ಶ್ರೀ ರಾಮನವಮಿ: ಬಾಳನ್ನು ಸಮಚಿತ್ತತೆಯಿಂದ ನಿರ್ವಹಿಸುವುದು
ಇಂದು, ಶ್ರೀ ರಾಮನವಮಿಯ ಸಂದರ್ಭದಲ್ಲಿ, ಸದ್ಗುರುಗಳು ರಾಮನನ್ನು ಭಾರತದಾದ್ಯಂತ ಏಕೆ ಆರಾಧಿಸುತ್ತಿದ್ದಾರೆ, ಮತ್ತು ಅವನ ಜೀವನದಿಂದ ನಾವು ಏನನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ವಿವರಿಸುತ್ತಾರೆ.
ஸ்ரீ ராமரிடம் என்ன கற்கலாம்?
శ్రీ రామనవమి: రాముని ఔన్నత్యం తెలుసుకోండి
ಸದ್ಗುರು: ಬಹುತೇಕ ಭಾರತೀಯರು ರಾಮನನ್ನು ಆರಾಧಿಸುತ್ತಾರೆ, ಆದರೆ ನೀವು ಅವನ ಜೀವನದಲ್ಲಿ ನಡೆದ ಸನ್ನಿವೇಶಗಳನ್ನು ಹಾಗೂ ಜೀವನವು ಅವನಿಗೆ ಸಂಭವಿಸಿದ ರೀತಿಯನ್ನು ಗಮನಿಸಿದರೆ, ಅದು ನಿರಂತರ ವಿಪತ್ತುಗಳ ಸರಣಿಯಂತೆ ತೋರುತ್ತದೆ. ಅವನು ತನಗೆ ನ್ಯಾಯವಾಗಿ ಸಲ್ಲಬೇಕಾದ ರಾಜ್ಯವನ್ನು ಕಳೆದುಕೊಂಡು ಕಾಡಿಗೆ ತೆರಳುತ್ತಾನೆ. ನಂತರ ಅವನ ಹೆಂಡತಿಯನ್ನು ಅಪಹರಿಸಲಾಗುತ್ತದೆ ಮತ್ತು ಅವನು ಬಯಸುವುದಿಲ್ಲವಾದರೂ ಸಹ, ಅವನು ಒಂದು ಘೋರ ಯುದ್ಧವನ್ನು ಮಾಡಬೇಕಾಗುತ್ತದೆ. ನಂತರ ಅವನು ತನ್ನ ಹೆಂಡತಿಯನ್ನು ಮರಳಿ ಕರೆತಂದಾಗ, ತನ್ನ ಸುತ್ತಲಿನ ಜನರಿಂದ ಅವಳ ಬಗ್ಗೆ ಬಹಳ ಅಸಹ್ಯಕರವಾದ ಟೀಕೆಗಳನ್ನು ಕೇಳಬೇಕಾಗಿ ಬರುತ್ತದೆ. ಆದ್ದರಿಂದ ತುಂಬು ಗರ್ಭಿಣಿಯಾಗಿದ್ದ ತನ್ನ ಪ್ರೀತಿಯ ಹೆಂಡತಿಯನ್ನು ಅವನು ಕಾಡಿನಲ್ಲಿ ಬಿಟ್ಟುಬರುತ್ತಾನೆ. ನಂತರ ಅವನು ತಿಳಿಯದೆ, ತನ್ನದೇ ಸ್ವಂತ ಮಕ್ಕಳ ವಿರುದ್ಧ ಯುದ್ಧವನ್ನು ಮಾಡುತ್ತಾನೆ ಮತ್ತು ಅಂತಿಮವಾಗಿ ತನ್ನ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ. ಅವನ ಜೀವನವು ನಿರಂತರವಾದ ದುರ್ಘಟನೆಗಳ ಸರಮಾಲೆಯಾಗಿತ್ತು. ಹೀಗಿದ್ದರೂ ಸಹ, ಅನೇಕ ಜನರು ರಾಮನನ್ನೇಕೆ ಪೂಜಿಸುತ್ತಾರೆ?
ಶ್ರೀರಾಮನ ಮಹತ್ವ
ರಾಮನ ಮಹತ್ವವಿರುವುದು ಅವನು ಜೀವನದಲ್ಲಿ ಎದುರಿಸಿದ ಸಂದರ್ಭಗಳಿಂದಲ್ಲ. ಅವನ ಮಹತ್ವವಿರುವುದು ಅವನು ತನಗೆ ಸಂಭವಿಸಿದ ದುರಂತಗಳ ಸರಣಿಯ ಮೂಲಕ ತನ್ನನ್ನು ತಾನು ಎಷ್ಟು ಸಮಚಿತ್ತತೆಯಿಂದ ನಿಭಾಯಿಸಿಕೊಂಡು ಹೋದ ಎನ್ನುವುದರಲ್ಲಿ.
ಮುಕ್ತಿಯನ್ನು ಹಂಬಲಿಸುವವರು ಹಾಗೂ ಸಮಚಿತ್ತತೆಯ ಜೀವನವನ್ನು ಬಯಸುವವರು ರಾಮನನ್ನು ಆದರ್ಶವಾಗಿ ಕಂಡರು, ಏಕೆಂದರೆ ಬದುಕನ್ನು ಎಷ್ಟೇ ಚೆನ್ನಾಗಿ ನಿರ್ವಹಿಸಿದರೂ ಸಹ ಬಾಹ್ಯ ಸನ್ನಿವೇಶಗಳು ಯಾವುದೇ ಸಮಯದಲ್ಲಿ ಕೈತಪ್ಪಿ ಹೋಗಬಹುದು ಎಂಬ ಅರಿವು ಮತ್ತು ತಿಳುವಳಿಕೆ ಅವರಿಗಿತ್ತು. ನೀವು ಜೀವನದಲ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿ ಆಯೋಜಿಸಿಟ್ಟಿರಬಹುದು, ಆದರೆ ಒಂದೇ ಒಂದು ಚಂಡಮಾರುತ ಅದೆಲ್ಲವನ್ನೂ ತಲೆಕೆಳಗಾಗಿಸಬಹುದು. ಈ ರೀತಿಯ ವಿಷಯಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ. ಅವು ನಮಗೆ ಸಂಭವಿಸದೇ ಇರಬಹುದು, ಆದರೆ ನಮ್ಮ ಸುತ್ತಲಿನ ಸಾವಿರಾರು ಜನರಿಗೆ ಸಂಭವಿಸುತ್ತಿವೆ. "ಓ ನನಗೆ ಹಾಗಾಗುವುದಿಲ್ಲ,” ಎಂದುಕೊಂಡು ಬದುಕುವುದು ಮೂರ್ಖತನ. "ಅದು ಸಂಭವಿಸಿದರೂ ಸಹ, ನಾನು ಅದರ ಮೂಲಕ ಸಮಚಿತ್ತತೆಯಿಂದ ಸಾಗುತ್ತೇನೆ” ಎಂದು ಬದುಕುವುದು ವಿವೇಕ. ಈ ಅದ್ಭುತವಾದ ವಿವೇಕವನ್ನು ಜನ ರಾಮನಲ್ಲಿ ಕಂಡಿದ್ದರಿಂದ ಅವರು ಅವನನ್ನು ಆದರ್ಶವಾಗಿ ಕಂಡರು. ಜೀವನವು ವಿಪತ್ತುಗಳ ನಿರಂತರ ಸರಣಿಯಾದರೂ ಸಹ, ರಾಮ ತನಗಾಗಿ ತಾನು ನಿಶ್ಚಯಿಸಿಕೊಂಡಿದ್ದ ಜೀವನದ ಮೂಲಭೂತ ಸೂತ್ರಗಳಿಂದ ಹಾಗೂ ತನ್ನ ಸತ್ಯನಿಷ್ಠೆಯಿಂದ ಎಂದಿಗೂ ವಿಚಲಿತನಾಗಲಿಲ್ಲ. ಏನಕ್ಕೂ ಜಗ್ಗದೇ ಮಾಡಬೇಕಾದುದನ್ನು ಮಾಡಿಯೇ ತೀರಿದ, ಮತ್ತು ತನ್ನ ಜೀವನವನ್ನು ಅತ್ಯಂತ ಸಮತ್ವದಿಂದ ಬಾಳಿದ.
ವಿಪತ್ತುಗಳನ್ನು ಹಂಬಲಿಸುವ ಸಂಪ್ರದಾಯ!
ಆಧ್ಯಾತ್ಮಿಕ ಹಾದಿಯಲ್ಲಿ ವಿಪತ್ತುಗಳಿಗಾಗಿ ಹಂಬಲಿಸುವ ಸಂಪ್ರದಾಯವೇ ಇದೆ. ಅನೇಕ ಆಧ್ಯಾತ್ಮಿಕ ಅನ್ವೇಷಕರು ತಮ್ಮ ಜೀವನದಲ್ಲಿ ಯಾವುದಾದರೊಂದು ದುರ್ಘಟನೆ ನಡೆಯಬೇಕೆಂದು ಕೇಳಿಕೊಳ್ಳುತ್ತಿರುತ್ತಾರೆ. ಏಕೆಂದರೆ ಅವರುಗಳು ಸಾವು ಸಮೀಪಿಸುವ ಮುನ್ನ ತಮ್ಮನ್ನು ತಾವು ಸಂಪೂರ್ಣವಾಗಿ ಪರೀಕ್ಷಿಸಿಕೊಳ್ಳಬೇಕೆಂದು ಬಯಸುತ್ತಾರೆ. ಅವರು ತಮ್ಮ "ಗುಣಮಟ್ಟದ ಪರೀಕ್ಷೆಯನ್ನು” ಮಾಡಿಕೊಳ್ಳಲು ಬಯಸುತ್ತಾರೆ. ಜೀವನದಲ್ಲಿ ಏನೇ ಆದರೂ, ಅವರು ಅದರ ಮೂಲಕ ಸಮಚಿತ್ತತೆಯಿಂದ ಹಾದುಹೋಗುತ್ತಾರೆ, ಏಕೆಂದರೆ ದೇಹವನ್ನು ತ್ಯಜಿಸುವ ಕ್ಷಣ ಬಂದಾಗ, ಅದು ಬಹುತೇಕ ಜನ ತಮ್ಮ ಸಮತೋಲನವನ್ನು ಕಳೆದುಕೊಳ್ಳುವ ಸಮಯ. ಎಲ್ಲವೂ ಸರಿಯಾಗಿಯೇ ನಡೆಯುತ್ತಿರುತ್ತದೆ, ಆದರೆ ನೀವು ನಿಜ ಎಂದು ತಿಳಿದಿರುವ ಎಲ್ಲವೂ ನಿಮ್ಮ ಕೈ ತಪ್ಪಿ ಹೋಗುತ್ತಿರುವಾಗ, ಅಂದರೆ ಸಾವು ಎದುರಾದಾಗ, ನೀವು ನಿಮ್ಮ ನಿಯಂತ್ರಣವನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳುತ್ತೀರಿ. ಆದ್ದರಿಂದ ಆಧ್ಯಾತ್ಮದ ದಾರಿಯಲ್ಲಿ ಸಾಗುವ ಜನ ದುರ್ಘಟನೆಗಳಿಗಾಗಿ ಬೇಡಿಕೊಳ್ಳುತ್ತಿದ್ದರು.
ಉದಾಹರಣೆಗೆ, ತನ್ನ ಬಾಲ್ಯದಿಂದಲೇ ತನ್ನನ್ನು ತಾನು ಸಂಪೂರ್ಣವಾಗಿ ಶಿವನಿಗೆ ಸಮರ್ಪಿಸಿಕೊಂಡಿದ್ದ ಅಕ್ಕ ಮಹಾದೇವಿಯು, ಒಬ್ಬ ರಾಜನನ್ನು ವಿವಾಹವಾಗಿದ್ದರೂ ಸಹ, ಅವಳು ಶಿವನನ್ನು ಬೇಡಿಕೊಳ್ಳುತ್ತಿದ್ದುದು : "ಓ ಶಿವ, ನನಗೆ ಹಸಿವಾಗುವಂತೆ ಮಾಡು, ಆದರೆ ನನಗೆ ಯಾವುದೇ ಆಹಾರ ದೊರೆಯದಂತೆ ಖಚಿತಪಡಿಸು. ಅಕಸ್ಮಾತ್ ನನಗೆ ಊಟ ಸಿಕ್ಕರೆ, ನಾನು ಅದನ್ನು ಬಾಯಿಯಲ್ಲಿ ಹಾಕಿಕೊಳ್ಳುವ ಮೊದಲು, ಅದು ನನ್ನ ಕೈಗಳಿಂದ ಜಾರಿಬೀಳುವಂತೆ ಮಾಡು. ನಾನು ನೆಲದಿಂದ ಅದನ್ನು ಎತ್ತಿಕೊಳ್ಳುವ ಮೊದಲು, ಹಸಿದ ನಾಯಿಯೊಂದು ಅದನ್ನು ತಿನ್ನುವಂತೆ ಮಾಡು. ನನ್ನನ್ನು ಎಲ್ಲಾ ಪರಿಸ್ಥಿತಿಗಳ ಮೂಲಕ ಹಾದುಹೋಗುವಂತೆ ಮಾಡು, ಹಾಗಾದಾಗ ಹೊರಗಿನ ಪರಿಸ್ಥಿತಿಗಳು ಹೇಗೇ ಇದ್ದರೂ, ನಾನು ಸಮಚಿತ್ತತೆಯಿಂದ ಬದುಕುವುದನ್ನು ಕಲಿಯುತ್ತೇನೆ." ಎಂಬುದಾಗಿತ್ತು. ಇದು ಭಕ್ತಿಯ ಒಂದು ತೀವ್ರ ಸ್ವರೂಪವಾಗಿದೆ. ನೀವು ಸದಾ ಸಿದ್ಧರಾಗಿರಲು ಬಯಸುತ್ತೀರಿ; ಸಾವಿನ ಕ್ಷಣ ಬಂದಾಗ, ಸ್ವಲ್ಪಮಟ್ಟಿಗಿನ ಹಿಂಜರಿಕೆಯನ್ನೂ ಸಹ ನೀವು ಬಯಸುವುದಿಲ್ಲ, ಏಕೆಂದರೆ ಅದು ನೀವು ಅತ್ಯಂತ ಘನತೆಯಿಂದ ನಿರ್ವಹಿಸಬೇಕಾದ ಕ್ಷಣ. ಇದಕ್ಕಾಗಿ ಸ್ವಲ್ಪಮಟ್ಟಿಗಿನ ಅಭ್ಯಾಸವು ಬೇಕಾಗುತ್ತದೆ. ಇಲ್ಲದಿದ್ದರೆ, ಇದ್ದಕ್ಕಿದ್ದಂತೆ ಒಂದು ದಿನ ಸಾವು ಬಂದೆರಗಿದಾಗ, ಅದನ್ನು ನಿಭಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ರೀತಿಯ ಜನರು ಪ್ರಜ್ಞಾಪೂರ್ವಕವಾಗಿ ತಮ್ಮ ಜೀವನದಲ್ಲಿ ಪರೀಕ್ಷೆ ಮತ್ತು ಸಂಕಷ್ಟಗಳನ್ನು ಹಂಬಲಿಸುತ್ತಿರುತ್ತಾರೆ.
ಜಗತ್ತಿನ ಎಲ್ಲೆಡೆ ಈ ಸಂಪ್ರದಾಯವಿದೆ - ಯಾರಾದರೂ ಆಧ್ಯಾತ್ಮಿಕ ಪಥವನ್ನು ಆರಿಸಿಕೊಂಡರೆ ಅವರು ಪ್ರಜ್ಞಾಪೂರ್ವಕವಾಗಿ ಕೋರುವ ಮೊದಲ ವಿಷಯವೆಂದರೆ ಅದು ಬಡತನ. ಬಡತನದಲ್ಲಿ ಜೀವಿಸುವಾಗ ಘನತೆಯಿಂದ ನಡೆದುಕೊಳ್ಳುವುದು ಸುಲಭದ ಸಂಗತಿಯಲ್ಲ - ಅದು ನಿಮ್ಮನ್ನು ಪ್ರತಿ ರೀತಿಯಲ್ಲಿ ಪರೀಕ್ಷಿಸುತ್ತದೆ. ನೀವು ಹಸಿವಾದಾಗ, ಮನುಷ್ಯನಿಗಿರುವ ಎಲ್ಲಾ ಲಕ್ಷಣಗಳು ಕಳೆದುಹೋಗಿ, ನೀವು ಪ್ರಾಣಿಗಳಂತಾಗುತ್ತೀರಿ. ನೀವು ಹಸಿದಿರುವಾಗ ಸಮಚಿತ್ತತೆಯಿಂದಿರುವುದು ಸುಲಭದ ಮಾತಲ್ಲ. ನೀವು ನಮ್ಮ ದೇಶದ ಯೋಗಿಗಳನ್ನು ನೋಡಿದರೆ, ಅವರು ಯಾವತ್ತೂ ಏನನ್ನೂ ಕೇಳುವುದಿಲ್ಲ, ಅವರು ಸುಮ್ಮನೆ ನಡೆದು ಹೋಗುತ್ತಿರುತ್ತಾರೆ. ಅವರು ಹಸಿದಿದ್ದಾರೆಂದು ನಿಮಗೆ ಗೊತ್ತಾಗಬಹುದು. ಅವರು ಕೆಲವೊಮ್ಮೆ ಹಲವು ದಿನಗಳಿಂದ ತಿಂದಿರುವುದಿಲ್ಲ, ಆದರೆ ಅವರು ತಮ್ಮನ್ನು ಬಹಳ ಘನತೆಯೊಂದಿಗೆ ನಡೆಸಿಕೊಳ್ಳುತ್ತಾರೆ. ನೀವು ಅವರಿಗೆ ಕೇವಲ ಒಂದು ಹೊತ್ತಿನ ಊಟವನ್ನು ಕೊಟ್ಟರೆ, ಅವರದನ್ನು ಸ್ವೀಕರಿಸುತ್ತಾರೆ. ಆದರೆ ನೀವು ಇನ್ನೊಂದು ಊಟಕ್ಕೆ ಹಣ ಕೊಟ್ಟರೆ ಅವರದನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರು ಜೀವನದಲ್ಲಿ ಸದಾಕಾಲ ತಮ್ಮನ್ನು ತಾವು ಪರೀಕ್ಷೆಗೆ ಒಡ್ಡಿಕೊಳ್ಳಲು ಬಯಸುತ್ತಾರೆ. ಇಂದು ನೀವು ಎರಡು ಊಟಕ್ಕೆ ಹಣವನ್ನು ತೆಗೆದುಕೊಂಡರೆ, ನಾಳೆ ಹತ್ತು ಊಟಗಳಿಗೆ ಹಣವನ್ನು ತೆಗೆದುಕೊಳ್ಳಲು ತಾರ್ಕಿಕವಾಗಿ ನಿಮ್ಮನ್ನು ನೀವು ಒಪ್ಪಿಸಿಕೊಂಡುಬಿಡುತ್ತೀರಿ. ನೀವು ಒಂದನ್ನು ಸೇರಿಸಿದಾಕ್ಷಣ, ತಾರ್ಕಿಕ ದೃಷ್ಟಿಯಿಂದ ಮತ್ತೊಂದನ್ನೂ ಸೇರಿಸಬಹುದು ಅನಿಸುತ್ತದೆ. ನಂತರ ನಿಧಾನವಾಗಿ ನೀವು ನಿಮ್ಮ ಇಡೀ ಜೀವನವನ್ನು ವ್ಯವಸ್ಥಿತಗೊಳಿಸಲು ಪ್ರಾರಂಭಿಸುತ್ತೀರಿ ಮತ್ತು ಅದು ಅಂತ್ಯವಿಲ್ಲದಂತೆ ಬೆಳೆಯುತ್ತದೆ. ನಮ್ಮ ಹೊಟ್ಟೆಪಾಡಿನ ಪ್ರಕ್ರಿಯೆಯನ್ನು ನಾವು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇವೆ ಎಂಬುದನ್ನು ನೀವೇ ನೋಡಿ. ನಾವು ನಮ್ಮ ಜೀವಿತದ ಪ್ರಕ್ರಿಯೆಯನ್ನು ಇಂದು ಆಕಾಶಕ್ಕೆ ಕೊಂಡೊಯ್ದಿದ್ದರೂ ಸಹ ಇನ್ನೂ ಸಾಲದಂತಾಗಿದೆ. ಹಾಗಾಗಿ ಈ ಯೋಗಿಗಳಿಗೆ ನೀವು ಒಂದು ಊಟವನ್ನು ಕೊಟ್ಟರೆ, ಅವರದನ್ನು ಸ್ವೀಕರಿಸುತ್ತಾರೆ, ಆದರೆ ನೀವು ಇನ್ನೊಂದು ಊಟಕ್ಕೆ ಹಣವನ್ನು ಕೊಟ್ಟರೆ, ಅವರದನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರು ಸದಾಕಾಲ ಜೀವನದಲ್ಲಿ ತಮ್ಮನ್ನು ತಾವು ಪರೀಕ್ಷೆಗೆ ಒಡ್ಡಿಕೊಳ್ಳಲು ಬಯಸುತ್ತಾರೆ.
ರಾಮ – ಘನತೆಯ ಮೂರ್ತರೂಪ
ಹಾಗಾಗಿ ಜನ ರಾಮನನ್ನು ಪೂಜಿಸುವುದು ಅವನ ಜೀವನದ ಲೌಕಿಕ ಯಶಸ್ಸಿನಿಂದಾಗಲ್ಲ, ಆದರೆ ಅತ್ಯಂತ ಕಷ್ಟದ ಕ್ಷಣಗಳಲ್ಲಿ ಅವನು ತನ್ನನ್ನು ತಾನು ಘನತೆಯಿಂದ ನಡೆಸಿಕೊಂಡ ಕಾರಣಕ್ಕಾಗಿ. ಅದೇ ಒಬ್ಬರ ಜೀವನದ ಅತ್ಯುನ್ನತ ಮೌಲ್ಯ. ನೀವು ಎಷ್ಟು ಸಂಪತ್ತನ್ನು ಹೊಂದಿರುವಿರಿ, ನೀವು ಏನು ಮಾಡಿದಿರಿ, ಏನಾಯಿತು ಅಥವಾ ಏನಾಗಲಿಲ್ಲ ಎಂಬುದಲ್ಲ ಪ್ರಶ್ನೆ. ಏನೇ ಆದರೂ ಸಹ, ನಿಮ್ಮನ್ನು ನೀವು ಹೇಗೆ ನಡೆಸಿಕೊಂಡಿರಿ? - ನೀವು ಯಾರು ಎಂಬುದರ ಗುಣಮಟ್ಟವನ್ನು ನಿರ್ಧರಿಸುವುದು ಇದೇ. ಇಂದು ವ್ಯವಹಾರ ಮಾರುಕಟ್ಟೆ ಉತ್ತಮವಾಗಿ ನಡೆಯುತ್ತಿರುವುದರಿಂದ ನೀವು ಕೋಟಿ ರೂಪಾಯಿಗಳನ್ನು ಗಳಿಸಬಹುದು. ಅದ್ಯಾವುದೂ ಮುಖ್ಯವಾಗುವುದಿಲ್ಲ. ಅದೊಂದು ಸಾಮಾಜಿಕ ಪರಿಸ್ಥಿತಿಯಷ್ಟೆ. ನಿಮ್ಮ ಸಮಾಜದಲ್ಲಿ ನೀವು ಕೋಟ್ಯಾಧೀಶರೇ ಆಗಿರಬಹುದು. ಇನ್ನೊಂದು ಸಮಾಜದಲ್ಲಿ ನೀವು ಸೋತವರಂತೆ ಬಿಂಬಿತರಾಗಬಹುದು. ಸಂಪತ್ತಿನೊಂದಿಗೆ ಬರುವ ಸೌಕರ್ಯಗಳನ್ನು ಆನಂದಿಸುವುದು ಪರವಾಗಿಲ್ಲ. ಆದರೆ ಮನುಷ್ಯನ ಬೆಳವಣಿಗೆಯಲ್ಲಿ ಬಹುಮುಖ್ಯವಾದ ವಿಷಯವೆಂದರೆ, ಯಾವುದೇ ಪರಿಸ್ಥಿತಿಯನ್ನು ನೀವು ಎಷ್ಟು ಸಮಚಿತ್ತತೆಯಿಂದ ನಿರ್ವಹಿಸುವಿರಿ ಎನ್ನುವುದಾಗಿದೆ. ಬಹಳಷ್ಟು ಜನರಿಗೆ ಈ ರೀತಿ ಸಂಭವಿಸುತ್ತಿರುವುದನ್ನು ನೀವು ನೋಡುತ್ತೀರಿ: ತಮ್ಮ ಜೀವನದಲ್ಲಿ ಒಂದು ದೊಡ್ಡ ಸವಾಲು ಎದುರಾಗುವ ತನಕ ಅವರು ಸರಿಯಾಗಿಯೇ ಇರುತ್ತಾರೆ. ನಂತರ, ಅವರು ಯೋಚಿಸಿದ ರೀತಿಯಲ್ಲಿ ಏನಾದರೂ ನಡೆಯದೇ ಹೋದರೆ, ಅವರು ನಿಜವಾಗಿಯೂ ಯಾರೆಂಬುದನ್ನು ನೀವು ನೋಡುತ್ತೀರಿ. ಆಗ ಅವರು ಹೇಗೆಂದರೆ ಹಾಗೆ, ನಿಯಂತ್ರಣವೇ ಇಲ್ಲದಂತೆ ವರ್ತಿಸಿಬಿಡುತ್ತಾರೆ.
ಜನರು ಯಾವಾಗಲೂ ಅವರು ಪಡೆದುಕೊಳ್ಳುವ ವಸ್ತುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ನೀವು ಗಳಿಸುವ ವಸ್ತುಗಳು ನಿಮ್ಮ ಜೀವನಕ್ಕೆ ಯಾವ ಮೌಲ್ಯವನ್ನೂ ಒದಗಿಸುವುದಿಲ್ಲ. ನಮ್ಮ ದೇಶದಲ್ಲಿ ನೀವಿದನ್ನು ನೋಡಬಹುದು. ಒಂದು ಗುಡಿಸಲಿನ ಹತ್ತಿರವೇ ಒಂದು ಬೃಹತ್ ಬಂಗಲೆ ಇರುತ್ತದೆ. ಆದರೆ ಆ ಸಣ್ಣ ಗುಡಿಸಲಿನಲ್ಲಿ ವಾಸಿಸುವ ವ್ಯಕ್ತಿ ನಿಮ್ಮಷ್ಟೇ ಹೆಮ್ಮೆಯಿಂದ ಬದುಕುತ್ತಿರುತ್ತಾನೆ; ಬೇರೆಯವರು ಹೇಗಿದ್ದಾರೆ ಎಂಬುದನ್ನು ಲೆಕ್ಕಿಸದೆ, ಮನುಷ್ಯನೊಬ್ಬ ತನ್ನನ್ನು ತಾನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಾನೆ - ಕೇವಲ ಹೆಮ್ಮೆಯಿಂದಷ್ಟೇ ಅಲ್ಲ, ಘನತೆಯಿಂದ ಕೂಡ ಎನ್ನುವುದು ಒಳ್ಳೆಯ ವಿಷಯವೆ. ಗಲ್ಲಿಗೆ ಹತ್ತಬೇಕಿದ್ದರೂ ಸಹ, ನೀವು ಘನತೆಯಿಂದಲೇ ನಡೆಯಬಹುದು. ಇದೇ ಮನುಷ್ಯನ ಗುಣವೈಶಿಷ್ಟ್ಯ. ಉಳಿದದ್ದು ನಮಗೆ ಎದುರಾಗುವ ಸನ್ನಿವೇಶಗಳ ಗುಣಲಕ್ಷಣಗಳಷ್ಟೆ.
ಇದರ ಅರ್ಥ ನಾವು ನಮ್ಮ ಜೀವನವನ್ನು ಸರಿಯಾಗಿ ನಿರ್ವಹಿಸಬಾರದು ಎಂದೇನು? ಇಲ್ಲ, ನಮ್ಮ ಸುತ್ತಲಿರುವುದನ್ನು ನಾವು ಚೆನ್ನಾಗಿಯೇ ನಿರ್ವಹಿಸುತ್ತೇವೆ ಏಕೆಂದರೆ ಅದು ಪ್ರತಿಯೊಬ್ಬರಿಗೂ ಒಳ್ಳೆಯದು. ಕೇವಲ ಸನ್ನಿವೇಶಗಳನ್ನು ಉತ್ತಮವಾಗಿ ನಿರ್ವಹಿಸಿದ ಮಾತ್ರಕ್ಕೆ ನನ್ನೊಳಗೆ ನಾನು ಚೆನ್ನಾಗಿರಬೇಕೆಂದಿಲ್ಲ. ನಾನು ಪ್ರತಿ ಸನ್ನಿವೇಶದಲ್ಲಿ ಸಮಚಿತ್ತತೆಯಿಂದ ನಡೆದುಕೊಂಡಾಗ ಮಾತ್ರ ನನ್ನೊಳಗೆ ನಾನು ಚೆನ್ನಾಗಿರುತ್ತೇನೆ. ಆದರೆ ನೀವು ಸನ್ನಿವೇಶಗಳನ್ನು ನಿರ್ವಹಿಸುವುದು, ನಿಮಗೆ ಪ್ರತಿಯೊಬ್ಬರ ಯೋಗಕ್ಷೇಮದ ಕಳಕಳಿಯಿರುವುದರಿಂದಾಗಿ ಅಷ್ಟೆ.
ರಾಮ ತನ್ನ ಜೀವನದಲ್ಲಿನ ಸನ್ನಿವೇಶಗಳನ್ನು ನಿರ್ವಹಿಸಲು ಪ್ರಯತ್ನಿಸಿದ, ಆದರೆ ಅದರಲ್ಲಿ ಯಾವಾಗಲೂ ಸಫಲನಾಗಲಿಲ್ಲ. ಅವನು ಕಷ್ಟದಲ್ಲಿಯೇ ಜೀವಿಸಿದ ಮತ್ತು ವಿಷಯಗಳು ನಿಯಂತ್ರಣವನ್ನು ಕಳೆದುಕೊಂಡಿದ್ದವು, ಆದರೆ ಮುಖ್ಯವಾದ ವಿಷಯವೇನೆಂದರೆ, ಅವನು ಯಾವಾಗಲೂ ತನ್ನನ್ನು ತಾನು ಸಮಚಿತ್ತತೆಯಿಂದ ನಡೆಸಿಕೊಂಡ. ಇದು ಆಧ್ಯಾತ್ಮಿಕರಾಗುವುದರ ಸಾರಸತ್ತ್ವ. ನಿಮ್ಮ ಚೇತನವು ಒಂದು ಸುಂದರವಾದ ಪರಿಮಳಯುಕ್ತ ಹೂವಿನಂತೆ ಅರಳಲು ಬೇಕಾದ ಸೂಕ್ತ ಅಂತರ್-ಪರಿಸರವನ್ನು ನೀವು ಬಯಸುವುದಾದರೆ, ಅನುಗ್ರಹದಿಂದ ಕೂಡಿದಂತಹ ವಾತಾವರಣವನ್ನು ನೀವು ನಿಮ್ಮೊಳಗೆ ನಿರಂತರವಾಗಿ ಸೃಷ್ಟಿಸುತ್ತಿರಬೇಕು.