ ಎಂದು ಸದ್ಗುರುಗಳು ಹೇಳುತ್ತಾರೆ. ನಿಮ್ಮ ಸಂಬಂಧಗಳು ನಿಮ್ಮ ಜೀವನಕ್ಕೆ ಮೌಲ್ಯವನ್ನು ಕೊಡುತ್ತಿವೆ ಎನ್ನುವುದನ್ನು ನೀವು ಕಂಡುಕೊಂಡಾಗ, ನೀವು ಅವುಗಳನ್ನು ಚೆನ್ನಾಗಿ ನಿಭಾಯಿಸುತ್ತೀರಿ.
ಪ್ರಶ್ನೆ: ನಮ್ಮನ್ನೆಂದಿಗೂ ನಿರಾಸೆಗೊಳಿಸಲಾರರು ಎಂದು ತಿಳಿದಿದ್ದ ವ್ಯಕ್ತಿಯು ನಮ್ಮ ಆಶಾಭಂಗ ಮಾಡಿದಾಗ, ನಾವದನ್ನು ಹೇಗೆ ನಿಭಾಯಿಸುವುದು?
ಸದ್ಗುರು: ಇಲ್ಲಿ ಸಮಸ್ಯೆಯೇನೆಂದರೆ ತಪ್ಪಾದ ಊಹೆಗಳು. ನೀವು ಬೇರೆಯವರ ಬಗ್ಗೆ, ನಿಮ್ಮ ಬಗ್ಗೆ ಮತ್ತು ಇಡೀ ಸೃಷ್ಟಿಯ ಬಗ್ಗೆ ಊಹಾಪೋಹಗಳನ್ನು ಮಾಡಿಕೊಳ್ಳುತ್ತಿದ್ದೀರಿ. ನೀವು ನಿಮ್ಮದೇ ಆದ ಭಾವನಾರಾಜ್ಯದಲ್ಲಿ ತೇಲಾಡುತ್ತ, ಸಂಬಂಧಗಳು ತಮ್ಮಿಂದ ತಾವೇ ನಡೆಯುತ್ತವೆಯೆಂದು ಯೋಚಿಸಿದಿರಿ. ಅದು ಹಾಗೆ ನಡೆಯುವುದಿಲ್ಲ. ಯಾವುದೇ ಸಂಬಂಧಗಳನ್ನಾದರೂ ನಾವು ನಿಭಾಯಿಸಬೇಕಾಗುತ್ತದೆ. ನೀವು ಒಳ್ಳೆಯ ಮ್ಯಾನೇಜರ್ ಹೌದೋ ಅಲ್ಲವೋ ಎನ್ನುವುದೇ ಪ್ರಶ್ನೆ. ನೀವು ಎಷ್ಟೇ ಒಳ್ಳೆಯ ಮ್ಯಾನೇಜರ್ ಆಗಿದ್ದರೂ, ಕೆಲವು ಅಹಿತಕರ ಸಂಗತಿಗಳು ನಡೆಯಬಹುದು. ಇನ್ನು ನಿಮ್ಮನ್ನು ಯಾರೋ ನಿರಾಸೆಗೊಳಿಸಿರುವುದರ ಬಗ್ಗೆ ಹೇಳಬೇಕೆಂದರೆ - ಜನರ ಬಗ್ಗೆ ನಿಮಗೆ ಅವಾಸ್ತವಿಕವಾದ ನಿರೀಕ್ಷೆಗಳಿರಬಹುದು. ಇಲ್ಲಿ ಕೇಳಲಾಗಿರುವ ಪ್ರಶ್ನೆ ನಿಮ್ಮ ಅನುಭವದಿಂದ ಬರುತ್ತಿದೆಯೆಂದು ನನಗೆ ಗೊತ್ತಿದೆ, ಮತ್ತು ನಾನು ನಿಮ್ಮ ನೋವನ್ನು ನಗಣ್ಯ ಮಾಡಲು ಪ್ರಯತ್ನಿಸುತ್ತಿಲ್ಲ. ನಿಮಗಿದು ಎಷ್ಟು ಮುಖ್ಯವೆಂದು ನನಗೆ ತಿಳಿದಿದೆ. ಆದರೆ ಅದೇ ಸಮಯದಲ್ಲಿ, ನೀವು ಈ ಲೋಕಕ್ಕೆ ಬಂದಿದ್ದು ಏಕಾಂಗಿಯಾಗಿ, ಮತ್ತು ಹೋಗುವುದೂ ಏಕಾಂಗಿಯಾಗಿಯೇ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನೀವು ನಿಮ್ಮ ಸಂಬಂಧದೊಳಗೆ ಕಾಲಿಟ್ಟಿದ್ದು ನಿಮ್ಮದೇ ಅಗತ್ಯಗಳ ಕಾರಣದಿಂದಾಗಿ.
ನಿಮ್ಮ ಸಂಬಂಧದ ಸುತ್ತ ನೀವೆಷ್ಟೇ ಭಾವೋದ್ವೇಗವನ್ನು ಸೃಷ್ಟಿಸಿದರೂ ಹಾಗೂ ಅದರ ಬಗ್ಗೆ ನೀವೇನೇ ಕಲ್ಪನೆಗಳನ್ನು ಮಾಡಿಕೊಂಡರೂ ಸಹ, ಅದು ನಿಮ್ಮ ಅಗತ್ಯತೆಗಳನ್ನು ಈಡೇರಿಸಿಕೊಳ್ಳುವ ಬಗ್ಗೆಯಾಗಿದೆ ಅಷ್ಟೆ. ನಿಮ್ಮ ಜೀವನದಲ್ಲಿ ನಿರ್ಮಿಸಿಕೊಂಡಿರುವ ಯಾವುದೇ ತೆರನಾದ ಸಂಬಂಧಗಳನ್ನು ನೀವು ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಮಾಡಿಕೊಂಡಿದ್ದೀರಿ - ಅದು ದೈಹಿಕ, ಮಾನಸಿಕ, ಭಾವನಾತ್ಮಕ, ಆರ್ಥಿಕ, ಸಾಮಾಜಿಕ ಅಥವಾ ಇನ್ಯಾವುದೇ ಅಗತ್ಯತೆಗಳಾಗಿರಬಹುದು. ನೀವಿದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ನಿಮ್ಮ ಸಂಬಂಧಗಳನ್ನು ನೀವೊಂದು ರೀತಿಯ ನಮ್ರತೆಯಿಂದ ನಡೆಸಿಕೊಳ್ಳುತ್ತೀರಿ. ಅದೇ ನೀವು ನಿಮ್ಮದೇ ಆಲೋಚನೆಗಳು ಮತ್ತು ಭಾವನೆಗಳಲ್ಲಿ ಕೊಚ್ಚಿಹೋದರೆ, ನೀವು ಸಂಬಂಧದ ಮೂಲಭೂತ ಅಂಶಗಳನ್ನು ಮತ್ತು ಆ ಸಂಬಂಧವನ್ನು ಚೆನ್ನಾಗಿ ನಿಭಾಯಿಸುವುದನ್ನು ಮರೆತುಬಿಡುತ್ತೀರಿ. ಹೀಗಾದಾಗಲೇ ಸಂಬಂಧಗಳು ಹಳಸಲು ಶುರುವಾಗುವುದು.
ಸ್ವಭಾವಯುತವಾಗಿ ಮಧುರ ಭಾವವನ್ನು ಹೊಂದುವುದು
ಯಾರ ಬಗ್ಗೆಯಾದರು ಅಥವಾ ಯಾವುದರಿಂದಲಾದರೂ ನಿಮಗೆ ಭ್ರಮನಿರಸನವಾಗಿದ್ದರೆ, ನೀವು ವಾಸ್ತವತೆಗೆ ಬಂದಿದ್ದೀರಿ ಎಂದರ್ಥ. ಇದು ಕೇಳಲು ಕಠೋರವೆನ್ನಿಸಬಹುದು, ಆದರೆ ಜೀವನವಿರುವುದೇ ಹೀಗೆ. ಒಂದಲ್ಲಾ ಒಂದು ದಿನ, ನಮ್ಮ ಪ್ರೀತಿಪಾತ್ರರಾದವರು ನಮ್ಮನ್ನು ಅಗಲಿ ಹೋಗುತ್ತಾರೆ ಅಥವಾ ನಾವೇ ಇಲ್ಲಿಂದ ಹೋಗಿಬಿಡುತ್ತೇವೆ. ನೀವು ಕೈಕೈ ಹಿಡಿದುಕೊಂಡು ಸತ್ತರೂ ಸಹ, ನೀವು ಬೇರೆ ಬೇರೆಯಾಗಿಯೇ ಹೋಗುತ್ತೀರಿ. ಇವುಗಳೆಲ್ಲ ನಿಮ್ಮ ಭಾವನೆಗಳು ಅಷ್ಟೆ. ನೀವು ಯಾರೊಂದಿಗಾದರೂ ಸಂಬಂಧವನ್ನು ನಿರ್ಮಿಸಿಕೊಂಡಾಗ, ಅದು ಭಾವನೆಯ ಮಾಧುರ್ಯತೆಯನ್ನು ಸವಿಯಲು ಒಬ್ಬರಿಗೊಬ್ಬರು ಸಹಾಯ ಮಾಡುವ ಸಲುವಾಗಿ ನಿಮ್ಮಿಬ್ಬರ ನಡುವೆ ಮಾಡಿಕೊಂಡ ಒಂದು ಒಪ್ಪಂದವಾಗಿರುತ್ತದೆ.
ನೀವು ಪ್ರೌಢರಾದಂತೆಲ್ಲಾ, ಸ್ವಭಾವಯುತವಾಗಿ ನಿಮ್ಮ ಆಲೋಚನೆ ಮತ್ತು ಭಾವನೆಗಳನ್ನು ಮಧುರವಾಗಿರಿಸಿಕೊಳ್ಳಲು ನೀವು ಕಲಿಯಬೇಕು. ನಿಮ್ಮ ಆಲೋಚನೆಗಳು ಮತ್ತು ಭಾವನೆಗಳು ಹಿತವಾಗಿದ್ದರೆ, ನೀವದನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಆದರೆ ಆ ಇನ್ನೊಬ್ಬ ವ್ಯಕ್ತಿ ಇಲ್ಲದಿದ್ದರೆ, ನಿಮ್ಮ ಆಲೋಚನೆಗಳು ಮತ್ತು ಭಾವನೆಗಳು ಕಹಿ ಹಾಗೂ ಅಹಿತಕರವಾಗಿ, ಪ್ರತಿದಿನ ನಿಮಗೆ ಜೀವಿಸಲು ಯಾರಾದರೊಬ್ಬರು ಬೆಂಬಲವನ್ನು ನೀಡುತ್ತಿರಬೇಕೆಂದಾದರೆ, ಅವರು ದಣಿದುಹೋಗುತ್ತಾರೆ. ಇತರರು ನಿರಂತರವಾಗಿ ನಿಮ್ಮನ್ನು ಸಂತೋಷ ಹಾಗೂ ಪ್ರೀತಿಯಿಂದ ಇಟ್ಟುಕೊಳ್ಳಬೇಕೆಂದರೆ, ಅದು ಅವರ ಮೇಲೊಂದು ಹೊರೆಯಾಗುತ್ತದೆ, ಮತ್ತು ಅವರು ಒಂದು ಹಂತದಲ್ಲಿ ಓಡಿ ಹೋಗಲೂಬಹುದು. ಅವರು ತಪ್ಪಿಸಿಕೊಂಡಾಗ, ನೀವದನ್ನು ದ್ರೋಹವೆಂದು ಭಾವಿಸುತ್ತೀರಿ. ಮತ್ತೊಮ್ಮೆ ಹೇಳುತ್ತಿದ್ದೇನೆ, ಇವುಗಳೆಲ್ಲವೂ ನಿಮ್ಮ ಭಾವನೆಗಳಷ್ಟೆ. ಈ ಅನಂತವಾದ ಅಸ್ತಿತ್ವದಲ್ಲಿ, ನೀವು ಕೇವಲ ಒಂದು ಜೀವದ ತುಣುಕಷ್ಟೆ.
ಸಂಬಂಧಗಳ ಮೌಲ್ಯ
ನೀವು ಜನರೊಂದಿಗೆ ವಿವಿಧ ಒಪ್ಪಂದಗಳು ಮತ್ತು ಸಂಬಂಧಗಳನ್ನು ಹಲವಾರು ಉದ್ದೇಶಗಳಿಗಾಗಿ ಮಾಡಿಕೊಳ್ಳುತ್ತಿದ್ದೀರಿ. ಇದು ಕೇವಲ ಗಂಡ-ಹೆಂಡತಿಯ ಸಂಬಂಧಕ್ಕೆ ಮಾತ್ರ ಅನ್ವಯಿಸುವುದಿಲ್ಲ, ಆದರೆ ಇದು ವ್ಯವಹಾರದ ಪಾಲುದಾರರು, ಸ್ನೇಹಿತರು, ಮಕ್ಕಳು, ಹೆತ್ತವರೊಂದಿಗಿನ ಸಂಬಂಧಕ್ಕೂ ಸಹ ಅನ್ವಯಿಸುತ್ತದೆ. ನಿಮ್ಮ ಅಗತ್ಯತೆಗಳನ್ನು ಪೂರೈಸುವ ಕಾರಣಕ್ಕಾಗಿ ನೀವು ಒಂದು ಸಂಬಂಧದೊಳಗೆ ಕಾಲಿಟ್ಟಿದ್ದೀರಿ ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಬೇರೆಯವರೂ ಕೂಡ ಅವರ ಅಗತ್ಯತೆಗಳಿಗಾಗಿಯೇ ನಿಮ್ಮ ಸಂಬಂಧದಲ್ಲಿ ಕಾಲಿರಿಸಿರಬಹುದು, ಆದರೆ ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಅವರು ನಿಮ್ಮ ಜೀವನಕ್ಕೆ ಅಮೂಲ್ಯವಾದವರು ಎನ್ನುವುದನ್ನು ಅರ್ಥಮಾಡಿಕೊಳ್ಳುವುದಷ್ಟೇ ನಿಮ್ಮ ಕೆಲಸ.
ನೀವು ಇಂದು ಯಾರಾಗಿದ್ದೀರೋ ಅದಕ್ಕೆ ಅವರು ಮೌಲ್ಯವನ್ನು ಸೇರಿಸುತ್ತಿದ್ದಾರೆ. ನಿಮಗೆ ಅದರ ಅರಿವಾದಾಗ, ನೀವು ಆ ಸಂಬಂಧವನ್ನು ಒಂದು ರೀತಿಯಲ್ಲಿ ನಿಭಾಯಿಸುತ್ತೀರಿ. ಬೇರೆಯವರಿಗೆ ನೀವು ಹೆಚ್ಚಿನ ಮೌಲ್ಯವನ್ನು ಸೇರಿಸುತ್ತಿದ್ದೀರಿ ಎಂದು ನೀವು ಯೋಚಿಸಿದರೆ, ನೀವು ಆ ಸಂಬಂಧವನ್ನು ಇನ್ನೊಂದು ರೀತಿಯಲ್ಲಿ ನಿಭಾಯಿಸುತ್ತೀರಿ, ಮತ್ತದು ಆ ಸಂಬಂಧವನ್ನು ಹೆಚ್ಚು ಕಾಲ ಉಳಿಯದಂತೆ ಮಾಡಬಹುದು. ಅಥವಾ ನೀವೆಲ್ಲವನ್ನೂ ಸರಿಯಾಗಿಯೇ ಮಾಡುತ್ತಿದ್ದರೂ, ಕೆಲವು ಸಂಬಂಧಗಳು ಹಾಳಾಗಬಹುದು. ಅದು ಹೇಗಾದರೂ ಇರಲಿ, ನಿಮ್ಮನ್ನು ನೀವು ಒಂದು ಉಲ್ಲಾಸಭರಿತ ಹಾಗೂ ಅದ್ಭುತವಾದ ಜೀವವನ್ನಾಗಿ ಮಾಡಿಕೊಳ್ಳುವುದು ನಿಮ್ಮ ಕರ್ತವ್ಯ. ಯಾರ ಜೊತೆಗಿದ್ದರೂ ಸರಿ ಅಥವಾ ಜೊತೆ ಇಲ್ಲದಿದ್ದರೂ ಸರಿ, ದಯವಿಟ್ಟು ಇದನ್ನು ಮಾಡಿ.
ಸಂಪಾದಕರ ಟಿಪ್ಪಣಿ: ಶಾಂತಿ, ಪ್ರೀತಿ, ಆರೋಗ್ಯ ಹಾಗೂ ಯಶಸ್ಸಿಗಾಗಿ “ಚಿತ್ ಶಕ್ತಿ” ಧ್ಯಾನಗಳು ನಮ್ಮ ಬಹಳ ಕಾಲದ ಅಪೇಕ್ಷೆಗಳನ್ನು ನನಸಾಗಿ ಪರಿವರ್ತಿಸಿಕೊಳ್ಳಲು ನಮ್ಮನ್ನು ಸಶಕ್ತರನ್ನಾಗಿಸುತ್ತವೆ. ಅವುಗಳನ್ನು ಇಲ್ಲಿ ಪ್ರಯತ್ನಿಸಿ - Try them out!
ಈ ಲೇಖನದ ಮೂಲ ಆವೃತ್ತಿ ಜೂನ್ 2017 ರ ಈಶ ಫಾರೆಸ್ಟ್ ಫ್ಲವರ್ ಮ್ಯಾಗ್‌ಸೀನ್‌ನಲ್ಲಿ ಪ್ರಕಟವಾಗಿರುತ್ತದೆ Isha Forest Flower