ಮಧ್ಯವಯಸ್ಕರಲ್ಲಿನ ತಳಮಳ
ಮಧ್ಯವಯಸ್ಕರಲ್ಲಿನ ತಳಮಳಗಳ ಬಗೆಗಿನ ಪ್ರಶ್ನೆಗೆ ಸದ್ಗುರು ಉತ್ತರಿಸುತ್ತಾ, ಹೇಗೆ ಜೀವನವು ನಿರಂತರ ಬದಲಾವಣೆಯ ಪ್ರಕ್ರಿಯೆಯಾಗಿದೆ ಎಂಬುದನ್ನು ತಿಳಿಸಿಕೊಡುತ್ತಾರೆ.
Q: ಸದ್ಗುರುಗಳೇ, ಇತ್ತೀಚಿಗೆ ನಾನು ನನ್ನ ಜೀವನದಲ್ಲಿ ಒಂದು ಆಳವಾದ ಖಾಲಿತನವನ್ನು ಅನುಭವಿಸುತ್ತಿದ್ದೇನೆ. ಇದು ನನ್ನ ಮಧ್ಯವಯಸ್ಸಿನ ಬಿಕ್ಕಟ್ಟೇ?
ಸದ್ಗುರು: ನಿಮ್ಮ ಬದುಕು ಯಾವಾಗ ಬಿಕ್ಕಟ್ಟಾಗಿರಲಿಲ್ಲ. ಬಾಲ್ಯ ಒಂದು ಬಿಕ್ಕಟ್ಟು, ಯೌವ್ವನ ಒಂದು ಬಿಕ್ಕಟ್ಟು, ಉದ್ಯೋಗ ಸಂಬಂಧಿ ಬಿಕ್ಕಟ್ಟು, ಮಧ್ಯವಯಸ್ಸು ಬಿಕ್ಕಟ್ಟು. ಋತುಬಂಧ ಒಂದು ಬಿಕ್ಕಟ್ಟು. ವೃದ್ಧಾಪ್ಯವೂ ಒಂದು ಬಿಕ್ಕಟ್ಟಾಗುತ್ತದೆ ಮತ್ತು ಸಾವೂ ಒಂದು ಬಿಕ್ಕಟ್ಟಾಗುತ್ತದೆ. ನಿಮ್ಮ ಜೀವನದಲ್ಲಿ ಯಾವಾಗ ಬಿಕ್ಕಟ್ಟು ಇರುವುದಿಲ್ಲ? ನಿಜವಾಗಿ ಮಧ್ಯವಯಸ್ಸು ಸಮತೋಲನೆಯಿಂದಿರಬೇಕು, ಅಲ್ಲವೇ? ಯೌವ್ವನದ ತೊಂದರೆಗಳಿಲ್ಲ, ಮುದಿವಯಸ್ಸು ಇನ್ನೂ ಬರಬೇಕು. ಮಧ್ಯವಯಸ್ಸು ಎಲ್ಲದಕ್ಕಿಂತ ಅತ್ಯುತ್ತಮವಾಗಿರಬೇಕು. ಆದರೆ ಅದನ್ನೇ ನೀವು ಬಿಕ್ಕಟ್ಟು ಎಂದು ಕರೆಯುತ್ತಿದ್ದೀರಿ. ಇದು ಮಧ್ಯವಯಸ್ಸಿನ ಬಿಕ್ಕಟ್ಟಲ್ಲ - ನೀವೇ ಒಂದು ಬಿಕ್ಕಟ್ಟು.
ನಾವು ಏನನ್ನು ಮಧ್ಯವಯಸ್ಸಿನ ಬಿಕ್ಕಟ್ಟು ಎಂದು ಪರಿಗಣಿಸುತ್ತಿರುವೆವೋ ಅದು ನಿಮ್ಮಲ್ಲಿ ಕಳೆದುಹೋದ ಯೌವ್ವನದ ಉತ್ಸಾಹ, ನಿಮ್ಮ ಯೌವ್ವನದಲ್ಲಿ ನೀವು ಲಂಗುಲಗಾಮು ಇಲ್ಲದೆ ಬದುಕಿರಬಹುದು. ಈಗ ಆ ಹುಮ್ಮಸ್ಸು ಇಳಿದಿದೆ. ನೀವು ಮುಂಜಾನೆ 4 ಗಂಟೆಯವರೆಗೆ ಪಾರ್ಟಿ ಮಾಡಲಾಗುತ್ತಿಲ್ಲ. ಆದ್ದರಿಂದ ನಿಮಗೆ ಅದು ಬಿಕ್ಕಟ್ಟೆಂದು ಅನ್ನಿಸುತ್ತಿದೆ.
ನೀವು ಬಿಕ್ಕಟ್ಟೆಂದು ಏನನ್ನು ಕರೆಯುತ್ತಿದ್ದೀರೊ ಅದು ಒಂದು ಬದಲಾವಣೆ ಅಷ್ಟೇ. ನಿಮಗೆ ಬದಲಾವಣೆಯನ್ನು ಹೇಗೆ ನಿಭಾಯಿಸಬೇಕೆಂದು ತಿಳಿದಿಲ್ಲ. ಆದ್ದರಿಂದ ಅದನ್ನು ಬಿಕ್ಕಟ್ಟೆಂದು ಕರೆಯುತ್ತಿದ್ದೀರಿ. ನಿಮಗೆ ಬದಲಾವಣೆ ಬೇಡವೆಂದರೆ ನೀವು ಸತ್ತು ಸಮಾಧಿಯಾಗಿರಬೇಕು ಅಥವಾ ನಿಮಗೆ ಜ್ಞಾನೋದಯವಾಗಬೇಕು. ಅದಲ್ಲದಿದ್ದರೆ ನೀವು ಈ ಭೌತಿಕ ಕ್ರಿಯೆಯಲ್ಲಿದ್ದಷ್ಟು ಕಾಲ ಬದಲಾಗದೆ ಇರುವುದು ಯಾವುದೂ ಇಲ್ಲ. ನೀವು ಉಸಿರಾಡಿದಾಗ ಉಚ್ಛ್ವಾಸ ನಿಶ್ವಾಸಗಳೂ ಬದಲಾವಣೆಗಳೇ. ನೀವು ಬದಲಾವಣೆಗಳನ್ನು ತಡೆಗಟ್ಟಲು ಪ್ರಯತ್ನಿಸಿದರೆ, ನೀವು ಮೂಲಭೂತ ಪ್ರಕ್ರಿಯೆಯನ್ನೇ ತಡೆಯುತ್ತಿದ್ದಂತೆ. ಆಗ ನಿಮಗೆ ಎಲ್ಲ ತರಹದ ಕಷ್ಟಗಳು ಎದುರಾಗುತ್ತವೆ.
ಬದುಕನ್ನು ದುಪ್ಪಟ್ಟು ಗೊಂದಲಮಯ ಮಾಡಿಕೊಳ್ಳಬೇಡಿ
ಬದುಕೆಂದರೆ ಹಲವಾರು ಪರಿಸ್ಥಿತಿಗಳು ಅಷ್ಟೇ. ಕೆಲವು ಪರಿಸ್ಥಿತಿಗಳನ್ನು ನಿಭಾಯಿಸಲು ನಿಮಗೆ ಗೊತ್ತು, ಕೆಲವೊಂದು ನಿಭಾಯಿಸಲು ಗೊತ್ತಿಲ್ಲ. ನಿಮ್ಮ ಜೀವನದಲ್ಲಿ ಬರುವ ಎಲ್ಲ ಪರಿಸ್ಥಿತಿಗಳನ್ನು ನಿಭಾಯಿಸಲು ನಿಮಗೆ ಬಂದರೆ ಆಗ ನೀವು ಉತ್ಸಾಹವನ್ನೇ ಕಳೆದುಕೊಳ್ಳುತ್ತೀರಿ. ಭವಿಷ್ಯದಲ್ಲಿ ಬರುವ ಪರಿಸ್ಥಿತಿಯನ್ನು ನಿಭಾಯಿಸಲು ಬಾರದಿದ್ದಾಗ, ನೀವು ಉತ್ಸುಕರಾಗಿರಬೇಕು, ಆದರೆ ಅದನ್ನು ಬಿಕ್ಕಟ್ಟು ಎಂದು ಆಲೋಚಿಸುತ್ತೀರಿ. ಆದ್ದರಿಂದ ನೀವು ಜೀವನದಲ್ಲಿ ಕೇವಲ ಎರಡು ಆಯ್ಕೆಗಳನ್ನು ಉಳಿಸಿಕೊಂಡಿದ್ದೀರಿ - ಬೇಸರ ಅಥವಾ ಬಿಕ್ಕಟ್ಟು!
ನಿಮಗೆ ಎರಡು ಆಯ್ಕೆಗಳಿವೆ - ನಿರುತ್ಸಾಹ ಅಥವಾ ಬಿಕ್ಕಟ್ಟು. ನೀವು ಎರಡೂ ದಾರಿಗಳನ್ನು ಕಳೆದುಕೊಳ್ಳುವ ಹಾಗೆ ನಿಮ್ಮ ಜೀವನವನ್ನು ಒಂದಕ್ಕೆರಡು ಕೇಡು ಮಾಡಿಕೊಳ್ಳಬೇಡಿ. ನಿಮಗೆ ಒಂದು ಪರಿಸ್ಥಿತಿ ಎದುರಾದಾಗ ಅದನ್ನು ನಿಭಾಯಿಸಲು ಬಾರದಿದ್ದರೆ ಆಗ ನೀವು ನಿಮ್ಮ ದೇಹ, ಮನಸ್ಸು, ಭಾವನೆಗಳು ಮತ್ತು ಶಕ್ತಿಯನ್ನು ಸಂಘಟಿಸಿ, ಅದಕ್ಕೆ ಒಂದು ಪರಿಹಾರವನ್ನು ಕಂಡುಹಿಡಿಯಬೇಕು. ಆದರೆ ಇದನ್ನೆಲ್ಲ ಮಾಡದೆ ನೀವು ಒಂದು ಕಾಂಕ್ರೀಟ್ ಬಂಡೆಯ ಹಾಗೆ ಇದ್ದರೆ ಕಾಂಕ್ರೀಟ್ ಬದಲಾವಣೆಯಾಗದು. ಆ ಕಾಂಕ್ರೀಟ್ ಬಂಡೆ ಜೀವನದ ಎಲ್ಲಾ ಹಂತಗಳನ್ನು ಅದೇ ಆಕಾರ ಮತ್ತು ರೂಪದಲ್ಲಿ ನಡೆಸಬೇಕೆಂದು ಆಲೋಚಿಸುತ್ತದೆ. ಅದು ನಡೆಸುವುದಿಲ್ಲ.
ನಿಮಗೆ ನಲವತ್ತು ವಯಸ್ಸಾದರೂ ಹದಿನೆಂಟು ವಯಸ್ಸಿನವರ ಹಾಗೆ ಬದುಕಬೇಕೆಂದು ಬಯಸುತ್ತೀರಿ, ನಿಮಗೆ ನಲವತ್ತು ವಯಸ್ಸು ಒಂದು ಬಿಕ್ಕಟ್ಟಾಗಿ ಕಾಣಿಸುತ್ತದೆ. ನಲವತ್ತು ಬಿಕ್ಕಟ್ಟಲ್ಲಾ, ಎಂಬತ್ತೂ ಬಿಕ್ಕಟ್ಟಲ್ಲ ಅಥವಾ ಸಾವೂ ಬಿಕ್ಕಟ್ಟಲ್ಲ. ಜೀವನದ ಸಹಜ ಕ್ರಿಯೆಗಳು ಇವು. ಜೀವನದ ಒಂದು ಹಂತದಲ್ಲಿ ನಿಮ್ಮನ್ನು ನೀವು ಗುರುತಿಸಿಕೊಂಡಿರುತ್ತೀರಿ ಆದ್ದರಿಂದ ಮುಂದಿನ ಜೀವನ ನಿಮಗೆ ಬಿಕ್ಕಟ್ಟಾಗಿ ಕಾಣಿಸುತ್ತದೆ. ಯಾವುದೂ ಬಿಕ್ಕಟ್ಟಲ್ಲ, ನಿಮ್ಮ ಜೀವನದಲ್ಲಿ ಕೇವಲ ಪರಿಸ್ಥಿತಿಗಳಷ್ಟೇ ಇರುವುದು. ಜೀವನ ಹೇಗಿದ್ದರೂ ಬದಲಾಗುತ್ತಲೇ ಇರುತ್ತದೆ. ಅದು ನಿಮಗೆ ಬೇಕಾದ ಹಾಗೆ ಬದಲಾಗುತ್ತದೆಯೋ ಅಥವಾ ಹೇಗೇಗೋ ಬದಲಾಗುತ್ತದೆಯೋ? ಅದೊಂದೇ ಪ್ರಶ್ನೆ.
ಅದು ಯಾವುದೇ ರೀತಿಯಲ್ಲಿ ಬದಲಾದರೂ, ಜಡತೆಗಿಂತ ಉತ್ತಮ, ಏಕೆಂದರೆ ಮಾನವನ ಜೀವನ ಜಡತ್ವವನ್ನು ಭರಿಸುವುದಿಲ್ಲ. ಮಧ್ಯವಯಸ್ಸಿನ ಬಿಕ್ಕಟ್ಟು ಎಂದರೆ ‘ನನ್ನ ಜೀವನ ಜಡವಾಗಿದೆ’. ‘ಎಲ್ಲವೂ ಅದೇ, ಅದೇ ಮನೆ, ಅದೇ ಪಾತ್ರೆಗಳು, ಅದೇ ಗಂಡ, ಎಲ್ಲ ಅದೇ - ಎಲ್ಲ ಒಂದೇ ತರಹ ಎನ್ನಿಸುತ್ತದೆ’- ಇದು ನಿಮ್ಮ ಮನಸ್ಸಿನಲ್ಲಿ ನೀವು ಮಾಡಿಕೊಂಡಿರುವ ತೀರ್ಮಾನ. ಆದರೆ ನಿಜವಾಗಲೂ ಪ್ರತಿ ದಿನ, ಪ್ರತಿ ಕ್ಷಣ, ಸೃಷ್ಠಿ ಬದಲಾಗುತ್ತಿದೆ. ನಿಮ್ಮ ದೇಹದಲ್ಲಿ, ನಿಮ್ಮ ಮನಸಿನಲ್ಲಿ ಬದಲಾವಣೆಗಳಾಗಿತ್ತಿದೆ. ಪ್ರತಿಯೊಂದರಲ್ಲೂ ಬದಲಾವಣೆಯಾಗುತ್ತಿದೆ - ಆದರೆ ಇದನ್ನು ನೋಡಲು ನಿಮಗಾಗುತ್ತಿಲ್ಲ ಏಕೆಂದರೆ ನಿಮ್ಮ ಮನಸ್ಸು ತುಂಬಿಹೋಗಿದೆ, ಒಂದು ಚಕ್ರಾಕಾರದಲ್ಲಿ ತಿರುಗುತ್ತಿದೆ. ಈ ಹುಚ್ಚು ಚಕ್ರಾಕಾರದಲ್ಲೇ ನೀವು ಮತ್ತೆ ಮತ್ತೆ ತಿರುಗುತ್ತಿರುವುದರಿಂದ ನಿಮಗೆ ಜೀವನ ಜಡವಾಗಿ ಮತ್ತು ಬಿಕ್ಕಟ್ಟಾಗಿ ಅನ್ನಿಸುತ್ತಿದೆ.
ನಿಮ್ಮ ಸುತ್ತ ಇರುವ ಒಂದೊಂದು ಎಲೆಯನ್ನು ನೀವು ಗಮನಿಸಿದರೆ, ನಿಮಗೆ ತಿಳಿಯುತ್ತದೆ ಬದುಕು ಒಂದು ಸ್ಥಿರವಾದ ಬದಲಾವಣೆ ಎಂದು. ಯಾವುದು ಜಡವಾಗಿಲ್ಲ, ಎಲ್ಲವು ಸತತವಾಗಿ ಬದಲಾಗುತ್ತಿದೆ. ಒಳಗೆ ಮತ್ತು ಹೊರಗೆ ಎಲ್ಲವೂ ಬದಲಾಗುತ್ತಿದೆ. ನೀವು ಜೀವನದಲ್ಲಿ ‘ತೊಡಗಿಕೊಂಡಿ’ದ್ದರೆ ನಿಮಗೆ ಎಂದೂ ಬಿಕ್ಕಟ್ಟು ಎನ್ನಿಸುವುದಿಲ್ಲ, ಆದರೆ ನೀವು ನಿಮ್ಮ ಆಲೋಚನೆಗಳಲ್ಲಿ ಮತ್ತು ಭಾವನೆಗಳಲ್ಲಿ ತೊಡಗಿದ್ದೀರಿ ಆದ್ದರಿಂದ ಅದು ಬಿಕ್ಕಟ್ಟು ಎನ್ನಿಸುತ್ತಿದೆ. ಒಂದು ರೀತಿಯಲ್ಲಿ ಅದು ಬಿಕ್ಕಟ್ಟಾಗಿರುವುದು ಒಳ್ಳೆಯದು, ಏಕೆಂದರೆ ಹಾಗಾಗದಿದ್ದಲ್ಲಿ ನೀವು ಮಿಥ್ಯಾಭಾವನೆಯಿಂದ ಹೊರಗೆ ಬರುವುದಿಲ್ಲ. ನೀವು ಆ ಮಿಥ್ಯದಲ್ಲೇ ನೆಲೆಗೊಳ್ಳುತ್ತೀರಿ.
ಬಿಕ್ಕಟ್ಟು ದುರಂತಕ್ಕಿಂತ ಉತ್ತಮ. ನೀವು ನಿಮ್ಮ ಆಲೋಚನೆಗಳಲ್ಲಿ ಮತ್ತು ಭಾವನೆಗಳಲ್ಲಿ ಮುಳುಗಿಹೋಗಿದ್ದು ನೀವೇನು ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿಯದಿದ್ದರೆ ಅದು ಒಂದು ದುರಂತವೇ. ಬಿಕ್ಕಟ್ಟು ಅದಕ್ಕಿಂತ ಉತ್ತಮ. ಬಿಕ್ಕಟ್ಟು ನಿಮ್ಮನ್ನು ಎಚ್ಚೆರಿಸಬಹುದು, ಆದರೆ ದುರಂತ ನಿಮ್ಮನ್ನು ಮುಗಿಸಿಬಿಡುತ್ತದೆ,
ಈಗ ನೀವು ಅರ್ಥ ಮಡಿಕ್ಕೊಳ್ಳಬೇಕಾಗಿರುವುದು ಬಿಕ್ಕಟ್ಟನ್ನು ಮಾಡಿಕೊಳ್ಳುತ್ತಿರುವುದು ನೀವೇ ಎಂದು. ಇದು 100% ನಿಮ್ಮ ಆಲೋಚನೆಗಳ ಮತ್ತು ಭಾವನೆಗಳ ಮಾಡುವಿಕೆಯೇ - ನಿಸರ್ಗದಿಂದಲ್ಲಾ, ಅಸ್ಥಿತ್ವದಿಂದಲ್ಲಾ ಅಥವಾ ಸೃಷ್ಟಿಯಿಂದಲ್ಲ. ನಿಮ್ಮದೇ ತಯಾರಿಸುವಿಕೆ ಮಾತ್ರವೇ. ಇದನ್ನು ನೀವು ತಿಳಿದುಕೊಳ್ಳದಿದ್ದಲ್ಲಿ ನೀವು ಬಿಕ್ಕಟ್ಟುಗಳನ್ನು ಸೃಷ್ಠಿಸುತ್ತಿರುತ್ತೀರಿ. ನೀವು ಇದು ನಿಮ್ಮ ಮಾಡುವಿಕೆಯೇ ಎಂದು ತಿಳಿದುಕೊಂಡರೆ ನೀವದನ್ನು ನಿಲ್ಲಿಸಬೇಕಾಗಿಲ್ಲ ಅದೇ ಮಾಯವಾಗಿಬಿಡುತ್ತದೆ.
ಸಂಪಾದಕರ ಟಿಪ್ಪಣಿ: ಈಶ ಕ್ರಿಯಾ ಎಂಬುದು ಸದ್ಗುರುಗಳು ವಿನ್ಯಾಸಗೊಳಿಸಿದ ಉಚಿತ ಆನ್‌ಲೈನ್ ಮಾರ್ಗದರ್ಶಿ ಧ್ಯಾನವಾಗಿದೆ, ಇದು ಒಬ್ಬರ ಜೀವನದಲ್ಲಿ ಸ್ಪಷ್ಟತೆ ಮತ್ತು ಯೋಗಕ್ಷೇಮವನ್ನು ತರಲು ಸಹಾಯ ಮಾಡುತ್ತದೆ. ಈ ಸರಳವಾದ ಆದರೂ ಶಕ್ತಿಯುತವಾದ 12 ನಿಮಿಷಗಳ ಧ್ಯಾನವು ಪ್ರತಿಯೊಬ್ಬರಿಗೂ ಒಂದು ಹನಿ ಆಧ್ಯಾತ್ಮಿಕತೆಯನ್ನು ಲಭ್ಯವಾಗುವಂತೆ ಮಾಡುತ್ತದೆ.
’ಈಶ ಕ್ರಿಯಾ’ವನ್ನು ಈಗ ಪ್ರಯತ್ನಿಸಿ
A version of this article was originally published in Isha Forest Flower July 2015. Download as PDF on a “name your price, no minimum” basis or subscribe to the print version.