ಚಿಕ್ಕ ವಯಸ್ಸಿನಲ್ಲಿ ಭಾರಿ ಸಂಪಾದನೆ – ಕೆಟ್ಟ ದಾರಿಗೆ ನಾಂದಿಯೇ ?
ಯುವಜನರು ಹೇಗೆ ಹೆಚ್ಚು ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ ಮತ್ತು ಅದು ಹೇಗೆ ಅವರ ಭ್ರಮನಿರಸನಕ್ಕೆ ಕಾರಣವಾಗುತ್ತಿದೆ ಎಂಬುದರ ಕುರಿತಾದ ಕೆಲವು ಪ್ರಶ್ನೆಗಳಿಗೆ ಸದ್ಗುರುಗಳು ಉತ್ತರಿಸುತ್ತಾರೆ.
ಪ್ರಶ್ನೆ: ಕೆಲವು ಜನರು ಚಿಕ್ಕ ವಯಸ್ಸಿನಲ್ಲಿಯೇ ಹಣ ಸಂಪಾದಿಸಲು ಪ್ರಾರಂಭಿಸುತ್ತಾರೆ. 20 ಅಥವಾ 21 ರ ವಯಸ್ಸಿನಲ್ಲಿಯೇ ದೊಡ್ಡ ಕಂಪನಿಗಳಲ್ಲಿ ಭಾರಿ ಮೊತ್ತದ ಹಣ ಸಂಪಾದಿಸುತ್ತಾರೆ. ಆದರೆ, ಸ್ವಲ್ಪ ಸಮಯದ ನಂತರ, ಅವರಲ್ಲಿ ತಮ್ಮ ಜೀವನದಲ್ಲಿ ಏನೋ ಕೊರತೆಯಿದೆ ಎಂಬ ಭಾವನೆ ಬರುತ್ತದೆ; ಒಂದು ಬಗೆಯ ಖಾಲಿತನ ಮನೆಮಾಡುತ್ತದೆ.
ಸದ್ಗುರು: ಸಾಮಾನ್ಯವಾಗಿ 60 ವರ್ಷದ ಒಬ್ಬರಿಗೆ ಏನು ಸಂಭವಿಸುತ್ತಿತ್ತೋ, ಅದು ನಿಮಗೆ 24 ವಯಸ್ಸಿನಲ್ಲಿಯೇ ಸಂಭವಿಸುತ್ತಿದೆ. ನೀವು ಸಂತೋಷ ಪಡುವ ವಿಷಯವೇ. ಬೆಗವೇ ನಿಮಗೆ ಮನವರಿಕೆಯಾಗುತ್ತಿದೆ. ಇಲ್ಲದಿದ್ದರೆ, ಇದನ್ನು ಅವರು ಸಂಪೂರ್ಣ ಜೀವನವನ್ನು ವ್ಯರ್ಥಮಾಡಿ, ನಂತರ ಅರಿತುಕೊಳ್ಳುತ್ತಿದ್ದರು..
ಹಿಂದಿನ ಪೀಳಿಗೆಯವರಿಗೆ ಇದು ಏಕೆ ತಿಳಿಯಲಿಲ್ಲ ಅಂದರೆ, ಅವರು ವಯಸ್ಸು 18 ಆಗುವಷ್ಟರಲ್ಲೆಲ್ಲ ಮದುವೆಯಾಗಿರುತ್ತಿದ್ದರು. 24 ಆಗುವಷ್ಟರಲ್ಲಿ, ಅವರಿಗೆ ನಾಲ್ಕು ಮಕ್ಕಳಿರುತ್ತಿದ್ದರು. ತಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡಿಸಿ, ಮದುವೆ ಮಾಡಿಸುವ ತನಕ ಜೀವನವೇ ಒಂದು ಹೋರಾಟವಾಗಿತ್ತು. ನಂತರ ಮೊಮ್ಮಕ್ಕಳು ಬರುತ್ತಿದ್ದರು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಅವರು ನಿಮ್ಮನ್ನು ಮಣ್ಣು ಮಾಡಿಬಿಡುತ್ತಿದ್ದರು.
ಇದೀಗ, ನಿಮ್ಮ ವಯಸ್ಸು 25, ಇನ್ನೂ ಮದುವೆಯಾಗಿಲ್ಲ. ನೀವು ಹಣವನ್ನು ಹೊಂದಿರುವಿರಿ, ಪ್ರಪ್ರಂಜವನ್ನು ಕಂಡಿದ್ದೀರಿ ಹಾಗೂ ಅದರಲ್ಲಿ ಯಾವುದೂ ಅರ್ಥವಿಲ್ಲ ಎಂಬುದನ್ನು ಅರಿತಿರುವಿರಿ. ಜನರು ಅದನ್ನು ಬೇಗಲೇ ಅರಿತುಕೊಳ್ಳುತ್ತಿರುವುದು ಒಳ್ಳೆಯದೇ.
ಪ್ರಶ್ನೆ: ಅಂದರೆ, ಆ ಸಮಯದಲ್ಲಿ ಅವರು ಏನು ಮಾಡಬೇಕು? ಯಾವ ದಾರಿಯನ್ನು ಆರಿಸಿಕೊಳ್ಳಬೇಕು?
ಸದ್ಗುರು: ಇಲ್ಲಿ ಎರಡು ಹಾದಿಯೆಂಬುದಿಲ್ಲ. ಇರುವುದು ಜೀವನವಷ್ಟೇ. ಇಲ್ಲಿ ಕೇವಲ ಜೀವನ ಮಾತ್ರ ಇದೆ. ಜೀವನ ಆಳವಿಲ್ಲದ್ದು ಎಂದು ನಿಮಗನಿಸಿದರೆ, ನೀವು ಜೀವನವನ್ನು ಮೇಲಿಂದ ಮೇಲೆ ಜೀವಿಸುತ್ತಿದ್ದೀರಷ್ಟೇ. ನೀವು ಜೀವನದ ಆಳಕ್ಕೆ ಸ್ವಲ್ಪ ಇಳಿದು ನೋಡಬೇಕು. “ಇಲ್ಲ, ನಾನು ಸಾಯಬೇಕು”, “ಇರಬೇಕೋ, ಬೇಡವೋ”. ಸಾವು ಕೂಡ ಜೀವನದ ಒಂದು ಅಂಗವೇ. ಜೀವನದ ಹೊರತು ಬೇರೇನನ್ನೂ ಮಾಡಲು ನಿಮಗಿಲ್ಲಿ ಸಾಧ್ಯವಿಲ್ಲ. ಆದ್ದರಂದ ನಿಮಗೆ ಉಳಿದಿರುವ ಆಯ್ಕೆ – ನೀವು ಕೇವಲ ಮೇಲಿಂದ ಮೇಲಷ್ಟೇ ಜೀವನ ನಡೆಸುತ್ತೀರೋ ಅಥವಾ ಜೀವನದ ಆಳವನ್ನು ಸ್ಪರ್ಶಿಸುತ್ತೀರೋ ಎಂಬುದಷ್ಟೇ. ಆಯ್ಕೆ ಮಾಡಿಕೊಳ್ಳಿ. ಬೇರೆಯ ಆಯ್ಕೆಯಾದರೂ ಎಲ್ಲಿದೆ?
ಪ್ರಶ್ನೆ: ಆದರೆ ಇಲ್ಲಿ ಮತ್ತೊಂದು ಪ್ರಶ್ನೆ ಏಳುತ್ತದೆ: ಸರಿಯಾದ ಗರುವನ್ನು ನಾವು ಹೇಗೆ ಆಯ್ಕೆ ಮಾಡಿಕೊಳ್ಳುವುದು? ಬಹಳಷ್ಟು ಜನರಿಗೆ ಯಾರನ್ನು ನಂಬಬೇಕು ಎಂಬುದೇ ತಿಳಿಯುವುದಿಲ್ಲ.
ಸದ್ಗುರು: ನೀವು ಯಾರನ್ನೂ ನಂಬಬೇಡಿ. ನೀವು ಈಶಾಗೆ ಬಂದರೆ, ನಿಮಗೆ ಸರಳವಾದದ್ದೇನನ್ನೋ ಕೊಡುವೆ. ಅದನ್ನು ಅಭ್ಯಾಸ ಮಾಡಿ. ಅದರಿಂದ ನಿಮ್ಮಲ್ಲಿ ಬದಲಾವಣೆಗಳು ಏನೂ ಆಗಲಿಲ್ಲ ಎಂದರೆ ಬಿಟ್ಟುಬಿಡಿ. ಅದು ನಿಮ್ಮ ಜೀವನದಲ್ಲಿ ಕೆಲಸ ಮಾಡಿತೆಂದರೆ, ಮುಂದಿನ ಹೆಜ್ಜೆಯನ್ನು ಇಡಿ. ಅಥವಾ ನಿಮ್ಮೊಳಗೆ ಏನೋ ಸ್ಫುರಿಸಿದರೆ, ನನಗೆ ಹೇಳಲು ಏನೂ ಉಳಿಯುವುದಿಲ್ಲ. ಹೇಗಿದ್ದರೂ ನೀವೇನು ಮಾಡಬೇಕೋ ಅದನ್ನು ಮಾಡುವಿರಿ. ಅಲ್ಲಿಯವರೆಗೂ ಒಮ್ಮೆಗೆ ಒಂದೊಂದೇ ಹೆಜ್ಜೆಯಿಡುತ್ತಾ ಸಾಗಿ. ಏನೋ ಕೆಲಸಮಾಡುತ್ತಿದೆ ಎಂದೆನಿಸಿದರೆ, ಅಲ್ಲಿಯೇ ಇದ್ದು ಮತ್ತಷ್ಟು ಹೆಜ್ಜೆಗಳನ್ನು ಇಡಿ.
ಪ್ರಶ್ನೆ: ಆದರೆ ನಮ್ಮ ಗುರಿಯನ್ನು ತಿಳಿದುಕೊಳ್ಳುವುದು ಹೇಗೆ?
ಸದ್ಗುರು: ನೀವು ಕೆಲವು ಮಿತಿಗಳೊಂದಿಗೆ ಬದುಕುತ್ತಿದ್ದೀರಿ ಎಂಬುದು ನಿಮ್ಮ ಅರಿವಿಗೆ ಬಂದಿದೆಯಲ್ಲವೆ? ಅವೆಲ್ಲವುಗಳಿಂದ ಮುಕ್ತರಾಗುವುದೇ ನಮ್ಮೆಲ್ಲರ ಏಕೈಕ ಗುರಿ. ಆ ದಾರಿಯಲ್ಲಿ ಸಾಗುವಾಗ, ಏನೆಲ್ಲ ಮಾಡುವಿರಿ ಎಂಬದು ಅವರವರ ಸಾಮರ್ಥ್ಯಕ್ಕ ಬಿಟ್ಟ ವಿಷಯ. ನೀವು ಕಸ ಗುಡಿಸುವವರಾಗಬಹುದು, ಮತ್ತಾವುದನ್ನೋ ನಿಭಾಯಿಸುತ್ತಿರಬಹುದು ಅಥವಾ ದೇಶವನ್ನೇ ನಡೆಸುತ್ತಿರಬಹುದು - ಅವುಗಳು ಆ ದಾರಿಯಲ್ಲಿ ಸಾಗುವಾಗ ಮಾಡುವ ಕೆಲಸಗಳಷ್ಟೇ. ಭಾರತದಲ್ಲಿ ವಾಸಿಸುವ ಹಿರಿಮೆಯೇ ಅದು. ಅದು ನಿರಕ್ಷರಸ್ಥನೇ ಆಗಿರಬಹುದು ಅಥವಾ ಪಂಡಿತರೇ ಆಗಿರಬಹುದು, ಎಲ್ಲರೂ ಒಂದೇ ಗುರಿಯನ್ನು ಹೊಂದಿರುತ್ತಾರೆ - ಮುಕ್ತಿ. ಒಬ್ಬ ಮನುಷ್ಯ ರಾಜನಾದಕೂಡಲೇ ಅವನು ಎಲ್ಲರಿಗಿಂತಲೂ ಮೇಲು ಎಂದಿಲ್ಲ. ಎಲ್ಲರೂ ಸಹ ಒಂದೇ ಗಮ್ಯಸ್ಥಾನದೆಡೆ ಸಾಗುತ್ತಿರುತ್ತೇವೆ. ಯಾರು ಬೇಗನೇ ಅ ಸ್ಥಳವನ್ನು ಮುಟ್ಟುತ್ತಾರೆ ಎಂಬುದೇ ಇಲ್ಲಿ ಪ್ರಶ್ನೆ.
ಸಂಪಾದಕರ ಟಿಪ್ಪಣಿ: ಸದ್ಗುರುಗಳು ಮಾರ್ಗದರ್ಶಿತ ಧ್ಯಾನವಾದ ‘ಈಶಾ ಕ್ರಿಯಾ’ವನ್ನು ಉಚಿತವಾಗಿ ಅರ್ಪಿಸುತ್ತಿದ್ದಾರೆ. ಇದು ಆರೋಗ್ಯ ಮತ್ತ ಯೋಗಕ್ಷೇಮವನ್ನು ತರುತ್ತದೆ. 12 ನಿಮಿಷದ ಈ ಧ್ಯಾನವನ್ನು ನಾವು ದಿನನಿತ್ಯ ಅಭ್ಯಸಿಸುವುದರಿಂದ ಜೀವನದಲ್ಲಿ ಪರಿವರ್ತನೆ ಕಂಡುಕೊಳ್ಳಬಹುದು.