ಆಧ್ಯಾತ್ಮಿಕ ಪರಿವರ್ತನೆಗೆ ಗುರುಗಳ ಅಗತ್ಯವಿದೆಯೇ?
ಗುರುಗಳ ಸಹಾಯವಿಲ್ಲದೆ ಆಧ್ಯಾತ್ಮಿಕ ಪರಿವರ್ತನೆ ಸಾಧ್ಯವೇ ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ.
ಪ್ರಶ್ನೆ: ಸದ್ಗುರುಗಳೇ, ಗುರುಗಳ ಸಹಾಯವಿಲ್ಲದೆ ಆಧ್ಯಾತ್ಮಿಕ ಪರಿವರ್ತನೆ ಸಾಧ್ಯವೇ? ಮತ್ತು ಆ ಮಾರ್ಗದಲ್ಲಿ ನಮ್ಮನ್ನು ಕರೆದೊಯ್ಯಲು ಸರಿಯಾದ ವ್ಯಕ್ತಿ ಯಾರು ಎಂದು ಹೇಗೆ ತಿಳಿಯುತ್ತದೆ?
ಸದ್ಗುರು: ನಾನು ನಿಮಗೊಂದು ಟಾರ್ಚ್ ನೀಡಿದರೆ, ನೀವು ಮನೆಗೆ ಹೋಗುವ ಮಾರ್ಗವನ್ನು ಕಂಡುಕೊಳ್ಳಲಿದ್ದೀರಿ ಎಂದರ್ಥವಲ್ಲ. ಟಾರ್ಚ್ ಬೆಳಕು ನೀಡುವುದರಿಂದ ನೀವು ಚರಂಡಿ ಅಥವಾ ಮೋರಿಗೆ ಬೀಳುವುದಿಲ್ಲ, ಆದರೆ ನೀವು ಅದನ್ನು ಹೇಗೆ ಬಳಸುತ್ತೀರಿ ಮತ್ತು ನೀವು ಸರಿಯಾದ ಹಾದಿಯಲ್ಲಿ ನಡೆಯುತ್ತೀರಾ ಎಂಬುದು ಸಂಪೂರ್ಣವಾಗಿ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಅನೇಕ ಜನರು ಟಾರ್ಚ್ ಇದ್ದೂ ಸಾವಿನ ದಾರಿಯನ್ನು ಹಿಡಿದಿದ್ದಾರೆ. ಆದ್ದರಿಂದ ನೀವು ಏನು ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟ ವಿಷಯ. ಹಾಗಾದರೆ, ಉತ್ತಮವಾಗಿ ಬೆಳಕು ಬೀರುವುದು ಯಾವುದು? ಅದರ ಬಗ್ಗೆ ನೀವು ತೀರ್ಮಾನ ತೆಗೆದುಕೊಳ್ಳಬಾರದು. ನಿಮಗಾಗಿ ಯಾವುದು ಚೆನ್ನಾಗಿ ಕೆಲಸ ಮಾಡುತ್ತದೆಯೋ, ಯಾವುದು ನಿಮ್ಮ ಜೀವನವನ್ನು ವೃದ್ಧಿಗೊಳಿಸುತ್ತದೆಯೋ, ಆ ನಿಟ್ಟಿನಲ್ಲಿ ಸ್ವಲ್ಪ ಹೆಚ್ಚು ಪ್ರಯತ್ನಿಸಿ, ಅದರಲ್ಲಿ ಹೆಚ್ಚಿನ ಶಕ್ತಿ ಮತ್ತು ಸಮಯವನ್ನು ಮೀಸಲಿಡಿ.ಗುರುವಿನ ಅವಶ್ಯಕತೆಗೆ ಹೆಚ್ಚು ಪ್ರಾಮುಖ್ಯತೆ ಮತ್ತು ಒತ್ತು ಕೊಡುವುದಕ್ಕೆ ಕಾರಣವೆಂದರೆ, ಗುರುಗಳಿಲ್ಲದೆ ನೀವು ನಿಮ್ಮನ್ನು ಪರಿವರ್ತಿಸಿಕೊಳ್ಳಲು ಸಾಧ್ಯವಿಲ್ಲ. ನೀವು ನಿಮಗೆ ತಿಳಿದಿರುವ ಕೆಲಸಗಳನ್ನಷ್ಟೇ ಮಾಡಬಲ್ಲಿರಿ, ನಿಮಗೆ ಗೊತ್ತಿಲ್ಲದ ವಿಷಯದಲ್ಲಿ ನಿಮ್ಮನ್ನು ನೀವು ಹೇಗೆ ಪರಿವರ್ತಿಸಿಕೊಳ್ಳಬಹುದು? ಅದಾಗಬೇಕಾದರೆ ಅಸ್ತಿತ್ವದ ಶಕ್ತಿಯ ಪ್ರತಿಯೊಂದು ಅಂಶಗಳ ನೈಸರ್ಗಿಕ ಪ್ರವೃತ್ತಿಯನ್ನು ನೀವು ಗಮನದಿಂದ ನೋಡುವಷ್ಟು ಪ್ರಜ್ಞಾವಂತರಾಗಿರಬೇಕು. ಆ ಮಟ್ಟದ ಪ್ರಜ್ಞೆಯನ್ನು ಹೊಂದಿರುವ ವ್ಯಕ್ತಿ ಮಾತ್ರ, ಗುರು ಇಲ್ಲದೆ ಪರಿವರ್ತನೆ ಹೊಂದಲು ಸಾಧ್ಯ.
ಗುರುಗಳ ಅನುಗ್ರಹದ ಮೂಲಕ, ಒಂದು ಕ್ಷಣದಲ್ಲಿ, ಕೇವಲ ಒಂದು ಚಪ್ಪಾಳೆ ತಟ್ಟುವುದರ ಮೂಲಕ, ಅನೇಕ ಸಂಗತಿಗಳು ಸಂಭವಿಸಬಹುದು. ಕೆಲವೊಮ್ಮೆ ಕೆಲವು ಸನ್ನಿವೇಶಗಳು ಅಥವಾ ಕೆಲವು ಶಕ್ತಿಗಳು ಜನರಿಗೆ ಅಚ್ಚರಿಯ ಕೆಲಸಗಳನ್ನೂ ಮಾಡಬಹುದು. ಇಂತಹ ಸಂದರ್ಭಗಳಲ್ಲಿ, ಆ ಶಕ್ತಿ ಗುರುವಿನಂತೆ ವರ್ತಿಸುತ್ತಿರುತ್ತದೆ - ಬಹುಶಃ ಭೌತಿಕ ರೂಪದಲ್ಲಿಲ್ಲ, ಆದರೆ ಅದು ನಡೆಯುತ್ತದೆ. ನಿಮಗೆ ಗೊತ್ತಿಲ್ಲದ, ಅಥವಾ ನೀವು ಅನುಭವಿಸದ ವಿಷಯಕ್ಕೆ ನಿಮ್ಮನ್ನು ಪರಿವರ್ತಿಸುವುದು ತಾರ್ಕಿಕವಾಗಿ ಅಸಾಧ್ಯ. ನಾನು ಅದನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತಿಲ್ಲ. ಇದು ಸಾಧ್ಯ, ಆದರೆ ಕೆಲವೇ ಜನರಿಗೆ ಮಾತ್ರ. ಇತರರಿಗೆ, ಇದು ಎಟುಕದ ವಿಷಯವಾಗಿರುತ್ತದೆ.
ಪ್ರಶ್ನೆ: ಹಾಗಾದರೆ ಎಲ್ಲರಿಗೂ ಅಲ್ಲದೆ, ಕೆಲವರಿಗಷ್ಟೇ ಗುರುಗಳ ಸಾಮೀಪ್ಯವನ್ನು ಪಡೆಯಲು ಅವಕಾಶ ನೀಡುವಂತಹುದು ಯಾವುದು?
ಸದ್ಗುರು: ಅಂದರೆ ಆಯ್ಕೆ ಮಾಡಲ್ಪಟ್ಟ ಕೆಲವರಲ್ಲಿ ನೀವೂ ಒಬ್ಬರು ಎಂದು ಭಾವಿಸಿದ್ದೀರಾ? ಆ ರೀತಿ ಆಯ್ಕೆ ಮಾಡಲ್ಪಟ್ಟ ಜನರು ನಿರಂತರವಾಗಿ ತೊಂದರೆಯಲ್ಲಿರುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ನಾನು ನಿಮಗೆ ಒಂದು ಜೋಕ್ ಹೇಳಲೇಬೇಕು. ಒಮ್ಮೆ, ಯಹೂದಿ ಸಮುದಾಯದ ನಾಯಕ ಜೋಶುವಾ ಗೋಲ್ಡ್ ಬರ್ಗ್ ದೇವರೊಂದಿಗೆ ವಾರ್ಷಿಕ ಭೋಜನಕೂಟಕ್ಕೆ ಅಹ್ವಾನ ಪಡೆದನು. ಅವನು ಭೋಜನಕ್ಕೆ ತೆರಳಿ ದೇವರೊಂದಿಗೆ ಕುಳಿತನು. ದೇವರು ಅವನು ಸಮ್ಮನೆ ಕುಳಿತಿರುವುದನ್ನು ನೋಡಿ, “ಮಗು ಜೋಶುವಾ, ನೀನು ಯಾಕೆ ತಿನ್ನುತ್ತಿಲ್ಲ?” ಎಂದು ಕೇಳಿದರು. ಜೋಶುವಾ, “ತಂದೆಯೇ, ನಾನು ನಿನ್ನಲ್ಲಿ ಒಂದು ಪ್ರಶ್ನೆ ಕೇಳಬಹುದೇ?” ಎಂದನು. ದೇವರು ಅದಕ್ಕೆ ಅನುಮತಿ ನೀಡಿದರು. ಅವನು, “ಪ್ರಿಯ ತಂದೆಯೇ, ನಾವು ನಿಜವಾಗಿಯೂ ನಿನ್ನಿಂದ ಆರಿಸಲ್ಪಟ್ಟ ಜನರೇ?” ಎಂದು ಕೇಳಿದನು. ಅದಕ್ಕೆ ದೇವರು “ನಿನಗೇಕೆ ಅನುಮಾನ? ನೀನು ನನ್ನಿಂದ ಆರಿಸಲ್ಪಟ್ಟ ಜನರಲ್ಲಿ ಒಬ್ಬನು” ಎಂದರು. ಅದಕ್ಕೆ ಜೋಶುವಾ ಮತ್ತೆ, “ತಂದೆಯೇ, ನಾವು ನಿಜವಾಗಿಯೂ, ನಿಜವಾಗಿಯೂ, ನಿನ್ನಿಂದ ಆರಿಸಲ್ಪಟ್ಟ ಜನರೇ?” ಎಂದನು. “ಹೌದು, ಜೋಶುವಾ. ನೀನು ಯಾಕೆ ಅನುಮಾನ ಪಡುತ್ತಿದ್ದೀಯ? ನೀನು ನನ್ನಿಂದ ಆರಿಸಲ್ಪಟ್ಟ ಜನರಲ್ಲಿ ಒಬ್ಬನು” ಎಂದು ಹೇಳಿದರು. ಮತ್ತೆ ಜೋಶುವಾ, “ತಂದೆಯೇ, ನಾವು ನಿಜವಾಗಿಯೂ, ನಿಜವಾಗಿಯೂ, ನಿಜವಾಗಿಯೂ, ನಿನ್ನಿಂದ ಆರಿಸಲ್ಪಟ್ಟ ಜನರೇ?” ಎಂದು ಕೇಳಿದನು, ಅದಕ್ಕೆ ದೇವರು "ಹೌದು, ಹೌದು, ಹೌದು, ನೀನು ನನ್ನಿಂದ ಆರಿಸಲ್ಪಟ್ಟ ಜನರಲ್ಲಿ ಒಬ್ಬನು!" ಎಂದು ಮತ್ತೆ ಹೇಳಿದರು. ನಂತರ ಜೋಶುವಾ ಮೇಜಿನಿಂದ ಎದ್ದು, ತನ್ನ ಜಾಕೆಟ್ ಅನ್ನು ಹಾಕಿಕೊಂಡು, “ಸ್ವಲ್ಪ ಸಮಯದವರೆಗೆ ನೀವು ಬೇರೊಬ್ಬರನ್ನು ಏಕೆ ಆರಿಸಬಾರದು?” ಎಂದು ಕೇಳಿದನು.
ಆದ್ದರಿಂದ, ಒಬ್ಬ ವ್ಯಕ್ತಿಯು ಕೆಲವು ಸಾಧ್ಯತೆಗಳಿಗೆ ಹೇಗೆ ತೆರೆದುಕೊಳ್ಳುತ್ತಾನೆ? ಗುರು ಒಬ್ಬ ವ್ಯಕ್ತಿಯಲ್ಲ, ಬದಲಾಗಿ ಒಂದು ನಿರ್ದಿಷ್ಟ ಸಾಧ್ಯತೆ. ಕೆಲವರು ಮಾತ್ರ ಈ ಸಾಧ್ಯತೆಯನ್ನು ಹೊಂದುತ್ತಾರೆ ಎಂದಲ್ಲ. ಪ್ರತಿಯೊಬ್ಬರೂ ಆ ವ್ಯಕ್ತಿಯ ಜೊತೆ ಸಂಪರ್ಕವನ್ನು ಹೊಂದಿಲ್ಲದಿರಬಹುದು, ಆದರೆ ಅದಕ್ಕಾಗಿಯೇ ನಿಜವಾಗಿಯೂ ಹಾತೊರೆಯುವ ಯಾರೇ ಆದರೂ ಯಾವಾಗಲೂ ಆ ಶಕ್ತಿಗೆ ತೆರೆದುಕೊಳ್ಳುತ್ತಾರೆ.
ನಾನು ಮುಖತಃ ಭೇಟಿ ಮಾಡಿದ ಜನರಿಗಿಂತ, ಎಂದೂ ಭೇಟಿಯಾಗದ ಜನರಿಗೇ ಹೆಚ್ಚಾಗಿ ದೀಕ್ಷೆ ನೀಡಿದ್ದೇನೆ. ಅದು ವಾಸ್ತವ. ಯಾರಾದರೂ ನಿಜವಾಗಿಯೂ ಹಾತೊರೆಯುವಾಗ, ನನ್ನನ್ನು ಸ್ವೀಕರಿಸುವ ತುಡಿತವು ಅವರಲ್ಲಿ ಆಳವಾದಾಗ, ಅಂತಹ ಜನರು ಎಲ್ಲಿದ್ದರೂ ನಾನು ಅವರಿಗೆ ದೀಕ್ಷೆ ನೀಡುತ್ತೇನೆ. ಯಾರೊಬ್ಬರ ಹೃದಯ ಅರಿವಿಗಾಗಿ ಮಿಡಿಯುತ್ತದೆಯೋ, ನಾನು ಅವರಿಗಾಗಿ ಯಾವಾಗಲೂ ಇರುತ್ತೇನೆ. ಸಾಧ್ಯತೆಗೆ ಸಂಬಂಧಿಸಿದಂತೆ, ನನ್ನ ಮುಖವನ್ನು ನೋಡಿರದ ಇನ್ನೂ ಹೆಚ್ಚಿನ ಜನರಿಗೆ ಈ ಸಾಧ್ಯತೆ ಸಂಭವಿಸಿದೆ. ಆದರೆ ನೀವು ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದರೆ, ಅದು ಹೆಚ್ಚು ಮಹತ್ವದ್ದಲ್ಲ.
ಗುರುಗಳ ಜೊತೆ ಇರುವುದು ಎಂದಿಗೂ ಹಿತವಾಗಿರುವುದಿಲ್ಲ, ಏಕೆಂದರೆ ಅವರು ನಿಮ್ಮ ಎಲ್ಲ ಮಿತಿಗಳನ್ನು ಮತ್ತು ಸಿದ್ಧಾಂತಗಳನ್ನು ಮುರಿಯುತ್ತಿರುತ್ತಾರೆ. ಒಬ್ಬ ವ್ಯಕ್ತಿಯನ್ನು ವ್ಯಕ್ತಿಗತವಾಗಿ ತಿಳಿದಕೊಳ್ಳುವುದು ಅಥವಾ ಅವರೊಂದಿಗೆ ಬೆರೆಯುವುದು ಅನೇಕ ಹಂತಗಳಲ್ಲಿರಬಹುದು. ಆದರೆ ಒಂದು ಸಾಧ್ಯತೆಗೆ ಪಾತ್ರವಾಗುವುದು ಒಬ್ಬ ವ್ಯಕ್ತಿಯ ಹಂಬಲ ತೀವ್ರವಾಗಿದ್ದಾಗ ಮಾತ್ರ. ವ್ಯಕ್ತಿಗಳು ಒಬ್ಬ ಗುರುವಿನ ನಿಕಟ ಸಂಪರ್ಕ ಹೊಂದಿದ್ದರೂ ಸಹ, ಅದರ ಮೂಲಕ ಹೊಂದಬಹುದಾದ ಸಾಧ್ಯತೆಯನ್ನು ಕಂಡುಕೊಳ್ಳಲಾಗುವುದಿಲ್ಲ. ಇದರ ಬಗ್ಗೆ ವಿವಿಧ ವ್ಯಕ್ತಿಗಳು ವಿವಿಧ ವಿವರಣೆ ನೀಡಿದ್ದಾರೆ. ಆದರೆ ಗೌತಮ ಬುದ್ಧ ಇದನ್ನು ಬಹಳ ಸುಂದರವಾಗಿ ವಿವರಿಸಿದ್ದಾನೆ. ಜೀವನದುದ್ದಕ್ಕೂ ಗೌತಮನ ಜೊತೆಯೇ ನಿರಂತರವಾಗಿ ಇದ್ದರೂ ಸಹ ಆನಂದ ತೀರ್ಥರು ಕೊನೆಯವರೆಗೂ ಜ್ಞಾನೋದಯ ಪಡೆಯದೇ ಹೋದರು. ಜನರು, “ಇವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ. ಆದರೂ ಸಹ ಅವರಿಗೇಕೆ ಇದು ಸಾಧ್ಯವಾಗಲಿಲ್ಲ?” ಎಂದು ಕೇಳಿದಾಗ, ಗೌತಮ ಅದಕ್ಕೆ ಉತ್ತರವಾಗಿ “ಒಂದು ಚಮಚೆ, ಸೂಪ್‍ನ ರುಚಿ ನೋಡಲು ಸಾಧ್ಯವೇ?” ಎಂದು ಕೇಳಿದ. ಈ ಮಾತು ಎಲ್ಲವನ್ನೂ ಅರ್ಥಪೂರ್ಣವಾಗಿ ವಿವರಿಸುತ್ತದೆ. ನಿಮ್ಮಲ್ಲಿ ಸಂವೇದನೆ ಇರಬೇಕು. ನೀವು ಜೀವನವನ್ನು ಕುರಿತು ಸಂವೇದನಾಶೀಲರಾಗಿರಬೇಕೇ ಹೊರತು ನಿಮ್ಮ ಅಹಂಗೆ ಸಂವೇದನಾಶೀಲರಾಗಿರಬಾರದು.
Editor’s Note: For more of Sadhguru’s insights, download the ebook Mystic’s Musings. Not for the faint-hearted, this book deftly guides us with answers about reality that transcend our fears, angers, hopes, and struggles. Sadhguru keeps us teetering on the edge of logic and captivates us with his answers to questions relating to life, death, rebirth, suffering, karma, and the journey of the Self. Download the sample pdf or purchase the ebook.