ಭಾರತದ ನದಿಗಳ ಪುನರುಜ್ಜೀವನ - ಸಮಗ್ರ ನೀತಿ ಚೌಕಟ್ಟಿನೆಡೆಗೆ
ಭಾರತದ ನದಿಗಳ ಪುನರುಜ್ಜೀವನ ಕರಡು ನೀತಿ ಶಿಫಾರಸಿನ ನಮ್ಮ ಆಯ್ದ ತುಣುಕುಗಳ ಭಾಗ 2-ರಲ್ಲಿ, ಭಾರತದ ನದಿಗಳು ಎದುರಿಸುತ್ತಿರುವ ಸಮಸ್ಯೆಗಳ ತೀವ್ರತೆ ಮತ್ತು ಗಂಭೀರತೆಯನ್ನು ಮತ್ತು ಅವುಗಳನ್ನು ಉಳಿಸಲು ಕ್ರಮ ಕೈಗೊಳ್ಳುವುದರಿಂದ ನಮಗಾಗುವ ಲಾಭವೇನು ಎಂಬುದನ್ನು ನಾವು ವಿವರಿಸುತ್ತೇವೆ.
ದೇಶಾದ್ಯಂತದ "ರ್ಯಾಲೀ ಫಾರ್ ರಿವರ್ಸ್" ಅಭಿಯಾನದ ಕೊನೆಯಲ್ಲಿ, ಭಾರತದ ನದಿಗಳ ಪುನರುಜ್ಜೀವನ ಕರಡು ನೀತಿ ಶಿಫಾರಸನ್ನು(Revitalization of Rivers in India Draft Policy Recommendation) ಅಕ್ಟೋಬರ್ 3, 2017 ರಂದು ಸರ್ಕಾರಕ್ಕೆ ನೀಡಲಾಯಿತು. ಈ ಬಹುಮುಖಿ ವಿಧಾನವು ಭಾರತದ ನದಿಗಳಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ? ಪರಿಶೋಧಿಸಲು ನಿಮಗೆ ನಾವು ಪ್ರಸ್ತಾವನೆಯ ಆಯ್ದ ತುಣುಕುಗಳನ್ನು ಇಲ್ಲಿ ಒದಗಿಸಿದ್ದೇವೆ. ಭಾಗ 2-ರಲ್ಲಿ, ಭಾರತದ ನದಿಗಳು ಎದುರಿಸುತ್ತಿರುವ ಸಮಸ್ಯೆಗಳ ತೀವ್ರತೆ ಮತ್ತು ಗಂಭೀರತೆಯನ್ನು ಮತ್ತು ಅವುಗಳನ್ನು ಉಳಿಸಲು ಕ್ರಮ ಕೈಗೊಳ್ಳುವುದರಿಂದ ನಮಗಾಗುವ ಲಾಭವೇನು ಎಂಬುದನ್ನು ನಾವು ವಿವರಿಸುತ್ತೇವೆ.
ಭಾಗ 1 | ಭಾಗ 3 | ಭಾಗ 4 | ಭಾಗ 5 | ಭಾಗ 6 | ಭಾಗ 7
ನದಿಗಳು ಪ್ರಾಚೀನ ಮಾನವ ನಾಗರಿಕತೆಗಳ ಮೂಲಗಳಾಗಿವೆ. ಕಲ್ಲುಬಂಡೆಗಳ ಭೂಪ್ರದೇಶದ ಮೂಲಕ ಕೊರೆದು ತಮ್ಮ ಹರಿವಿನ ದಾರಿಯನ್ನು ಮಾಡಿಕೊಂಡು, ನದಿಗಳು ಫಲವತ್ತಾದ ಪ್ರದೇಶಗಳನ್ನು ಸೃಷ್ಟಿಸಿವೆ. ವ್ಯಾಪಕವಾದ ಜೀವವೈವಿಧ್ಯತೆಯ ನೆಲೆಯಾಗಿರುವ ನದಿಗಳು ಪ್ರಪಂಚದಾದ್ಯಂತ "ಜೀವದಾತೆ" ಎಂಬ ವಿಶಿಷ್ಟ ಗುರುತನ್ನು ಪಡೆದುಕೊಂಡಿವೆ. ಅದಲ್ಲದೆ ಭಾರತದ ನದಿಗಳು, ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯೊಂದಿಗೆ ಬೇರ್ಪಡಿಸಲಾಗದಂತೆ ಹೆಣೆದುಕೊಂಡಿರುವ ಕಾರಣದಿಂದ ನಮ್ಮಲ್ಲಿ ನದಿಗಳ ಪ್ರಾಮುಖ್ಯತೆ ಆರ್ಥಿಕ ಯೋಗಕ್ಷೇಮಕ್ಕಿಂತ ಹೆಚ್ಚಾಗಿದೆ.
ಕಳೆದ ಕೆಲವು ದಶಕಗಳಲ್ಲಿ, ಅತಿಯಾದ ನೀರಿನ ಬಳಕೆ, ಅರಣ್ಯನಾಶ, ಏಕ ಮೂಲ (ಪಾಯಿಂಟ್ ಸೋರ್ಸ್) ಮಾಲಿನ್ಯ ಮತ್ತು ವಿಸ್ತೃತ ಮೂಲ (ನಾನ್ ಪಾಯಿಂಟ್ ಸೋರ್ಸ್) ಮಾಲಿನ್ಯ, ಮತ್ತು ಹವಾಮಾನ ವ್ಯತ್ಯಾಸ (ಹೆಚ್ಚುತ್ತಿರುವ ತಾಪಮಾನ ಮತ್ತು ಭೇದಾತ್ಮಕ ಅವಪತನ ಮಾದರಿಗಳು) ಮುಂತಾದ ವಿವಿಧ ಅಂಶಗಳಿಂದಾಗಿ ನಮ್ಮ ನದಿಗಳು ತೀವ್ರವಾಗಿ ಕ್ಷೀಣಿಸುತ್ತಿವೆ. ಪ್ರಮುಖ ನದಿಗಳು ವೇಗವಾಗಿ ಬರಿದಾಗುತ್ತಿವೆ, ಮತ್ತು ಅನೇಕ ದೀರ್ಘಕಾಲಿಕ ನದಿಗಳು ಋತುಕಾಲಿಕ ನದಿಗಳಾಗಿ, ವರ್ಷದ ಹಲವು ತಿಂಗಳುಗಳವರೆಗೆ ಸಮುದ್ರವನ್ನು ಸೇರುತ್ತಿಲ್ಲ. ಗೋದಾವರಿಯ ಹರಿವು ಐತಿಹಾಸಿಕ ಹರಿವಿನಿಂದ ಸುಮಾರು 20% ರಷ್ಟು ಕ್ಷೀಣಿಸಿದೆ. ಕಾವೇರಿ ನದಿ ನೀರು 40% ನಷ್ಟು ಕ್ಷೀಣಿಸಿದ್ದರೆ, ಕೃಷ್ಣ ಮತ್ತು ನರ್ಮದಾ ನದಿಯ ನೀರು 60% ರಷ್ಟು ಕ್ಷೀಣಿಸಿದೆ. ಅಂದಾಜುಗಳ ಪ್ರಕಾರ, 2030 ರ ಹೊತ್ತಿಗೆ ನಮ್ಮ ಉಳಿವಿಗಾಗಿ ನಮಗೆ ಬೇಕಾದ 50%-ರಷ್ಟು ನೀರು ಮಾತ್ರ ಇರುತ್ತದೆ. ಇದಲ್ಲದೆ, ಭಾರತದ 25%-ರಷ್ಟು ನೆಲ ಮರುಭೂಮಿಯಾಗುತ್ತಿದೆ. 1947 ಕ್ಕೆ ಹೋಲಿಸಿದರೆ, ನಮ್ಮಲ್ಲಿ ಇಂದು ತಲಾ 25% ನೀರು ಲಭ್ಯವಿದೆ. ನದಿಗಳು ಒಟ್ಟು ನೀರಾವರಿಯ ಮೂರನೇ ಒಂದು ಭಾಗ ಮತ್ತು ದೇಶದ 20% ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತವೆ. ನಮ್ಮ ಉಳಿದ ನೀರಿನ ಅಗತ್ಯಗಳನ್ನು ಪೂರೈಸುವ ಅಂತರ್ಜಲ ಮತ್ತು ಇತರ ಜಲಮೂಲಗಳು ಈಗಾಗಲೇ ರಾಷ್ಟ್ರದಾದ್ಯಂತ ಹೆಚ್ಚು ಒತ್ತಡಕ್ಕೊಳಗಾಗಿದ್ದು, ಅಪಾಯಕಾರಿ ವೇಗದಲ್ಲಿ ಅತಿಯಾಗಿ ಬಳಸಲ್ಪಡುತ್ತಿವೆ. ಭಾರತದ 32 ಪ್ರಮುಖ ನಗರಗಳ ಪೈಕಿ 22 ನಗರಗಳು ದೈನಂದಿನ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಭಾರತದಲ್ಲಿನ ಇಂದಿನ ಪೀಳಿಗೆಗೆ ನೀರಿನ ಕೊರತೆ ಮತ್ತು ಕ್ಷಾಮವು ವಾಸ್ತವತೆಗಳಾಗಿವೆ. ಜಲ ಮೂಲಗಳನ್ನು ವೃದ್ಧಿಸಲು ಮತ್ತು ನಮ್ಮ ಜಲ ಸಂಪನ್ಮೂಲಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಲು ಆದ್ಯತೆಯ ಕ್ರಮಗಳನ್ನು ಕೈಗೊಳ್ಳಲು ಆರಂಭಿಸದಿದ್ದರೆ, ಮುಂದಿನ ಹದಿನೈದು ಇಪ್ಪತ್ತು ವರ್ಷಗಳ ಅವಧಿಯಲ್ಲಿ, ದೇಶವು ತೀವ್ರವಾದ ನೀರು ಮತ್ತು ಆಹಾರ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.
ಈ ಬಿಕ್ಕಟ್ಟನ್ನು ಗುರುತಿಸಿದ ಸರ್ಕಾರ ನದಿಗಳ ಸ್ಥಿತಿಯನ್ನು ಸುಧಾರಿಸಲು ನಮಾಮಿ ಗಂಗೆ ಮತ್ತು ನಮಾಮಿ ದೇವಿ ನರ್ಮದಾ-ದಂತಹ ಯೋಜನೆಗಳನ್ನು ಪ್ರಾರಂಭಿಸಿದೆ. ಆದರೆ, ಈಗ ಬೇಕಾಗಿರುವುದು ನಮ್ಮ ನದಿ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಪ್ರಯತ್ನಿಸುವ ದೊಡ್ಡ-ಪ್ರಮಾಣದ ಯೋಜನೆಗಳು. ಸದ್ಯದ ಪರಿಸ್ಥಿತಿಗಳನ್ನು ಗಮನಿಸಿದರೆ, ನದಿಮೂಲಗಳ ವರ್ಧನೆ ಮತ್ತು ನದಿಗಳ ಸಂರಕ್ಷಣೆಯನ್ನು ಸಂಯೋಜಿಸುವ, ನದಿಗಳ ಪುನರುಜ್ಜೀವನದ ಮೇಲೆ ಕೇಂದ್ರೀಕರಿಸುವ ಸಮಗ್ರ ನೀತಿ ಚೌಕಟ್ಟು ಸೂಕ್ತವಾಗಿರುತ್ತದೆ. ಇದು ರಾಷ್ಟ್ರ ಮತ್ತು ರಾಜ್ಯ ಸರ್ಕಾರ, ಈ ಎರಡೂ ಮಟ್ಟದಲ್ಲಿ ಆಗಬೇಕಿದೆ.
ಇದಲ್ಲದೆ, ನದಿಗಳನ್ನು ಪುನರುಜ್ಜೀವನಗೊಳಿಸುವ ಇಂತಹ ಪ್ರಯತ್ನವು ನದಿ ಸಮುದಾಯಗಳ ಜೀವನೋಪಾಯವನ್ನು ಸುಧಾರಿಸುವುದರೊಂದಿಗೆ ನಡೆಯಬೇಕಾಗಿದೆ. ಇದು ಸಮುದಾಯಕ್ಕೆ ಒಡೆತನದ ಭಾವನೆಯನ್ನು ಮತ್ತು ಆರ್ಥಿಕ ಲಾಭವನ್ನು ಖಚಿತಪಡಿಸಿ ದೀರ್ಘಾವಧಿಯಲ್ಲಿ ನದಿಯ ಪರಿಣಾಮಕಾರಿ ರಕ್ಷಣೆ ಮತ್ತು ಕಾಪಾಡುವಿಕೆಗೆ ಎಡೆಮಾಡಿಕೊಡುತ್ತದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ, “ಯಾರನ್ನೂ ಪರಿಗಣಿಸದೆ ಬಿಡುವುದಿಲ್ಲ” ಎನ್ನುವುದಕ್ಕೆ ಪ್ರಾಧಾನ್ಯತೆ ನೀಡುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್ಡಿಜಿ) 2030-ಕ್ಕೆ ಭಾರತ ಬದ್ಧವಾಗಿದೆ. ನಮ್ಮ ನದಿಗಳನ್ನು ಪುನರುಜ್ಜೀವನಗೊಳಿಸುವ ಮತ್ತು ನದೀಪಾತ್ರದ ರೈತರ ಮತ್ತು ಸಮುದಾಯಗಳ ಜೀವನೋಪಾಯವನ್ನು ವರ್ಧಿಸುವ ಗುರಿಯನ್ನು ಹೊಂದಿರುವ ಸಮಗ್ರ ನೀತಿ ಚೌಕಟ್ಟು ಭಾರತಕ್ಕೆ ಎಸ್ಡಿಜಿ 6 (ಶುದ್ಧ ನೀರು ಮತ್ತು ನೈರ್ಮಲ್ಯ), ಎಸ್ಡಿಜಿ 15 (ಭೂಮಿ ಮೇಲಿನ ಜೀವನ) ಮತ್ತು ಎಸ್ಡಿಜಿ 13 (ಹವಾಮಾನದ ವಿರುದ್ಧ ಕ್ರಮ) ಸಾಧಿಸಲು ಸಹಾಯ ಮಾಡುತ್ತದೆ. ಇದು ಇತರ ಎಸ್ಡಿಜಿಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ - ವಿಶೇಷವಾಗಿ ಗುರಿ 1 (ಬಡತನ), ಗುರಿ 2 (ಹಸಿವಿನ ನಿರ್ನಾಮ), ಗುರಿ 3 (ಉತ್ತಮ ಆರೋಗ್ಯ ಮತ್ತು ಸ್ವಾಸ್ಥ್ಯ), ಗುರಿ 8 (ಯೋಗ್ಯ ಕೆಲಸ ಮತ್ತು ಆರ್ಥಿಕ ಬೆಳವಣಿಗೆ), ಗುರಿ 9 (ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯ), ಗುರಿ 10 (ಅಸಮಾನತೆಯನ್ನು ಕಡಿಮೆ ಮಾಡುವುದು), ಗುರಿ 11 (ಸುಸ್ಥಿರ ನಗರಗಳು ಮತ್ತು ಸಮುದಾಯಗಳು) ಮತ್ತು ಗುರಿ 12 (ಸುಸ್ಥಿರ ಉತ್ಪಾದನೆ ಮತ್ತು ಬಳಕೆ).
ನದಿಗಳನ್ನು ‘ರಾಷ್ಟ್ರೀಯ ನಿಧಿ’ ಎಂದು ಗುರುತಿಸಬೇಕು. ನದಿಗಳ ರಕ್ಷಣೆ ಈ ಎರಡು ಅಂಶಗಳನ್ನು ಒಳಗೊಂಡಿರಬೇಕು: 1) ನದಿ ತನ್ನ ನೈಸರ್ಗಿಕ ದಾರಿಯಲ್ಲಿ ಎಲ್ಲಾ ಸಮಯದಲ್ಲೂ ಹರಿಯುವುದನ್ನು ಖಾತರಿಪಡಿಸುವುದು; ಮತ್ತು 2) ಜೀನ್ ಸಂಗ್ರಹ / ಜೀನಾಶಯವನ್ನು ರಕ್ಷಿಸುವ ನೀರಿನ ಜೈವಿಕ, ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳನ್ನು ಸಂರಕ್ಷಿಸುವುದು. ನದಿಗಳು ಜನಸಂಖ್ಯೆಯ ಗಣನೀಯ ಭಾಗವನ್ನು ನೇರವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸುವ ಕಾರಣದಿಂದಾಗಿ ಭಾರತದ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ನದಿಗಳಿಗೆ ತಕ್ಕುದಾದ ಸ್ಥಾನವನ್ನು ನೀಡಬೇಕಾಗಿದೆ. ಆದ್ದರಿಂದ ನಮ್ಮ ನದಿಗಳನ್ನು ಸಂರಕ್ಷಿಸುವ ಮತ್ತು ಪುನರುಜ್ಜೀವನಗೊಳಿಸುವ ಬೇಡಿಕೆಯು ಸರ್ವಪ್ರಧಾನವಾದುದು.
ಸಂಪಾದಕರ ಟಿಪ್ಪಣಿ: ಮೇಲಿನ ಲೇಖನವು ಭಾರತದ ನದಿಗಳ ಪುನರುಜ್ಜೀವನ ಕರಡು ನೀತಿ ಶಿಫಾರಸಿನ ಆಯ್ದ ತುಣುಕು. ರಾಷ್ಟ್ರವ್ಯಾಪಿ ನದಿ ಅಭಿಯಾನದಲ್ಲಿ ನೀವು ಹೇಗೆ ಭಾಗವಹಿಸಬಹುದು ಮತ್ತು ತೊಡಗಿಸಿಕೊಳ್ಳಬಹುದು ಎಂದು ತಿಳಿಯಲು RallyForRivers.org ಪುಟಕ್ಕೆ ಭೇಟಿ ನೀಡಿ.
ಗುಪ್ತಾ, ಹರೀಶ್, ಶುಹ್-ಜಿ ಕಾವೊ, ಮತ್ತು ಮಿನ್ಹಾನ್ ಡೈ. "ಮಡ್ಡಿಯ ಹರಿವುಗಳನ್ನು ಕಡಿಮೆ ಮಾಡುವಲ್ಲಿ ಮೆಗಾ ಅಣೆಕಟ್ಟುಗಳ ಪಾತ್ರ: ಏಷ್ಯಾದ ದೊಡ್ಡ ನದಿಗಳ ಅಧ್ಯಯನ." ಜರ್ನಲ್ ಆಫ್ ಹೈಡ್ರಾಲಜಿ 464 (2012): 447-458
ಭಾರತದಲ್ಲಿ ನೀರಿನ ಸುರಕ್ಷತೆಯನ್ನು ಸುಧಾರಿಸುವುದು, ಭಾರತ ನೀತಿ ಪತ್ರಿಕೆ, ಒಇಸಿಡಿ Improving Water Security in India, India Policy Paper, OECD
ಭಾರತದ ಕಾಲು ಭಾಗದಷ್ಟು ನೆಲ ಮರುಭೂಮಿಗೆ ಪರಿವರ್ತಿತವಾಗುತ್ತಿದೆ, ಸೈಂಟಿಫಿಕ್ ಅಮೇರಿಕನ್ A Quarter of India’s Land Is Turning into Desert, Scientific American