ಕಾವ್ಯ ಮತ್ತು ಆಂತರಿಕ ಅನುಭವ
ವಿಶ್ವ ಕಾವ್ಯ ದಿನದ ಪ್ರಯುಕ್ತ, ಸದ್ಗುರುಗಳು ಮತ್ತು ಮುಜಾಫರ್ ಅಲಿಯವರ ನಡುವೆ ನಡೆದ ಆಳವಾದ ಆಂತರಿಕ ಅನುಭವದ ಅಭಿವ್ಯಕ್ತಿಯ ಕುರಿತಾದ ಈ ಸಂಭಾಷಣೆಯನ್ನು ಓದಿ ಆನಂದಿಸಿ.
ಚಿತ್ರನಿರ್ಮಾಪಕ, ಫ್ಯಾಶನ್ ಡಿಸೈನರ್, ಕವಿ ಮತ್ತು ಕಲಾವಿದರಾದ ಮುಜಾಫರ್ ಅಲಿ ಹಾಗೂ ಸದ್ಗುರುಗಳ ನಡುವೆ ನಡೆದ, ವಿಸ್ತಾರವಾದ ವಿಷಯಗಳನ್ನು ಒಳಗೊಂಡಂತಹ ಒಂದು ಸಂಭಾಷಣೆಯಲ್ಲಿ, ಅವರ ಮಾತುಕತೆಯ ವಿಷಯವು ಗತಕಾಲದ ಕೆಲ ಆದರ್ಶಪ್ರಾಯ ಕವಿಗಳತ್ತ ತಿರುಗುತ್ತದೆ. ರೂಮಿ ಅಥವಾ ಕಬೀರರನ್ನು ಅನುಕರಿಸಲು ಪ್ರಯತ್ನಿಸುವ ಬದಲಾಗಿ ಅವರಲ್ಲಿ ಕಾವ್ಯದ ಹೊನಲನ್ನು ಹರಿಸಿದ ಅವರ ಆಂತರಿಕ ಅನುಭವವನ್ನು ನಾವು ಗಮನಿಸಬೇಕೆಂದು ಸದ್ಗುರುಗಳು ಹೇಳುತ್ತಾರೆ. ವಿಶ್ವ ಕಾವ್ಯ ದಿನದಂದು, ಆಳವಾದ ಆಂತರಿಕ ಅನುಭವದ ಅಭಿವ್ಯಕ್ತಿಯ ಕುರಿತು ಇಬ್ಬರು ಕವಿಗಳ ನಡುವೆ ನಡೆದ ಸಂಭಾಷಣೆಯನ್ನು ಓದಿ ಆನಂದಿಸಿ.
ಮುಜಾಫರ್ ಅಲಿ: ಆದರ್ಶಪ್ರಾಯವಾದ ವ್ಯಕ್ತಿತ್ವಗಳನ್ನು ನಾವು ಅರ್ಥಮಾಡಿಕೊಳ್ಳುವುದು ಹೇಗೆ? ಮಾನವತೆಯ ದೃಷ್ಟಿಕೋನದಿಂದ, ಕಲಾತ್ಮಕ ದೃಷ್ಟಿಕೋನದಿಂದ, ಮಾನವಕುಲವನ್ನು ಹತ್ತಿರವಾಗಿಸುವ ದೃಷ್ಟಿಕೋನದಿಂದ, ಕೆಲ ಆದರ್ಶಪ್ರಾಯವಾದ ವ್ಯಕ್ತಿಗಳ ಜೀವನವು ಬಹಳ ಮುಖ್ಯವಾಗಿದೆ. ರೂಮಿ, ಖುಸ್ರೋ, ಕಬೀರ್ ಮುಂತಾದವರುಗಳ ಜೀವನವನ್ನು ನಾವು ಕೊಂಡಾಡಿ ಸಂಭ್ರಮಿಸಬೇಕು. ಪ್ರಾಯಶಃ, ಅದೂ ಸಹ ಜ್ಞಾನೋದಯದ ಒಂದು ಮೂಲವಾಗಬಹುದು.
ಸದ್ಗುರು: ನೀವು "ಆದರ್ಶಪ್ರಾಯರು" ಎಂದು ಹೇಳಿದಾಗ, ಅವರುಗಳು ಬೇರೆಯವರಿಗೆ ಆದರ್ಶರಾಗುವುದಕ್ಕೆ ಅರ್ಹರು ಎಂದು ನೀವು ಅರ್ಥೈಸುತ್ತಿದ್ದೀರ. ಆದರೆ ರೂಮಿ, ಕಬೀರ್ ಅಂತಹವರನ್ನು ನಾವು ಸುಮ್ಮನೆ ಆನಂದಿಸಬೇಕಷ್ಟೆ. ನಾವು ಅವರುಗಳನ್ನು ಅನುಕರಿಸಲು ಪ್ರಯತ್ನಿಸಬಾರದು. ಅವರುಗಳು ತೋಟದಲ್ಲಿರುವ ಹೂಗಳಂತೆ. ನೀವು ಹೂವಾಗಲು ಪ್ರಯತ್ನಿಸುವುದಿಲ್ಲ, ನೀವು ಹೂವನ್ನು ಆನಂದಿಸುತ್ತೀರಷ್ಟೆ. ಅಂತಹ ಜನರು ಹೂವಾಗಿ ಅರಳಿದ್ದು ಒಳ್ಳೆಯದು. ಅಂತಹ ಹಲವಾರು ಜನ ಅರಳಿದ್ದಾರೆ.
ಇಂದಿಗೂ ಸಹ, ಪ್ರತಿ ಹಳ್ಳಿ ಮತ್ತು ನಗರದಲ್ಲಿ ಅಂತಹವರು ಇರುತ್ತಾರೆ. ಬಹುಶಃ ಅವರು ಆ ಮಟ್ಟದ ಖ್ಯಾತಿಯನ್ನು ಪಡೆದಿರಲಿಕ್ಕಿಲ್ಲ. ಕೆಲವೊಬ್ಬರು ನಿರ್ದಿಷ್ಟವಾದ ಸ್ಥಾನಮಾನವನ್ನು ಪಡೆದುಕೊಳ್ಳಬಹುದು, ಮತ್ತೆ ಕೆಲವರು ಪಡೆದುಕೊಳ್ಳದೇ ಇರಬಹುದು - ಅದೊಂದು ಸಾಮಾಜಿಕ ಮತ್ತು ಐತಿಹಾಸಿಕ ವಿಷಯ. ಆದರೆ ಅವರಲ್ಲಿನ ಅಂಶವು ಸತ್ತಿಲ್ಲ ಮತ್ತು ಅದೆಂದಿಗೂ ಸಾಯುವುದಿಲ್ಲ. ಎಲ್ಲೋ ಒಂದು ಕಡೆ, ಅದು ಅನೇಕ ರೀತಿಗಳಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಕಬೀರರನ್ನು ನಾವು ಆದರ್ಶಪ್ರಾಯರನ್ನಾಗಿ ಮಾಡಿಕೊಳ್ಳುವ ಬದಲು, ಅವರನ್ನು ಭಾವಾಭಿವ್ಯಕ್ತಿಯ ಸುಧೆಯನ್ನು ಹರಿಸುವಂತಹ ವ್ಯಕ್ತಿಯನ್ನಾಗಿ ಮಾಡಿದ ಅವರೊಳಗಿನ ಆ ಅನುಭವವನ್ನು ನಾವು ಅರಿತುಕೊಳ್ಳಬೇಕು.
ಬಾಹ್ಯ ಸಾಮರ್ಥ್ಯದ ವಿಷಯಕ್ಕೆ ಬಂದಾಗ, ನಾವೆಲ್ಲರೂ ವಿಭಿನ್ನವಾಗಿ ಸಮರ್ಥರಾಗಿದ್ದೇವೆ. ನಿಮಗೆ ಮಾಡಲು ಸಾಧ್ಯವಿರುವುದನ್ನು ನಾನು ಮಾಡಲು ಸಾಧ್ಯವಾಗುವುದಿಲ್ಲ. ನನಗೆ ಮಾಡಲು ಸಾಧ್ಯವಿರುವುದನ್ನು ನಿಮಗೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಆಂತರಿಕ ಸಾಮರ್ಥ್ಯದ ವಿಷಯಕ್ಕೆ ಬಂದಾಗ, ನಾವೆಲ್ಲರೂ ಸಮಾನವಾಗಿ ಸಮರ್ಥರಾಗಿದ್ದೇವೆ. ಅಂತರಂಗದ ಅನುಭವಗಳು ಒಬ್ಬರಲ್ಲಿ ಆಗಿ ಇನ್ನೊಬ್ಬರಲ್ಲಿ ಯಾಕಾಗಿ ಆಗುವುದಿಲ್ಲ ಎನ್ನವುದಕ್ಕೆ ಕಾರಣವಿದು: ಒಬ್ಬರು ಆ ಆಯಾಮದ ಕಡೆಗೆ ತಮ್ಮ ಗಮನವನ್ನು ಹರಿಸಿರುತ್ತಾರೆ, ಆದರೆ ಇನ್ನೊಬ್ಬರು ಅದರತ್ತ ಯಾವುದೇ ಗಮನವನ್ನು ಹರಿಸಿರುವುದಿಲ್ಲ.
ಕಬೀರಗೆ, ರೂಮಿಯವರಿಗೆ, ಕೃಷ್ಣ ಅಥವಾ ಆದಿಯೋಗಿಗೆ ಏನು ಸಾಧ್ಯವಾಗಿತ್ತೋ, ಅದು ನಮಗೆಲ್ಲರಿಗೂ ಸಾಧ್ಯವಾಗುತ್ತದೆ. ಆದರೆ, ನಾವೆಲ್ಲರೂ ಅದೇ ರೀತಿಯಾದ ಕವಿತೆ, ಅದೇ ರೀತಿಯಾದ ನೃತ್ಯ, ಸಂಗೀತ ಮತ್ತು ಗಣಿತವನ್ನು ರಚಿಸಲು ಸಮರ್ಥರೇ? ಬಹುಶಃ ಇಲ್ಲವೇನೋ. ಆದರೆ, ನಾವೆಲ್ಲರೂ ಅದೇ ಅನುಭವವನ್ನು ಹೊಂದಲು ಸಮರ್ಥರಾಗಿದ್ದೇವೆ. ಅದು ಕಬೀರರಿಗೆ ಅನುಭವವಾದಾಗ, ಅವರಿದ್ದ ಅಂದಿನ ಸಾಮಾಜಿಕ ಮತ್ತಿತರ ಪರಿಸ್ಥಿತಿಗಳನ್ನು ಅವಲಂಬಿಸಿ, ಆ ಅನುಭವ ಅವರ ಕವಿತೆಯ ರೂಪದಲ್ಲಿ ಹೊರಹೊಮ್ಮಿರಬಹುದು. ಇಂದು ಅದೇ ಅನುಭವ ಯಾರಲ್ಲಾದರೂ ಆದರೆ, ಅವರು ಕವಿತೆಯನ್ನು ರಚಿಸುವ ಬದಲು, ಸಂಪೂರ್ಣವಾಗಿ ಬೇರೆ ಇನ್ನೇನನ್ನೋ ಮಾಡಬಹುದು.
ಒಬ್ಬ ನಿರ್ದಿಷ್ಟ ವ್ಯಕ್ತಿಯಲ್ಲಿ ಈ ಕಾವ್ಯ, ನೃತ್ಯ, ಸಂಗೀತ, ಗಣಿತಶಾಸ್ತ್ರ ಅಥವಾ ವಿಜ್ಞಾನವಾಗಿ ಸೃಜಿಸಲು ಕಾರಣೀಭೂತವಾದ ಅಂತರಂಗದ ಅನುಭವವು, ಅದು ಕಂಡುಕೊಳ್ಳುವ ಅಭಿವ್ಯಕ್ತಿಗಿಂತ ಬಹಳ ಮುಖ್ಯವಾದದ್ದು. ಬೇರೆ ಬೇರೆ ಜನರಲ್ಲಿ ಅದು ಬೇರೆ ಬೇರೆ ಅಭಿವ್ಯಕ್ತಿಯನ್ನು ಕಂಡುಕೊಳ್ಳಬಹುದು, ಅದು ತುಂಬಾ ಒಳ್ಳೆಯ ವಿಷಯವೇ. ನೀವು ಏನನ್ನಾದರೂ ಕಂಡರೆ, ಬಹುಶಃ ನಿಮಗೆ ಸಿನಿಮಾ ಮಾಡಬೇಕು ಎಂದೆನಿಸಬಹುದು. ನಾನೇನಾದರನ್ನು ಕಂಡರೆ, ಅದನ್ನು ಜನ ಅನುಭವಿಸಲು ಸಾಧ್ಯವಾಗುವಂತೆ ಒಂದು ವ್ಯವಸ್ಥೆಯನ್ನು ನಿರ್ಮಿಸುವುದು ಹೇಗೆಂದು ನಾನು ಯೋಚಿಸುತ್ತೇನೆ.
ಪ್ರತಿಯೊಬ್ಬರ ಆಂತರ್ಯದ ಅನುಭವವು ಅಭಿವ್ಯಕ್ತವಾಗುವ ಬಗೆ ಬೇರೆ ಬೇರೆಯಾಗಿರುತ್ತದೆ ಮತ್ತದು ಬೇರೆ ಬೇರೆಯಾಗಿರುವುದು ಅದ್ಭುತವಾದ ಸಂಗತಿ. ಆದರೆ ಅಂತರಂಗದ ಅನುಭವವನ್ನು ಅನುಭವಿಸಲು ನಾವೆಲ್ಲರೂ ಸಮರ್ಥರೆ. ಆದರೆ ಅದಕ್ಕೆ ಅಗತ್ಯವಿರುವ ಗಮನ ಮತ್ತು ಸಾಧನಗಳನ್ನು ಕೊಡದಿರುವ ಕಾರಣದಿಂದಾಗಿ ಅದು ನಿಮ್ಮ ಅನುಭವಕ್ಕೆ ಬರುತ್ತಿಲ್ಲ ಅಷ್ಟೆ. ಪ್ರತಿಯೊಬ್ಬರೂ ಸಹ ಇನ್ಯಾವುದರಲ್ಲೋ ನಿರತರಾಗಿದ್ದಾರೆ. ಹಾಗಾಗಿ, ಕಳೆದು ಹೋದುದರ ಗುಣಗಾನವನ್ನು ಮಾಡುವ ಬದಲು, ಪ್ರತಿ ಪೀಳಿಗೆಯಲ್ಲೂ, ಆ ಅನುಭವವನ್ನು ಜನರು ಹೊಂದುವಹಾಗೆ ಮಾಡಲು ನಿರಂತರವಾದ ಪ್ರಯತ್ನವನ್ನು ನಾವು ಮಾಡಬೇಕಾಗಿರುವುದು ಬಹಳ ಮುಖ್ಯ. ಹೌದು, ನಾವು ಹಿಂದಿನ ಸಾಧಕರನ್ನು ಗೌರವಿಸುತ್ತೇವೆ, ಅವರನ್ನು ಹಾಡಿ ಕೊಂಡಾಡುತ್ತೇವೆ. ಆದರೆ, ಅತಿ ಮುಖ್ಯವಾದ ವಿಷಯವೇನೆಂದರೆ, ನಮ್ಮೊಳಗೂ ಆ ಅನುಭವ ಸಾಧ್ಯವಿದೆ ಎನ್ನುವುದನ್ನು ಅವರೆಲ್ಲಾ ನಮಗೆ ನೆನಪು ಮಾಡಿಸುತ್ತಾರೆ ಎನ್ನುವುದಾಗಿದೆ.
ಆ ಅನುಭವಗಳು ಸಂಪೂರ್ಣವಾಗಿದ್ದು, ಅವರ ಅನುಭವಕ್ಕೆ ಬಂದದ್ದು ಈಗಿಲ್ಲಿ ಸಾಧ್ಯವಾಗದೇ ಇದ್ದರೆ, ಆಗದು ಒಂದು ಅಪ್ರಸ್ತುತ ಪ್ರಕ್ರಿಯೆಯಾಗುತ್ತದೆ, ಮತ್ತದು ಸಾವನ್ನಪ್ಪುತ್ತದೆ. ಅದು ಜೀವಂತವಾಗಿರಬೇಕಿದ್ದರೆ, ಪ್ರತಿ ಪೀಳಿಗೆಯಲ್ಲೂ ಅದನ್ನು ಅನುಭವಿಸಿದ ಸಾವಿರಾರು ಜನ ಇರಬೇಕಾಗುತ್ತದೆ. ಆಗ ಮಾತ್ರ ಆ ಪರಂಪರೆಯು ಜೀವಂತವಾಗಿ ಉಳಿಯುತ್ತದೆ. ಆ ಅನುಭವವನ್ನು ತರವ ಸಲುವಾಗಿ, ಹೇಳಿದ್ದನ್ನು ಮತ್ತು ಬರೆದಿದ್ದನ್ನು ಸುಮ್ಮನೆ ನಂಬುವುದರ ಬದಲು, ಹಾಗೆ ಹೇಳಿದುದರ ತಿರುಳನ್ನು ಪರಿಶೋಧಿಸುವ ಮತ್ತು ಅನುಭವಿಸುವತ್ತ ಜನರನ್ನು ಬದಲಾಯಿಸಬೇಕಿದೆ.
ಮುಜಾಫರ್ ಅಲಿ: ಕವಿಋಷಿಗಳ ಕಾವ್ಯಗಳನ್ನು ಕೊಂಡಾಡಲು ನಾನು ನನ್ನ ಇಡೀ ಜೀವನವನ್ನು ಸಮರ್ಪಿಸಿದ್ದೇನೆ, ಮತ್ತು ನಾನು ಅವರಲ್ಲಿ ಕಂಡಂತಹ ಸಾಮಾನ್ಯಗುಣತ್ವವೆಂದರೆ ಕಿಚ್ಚು. ನಾನು ಈಗಿನ ಕಾಲದ ಕವನಗಳನ್ನು ಯಾವಾಗಲೂ ನೋಡುತ್ತಿರುತ್ತೇನೆ, ಆದರೆ ಜನರ ಹೃದಯವನ್ನು ನಾಟುವಂತಹ ಶುದ್ಧವಾದ ಕವನಗಳು ನನಗೆ ಕಾಣಸಿಗುವುದಿಲ್ಲ. ಇಪ್ಪತ್ತೊಂದನೇ ಶತಮಾನ ಜನರಲ್ಲಿ ಕಿಚ್ಚಿರದ ಕಾರಣ ಕವಿತೆಗಳು ಇಲ್ಲವಾಗಿವೆ. ಹಾಗಾಗಿ, ಜನರನ್ನು ನಾಟುವಂತಹ ಕವಿತೆಗಳನ್ನು ಅವರು ಬರೆಯಲಾರರು. ಇದು ಸಮಾಜ ಕ್ಷಯಿಸುತ್ತಿರುವ ಗಂಭೀರವಾದ ಗುಣಲಕ್ಷಣ. ಬಹುಶಃ ನಿಮ್ಮ ವಿವೇಕದಿಂದ ನಾವು ಆ ಸಮಸ್ಯೆಯನ್ನು ಪರಿಹರಿಸಬಹುದೇನೋ, ಆದರೆ ಇದೊಂದು ಗಂಭೀರವಾದ ವಿಷಯವಾಗಿದೆ. ನನ್ನ ಪ್ರಕಾರ ಕವಿತೆಗಳ ರಚನೆ ಒಂದು ಪವಿತ್ರವಾದ ಕಲೆ, ಅದು ಬೇರೆಲ್ಲಾ ಕಲೆಗಳ ತಾಯಿ. ಈ ಕಲೆಯು ಜಗತ್ತು ಮತ್ತು ಸಮಾಜದ ಪ್ರತಿಬಿಂಬವಾಗಿದೆ. ಕವಿತೆಯನ್ನು ಖರೀದಿಸಲಾಗದು. ಕವಿತೆಯು ಅಂತರಂಗದ ಕಿಚ್ಚಿನಿಂದ ಹೊರಹೊಮ್ಮಬೇಕು. ಕವಿತೆಯು ಅನೇಕ ವಿಷಯಗಳಿಗೆ ಕಾರಣವಾಗುತ್ತದೆ. ಕವನಗಳು ವಾಸ್ತುಶಿಲ್ಪಕ್ಕೆ ಕಾರಣವಾಗಬಹುದು, ಕವನಗಳು ಕರಕುಶಲತೆಗೆ ಕಾರಣವಾಗಬಹುದು, ಕವನಗಳು ಸಂಗೀತ ನೃತ್ಯಕ್ಕೆ ಎಡೆಮಾಡಿಕೊಡಬಹುದು. ಅದು ಯಾವುದಕ್ಕಾದರೂ ಕಾರಣೀಭೂತವಾಗಬಹುದು, ಆದರೆ ಆ ಕಿಚ್ಚು ಇರದಿದ್ದರೆ, ಏನನ್ನೂ ಸೃಜಿಸಲು ಸಾಧ್ಯವಿಲ್ಲ.
ಸದ್ಗುರು: ಗದ್ಯಕ್ಕೆ ಹೋಲಿಸಿದಲ್ಲಿ ಕವಿತೆ ಏತಕ್ಕಾಗಿ ಮಹತ್ವದ್ದಾಗಿದೆಯೆಂದರೆ, ಮಾನವರ ಬಹಳಷ್ಟು ಅನುಭವಗಳು ತಾರ್ಕಿಕ ವಿವರಣೆಗೆ ಸರಿಹೊಂದುವುದಿಲ್ಲ. ನಿಮ್ಮ ಪ್ರೌಢಶಾಲೆ ಅಥವಾ ಕಾಲೇಜಿನಲ್ಲಿ ಕಪ್ಪೆಯೊಂದನ್ನು ಸೀಳಿ ಅದರ ಹೃದಯವನ್ನು ನೋಡಿದರೆ, ಗದ್ಯ ರೂಪದಲ್ಲಿ ನೀವು ಅದರ ಬಗ್ಗೆ ಪ್ರಬಂಧವನ್ನು ಬರೆಯಬಹುದು. ಆದರೆ ಬೇರೊಬ್ಬರು ನಿಮ್ಮ ಹೃದಯದೊಳಗೆ ನುಸುಳಿದರು ಎಂದಿಟ್ಟುಕೊಳ್ಳಿ. ಈಗ, ನೀವದನ್ನು ಗದ್ಯ ರೂಪದಲ್ಲಿ ಬರೆದರೆ, ಅದು ಹಾಸ್ಯಾಸ್ಪದವಾಗಿ ಕಾಣುತ್ತದೆ, ಏಕೆಂದರೆ ಅದು ತಾರ್ಕಿಕವಾಗಿ ಸರಿಯಾಗಿರುವುದಿಲ್ಲ. ಅನುಭವದ ತರ್ಕರಹಿತ ಆಯಾಮಗಳನ್ನು ಸ್ಪರ್ಶಿಸುವವರು ಕವಿತೆಗೆ ಶರಣಾಗಬೇಕಾಗುತ್ತದೆ, ಏಕೆಂದರೆ, ನೆರವಿಗೆ ಬರುವಂತದ್ದು ಕೇವಲ ಅದೊಂದೇ.
ನೀವು ಕವಿತೆಯನ್ನು ಬರೆದರೆ, ತಕ್ಷಣ ಇಡೀ ಪ್ರೇಮಪ್ರಸಂಗವು ಸುಂದರವಾಗಿಬಿಡುತ್ತದೆ, ಏಕೆಂದರೆ ತರ್ಕರಹಿತವಾದದ್ದು ಏನಿದ್ದರೂ ಕಾವ್ಯ ರೂಪದಲ್ಲಿ ಮಾತ್ರ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಸಾಧ್ಯ. ಪ್ರತಿಯೊಬ್ಬ ಯೋಗಿಯೂ ಕವಿತೆಗೆ ಶರಣಾಗಿದ್ದಾರೆ, ಏಕೆಂದರೆ ಗದ್ಯವನ್ನು ಬರೆಯುವ ಪರಿ ಯಾವುದು? ಹಾಗಾಗಿ ಕಾವ್ಯ ರಚನೆ ಒಂದು ಆಯ್ಕೆಯಲ್ಲ, ಅದೊಂದು ವಿವಶತೆ! ಅನುಭವವನ್ನು ಪದಗಳಲ್ಲಿ ವ್ಯಕ್ತಪಡಿಸಲು ಬೇರೆ ಯಾವ ದಾರಿಯೂ ಇಲ್ಲ.
ಮುಜಫರ್ ಅಲಿ: ಇದು ತಿರುಳಿನ ಸತ್ವದ ಜೀವಾಳ. ಮತ್ತು ಅದಕ್ಕೆ ಹೃದಯವನ್ನು ತಟ್ಟುವ ಲಯವಿದೆ, ಏಕೆಂದರೆ ವಿಷಯಗಳೊಳಕ್ಕೆ ಇಳಿಯಲು ನಿಮಗೆ ಲಯದ ಅಗತ್ಯವಿರುತ್ತದೆ.
ಸದ್ಗುರು: ಇಲ್ಲ, ನಿಮ್ಮಲ್ಲಿ ಲಯವಿರುವುದು ಕವನದ ಕಾರಣದಿಂದಾಗಲ್ಲ. ನಿಮ್ಮಲ್ಲಿ ಲಯವಿರುವ ಕಾರಣದಿಂದ, ನಿಮ್ಮಿಂದ ಕವಿತೆ ಹೊರಹೊಮ್ಮಬಹುದು.
Editor's Note: ಸದ್ಗುರುಗಳ ಕವಿತೆಗಳು ಎರಡು ಸಂಗ್ರಹಗಳಲ್ಲಿ ಲಭ್ಯವಿವೆ. “Poetic Fling” ಡಿವಿಡಿಯಲ್ಲಿ, ಸದ್ಗುರುಗಳು ಅವರ ಕವಿತೆಗಳನ್ನು ಓದುತ್ತಾರೆ ಮತ್ತು ಈ ಹೊರಹೊಮ್ಮುವಿಕೆಯನ್ನು ಉಂಟುಮಾಡಿದ ಅನೇಕ ಸಂದರ್ಭಗಳನ್ನು ವಿವರಿಸುತ್ತಾರೆ. "Eternal Echoes," ಇಪುಸ್ತಕವು 84 ಕವಿತೆಗಳ ಸಂಗ್ರಹವನ್ನು ಹೊಂದಿದೆ.