ಪ್ರತಿನಿತ್ಯದ ಯೋಗಾಭ್ಯಾಸಗಳನ್ನು ಮಾಡಲು ಕಷ್ಟಪಡುತ್ತಿದ್ದೀರ?
ಯೋಗಸಾಧಕರೊಬ್ಬರು ದಿನನಿತ್ಯ ಯೋಗಾಭ್ಯಾಸಗಳನ್ನು ಮಾಡುವ ಜೀವನಕ್ರಮವನ್ನು ನಿರ್ವಹಿಸುವುದರಲ್ಲಿನ ಪ್ರಯಾಸದ ಕುರಿತಾದ ಪ್ರಶ್ನೆಯೊಂದನ್ನು ಸದ್ಗುರುಗಳ ಬಳಿ ಕೇಳುತ್ತಾರೆ.
ಪ್ರಶ್ನೆ: ಸದ್ಗುರು, ನಾನು ಒಂದೆರಡು ಯೋಗ ಕಾರ್ಯಕ್ರಮಗಳನ್ನು ಮಾಡಿದ್ದೇನೆ, ಆದರೆ ಸಮಸ್ಯೆ ಏನೆಂದರೆ ನನಗದನ್ನು ಕಟ್ಟುನಿಟ್ಟಾಗಿ ಪ್ರತಿದಿನ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ನಾನು ಮುಂಜಾನೆ 6 ರಿಂದ 9:30 - 10:00 ಗಂಟೆಯವರೆಗೆ, ಸುಮಾರು 4 ರಿಂದ 5 ಗಂಟೆಗಳ ಕಾಲ ಯೋಗಾಭ್ಯಾಸಗಳನ್ನು ಮಾಡುತ್ತಿದ್ದೆ ಮತ್ತದು ಗರಿಷ್ಠ ಮಟ್ಟದಲ್ಲಿತ್ತು ಎಂದು ನಾನು ಹೇಳಬಲ್ಲೆ. ನಂತರ, ಅದು ಸಂಪೂರ್ಣವಾಗಿ ನಿಂತೇ ಹೋಗಿದೆ. ಇತ್ತೀಚಿನ ದಿನಗಳಲ್ಲಿ ನಾನು ಯಾವ ಅಭ್ಯಾಸಗಳನ್ನೂ ಕೂಡ ನಿಯಮಿತವಾಗಿ ಮಾಡುತ್ತಿಲ್ಲ. ಈ ಏರಿಳಿತದ ನಡುವಳಿಕೆಗಳು ಏಕೆ? ನನ್ನನ್ನು ನಾನು ಹೇಗೆ ಬದಲಾಯಿಸಿಕೊಳ್ಳಲಿ?
ಸದ್ಗುರು: ಯೋಗವನ್ನು ನೀವು ಎಂದಿಗೂ ಸಹ ಕಟ್ಟುನಿಟ್ಟಾಗಿ ಮಾಡಬಾರದು – ಆಗ ಅದು ಕೆಲಸ ಮಾಡುವುದಿಲ್ಲ. ಮತ್ತು ಯಾವ ಸಂದರ್ಭದಲ್ಲೂ ಯೋಗವನ್ನು ನಿಮ್ಮಿಡೀ ಜೀವನ ಮಾಡಲು ಹೋಗಬೇಡಿ, ಕೇವಲ ’ಈ ದಿನ’ ಮಾಡಿ, ಅಷ್ಟೆ. "ನಾನು ಜೀವನ ಪರ್ಯಂತ ಯೋಗಾಭ್ಯಾಸವನ್ನು ಮಾಡುತ್ತೇನೆ." ಇಂತಹ ಅವಿವೇಕತನದ ಹೊರೆಯನ್ನು ನಿಮ್ಮ ಮೇಲೆ ನೀವೇ ಹೊರಿಸಿಕೊಳ್ಳಬೇಡಿ! ನೀವದನ್ನು ’ಇಂದು’ ಮಾಡಿ. ಅಷ್ಟು ಸಾಕು, ಸರಿಯಾ? ಜೀವನ ತುಂಬಾ ಸರಳವಾದದ್ದು. ನೀವೇಕೆ ಅದನ್ನು ಅಷ್ಟೊಂದು ಜಟಿಲವಾಗಿಸಿಕೊಳ್ಳುತ್ತೀರಿ? "ನನ್ನ ಜೀವನದ ಪ್ರತಿಯೊಂದು ದಿನವೂ ನಾನು ಯೋಗವನ್ನು ಮಾಡಲಿದ್ದೇನೆ." ದಯವಿಟ್ಟು ಅದನ್ನು ನಿಮ್ಮ ಜೀವನದ ಪ್ರತಿದಿನವೂ ಮಾಡಬೇಡಿ; ಕೇವಲ ’ಇಂದು’ ಮಾಡಿ. ಅದಕ್ಕೆ ಯಾವುದೇ ರೀತಿಯ ಕಟ್ಟುನಿಟ್ಟಾದ ಧಾರ್ಮಿಕ ಬದ್ಧತೆಯ ಅವಶ್ಯಕತೆಯಿಲ್ಲ. "ಇಂದು ನಾನದನ್ನು ಮಾಡಲಿದ್ದೇನೆ," ಅಷ್ಟೆ. ಅದು ಸರಳ. ಒಂದು ದಿನ ನಿಮಗದನ್ನು ಮಾಡಲು ಸಾಧ್ಯವಿದೆ, ಅಲ್ಲವೇ? ಅಷ್ಟು ಸಾಕು.
ಸಂಪಾದಕರ ಟಿಪ್ಪಣಿ: “ಪರಿವರ್ತನೆಗಾಗಿ ಐದು-ನಿಮಿಷದ ಯೋಗ ಸಾಧನಗಳನ್ನು” ಇಲ್ಲಿ ನೋಡಿ ಕಲಿತುಕೊಳ್ಳಿ “5-minute Yoga Tools for Transformation”. ಆನಂದ, ಶಾಂತಿ, ಸೌಖ್ಯ, ಯಶಸ್ಸು ಹಾಗೂ ಇನ್ನೂ ಅನೇಕ ಸಂಗತಿಗಳಿಗಾಗಿ ಈಶ ನೀಡುವ ಸರಳ ಉಪ-ಯೋಗದ ಅಭ್ಯಾಸಗಳು ಇವಾಗಿವೆ. ಆಪ್ಅನ್ನು ಸಹ ನೀವು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು download the app for android and iOS.