ಈಶಾನ್ಯ ಭಾರತದ ಜನರು ಭಾರತದಲ್ಲಿ ಪರಕೀಯತೆಯ ಭಾವವನ್ನು ಅನುಭವಿಸುತ್ತಿದ್ದಾರೆಯೇ?
ಈಶಾನ್ಯ ಭಾರತದ ಜನರಲ್ಲಿ ಪರಕೀಯತೆಯ ಭಾವನೆ ಇದೆಯೇ ಮತ್ತು ಇದ್ದದ್ದೇ ಆದರೆ ಅದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ, ಮತ್ತು ಭಾರತದ ಈ ಭಾಗದಲ್ಲಿ ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಬಗ್ಗೆ ಸಂಕ್ಷಿಪ್ತವಾದ ಇತಿಹಾಸವನ್ನು ನೀಡುತ್ತಾರೆ.
ಪ್ರಶ್ನೆ: ಈಶಾನ್ಯ ಭಾರತದ ಜನರಲ್ಲಿ ಪರಕೀಯತೆಯ ಭಾವನೆ ಏತಕ್ಕಿದೆ?
ಸದ್ಗುರು: ಈ ಭಾಗದ ಪರಿಸ್ಥಿತಿ ಮತ್ತು ಇತಿಹಾಸದ ಬಗ್ಗೆ ನಾವು ಸ್ವಲ್ಪ ಅರ್ಥಮಾಡಿಕೊಳ್ಳಬೇಕು. ಸ್ವಾತಂತ್ರ್ಯಾನಂತರ, ಈಶಾನ್ಯ ಭಾರತದ ಕುರಿತಾಗಿ ನಿರ್ಧಾರಗಳು ಮತ್ತು ಯೋಜನೆಗಳನ್ನು ರೂಪಿಸುತ್ತಿರುವಾಗ, ಈ ಪ್ರದೇಶದ ನಿರ್ಮಲ ಪ್ರಕೃತಿ ಮತ್ತು ಬುಡಕಟ್ಟು ಸಂಸ್ಕೃತಿಗಳನ್ನು ಮುಟ್ಟಬಾರದೆಂದು ಜವಾಹರಲಾಲ್ ನೆಹರು-ರವರಿಗೆ ಸೂಚಿಸಲಾಗಿತ್ತು.
ಆರಂಭದಲ್ಲಿ, ಈಶಾನ್ಯದಲ್ಲಿನ ಜನರು ತಮ್ಮದೇ ಆದ ಪರಿಸರ ವ್ಯವಸ್ಥೆಯಲ್ಲಿ ಉತ್ತಮವಾಗಿ ಜೀವಿಸುತ್ತಿದ್ದ ಕಾರಣ, ಆ ಪ್ರದೇಶವನ್ನು ಮುಟ್ಟಬಾರದೆನ್ನುವುದು ಪ್ರಜ್ಞಾಪೂರ್ವಕವಾದ ನಿರ್ಣಯವಾಗಿತ್ತು. ಅವರನ್ನು ಜಗತ್ತಿನ ಉಳಿದ ಭಾಗದ ಜನರಂತೆ ಮಾಡಲು ಅಲ್ಲಿಗೆ ಕಾರು, ರೈಲು ಮತ್ತು ವಿಮಾನಗಳನ್ನು ತರುವ ಅಗತ್ಯವಿರಲಿಲ್ಲ. ಅವರ ಪಾಡಿಗೆ ಅವರು ಒಳ್ಳೆಯ ರೀತಿಯಲ್ಲಿ ಬದುಕುತ್ತಿದ್ದರು. ಇಂದು, ಇಂತಹ ಪ್ರಜ್ಞಾಪೂರ್ವಕ ನಿರ್ಧಾರವನ್ನು ಮಾಡಿ, ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿರುವ ಏಕೈಕ ದೇಶವೆಂದರೆ ಅದು ಭೂತಾನ್.
ಮೂಲ ಉದ್ದೇಶವು ಬುಡಕಟ್ಟು ಸಂಸ್ಕೃತಿ ಮತ್ತು ನೈಸರ್ಗಿಕ ಪರಿಸರಕ್ಕೆ ಧಕ್ಕೆ ತರಬಾರದು ಎನ್ನುವುದಾಗಿತ್ತು. ಆದರೆ ಸುಮಾರು 20 ವರ್ಷಗಳ ಬಳಿಕ, ಜನರು ಬೇರಿನ್ನಾವುದಕ್ಕೋ ಹಂಬಲಿಸುತ್ತಿದ್ದಾರೆ ಎಂದು ತಿಳಿದಾಗ, ಅವರು ಯೋಜನೆಯನ್ನು ಬದಲಾಯಿಸಬೇಕಾಗಿತ್ತು. ಆದರೆ ಭಾರತದಲ್ಲಿ ಯೋಜನೆಗಳನ್ನು ಬದಲಾಯಿಸುವುದು ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಆ ಕಾರಣದಿಂದಾಗಿ, ಯೋಜಿತವಲ್ಲದ ರೀತಿಗಳಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾದವು.
ಮತ್ತು ಇಂದಿನ ಸಂಪರ್ಕ ಯುಗದಲ್ಲಿ, ನ್ಯೂಯಾರ್ಕ್ ಮತ್ತು ಲಂಡನ್-ನಂತಹ ದೊಡ್ಡ ದೊಡ್ಡ ನಗರಗಳನ್ನು, ಅಲ್ಲಿಗೆ ಹೋಗದೆಯೇ, ಟಿವಿ ಮತ್ತು ಅಂತರ್ಜಾಲದಲ್ಲಿ ಎಲ್ಲರೂ ಸಹ ನೋಡುತ್ತಿದ್ದಾರೆ. ಪ್ರತಿಯೊಬ್ಬರೂ ಪಾಶ್ಚಿಮಾತ್ಯ ಜೀವನ ಶೈಲಿಗೆ ಶರಣಾಗಿ, ನಾವು ಕೂಡ ಹಾಗೆಯೇ ಇರಬೇಕು ಎಂದು ಯೋಚಿಸುತ್ತಿದ್ದಾರೆ. ಮುಂದಿನ ಹದಿನೈದು ಇಪ್ಪತ್ತು ವರ್ಷಗಳಲ್ಲಿ, ಈಶಾನ್ಯ ಭಾಗಗಳಲ್ಲಿ ಸರ್ಕಾರವು ರೈಲುಮಾರ್ಗ, ವಾಯುಮಾರ್ಗ, ರಸ್ತೆಮಾರ್ಗ, ಮತ್ತೆಲ್ಲವನ್ನು ಕೂಡ ನಿರ್ಮಿಸಲು ನಿರ್ಧರಿಸಿದೆ. ಆ ಕೆಲಸಗಳು ಮುಗಿಯುತ್ತಿದ್ದಂತೆ, ಭಾರತದ ಉಳಿದ ಭಾಗದ ಜನರು ಈಶಾನ್ಯ ಭಾರತದ ತುಂಬೆಲ್ಲಾ ಸಂಚರಿಸುತ್ತಿರುತ್ತಾರೆ.
ಈ ವರ್ಷ, ನಾನು ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಲಡಾಖ್ ಮತ್ತು ಸಿಯಾಚಿನ್-ಗೆ ಹೋಗಿದ್ದೆ. ಎಲ್ಲೆಡೆ ಸಾವಿರಾರು ಮೋಟರ್ ಸೈಕಲ್-ಗಳನ್ನು ಕಂಡಿದ್ದು ನಂಬಲಸಾಧ್ಯವಾಗಿತ್ತು. ಅದು ಮೊದಲಿನ ನಿರ್ಮಲವಾದ ಲಡಾಖ್ ಆಗಿರಲಿಲ್ಲ. ರಸ್ತೆಗಳು ಪ್ರವಾಸಿಗರಿಂದ ತುಂಬಿ ಹೋಗಿದ್ದವು ಹಾಗೂ ಪರ್ವತಗಳ ಮೇಲೆ ಟ್ರಾಫಿಕ್ ಜಾಮ್-ಗಳಾಗಿದ್ದವು. ಕೆಲವು ವರ್ಷಗಳ ಹಿಂದೆ ಇದು ಕಂಡುಕೇಳಿರದ ವಿಷಯವಾಗಿತ್ತು.
ಪರಿಸ್ಥಿತಿಗಳು ಬದಲಾಗುತ್ತಿವೆ, ಹಾಗಾಗಿ ಇನ್ನೈದು ವರ್ಷಗಳಲ್ಲಿ ಭಾರತದ ಈಶಾನ್ಯ ಭಾಗದಲ್ಲಿ ಪರಕೀಯತೆಯ ಭಾವನೆ ಇರುವುದಿಲ್ಲವೆಂದು ನನ್ನ ಅನಿಸಿಕೆ. ಈ ಭಾಗದ ತುಂಬೆಲ್ಲಾ ಜನರಿರುತ್ತಾರೆ. ಇವರೆಲ್ಲ ವನ್ಯಜೀವಿ ಉತ್ಸಾಹಿಗಳೋ ಅಥವಾ ಮತ್ತಿನ್ಯಾರೋ ಆಗಿರುವುದಿಲ್ಲ – ಎಲ್ಲಾ ಕಡೆ ಕೇವಲ ಪ್ರವಾಸಿಗರಿರುತ್ತಾರೆ. ಜನರು ಅಭಿವೃದ್ಧಿಯನ್ನು ಆಯ್ಕೆ ಮಾಡಿಕೊಂಡಿರುವ ಕಾರಣದಿಂದ ಹಾಗಾಗುತ್ತದೆ. ನಾವಿದನ್ನು ಅಭಿವೃದ್ಧಿಯೆಂದು ತಿಳಿಯಬಹುದು, ಆದರೆ ಇದು ದೇಶಕ್ಕೊಂದು ರೀತಿಯ ನಷ್ಟ ಕೂಡ.
ಸಂಪಾದಕರ ಟಿಪ್ಪಣಿ: ಸದ್ಗುರುಗಳು ಈ ದೇಶದ ಪೂರ್ವ, ಪ್ರಸ್ತುತ ಮತ್ತು ಭವಿಷ್ಯದತ್ತ ಗಮನ ಹರಿಸುತ್ತಾರೆ ಮತ್ತು ಈ ಸಂಸ್ಕೃತಿಯು ಭೂಮಿ ಮೇಲಿನ ಪ್ರತಿಯೊಬ್ಬ ಮನುಷ್ಯನಿಗೂ ಸಹ ಏಕೆ ಮುಖ್ಯವಾಗುತ್ತದೆ ಎನ್ನುವುದನ್ನು ವಿಚಾರಮಾಡುತ್ತಾರೆ. ಭಾವಚಿತ್ರಗಳು, ಗ್ರಾಫಿಕ್ಸ್ ಮತ್ತು ಸದ್ಗುರುಗಳ ಪ್ರೇರೇಪಿಸುವ ಮಾತುಗಳೊಂದಿಗೆ, ನಿಮಗೆಂದೂ ತಿಳಿದಿರದ ಭಾರತ ಇಲ್ಲಿದೆ!