ನೆಮ್ಮದಿಯಿಂದ ಸಾಯುವುದು ಹೇಗೆ: ಆಪ್ತರ ಮೃತ್ಯು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳುವುದು.
ಸಾವು ಅನಿವಾರ್ಯವಾದರೂ ಕೆಲವರಿಗಷ್ಟೆ ನೆಮ್ಮದಿಯಿಂದ ಸಾಯುವ ಅದೃಷ್ಟವಿರುತ್ತದೆ. ಸಾಯುತ್ತಿರುವವರು ನೆಮ್ಮದಿಯಿಂದ ನಿರ್ಗಮಿಸುತ್ತಿದ್ದಾರೆಂದು ನಾವು ಹೇಗೆ ಖಚಿತಪಡಿಸಬೇಕು ಮತ್ತು ಬಿಟ್ಟು ಬಿಟ್ಟು ಸಾಯುವುದನ್ನು ತಪ್ಪಿಸುವ ಮಹತ್ವದ ಬಗ್ಗೆ ಸದ್ಗುರುಗಳು ಇಲ್ಲಿ ಹೇಳುತ್ತಾರೆ.
ಪ್ರಶ್ನೆ: ನನ್ನ ತಾಯಿ ಸಾವಿನಂಚಿನಲ್ಲಿದ್ದಾರೆ. ಅವರು ನೆಮ್ಮದಿಯಿಂದ ಸಾಯುವಂತಾಗಲು ನಾನು ಅನುಸರಿಸಬಹುದಾದ ಉತ್ತಮವಾದ ಮಾರ್ಗ ಯಾವುದು?
ಸದ್ಗುರು: ಪ್ರಪಂಚದಲ್ಲೆಡೆಯೂ ಜನರು ’ನೆಮ್ಮದಿಯಿಂದ ಸಾಯುವುದು ಹೇಗೆ’ ಎಂಬುದರ ಬಗ್ಗೆ ಮಾತನಾಡಿದ್ದಾರೆ. ನೆಮ್ಮದಿಯ ಸಾವೆಂದು ಅವರು ಹೇಳುತ್ತಿರುವುದು ನೋವು ಮತ್ತು ಅತೃಪ್ತಿಯಿಲ್ಲದೆ ಸಾಯುವುದೆು ಎಂದು; ಅವರು ಸಾವಿನ ಮಡಿಲಿಗೆ ಹಾಯಾಗಿ ಜಾರಲು ಬಯಸುತ್ತಾರೆ. ಇದನ್ನು ಅನುವು ಮಾಡಿಕೊಡಲು ನೀವು ಮಾಡಬಹುದಾದ ಸರಳವಾದ ಕೆಲಸವಿದು: ನೀವೊಂದು ತುಪ್ಪದ ಅಥವಾ ಬೆಣ್ಣೆಯ ದೀಪವನ್ನು ನಿರಂತರವಾಗಿ ಅವರ ಪಕ್ಕದಲ್ಲಿ ಬೆಳಗಿಸಿಟ್ಟಿರಿ. ಇದೊಂದು ರೀತಿಯ ಪ್ರಭಾವಳಿಯನ್ನು ಸೃಷ್ಟಿಸುತ್ತದೆ. ಇದು ಬಿಟ್ಟು ಬಿಟ್ಟು ಸಾಯುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ನೀವು ಇನ್ನೊಂದು ಕೆಲಸವನ್ನೂ ಮಾಡಬಹುದು: “ಬ್ರಹ್ಮಾನಂದ ಸ್ವರೂಪ”ದಂತಹ ಯಾವುದಾದರೂ ಮಂತ್ರವನ್ನು ನೀವು ಕೋಣೆಯಲ್ಲಿ ಸೌಮ್ಯವಾಗಿ ಕೇಳುವಂತೆ ಹಾಕಬಹುದು. ಇಂತಹ ಪವಿತ್ರವಾದ ಶಬ್ದವು ಹಿನ್ನಲೆಯಲ್ಲಿದ್ದರೆ, ಅದೂ ಕೂಡ ಮರಣವು ಶಾಂತಿಯುತವಾಗುವಂತೆ ಸಹಾಯ ಮಾಡುತ್ತದೆ.
ಒಬ್ಬ ವ್ಯಕ್ತಿ ಸತ್ತರು ಎಂದು ದೃಢೀಕರಿಸಿದ ನಂತರ 14 ದಿನಗಳವರೆಗೆ ದೀಪವನ್ನು ಉರಿಸುವುದು ಮತ್ತು ಸರಳವಾದ ಮಂತ್ರದ ಪಠಣವು ಮುಂದುವರೆಯಬೇಕು, ಏಕೆಂದರೆ ಅವರು ವೈದ್ಯಕೀಯವಾಗಿ ಸತ್ತಿರಬಹುದು, ಆದರೆ ಅವರ ಅಸ್ತಿತ್ವವು ಸಂಪೂರ್ಣವಾಗಿ ಇಲ್ಲವಾಗಿಲ್ಲ. ಸಾವು ನಿಧಾನವಾಗಿ ಆಗುವಂತಹುದು. ಭೂಮಿಯು ಒಂದು ತುಣುಕಾದ ಈ ದೇಹದಿಂದ ಜೀವ ಸ್ಥಗಿತಗೊಳಿಸುವ ಪ್ರಕ್ರಿಯೆಯು ಹಂತ ಹಂತವಾಗಿ ನಡೆಯುತ್ತದೆ. ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ, ಶ್ವಾಸಕೋಶ, ಹೃದಯ ಮತ್ತು ಮೆದುಳಿನ ಚಟುವಟಿಕೆ ನಿಂತುಹೋಗಿರುವ ಕಾರಣದಿಂದ ಅವರನ್ನು ಸತ್ತರೆಂದು ಘೋಷಿಸಲಾಗುತ್ತದೆ, ಆದರೆ ಅದು ನಿಜವಲ್ಲ. ಸತ್ತ ವ್ಯಕ್ತಿಯ ದೇಹವು ಸುಟ್ಟುಹೋದರೂ ಸಹ, ಅವರಿನ್ನೂ ಸಂಪೂರ್ಣವಾಗಿ ಸತ್ತಿಲ್ಲ ಏಕೆಂದರೆ ಬೇರೆ ಆಯಾಮಕ್ಕಾಗಿನ ಅವರ ಪ್ರಯಾಣವು ಆರಂಭವಾಗಿಲ್ಲ.
ಇದರ ಆಧಾರದ ಮೇರೆಗೆ ಯಾರಾದರೂ ಸತ್ತ 14 ದಿನಗಳ ನಂತರದಲ್ಲಿ ಮಾಡಬೇಕಾಗಿರುವ ವಿವಿಧ ರೀತಿಯ ಆಚರಣೆಗಳು ಭಾರತದಲ್ಲಿವೆ. ದುರದೃಷ್ಟವಶಾತ್, ಈ ಆಚರಣೆಗಳ ಹಿಂದಿನ ಜ್ಞಾನ ಮತ್ತು ಶಕ್ತಿ ಹೆಚ್ಚಾಗಿ ಕಳೆದುಹೋಗಿದೆ ಮತ್ತು ಜನರು ಕೇವಲ ತಮ್ಮ ಜೀವನೋಪಾಯಕ್ಕಾಗಿ ಈ ಕೆಲಸಗಳನ್ನು ಮಾಡುತ್ತಿದ್ದಾರಷ್ಟೆ. ಕೆಲವೇ ಕೆಲವರು ಈ ಆಚರಣೆಗಳ ಮಹತ್ವವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುತ್ತಾರೆ. ತಮ್ಮ ದೇಹವನ್ನು ಪ್ರಜ್ಞಾಪೂರ್ವಕವಾಗಿ ತ್ಯಜಿಸಿದ್ದವರಿಗೆ ಮಾತ್ರ ತಕ್ಷಣ ಸಾವಾಗುತ್ತದೆ. ಅಂತಹವರಿಗೆ ನಾವೇನೂ ಮಾಡುವುದಿಲ್ಲ. ಆದರೆ ಬೇರೆಯವರಿಗೆಲ್ಲರಿಗೂ ನೀವು ದಾರಿ ತೋರಿಸಬೇಕಾದ ಕಾರಣ ಅವರಿಗೆ ಈ ಆಚರಣೆಗಳನ್ನು ಮಾಡಲಾಗುತ್ತದೆ.
ಆದ್ದರಿಂದ ಯಾರಾದರೂ ಸತ್ತಾಗ ಮಾಡುವ ಮೊದಲ ಕೆಲಸವೆಂದರೆ, ಅವರ ದೇಹಕ್ಕೆ ಅಂಟಿಕೊಂಡಿರುವಂತದ್ದೆಲ್ಲವನ್ನೂ ಸುಟ್ಟುಹಾಕುವುದು. ಅವರ ಇತರ ಬಟ್ಟೆ, ಆಭರಣಗಳೆಲ್ಲವನ್ನೂ ಹಂಚಲಾಗುತ್ತದೆ - ಇದನ್ನೆಲ್ಲ ಒಬ್ಬ ವ್ಯಕ್ತಿಗೆ ಮಾತ್ರ ನೀಡಲಾಗುವುದಿಲ್ಲ, ಆದರೆ ಮೂರು ದಿನಗಳಲ್ಲಿ ಅನೇಕ ಜನರಿಗೆ ಹಂಚಲಾಗುತ್ತದೆ. ಸತ್ತ ವ್ಯಕ್ತಿ ಗೊಂದಲ್ಲಕ್ಕೀಡಾಗಲಿ ಎಂದು ಎಲ್ಲವನ್ನೂ ಆದಷ್ಟು ಬೇಗ ಹಂಚಲಾಗುತ್ತದೆ. ಇನ್ನು ಮುಂದೆ ಯಾವುದಕ್ಕೆ ಅಂಟಿಕೊಂಡಿರಬೇಕೆಂದು ಅವರಿಗೆ ತಿಳಿದಿರುವುದಿಲ್ಲ. ನೀವು ಅವರ ವಸ್ತುಗಳ ಒಂದು ಕಟ್ಟನ್ನು ಯಾರೋ ಒಬ್ಬರಿಗೆ ಕೊಟ್ಟರೆ, ಅವರ ದೇಹದ ಶಕ್ತಿಯು ಬಟ್ಟೆಗಳಲ್ಲಿನ್ನೂ ಇರುವ ಕಾರಣ ಅವರು ಅಲ್ಲಿಗೆ ಹೋಗುತ್ತಾರೆ. ಇಂತದ್ದೆಲ್ಲವನ್ನೂ ಸತ್ತವರನ್ನು ನೆಲೆಗೊಳಿಸಲು ಮಾತ್ರವಲ್ಲದೆ ಕುಟುಂಬ ಮತ್ತು ಸಂಬಂಧಿಕರನ್ನು ನೆಲೆಗೊಳಿಸಲು ಸಹ ಮಾಡಲ್ಪಡುತ್ತಿದ್ದವು; ಹೀಗೆ ಮಾಡಿದಾಗ ಈ ಒಂದು ಅಧ್ಯಾಯ ಮುಗಿಯಿತು ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ. ನೀವು ಯಾರನ್ನು ಎಷ್ಟು ಹಚ್ಚಿಕೊಂಡಿದ್ದಿರ ಮತ್ತು ಅವರೊಂದಿಗೆ ನಿಮ್ಮ ಒಡನಾಟ ಎಷ್ಟಿತ್ತು ಎಂಬುದು ಮುಖ್ಯವಲ್ಲ, ಅವರು ಸತ್ತಾಗ ಎಲ್ಲಾ ಮುಗಿದಂತೆ.
ಸಾಮಾನ್ಯವಾಗಿ, ಪ್ರಪಂಚದ ಎಲ್ಲೆಡೆಯೂ ಎಲ್ಲಾ ಸಂಸ್ಕೃತಿಗಳಲ್ಲಿಯೂ, “ನಿಮ್ಮ ಶತ್ರುವೇ ಸಾಯುತ್ತಿದ್ದರೂ ಸಹ, ನೀವು ಸೂಕ್ತವಾದ ವಾತಾವರಣವನ್ನು ಸೃಷ್ಟಿಸಿ ಅವರು ನೆಮ್ಮದಿಯಿಂದ ಸಾಯುವುದಕ್ಕೆ ಅನುವು ಮಾಡಿಕೊಡಲು ನೋಡಬೇಕು. ನೀವು ಅವರಿಗೆ ಕಷ್ಟವಾಗುವಂತಹದ್ದನ್ನು ಮಾಡಬೇಡಿ.” ಎಂದು ಹೇಳುತ್ತಾರೆ. ನೀವು ಅವರನ್ನು ಯುದ್ಧದಲ್ಲಿ ಹೊಡೆದುರುಳಿಸಿರಬಹುದು, ಆದರೆ ಅವರು ಸಾಯತ್ತಿರುವಾಗ ನೀವು, “ ರಾಮ ರಾಮ" ಎಂದೋ ಅಥವಾ ನಿಮಗೇನೂ ತಿಳಿದಿರುವುದೋ ಅದನ್ನು ಹೇಳುತ್ತೀರಿ. ಯಾರಾದರೂ ಸಾಯುತ್ತಿದ್ದಾರೆಂದರೆ, ಆ ಕ್ಷಣದಲ್ಲಿ ಆಟ ಮುಗಿಯಿತೆಂದು ಶಿಳ್ಳೆಯನ್ನು ಊದಲಾಗಿದೆ. ಹೀಗಿದ್ದಾಗ ಅವರನ್ನು ಒದೆಯುವುದರಲ್ಲಿನ್ನು ಅರ್ಥವಿಲ್ಲ.
ಅದಕ್ಕಾಗಿಯೇ, ಸತ್ತವರನ್ನು ಗೌರವದಿಂದ ನಡೆಸಿಕೊಳ್ಳದಿದ್ದರೆ, ನಿಮ್ಮೊಳಗೇನೋ ತಲ್ಲಣಗೊಳ್ಳುತ್ತದೆ. ನೀವು ದೇಹವನ್ನು ಗೌರವದಿಂದ ನಡೆಸಿಕೊಳ್ಳೇಬೇಕೆಂದಲ್ಲ ಆದರೆ ಅವರು ನಿಧಾನವಾಗಿ ನಿರ್ಗಮಿಸುತ್ತಿರುವುದರಿಂದ ಅವರನ್ನು ಗೌರವಿಸಬೇಕು. ಅವರು ಹೇಗೆ ಬದುಕಿದರು ಎನ್ನುವುದಲ್ಲ ವಿಷಯ, ಕನಿಷ್ಠಪಕ್ಷ ಅವರ ಸಾವಾದರೂ ಉತ್ತಮವಾಗಿ ಆಗಬೇಕು. ಪ್ರತಿಯೊಬ್ಬರಿಗೂ ಅಷ್ಟು ಸಂಕಲ್ಪವಾದರೂ ಇರಬೇಕು.
ಸಂಪಾದಕರ ಟಿಪ್ಪಣಿ: ಕಾಯಂತಸ್ಥಾನ ಎನ್ನುವುದು ಈಶಾದ ಅಂತ್ಯಸಂಸ್ಕಾರದ ಸೇವೆಯಾಗಿದ್ದು, ಇದು ಪುರಾತನ ಸಂಪ್ರದಾಯಗಳು ಮತ್ತು ಶ್ರಾದ್ಧದ ಆಚರಣೆಗಳನ್ನು ಪ್ರಬಲವಾದ ಶಕ್ತಿಯ ಆಧಾರದೊಂದಿಗೆ ಪುನರೂರ್ಜಿತಗೊಳಿಸುತ್ತಿದೆ. ಇದನ್ನೊಂದು ವಾಣಿಜ್ಯ ಉದ್ಯಮವಾಗಿ ನೋಡದೆ, ಸೇವೆಯ ಭಾವದಿಂದ ನಡೆಸಲಾಗುತ್ತಿದೆ. ಹೆಚ್ಚಿನ ಜನರಿಗೆ ಈ ಸೇವೆಯನ್ನು ಒದಗಿಸಲು ನಮಗೆ ಸಹಾಯ ಮಾಡಲು ನಿಮ್ಮ ಬೆಂಬಲ ಮತ್ತು ಕಾಣಿಕೆಯನ್ನು ನಾವು ಕೋರುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಕಾಯಂತಸ್ಥಾನಮ್ - ಈಶಾದ ಅಂತ್ಯಸಂಸ್ಕಾರ ಸೇವೆಯ ಪುಟವನ್ನು ನೋಡಿ. Kayantha Sthanam – Isha’s Cremation Services.
ಬ್ರಹ್ಮಾನಂದ ಸ್ವರೂಪ ಮಂತ್ರದ ಉಚಿತ ಡೌನ್ಲೋಡ್ಗಾಗಿ ಕೆಳಗಿನ ಲಿಂಕ್ಗಳನ್ನು ಬಳಸಿ.
ಇಶಾ ಚಾಂಟ್ಸ್ – ಉಚಿತ ಮೊಬೈಲ್ ಅಪ್ಲಿಕೇಶನ್
ವೈರಾಗ್ಯ - mp3 ಡೌನ್ಲೋಡ್