ಕರ್ಣ – ನಾಯಕನೋ ಖಳನಾಯಕನೋ?
ಕರ್ಣನು ಮಹಾಭಾರತದ ಅತ್ಯಂತ ಪ್ರಸಿದ್ಧ ಮತ್ತು ಸಂಕೀರ್ಣ ವ್ಯಕ್ತಿಗಳಲ್ಲಿ ಒಬ್ಬನು. ಕಥೆಯ ಉದ್ದಕ್ಕೂ ಘನತೆ ಮತ್ತು ದುಷ್ಟತೆ ಎರಡೂ ಗುಣಗಳನ್ನು ಪ್ರದರ್ಶಿಸುತ್ತಾನೆ.
ಕರ್ಣನು ಮಹಾಭಾರತದ ಅತ್ಯಂತ ಪ್ರಸಿದ್ಧ ಮತ್ತು ಸಂಕೀರ್ಣ ವ್ಯಕ್ತಿಗಳಲ್ಲಿ ಒಬ್ಬನು. ಕಥೆಯ ಉದ್ದಕ್ಕೂ ಘನತೆ ಮತ್ತು ದುಷ್ಟತೆ ಎರಡೂ ಗುಣಗಳನ್ನು ಪ್ರದರ್ಶಿಸುತ್ತಾನೆ. ಈ ಲೇಖನದಲ್ಲಿ ಸದ್ಗುರುಗಳು ಅವನ ವಿನಾಶದ ಮೂಲವಾದ ಅವನ ಮನದ ಕಹಿ ಭಾವನೆಯ ಕುರಿತು ವಿವರಿಸುತ್ತಾರೆ.
ಸದ್ಗುರು: ಭಾರತದಲ್ಲಿ ಮಹಾಭಾರತವನ್ನು ಚೆನ್ನಾಗಿ ಬಲ್ಲವರಲ್ಲಿ, ಕರ್ಣನೊಬ್ಬ ಖಳನಾಯಕನೆಂಬ ಒಂದು ಇಡೀ ಸಂಸ್ಕೃತಿಯೇ ಸೃಷ್ಟಿಯಾಗಿದೆ. ಅವನು ಒಂದು ಕೆಟ್ಟು ಹೋದ ಸಿಹಿ ಮಾವು. ಒಬ್ಬ ಅದ್ಭುತ ಮನುಷ್ಯನಾಗಿದ್ದ ಅವನು ಕಹಿ ಭಾವನೆಯಲ್ಲಿ ಬಂಡವಾಳ ಹೂಡಿದ್ದರಿಂದ ಪೂರ್ತಿಯಾಗಿ ಕೆಟ್ಟವನಾದ. ಅವನ ಕಹಿ ಭಾವನೆ ವಿನಾಶದ ಜೀವನಗಾಥೆಯೊಂದಕ್ಕೆ ಕಾರಣವಾಯಿತು. ಅವನು ಅಪಾರವಾದ ಬದ್ಧತೆ ಮತ್ತು ಔದಾರ್ಯದ ಗುಣಗಳನ್ನು ಹೊಂದಿದ ಪುರುಷನಾದರೂ, ಅವೆಲ್ಲವನ್ನೂ ಕಳೆದುಕೊಂಡ. ಅವನು ಯುದ್ಧದಲ್ಲಿ ದಯನೀಯವಾದ ಅಂತ್ಯ ಕಾಣಬೇಕಾಯಿತು.
“ಕೆಳ-ವರ್ಗ”ದಲ್ಲಿ ಹುಟ್ಟಿದ ರಾಜ
ಕರ್ಣನಿಗೆ ತಾನು ಯಾರ ಮಗ ಎಂದು ತಿಳಿಯದೇ ಇದ್ದುದು ಅವನ ಅಸಮಾಧಾನಕ್ಕೆ ಕಾರಣ. ಆದರೆ ಅವನನ್ನು ಸಾಕಿದವರು ಅತ್ಯಂತ ಪ್ರೀತಿಯಿಂದ ಪೋಷಿಸಿದ್ದರು. ಅವನ ಸಾಕು ತಂದೆ ತಾಯಿಯರಾದ ಅಧಿರಥ ಮತ್ತು ರಾಧೆ, ಅವನನ್ನು ಬಹಳ ಪ್ರೀತಿಸುತ್ತಿದ್ದರು ಮತ್ತು ತಮಗೆ ತಿಳಿದಂತೆ ಚೆನ್ನಾಗಿ ಸಲಹಿದ್ದರು. ತನ್ನ ತಾಯಿ ಎಷ್ಟು ಪ್ರೀತಿಸುತ್ತಿದ್ದಳೆಂದು ಅವನು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದ. “ನನ್ನನ್ನು ಬೇಷರತ್ತಾಗಿ ಪ್ರೀತಿಸುತ್ತಿದ್ದ ಏಕೈಕ ವ್ಯಕ್ತಿ ಅವಳೊಬ್ಬಳೇ” ಎಂದು ಅವನು ಹೇಳುತ್ತಾನೆ. ಅವನ ಸಾಮರ್ಥ್ಯ ಮತ್ತು ವಿಧಿಯ ಇಚ್ಛೆಯಂತೆ, ಅವನು ಅಂಗ ದೇಶದ ರಾಜನಾದ. ಅವನು ಅಧಿಕಾರ, ಅರಮನೆಯಲ್ಲಿ ಸ್ಥಾನ ಮತ್ತು ಇನ್ನಿತರ ಅನೇಕ ಸವಲತ್ತುಗಳನ್ನು ಪಡೆದ. ಹಲವಾರು ರೀತಿಗಳಲ್ಲಿ ಅವನು ದೊಡ್ಡ ರಾಜನ ಬಂಟನಾದ. ದುರ್ಯೋಧನನು ಅವನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದನು ಮತ್ತು ಅವನಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದನು. ಜೀವನ ಕೊಡಬಹುದಾದದುದೆಲ್ಲವನ್ನೂ ಕರ್ಣನು ಹೊಂದಿದ್ದನು. ಅವನ ಜೀವನವನ್ನು ನೀವು ನೋಡಿದರೆ, ಅವನಿಗೆ ಕಡಿಮೆಯೇನಿರಲಿಲ್ಲ; ಸಾರಥಿಯ ಮಗನೊಬ್ಬ ರಾಜನಾಗಿದ್ದ. ಅವನು ನಿಜವಾಗಿಯೂ ಸಂತೋಷವಾಗಿರಬೇಕಾಗಿತ್ತು. ನೀರಿನಲ್ಲಿ ತೇಲುತ್ತಾ ಸಿಕ್ಕಿದ್ದ ಮಗುವೊಂದು ಬೆಳೆದು ರಾಜನಾಗಿತ್ತು. ಅದೊಂದು ಅದ್ಭುತ ಸಂಗತಿಯಲ್ಲವೇ? ಆದರೆ, ಇಲ್ಲ, ಅವನು ತನ್ನ ಮುನಿಸನ್ನು ತೊರೆಯಲಿಲ್ಲ. ಅವನು ಯಾವಾಗಲೂ ಅಸಂತುಷ್ಟನಾಗಿದ್ದ ಮತ್ತು ದುಃಖಿಯಾಗಿದ್ದ. ಏಕೆಂದರೆ, ತನಗೆ ಹಚ್ಚಲ್ಪಟ್ಟಿದ್ದ ಹಣೆಪಟ್ಟಿಯೊಂದಿಗೆ ಅವನಿಗೆ ನೆಮ್ಮದಿಯನ್ನು ಕಂಡುಕೊಳ್ಳಲಾಗಲಿಲ್ಲ. ಅವನು ಎಲ್ಲೇ ಹೋದರೂ, ಅವನ ಮಹತ್ವಾಕಾಂಕ್ಷೆಯ ಕಾರಣದಿಂದ, ಜನರು ಅವನನ್ನು “ಸೂತ ಪುತ್ರ” ಅಂದರೆ ಕೆಳ ವರ್ಗದವ ಎಂದು ಕರೆಯುತ್ತಿದ್ದರು. ಅವನು ತನ್ನ ಇಡೀ ಜೀವನವನ್ನು ಇದರ ಬಗ್ಗೆ ಹಲುಬುತ್ತ ಕಳೆದ. ಅವನು ಯಾವಾಗಲೂ ತನ್ನ ತಥಾ ಕಥಿತ “ಕೀಳು ಜನ್ಮ”ದ ಬಗ್ಗೆ ತನ್ನೊಳಗೆ ಒಂದು ಕಹಿ ಭಾವನೆಯನ್ನು ಪೋಷಿಸುತ್ತಿದ್ದ.
ಈ ಕಹಿ ಭಾವನೆಯು ಮಹಾಭಾರತದ ಅದ್ಭುತ ಮನುಷ್ಯನೊಬ್ಬನನ್ನು ಕೆಟ್ಟ ಮತ್ತು ಕುರೂಪಿ ಪಾತ್ರವನ್ನಾಗಿಸಿತು. ಅವನೊಬ್ಬ ಮಹಾಪುರುಷನಾಗಿದ್ದ ಮತ್ತು ವಿಭಿನ್ನ ಪರಿಸ್ಥಿತಿಗಳಲ್ಲಿ ಅವನ ಗರಿಮೆಯನ್ನು ಪ್ರದರ್ಶಿಸಿದ್ದ, ಆದರೆ ಅವನ ಕಹಿ ಭಾವನೆಯ ಕಾರಣದಿಂದ, ಹಲವಾರು ರೀತಿಗಳಲ್ಲಿ ಅವನೇ ಎಲ್ಲವನ್ನೂ ಕೆಡಿಸಿಕೊಂಡ. ದುರ್ಯೋಧನನಿಗೆ, ಶಕುನಿ ಏನೇ ಹೇಳಿದರೂ ಅಥವಾ ಮಾಡಿದರೂ, ಯಾವಾಗಲೂ ಕರ್ಣನ ಸಲಹೆಯೇ ಅಂತಿಮವಾಗಿ ನಿರ್ಣಾಯಕವಾಗಿತ್ತು. ಎಲ್ಲವೂ ನಿರ್ಧಾರವಾದ ನಂತರ, ಅವನು ಕರ್ಣನ ಕಡೆಗೆ ನೋಡಿ “ನಾವೇನು ಮಾಡೋಣ?” ಎನ್ನುತ್ತಿದ್ದ. ಕರ್ಣ ಇಡೀ ಕಥೆಯ ದಿಕ್ಕನ್ನು ಬಹಳ ಸುಲಭವಾಗಿ ತಿರುಗಿಸಬಹುದಿತ್ತು.
ದುರಂತ ಮತ್ತು ತ್ಯಾಗ
ಅವನು ಜೀವನವು ಒಂದಾದ ಮೇಲೊಂದರಂತೆ ದುರಂತ ಮತ್ತು ತ್ಯಾಗದ ಅನೇಕ ಹಂತಗಳಲ್ಲಿ ಸಾಗಿಹೋಯಿತು. ಅವನು ನಿರಂತರವಾಗಿ ತನ್ನ ತ್ಯಾಗದ ಗುಣವನ್ನು ಪ್ರದರ್ಶಿಸಿದ. ಆದರೂ ಅದರಿಂದ ಏನೂ ಒಳ್ಳೆಯದಾಗಲಿಲ್ಲ, ಏಕೆಂದರೆ ಅವನಿಗೆ ಅತ್ಯಂತ ಮುಖ್ಯವಾಗಿದ್ದ ಸಂಗತಿಯೇ ಅವನನ್ನು ನಾಶಗೊಳಿಸಿತು; ಅದೇನೆಂದರೆ ಕೊನೆಯ ಪಕ್ಷ ಸಮಾಜದ ದೃಷ್ಟಿಯಲ್ಲಾದರೂ ತಾನು ಏನಲ್ಲವೋ ಅದಾಗ ಬಯಸಿದ್ದ. ಅವನು ನಿಜವಾಗಿಯೂ ಹಾಗಿದ್ದಿರಲೂಬಹುದು, ಆದರೆ ಸಮಾಜದ ದೃಷ್ಟಿಯಲ್ಲಿ ಅವನು ತಾನು ಏನಲ್ಲವೋ ಅದಾಗಲು ಬಯಸುತ್ತಿದ್ದ ಒಬ್ಬ ವ್ಯಕ್ತಿಯಾಗಿದ್ದ. ಈ ಗೀಳಿನ ಕಾರಣದಿಂದ, ಅವನು ನಿರಂತರವಾಗಿ ತಪ್ಪುಗಳನ್ನು ಎಸೆದ. ಅವನು ಬುದ್ಧಿವಂತ ವ್ಯಕ್ತಿಯಾಗಿದ್ದ. ದುರ್ಯೋಧನನು ಮಾಡುತ್ತಿರುವುದು ತಪ್ಪು ಎಂಬ ಸಂಗತಿಯನ್ನು ತಿಳಿಯುವಷ್ಟು ಅರಿವು ಅವನಿಗಿತ್ತು. ಆದರೆ ಅವನು ಓರ್ವ ನಿಷ್ಕ್ರಿಯ ಭಾಗಿಯಾಗಿರದೇ ಸಕ್ರಿಯವಾಗಿ ಹಲವಾರು ಬಾರಿ ದುರ್ಯೋಧನನಿಗೆ ದುರ್ಬೋಧೆಯನ್ನು ಮಾಡುತ್ತಿದ್ದ. ಕರ್ಣನು ನಿಷ್ಠೆ ಮತ್ತು ಕೃತಜ್ಞತೆಯ ಬದಲಾಗಿ ತನ್ನ ಬುದ್ಧಿಯನ್ನು ಉಪಯೋಗಿಸಿದಿದ್ದರೆ ದುರ್ಯೋಧನನ ಜೀವವನ್ನು ಉಳಿಸಬಹುದಾಗಿತ್ತು. ಅವನು ತನ್ನ ಬುದ್ಧಿಯನ್ನು ಬಳಸಿಕೊಳ್ಳುವಲ್ಲಿ ವಿಫಲನಾದ ಮತ್ತು ಒಂದು ತಪ್ಪಿನಿಂದ ಇನ್ನೊಂದು ತಪ್ಪಿನ ಕಡೆಗೆ ಸಾಗುತ್ತಲೇ ಹೋದ.
ತಪ್ಪು ತಿರುವುಗಳಿಂದ ಕೂಡಿದ ಜೀವನ
ಕೃಷ್ಣನು ಸಂಧಾನಕ್ಕಾಗಿ ಬಂದಾಗ, ಕರ್ಣನೊಂದಿಗೆ ಮಾತನಾಡುತ್ತಾನೆ. “ನೀನು ಹೀಗೇಕೆ ನಿನಗೆ ನೀನೇ ಹಾನಿ ಮಾಡಿಕೊಳ್ಳುತ್ತಿರುವೆ? ನೀನು ಹೀಗಲ್ಲ. ನಿನ್ನ ತಂದೆ ತಾಯಿಗಳು ಯಾರು ಎಂಬುದನ್ನು ಹೇಳುತ್ತೇನೆ ಕೇಳು. ಕುಂತಿ ನಿನ್ನ ತಾಯಿ ಮತ್ತು ಸೂರ್ಯನು ನಿನ್ನ ತಂದೆ” ಎಂದು ಹೇಳುತ್ತಾನೆ. ಆ ಕ್ಷಣ, ಕರ್ಣನು ಭಾವುಕನಾಗುತ್ತಾನೆ. ಯಾವಾಗಲೂ, ತಾನು ಯಾರು ಎಲ್ಲಿಂದ ಬಂದೆ ಎನ್ನುವುದನ್ನು ತಿಳಿದುಕೊಳ್ಳಬೇಕೆಂಬುದು ಅವನ ಹಂಬಲವಾಗಿತ್ತು. ತನ್ನನ್ನು ಆ ಪುಟ್ಟ ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ತೇಲಿ ಬಿಟ್ಟವರು ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕೆಂಬುದು ಅವನ ನಿತ್ಯದ ಹಂಬಲವಾಗಿತ್ತು. ಆಗ ಇದ್ದಕ್ಕಿದ್ದಂತೆ, ಸಹಜವಾದ ಕಾರಣವಿಲ್ಲದಿದ್ದರೂ, ತಾನು ಪಾಂಡವರ ಮೇಲೆ ಹಗೆ ಸಾಧಿಸುತ್ತಿರುವ ಸಂಗತಿಯನ್ನು ಅವನು ಮನಗಾಣುತ್ತಾನೆ. ಏಕೆಂದರೆ, ದುರ್ಯೋಧನನ ಬಗ್ಗೆ ಅವನಿಗಿರುವ ಕೃತಜ್ಞತಾ ಭಾವನೆಯಿಂದ, ಎಲ್ಲೋ ಒಂದು ಕಡೆ, ತಾನು ಪಾಂಡವರನ್ನು ದ್ವೇಷಿಸಬೇಕು ಎಂದು ಭಾವಿಸಿಕೊಂಡಿದ್ದ. ಅವನ ಹೃದಯದಲ್ಲಿ ದ್ವೇಷ ವಿಲ್ಲದಿದ್ದರೂ, ತಾನಾಗಿ ಹಗೆಯನ್ನು ಸಾಧಿಸುತ್ತಾ ಎಲ್ಲರಿಗಿಂತಲೂ ಸಂಕುಚಿತ ಮನೋಭಾವದವನಾಗಿ ರೂಪುಗೊಂಡ. ಶಕುನಿ ಒಂದು ನೀಚ ಸಂಗತಿಯನ್ನು ಹೇಳಿದರೆ, ಕರ್ಣ ಇನ್ನೊಂದು ನೀಚ ಸಂಗತಿಯನ್ನು ಹೇಳುತ್ತಿದ್ದ. ಮತ್ತು ಅವನು ಅಲ್ಲಿಗೇ ನಿಲ್ಲುತ್ತಿರಲಿಲ್ಲ. ಏಕೆಂದರೆ ದುರ್ಯೋಧನನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ತನ್ನ ನಿಷ್ಠೆ ಮತ್ತು ಕೃತಜ್ಞತೆಗಳನ್ನು ಸಾಬೀತು ಪಡಿಸುವ ಸಲುವಾಗಿ ತನ್ನೊಳಗಿನ ದ್ವೇಷವನ್ನು ಹೆಚ್ಚಿಸುತ್ತಲೇ ಹೋದ. ಅವನೊಳಗೆ ಎಲ್ಲೋ ಒಂದು ಕಡೆ ತಾನು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರೂ, ಅವನ ನಿಷ್ಠೆ ಬಹಳ ಗಟ್ಟಿಯಾಗಿದ್ದ ಕಾರಣ ಅವನು ದ್ವೇಷ ಸಾಧನೆ ಮಾಡುತ್ತಲೇ ಇದ್ದ. ಅವನೊಬ್ಬ ಅದ್ಭುತ ವ್ಯಕ್ತಿ, ಆದರೆ ಅವನು ನಿರಂತರವಾಗಿ ತಪ್ಪುಗಳನ್ನು ಮಾಡುತ್ತಲೇ ಹೋದ. ನಮ್ಮೆಲ್ಲರ ಜೀವನಗಳೂ ಹಾಗೆಯೇ – ನಾವೊಂದು ತಪ್ಪು ನಿರ್ಧಾರವನ್ನು ಕೈಗೊಂಡರೆ, ಆಮೇಲೆ ಅದರಿಂದ ಚೇತರಿಸಿಕೊಳ್ಳಲು ಹತ್ತು ವರ್ಷಗಳು ಬೇಕಾಗುತ್ತದೆ, ಅಲ್ಲವೇ? ಅವನು ಚೇತರಿಸಿಕೊಳ್ಳಲೇ ಇಲ್ಲ, ಏಕೆಂದರೆ ಅವನು ತಪ್ಪು ಆಯ್ಕೆಗಳನ್ನು ಮಾಡುತ್ತಲೇ ಹೋದ.
ಜೀವನ ನ್ಯಾಯಪೂರ್ಣವಾಗಿದೆ!
ಈ ಸೃಷ್ಟಿಯು ಯಾರು ಒಳ್ಳೆಯವರು ಅಥವಾ ಕೆಟ್ಟವರು ಎಂಬ ತೀರ್ಪನ್ನು ನೀಡುವುದಿಲ್ಲ. ಸಾಮಾಜಿಕ ಪರಿಸ್ಥಿತಿಗಳು ಮಾತ್ರ ಜನರನ್ನು ಒಳ್ಳೆಯವರು ಮತ್ತು ಕೆಟ್ಟವರು ಎಂದು ತೀರ್ಪು ನೀಡಲು ಪ್ರಯತ್ನಿಸುತ್ತವೆ. ಕೇವಲ ಮನುಷ್ಯರು ಮಾತ್ರ ನೀವು ಒಳ್ಳೆಯವರು ಅಥವಾ ಕೆಟ್ಟವರು ಎಂದು ನಿರ್ಧರಿಸುವ ಪ್ರಯತ್ನ ಮಾಡುತ್ತಾರೆ. ಅಸ್ತಿತ್ವವು ಎಂದೂ ತೀರ್ಪು ನೀಡುವುದಿಲ್ಲ ಏಕೆಂದರೆ, ಇದು ಒಳ್ಳೆಯದು ಮತ್ತು ಇದು ಕೆಟ್ಟದ್ದು ಎಂದು ಎಲ್ಲೂ ಬರೆದಿಲ್ಲ. ನೀವು ಸರಿಯಾದ ಕೆಲಸಗಳನ್ನು ಮಾಡಿದರೆ, ಸರಿಯಾದ ಪರಿಣಾಮಗಳು ಆಗುತ್ತವೆ ಅಷ್ಟೆ. ಸರಿಯಾದುದನ್ನು ಮಾಡಲಿಲ್ಲವೆಂದರೆ, ನಿಮ್ಮ ಜೀವನದಲ್ಲಿ ಸರಿಯಾದುದು ಆಗುವುದಿಲ್ಲ. ನನ್ನ ಅಭಿಪ್ರಾಯದಲ್ಲಿ ಅದು ಸಂಪೂರ್ಣವಾಗಿ ನ್ಯಾಯಯುತವಾಗಿದೆ! ಸಮಾಜ ನ್ಯಾಯಯುತವಾಗಿಲ್ಲದೇ ಇರಬಹುದು, ಆದರೆ ಅಸ್ತಿತ್ವವು ಖಚಿತವಾಗಿ ನ್ಯಾಯಯುತವಾಗಿದೆ. ನೀವು ಸರಿಯಾದ ಸಂಗತಿಗಳನ್ನು ಮಾಡದಿದ್ದರೆ, ನಿಮ್ಮ ಜೀವನದಲ್ಲಿ ಸರಿಯಾದ ಸಂಗತಿಗಳು ನಡೆಯುವುದಿಲ್ಲ. ಅಸ್ತಿತ್ವವು ಹೀಗಿರದಿದ್ದಲ್ಲಿ, ಸರಿಯಾದ ಸಂಗತಿಗಳನ್ನು ಮಾಡುವುದಕ್ಕೆ ಮತ್ತು ಮನುಷ್ಯನ ಬುದ್ಧಿಶಕ್ತಿಗೆ ಯಾವ ಮೌಲ್ಯವೂ ಇರುತ್ತಿರಲಿಲ್ಲ. ನೀವು ತಪ್ಪು ಕೆಲಸಗಳನ್ನು ಮಾಡಿದರೂ ನಿಮಗೆ ಒಳ್ಳೆಯದಾಗುವ ಹಾಗಿದ್ದರೆ, ನಾವು ಜೀವನದಲ್ಲಿ ಯಾವ ಸಂಗತಿಗಳಿಗೆ ಬೆಲೆ ಕೊಡುತ್ತೇವೋ ಅವುಗಳಿಗೆ ಮೌಲ್ಯವಿಲ್ಲದಂತಾಗುತ್ತದೆ. ಜೀವನ ಹಾಗೆ ನಡೆಯುವುದಿಲ್ಲ.
ಸಂಪಾದಕರ ಟಿಪ್ಪಣಿ: ಕೃಷ್ನನ ಬಗ್ಗೆ ಸದ್ಗುರುಗಳ ಹೆಚ್ಚಿನ ಒಳನೋಟಗಳಿಗಾಗಿ “ಲೀಲಾ” ಸರಣಿಯನ್ನು ವೀಕ್ಷಿಸಿ.