... ಸೂರ್ಯನು ತನ್ನ ಪಯಣದಲ್ಲಿ ಕಾಣುವ ಒಂದು ಅತ್ಯದ್ಭುತ ದೇಶವನ್ನಾಗಿ ಭಾರತವನ್ನು ರೂಪಿಸಲು, ಮಾನವರಾಗಲಿ ಅಥವಾ ಪ್ರಕೃತಿಯಾಗಲಿ, ಏನನ್ನೂ ಬಾಕಿ ಉಳಿಸಿಲ್ಲ..  - .. - ಮಾರ್ಕ್ ಟ್ವೈನ್

ಸದ್ಗುರು: ಭಾರತೀಯ ಸಂಸ್ಕೃತಿಯು ಪ್ರಪಂಚದ ಅತ್ಯಂತ ಸಂಕೀರ್ಣ ಮತ್ತು ವರ್ಣಮಯ ಸಂಸ್ಕೃತಿಯಾಗಿದೆ. ಜನರ ಸ್ವರೂಪ, ಅವರ ಭಾಷೆ ಮತ್ತು ಆಹಾರ, ಅವರ ಉಡುಗೆ ತೊಡುಗೆ, ಸಂಗೀತ ಮತ್ತು ನೃತ್ಯ, ಎಲ್ಲವೂ ದೇಶದ ಪ್ರತಿ 50 ಅಥವಾ 100 ಕಿಲೋಮೀಟರ್‌ಗಳಲ್ಲಿ ಬೇರೆ ಬೇರೆಯಾಗಿರುತ್ತದೆ ಎಂಬುದನ್ನು ನೀವು ಕಾಣಬಹುದು. ಈ ಸಂಸ್ಕೃತಿಯ ಸಂಕೀರ್ಣತೆಯನ್ನು ನೀವು ನಿಜವಾಗಿಯೂ ನೋಡಬಹುದಾದ ಒಂದು ಸ್ಥಳವೆಂದರೆ ಕುಂಭಮೇಳ.

2001ರ ಮಹಾ ಕುಂಭ ಮೇಳದಲ್ಲಿ, 6 ಕೋಟಿ ಜನರು ಅಲಹಾಬಾದ್‌ನಲ್ಲಿ ಸೇರಿದ್ದರು. ಅಂತಹ ಸ್ಥಳಗಳಿಗೆ ಹೋಗುವ ಆಸಕ್ತಿ ನನಗೆ ಎಂದೂ ಇರಲಿಲ್ಲ, ಆದರೆ ಎಲ್ಲೆಲ್ಲೂ ಅದರ ಬಗ್ಗೆ ಚರ್ಚೆ ನಡೆಯುತ್ತಿದ್ದ ಕಾರಣ, ಬೃಹತ್ ಪ್ರಮಾಣದ ಈ ಭವ್ಯ ಕಾರ್ಯಕ್ರಮವನ್ನು ನೋಡಲು ನಾನು ಕೊಯಂಬತ್ತೂರಿನಿಂದ ಅಲ್ಲಿಗೆ ಡ್ರೈವ್ ಮಾಡಿಕೊಂಡು ಹೋಗಲು ನಿರ್ಧರಿಸಿದೆ.

ಇದು ಪ್ರಪಂಚದಲ್ಲಿಯೇ ಅತ್ಯಂತ ಅದ್ಭುತವಾದ ದೃಶ್ಯಗಳಲ್ಲಿ ಒಂದಾಗಿದೆ. ನಾನು ಅಲ್ಲಿಗೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಹೋದೆ. ದೇಶದ ವಿವಿಧ ಭಾಗಗಳಿಂದ ಬಂದ ಎಲ್ಲಾ ರೀತಿಯ ಜನರು ಅಲ್ಲಿ ಕುಳಿತಿದ್ದರು. ಅವರಿಗೆ ಮಲಗಲು ಸ್ಥಳವಿರಲಿಲ್ಲ, ಆದ್ದರಿಂದ ಅವರು ಅಲ್ಲಲ್ಲಿ ಚಿಕ್ಕ ಚಿಕ್ಕದಾಗಿ ಬೆಂಕಿ ಹಚ್ಚಿ, ತಮ್ಮದೇ ಹಾಡು ಹಾಡಿಕೊಂಡು, ನೃತ್ಯ ಮಾಡಿಕೊಂಡು ಸಮಯ ಕಳೆಯುತ್ತಿದ್ದರು. ಮಾನವತೆಯ ಅತ್ಯಂತ ದುಷ್ಟರು ಮತ್ತು ಅತಿ ಶ್ರೇಷ್ಠರು ಅಲ್ಲಿ ನೆರೆದಿದ್ದರು - ತನಗೆ ಸಿಗಬಹುದಾದ ಅವಕಾಶಕ್ಕೆ ಹೊಂಚುಹಾಕುತ್ತಿದ್ದ ವಂಚಕನಿರಬಹುದು ಅಥವಾ ಮಹಾನ್ ಸಾಧನೆಯ ಅನೇಕ ಯೋಗಿಗಳಿರಬಹುದು. ಸಾವಿರಾರು ವರ್ಷಗಳಿಂದ ಜನರು ಈ ರೀತಿ ಒಂದೆಡೆ ಸೇರುತ್ತಿದ್ದಾರೆ. ಇದು ಯಾರೂ ನಾಶಮಾಡಲು ಸಾಧ್ಯವಿಲ್ಲದ ಸಂಪ್ರದಾಯ ಮತ್ತು ಸಂಸ್ಕೃತಿ. ಇದಕ್ಕೆ ನಿರ್ದಿಷ್ಟ ಸಾಮಾಜಿಕ ಪ್ರಸ್ತುತತೆ ಇದೆ. ಅಲ್ಲದೆ ಇದು ಒಂದು ನಿರ್ದಿಷ್ಟ ಆಧ್ಯಾತ್ಮಿಕ ಶಕ್ತಿಯನ್ನು ಸಹ ಹೊಂದಿದೆ.

ಭೂಮಿ ಮತ್ತು ಚಂದ್ರ ಆವರ್ತನದಲ್ಲಿ ಭ್ರಮಣ ಮಾಡುತ್ತವೆ.ಪ್ರತಿಯೊಬ್ಬರೂ ಈ ಆವರ್ತನಗಳಿಗೆ ಒಳಪಟ್ಟಿದ್ದಾರೆ, ಆದರೆ ಈ ಆವರ್ತನಗಳು ಬಂಧನದ ಆವರ್ತನಗಳಾಗಿಯೇ ಉಳಿಯಬಹುದು, ಅಥವಾ ಅವು ಒಂದು ಜೀವನ ಚಕ್ರದಿಂದ ಮತ್ತೊಂದಕ್ಕೆ ಉನ್ನತೀಕರಣದ ಸಾಧನವಾಗಬಹುದು. ಮುಕ್ತಿಗಾಗಿ ಹಂಬಲಿಸುವವರು ತಾವು ಸೃಷ್ಟಿಸಿದ ಚಕ್ರಗಳಿಂದ ಹೇಗೆ ಮುಕ್ತರಾಗಬೇಕೆಂದು ನಿರಂತರವಾಗಿ ಹುಡುಕುತ್ತಿರುತ್ತಾರೆ. ವಿವಿಧ ರೀತಿಯ ಚಕ್ರಗಳಿವೆ, ಅವುಗಳಲ್ಲಿ ಅತಿ ದೊಡ್ಡದು 144 ವರ್ಷಗಳದ್ದು; ಪ್ರತಿ 144 ವರ್ಷಗಳಿಗೊಮ್ಮೆ, ಸೌರವ್ಯೂಹದಲ್ಲಿ ವಿಶಿಷ್ಟ ಘಟನೆಗಳು ನಡೆಯುತ್ತವೆ, ಇದಕ್ಕಾಗಿ ನಾವು ಮಹಾ ಕುಂಭ ಮೇಳವನ್ನು ಹೊಂದಿದ್ದೇವೆ, ಇದಕ್ಕೆ ಮುಂಚೆ ಇದು 2001 ರಲ್ಲಿ ನಡೆದಿತ್ತು.

ಕುಂಭ ಮೇಳಗಳು ದೇಶದ ನಿರ್ದಿಷ್ಟ ಸ್ಥಳಗಳಲ್ಲಿ ನಡೆಯುತ್ತವೆ, ಆ ಸ್ಥಳದ ಸುತ್ತಲೂ ಒಂದು ಸಂಪೂರ್ಣ ಶಕ್ತಿ ವ್ಯವಸ್ಥೆ ರಚಿಸಲ್ಪಡುತ್ತದೆ. ಭೂಮಿಯು ತಿರುಗುತ್ತಿರುವುದರಿಂದ, ಅದು ಕೇಂದ್ರದಿಂದ ಹೊರಹೊಮ್ಮುವ ಒಂದು ಬಲವನ್ನು ಸೃಷ್ಟಿಸುತ್ತದೆ. 0 ರಿಂದ 33 ಡಿಗ್ರಿ ಅಕ್ಷಾಂಶದವರೆಗೆ, ಈ ಬಲವು ನಿಮ್ಮ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಲಂಬವಾಗಿ ಕಾರ್ಯನಿರ್ವಹಿಸುತ್ತದೆ, ಮತ್ತು ವಿಶೇಷವಾಗಿ 11 ಡಿಗ್ರಿಯಲ್ಲಿ, ಶಕ್ತಿಗಳು ನೇರವಾಗಿ ಮೇಲಕ್ಕೆ ಚಿಮ್ಮುತ್ತವೆ. ಹೀಗಾಗಿ ನಮ್ಮ ಪೂರ್ವಜರು, ಜನರ ಮೇಲೆ ಪ್ರಭಾವ ಬೀರುವ ಬಿಂದುಗಳನ್ನು ಲೆಕ್ಕ ಹಾಕಿ ಭೂಮಿಯ ಮೇಲೆ ಗುರುತಿಸಿದರು. ಅನೇಕ ಬಿಂದುಗಳು ನದಿಗಳ ಸಂಗಮಗಳಾಗಿದ್ದು ಆ ಪ್ರದೇಶಗಳಲ್ಲಿ ಸ್ನಾನ ಮಾಡುವುದರಿಂದ ಲಾಭವಿದೆ. ಒಬ್ಬರು ನಿರ್ದಿಷ್ಟ ದಿನದಂದು ಆ ಸ್ಥಳದಲ್ಲಿದ್ದರೆ, ಅಪೂರ್ವ ಸಾಧ್ಯತೆಗಳು ಲಭ್ಯವಾಗುತ್ತವೆ, ಆದ್ದರಿಂದ ಜನರು ಈ ಸಾಧ್ಯತೆಗಳನ್ನು ಬಳಸಿಕೊಳ್ಳಲು ಅಲ್ಲಿಗೆ ತೆರಳಿದರು. ಇವರಲ್ಲಿ ಅನೇಕರು ರೈತರು ಮತ್ತು ಅನಕ್ಷರಸ್ಥರು, ಕೇವಲ ಅಲ್ಲಿರಬೇಕೆಂಬ ಬಯಕೆಯಿಂದ ಅವರು ಅತ್ಯಲ್ಪ ಸಂಪನ್ಮೂಲಗಳೊಂದಿಗೆ ದೂರದ ಪ್ರಯಾಣ ಮಾಡುತ್ತಾರೆ, ಮುಕ್ತಿಗಾಗಿ ಹಂಬಲಿಸುತ್ತಾರೆ.. ಭೂಮಿಯ ಮೇಲೆ ಬೇರೆಲ್ಲಿಯೂ ಇಷ್ಟೊಂದು ಜನರು ಇಷ್ಟು ತೀವ್ರತೆಯಿಂದ ಮುಕ್ತಿಗಾಗಿ ಹಾತೊರೆಯುವುದಿಲ್ಲ.

ಭಾರತದಲ್ಲಿ ನಡೆದ ಮತ್ತು ನಡೆಯುತ್ತಿರುವ ಅತೀಂದ್ರಿಯತೆ ಮತ್ತು ಆಧ್ಯಾತ್ಮಿಕ ಪ್ರಕ್ರಿಯೆಯ ಆಳದ ಬಗ್ಗೆ ಹೆಚ್ಚಿನ ಭಾರತೀಯರಿಗೆ ತಿಳಿದಿಲ್ಲ. ಈ ಭೂಮಿಯನ್ನು ಯಾವಾಗಲೂ ಪ್ರಪಂಚದ ಆಧ್ಯಾತ್ಮಿಕ ರಾಜಧಾನಿ, ಎಂದು ಕರೆಯಲಾಗುತ್ತದೆ, ಏಕೆಂದರೆ ಬೇರೆ ಯಾವುದೇ ಸಂಸ್ಕೃತಿಯು ಆಂತರಿಕ ವಿಜ್ಞಾನವನ್ನು ಇಷ್ಟು ಅರ್ಥಮಾಡಿಕೊಂಡಿಲ್ಲ. ಇಲ್ಲಿ, ಮುಕ್ತಿ ಅಥವಾ ಮೋಕ್ಷವು ಅತ್ಯುನ್ನತ ಗುರಿಯಾಗಿದೆ. ದೇವರನ್ನು ಕೂಡ ಕೇವಲ ಅದರತ್ತ ಹೋಗುವ ಮೆಟ್ಟಿಲಾಗಿ ಪರಿಗಣಿಸಲಾಗಿದೆ.

ದುರದೃಷ್ಟವಶಾತ್, ಇಂದು ನಾವು ನೋಡುತ್ತಿರುವ ಆಧ್ಯಾತ್ಮಿಕ ಸಂಸ್ಕೃತಿಯು ಅನೇಕ ರೀತಿಯಲ್ಲಿ ಆಕ್ರಮಣಗಳಿಂದಾಗಿ ಭಿನ್ನವಾಗಿದೆ ಮತ್ತು ದೀರ್ಘಕಾಲದ ಬಡತನದಿಂದ ಸ್ವಲ್ಪ ವಿರೂಪಗೊಂಡಿದೆ. ಆದಾಗ್ಯೂ, ಆಧ್ಯಾತ್ಮಿಕ ಪ್ರಕ್ರಿಯೆಯ ಮೂಲ ಸ್ವರೂಪ ನಾಶವಾಗಿಲ್ಲ, ಅದನ್ನು ನಾಶಮಾಡಲು ಸಾಧ್ಯವೂ ಇಲ್ಲ. ಈ ಗಹನವಾದ ಸಂಪ್ರದಾಯದ ಫಲವನ್ನು ನಾವು ಅದರ ಪೂರ್ಣ ವೈಭವದಲ್ಲಿ ಪಡೆಯುವ ಸಮಯ ಇದು.

Editor's Note: Have you ever been to a Kumbh Mela? Let us know your experience in the comments section below.

ಪ್ರಯಾಗ್‌ರಾಜ್‌ನಲ್ಲಿ ಕುಂಭ ಮೇಳ

ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಕುಂಭ ಮೇಳವು ಬಹುಶಃ ಪ್ರಪಂಚದ ಅತಿದೊಡ್ಡ ಸಮಾವೇಶವಾಗಿದೆ. ಭಾರತದ ಎಲ್ಲೆಡೆಯಿಂದ ಮತ್ತು ಎಲ್ಲಾ ರೀತಿಯ ಆಧ್ಯಾತ್ಮಿಕ ಮಾರ್ಗಗಳಿಂದ ಆಧ್ಯಾತ್ಮಿಕ ಸಾಧಕರು, ಈ ಶುಭ ದಿನದಂದು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಲು ಒಟ್ಟುಗೂಡುತ್ತಾರೆ. ಗ್ರಹಗಳ ಸ್ಥಾನದ ಆಧಾರದ ಮೇಲೆ ಲೆಕ್ಕ ಹಾಕಲಾದ ಈ ಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ, ಇದು ಒಂದು ಸೌರ ಚಕ್ರ, ಮತ್ತು ಆಧ್ಯಾತ್ಮಿಕ ಮಾರ್ಗದಲ್ಲಿ ಮಹತ್ವದ ಸಂಖ್ಯೆಯಾಗಿದೆ. ಕುಂಭಮೇಳವು ಭಾರತದ ಅತ್ಯಮೂಲ್ಯ ಆಧ್ಯಾತ್ಮಿಕ ಪರಂಪರೆಯ ಚಿರಸ್ಥಾಯಿ ಸಂಕೇತವಾಗಿದೆ.