ಈಶ ಸಂಸ್ಕೃತಿ: ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ
ಈಶ ಸಂಸ್ಕೃತಿಯ ಮಕ್ಕಳು ಅದ್ಭುತವಾದ ಶಿಸ್ತು ಹಾಗೂ ಆಂತರ್ಯದ ಶಕ್ತಿಯೊಂದಿಗೆ ಹೇಗೆ ಬೆಳೆಯುತ್ತಾರೆ ಎಂಬುದರ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ.
ದೇಹ ಮತ್ತು ಮನಸ್ಸುಗಳ ವಿಕಸನ
ಸದ್ಗುರು: ಸಂಸ್ಕೃತಿಯೆಂದರೆ ಜೀವನವನ್ನು ಹುರುಪಿನೊಂದಿಗೆ ಸಮಚಿತ್ತದಿಂದ ನಡೆಸಿ ಅನುಭವಿಸುವುದು. ಬಹಳ ಜನರಲ್ಲಿ ಇದೇ ದೊಡ್ಡ ಸಂಗತಿ. ಜೀವನದಲ್ಲಿ ಸಮಚಿತ್ತತೆ ಬಂದರೆ ಹುರುಪಿರುವುದಿಲ್ಲ, ಹುರುಪು ಬಂದರೆ ಮನಸ್ಸು ಅತಿತ್ತ ಚದುರಿಹೋಗುತ್ತದೆ. ಸಮಚಿತ್ತತೆ ಕಾಪಾಡಿಕೊಂಡೇ ಹುರುಪು ಉತ್ಸಾಹದಿಂದ ಕೂಡಿದ ಜೀವನ ನಡೆಸುವಂತಾದರೆ ಅಲ್ಲಿ ಹೆದರಿಕೆಗೆ ಆಸ್ಪದವಿರುವುದಿಲ್ಲ. ಬದುಕಿನಲ್ಲಿ ಎಂತಹುದೇ ಸಂದರ್ಭ ಸನ್ನಿವೇಶ ಎದುರಾದರೂ ಬದುಕು ಯಾವಾಗಲೂ ಬಹಳ ಸುಂದರವಾಗಿಯೇ ಇರುತ್ತದೆ. ಒಮ್ಮೆ ನಿಮ್ಮಲ್ಲಿ ಸಮಚಿತ್ತತೆ ಮತ್ತು ಉತ್ಸಾಹ ಸೇರಿಕೊಂಡರೆ ನಿಮ್ಮ ಹಣೆಬರಹವನ್ನು ನಿಮ್ಮ ಸುತ್ತಲೂ ನಡೆಯುತ್ತಿರುವ ಸನ್ನಿವೇಶವು ನಿರ್ಧರಿಸುವುದಿಲ್ಲ, ಬದಲಾಗಿ, ನೀವೇ ನಿರ್ಣಯಿಸುತ್ತೀರಿ.
ಸಂಸ್ಕೃತಿಯೆಂದರೆ, ಮಾನವನು ತನ್ನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಅದರ ಪರಮ ಸಾಧ್ಯತೆಗೆ ಕೊಂಡೊಯ್ಯುವುದು. ಡಾಕ್ಟರ್, ಇಂಜಿನಿಯರ್ ಅಥವ ಮತ್ತಾವುದಾದರೂ ವೃತ್ತಿಪರ ಪರಿಣತಿ ಪಡೆಯುವುದಲ್ಲ. ತಾಯಿತಂದೆಯರಿಗೆ ಯಾವಾಗಲೂ ಇರುವ ಚಿಂತೆಯೆಂದರೆ ತಮ್ಮ ಮಗು ದೊಡ್ಡವನಾಗಿ ಜೀವನ ನಡೆಸಲು ಯಾವ ವೃತ್ತಿ ಹಿಡಿಯಬೇಕೆನ್ನುವುದು ಮಾತ್ರವೇ ಆಗಿರುತ್ತದೆ. ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಪೂರ್ಣವಿಕಾಸ ಪಡೆದರೆ ಅವರ ಜೀವನೋಪಾಯಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಒಂದು ಎರೆಹುಳುವೂ ತನ್ನ ಹೊಟ್ಟೆಪಾಡು ನೋಡಿಕೊಳ್ಳುವ ಶಕ್ತಿ ಪಡೆದಿದೆ ಎಂದಮೇಲೆ ಜೀವವಿಕಾಸದ ಪರಮೋತ್ಕೃಷ್ಟ ಜೀವಿ ಎನಿಸಿದ ಮಾನವ ತನ್ನ ಬದುಕಿಗೆ ಚಿಂತಿಸುವ ಅಗತ್ಯವೇನು? ಅವನ ’ಬೆಳವಣಿಗೆ’ ಪೂರ್ಣ ಸಾಮರ್ಥ್ಯವನ್ನು ಪಡೆದಿರಬೇಕಷ್ಟೆ.
ಈಶ ಸಂಸ್ಕೃತಿಯಲ್ಲಿ ಶಾಸ್ತ್ರೀಯ ಕಲೆಗಳ - ಸಂಗೀತ, ನೃತ್ಯ, ಕಳರಿಪಯಟ್ಟು (ಒಂದು ರೀತಿಯ ಯುದ್ಧಕಲೆ), ಯೋಗ ಮತ್ತು ಸಂಸ್ಕೃತ - ಇವುಗಳ ಮೂಲಕ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಮಕ್ಕಳಲ್ಲಿ ತರಲಾಗುವುದು. ಜನರು ತಮ್ಮ ಮನರಂಜನೆಗಾಗಿ ಮನಸ್ಸಿಗೆ ತೋಚಿದಂತೆ ರಚಿಸುವ ಅಥವಾ ಹುಚ್ಚೆದ್ದ ’ಅಂತಃಸ್ಫೂರ್ತಿ’ಯ ಆಧುನಿಕ ಕಲೆಯಂತೆ ಇದಲ್ಲ. ಈಶ ಸಂಸ್ಕೃತಿಯಲ್ಲಿ ಈ ಕಲೆಗಳನ್ನು ಪೂರ್ಣ ಪ್ರಜ್ಞೆಯಿಂದ ವಿಕಾಸಗೊಳಿಸಲಾಗುವುದು. ಈ ಕಲೆಗಳ ಉಗಮ ವಿಶಿಷ್ಟವಾದುದು. ಮಾನವ ಶರೀರವ್ಯವಸ್ಥೆಯ ಆಳವಾದ ಅರಿವಿನಿಂದ, ಮಾನವನ ವಿಕಾಸವನ್ನು ಸಂಪೂರ್ಣ ಸಾಮರ್ಥ್ಯಕ್ಕೆ ಕೊಂಡೊಯ್ಯುವ ವಿಜ್ಞಾನವನ್ನು ಆಧರಿಸಿ ರೂಪುಗೊಂಡ ಈ ಕಲೆಗಳು ಶಾಸ್ತ್ರೀಯ ಮಟ್ಟಕ್ಕೆ ಏರಿರುವುವು. ಈ ಕಲೆಗಳ ಜೊತೆಗೆ, ಜಗತ್ತಿನೆಲ್ಲೆಡೆ ಬಳಸಬಹುದಾದ ಇಂಗ್ಲಿಷ್ ಭಾಷೆಯನ್ನು ಸಹ ಮಕ್ಕಳಿಗೆ ಕಲಿಸಲಾಗುವುದು.
ವಿದ್ಯಾರಂಭಕ್ಕೆ ಸೂಕ್ತ ಸಮಯ
ಆರು ವರ್ಷದಿಂದ ಎಂಟು ವರ್ಷದ ಮಕ್ಕಳು ಈಶ ಸಂಸ್ಕೃತಿಯಲ್ಲಿ ಕಲಿಯಲು ಬರುವರು. ಇದು ಕಲಿಕೆ ಆರಂಭಿಸಲು ಬಹಳ ಸೂಕ್ತ ವಯಸ್ಸು. ಐದು ವರ್ಷದವರೆಗಿನ ಮಕ್ಕಳನ್ನು ತಾಯಿತಂದೆಯರಿಂದ ಬೇರ್ಪಡಿಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಹತ್ತು ಹನ್ನೆರಡು ವರ್ಷಗಳಾದ ಮೇಲೆ ಮಕ್ಕಳು ಬಂದರೆ ಕಲಿಕೆಯ ವಯಸ್ಸು ಮೀರಿರುತ್ತದೆ. ಆರು ವರ್ಷದಿಂದ ಎಂಟು ವರ್ಷಗಳವರೆಗೆ ಗ್ರಹಿಕೆಯು ಅತ್ಯುಚ್ಚ ಮಟ್ಟದಲ್ಲಿರುವುದು. ಜೊತೆಗೆ ತಾಯಿಯ ಮಡಿಲು ಬಿಟ್ಟುಬರಲು ಮಕ್ಕಳು ತಯಾರಿರುವರು. ತಾಯಿಯ ಮಡಿಲು ಅವರ ಕುತೂಹಲಕ್ಕೆ, ಚಟುವಟಿಕೆಗೆ ಚಿಕ್ಕದೆನಿಸುವುದು. ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಮನೆತನದ ಗುರುತು, ತಾಯಿತಂದೆಯರೊಂದಿಗೆ ಗುರುತಿಸಿಕೊಳ್ಳುವುದು, ಅಕ್ಕತಂಗಿಯರು ಅಣ್ಣತಮ್ಮಂದಿರು, ಇವೆಲ್ಲವೂ ಪರಿಮಿತಿ ಹಾಕುವ ಅಂಶಗಳು. ಪ್ರಾಚೀನ ಕಾಲದಿಂದಲೂ ಭಾರತದೇಶವು ಮಹಾಭಾರತದ ಧೃತರಾಷ್ಟ್ರ ಮಹಾರಾಜನಂತೆ ಮಕ್ಕಳ ಬಗೆಗೆ ಅತಿವ್ಯಾಮೋಹದ ಅಶ್ರೇಯಸ್ಸಿನ ಮನೋಭಾವದಿಂದ ಬಳಲುತ್ತಿದೆ. ಮಕ್ಕಳು ತಾಯಿತಂದೆಯರಿಗೆ ಗೌರವ, ಪ್ರೀತಿ ಬೆಳೆಸಿಕೊಳ್ಳಬೇಕು ನಿಜ. ಆದರೆ ಅವರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವುದು ಇರಬಾರದು. ಇದು ಮಕ್ಕಳ ಪೂರ್ಣ ಬೆಳವಣಿಗೆಗೆ ಅಡ್ಡಿಯಾಗುವುದು. ಈ ಸಂಗತಿಯು ಈಶ ಸಂಸ್ಕೃತಿಯಲ್ಲಿ ಕಲಿಕೆಯ ಭಾಗವಾಗಿದೆ. ಮತ್ತು ಇದೇನೂ ಹೊಸದಾದ ವಿಧಾನವಲ್ಲ.
ಭಾರತದಲ್ಲಿ ’ವರ್ಣಾಶ್ರಮ ಧರ್ಮ’ವನ್ನು ಪಾಲಿಸುತ್ತಿದ್ದಾಗ, ಹನ್ನೆರಡು ವರ್ಷಗಳ ತನಕ ’ಬಾಲ್ಯಾವಸ್ಥೆ’; ಹನ್ನೆರಡರಿಂದ ಇಪ್ಪತ್ನಾಲ್ಕು ವರ್ಷದವರೆಗೆ ’ಬ್ರಹ್ಮಚರ್ಯ’ (ಶಿಷ್ಯತ್ವ) ಪಾಲಿಸುತ್ತಿದ್ದರು. ಬ್ರಹ್ಮಚರ್ಯದ ಈ ಹನ್ನೆರಡು ವರ್ಷಗಳಲ್ಲಿ ಮಕ್ಕಳು ’ಗುರುಕುಲ’ದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ವಿದ್ಯಾಭ್ಯಾಸ ಮುಗಿಯುವವರೆಗೆ ತಾಯಿತಂದೆಯರನ್ನು ನೋಡುತ್ತಿರಲಿಲ್ಲ. ಈ ಸಂದರ್ಭದಲ್ಲಿ, ಗುರು-ಶಿಷ್ಯರ ಸಂಬಂಧ ಎನ್ನುವ ತಪ್ಪು ತಿಳುವಳಿಕೆ ಬಹಳ ಜನರಲ್ಲಿ ಇನ್ನೂ ಇದೆ. ಗುರುವು ಶಿಷ್ಯರೊಂದಿಗೆ ಯಾವುದೇ ರೀತಿಯ ಸಂಬಂಧ ಬೆಳೆಸಿಕೊಳ್ಳುವುದಿಲ್ಲ. ಗುರುವು ನಿಮ್ಮ ಜೀವನದಲ್ಲಿ ಸೂರ್ಯನಂತೆ ಎಂದು ನೀವು ಹೋಲಿಸಬಹುದು. ಸೂರ್ಯನ ಬೆಳಕಿನಲ್ಲಿ ನೀವು ಎಲ್ಲವನ್ನು ಸ್ಪಷ್ಟವಾಗಿ ನೋಡುವಂತೆ ಗುರುವು ನಿಮಗೆ ಜ್ಞಾನದ ಬೆಳಕು ಕೊಡುವನು ಅಷ್ಟೇ.
ಫಲಕಾರಿಯಾದ ಕಾರ್ಯಕ್ರಮಗಳು
ಹೊರನೋಟಕ್ಕೆ ಈಶ ಸಂಸ್ಕೃತಿಯು ಹಿಂದಿನ ’ಗುರುಕುಲ’ದ ವಿದ್ಯಾಭ್ಯಾಸದ ಪದ್ಧತಿಯಂತೆ ಕಾಣಬಹುದು. ಆದರೆ ನಮ್ಮ ಪ್ರಯಾಸ ಹಿಂದಿನದನ್ನು ಅನುಕರಿಸುವುದಲ್ಲ. ಜನರು ಪರಂಪರೆಯನ್ನು ಕಣ್ಣುಮುಚ್ಚಿ ಅನುಸರಿಸುವುದನ್ನು ನಾನು ಬಯಸುವುದಿಲ್ಲ. ಯಾವುದೇ ಪರಂಪರೆಯಲ್ಲಿ ಗುರುತಿಸಿಕೊಳ್ಳುವುದೆಂದರೆ ನಮಗೆ ನಾವೇ ಪರಿಮಿತಿ ಹಾಕಿಕೊಂಡಂತೆ. ಈಶ ಸಂಸ್ಕೃತಿಯಲ್ಲಿ ಮಾನವನ ದೈಹಿಕ ಮತ್ತು ಮಾನಸಿಕ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಯಾವ ಚಟುವಟಿಕೆ ಮಕ್ಕಳ ಪೂರ್ಣ ವಿಕಾಸಕ್ಕೆ ಸಹಕಾರಿ ಎಂದು ಗುರುತಿಸಿಕೊಂಡು ಅದರಂತೆ ಕಾರ್ಯಕ್ರಮಗಳನ್ನು ಯೋಜಿಸಿ ಮಕ್ಕಳನ್ನು ಬೆಳೆಸುವ ರೀತಿಯನ್ನು ಅನುಸರಿಸುತ್ತೇವೆ. ಹಿಂದಿನ ಕಾಲದಲ್ಲೂ ಸಹ ಹೀಗೆಯೇ ಇತ್ತು. ಮಾನವ ಶಿಶುವಿನ ಸಂಪೂರ್ಣ ವಿಕಾಸವನ್ನು ಧ್ಯೇಯವಾಗಿ ಇಟ್ಟುಕೊಂಡೇ ವಿದ್ಯಾಭ್ಯಾಸ ನೀಡುತ್ತಿದ್ದರು.
ಮಕ್ಕಳ ಮೇಲೆ ತಾಯಿತಂದೆಯರ ಪ್ರಭಾವ ಇಲ್ಲದೆಹೋದರೆ ಪ್ರತಿಯೊಂದು ಮಗುವೂ ಈ ರೀತಿಯ ವಿದ್ಯಾಭ್ಯಾಸವನ್ನು ಪ್ರೀತಿಯಿಂದ ಸ್ವೀಕರಿಸುವನು. ಇದು ಮಕ್ಕಳನ್ನು ಹೊಂದಿಸಿಕೊಳ್ಳುವ ಪ್ರಶ್ನೆಯಲ್ಲ - ಮಕ್ಕಳು ಯಾವುದಕ್ಕೂ ಹೊಂದಿಕೊಳ್ಳುವ ಅವಶ್ಯಕತೆ ಇಲ್ಲ. ಪ್ರತಿಯೊಂದು ಮಗುವೂ ತನ್ನ ಅಂತರಿಕ ಸ್ವಭಾವದ ಅನುಸಾರ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ವಿಕಾಸ ಪಡೆಯಬೇಕು. ಇದರ ಅರ್ಥ ಮನಸ್ಸಿಗೆ ತೋಚಿದ ಹುಚ್ಚಾಟದ ಕೆಲಸದಲ್ಲಿ ತೊಡಗಿಕೊಳ್ಳುವುದಲ್ಲ. ಮನಸ್ಸು ಹೇಳಿದಂತೆ ಮಾಡುವುದೇ ಸ್ವಾಭಾವಿಕ ಬೆಳವಣಿಗೆ ಎನ್ನುವುದು ಆಧುನಿಕ ಕಲ್ಪನೆ. ಇವತ್ತು, ಜನರು ವ್ಯಕ್ತಿಗತ ನಿರ್ಬಂಧಗಳನ್ನು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಮನಾಗಿ ಕಾಣುತ್ತಾರೆ. ಈಶ ಸಂಸ್ಕೃತಿಯು ಈ ಕಲ್ಪನೆಗೆ ವಿರುದ್ಧವಾದುದು. ಇಲ್ಲಿನ ವಿದ್ಯಾಭ್ಯಾಸದಲ್ಲಿ ಎಲ್ಲ ನಿರ್ಬಂಧಗಳನ್ನು, ಸುಕ್ಕುಗಳನ್ನು ನಿವಾರಿಸಲಾಗುವುದು. ಸ್ವಲ್ಪ ಸಮಯದ ನಂತರ ಮಗುವು ತಾನಾಗಿ ಪ್ರಜ್ಞಾಪೂರ್ವಕವಾಗಿ ಮಾಡುವ ಕಾರ್ಯದಲ್ಲಿನ ಸುಂದರತೆಯನ್ನು, ಅದರಲ್ಲಿ ಅಡಗಿರುವ ನಿಜವಾದ ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಸಮರ್ಥನಿರುವನು. ಜೊತೆಗೇ ಮನಸ್ಸಿಗೆ ತೋಚಿದ ಕೆಲಸಕ್ಕಿಂತ ಅಗತ್ಯವಾದ ಕೆಲಸವನ್ನು ಮಾಡುವುದರಲ್ಲಿ ಹಿತವಿರುವುದನ್ನು ಕಂಡು ಸ್ವಪ್ರೇರಣೆಯಿಂದ ಆ ಕೆಲಸವನ್ನೇ ಮಾಡುವನು.
ವಿಶೇಷವಾಗಿ ಭಾರತದಲ್ಲಿ ಆರ್ಥಿಕ ವ್ಯವಸ್ಥೆಯು ಒಮ್ಮೆ ಅಭಿವೃದ್ಧಿ ಗಳಿಸಿತೆಂದರೆ - ಈಗಾಗಲೇ ಸಾಮಾನ್ಯ ಪ್ರಜೆಗಳ ಅರ್ಥಿಕ ಸ್ಥಿತಿ ಉತ್ತಮವಾಗುತ್ತಿದೆ - ಶಾಸ್ತ್ರೀಯ ಕಲೆಗಳನ್ನು ಕಲಿಸುವವರಿಗೆ ಮತ್ತು ಕಲಾವಿದರಿಗೆ ಬೇಡಿಕೆ ಅತಿಶಯವಾಗಿ ಹೆಚ್ಚುತ್ತದೆ. ಈಗಾಗಲೇ ಈ ಬೇಡಿಕೆ ಇದೆ. ಇಂದು, ಶಾಸ್ತ್ರೀಯ ಸಂಗೀತವನ್ನು ಚೆನ್ನಾಗಿ ಹೇಳಿಕೊಡುವವರು ಒಬ್ಬ ಡಾಕ್ಟರಿಗಿಂತಲೂ ಹೆಚ್ಚು ಸಂಪಾದನೆ ಮಾಡಲು ಸಾಧ್ಯ. ಜೀವನ ನಡೆಸುವ ಬಗ್ಗೆ ಚಿಂತಿಸುವ ಅಗತ್ಯ ಈಗಿಲ್ಲ. ಕೆಲವು ಮಕ್ಕಳಂತೂ ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ, ಅಷ್ಟೇಕೆ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ಮತ್ತು ನೃತ್ಯ ಪ್ರದರ್ಶನ ನೀಡುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಮಿಕ್ಕವರು ಇಚ್ಛಿಸಿದಲ್ಲಿ ಸಂಗೀತ, ನೃತ್ಯ, ಯೋಗ, ಕಳರಿ, ಸಂಸ್ಕೃತವನ್ನು ಹೇಳಿಕೊಡುವ ಕ್ಷಮತೆಯುಳ್ಳವರು. ಯೋಗ ಗುರುಗಳಿಗೆ ಈಗಂತೂ ಬಹಳ ಬೇಡಿಕೆಯಿದೆ. ಯೋಗ ವಿಜ್ಞಾನವನ್ನು ಇಷ್ಟು ಆಳವಾಗಿ ಕಲಿತಿರುವವರ ಇಡೀ ವಿಶ್ವದಲ್ಲೇ ಬೇರೆಲ್ಲೂ ಸಿಗಲಾರರು. ಏಕೆಂದರೆ, ಆರು ವರ್ಷದ ವಯಸ್ಸಿನಿಂದಲೇ ಸಂಸ್ಕೃತಿಯ ಮಕ್ಕಳು ಯೋಗವನ್ನು ಕೇವಲ ಕಲಿಯುವುದಷ್ಟೇ ಅಲ್ಲ, ಯೋಗವನ್ನು ಸುತ್ತಲಿನ ಎಲ್ಲದರಿಂದಲೂ ಹೀರಿಕೊಂಡು ತಮ್ಮದಾಗಿಸಿಕೊಂಡವರು.
ಅಗಾಧಪ್ರಜ್ಞೆಗೆ ಸಮರ್ಪಣೆ
ಸಂಸ್ಕೃತಿಯಲ್ಲಿ ಹೇಳಿಕೊಡುವ ಯೋಗವು ಶಾಸ್ತ್ರೀಯವಾದುದು, ಕಾರ್ಯಾಗಾರದ ರೂಪದ್ದಲ್ಲ. ಇಲ್ಲಿ ಕಲಿತವರು ಯೋಗವನ್ನು ಹೇಳಿಕೊಡುವ ರೀತಿಯೂ ಶಕ್ತಿಪೂರ್ಣವಾದುದು. ವ್ಯಕ್ತಿಯು ಯೋಗವನ್ನು ಎಲ್ಲ ಸ್ತರದಲ್ಲಿ ಹೀರಿಕೊಂಡಿದ್ದರೆ ಮಾತ್ರ ಈ ಪರಿಯ ಯೋಗ ಕಲಿಸುವಿಕೆ ಸಾಧ್ಯವಾಗುವುದು. ಈತರಹದ ಕಲಿಕೆ ಯೋಗಕ್ಕಷ್ಟೇ ಅಲ್ಲ, ಮಿಕ್ಕ ಕಲೆಗಳಿಗೂ ಅನ್ವಯಿಸುತ್ತದೆ. ಯಾವುದೇ ಶಾಸ್ತ್ರೀಯ ಕಲೆಯಾಗಲೀ ಅಡ್ಡಕಸುಬು ಅಥವಾ ಹವ್ಯಾಸದಂತೆ ಮಿಕ್ಕವೇಳೆ ಅಭ್ಯಸಿಸುವುದಲ್ಲ. ನೀವು ಅದರಲ್ಲೇ ಮುಳುಗಿದ್ದು, ಆ ಕಲೆ ನಿಮ್ಮ ಜೀವನದ ಭಾಗವಾಗಬೇಕು.
ಈ ಕಾರಣಕ್ಕಾಗಿಯೇ, ಸಂಸ್ಕೃತಿಯ ಮಕ್ಕಳಿಗೆ ಕಲಾಪೂರ್ಣ ವಾತಾವರಣವನ್ನು ಕೊಡುವ ಪ್ರಯತ್ನ ನಮ್ಮದು. ಮಕ್ಕಳು ಎಲ್ಲವೇಳೆ ಶಾಸ್ತ್ರೀಯ ಕಲೆಗಳನ್ನು ನೋಡುತ್ತ, ಕೇಳುತ್ತ ಕಲಿಯುವರು, ಗಾಢಪ್ರಜ್ಞೆ ಬೆಳೆಸಿಕೊಳ್ಳುವರು. ಆಗಮಾತ್ರ ಶ್ರೇಷ್ಠಮಟ್ಟದ ಕಲಿಕೆ ಸಾಧ್ಯ. ಶಾಸ್ತ್ರೀಯ ಕಲೆಯು ಕಲಿಯುವವರಲ್ಲಿ ಅರ್ಪಣಾ ಮನೋಭಾವ, ಶ್ರದ್ಧೆ ಮತ್ತು ಪೂರ್ಣ ತೊಡಗುವಿಕೆಯನ್ನು ಅಪೇಕ್ಷಿಸುತ್ತದೆ. ಈಶ ಸಂಸ್ಕೃತಿಯ ಮೂಲಕ ಹೊರಹೋಗುವ ಕಲೆಗಳು ಜೀವನದ ಗಾಢತೆಯ ಬಗೆಗಿನ ಹೇಳಿಕೆಗಳೇ ಆಗಿವೆ.
ಈಗಿನ ದಿನಗಳಲ್ಲಿ, ’ಆಧುನಿಕತೆ’ಯ ಪರಿಕಲ್ಪನೆ ಜೀವನವನ್ನು ಗಾಢಪ್ರಜ್ಞೆಯಿಂದ ಪ್ರಾಪಂಚಿಕತೆಗೆ ಇಳಿಸುವ ಹಾದಿಯಾಗಿದೆ. ಈಶ ಸಂಸ್ಕೃತಿಯ ಮುಖ್ಯೋದ್ದೇಶ ಈ ಪತನದ ಹಾದಿಯನ್ನು ಬದಲಿಸಿ ಮತ್ತೆ ಜೀವನದಲ್ಲಿ ಗಾಢತೆ ತರುವುದು. ಈ ಮಟ್ಟದ ಪ್ರಜ್ಞಾಪೂರ್ವಕ ಶಿಸ್ತು - ಸಂಯಮ ಪಡೆದುಬೆಳೆದ ಯಾರೇ ಆಗಲಿ ಬಹಳ ಮುಂದುವರಿಯುವರು. ಒಮ್ಮೆ ಮರವು ಸಂಪೂರ್ಣ ಬೆಳವಣಿಗೆ ಪಡೆದರೆ ಅದರಲ್ಲಿ ಹೂಹಣ್ಣು ತಾವಾಗಿಯೇ ಬಿಡುತ್ತವೆ, ಬಲವಂತದಲ್ಲಿ ಹೊರತರಬೇಕಿಲ್ಲ. ಈಶ ಸಂಸ್ಕೃತಿಯ ಮಕ್ಕಳು ವಿಶ್ವದಲ್ಲಿ ಬದಲಾವಣೆ ತರುವುದರಲ್ಲಿ ಪೂರ್ಣ ಭರವಸೆಯಿದೆ.
ಸಂಪಾದಕರ ಟಿಪ್ಪಣಿ: ಈ ಲೇಖನದ ಮೂಲ ಆವೃತ್ತಿ ಸೆಪ್ಟೆಂಬರ್ 2015ರ ಈಶ ಫಾರೆಸ್ಟ್ ಫ್ಲವರ್ನಲ್ಲಿ ಪ್ರಕಟವಾಗಿರುತ್ತದೆ. PDF ಕಾಪಿಯನ್ನು ಡೌನ್ಲೋಡ್ ಮಾಡಿಕೊಳ್ಳಿ Download as PDF ಅಥವಾ ಪ್ರಿನ್ಟೆಡ್ ಕಾಪಿಗಾಗಿ ಸಬ್ಸ್ಕ್ರೈಬ್ ಮಾಡಿ subscribe.