ಆನಂದವನ್ನು ಕಂಡುಕೊಳ್ಳಲು ನಿಮ್ಮ ಆಳಕ್ಕಿಳಿಯಿರಿ
ಆನಂದದ ಸ್ವರೂಪವನ್ನು ಅಂತರಂಗದಲ್ಲಿ ಉದ್ಭವಿಸುವ ಒಂದು ಬಾವಿಗೆ ಸದ್ಗುರುಗಳು ಹೋಲಿಸುತ್ತಾರೆ.
ಪ್ರಶ್ನೆ: ಒಬ್ಬ ಮನುಷ್ಯ ಪರಮಾನಂದದಲ್ಲಿದ್ದಾಗ, ಅವನು ಹೆಚ್ಚು ಹೊಂದಿಕೊಳ್ಳಬಲ್ಲವನಾಗುತ್ತಾನೆ, ಹೆಚ್ಚು ಸ್ವತಂತ್ರನಾಗಿರುತ್ತಾನೆ, ಅವನಿಗೆ ವ್ಯಕ್ತಿತ್ವದ ಭಾರ ಅಷ್ಟಾಗಿ ಇರುವುದಿಲ್ಲ ಎಂದು ನೀವು ಹೇಳುತ್ತೀರಿ. ನಿಜವಾಗಿಯೂ ಪರಮಾನಂದವೆಂದರೇನು? ನೀವು ನಿಜವಾದ ಪರಮಾನಂದವನ್ನು ಸ್ವಲ್ಪ ವಿವರಿಸುತ್ತೀರಾ ಸದ್ಗುರು?
ಸದ್ಗುರು: ನಾನು ಹೇಗೆ ನಿಮಗೆ ಹೇಳಲಿ? ಈ ಪ್ರಶ್ನೆ ಆನಂದದ ಸ್ವರೂಪದ ಕುರಿತು ಇರುವ ನಿರ್ದಿಷ್ಟವಾದ ತಪ್ಪುತಿಳುವಳಿಕೆಯಿಂದ ಬಂದಿರಬಹುದು. ಇವತ್ತು ಭ್ರಾಂತಿ ತರಿಸುವ ಮಾದಕವಸ್ತುಗಳಿಗೆ “ಬ್ಲಿಸ್” ಎಂದು ಹೆಸರಿಡಲಾಗುತ್ತಿದೆ. ನೀವು ಪಾಶ್ಚಿಮಾತ್ಯ ದೇಶಗಳಲ್ಲಿ “ಬ್ಲಿಸ್” ಎಂದು ಹೇಳಿದಾಗ, ನೀವು ಒಂದು ಮಾತ್ರೆ ಅಥವಾ ಔಷಧಿಯ ಬಗ್ಗೆ ಹೇಳುತ್ತಿದ್ದೀರಿ ಎಂದವರು ಭಾವಿಸುತ್ತಾರೆ.
“ನಿಜವಾದ ಆನಂದ” ಮತ್ತು “ಸುಳ್ಳು ಆನಂದ” ಎನ್ನುವುದೇನಿಲ್ಲ. ನೀವು ಸತ್ಯದೊಂದಿಗೆ ಇದ್ದಾಗ, ನೀವು ಪರಮಾನಂದದಲ್ಲಿರುತ್ತೀರಿ. ನೀವು ನಿಜವಾಗಿಯೂ ಸತ್ಯದೊಂದಿಗೆ ಸಂಪರ್ಕದಲ್ಲಿದ್ದರೆ, ಸಹಜವಾಗಿಯೇ ನೀವು ಆನಂದದಲ್ಲಿರುತ್ತೀರಿ. ಆನಂದದಿಂದ ಇರುವುದು ಮತ್ತು ಆನಂದದಿಂದ ಇಲ್ಲದಿರುವುದು, ನೀವು ಸತ್ಯದಲ್ಲಿದ್ದೀರೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಪರೀಕ್ಷೆಯಾಗಿದೆ. ಈಗ ನೀವು ಕೇಳಿರುವ ಪ್ರಶ್ನೆಯು ಒಂದು ನಿರ್ದಿಷ್ಟವಾದ ಮನಸ್ಥಿತಿಯಿಂದ ಬರುತ್ತಿದೆ : “ನಾನು ಸುಮ್ಮನೆ ಸೂರ್ಯಾಸ್ತವನ್ನು ನೋಡುತ್ತಿದ್ದರೆ, ನನಗೆ ಆನಂದವಾದರೆ, ಅದು ನಿಜವಾದ ಆನಂದವೇ? ಅಥವಾ ನಾನು ಪ್ರಾರ್ಥನೆ ಮಾಡುತ್ತಿದ್ದಾಗ, ನನಗೆ ಆನಂದವಾದರೆ, ಅದು ನಿಜವಾದ ಆನಂದವೇ? ಅಥವಾ ನಾನು ಧ್ಯಾನ ಮಾಡುತ್ತಿದ್ದಾಗ ಆನಂದ ಉಂಟಾದರೆ, ಅದು ನಿಜವಾದ ಆನಂದವೇ?”
ಬಹುತೇಕ ಜನರು ಸುಖವನ್ನು ಆನಂದವೆಂದು ತಪ್ಪಾಗಿ ತಿಳಿದಿದ್ದಾರೆ. ನೀವು ಎಂದಿಗೂ ಸುಖವನ್ನು ದೀರ್ಘಕಾಲ ಹಿಡಿದಿಡಲಾಗುವುದಿಲ್ಲ. ಆದರೆ ಆನಂದದಿಂದಿರುವುದೆಂದರೆ, ಅದು ಯಾವುದರ ಮೇಲೂ ಅವಲಂಬಿತವಾಗಿಲ್ಲದಂತಹ ಒಂದು ಸ್ಥಿತಿಯಾಗಿದೆ. ಸುಖ ಎನ್ನುವುದು ಯಾವಾಗಲೂ ಸಹ ಯಾವುದರ ಮೇಲಾದರೂ ಅಥವಾ ಯಾರ ಮೇಲಾದರೂ ಅವಲಂಬಿತವಾಗಿರುತ್ತದೆ. ಆನಂದ ಎನ್ನುವುದು ಯಾವುದನ್ನೂ ಅವಲಂಬಿಸಿಲ್ಲ. ಅದು ನಿಮ್ಮ ಸಹಜಸ್ಥಿತಿ; ಒಮ್ಮೆ ನೀವು ಅದರೊಂದಿಗೆ ಸಂಪರ್ಕದಲ್ಲಿದ್ದರೆ, ನೀವು ಅದರಲ್ಲಿರುತ್ತೀರಿ, ಅಷ್ಟೆ.
ಆನಂದವೆನ್ನುವುದು ನೀವು ಹೊರಗಿನಿಂದ ಗಳಿಸುವಂತದ್ದಲ್ಲ; ಅದು ನೀವು ನಿಮ್ಮೊಳಗೆ ಆಳವಾಗಿ ಅಗೆದು ಕಂಡುಕೊಳ್ಳಬೇಕಾದಂತದ್ದು. ಅದು ಒಂದು ಬಾವಿಯನ್ನು ತೋಡಿದಂತೆ. ನೀವು ನಿಮ್ಮ ಬಾಯಿಯನ್ನು ತೆರೆದು, ಮಳೆಹನಿಗಳು ನಿಮ್ಮ ಬಾಯೊಳಕ್ಕೆ ಬೀಳುವಂತೆ ಬಾಯಿ ತೆರೆದಿಟ್ಟುಕೊಂಡರೆ, ಅವುಗಳಲ್ಲಿ ಕೆಲವು ಹನಿಗಳು ಮಾತ್ರ ನಿಮ್ಮ ಬಾಯೊಳಗೆ ಬೀಳಬಹುದು. ಆದರೆ ನಿಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ನೀವು ನಿಮ್ಮ ಬಾಯಿಯನ್ನು ಮಳೆಗೆ ತೆರೆದಿಟ್ಟುಕೊಳ್ಳುವುದು ಅತ್ಯಂತ ಹತಾಶಗೊಳಿಸುವ ಮಾರ್ಗವೇ ಸರಿ. ಮೇಲಾಗಿ, ಮಳೆ ತುಂಬಾ ಹೊತ್ತೇನೂ ಬೀಳುವುದಿಲ್ಲ. ಒಂದೆರಡು ಗಂಟೆಗಳ ಕಾಲ ಬೀಳಬಹುದು, ಆಮೇಲೆ ಅದು ನಿಂತುಹೋಗುತ್ತದೆ.
ಈ ಕಾರಣದಿಂದಲೇ ನೀವು ನಿಮ್ಮದೇ ಸ್ವಂತ ಬಾವಿಯನ್ನು ತೋಡಿಕೊಳ್ಳುವುದು – ಅದರಿಂದ ವರ್ಷವಿಡೀ ನಿಮಗೆ ನೀರು ಸಿಗುತ್ತದೆ ಎಂದು. ನೀವು ಯಾವುದನ್ನು “ನಿಜವಾದ ಆನಂದ” ಎಂದು ಕರೆಯುತ್ತೀರೋ ಅದು ಹೀಗೆದೆ: ನೀವು ನಿಮ್ಮದೇ ಸ್ವಂತ ಬಾವಿಯನ್ನು ತೋಡಿಕೊಂಡಿದ್ದೀರಿ ಮತ್ತು ನಿಮಗೆ ನಿಮ್ಮನ್ನು ಪೋಷಿಸುವ ನೀರು ಯಾವಾಗಲೂ ಸಿಗುತ್ತಿರುತ್ತದೆ. ಅದು ಮಳೆ ಬಂದಾಗ ಬಾಯಿ ತೆರೆದು ಕಾಯುವ ಹಾಗಲ್ಲ. ನೀವು ಯಾವಾಗಲೂ ನಿಮ್ಮ ಬಳಿ ನೀರನ್ನು ಇಟ್ಟುಕೊಂಡಿರುತ್ತೀರಿ. ಅದೇ ಆನಂದ.
ಸಂಪಾದಕರ ಟಿಪ್ಪಣಿ: ಜಗತ್ತಿನಲ್ಲಿ ಎರಡೇ ತರದ ಜನರು ಮಾತ್ರ ಇದ್ದಾರೆ - ಅನುಭಾವಿಗಳು ಮತ್ತು ತಪ್ಪುತಿಳುವಳಿಕೆಯವರು ಎಂದು ಸದ್ಗುರು ಹೇಳುತ್ತಾರೆ. ಹರಿತ, ತೀಕ್ಷ್ಣ ಮತ್ತು ಸಾಟಿಯಿಲ್ಲದ ದಾಟಿಯಲ್ಲಿ ಈ ಪುಸ್ತಕವು ಅನುಭಾವಿಗಳ ಮಾತುಗಳಲ್ಲಿ ಅನುಭಾವವನ್ನು ಅನಾವರಣಗೊಳಿಸುತ್ತದೆ. ಸದ್ಗುರುಗಳ ಮತ್ತಷ್ಟು ಒಳನೋಟಗಳಿಗಾಗಿ ““ಆಫ್ ಮಿಸ್ಟಿಕ್ಸ್ ಅಂಡ್ ಮಿಸ್ಟೇಕ್ಸ್” ”ಇ-ಪುಸ್ತಕವನ್ನು ಓದಿ, ಇದು ಈಶ ಡೌನ್ಲೋಡ್ ನಲ್ಲಿಯೂ ಲಭ್ಯವಿದೆ.