ಆರ್ಥಿಕ ಮತ್ತು ಆಂತರಿಕ ಯೋಗಕ್ಷೇಮವನ್ನು ಜೊತೆಯಲ್ಲಿ ಸಾಧಿಸುವುದು
ಆರ್ಥಿಕ ಪ್ರಗತಿಯ ಹೊಸ್ತಿಲಲ್ಲಿರುವ ಭಾರತದ ಪಾತ್ರವನ್ನು ಗಮನಿಸುತ್ತಾ, ಜನರ ಜೀವನದಲ್ಲಿ ಆಧ್ಯಾತ್ಮಿಕ ಪ್ರಕ್ರಿಯೆಯನ್ನು ತರದಿದ್ದರೆ, ಇದು ಅನೇಕ ಗೊಂದಲಗಳಿಗೆ ಕಾರಣವಾಗಬಹುದು ಎಂದು ಸದ್ಗುರುಗಳು ಹೇಳುತ್ತಾರೆ.
ಸದ್ಗುರು: ಇಂದು ಸಮಾಜವು ಅರ್ಥವ್ಯವಸ್ಥೆಯಲ್ಲಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಏರುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ, ಇದು ಭಾರಿ ಮಹತ್ತರವಾಗಿ ಬೆಳವಣಿಗೆ ಕಾಣಲಿದೆ. ಇದು ಗ್ರಾಮೀಣ ಪ್ರದೇಶಗಳಿಗೂ ಪಸರಿಸುತ್ತದೆ ಎಂಬುದು ನಮ್ಮ ಭಾವನೆ, ಮತ್ತು ಇದು ಖಂಡಿತ ಸಂಭವಿಸಲಿದೆ. ಮುಖ್ಯ ವಿಷಯವೇನೆಂದರೆ, ಅದಕ್ಕಾದ ಹಾದಿಯನ್ನು ನಾವು ಸುಗಮಗೊಳಿಸಿದರೆ, ಎಲ್ಲವೂ ಚೆನ್ನಾಗಿ ನಡೆಯುತ್ತದೆ. ಹಾದಿಯನ್ನು ಸುಗಮಗೊಳಿಸದಿದ್ದರೆ, ಅವು ಬಲವಂತಪೂರ್ಣವಾಗಿ ಮತ್ತು ನೋವು ತರುವ ರೀತಿ ನಡೆಯುತ್ತದೆ. ಆದರೆ, ಹೇಗಾದರೂ ಸರಿ, ಖಂಡಿತ ಅದು ನಡೆಯುತ್ತದೆ.
ಷೇರು ಮಾರುಕಟ್ಟೆ ಹೇಗೆ ಹೊಸ ಗರಿಷ್ಠ ಮಟ್ಟಗಳನ್ನು ಮುಟ್ಟುತ್ತಿದೆ ಎಂದು ನಾವು ಕಾಣುತ್ತಿದ್ದೇವೆ. ಇವು ಕೇವಲ ಸಂಖ್ಯೆಗಳಲ್ಲ, ಇದು ನಾವು ಯಾವ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂಬುದರ ಸೂಚಕ. ಜಗತ್ತಿನಲ್ಲಿ ನಡೆಯುತ್ತಿರುವ ವಿತ್ತೀಯ(ಹಣಕಾಸು) ವ್ಯವಸ್ಥೆಗಳು ಮತ್ತು ಹೂಡಿಕೆ ಪ್ರಕ್ರಿಯೆಗಳು ಭಾರತವನ್ನು ಯಾವಾಗಲೂ ಕಡೆಗಣಿಸುತ್ತಿದ್ದವು. ಕಾರಣ ನಮ್ಮ ವ್ಯವಸ್ಥೆಯ ಮೇಲಿನ ಭಯ- ನಮ್ಮಲ್ಲಿನ ಭ್ರಷ್ಟಾಚಾರ, ಅಸಮರ್ಥತೆ, ಅವಿವೇಕದ ವಿಧಾನ ಮತ್ತು ನಾವು ಪ್ರಾರಂಭಿಸುವ ಯಾವ ಯೋಜನೆಯನ್ನೂ ಪೂರ್ಣಗೊಳಿಸದಿರುವುದು. ಆ ಚಿತ್ರಣವು ಬಹಳವಾಗಿ ಬದಲಾಗುತ್ತಿದೆ ಮತ್ತು ಹಣಕಾಸಿನ ಮಾರುಕಟ್ಟೆಗಳು ಈಗ ಭಾರತದತ್ತ ಬರುತ್ತಿವೆ. ನೀವು ಇನ್ನು ಮುಂದೆ ಬಹಳ ವೇಗ ಗತಿಯಲ್ಲಿ ಬದಲಾವಣೆಗಳು ಸಂಭವಿಸುವುದನ್ನು ಕಾಣಬಹುದು. ಇದು ಖಂಡಿತ ಸಂಭವಿಸುತ್ತದೆ.
ಆರ್ಥಿಕ ಪರಿಸ್ಥಿತಿ ಬದಲಾದಾಗ, ಸಮಾಜದಲ್ಲಿ ಆಗುವ ಸಾಂಸ್ಕೃತಿಕ ಬದಲಾವಣೆಗಳಿಗೆ ನಾವು ಸಿದ್ಧರಾಗಿರಬೇಕು. ಆರ್ಥಿಕ ಸ್ವಾತಂತ್ರ್ಯದ ಜೊತೆಗೆ, ಸಂಸ್ಕೃತಿಯ ಒಂದು ನಿರ್ದಿಷ್ಟ ಮೂಲಭೂತ ಅಂಶಗಳು ಯಾವಾಗಲೂ ಬದಲಾಗುತ್ತವೆ. ಪ್ರತಿಯೊಬ್ಬ ವ್ಯಕ್ತಿಗೂ ತಾನು ಬಯಸುವುದನ್ನು ಮಾಡುವ ಅವಕಾಶ ಸಿಗುವಂತಾದಾಗ, ಆ ವ್ಯಕ್ತಿಯು ಹೆಚ್ಚು ಅರಿವಿನಿಂದ ತನ್ನ ಆಯ್ಕೆಗಳನ್ನು ನಿರ್ಧರಿಸುವಂತೆ ಸಶಕ್ತಗೊಳಿಸುವುದು ಅತ್ಯವಶ್ಯಕ. ಬಹುಪಾಲು ಸಮಾಜಗಳಲ್ಲಿ, ಆರ್ಥಿಕ ಶ್ರೀಮಂತಿಕೆಯ ಕಾರಣ ಸಮಸ್ಯೆಗಳ ಮಹಾಪೂರವೇ ಬಂದಿದೆ. ಜನರಲ್ಲಿ ಯಾವಾಗ ಪ್ರಜ್ಞಾಪೂರ್ವಕವಾದ ಆಯ್ಕೆಯನ್ನು ಮಾಡುವ ಅರಿವು ಇರುವುದಿಲ್ಲವೋ, ಆಗ ಹೀಗೆ ಸಂಭವಿಸುತ್ತದೆ.
ಆರ್ಥಿಕ ಪ್ರಗತಿ ‘ಮಾನವ ಯೋಗಕ್ಷೇಮ’ವನ್ನು ತರುವ ಬದಲು, ಆ ದೇಶದ ಒಂದು ತಲೆಮಾರಿನವರು ಸರಿಯಾದ ಆಯ್ಕೆಯನ್ನು ಮಾಡಲು ಸಾಧ್ಯವಾಗದೆ ಅನಿಶ್ಚಿತತೆಯಿಂದ ಬಳಲುತ್ತಾರೆ. ಉದಾಹರಣೆಗೆ ಅಮೇರಿಕ ಇದೀಗ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ದೇಶವಾಗಿದೆ. 1930 ರ ದಶಕದಲ್ಲಿ, ಆಹಾರಕ್ಕೂ ಗತಿಯಿಲ್ಲದೆ ದೇಶದ ಜನರು ಅತಿಯಾದ ಖಿನ್ನತೆಗೆ ಒಳಗಾಗಿದ್ದರು. ನಂತರ ಎರಡನೆಯ ಮಹಾಯುದ್ಧದ ಸಂಧರ್ಭದಲ್ಲಿ, ಒಂದು ದೊಡ್ಡ ಕ್ರಾಂತಿಯಾಗಿ ಲಕ್ಷಾಂತರ ಜನರು ನಾಶವಾದರು. ಯುದ್ಧದ ನಂತರದ ಪೀಳಿಗೆಯ ಜನರು ಹೆಚ್ಚು ಶ್ರಮವಹಿಸಿ ದೇಶವನ್ನು ಮತ್ತೆ ಮೇಲೆ ತರಲು ಸಾಧ್ಯವಾಯಿತು. 1960 ರ ದಶಕದಲ್ಲಿ, ಆರ್ಥಿಕಥೆಯಲ್ಲಿ ಮಹತ್ತರವಾದ ಏರಿಕೆಯಾಗುತ್ತಿತ್ತು, ಆದರೆ ಆ ಪೀಳಿಗೆಯ ಜನರು ಹಲವು ತಪ್ಪು ಆಯ್ಕೆಗಳನ್ನು ಮಾಡಿ, ಸುಮಾರು 15-20 ವರ್ಷಗಳವರೆಗೆ, ಮಾದಕ ವಸ್ತುಗಳು, ಮದ್ಯ ಮತ್ತು ಇತರ ವಿಷಯಗಳು ಸಮಾಜವನ್ನು ಹಾದಿ ತಪ್ಪಿಸಿತು ಮತ್ತು ಇಡೀ ರಾಷ್ಟ್ರವನ್ನು ಬಹುತೇಕ ಹಳಿ ತಪ್ಪಿಸಿತು. ನಂತರ 1970 ರಿಂದ 1980ರ ಕಾಲದಲ್ಲಿ ಅವರು ಮತ್ತೆ ಚೇತರಿಸಿಕೊಂಡರು.
ಸೂಕ್ತವಾದ ಆಯ್ಕೆಗಳನ್ನು ಮಾಡುವುದು
ಆಧ್ಯಾತ್ಮಿಕ ಪ್ರಕ್ರಿಯೆಯು ಜನರು ಸೂಕ್ತವಾದ ಆಯ್ಕೆಗಳನ್ನು ಮಾಡಲು ಅಗತ್ಯವಾದ ಅರಿವನ್ನು ತಂದುಕೊಡುತ್ತದೆ. ಶ್ರೀಮಂತಿಕೆ ಬಂದಾಗ, ತಮ್ಮ ಮಾನಸಿಕ ಸಮತೋಲನ ಕಳೆದುಕೊಳ್ಳುವುದಿಲ್ಲ. ಇದು ಬಹಳ ಮುಖ್ಯ. ಬಡತನ ಎಂಬುದು ಒಂದು ದೊಡ್ಡ ಸಮಸ್ಯೆ. ಆದರೆ ಜನರು ಅದರಿಂದ ಹೊರಬಂದ ಕ್ಷಣವೇ, ತಮ್ಮ ಮಾನಸಿಕ ಸ್ಥಿರತೆ ಕಳೆದುಕೊಂಡು ಇನ್ನೂ ಹತ್ತು ಹಲವು ತೊಂದರೆಗಳಿಗೆ ಸಿಲುಕಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಆಗುತ್ತಿರುವ ಆರ್ಥಿಕ ಪ್ರಗತಿಯನ್ನು ಜನರು ಆನಂದಿಸುತ್ತಿರುವುದನ್ನು ನಾವು ಕಾಣಲು ಬಯಸುತ್ತೇವೆ, ಏಕೆಂದರೆ ಇದು ಹಲವು ಕಾಲದಿಂದ ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆಯಾಗಿದೆ, ಎಲ್ಲ ವಿಷಯದಲ್ಲೂ ಜನರಲ್ಲಿ ಹಸಿವಿದೆ.
ಆದ್ದರಿಂದ, ಈ ಅರಿವನ್ನು ಹರಡುವುದು ಮತ್ತು ಸೂಕ್ತವಾದ ಆಯ್ಕೆಗಳನ್ನು ಮಾಡುವ ನಿಟ್ಟಿನಲ್ಲಿ ಜನರಿಗೆ ಅಧಿಕಾರ ನೀಡುವುದು ಅತ್ಯಂತ ಮುಖ್ಯವಾಗಿದೆ. ಆರ್ಥಿಕತೆ ಪ್ರಗತಿಯಲ್ಲಿ ಸಾಗುತ್ತಿರುವುದರಿಂದ ನಾವು ಈ ಪ್ರಕ್ರಿಯೆಯನ್ನು ನಿಜವಾಗಿಯೂ ತ್ವರಿತಗೊಳಿಸಬೇಕಾಗಿದೆ. ಮುಂಬರುವ ವರ್ಷಗಳಲ್ಲಿ ನಾವು 9 ರಿಂದ 10% ಬೆಳವಣಿಗೆಯ ಬಗ್ಗೆ ಮಾತನಾಡುತ್ತಿದ್ದೇವೆ, ಇದು ಅದ್ಭುತವಾದ ವಿಷಯ. 9 ರಿಂದ 10% ಬೆಳವಣಿಗೆಯನ್ನು ನಿರಂತರವಾಗಿ ಉಳಿಸಿಕೊಂಡು ಹೋಗುವುದು ಸರಳ ವಿಷಯವಲ್ಲ. ಆದರೆ ಅದೇ ಸಮಯ, ನಾವು ಈ ಮೂಲಭೂತ ಪ್ರಶ್ನೆಯನ್ನು ಕೇಳಬೇಕಾಗಿದೆ: 10% ಅಂದರೆ ಎಷ್ಟು? 1.25 ಶತಕೋಟಿ ಜನ, ಈ ನಿಟ್ಟಿನಲ್ಲಿ ನಮ್ಮ ಆರ್ಥಿಕತೆಯ ಪ್ರಮಾಣವು ದುರದೃಷ್ಟವಶಾತ್ ಬಹಳ ಕಡಿಮೆ. ಇದು ಈಗ ಬೆಳೆಯುತ್ತಿದೆಯಾದರೂ, ಈಗಲೂ ಅದು ತುಂಬಾ ಸಣ್ಣ ಪ್ರಮಾಣದ್ದಾಗಿದೆ.
ಈ ರೀತಿಯ ಆರ್ಥಿಕ ಪರಿಸ್ಥಿತಿಯಲ್ಲಿ ಜನರಿಗೆ ಆಹಾರ ಹೇಗೆ ಪೂರೈಕೆಯಾಗುತ್ತಿದೆ ಎಂಬುದನ್ನು ಪಾಶ್ಚಿಮಾತ್ಯ ಆರ್ಥಿಕ ವಿಶ್ಲೇಷಕರು ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ಹೇಗೆ ಒಬ್ಬ ಮನುಷ್ಯ ದಿನಕ್ಕೆ ಒಂದು ಡಾಲರ್ನಷ್ಟೇ ಸಂಪಾದಿಸಿ ತಿನ್ನುತ್ತಿದ್ದಾನೆ ಎಂಬುದು ಅವರ ನಿಲುವಿಗೆ ಸಿಲುಕದ ವಿಷಯವಾಗಿದೆ. ನಾವು ನಮ್ಮ ರೈತರನ್ನು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಒಡ್ಡುತ್ತಿದ್ದೀವಿ, ಅವರಿಂದಾಗಿಯೇ ನಾವು ತಿನ್ನುತ್ತಿರುವುದು ಎಂಬುದನ್ನು ಮರೆತಿದ್ದೇವೆ. ಬಾಕಿ ಎಲ್ಲ ವಿಷಯಗಳಿಗೂ ನಾವು ಬೆಲೆಯನ್ನು ನಿಗದಿ ಮಾಡುತ್ತೇವೆ, ಆದರೆ ನಮಗೆ ಊಟ ಮಾತ್ರ ಉಚಿತವಾಗಿ ಸಿಗಬೇಕು ಎಂಬುದು ನಮ್ಮ ನಂಬಿಕೆ. ಈ ವಿಚಾರವು ಸೂಕ್ತವಾಗಿದ್ದಿದ್ದುದು, ನಮ್ಮಲ್ಲಿ 95% ರಷ್ಟು ಜನರು ರೈತರಾಗಿದ್ದಾಗ ಮಾತ್ರ. ಇದೀಗ, 60% ರಷ್ಟು ಜನರಷ್ಟೇ ಕೃಷಿಯಲ್ಲಿ ತೊಡಗಿಕೊಂಡಿದ್ದು ಅವರಿಂದ ಉಳಿದ 40% ರಷ್ಟು ಜನರಿಗೆ ಆಹಾರ ಪೂರೈಕೆ ಮಾಡಬೇಕಾಗಿದೆ. 60% ರಷ್ಟು ಜನರು ಉಪವಾಸದಲ್ಲಿ ಇರಬೇಕಾದ ಪರಿಸ್ಥಿತಿಯಿದೆ. ಇದು ಯಾವುದೇ ರೀತಿಯಲ್ಲಿ ಸರಿಯಲ್ಲ. ಆರ್ಥಿಕತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೋಡಿದರೆ, 100 ಜನರು ತಿನ್ನುವ ಆಹಾರವನ್ನು 60 ಜನ ತಯಾರಿಸುತ್ತಿದ್ದಾರೆ. ಇದು ಮಾನವ ಸಂಪನ್ಮೂಲದ ವಿಚಾರದಲ್ಲೂ ಸರಿಯಾದ ಹಂಚಿಕೆಯಲ್ಲ. 100 ಜನರಿಗಾಗುವ ಆಹಾರವನ್ನು 6 ರಿಂದ 8 ಜನರು ತಯಾರಿಸಿದರೆ, ಅದರಲ್ಲಿ ಒಂದು ಅರ್ಥವಿದೆ. 10 ಜನರಿದ್ದರೂ ಒಂದು ರೀತಿ ಸರಿಯೇ. ಆದರೆ, 60 ಜನರು ಆಹಾರ ತಯಾರು ಮಾಡುತ್ತಿದ್ದಾರೆ. ಈ ರೀತಿ ನಾವು ಆರ್ಥಿಕತೆಯನ್ನು ಮುನ್ನಡೆಸಲು ಸಾಧ್ಯವಿಲ್ಲ. ಆದರೆ, ಇದು ಸಂಪ್ರದಾಯಕ ಕೃಷಿಯಿಂದ ವಾಣಿಜ್ಯ ಬೆಳೆಗಾದ ಕೃಷಿಗೆ ಬದಲಾಗುವ ಪ್ರಕ್ರಿಯೆಯಾಗಿದೆ.
ನಾವು ಇದೀಗ ಅನುಭವಿಸುತ್ತಿರುವುದು ನೋವನ್ನೊಳಗೊಂಡ ಪ್ರಕ್ರಿಯೆ. ಮತ್ತು ಈ ನೋವಿನ ಹೊರೆಯನ್ನು ಬಡವರು ಹಾಗು ದುರ್ಬಲ ವರ್ಗದ ಜನರಷ್ಟೇ ಅನುಭವಿಸುತ್ತಿದ್ದಾರೆ. ಅನೇಕ ವಿಧಗಳಲ್ಲಿ ಈ ಹೊರೆಯನ್ನು ಇಳಿಸಬೇಕಾಗಿದೆ. ಒಂದು ರಾಷ್ಟ್ರವಾಗಿ ನಾವು ಇದಕ್ಕಾದ ಪ್ರಯತ್ನಗಳನ್ನು ಇನ್ನೂ ಕೈಗೊಂಡಿಲ್ಲ. ಮೂಲಭೂತವಾಗಿ ಆಗಬೇಕಾದ ಒಂದು ವಿಷಯವೆಂದರೆ, ಜನರು ಹೆಚ್ಚು ಸ್ಪಷ್ಟತೆ ಹಾಗು ಗಮನದಿಂದ(ಪ್ರಜ್ಞಾಪೂರ್ವಕವಾಗಿ) ಯೋಚಿಸಬೇಕಾಗಿದೆ. ಜನರು ತಮ್ಮ ಜಾತಿ, ಮತ, ಧರ್ಮ – ಇವುಗಳಿಂದ ಪ್ರಭಾವಿತರಾಗದೆ ನೇರ ದೃಷ್ಟಿಯಿಂದ ಯೋಚಿಸಬೇಕಾದ ಅಗತ್ಯವಿದೆ. ಈ ರೀತಿಯ ಪರಿವರ್ತನೆಗೆ ಆಧ್ಯಾತ್ಮಿಕ ಪ್ರಕ್ರಿಯೆ ಒಂದು ಪ್ರಬಲವಾದ ಸಾಧನವಾಗಿದೆ.
ಭಾರತವನ್ನು ಸೆರೆಮನೆಯಾಗಿ ಅಲ್ಲದೇ ಮನೆಯನ್ನಾಗಿ ಮಾಡುವುದು
ಸುಮಾರು 500 ವರ್ಷಗಳ ಹಿಂದೆ ಜಗತ್ತಿನಲ್ಲಿ ಎಲ್ಲರೂ ಭಾರತಕ್ಕೆ ಬರಲು ಬಯಸುತ್ತಿದ್ದ ಸಮಯವಿತ್ತು. ವಾಸ್ಕೋ ಡಾ ಗಾಮಾ, ಕೊಲಂಬಸ್, ಇವರೆಲ್ಲರೂ ಭಾರತದೆಡೆಗೆ ಬರಲು ಪ್ರಯತ್ನಿಸಿದ್ದರು. ಅನೇಕ ಅಪಾಯಗಳನ್ನೂ ಲೆಕ್ಕಿಸದೆ, ಸಾವಿರಾರು ಹಡಗುಗಳು ಈ ಕಾರ್ಯಕ್ಕಾಗಿ ಹೊರಟಿದ್ದವು. ಹೇಗಾದರೂ ಅವರು ಭಾರತವನ್ನು ತಲುಪಲು ಬಯಸಿದ್ದರು, ಏಕೆಂದರೆ, ಆರ್ಥಿಕತೆಯ ದೃಷ್ಟಿಯಲ್ಲಿ, ಜಗತ್ತಿನಲ್ಲಿಯೇ ಅತಿ ಶ್ರೀಮಂತ ರಾಷ್ಟ್ರ ಭಾರತವಾಗಿತ್ತು. ಕಳೆದ 250 ವರ್ಷಗಳಲ್ಲಿ, ನಾವು ಬಹಳವಾಗಿ ಕೆಳಗಿಳಿದಿದ್ದೇವೆ. ನಾನು ದಿನಪತ್ರಿಕೆಯನ್ನು ನೋಡುತ್ತಿರುವಾಗ, ಫುಟ್ಬಾಲ್ ವಿಶ್ವ ಶ್ರೇಯಾಂಕದಲ್ಲಿ ಭಾರತವನ್ನು 150 ನೇ ಸ್ಥಾನದಲ್ಲಿ ರೇಟ್ ಮಾಡಲಾಗಿದೆ ಎಂಬುದನ್ನು ತಿಳಿದುಕೊಂಡೆ, ಎಂತಹ ಅವಸ್ಥೆ! ಫುಟ್ಬಾಲ್ ತಂಡವೊಂದೇ ಎಲ್ಲವನ್ನೂ ನಿರ್ಧರಿಸುವುದಿಲ್ಲವಾದರೂ, ಈ ರೀತಿಯ ಮಾಪಕಗಳು ಜನರು ಹೇಗೆ ಜೀವಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದು, ಜನರು ಎಷ್ಟು ಆರೋಗ್ಯಕರ, ಕೇಂದ್ರೀಕೃತ ಮತ್ತು ಸಂಘಟಿತರಾಗಿದ್ದಾರೆ ಎಂಬುದರ ಸೂಚಕವಾಗಿದೆ.
500 ವರ್ಷಗಳ ಹಿಂದೆ, ಎಲ್ಲಾ ಜನರು ನಮ್ಮ ದೇಶದೆಡೆಗೆ ಬರಲು ಬಯಸುತ್ತಿದ್ದರು. ಇಂದು, ಎಲ್ಲರೂ ದೇಶವನ್ನು ಬಿಡಲು ಬಯಸುತ್ತಿದ್ದಾರೆ. ಇದೀಗ ಮತ್ತೊಮ್ಮೆ ಜನರನ್ನು ನಮ್ಮ ದೇಶದೆಡೆಗೆ ಬರುವಂತೆ ಮಾಡುವ ಸಮಯ ಬಂದಿದೆ. ಈಗಾಗಲೇ ಇದಕ್ಕಾದ ಪ್ರಕ್ರಿಯೆಗಳು ಪ್ರಾರಂಭವಾಗಿದೆ, ಆದರೆ ಇದು ಸಾಲದು. ಇದು ಕೇವಲ ಷೇರು ಮಾರುಕಟ್ಟೆ ಗರಿಷ್ಟ ಹಂತಗಳನ್ನು ಮುಟ್ಟುವುದರಿಂದ ಸಂಭವಿಸುವುದಿಲ್ಲ. ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು ನೋಡಿ ಜನರು ಮರಳಿ ಬರಬಹುದೇ ಅಥವಾ ಓಡಿ ಹೋಗಬಹುದೇ ಎಂಬುದನ್ನು ನಿರ್ಧರಿಸುತ್ತಾರೆ. ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚು ಜನರ ಅಗತ್ಯವಿಲ್ಲ, ಆದರೂ ಹೆಚ್ಚು ಜನರು ನಮ್ಮ ದೇಶಕ್ಕೆ ಬರುವಂತಹ ಪರಿಸ್ಥಿತಿಯನ್ನು ನಿರ್ಮಿಸಬೇಕಿದೆ. ಪ್ರತಿಯೊಬ್ಬರೂ ತಮ್ಮ ಮನೆಯನ್ನು ತೊರೆದು ಬೇರೆಡೆ ಹೋಗಲು ಬಯಸಿದರೆಂದರೆ, ನಿಮ್ಮ ಮನೆ ಭಯಾನಕ ಸ್ಥಿತಿಯಲ್ಲಿದೆ ಎಂದರ್ಥ.
ಈಗಲೂ ಹೆಚ್ಚಿನ ಜನರು ದೇಶವನ್ನು ತೊರೆಯಲು ಬಯಸುತ್ತಿದ್ದಾರೆ. ನಿಮ್ಮ ಪಾದರಕ್ಷೆಗಳನ್ನು ನೀವು ಹೇಗೆ ಜೋಡಿಸಿಡಬೇಕು ಮತ್ತು ಬೀದಿಯಲ್ಲಿ ಹೇಗೆ ನಡೆಯಬೇಕು, ಓಡಬೇಕು, ಜನರೊಂದಿಗೆ ನೀವು ಹೇಗೆ ಮಾತನಾಡಬೇಕು, ಎಂಬುದರಿಂದ ಪ್ರ್ರರಂಭಿಸಿ ನಮ್ಮ ಸಂಸ್ಕೃತಿಯಲ್ಲಿ ಇಂತಹ ಸರಳ ವಿಷಯಗಳಲ್ಲಿ ಬದಲಾವಣೆ ಮಾಡಿಕೊಂಡರಷ್ಟೇ, ಜನರು ದೇಶಕ್ಕೆ ಮರಳಲು ಬಯಸುತ್ತಾರೆ. ನಾವು ದೇಶವನ್ನು ಈ ಹಾದಿಯಲ್ಲಿ ಮುನ್ನಡೆಸಬೇಕಾಗಿದೆ. ಇಲ್ಲದಿದ್ದರೆ, ದೇಶದಿಂದ ಹೊರ ಹೋಗುತ್ತಾರೆಂಬ ಭಯದಿಂದ ಜನರನ್ನು ಹಿಡಿದಿಟ್ಟುಕೊಂಡರೆ, ಅದು ಕೇವಲ ಸೆರೆಮನೆಯಾಗುತ್ತದೆ ಅಷ್ಟೇ. ಜನರು ತಾವಾಗಿಯೇ ಮರಳಿ ಬರಲು ಬಯಸಿದರೆ ಮಾತ್ರ, ಅದು ಒಂದು ಮನೆಯಾಗುತ್ತದೆ, ಒಂದು ಉತ್ತಮ ರಾಷ್ಟ್ರವಾಗುತ್ತದೆ.
ನಾವು ನಮ್ಮ ದೇಶವನ್ನು ಈ ರೀತಿ ಪರಿವರ್ತಿಸಬೇಕಾಗಿದೆ. ಅದರ ಕುರಿತು ಕೇವಲ ಆಶಯಗಳನ್ನಿಟ್ಟುಕೊಂಡರಷ್ಟೇ ಅದು ನಡೆಯುವುದಿಲ್ಲ. ಇದಕ್ಕಾಗಿ ಪ್ರತಿ ಹಂತಗಳಲ್ಲೂ ಸಮಗ್ರವಾದ, ಸೂಕ್ತವಾದ ಕಾರ್ಯವನ್ನು ನಿರ್ವಹಿಸುವ ಅಗತ್ಯವಿರುತ್ತದೆ. ಆರ್ಥಿಕತೆಗೆ ಸಂಬಂಧಿತ ಕಾರ್ಯವು ದೊಡ್ಡ ರೀತಿಯಲ್ಲಿ ನಡೆಯುತ್ತಿದೆ, ಅದು ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದೆ. ಆದರೆ ಅದೇ ರೀತಿ ದೇಶದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ವೈಯಕ್ತಿಕ ಮಟ್ಟದಲ್ಲಿ ಮತ್ತು ಪ್ರಜ್ಞೆ-ಬುದ್ಧಿವಂತಿಕೆಯಲ್ಲಿ ಸಮಾನ ವೇಗದಲ್ಲಿ ಮುನ್ನಡೆ ಆಗಬೇಕು. ಹೀಗೆ ಸಂಭವಿಸದಿದ್ದಲ್ಲಿ, ಆರ್ಥಿಕತೆಯಲ್ಲಿನ ಪ್ರಗತಿ ಮಾನವ ಯೋಗಕ್ಷೇಮಕ್ಕೆ ನೋವನ್ನಷ್ಟೇ ಉಂಟು ಮಾಡುತ್ತದೆ.
ನಾವು ರಸ್ತೆಯಲ್ಲಿ ನಡೆಯುವ ಸಂಧರ್ಭದಲ್ಲಿ ನಮ್ಮ ಅಕ್ಕಪಕ್ಕದಲ್ಲಿರುವವರ ಬಗ್ಗೆ ಅರಿವು ಹಾಗು ಕಾಳಜಿ ಇರುವಂತೆ ಅದನ್ನು ಮಾಡಬೇಕು. ನೀವದಕ್ಕೆ ಸಿದ್ಧರಿದ್ದೀರಾ? ಎಲ್ಲರೂ ಈ ನಿಟ್ಟಿನಲ್ಲಿ ಸದಾ ಜಾಗೃತರಾಗಿರಬೇಕು. ನೀವು ಎಲ್ಲೇ ಇದ್ದರೂ, ಸದಾ ಪ್ರಜ್ಞಾಪೂರ್ವಕವಾಗಿ ಇರಬೇಕು. ನಿಮ್ಮ ಪ್ರತಿಯೊಂದು ಚಟುವಟಿಕೆಯಲ್ಲಿಯೂ, ಇದನ್ನು ಹರಡುವಂತೆ ಗಮನವಹಿಸಬೇಕು. ಆಗಷ್ಟೇ ಈ ಜಗತ್ತು ಉತ್ತಮ ಸ್ಥಳವಾಗುತ್ತದೆ.
ಸಂಪಾದಕರ ಟಿಪ್ಪಣಿ: “Bha-ra-ta: The Rhythm of a Nation” ಎಂಬ ಇಂಗ್ಲಿಷ್ ಪುಸ್ತಕದಲ್ಲಿ ಭಾರತ, ಅದರ ಭೂತ, ವರ್ತಮಾನ ಮತ್ತು ಭವಿಷ್ಯ ಹಾಗೂ ಅದರ ಸಂಸ್ಕೃತಿಯ ಅಪಾರತೆಯ ಬಗ್ಗೆ ಸದ್ಗುರುಗಳ ಹೆಚ್ಚಿನ ಒಳನೋಟವನ್ನು ಒಳಗೊಂಡಿದೆ. ಈ ಈ-ಬುಕ್, "ನೀವು ಬಯಸಿದಷ್ಟು ಪಾವತಿಸಿ" ಆಧಾರದ ಮೇಲೆ ಲಭ್ಯವಿದೆ.