ಕುಟುಂಬದ ಪ್ರಾಮುಖ್ಯತೆ
ನಾವು ಕುಟುಂಬಗಳನ್ನು ಏತಕ್ಕಾಗಿ ಕಟ್ಟುತ್ತೇವೆ ಮತ್ತು ಆ ಕಾರಣಗಳನ್ನು ನಾವು ಕಡೆಗಣಿಸಿದಾಗ, ಅವು ಪ್ರೀತಿಯ ಬಂಧಗಳಾಗಿರುವ ಬದಲು ಬಂಧನಗಳಾಗಿ ಹೇಗೆ ಮಾರ್ಪಾಡಾಗುತ್ತವೆ ಎಂಬುದರ ಕಡೆಗೆ ಸದ್ಗುರುಗಳು ಗಮನವನ್ನು ಹರಿಸುತ್ತಾರೆ.
ಶಂಕರನ್ ಪಿಳೈ, “ನಾನು ಪಕ್ಕದ ಬೀದಿಯಲ್ಲಿರುವ ಲೂಸಿಯನ್ನ ಮದುವೆಯಾಗ್ತಿದ್ದೀನಿ” ಎಂದ.
ಅದನ್ನು ಕೇಳಿ ಅವನ ತಂದೆ, “ಏನು? ನೀನು ಆ ಲೂಸಿಯನ್ನ ಮದುವೆಯಾಗ್ತಿದ್ದೀಯ? ನಮಗೆ ಅವಳ ಮನೆತನ ಏನೂ ಗೊತ್ತಿಲ್ಲ.” ಎಂದರು.
ಅವನ ತಾಯಿ, “ಏನು? ನೀನು ಆ ಲೂಸಿಯನ್ನ ಮದುವೆಯಾಗ್ತಿದ್ದೀಯ? ಅವಳ ಹೆಸರಲ್ಲಿ ಯಾವ ಆಸ್ತಿನೂ ಇಲ್ಲ.” ಎಂದರು.
ಅವನ ಚಿಕ್ಕಪ್ಪ “ಏನು? ನೀನು ಆ ಲೂಸಿಯನ್ನ ಮದುವೆಯಾಗ್ತಿದ್ದೀಯ? ಅವಳ ಕೂದಲು ಎಷ್ಟು ಅಸಹ್ಯವಾಗಿದೆ.” ಎಂದರು.
ಅವನ ಚಿಕ್ಕಮ್ಮ ಕೂಡ ಮೂಗು ತೂರಿಸಿ, “ಏನು? ನೀನು ಆ ಲೂಸಿಯನ್ನ ಮದುವೆಯಾಗ್ತಿದ್ದೀಯ? ಅವಳು ಎಷ್ಟು ಕೆಟ್ಟದಾಗಿ ಮೇಕಪ್ ಮಾಡಿಕೊಳ್ತಾಳೆ.” ಎಂದು ಹೇಳಿದರು.
ಅವನ ಅಣ್ಣನ ಪುಟ್ಟ ಮಗನೂ ಸಹ “ಏನು? ನೀನು ಆ ಲೂಸಿಯನ್ನ ಮದುವೆಯಾಗ್ತಿದ್ದೀಯ? ಅವಳಿಗೆ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲ.” ಎಂದು ತನ್ನ ಅನಿಸಿಕೆಯನ್ನು ಹೇಳಿದನು.
ಶಂಕರನ್ ಪಿಳೈ ದೃಢ ನಿರ್ಧಾರದಿಂದ, “ಹೌದು, ನಾನು ಲೂಸಿಯನ್ನೇ ಮದುವೆ ಮಾಡಿಕೊಳ್ಳೋದು, ಯಾಕಂದ್ರೆ ಅದರಲ್ಲಿ ಒಂದು ದೊಡ್ಡ ಅನುಕೂಲವಿದೆ.” ಎಂದು ಹೇಳಿದ.
“ಏನದು?” ಎಂದು ಎಲ್ಲರೂ ಕೇಳಿದರು
“ಅವಳಿಗೆ ಕುಟುಂಬವಿಲ್ಲ.” ಎಂದು ಶಂಕರನ್ ಪಿಳೈ ಹೇಳಿದನು.
ನಾವು ಏತಕ್ಕಾಗಿ ಕುಟುಂಬಗಳನ್ನು ಕಟ್ಟುತ್ತೇವೆ?
ಒಂದು ಮಗು ಹುಟ್ಟಿದಾಗ, ಬೇರೆ ಪ್ರಾಣಿಗಳು ಹುಟ್ಟಿದಾಗ ಇರುವ ರೀತಿಯಲ್ಲಿ ಅದಿರುವುದಿಲ್ಲ. ಅದಕ್ಕೆ ಪೋಷಣೆ ಹಾಗೂ ಕಲಿಕೆ ಬೇಕಾಗುತ್ತದೆ ಮತ್ತು ಅದರ ಸ್ವಭಾವವನ್ನು ರೂಪಿಸುವ ಅಗತ್ಯವಿರುತ್ತದೆ. ಹಾಗಾಗಿ ಕುಟುಂಬದ ಅವಶ್ಯಕತೆ ಹುಟ್ಟಿಕೊಂಡಿತು. ಮಾನವನ ಬೆಳವಣಿಗೆಗೆ ಕುಟುಂಬವು ಒಂದು ಅತ್ಯಂತ ಸಮರ್ಥವಾದ ತಳಹದಿಯಾಗಿದೆ. ಆದರೆ ಅನೇಕರಿಗೆ, ಕುಟುಂಬವು ಬೆಂಬಲದ ಸೆಲೆಯಾಗಿರದೆ, ಅಡಚಣೆಯಾಗಿರುತ್ತದೆ. ಅದು ಅವರನ್ನು ಉನ್ನತಿಗೇರಿಸುವ ಪ್ರಕ್ರಿಯೆಯಾಗುವುದಿಲ್ಲ, ಬದಲಿಗೆ ಅದೊಂದು ಸಂಕಷ್ಟದ ಮಾರ್ಗವಾಗಿ ಬದಲಾಗುತ್ತದೆ. ಕುಟುಂಬವು ಒಂದು ಸಮಸ್ಯೆಯೆಂದಲ್ಲ, ಸಮಸ್ಯೆ ನೀವು ಅದನ್ನು ನಿಭಾಯಿಸುವ ರೀತಿಯದ್ದು.
ನಿಮ್ಮ ಯೋಗಕ್ಷೇಮಕ್ಕಾಗಿ ರಚಿಸಲಾದ ಯಾವುದನ್ನೇ ಆದರೂ ಅನನುಕೂಲತೆಯಾಗಿ ಪರಿವರ್ತಿಸಬಹುದು ಎಂಬುದಕ್ಕೆ ಕುಟುಂಬವು ಒಂದು ಉದಾಹರಣೆಯಾಗಿದೆ. ಈ ರೀತಿ ನಡೆಯುವುದನ್ನು ನೀವು ಬೇರೆ ಬೇರೆ ರೀತಿಗಳಲ್ಲಿ ನೋಡುತ್ತೀರಿ. ಉದಾಹರಣೆಗೆ, ಸಂಪತ್ತು ಯೋಗಕ್ಷೇಮವನ್ನು ತರಬೇಕಿತ್ತು, ಆದರೆ ಹೆಚ್ಚಿನವರು ಇದನ್ನು ವಿಷದಂತೆ ಬಳಸುತ್ತಾರೆ. ಶಿಕ್ಷಣವು ಹಿತ ಮತ್ತು ಸೌಖ್ಯವನ್ನು ತರಬೇಕಿತ್ತು, ಆದರೆ ಇಂದು ವಿದ್ಯಾವಂತರೇ ಭೂಮಿಯನ್ನು ನಾಶಪಡಿಸುತ್ತಿದ್ದಾರೆ. ಯೋಗಕ್ಷೇಮಕ್ಕಾಗಿ ನೀಡಲಾಗಿರುವ ವಿಷಯಗಳು ನಮಗೊಂದು ದೊಡ್ಡ ಆಶೀರ್ವಾದವಾಗಿರಬಹುದಿತ್ತು, ಆದರೆ ಅವು ಮಾನವ ಜನಾಂಗದ ಅಸ್ತಿತ್ವವನ್ನೇ ಬೆದರಿಸುತ್ತಿವೆ.
ಅಂತೆಯೇ ನಮ್ಮ ಬೆಂಬಲ ಮತ್ತು ಬೆಳವಣಿಗೆಗೆ ಒಂದು ಸಾಧನವಾಗಿ ಇರಬೇಕಾದ ಕುಟುಂಬ ,ಅನೇಕರಿಗೆ ಸಿಲುಕಿಕೊಳ್ಳುವ ಪ್ರಕ್ರಿಯೆ ಮತ್ತು ಹೊರೆಯಾಗಿದೆ. ಕುಟುಂಬವು ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಮಾತ್ರ ಸುಂದರವಾಗಿರುತ್ತದೆ, ಇಲ್ಲದಿದ್ದರೆ ಅದು ತುಂಬ ಅಸಹನೀಯ ವಿಷಯವಾಗುತ್ತದೆ.
ಕುಟುಂಬವು ಕರ್ತವ್ಯದ ಬಗ್ಗೆಯಲ್ಲ
ಕುಟುಂಬವೆಂದರೆ ಅವಲಂಬನೆ ಎಂದರ್ಥವಲ್ಲ, ಅದು ನೀವು ರೂಪಿಸಿಕೊಂಡ ಒಂದು ರೀತಿಯ ಸಹಭಾಗಿತ್ವವಾಗಿದೆ. ಇಬ್ಬರೂ ಸ್ವಇಚ್ಛೆಯಿಂದ ಒಟ್ಟಾಗಿ ಒಂದೇ ದಿಕ್ಕಿನಲ್ಲಿ ಹೋಗುತ್ತಿದ್ದರೆ ಮಾತ್ರ ಸಹಭಾಗಿತ್ವಗಳು ಅಮೂಲ್ಯವಾಗಿರುತ್ತವೆ. ಇಬ್ಬರೂ ಸಹಭಾಗಿಗಳು ಪರಸ್ಪರರ ಯೋಗಕ್ಷೇಮದ ಬಗ್ಗೆ ನಿರಂತರವಾಗಿ ಕಳಕಳಿಯನ್ನು ಹೊಂದಿದ್ದರೆ, ಸಹಭಾಗಿತ್ವವು ಅರ್ಥಪೂರ್ಣವಾಗಿರುತ್ತದೆ. ಅದು ಕೇವಲ ನಿಮ್ಮ ಬಗ್ಗೆಯಾಗಿದ್ದರೆ - ಅದು ಕುಟುಂಬದ ವಿಷಯ ಅಥವಾ ಕೆಲಸದ ವಿಷಯ ಅಥವಾ ಆಧ್ಯಾತ್ಮಿಕತೆಯ ವಿಷಯ ಅಥವಾ ಇನ್ಯಾವುದೇ ವಿಷಯವಾಗಿರಬಹುದು - ಸಹಭಾಗಿತ್ವವು ಅಂತಹ ವ್ಯಕ್ತಿಗೆ ಅಸಂಬದ್ಧವಾಗುತ್ತದೆ. ಹೀಗಿದ್ದಾಗ ನೀವು ಆ ಸಹಭಾಗಿತ್ವದಲ್ಲಿ ಮುಂದುವರೆದರೆ, ನೀವು ಇಬ್ಬರಿಗೂ ದೊಡ್ಡ ಅವ್ಯವಸ್ಥೆಯನ್ನೇ ಸೃಷ್ಟಿಸುತ್ತೀರಿ.
ಕರ್ತವ್ಯದ ಕಾರಣದಿಂದಾಗಿ ನೀವು ಕುಟುಂಬದಲ್ಲಿರುವುದಿಲ್ಲ. ನೀವು ನಿರ್ಮಿಸಿಕೊಂಡ ಪ್ರೀತಿಯ ಬಾಂಧವ್ಯದ ಕಾರಣದಿಂದಾಗಿ ನೀವು ಕುಟುಂಬದಲ್ಲಿರುತ್ತೀರಿ. ಪ್ರೀತಿಯ ಬಾಂಧವ್ಯವಿದ್ದ ಕಡೆ ಯಾರೂ ನಿಮಗೆ ಏನು ಮಾಡಬೇಕು ಏನು ಮಾಡಬಾರದು ಎಂದು ಹೇಳುವ ಅಗತ್ಯವಿರುವುದಿಲ್ಲ. ಯಾವುದರ ಅಗತ್ಯವಿರುತ್ತದೆಯೋ ಅದನ್ನು ನೀವು ಮಾಡುತ್ತೀರಿ.
ಹೆಚ್ಚಿನದ್ದಕ್ಕಾಗಿ ಆಕಾಂಕ್ಷೆ
ಆದರೆ ನೀವು ಯಾರೊಂದಿಗಾದರೂ ಅಥವಾ ಒಂದು ಜನರ ಸಮೂಹದೊಂದಿಗೆ ಪ್ರೀತಿಯ ಬಾಂಧವ್ಯವನ್ನು ಕಟ್ಟಿಕೊಂಡ ಮಾತ್ರಕ್ಕೆ ನೀವು ನಿಮ್ಮ ಜೀವನದಲ್ಲಿ ಹೆಚ್ಚಿನದ್ದೇನನ್ನಾದರೂ ಬಯಸಬಾರದು ಎಂದರ್ಥವಲ್ಲ. ನಿಮ್ಮ ಸುತ್ತಲಿನ ಜನರಿಗೆ ನೀವು ಮಾಡಬಹುದಾದ ಅತ್ಯುತ್ತಮವಾದ ಸಂಗತಿಯೆಂದರೆ ಒಬ್ಬ ಮನುಷ್ಯ ಇರಲು ಸಾಧ್ಯವಿರುವ ಅತಿ ಶ್ರೇಷ್ಠ ರೀತಿಯಲ್ಲಿ ನಿಮ್ಮನ್ನು ನೀವು ಸಿದ್ಧಗೊಳಿಸಿಕೊಳ್ಳುವುದಾಗಿದೆ. ನೀವದನ್ನು ಬೆಂಬತ್ತಿ ಹೋಗಬೇಕು. ನೀವು ಹೆಚ್ಚು ಬೆಳೆದಷ್ಟೂ, ನಿಮ್ಮ ಸುತ್ತಲಿರುವವರಿಗೆ ಅಷ್ಟೇ ಹೆಚ್ಚು ನೆರವಾಗುತ್ತೀರಿ. ನಿಮ್ಮ ಕುಟುಂಬದವರಿಗಿದು ಅರ್ಥವಾಗದಿದ್ದರೆ, ನೀವವರ ಮಟ್ಟದಲ್ಲೇ ಇದ್ದು, ಅದೇ ಮಿತಿಗಳು ಮತ್ತದೇ ಸಮಸ್ಯೆಗಳೊಂದಿಗೆ ಹೋರಾಡುತ್ತ, ಅದರಾಚೆಗಿನ ಸ್ವಾತಂತ್ರ್ಯವನ್ನು ಬಯಸಬಾರದು ಎನ್ನುವುದು ಅವರೊಂದಿಗೆ ಬದುಕಬಹುದಾದ ಏಕೈಕ ಮಾರ್ಗವೆಂದು ಅವರು ತಿಳಿದಿದ್ದರೆ, ಅದು ಕುಟುಂಬವಲ್ಲ, ಅದೊಂದು ಮಾಫಿಯಾ. ಪರಸ್ಪರರಿಂದ ಏನನ್ನಾದರು ಹೇಗೆ ಹಿಂಡಬೇಕು ಎನ್ನುವ ಮಾಫಿಯಾವನ್ನು ನೀವು ನೆಡೆಸುತ್ತಿದ್ದರೆ, ಅದು ಕುಟುಂಬವಲ್ಲ. ಪರಸ್ಪರರಿಗೆ ಅತ್ಯುತ್ತಮವಾದುದ್ದನ್ನು ಹೇಗೆ ಕೊಡಬೇಕು ಎಂದು ನೀವು ನೋಡುತ್ತಿದ್ದರೆ, ಅದೊಂದು ನಿಜವಾದ ಕುಟುಂಬ.
ಸಂಪಾದಕರ ಟಿಪ್ಪಣಿ: ಗಂಡ ಅಥವಾ ಹೆಂಡತಿಯೊಂದಿಗಾಗಿರಬಹುದು, ಕುಟುಂಬ ಮತ್ತು ಸ್ನೇಹಿತರೊಂದಿಗಾಗಿರಬಹುದು, ಕಛೇರಿಯಲ್ಲಿನ ಸಹೋದ್ಯೋಗಿಗಳೊಂದಿಗಾಗಿರಬಹುದು ಅಥವಾ ಈ ಇಡೀ ಅಸ್ತಿತ್ವದೊಂದಿಗೇ ಆಗಿರಬಹುದು, ಶಾಶ್ವತವಾದ ಹಾಗೂ ಸಂತೋಷದಾಯಕ ಸಂಬಂಧಗಳನ್ನು ರೂಪಿಸುವ ಸಾಧನಗಳನ್ನು ಸದ್ಗುರುಗಳು ಈ ಇಬುಕ್‌ನಲ್ಲಿ ನೀಡುತ್ತಾರೆ - "Compulsiveness to Consciousness."