ಭಾವನೆಗಳು ಹಾಗೂ ರಸಾಯನ ಶಾಸ್ತ್ರ..
ಸದ್ಗುರುಗಳು ಹೇಗೆ ನಮ್ಮ ದೇಹದಲ್ಲಿ ಸರಿಯಾದ ರಾಸಾಯನಿಕಗಳನ್ನು ಉತ್ಪತ್ತಿ ಮಾಡುವ ಮೂಲಕ ನಾವು ಪ್ರೀತಿ ಪಾತ್ರರಾಗಬಹುದು, ಅಥವಾ ಪ್ರೀತಿ ಪಾತ್ರರಾಗಿ ಸರಿಯಾದ ರಾಸಾಯನಿಕಗಳನ್ನು ಉತ್ಪತ್ತಿ ಮಾಡಬಹುದು ಎಂಬುದನ್ನು ವಿಶ್ಲೇಷಿಸಿದ್ದಾರೆ.
ಸದ್ಗುರು: ನೀವು ಅನುಭವಿಸುವ ಪ್ರತಿಯೊಂದು ಭಾವನೆಗಳೂ ನಿರ್ದಿಷ್ಟ ರಾಸಾಯನಿಕ ಪ್ರಕ್ರಿಯೆಗಳಿಂದ ಹಾದು ಹೋಗುತ್ತದೆ. ನಿಮ್ಮಲ್ಲಿ ಯಾವುದೇ ಭಾವನೆಗಳು ಉಂಟಾಗಲಿ, ಸಂತೋಷ ಅಥವಾ ದುಖಃ, ವ್ಯಾಕುಲತೆ ಅಥವಾ ಶಾಂತತೆ, ಅದರಿಂದ ನಿಮ್ಮಲ್ಲಿನ ರಾಸಾಯನಿಕ ಪ್ರಕ್ರಿಯೆಗಳು ವಿವಿಧ ರೀತಿಯಲ್ಲಿ ಉಂಟಾಗುತ್ತವೆ. ಇದು ಎರಡೂ ದಿಕ್ಕಿನಿಂದ ಕೆಲಸ ಮಾಡುತ್ತದೆ - ಒಂದು, ಭಾವನೆ ನಿಮ್ಮಲ್ಲಾಗುವ ರಾಸಾಯನಿಕ ಪ್ರಕ್ರಿಯೆಯನ್ನು ಬದಲಾಯಿಸಬಲ್ಲದು ಮತ್ತು ರಾಸಾಯನಿಕ ಪ್ರಕ್ರಿಯೆಯನ್ನು ಬದಲಾಯಿಸುವ ಮೂಲಕ ನಿಮ್ಮಲ್ಲಿನ ಭಾವನೆಗಳನ್ನು ಬದಲಿಸಬಹುದು. ನಾವು ಜೀವನದಲ್ಲಿ ಹಾದು ಹೋಗುವ ವಿವಿಧ ಹಂತದ ಅನುಭವಗಳಿಂದ ನಮ್ಮಲ್ಲಿನ ಹಲವು ರಾಸಾಯನಿಕ ಪ್ರಕ್ರಿಯೆಗಳು ನಿರ್ದಿಷ್ಟ ಬದಲಾವಣೆಗೆ ಒಳಪಡುತ್ತವೆ. ಅಥವಾ, ನಮ್ಮಲ್ಲಿ ರಾಸಾಯನಿಕ ಪ್ರಕ್ರಿಯೆಗಳು ಬದಲಾವಣೆಗೆ ಒಳಪಡುವುದರಿಂದ ನಾವು ವಿವಿಧ ಹಂತದ ಭಾವನೆಗಳನ್ನು ಹೊಂದುತ್ತೇವೆ. ಉದಾಹರಣೆಗೆ - ನೀವು ಉದ್ರೇಕಗೊಂಡರೆ ನಿಮ್ಮ ರಕ್ತ ಸಂಚಲನೆ ವೇಗಗೊಳ್ಳುತ್ತದೆ ಮತ್ತು ನಿಮ್ಮ ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಅದೇ ರೀತಿ ನಿಮ್ಮ ಹೃದಯ ವೇಗವಾಗಿ ಬಡಿದುಕೊಳ್ಳಲು ಪ್ರಾರಂಭಿಸಿದರೂ ಸಹ ನೀವು ಅನವಶ್ಯಕವಾಗಿ ಉದ್ರೇಕಗೊಳ್ಳುತ್ತೀರಿ, ಇವೆರಡೂ ಸತ್ಯ..
ಇದರ ಆಧಾರದ ಮೇಲೆಯೇ ಭ್ರಾಂತಿಯುಂಟು ಮಾಡುವಂತಹ ಔಷಧಿಗಳನ್ನು ಉತ್ಪಾದಿಸಲಾಗುತ್ತಿದೆ. ಮನೋವೈದ್ಯಕೀಯ ಸಮಸ್ಯೆಗಳಿಗೆ ಚಿಕಿತ್ಸೆಯು ಸಹ ಈ ರೀತಿ ಕಾರ್ಯನಿರ್ವಹಿಸುತ್ತದೆ. ಯಾರಾದರೂ ತುಂಬಾ ಆಕ್ರೋಶಗೊಂಡಾಗ, ಅದನ್ನು ಶಮನ ಮಾಡುವಂತಹ ಔಷಧವನ್ನು ಅವರಿಗೆ ನೀಡುತ್ತಾರೆ ಆಗ ಅವರು ಶಾಂತರಾಗುತ್ತಾರೆ. ಈ ಔಷಧಿಗಳು ರಾಸಾಯನಿಕವಾಗಿ ಹೇಗೋ ಒತ್ತಡವನ್ನು ತಗ್ಗಿಸುತ್ತವೆ. ಯಾವುದೇ ಔಷಧಿ ತೆಗೆದುಕೊಂಡರೂ ನಿಮ್ಮಲ್ಲಿನ ರಸಾಯನಿಕ ಪ್ರಕ್ರಿಯೆಯ ಮಟ್ಟದಲ್ಲಿ ಬದಲಾವಣೆ ಉಂಟಾಗುತ್ತದೆ. ಅನುಭವ ಏನೇ ಇರಲಿ, ಅದಕ್ಕೆ ಪೂರಕವಾದ ರಾಸಾಯನಿಕ ಪ್ರಕ್ರಿಯೆ ಇರುತ್ತದೆ. ಅದೇ ರೀತಿ ರಾಸಾಯನಿಕ ಪ್ರಕ್ರಿಯೆ ಏನೇ ಆಗಿರಲಿ, ಅದರ ಫಲವಾಗಿ ನಿಮ್ಮಲ್ಲಿ ಒಂದು ಅನುಭವವಿರುತ್ತದೆ.
ನಾವು ರಾಸಾಯನಿಕವಾಗಿ ಪ್ರೀತಿಯನ್ನು ಸೃಷ್ಟಿಸಬಹುದೇ?
ನಾವು ರಾಸಾಯನಿಕವಾಗಿ ಪ್ರೀತಿಯನ್ನು ಸೃಷ್ಟಿಸಬಹುದೇ? ಅಕಸ್ಮಾತ್ ನಾನು ನನ್ನ ರಾಸಾಯನಿಕ ಪ್ರಕ್ರಿಯೆಯನ್ನು ಬದಲಾಯಿಸಿಕೊಳ್ಳಬಹುದಾದರೆ, ನಾನು ಪ್ರೀತಿ ಪಾತ್ರನಾಗಬಹುದೇ? ಆಗಬಹುದು, ಅದನ್ನೇ ನಾವು ಸಾಧನೆ ಅಥವ ಅಭ್ಯಾಸಗಳ ಮೂಲಕ ಯೋಗದಲ್ಲಿ ಮಾಡುತ್ತಿರುವುದು. ಭಕ್ತಿಯೋಗ ಮತ್ತು ಇನ್ನಿತರ ಯೋಗ ಪ್ರಕಾರಗಳಲ್ಲಿ -ಪ್ರಮುಖವಾಗಿ ಹಠಯೋಗ ಮತ್ತು ಕ್ರಿಯಾಯೋಗ, ಇವುಗಳ ವ್ಯತ್ಯಾಸವಿಷ್ಟೆ: ಕ್ರಿಯಾಯೋಗ ಮತ್ತು ಹಠಯೋಗದ ಮೂಲಕ ನೀವು ನಿಮ್ಮ ಆಂತರ್ಯದ ಪ್ರಾಣಶಕ್ತಿಯನ್ನು ಬದಲಾಯಿಸುವುದರೊಂದಿಗೆ ರಾಸಾಯನಿಕ ಕ್ರಿಯೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೀರಿ, ಅದರಿಂದ ನಿಮ್ಮ ಆಂತರ್ಯದ ಗುಣಮಟ್ಟ ಅಥವಾ ನಿಮ್ಮ ಅನುಭವ ಬದಲಾಗುವುದು. ಭಕ್ತಿಯೋಗದಿಂದ ನೀವು ಪ್ರೀತಿ ಪಾತ್ರರಾಗುವ ಮೂಲಕ ಗುಣಮಟ್ಟವನ್ನು ಬದಲಾಯಿಸಲು ಪ್ರಯತ್ನಿಸುತ್ತೀದ್ದೀರಿ, ಅದರಿಂದ ಒಂದು ದಿನ ನಿಮ್ಮ ರಾಸಾಯನಿಕ ಕ್ರಿಯೆ ಪ್ರೀತಿಯಂತಾಗಲೆಂದು.
ಪ್ರಾಣಾಯಾಮ, ಆಸನಗಳು ಮತ್ತು ಧ್ಯಾನದ ಮೂಲಕ ನಾವು ನಮ್ಮ ರಸಾಯನಿಕ ಪ್ರಕ್ರಿಯೆಯನ್ನು ಮಾರ್ಪಾಡು ಮಾಡಲು ಯತ್ನಿಸುತ್ತೇವೆ. ಧ್ಯಾನ ಮಾಡುವ ಮೂಲಕ ನಾವು ಶಾಂತಿಯುತವಾಗಲು ಪ್ರಯತ್ನಿಸುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಬದಲಾಗಿ ಅದರ ಮೂಲಕ ನಾವು ನಮ್ಮಲ್ಲಿನ ರಸಾಯನಿಕ ಪ್ರಕ್ರಿಯೆಯನ್ನು ಯಾವ ರೀತಿಯಾಗಿ ಬದಲಾಯಿಸುತ್ತಿದ್ದೇವೆ ಎಂದರೆ ಅದರಿಂದ ಶಾಂತಿ ಸಹಜ ಸ್ಥಿತಿಯಾಗುತ್ತದೆ..
ಇದರ ಅರ್ಥವೇನೆಂದರೆ, ಸರಿಯಾದ ಅಭ್ಯಾಸಗಳಿಂದ ನೀವು ನಿಮ್ಮ ರಸಾಯನಿಕ ಪ್ರಕ್ರಿಯೆಯನ್ನು ಶಾಂತಿಯನ್ನಾಗಿಸುವ ರೀತಿಯಲ್ಲಿ ಬದಲಾಯಿಸಿದರೆ - ವ್ಯಕ್ತಿಯನ್ನು ಸಂತೋಷದಿಂದ ಇರುವಂತೆ ಮಾಡಿಸುವ ರೀತಿ ಬದಲಾಯಿಸಿದರೆ- ಆಗ ಸಹಜವಾಗಿಯೇ ನಿಮ್ಮ ಸ್ಥಿತಿ ಆ ರೀತಿ ಆಗುತ್ತದೆ. ಇದಕ್ಕಾದ ಇನ್ನೊಂದು ಮಾರ್ಗವೆಂದರೆ, ನೀವು ಅಪಾರ ಭಾವನೆಯನ್ನು ಹೊಂದಿರುವ ಪ್ರೀತಿಯ ವಸ್ತುವನ್ನು ರಚಿಸುವ ಮೂಲಕ, ಬಹುಶಃ ದೇವರು, ಗುರು ಅಥವಾ ಇನ್ನಿತರ ವಸ್ತುಗಳು, ನೀವು ಅದರ ಮೇಲೆ ಅಪಾರ ಪ್ರಮಾಣದ ಪ್ರೀತಿಯನ್ನು ಸೃಷ್ಟಿಸಿದರೆ, ನಿಮ್ಮ ರಸಾಯನಿಕ ಕ್ರಿಯೆಯು ಬದಲಾಗುತ್ತದೆ. ಎರಡೂ ಮಾರ್ಗಗಳು ಸರಿಯಾದುದ್ದೇ.
ಪ್ರೀತಿ: ಕೇವಲ ಸಂತಾನೋತ್ಪತ್ತಿಯ ಒಂದು ಉಪಕರಣವಲ್ಲ
ಜೀವಶಾಸ್ತ್ರಜ್ಞರು ಪ್ರೀತಿ ಮತ್ತು ರಾಸಾಯನಿಕ ಪ್ರಕ್ರಿಯೆಗಳ ಬಗ್ಗೆ ಮಾತನಾಡುವಾಗ, ಸಂಪೂರ್ಣವಾಗಿ ಬೇರೆಯದೇ ಅರ್ಥದಲ್ಲಿ ಮಾತನಾಡುತ್ತಾರೆ. ನೀವು ನಿಸರ್ಗದ ಎಲ್ಲಾ ಚಟುವಟಿಕೆಗಳನ್ನು ನೋಡಿದರೆ, ಪ್ರತಿಯೊಂದರ ಗುರಿಯು ಸಂತಾನೋತ್ಪತ್ತಿಯೊಂದೇ ಆಗಿರುತ್ತದೆ – ಮತ್ತೇನೂ ಅಲ್ಲ. ಹೂವುಗಳು ಅರಳುವುದು ನಿಮ್ಮ ಪ್ರೀತಿಯ ಅಪೇಕ್ಷೆಯಲ್ಲಲ್ಲ. ನೀವು ಹಾಗೆ ಯೋಚಿಸಬಹುದು ಅಥವಾ ಕವಿಗಳು ಹಾಗೇ ವರ್ಣಿಸಬಹುದು , ಅವುಗಳು ಪರಾಗಸ್ಪರ್ಶದ ಉದ್ದೇಶಕ್ಕಾಗಿ ಅರಳುತ್ತಿವೆಯಷ್ಟೇ. ಇದರಿಂದ ಬೀಜ ಉಂಟಾಗುತ್ತದೆ, ಅದುವೇ ಮತ್ತೊಂದು ಸಸಿಯಾಗಿ ಬೆಳೆಯುತ್ತದೆ. ಈ ಪ್ರಕ್ರಿಯೆಯ ಉದ್ದೇಶ ಅಷ್ಟೇ.
ಜೀವಶಾಸ್ತ್ರಜ್ಞರು ಪ್ರೀತಿಯ ಬಗ್ಗೆ ಮಾತನಾಡುವಾಗ, ಅವರು ವಾಸ್ತವವಾಗಿ ಸಂತಾನೋತ್ಪತ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಸೃಷ್ಟಿ ನಡೆಯುತ್ತಾ ಇರಲು ಪ್ರಕೃತಿಯ ಒಂದು ಉಪಾಯ ಇದಾಗಿದೆ. ಪ್ರಕೃತಿ ತನ್ನನ್ನು ತಾನು ಶಾಶ್ವತಗೊಳಿಸಲು ಬಯಸುತ್ತದೆ. ಅದನ್ನೇ ಮಾಯಾ ಎಂದು ಕರೆಯಲಾಗುತ್ತದೆ. ಅದು ಶಾಶ್ವತವಾಗಲು ತನ್ನದೇ ಆದ ಅಂತರ್ಗತ ವ್ಯವಸ್ಥೆಗಳನ್ನು ಹೊಂದಿದೆ. ಯಾರೂ ಏನನ್ನೂ ಮಾಡಬೇಕಾಗಿಲ್ಲ. ಇದಕ್ಕೆ ಸೃಷ್ಟಿಕರ್ತನ ಹಸ್ತಕ್ಷೇಪವೂ ಅಗತ್ಯವಿಲ್ಲ; ಅದೇ ಸೃಷ್ಟಿಯ ಸೊಬಗು. ಸೃಷ್ಟಿಕರ್ತ ಕೂಡ ಅಗತ್ಯವಿಲ್ಲ; ಎಲ್ಲವೂ ಸ್ವಯಂಚಾಲಿತವಾಗಿದೆ. ಅದು ಮಾಯಾ ಸ್ವಭಾವ.
ಆದರೆ ನಾವು “ಪ್ರೀತಿ” ಎಂಬ ಪದವನ್ನು ಬಳಸುವಾಗ ಏನನ್ನು ಹೇಳುತ್ತಿದ್ದೇವೆಂದರೆ, ಒಮ್ಮೆ ನಿಮ್ಮೊಳಗೆ ಪ್ರೀತಿಯನ್ನು ನೀವು ನಿಜವಾಗಿಯೂ ಅನುಭವಿಸಿದಲ್ಲಿ, ನಿಮ್ಮ ನಿಮ್ಮಲ್ಲಿನ ಜೈವಿಕ ಪ್ರಕ್ರಿಯೆ ಮತ್ತು ದೇಹವು ಅತ್ಯಂತ ಕನಿಷ್ಠವಾಗುತ್ತದೆ. ನಿಮ್ಮ ಜೈವಿಕ ಪ್ರಕ್ರಿಯೆ ತುಂಬಾ ಸಕ್ರಿಯವಾಗಿದೆಯೆಂದರೆ, ನಿಮ್ಮೊಳಗೆ ಪ್ರೀತಿ ಎಂಬುದು ಸಂಭವಿಸಿಲ್ಲವೆಂದೇ ಅರ್ಥ. ಭಕ್ತಿ ಒಬ್ಬ ವ್ಯಕ್ತಿಯನ್ನು ಪ್ರವೇಶಿಸಿದಾಗ, ಆತನು ತನ್ನ ದೇಹಕ್ಕೆ ಕನಿಷ್ಠ ಪ್ರಾಮುಖ್ಯತೆಯನ್ನು ನೀಡುತ್ತಾನೆ. ಅವನು ಅದನ್ನು ಎಸೆದು ಹೋಗಲೂ ಸಿದ್ದನಿರುವಂತಹ ತೀವ್ರ ಸ್ಥಿತಿಯಲ್ಲಿರುತ್ತಾನೆ. ಈ ಪ್ರೀತಿಯು ನಿಮ್ಮನ್ನು ಮಾಯೆಯ ಪ್ರಕ್ರಿಯೆಯಲ್ಲಿ ಸಿಲುಕಿಸುವುದಿಲ್ಲ, ಬದಲಾಗಿ ಅದು ನಿಮ್ಮನ್ನು ಅದರಿಂದ ಮುಕ್ತಗೊಳಿಸುತ್ತದೆ.
Editor's Note: Namaskar Process: The many nerve endings in your palms make them very sensitive. By placing them together in a Namaskar, you can change your chemistry to foster love within.