ಭಿಕ್ಷಾಟನೆ - ಬೆಳವಣಿಗೆಗೆ ಒಂದು ಸಾಧನ
ಭಾರತೀಯ ಆಧ್ಯಾತ್ಮಿಕ ಸಂಪ್ರದಾಯದಲ್ಲಿ ಭಿಕ್ಷಾಟನೆಯ ಮಹತ್ವವೇನು? ಇದನ್ನು ವಿವರಿಸಲು ಸದ್ಗುರುಗಳು ಒಬ್ಬ ಬುದ್ಧಿವಂತ ಭಿಕ್ಷುಕನ ಕಥೆಯನ್ನು ಇಲ್ಲಿ ಹೇಳುತ್ತಾರೆ.
ಭಾರತೀಯ ಆಧ್ಯಾತ್ಮಿಕ ಸಂಪ್ರದಾಯದಲ್ಲಿ ಭಿಕ್ಷಾಟನೆಯ ಮಹತ್ವವೇನು? ಇದನ್ನು ವಿವರಿಸಲು ಸದ್ಗುರುಗಳು ಒಬ್ಬ ಬುದ್ಧಿವಂತ ಭಿಕ್ಷುಕನ ಕಥೆಯನ್ನು ಹಾಗೂ ಗೌತಮ ಬುದ್ಧನ ಜೀವನದ ಒಂದು ಘಟನೆಯನ್ನು ಹೇಳುತ್ತಾರೆ. ಹೊಟ್ಟೆಪಾಡಿಗಾಗಿ ಸಂಪಾದಿಸುವುದರಲ್ಲಿ ನವು ನಮ್ಮತನವನ್ನು ಬೆಳೆಸಿಕೊಳ್ಳುತ್ತೇವೆ, ಆದರೆ ನಮ್ಮತನವನ್ನು ಕಳಚಿಹಾಕುವ ಸಲುವಾಗಿ ಪ್ರಜ್ಞಾಪೂರ್ವಕವಾಗಿ ಭಿಕ್ಷೆ ಬೇಡುವ ಪ್ರಕ್ರಿಯೆಯನ್ನು ಒಂದು ಸಾಧನವಾಗಿ ನಮ್ಮ ಸಂಸ್ಕೃತಿ ಹಿಂದಿನಿಂದಲೂ ಬಳಸಿಕೊಂಡು ಬಂದಿದೆ ಎಂದು ಸದ್ಗುರುಗಳು ಹೇಳುತ್ತಾರೆ.
ಸದ್ಗುರು: ಒಮ್ಮೆ ಎಲ್ಲದನ್ನೂ ಬೇಡಿ ಪಡೆಯುತ್ತಿದ್ದ ಭಿಕ್ಷುಕನೊಬ್ಬನಿದ್ದ. ಜೀವನಪರ್ಯಂತ, ಅವನು ಕೇವಲ ಒಂದು ಚಿಂದಿ ಬಟ್ಟೆಯನ್ನು ಧರಿಸಿಯೇ ಜೀವಿಸಿದ್ದ. ಕ್ರಮೇಣ, ಅವನು ಒಂದು ರೀತಿಯಾಗಿ ಹೆಸರುವಾಸಿಯಾದ, ಮತ್ತು ಜನರು ಎಲ್ಲಾ ರೀತಿಯ ಪರಿಹಾರಗಳಿಗಾಗಿ ಅವನ ಬಳಿಗೆ ಹೋಗಲು ಪ್ರಾರಂಭಿಸಿದರು. ಅವನು ಬಹಳ ಬುದ್ಧಿವಂತ ಎಂದು ಪ್ರಸಿದ್ಧನಾದ. ಸುದ್ದಿ ರಾಜನವರೆಗೆ ತಲುಪಿ, ಅವನೂ ಕೂಡ ಸಲಹೆ ಪಡೆಯಲು ಆ ಭಿಕ್ಷುಕನ ಬಳಿಗೆ ಹೋಗಲು ಪ್ರಾರಂಭಿಸಿದ.
ಒಂದು ದಿನ, ರಾಜ, “ನೀನು ಭಿಕ್ಷುಕನಾಗಿರಬಾರದು, ನೀನು ನನ್ನ ಮಂತ್ರಿಯಾಗಬೇಕು” ಎಂದು ಹೇಳಿದ. ಅದಕ್ಕೆ ಆ ಭಿಕ್ಷುಕ, “ನೀನು ನೀಡುತ್ತಿರುವ ಪದವಿಯಿಂದ ನನಗೇನೂ ಪ್ರಯೋಜನವಾಗುವುದಿಲ್ಲ, ಆದರೆ ಇದರಿಂದ ಜನರಿಗೆ ಪ್ರಯೋಜನವಾಗುವುದಾದರೆ ನಾನು ಈ ಪದವಿಯನ್ನು ಒಪ್ಪಿಕೊಳ್ಳುತ್ತೇನೆ, ಆದರೆ ನನ್ನದೊಂದು ಷರತ್ತಿದೆ: ನಿನ್ನ ಅರಮನೆಯಲ್ಲಿ ನನಗೊಂದು ಕೋಣೆ ಬೇಕು; ಆ ಕೋಣೆಯೊಳಗೆ ನೀನೂ ಸೇರಿದಂತೆ ಯಾರೂ ಸಹ ಪ್ರವೇಶಿಸಬಾರದು. ಈ ಕೋಣೆಯನ್ನು ಯಾರಾದರೂ ಪ್ರವೇಶಿಸಿ ಪರಿಶೀಲಿಸಿದ್ದೇ ಆದರೆ, ನಾನು ನಿನ್ನ ಮಂತ್ರಿಯಾಗಿರುವುದಿಲ್ಲ." ಎಂದು ಹೇಳಿದ. ಅದಕ್ಕೆ ಒಪ್ಪಿದ ರಾಜ "ಸರಿ, ನಿನಗೆ ಒಂದು ಕೋಣೆಯನ್ನು ಕೊಡುತ್ತೇನೆ. ಅದನ್ನು ನಿನಗೆ ಬೇಕಿದ್ದ ರೀತಿಯಲ್ಲಿ ಇರಿಸಿಕೋ. ನಾನೇಕೆ ನಿನ್ನ ಕೋಣೆಯೊಳಗೆ ಬರಲಿ?" ಎಂದ.
ಇದು ಹೀಗೆ ಕೆಲ ವರ್ಷಗಳ ಕಾಲ ಮುಂದುವರಿಯಿತು ಮತ್ತು ಮುಖ್ಯಮಂತ್ರಿಯಾಗಿದ್ದ ಭಿಕ್ಷುಕನಿಗೆ ಇನ್ನು ತನ್ನ ಭಿಕ್ಷುಕನ ಅಂಗಿಯಲ್ಲಿರಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವನು ಸೂಕ್ತವಾದ ಉಡುಗೆಯನ್ನು ಧರಿಸಲು ಶುರು ಮಾಡಿದ. ಸಮಯ ಕಳೆದಂತೆ, ಅವನು ಅಪಾರ ಮೆಚ್ಚುಗೆಗೆ ಪಾತ್ರನಾಗಿ, ರಾಜನಿಗೂ ಮತ್ತು ಜನಗಳಿಗೂ ಬಹಳ ಪ್ರಿಯನಾದ. ಅವನ ಜನಪ್ರಿಯತೆ ಮತ್ತು ಅಪ್ರತಿಮ ಬುದ್ಧಿವಂತಿಕೆಯನ್ನು ನೋಡಿ, ಇತರ ಮಂತ್ರಿಗಳಿಗೆ ಬಹಳ ಅಸೂಯೆಯಾಯಿತು. ಕೆಲ ಮಂತ್ರಿಗಳು "ಆ ಕೋಣೆಯಲ್ಲಿ ಅವನೇನೋ ಅನುಮಾನಸ್ಪದವಾದುದನ್ನು ಇರಿಸಿದ್ದಾನೆ. ಹಾಗಾಗಿಗಿಯೇ ಯಾರೂ ಆ ಕೋಣೆಗೆ ಪ್ರವೇಶಿಸಬಾರದು ಎಂದವನು ಹೇಳುತ್ತಿದ್ದಾನೆ. ರಾಜ ಮತ್ತು ರಾಷ್ಟ್ರದ ವಿರುದ್ಧ ಅವನು ಯಾವುದೋ ಸಂಚನ್ನು ಹೂಡಿರಬೇಕು. ಇಲ್ಲವಾದರೆ, ಅವನದನ್ನು ಅಷ್ಟೊಂದು ರಕ್ಷಿಸುತ್ತಿರುವುದೇಕೆ?" ಎಂದು ಯೋಚಿಸಲು ಆರಂಭಿಸಿದರು.
ಈ ವದಂತಿ ಎಲ್ಲಾ ಕಡೆ ಹರಡಿ, ಅದು ಬಹುಬೇಗ ರಾಜನ ಕಿವಿಯನ್ನು ತಲುಪಿತು. ಒಂದು ದಿನ ರಾಜ ಕೋಪಗೊಂಡು, "ನಿನ್ನ ಕೋಣೆಯಲ್ಲಿ ಏನಿದೆಯೆಂದು ನಾನು ನೋಡಬೇಕು." ಎಂದು ಮಂತ್ರಿಯನ್ನು ಕೇಳಿದ. ಅದಕ್ಕೆ ಮಂತ್ರಿ: "ನೀವು ನನ್ನ ಕೋಣೆಯನ್ನು ನೋಡಬಹುದು, ಆದರೆ ನೀವು ಯಾವ ಕ್ಷಣದಲ್ಲಿ ಆ ಕೋಣೆಯನ್ನು ಪ್ರವೇಶಿಸುವಿರೋ, ನಾನು ಆ ತಕ್ಷಣವೇ ಇಲ್ಲಿಂದ ಹೊರಟುಹೋಗುತ್ತೇನೆ; ನಿಮ್ಮ ಮಂತ್ರಿಯಾಗಿರುವುದಿಲ್ಲ." ಎಂದ. ಮಂತ್ರಿಯ ಬುದ್ಧಿವಂತಿಕೆಯ ಬಗ್ಗೆ ತಿಳಿದಿದ್ದ ರಾಜ ಅವನನ್ನು ಕಳೆದುಕೊಳ್ಳಲು ಇಷ್ಟವಿಲ್ಲದೆ ಸುಮ್ಮನಾಗಿಬಿಟ್ಟ.
ಆದರೆ, ಸ್ವಲ್ಪ ಸಮಯದ ನಂತರ ರಾಜನಿಗೆ ತನ್ನ ಕುತೂಹಲವನ್ನು ತಾಳಲಾಗಲಿಲ್ಲ, ಅಲ್ಲದೆ ಜನರು ಅವನಿಗೆ ಅನೇಕ ರೀತಿಯ ಕಥೆಗಳನ್ನು ಹೇಳುತ್ತಿದ್ದರು, "ನೀನು ರಾಜ ಮತ್ತು ನಿನ್ನ ಅರಮನೆಯಲ್ಲಿ ಯಾವುದೇ ರಹಸ್ಯಗಳನ್ನು ನಿನ್ನಿಂದ ಮುಚ್ಚಿಡಬಾರದು." ಎನ್ನುತ್ತಿದ್ದರು. ಇದು ನಡೆಯುತ್ತಲೇ ಇತ್ತು, ಮತ್ತು ಒಂದು ದಿನ ರಾಜ, "ನಾನು ಆ ಕೋಣೆಯನ್ನು ನೋಡಲೇಬೇಕು." ಎಂದು ಬಹಳವಾಗಿ ಒತ್ತಾಯಿಸಿದ. ಮಂತ್ರಿಯು ಅದಕ್ಕೆ ಒಪ್ಪಿದಾಗ ರಾಜ ಕೋಣೆಯೊಳಗೆ ಹೋದ. ಅವನಿಗೆ ಕೋಣೆಯಲ್ಲಿ ಏನೂ ಕಾಣಲಿಲ್ಲ. ಅದೊಂದು ಖಾಲಿ ಕೋಣೆಯಾಗಿತ್ತು; ಭಿಕ್ಷುಕನು ಧರಿಸುತ್ತಿದ್ದ ಹಳೆಯ ಚಿಂದಿಚಿಂದಿಯಾದ ಅಂಗಿಯು ಗೋಡೆಯ ಮೇಲೆ ನೇತಾಡುತ್ತಿತ್ತು.
ರಾಜ ಇದನ್ನೆಲ್ಲ ನೋಡಿ, "ಇದನ್ನು ರಹಸ್ಯವಾಗಿರಿಸಿದ್ದೇಕೆ? ಇಲ್ಲಿ ಏನೂ ಇಲ್ಲವಲ್ಲ." ಎಂದು ಕೇಳಿದ. ಅದಕ್ಕೆ ಮಂತ್ರಿ, "ದಿನದಲ್ಲಿ ಮಾತ್ರ ನಾನು ಮಂತ್ರಿ; ಆದರೆ ರಾತ್ರಿಯಲ್ಲಿ ನಾನು ಆ ಅಂಗಿಯನ್ನು ತೊಟ್ಟು ನೆಲದ ಮೇಲೆ ಮಲಗುತ್ತೇನೆ. ಈ ರೀತಿ ಮಾಡುವುದರಿಂದ ನಾನು ಮಂತ್ರಿ ಪದವಿಯ ಆಡಂಬರಕ್ಕೆ ಸಿಕ್ಕಿಹಾಕಿಕೊಳ್ಳುವುದಿಲ್ಲ. ಆದರೆ ನೀವೀಗ ನನ್ನ ಷರತ್ತನ್ನು ಮುರಿದಿದ್ದೀರ. ನಾನು ಇನ್ನಿಲ್ಲಿರುವುದಿಲ್ಲ." ಎಂದು ಹೇಳಿ ತನ್ನ ಅಂಗಿಯನ್ನು ಧರಿಸಿ ಹೊರಟಹೋದ.
ಪ್ರಜ್ಞಾಪೂರ್ವಕವಾಗಿ ಭಿಕ್ಷೆ ಬೇಡುವುದು
ಭಾರತದಲ್ಲಿ ಭಿಕ್ಷೆ ಬೇಡುವುದು ಆಧ್ಯಾತ್ಮಿಕ ಸಂಪ್ರದಾಯದ ಒಂದು ಭಾಗವಾಗಿತ್ತು. ನೀವೇನನ್ನು ತಿನ್ನಬೇಕು ಎನ್ನುವುದನ್ನು ನೀವು ನಿರ್ಧರಿಸುತ್ತಿರಲಿಲ್ಲ; ನೀವು ಭಿಕ್ಷೆ ಬೇಡಿ, ಜನರು ನಿಮಗೆ ಕೊಟ್ಟದ್ದನ್ನು ನೀವು ತಿನ್ನಬೇಕಿತ್ತು. ಆಧ್ಯಾತ್ಮಿಕ ಪಥಯಲ್ಲಿರುವವರು ನಿಮ್ಮ ಮನೆ ಮುಂದೆ ನಿಂತು ಆಹಾರವನ್ನು ಕೇಳುವುದು ಮತ್ತು ನೀವವರಿಗೆ ಆಹಾರವನ್ನು ಅರ್ಪಿಸುವುದನ್ನು ಒಂದು ದೊಡ್ಡ ಭಾಗ್ಯವೆಂದು ಪರಿಗಣಿಸಲಾಗುತಿತ್ತು. ಇಂದು, ಈ ಸಂಪ್ರದಾಯವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಆಧ್ಯಾತ್ಮಿಕ ಅನ್ವೇಷಕರ ಉಡುಪನ್ನು ಧರಿಸಿರುವ ಅನೇಕರು ಹಣ ಮತ್ತು ಆಹಾರದ ಹುಡುಕಾಟದಲ್ಲಿ ಭಿಕ್ಷುಕರಾಗಿದ್ದಾರೆ. ಆದರೆ ಜನರು ಪ್ರಜ್ಞಾಪೂರ್ವಕವಾಗಿ ಭಿಕ್ಷೆ ಬೇಡುತ್ತಿದ್ದಾಗ, ಅದು ಸಂಪೂರ್ಣವಾಗಿ ವಿಭಿನ್ನವಾದ ಅರ್ಥ ಮತ್ತು ಸಾಧ್ಯತೆಯನ್ನು ಹೊಂದಿತ್ತು.
ಯಾರಾದರೂ ನಿಮ್ಮ ಮುಂದೆ ಕೈ ಚಾಚಿದಾಗ, ನೀವು ಕೊಟ್ಟಿದ್ದು ದುರುಪಯೋಗವಾಗುತ್ತಿದೆ ಎಂದು ನಿಮಗನಿಸಿದರೆ, ನೀವು ಕೊಡಲು ನಿರಾಕರಿಸಿ ಮುಂದೆ ಹೋಗಬಹುದು. ಅವರು ನಿಜವಾದ ಅಗತ್ಯದಿಂದ ಕೇಳುತ್ತಿದ್ದಾರೆ ಎಂದು ನಿಮಗನಿಸಿದರೆ, ನೀವು ಮನುಷ್ಯನಾಗಿ ಪ್ರತಿಸ್ಪಂದಿಸಬೇಕು. ಬೀದಿಯಲ್ಲಿ ಒಬ್ಬರ ಮುಂದೆ ಕೈ ಚಾಚುವುದು ಎಷ್ಟು ಕಷ್ಟವಾಗಿದಿರಬಹುದೆಂದು ನೀವು ಯೋಚಿಸಿ. ಆತ ಈ ಪರಿಸ್ಥಿತಿಗೆ ತನ್ನನ್ನು ತಾನು ಒಡ್ಡಿಕೊಂಡಿದ್ದಾನೆ.
ಒಬ್ಬ ಭಿಕ್ಷುಕ ಅಸಹಾಯಕತೆಯಿಂದ ಹಾಗೆ ಮಾಡುತ್ತಿರಬಹುದು, ಆದರೆ ಒಬ್ಬ ಸನ್ಯಾಸಿ ’ನಾನು’ ಎಂಬುದರಿಂದ ತುಂಬಿಹೋಗದಿರಲು ಮತ್ತು ತನ್ನ ಸ್ವಂತ ಬೆಳವಣಿಗೆಗಾಗಿ ಪ್ರಜ್ಞಾಪೂರ್ವಕವಾಗಿ ಭಿಕ್ಷೆ ಬೇಡುತ್ತಿರುತ್ತಾನೆ. ಭಿಕ್ಷುಕನಿಗೆ ಅಂತಹ ದೊಡ್ಡ ಗುರಿಗಳೇನಿರುವುದಿಲ್ಲ. ಅವನು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾನಷ್ಟೆ, ಏಕೆಂದರೆ ದುಡಿದು ತಿನ್ನಲು ಅವನು ಅಸಮರ್ಥನಾಗಿರುತ್ತಾನೆ.
ಅಂಗವೈಕಲ್ಯವು ಕೇವಲ ಕೈ ಅಥವಾ ಕಾಲು ಕಳೆದುಕೊಳ್ಳುವ ಬಗ್ಗೆಯಲ್ಲ. ಜೀವನದ ಬಗ್ಗೆ ನೀವು ಯೋಚಿಸುವ ಮತ್ತು ಭಾವಿಸುವ ರೀತಿಯಲ್ಲಿ ನೀವು ಅಂಗವಿಕಲರಾಗಬಹುದು. ವಾಸ್ತವವಾಗಿ, ಇಡೀ ನಮ್ಮ ಜನಸಂಖ್ಯೆಯೇ ತಮ್ಮ ಆಲೋಚನೆ ಮತ್ತು ಜೀವನದ ಬಗೆಗಿನ ಅಭಿಪ್ರಾಯಗಳ ಕಾರಣದಿಂದ ಒಂದು ರೀತಿಯಲ್ಲಿ ಅಂಗವೈಕಲ್ಯಕ್ಕೆ ಒಳಗಾಗಿದೆ. ಅಂತೆಯೇ, ಒಬ್ಬ ಭಿಕ್ಷುಕನೂ ಸಹ, ಜೀವನವನ್ನು ನಡೆಸಲು, ಅಸಹಾಯಕನಾಗಿ ಭಿಕ್ಷಾಟನೆ ಮಾಡುವುದು ಸುಲಭವಾದ ದಾರಿಯೆಂದು ತಿಳಿದಿದ್ದಾನೆ.
ನಿಮ್ಮನ್ನು ನೀವು ಕಳಚುವುದು
ಆದಾಗ್ಯೂ, ಒಬ್ಬ ಆಧ್ಯಾತ್ಮಿಕ ವ್ಯಕ್ತಿ ತನ್ನನ್ನು ತಾನು ಇಲ್ಲವಾಗಿಸಿಕೊಳ್ಳಲು ಭಿಕ್ಷಾಟನೆ ಮಾಡುತ್ತಾನೆ. “ನಾನೇ ನನ್ನ ಜೀವನಕ್ಕಾಗಿ ಸಂಪಾದನೆ ಮಾಡುತ್ತೇನೆ, ನನ್ನದೇ ಹಣ, ನನ್ನದೇ ಆಹಾರ, ನನ್ನದೇ ಮನೆ” ಎಂಬ ಕಲ್ಪನೆ ನಿಮ್ಮ ಅಹಂಕಾರದ ಒಂದು ಬಹುದೊಡ್ಡ ಭಾಗವಾಗಿದೆ. ಒಂದು ದಿನ, ಗೌತಮ ಬುದ್ಧನ ಅತಿಥಿಯೊಬ್ಬರು ಕೆಲವು ಹೂವುಗಳನ್ನು ತಂದರು. ಜನರು ಗುರುವನ್ನು ಭೇಟಿಯಾಗಲು ಹೋದಾಗ ಅವರಿಗೆ ಹೂಗಳನ್ನು ಅರ್ಪಿಸುವುದು ನಮ್ಮ ಸಂಸ್ಕೃತಿಯ ಒಂದು ಭಾಗ.
ಆ ವ್ಯಕ್ತಿ ಬಂದಾಗ, ಗೌತಮ ಅವನನ್ನು ನೋಡುತ್ತಾ, “ಅದನ್ನು ಬಿಟ್ಟುಬಿಡು” ಎಂದ. ಆ ಮನುಷ್ಯ ಸುತ್ತಲೂ ನೋಡುತ್ತಾ, “ಏನನ್ನು ಬಿಟ್ಟು ಬಿಡುವುದು?” ಎಂದು ಯೋಚಿಸಿದ. ಹೂಗಳಿರಬಹುದೆಂದು ಎಣಿಸಿದ ಆತ ಹಿಂಜರಿಯತ್ತಾ, “ಆದರೆ ನಾನದನ್ನು ನಿಮಗಾಗಿ ತಂದಿದ್ದೇನೆ.” ಎಂದ. ಗೌತಮ ಮತ್ತೆ "ಅದನ್ನು ಬಿಟ್ಟುಬಿಡು" ಎಂದ. ಹಾಗಾಗಿ, ಆತ ಹೂಗಳನ್ನು ಕೈಯಿಂದ ಬಿಟ್ಟುಬಿಟ್ಟ. ಗೌತಮ ಅವನನ್ನು ನೋಡುತ್ತಾ ಮತ್ತೆ “ಅದನ್ನು ಬಿಟ್ಟುಬಿಡು” ಎಂದ. ಅದಕ್ಕೆ ಆ ವ್ಯಕ್ತಿ, “ನಾನು ಹೂಗಳನ್ನು ಬಿಟ್ಟುಬಿಟ್ಟೆ. ನಾನದನ್ನು ನಿಮಗಾಗಿ ಉಡುಗೊರೆಯಾಗಿ ತಂದಿದ್ದೆ, ಆದರೆ ನೀವದನ್ನು ಬಿಟ್ಟುಬಿಡಲು ಹೇಳಿದ್ದರಿಂದ ಹಾಗೆ ಮಾಡಿದೆ. ನಾನು ಇನ್ನೇನನ್ನು ಬಿಡಬೇಕು?” ಎಂದು ಕೇಳಿದ. ಆಗ ಗೌತಮ, “ಇಲ್ಲ, ಮೊದಲು ನೀನು ನಿನ್ನನ್ನು ಬಿಟ್ಟುಬಿಡು. ಹೂಗಳು ಸಮಸ್ಯೆಯಲ್ಲ. ನೀನು ನನಗಾಗಿ ಹೂಗಳನ್ನು ತಂದಿದ್ದೀಯ. ಅದು ಒಳ್ಳೆಯದೆ, ನಾನದನ್ನು ತೆಗೆದುಕೊಳ್ಳುತ್ತೇನೆ, ಆದರೆ ನೀನು ನಿನ್ನನ್ನು ಬಿಟ್ಟುಬಿಡು.” ಎಂದು ಹೇಳಿದ.
ನಿಮ್ಮನ್ನು ನೀವು ಕಳೆದುಕೊಳ್ಳುವ ಸಲುವಾಗಿ ಭಿಕ್ಷಾಟನೆಯನ್ನು ಒಂದು ಸಾಧನವನ್ನಾಗಿ ಬಳಸಲಾಗುತ್ತಿತ್ತು, ಏಕೆಂದರೆ ಹೊಟ್ಟೆಪಾಡಿಗಾಗಿ ಸಂಪಾದಿಸುವ ಪ್ರಕ್ರಿಯೆಯಲ್ಲಿ ನೀವು ನಿಮ್ಮತನವನ್ನು ಬೆಳೆಸಿಕೊಳ್ಳುತ್ತೀರಿ. ಆದರೆ ನಿಮ್ಮ ಹೊಟ್ಟೆಪಾಡಿಗಾಗಿ ಸಂಪಾದಿಸಲು ನೀವು ಸಮರ್ಥರು ಎಂಬ ಅರಿವಿದ್ದೂ, ಅದರ ಬಗ್ಗೆ ಸಂಪೂರ್ಣವಾಗಿ ಪ್ರಜ್ಞಾಪೂರ್ವಕವಾಗಿದ್ದೂ ಸಹ ನೀವು ಭಿಕ್ಷೆ ಬೇಡಲು ಆಯ್ಕೆ ಮಾಡಿ, ನೀವು ಇನ್ನೊಬ್ಬರ ಮುಂದೆ ಕೈಚಾಚಿದಾಗ ನೀವು ನಿಮ್ಮಿಂದ ಮುಕ್ತರಾಗುತ್ತೀರಿ. ಅದು ವ್ಯಕ್ತಿಯಲ್ಲಿನ ಒಂದು ಪ್ರಚಂಡವಾದ ಬದಲಾವಣೆಯಾಗುತ್ತದೆ. ಜನ ನಿಮಗೆ ಆಹಾರವನ್ನು ನೀಡಬಹುದು ಅಥವಾ ಹೊರಟುಹೋಗಲು ಹೇಳಬಹುದು. ಅದು ಪ್ರಸ್ತುತವಲ್ಲ, ಆದರೆ ಭಿಕ್ಷುಕನಾಗಿರುವುದು ಸಣ್ಣ ವಿಷಯವಲ್ಲ.
ಸಂಪಾದಕರ ಟಿಪ್ಪಣಿ: ಸದ್ಗುರುಗಳ ಮತ್ತಷ್ಟು ಒಳನೋಟಗಳಿಗಾಗಿ "ಆಫ್ ಮಿಸ್ಟಿಕ್ಸ್ ಅಂಡ್ ಮಿಸ್ಟೇಕ್ಸ್" ಎಂಬ ಪುಸ್ತಕವನ್ನು ಓದಿ. ಪುಸ್ತಕದ ಮಾದರಿ ಕೈಪಿಡಿಯನ್ನು ಇಲ್ಲಿ ಡೌನ್ ಲೋಡ್ ಮಾಡಿ ಅಥವಾ ಇ-ಬುಕ್ ಖರೀದಿಸಲುIsha Downloads ಗೆ ಭೇಟಿ ನೀಡಿ.
A version of this article was originally published in Mathrubhumi.