ನಿಮ್ಮ ಯಶಸ್ಸಿಗೆ ಸಹಕಾರಿಯಾಗುವ ೧೦ ಮಂತ್ರಗಳು
ನಿಮಗೆ ಯಶಸ್ಸು ಎನ್ನುವುದು ಸಿಗಲಾರದ್ದು ಎಂದು ಅನಿಸಿದರೆ, ಬಹುಶಃ ಹೊಸದನ್ನು ಪ್ರಯತ್ನಿಸುವ ಸಮಯ ಇದಾಗಿರಬಹುದು. ನೀವು ಯಶಸ್ಸನ್ನು ಪಡೆಯಲು ಉಪಯುಕ್ತವಾದ ೧೦ ಸಲಹೆಗಳು ಇಲ್ಲಿವೆ.
ನಿಮಗೆ ಯಶಸ್ಸು ಎನ್ನುವುದು ಸಿಗಲಾರದ್ದು ಎಂದು ಅನಿಸಿದರೆ, ಬಹುಶಃ ಹೊಸದನ್ನು ಪ್ರಯತ್ನಿಸುವ ಸಮಯ ಇದಾಗಿರಬಹುದು. ನೀವು ಯಶಸ್ಸನ್ನು ಪಡೆಯಲು ಉಪಯುಕ್ತವಾದ ೧೦ ಸಲಹೆಗಳು ಇಲ್ಲಿವೆ.
#1 ಅದೃಷ್ಟವನ್ನು ಮರೆಯಿರಿ, ಉದ್ದೇಶಪೂರ್ಣರಾಗಿ ಬದುಕಿ
ಸದ್ಗುರು: ಕೆಲವು ಸಲ ಒಳ್ಳೆಯ ಸಂಗತಿಗಳು ಆಕಸ್ಮಿಕವಾಗಿ ನಡೆಯಬಹುದು, ಆದರೆ ನೀವು ಬರೀ ಅಂತಹ ಅವಕಾಶಗಳಿಗೆ ಕಾಯುತ್ತಿದ್ದರೆ, ಅದು ಆಗುವುದು ನೀವು ನಿಮ್ಮ ಸಮಾಧಿಯಲ್ಲಿದ್ದಾಗಷ್ಟೇ. ಏಕೆಂದರೆ ಈ ಅವಕಾಶಗಳು ಬರಲು ತಮ್ಮದೇ ಸಮಯ ತೆಗೆದುಕೊಳ್ಳುತ್ತವೆ. ಕ್ವಾಂಟಮ್ ಥಿಯರಿ ಕೂಡ ಹೇಳುವುದೇನೆಂದರೆ ನೀವು ಒಂದು ಜ಼ಿಲಿಯನ್ (ಅನಿರ್ದಿಷ್ಟವಾದ ಬೃಹತ್ಪ್ರಮಾಣ) ಬಾರಿ ಪ್ರಯತ್ನಪಟ್ಟರೆ ಒಂದು ಬಾರಿ ಗೋಡೆಯ ಮೂಲಕವೇ ಹೋಗಬಹುದು. ಏಕೆಂದರೆ ಪರಮಾಣುಗಳ ಕಣಗಳ ಅಸ್ತಿತ್ವವು ಮಿಣುಗುತ್ತಿರುತ್ತದೆ. ಆದರೆ ನೀವು ಆ ಜ಼ಿಲಿಯನ್ ನಲ್ಲಿ ಒಂದು ಬಾರಿಯನ್ನು ಮುಟ್ಟುವಷ್ಟರಲ್ಲಿ ನಿಮ್ಮ ತಲೆಬುರುಡೆ ಒಡೆದಿರುತ್ತದೆ. ನೀವು ಅದೃಷ್ಟಕ್ಕಾಗಿ ಕಾಯುತ್ತಾ ಬದುಕಿದರೆ ನೀವು ಯಾವಾಗಲೂ ಭಯ ಮತ್ತು ಆತಂಕದಲ್ಲಿರುತ್ತೀರಿ. ಆದರೆ ನೀವು ಉದ್ದೇಶ ಮತ್ತು ಅದಕ್ಕೆ ಬೇಕಾದ ಸಾಮರ್ಥ್ಯವನ್ನು ಹೊಂದಿ ಅದರ ಕಡೆಗೆ ನಡೆದರೆ ನೀವು ಅಂದುಕೊಂಡಿದ್ದು ಫಲಿಸಲಿ ಅಥವಾ ಫಲಿಸದಿರಲಿ, ಅದು ಲೆಕ್ಕಕ್ಕೆ ಬರುವುದಿಲ್ಲ, ಕನಿಷ್ಟಪಕ್ಷ ನಿಮ್ಮ ಜೊತೆ ಏನಾಗುತ್ತಿದೆಯೋ ಅದರ ನಿಯಂತ್ರಣವನ್ನು ಒಂದು ಮಟ್ಟಿಗೆ ಹೊಂದಿರುತ್ತೀರಿ. ಅದು ನಿಮ್ಮ ಬದುಕಿನಲ್ಲಿ ದೃಢತೆಯನ್ನು ಹೆಚ್ಚಿಸುತ್ತದೆ.
#2 ಸೋಲಿನ ಯೋಚನೆಯಿಂದ ಗ್ರಸ್ತರಾಗುವುದನ್ನು ನಿಲ್ಲಿಸಿ
ಸದ್ಗುರು: ಒಬ್ಬ ಬದ್ಧತೆಯಿರುವ ಮನುಷ್ಯನಿಗೆ ಸೋಲು ಎನ್ನುವುದು ಇಲ್ಲ. ಒಂದು ದಿನದಲ್ಲಿ ನೀವು ೧೦೦ ಬಾರಿ ಕೆಳಗೆ ಬಿದ್ದರೆ, ನೀವು ೧೦೦ ಬಾರಿ ಕಲಿತಂತೆ. ನೀವು ಏನಾಗಲು ಆಶಿಸುತ್ತೀರೋ ಆ ಸೃಷ್ಟಿಕಾಕಾರ್ಯಕ್ಕೆ ನೀವು ಬದ್ಧರಾದಲ್ಲಿ , ಅದನ್ನು ಸಾಕಾರಗೊಳಿಸಲು ನಿಮ್ಮ ಮನಸ್ಸು ಸಂಘಟಿತವಾಗುತ್ತದೆ. ನಿಮ್ಮ ಮನಸ್ಸು ಒಮ್ಮೆ ಸಂಘಟಿತವಾದಲ್ಲಿ ನಿಮ್ಮ ಭಾವನೆಗಳು ಸಂಘಟಿತವಾಗುತ್ತದೆ, ಏಕೆಂದರೆ ನೀವು ಯಾವ ಧಾಟಿಯಲ್ಲಿ ಯೋಚಿಸುತ್ತೀರೋ ಅದೇ ನಿಮ್ಮ ಭಾವನೆಯ ಧಾಟಿಯೂ ಆಗಿರುತ್ತದೆ. ನಿಮ್ಮ ಯೋಚನೆ ಮತ್ತು ನಿಮ್ಮ ಭಾವನೆ ಸಂಘಟಿತವಾದಲ್ಲಿ ನಿಮ್ಮ ಪ್ರಾಣಶಕ್ತಿ ಹಾಗೂ ನಿಮ್ಮ ಇಡೀ ದೇಹ ಸಂಘಟಿತವಾಗುತ್ತದೆ. ಈ ನಾಲ್ಕು ಅಂಶಗಳು ಒಂದೇ ದಿಕ್ಕಿನಲ್ಲಿ ಸಂಘಟಿತವಾದಾಗ ನಿಮ್ಮ ಸೃಷ್ಟಿಸುವ ಮತ್ತು ಸಾಧಿಸುವ ಶಕ್ತಿ ಅಗಾಧವಾಗುತ್ತದೆ. ಆಗ ನೀವೇ ಸಾಕಷ್ಟು ವಿವಿಧ ದಾರಿಗಳನ್ನು ಸೃಷ್ಟಿಸುವವರಾಗಿರುತ್ತೀರಿ.
#3 ಕೆಲಸದಲ್ಲಿ ಸ್ಪಷ್ಟತೆಯಿರಲಿ
ಸದ್ಗುರು: ಒಬ್ಬ ಮನುಷ್ಯನಿಗೆ ಬೇಕಿರುವುದು ಸ್ಪಷ್ಟತೆ, ಆತ್ಮವಿಶ್ವಾಸವಲ್ಲ. ನೀವು ಒಂದು ಜನಗಂಗುಳಿಯ ಮಧ್ಯೆ ನಡೆದಾಡಬೇಕಿದ್ದರೆ ನಿಮ್ಮ ದೃಷ್ಟಿ ಸ್ಪಷ್ಟವಾಗಿದ್ದಲ್ಲಿ ಮತ್ತು ಎಲ್ಲರೂ ಎಲ್ಲಿದ್ದಾರೆ ಎಂದು ನೋಡುತ್ತಿದ್ದರೆ, ನೀವು ಇಡೀ ಜನಸಮೂಹದ ಮಧ್ಯೆ ಯಾರಿಗೂ ತೊಂದರೆಯಾಗದಂತೆ ನಡೆದು ಹೋಗಬಹುದು. ನಿಮ್ಮ ದೃಷ್ಟಿಯಲ್ಲಿ ಸ್ಪಷ್ಟತೆಯಿಲ್ಲದಿದ್ದಲ್ಲಿ, ಆದರೆ ನೀವು ಆತ್ಮವಿಶ್ವಾಸಿಗಳಾಗಿದ್ದಲ್ಲಿ ನೀವು ಜನಸಮೂಹದ ಮಧ್ಯೆ ಎಲ್ಲರನ್ನು ಮೆಟ್ಟಿ ನಡೆದು ಬರುತ್ತೀರಿ. ನಿಮ್ಮಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಜನ ಯೋಚಿಸುವುದೇನೆಂದರೆ ಆತ್ಮವಿಶ್ವಾಸವೆನ್ನುವುದು ಒಂದು ಉತ್ತಮವಾದ ಪರ್ಯಾಯ ವಸ್ತು ಎಂದು. ಆದರೆ ಅದು ಸಾಧುವಾದದ್ದಲ್ಲ. ನೀವು ನಿಮ್ಮ ಜೀವನದಲ್ಲಿನ ಎಲ್ಲಾ ಮುಖ್ಯ ನಿರ್ಣಯಗಳನ್ನು ಈ ರೀತಿಯಾಗಿ ತೆಗೆದುಕೊಳ್ಳುತ್ತೀರೆಂದು ಅಂದುಕೊಳ್ಳೋಣ: ಒಂದು ನಾಣ್ಯವನ್ನು ತೆಗೆದುಕೊಳ್ಳಿ, ಅದನ್ನು ಎಗರಿಸಿ; ’ಹೆಡ್’ ಬಿದ್ದರೆ ಒಂದು ನಿರ್ಣಯ, ’ಟೇಲ್’ ಬಿದ್ದರೆ ಇನ್ನೊಂದು. ಇದು ಶೇಕಡ ೫೦ರಷ್ಟು ಸಲ ಕೆಲಸ ಮಾಡುತ್ತದೆ. ಶೇಕಡ ೫೦ ಸಮಯದಲ್ಲಿ ಮಾತ್ರ ನಿಮ್ಮ ನಿರ್ಧಾರ ಸರಿಯಾಗಿದ್ದಲ್ಲಿ, ನೀವು ಎರಡು ವೃತ್ತಿಗಳನ್ನು ಮಾತ್ರ ಮಾಡಬಹುದು - ಒಂದು ಹವಾಮಾನ ಮುನ್ಸೂಚಕ ಅಥವಾ ಜ್ಯೋತಿಷ್ಯ ಹೇಳುವವ. ಬೇರೆ ಯಾವುದೇ ವೃತ್ತಿಯಲ್ಲಿ ತೊಡಗಲು ನಿಮಗೆ ಅಸಾಧ್ಯ.
#4 ಇಷ್ಟವಾಗದ ಜನರು ಮತ್ತು ವಸ್ತುಗಳ ಬಗ್ಗೆ ಸ್ವೀಕೃತಿಭಾವವಿರಲಿ
ಸದ್ಗುರು: ಜೀವನದಲ್ಲಿ ನಾವು ಎದುರಿಸುವ ವಿಧವಿಧವಾದ ಪರಿಸ್ಥಿತಿಗಳನ್ನು ಸಂಭಾಳಿಸಲು ನಾವು ವಿಧವಿಧವಾದ ರೂಪಗಳನ್ನು ತಳೆಯಬೇಕಾಗುತ್ತದೆ. ನಿಮ್ಮ ವ್ಯಕ್ತಿತ್ವದಲ್ಲಿ ದ್ರವತೆಯಿದ್ದರೆ, ನೀವು ಒಂದು ರೂಪದಿಂದ ಇನ್ನೊಂದಕ್ಕೆ ಸುಸಲಿತವಾಗಿ ಬದಲಾಯಿಸಿಕೊಳ್ಳುವವರಾದರೆ, ನೀವು ನಿಮ್ಮ ಪಾತ್ರವನ್ನು ಯಾವುದೇ ತೊಂದರೆಗಳಿಲ್ಲದೇ ನಿಭಾಯಿಸುತ್ತೀರಿ. ಆದರೆ ತುಂಬಾ ಜನರ ವ್ಯಕ್ತಿತ್ವ ಒಂದು ಬಂಡೆಯಿದ್ದಂತೆ. ಅದು ಅವರ ತಲೆ ಮೇಲೆ ಕುಳಿತು ಅವರನ್ನು ಒಂದು ಎಲ್ಲೆಗೆ ಸೀಮಿತಗೊಳಿಸಿ, ಅದರಲ್ಲಿ ಒಳಪಡದೇ ಇರುವಂತಹದ್ದು ಅವರಿಗೆ ಸಂಕಟವನ್ನು ನೀಡುವಂತೆ ಮಾಡುತ್ತದೆ.
ಇದರಿಂದ ನೀವು ಹೊರಬರಬೇಕಾದರೆ ನೀವು ವಿರುದ್ಧವಾದ ರೀತಿಯಲ್ಲಿ ಏನಾದರೂ ಮಾಡಬೇಕು. ನೀವು ಮಾಡಬಹುದಾದ ಒಂದು ಸುಲಭವಾದ ಕೆಲಸ ಎಂದರೆ, ನೀವು ಇಷ್ಟಪಡದಂತಹ ವ್ಯಕ್ತಿಗಳ ಜೊತೆಗೂಡಿ, ಅವರ ಜೊತೆ ಪ್ರೀತಿಯಾಗಿ ಮತ್ತು ಸಂತೋಷದಿಂದ ಸ್ವಲ್ಪ ಕಾಲ ಕಳೆಯಬೇಕು. ನಿಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಲು, ನಿಮಗೆ ಇಷ್ಟವಾಗದ ಜನರೊಂದಿಗೆ ಇದ್ದೂ ಕೂಡ ಪ್ರಜ್ಞಾವಂತರಾಗಿ, ಪ್ರೀತಿಪಾತ್ರರಾಗಿ ಮತ್ತು ಸಂತೋಷವಾಗಿ ಜೀವನವನ್ನು ನಡೆಸಲು ಕಲಿಯಿರಿ.
#5 ನಿಮ್ಮ ಲೆಕ್ಕಾಚಾರಗಳನ್ನು ಬಿಟ್ಟುಬಿಡಿ
ಸದ್ಗುರು: ನಾನು ಮಹಾನ್ ಎನಿಸಬೇಕು ಎನ್ನುವ ಉತ್ಸುಕತೆಯ ಅವಶ್ಯಕತೆ ಇಲ್ಲ. ಈಗ ’ನಾನು’ ಎಂದು ನೀವು ಗುರುತಿಸಿಕೊಂಡಿರುವುದರ ಎಲ್ಲೆಯನ್ನು ಮೀರಿರುವುದರ ಮೇಲೆ ನೀವು ನಿಮ್ಮ ಜೀವನವನ್ನು ಕೇಂದ್ರೀಕರಿಸಿದರೆ, ನೀವು ಹೇಗಿದ್ದರೂ ಮಹಾವ್ಯಕ್ತಿಯಾಗುತ್ತೀರಿ. ಕೆಲವು ವ್ಯಕ್ತಿಗಳು ಮಹಾನ್ ಎನಿಸಿಕೊಂಡಿದ್ದು ಅವರು ಹಾಗಾಗಬೇಕೆಂದು ಹಂಬಲಿಸಿದ್ದರಿಂದಲ್ಲ, ಬದಲಿಗೆ ಅವರು ಜೀವನವನ್ನು ನೋಡುವ ರೀತಿಯು "ಅದರಿಂದ ನನಗೇನು?" ಎಂಬುದನ್ನು ಎಷ್ಟೋ ಮೀರಿತ್ತು.
"ಅದರಿಂದ ನನಗೇನು?" ಎನ್ನುವ ಈ ಒಂದು ಲೆಕ್ಕಾಚಾರವನ್ನು ನಿಮ್ಮ ತಲೆಯಿಂದ ತೆಗೆದು, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ಮಾಡಿದರೆ, ನೀವು ಯಾವುದೋ ಒಂದು ವಿಧದಲ್ಲಿ ಮಹಾನ್ ಆಗುತ್ತೀರಿ. ಏಕೆಂದರೆ ನೀವು ಸಹಜವಾಗಿ "ನಾನು ನನ್ನ ಸುತ್ತಮುತ್ತಲಿನ ಜೀವಿಗಳಿಗೆ ಏನು ಮಾಡಬಹುದು?" ಎನ್ನುವುದನ್ನು ನೋಡುತ್ತಿರುತ್ತೀರಿ. ಆದ್ದರಿಂದ ನೀವು ಸ್ವಾಭಾವಿಕವಾಗಿ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತೀರಿ, ಏಕೆಂದರೆ ಮಾಡುವುದು ತುಂಬಾ ಇದೆ!
#6 ಯಶಸ್ಸಿಗಾಗಿ ಯೋಗ
ಸದ್ಗುರು: ಮನುಷ್ಯನ ನರಮಂಡಲ ಮತ್ತು ಶಕ್ತಿಮಂಡಲಗಳು ಹೆಗಲುಗಳು ಕೂಡುವ ಜಾಗದಲ್ಲಿ ಮತ್ತು ಅದಕ್ಕಿಂತ ಮೇಲಕ್ಕೆ ಬೃಹತ್ ಪ್ರಮಾಣದಲ್ಲಿ ಕವಲೊಡೆಯುತ್ತವೆ. ಆದ್ದರಿಂದ, ನೀವು ಕತ್ತಿನ ಭಾಗವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವುದು ಅತೀಮುಖ್ಯ. ಕತ್ತಿನ ವ್ಯಾಯಾಮವನ್ನು ಮಾಡಿ ೩ ರಿಂದ ೪ ನಿಮಿಷಗಳಲ್ಲಿ ನೀವು ಹೆಚ್ಚಿನ ರೀತಿಯಲ್ಲಿ ಜಾಗರೂಕರಾಗಿದ್ದೀರಿ ಎನ್ನುವುದು ನಿಶ್ಚಿತವಾಗಿ ತಿಳಿಯುತ್ತದೆ. ಮೆದುಳಿನ ಜೀವಕೋಶಗಳ ಪುನರುತ್ಪತ್ತಿಯ ಪ್ರಮಾಣ ಹೆಚ್ಚಾಗುತ್ತದೆ, ಮತ್ತು ಜ್ಞಾಪಕಶಕ್ತಿ ಮತ್ತು ಮೇಧಾಶಕ್ತಿಗಳು ವರ್ಧಿಸುತ್ತವೆ.
ಸದ್ಗುರುಗಳು ನೀಡಿರುವ ಶಕ್ತಿಯುತವಾದ ಯೋಗ ಸಾಧನಗಳು ನಿಮ್ಮ ಮೊಬೈಲ್ ನಲ್ಲಿ ಲಭ್ಯ.
#7 ಸಮಚಿತ್ತ ಮತ್ತು ಉತ್ಸಾಹಪೂರ್ಣರಾಗಿರಿ
ಸದ್ಗುರು: ಈ ವಿಶ್ವದಲ್ಲಿ ನೀವು ಯಶಸ್ಸನ್ನು ಕಾಣಬೇಕಾದರೆ, ನಿಮಗೆ ಮೂಲಭೂತವಾಗಿ ಬೇಕಾಗಿರುವುದು ನಿಮ್ಮ ಮನಸ್ಸಿನ ಮತ್ತು ನಿಮ್ಮ ದೇಹದ ಮೇಲಿನ ಪರಿಣತಿ. ನಿಮ್ಮ ಮನಸ್ಸನ್ನು ನೀವು ಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕಾದರೆ ಅತೀಮುಖ್ಯವಾಗಿ ಬೇಕಾಗುವ ಒಂದು ಗುಣವೇ ಸಮಚಿತ್ತತೆ. ಈ ಸಮಚಿತ್ತತೆ ನಿಮ್ಮ ಮನಸ್ಸಿನ ವಿಧವಿಧದ ಆಯಾಮಗಳಿಗೆ ಪ್ರವೇಶಾವಕಾಶ ಕಲ್ಪಿಸುತ್ತದೆ. ನಿಮ್ಮಲ್ಲಿ ಸಮಚಿತ್ತತೆ ಇಲ್ಲದಿದ್ದರೆ, ನಿಮ್ಮ ಮನಸನ್ನು ಉಪಯೋಗಿಸುವ ಶಕ್ತಿ ಬಹಳವಾಗಿ ಕುಂಠಿತವಾಗುತ್ತದೆ. ನಿಮ್ಮ ಚೈತನ್ಯದ ಮಟ್ಟವೂ ಒಂದು ಮುಖ್ಯವಾದ ಗುಣವಾಗುತ್ತದೆ - ಅಂತರಂಗ ಮತ್ತು ಬಹಿರಂಗ ಎರಡೂ ಕಡೆ ನೀವು ಉತ್ಸಾಹಪೂರ್ಣರಾಗಿರಬೇಕು. ನಿಮ್ಮಲ್ಲಿ ಉತ್ಸಾಹಪೂರ್ಣವಾದ ಶಕ್ತಿ ಇದ್ದಾಗ ಮಾತ್ರ, ನಿಮ್ಮ ದೈನಂದಿನ ಕೆಲಸಗಳಲ್ಲಿ ಉಂಟಾಗಬಹುದಾದ ಅಡಚಣೆಗಳನ್ನು ಎದುರಿಸಿ ನಿಭಾಯಿಸಿ ಯಶಸ್ಸಿನ ಕಡೆಗೆ ಮುಂದುವರೆಯಲು ಸಾಧ್ಯ. ಸಮಚಿತ್ತತೆ ಮತ್ತು ಉತ್ಸುಕತೆ ನಿಮ್ಮ ಮನಸ್ಸು ಮತ್ತು ದೇಹದಲ್ಲಿದ್ದರೆ, ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿಯಾಗುತ್ತದೆ.
#8 ನಿಮ್ಮ ಒಳನೋಟವನ್ನು ಸೂಕ್ಷ್ಮವಾಗಿಸಿ
ಸದ್ಗುರು: ನಿಮ್ಮ ಸುತ್ತಮುತ್ತಲಿನ ಜೀವಜಗತ್ತನ್ನು ನೀವು ಸೂಕ್ಷ್ಮವಾಗಿ ಅವಲೋಕಿಸಿ, ಬೇರೆಯವರು ನೋಡಲಾಗದಂತಹದ್ದನ್ನು ನೀವು ನೋಡಿದಾಗ ನಿಮ್ಮಲ್ಲಿ ಒಳನೋಟ ಇದೆ ಎಂದರ್ಥ. ನಿಮ್ಮಲ್ಲಿ ಒಳನೋಟ ಇಲ್ಲದಿದ್ದರೆ ಸುಮ್ಮನೆ ವ್ಯರ್ಥ ಶ್ರಮಪಡಬೇಕಾಗುವುದು. ಸಾಧಾರಣವಾದ ವ್ಯಕ್ತಿಯೂ ಕೂಡ ಆಳವಾದ ಒಳನೋಟವನ್ನು ಹೊಂದಿದ್ದರೆ ಅಸಾಧಾರಣವಾದ ಕಾರ್ಯವನ್ನು ಎಸಗಬಲ್ಲ.
#9 ಆಂತರ್ಯದ ಸ್ಫೂರ್ತಿಯನ್ನು ಗುರುತಿಸಿಕೊಳ್ಳಿ
ಸದ್ಗುರು: ಮತ್ತೊಂದು ಪ್ರಮುಖವಾದ ಅಂಶವೆಂದರೆ ಯಾವಾಗಲೂ ಸ್ಫೂರ್ತಿವಂತರಾಗಿರುವುದು. ನೀವು ಮಾಡುತ್ತಿರುವ ಕೆಲಸದ ಕಾರಣವನ್ನು ಗಮನಿಸಿ, ಮತ್ತು ಅದರ ಹಿಂದಿನ ಹಿರಿದಾದ ಸಮಗ್ರ ಚಿತ್ರಣವನ್ನು ನೋಡಿರಿ. ಜೀವನದಲ್ಲಿ ನೀವು ಮಾಡುವ ಅತೀ ಚಿಕ್ಕ ವಿಷಯಗಳಲ್ಲೂ ನಿಮ್ಮ ಕೊಡುಗೆ ಏನು ಎಂದು ಅರಿತುಕೊಳ್ಳಿ. ಮನುಷ್ಯನು ಮಾಡುವ ಪ್ರತಿಯೊಂದು ಕೆಲಸವು ಜಗತ್ತಿನ ಯಾವುದೋ ಒಂದು ಅಂಶಕ್ಕೆ ಕೊಡುಗೆಯಾಗಿರುತ್ತದೆ. ನೀವು ಏನೇ ಮಾಡಿದರೂ, ಯಾರಿಗಾದರೂ ಅದರಿಂದ ಲಾಭವಾಗುತ್ತಿರುತ್ತದೆ. ನಿಮ್ಮ ಕೊಡುಗೆಗಳ ಬಗ್ಗೆ ಪ್ರಜ್ಞಾಪೂರ್ವಕರಾಗಿರುವುದು ನಿಮ್ಮನ್ನು ಸ್ಫೂರ್ತಿವಂತರಾಗಿರಿಸುತ್ತದೆ.
#10 ನಿಮ್ಮ ಪ್ರಾಮಾಣಿಕತೆಯಲ್ಲಿ ಚಿನ್ನದ ಗುಣಮಟ್ಟವನ್ನು ಕಾಪಾಡಿಕೊಳ್ಳಿ
ಸದ್ಗುರು: ಈ ಜೀವನದಲ್ಲಿ ನೀವು ಏನೇ ಮಾಡಿದರೂ ಪ್ರಾಮಾಣಿಕತೆ ಅತೀ ಮುಖ್ಯ. ನೀವು ವ್ಯವಹರಿಸುವ ಮತ್ತು ನಿಮ್ಮ ಸುತ್ತಮುತ್ತಲಿನ ಜನರಲ್ಲಿ ನೀವು ಎಷ್ಟು ನಂಬಿಕೆ, ವಿಶ್ವಾಸ ಮೂಡಿಸುತ್ತೀರಿ ಎಂಬುದು, ನಿಮ್ಮ ದೈನಂದಿನ ಪ್ರಯತ್ನಗಳು ಎಷ್ಟು ಕ್ಲಿಷ್ಟ ಅಥವಾ ಸುಲಭವಾಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಒಂದು ಒಳ್ಳೆಯ ನಂಬಿಕೆ, ವಿಶ್ವಾಸದ ಪರಿಸರವಿದ್ದರೆ, ಕೆಲಸಗಳಲ್ಲಿ ನಿಮ್ಮ ಸಾಮರ್ಥ್ಯವು ಬಹುವಾಗಿ ವರ್ಧಿಸುತ್ತದೆ, ಏಕೆಂದರೆ ಎಲ್ಲರೂ ನಿಮಗೆ ಯಾವುದೇ ತೊಂದರೆಕೊಡದೆ ನಿಮ್ಮ ಕೆಲಸಗಳು ಕೈಗೂಡಲು ದಾರಿ ಮಾಡಿಕೊಡುತ್ತಾರೆ.
ಸಂಪಾದಕರ ಟಿಪ್ಪಣಿ: ಯೋಗ ದಿನಾಚರಣೆಗಾಗಿ ಸದ್ಗುರುಗಳು ಸಿದ್ದಪಡಿಸಿರುವ ೫ ನಿಮಿಷಗಳ "ಆತ್ಮಿಕ ಪರಿವರ್ತನೆಗಾಗಿ ಸಾಧನಗಳು" ಅನ್ನು ನೋಡಿರಿ.
ನಿಮಗೆ ಯಶಸ್ಸನ್ನು ತಂದುಕೊಟ್ಟ ಯಾವುದಾದರೂ ನಿರ್ದಿಷ್ಟ ವಿಧಾನವಿದೆಯೇ? ದಯವಿಟ್ಟು ಕಮ್ಮೆಂಟ್ಸ್ ವಿಭಾಗದಲ್ಲಿ ಹಂಚಿಕೊಳ್ಳಿ.