ಸದ್ಗುರುಗಳು ಯುಗಾದಿ ಹಬ್ಬದ ಪ್ರಯುಕ್ತ ನಮಗೊಂದು ವಿಶೇಷವಾದ ಸಂದೇಶವನ್ನು ಇಲ್ಲಿ ನೀಡುತ್ತಾರೆ ಮತ್ತು ಯುಗಾದಿ ಹಬ್ಬವನ್ನು ಏಕೆ ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುತ್ತದೆ ಎಂಬುದರ ಹಿಂದಿರುವ ವಿಜ್ಞಾನವನ್ನು ಅವರು ಬಹಿರಂಗಪಡಿಸುತ್ತಾರೆ.

ನಾವು ಜನವರಿ 1ನೇ ತಾರೀಖನ್ನಲ್ಲದೆ ಯುಗಾದಿ ಹಬ್ಬವನ್ನು ಹೊಸ ವರ್ಷವೆಂದು ಪರಿಗಣಿಸುವುದಕ್ಕೆ ಒಂದು ನಿರ್ದಿಷ್ಟವಾದ ಪ್ರಾಮುಖ್ಯತೆ ಇದೆ. ಈ ದಿನದಂದು ನಮ್ಮ ಭೂಗ್ರಹದಲ್ಲಿ ಮತ್ತು ಮಾನವನ ಶರೀರ ಹಾಗೂ ಮನಸ್ಸಿನಲ್ಲಾಗುವ ಬಲಾವಣೆಯ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ. ಯುಗಾದಿಯು ಚಾಂದ್ರ-ಸೌರಮಾನ ಪಂಚಾಂಗವನ್ನು ಅನುಸರಿಸುತ್ತದೆ ಮತ್ತಿದು ಮಾನವನ ದೇಹ ರಚನೆಯಾಗಿರುವ ರೀತಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಭಾರತೀಯ ಪಂಚಾಂಗವು ಕೇವಲ ಸಾಂಸ್ಕೃತಿಕವಾಗಷ್ಟೇ ಅಲ್ಲ, ವೈಜ್ಞಾನಿಕವಾಗಿಯೂ ಕೂಡ ಮಹತ್ವದ್ದಾಗಿದೆ, ಏಕೆಂದರೆ ಅದು ನಿಮ್ಮನ್ನು ಭೂಗ್ರಹದ ಚಲನೆಗಳೊಂದಿಗೆ ಬೆಸೆಯುತ್ತದೆ.

ನಮ್ಮ ಭಾರತೀಯ ಜನರು ಅನೇಕ ಸಹಸ್ರಮಾನಗಳಿಂದ ಅನುಸರಿಸುತ್ತಿರುವ ಪಂಚಾಂಗದ ಪ್ರಕಾರ ಚಂದ್ರಮಾನ ಯುಗಾದಿಯು ಒಂದು ಹೊಸ ವರ್ಷದ ಆರಂಭವಾಗಿದೆ. ನಮ್ಮ ಸಂಸ್ಕೃತಿಯಲ್ಲಿ ರೂಪುಗೊಂಡಿರುವ ಬೇರೆಲ್ಲಾ ವಿಷಯಗಳಂತೆಯೇ ನಮ್ಮ ಪಂಚಾಂಗವು ಕೂಡ ಮಾನವರ ಶರೀರ ಮತ್ತು ಪ್ರಜ್ಞೆಯ ಮೇಲೆ ಕಾಲವು ಬೀರುವ ಪರಿಣಾಮದ ಆಧಾರದ ಮೇಲೆ ರೂಪುಗೊಂಡಿದೆ. ಭೂಮಿಯು ತನ್ನ ಅಕ್ಷದಿಂದ ಸ್ವಲ್ಪ ವಾಲಿರುವುದರಿಂದ, ಯುಗಾದಿಯಿಂದ ಪ್ರಾರಂಭವಾಗುವ 21-ದಿನಗಳ ಅವಧಿಯಲ್ಲಿ ಉತ್ತರ ಗೋಳಾರ್ಧವು ಸೂರ್ಯನ ಶಕ್ತಿಯನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಸ್ವೀಕರಿಸುತ್ತದೆ. ತಾಪಮಾನವು ಹೆಚ್ಚಾಗುವ ವಿಷಯದಲ್ಲಿ ಮನುಷ್ಯರಿಗೆ ಇದು ಅಸಹನೀಯವಾಗಿದ್ದರೂ ಸಹ, ಇದು ಭೂಮಿಯ ಬ್ಯಾಟರಿಗಳು ಚಾರ್ಜ್ ಆಗುವ ಸಮಯ. ಯುಗಾದಿ ಹಬ್ಬವನ್ನು ವಿಷುವತ್ ಸಂಕ್ರಾಂತಿಯ ನಂತರದ ಮೊದಲ ಅಮವಾಸ್ಯೆಯ ಬಳಿಕದ ಶುಕ್ಲಪಕ್ಷದ ಮೊದಲ ದಿನದಂದು (ಅಂದರೆ ಪಾಡ್ಯಮಿಯಂದು) ಆಚರಿಸಲಾಗುತ್ತದೆ. ಅಂದರೆ ಅದು ಒಂದು ಹೊಸ ಆರಂಭವನ್ನು ಸೂಚಿಸುತ್ತದೆ. ಈ ವರ್ಷ ಯುಗಾದಿಯು ಏಪ್ರಿಲ್ 7 ರಂದು ಬೀಳುತ್ತದೆ.

ಮಾನವನ ಸೌಖ್ಯವನ್ನು ಹಲವು ವಿಧಗಳಲ್ಲಿ ವರ್ಧಿಸುವಂತಹ ವಿಜ್ಞಾನ ಅದರ ಹಿಂದಿದೆ.

ಉಷ್ಣವಲಯದ ಅಕ್ಷಾಂಶಗಳಲ್ಲಿ ವರ್ಷದ ಈ ಅತ್ಯಂತ ಬಿಸಿಲಿನ ಅವಧಿಗೆ ಸಿದ್ಧವಾಗಲು, ಹರಳೆಣ್ಣೆಯಂತಹ ತಂಪಾಗಿಸುವ ಎಣ್ಣೆಗಳನ್ನು ಹಚ್ಚಿಕೊಳ್ಳುವುದರೊಂದಿಗೆ ಜನರು ವರ್ಷದ ಈ ಭಾಗವನ್ನು ಪ್ರಾರಂಭಿಸುವುದು ಸಂಪ್ರದಾಯವಾಗಿದೆ. ಗ್ರಹಗಳ ಚಲನೆಗೆ ಸಂಬಂಧಿಸಿದಂತೆ ಮಾನವನಲ್ಲಿ ಉಂಟಾಗುವ ಅನುಭವವನ್ನು ನಿರ್ಲಕ್ಷಿಸುವ ಆಧುನಿಕ ಕ್ಯಾಲೆಂಡರ್‌ಗಳಂತಲ್ಲದೇ, ನಮ್ಮ ಚಾಂದ್ರ–ಸೌರಮಾನ ಪಂಚಾಂಗವು ಮಾನವ ವ್ಯವಸ್ಥೆಯಲ್ಲಿ ಉಂಟಾಗುವ ಅನುಭವ ಮತ್ತು ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳುವ ಕಾರಣ, ಪಂಚಾಂಗವನ್ನು ಅಕ್ಷಾಂಶಗಳಿಗೆ ಸರಿಹೊಂದಿಸಲಾಗುತ್ತದೆ.

ಯುಗಾದಿಯನ್ನು ಕೇವಲ ನಂಬಿಕೆಯ ವ್ಯವಸ್ಥೆಯ ಭಾಗವಾಗಿ ಅಥವಾ ಯಾವುದೋ ಅನುಕೂಲಕ್ಕಾಗಿ ಹೊಸ ವರ್ಷವೆಂದು ಆಚರಿಸಲಾಗುವುದಿಲ್ಲ - ಮಾನವನ ಸೌಖ್ಯವನ್ನು ಹಲವು ವಿಧಗಳಲ್ಲಿ ವರ್ಧಿಸುವಂತಹ ವಿಜ್ಞಾನ ಅದರ ಹಿಂದಿದೆ. ಈ ರಾಷ್ಟ್ರವು ಏನಾಗಿತ್ತು ಎನ್ನುವುದರ ಗಹನತೆಯನ್ನು ಇಂದು ಕೇವಲ ಇತರ ದೇಶಗಳು ಆರ್ಥಿಕವಾಗಿ ನಮಗಿಂತ ಮುಂದೆ ಹೋಗಿವೆ ಎಂಬ ಕಾರಣಕ್ಕಾಗಿ ಅಸಂಬದ್ಧವೆಂದು ಹೀಯಾಳಿಸಲಾಗುತ್ತಿದೆ. ನಾವೂ ಸಹ ಶೀಘ್ರದಲ್ಲೇ ಆರ್ಥಿಕವಾಗಿ ಮುಂದೆ ಸಾಗುತ್ತೇವೆ, ಆದರೆ ಈ ಸಂಸ್ಕೃತಿಯು ಹೊಂದಿರುವ ಆಳವಾದ ತಿಳುವಳಿಕೆಯನ್ನು ಕೆಲವು ವರ್ಷಗಳ ಸಮಯದಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ; ಇದು ಸಾವಿರಾರು ವರ್ಷಗಳ ಕಾಲ ಮಾಡಿದ ಕಾರ್ಯದ ಫಲಿತಾಂಶವಾಗಿದೆ.


 

ನಿಮ್ಮ ಹೊಸ ವರ್ಷವನ್ನು ಪ್ರಾರಂಭಿಸಲು ನೀವು ಮಾಡಬಹುದಾದ ಸರಳವಾದ ವಿಷಯವೆಂದರೆ, ನೀವು ನಿಮ್ಮ ಟೆಲಿಫೋನನ್ನು ಕೈಗೆತ್ತಿಕೊಂಡಾಗ, "ಹಲೋ" ಅಥವಾ "ಹೈ" ಅಥವಾ ಅಂತಹ ಇನ್ನೇನನ್ನೋ ಹೇಳಬೇಡಿ. "ನಮಸ್ತೆ" ಅಥವಾ "ನಮಸ್ಕಾರ" ಎಂದು ಹೇಳಿ. ನಿಮ್ಮ ಜೀವನದಲ್ಲಿ ಇಂತಹ ಪದಗಳನ್ನು ಆಡುವುದಕ್ಕೆ ಒಂದು ಮಹತ್ವವಿದೆ - ನೀವು ದೇವರಿಗೆ ಹೇಳುವ ಅಥವಾ ನಡೆದುಕೊಳ್ಳುವ ರೀತಿಯಲ್ಲೇ ನಿಮ್ಮ ಸುತ್ತಲಿರುವ ಎಲ್ಲರೊಂದಿಗೂ ನಡೆದುಕೊಳ್ಳಿ. ಇದು ಬದುಕಲು ಅತ್ಯುತ್ತಮವಾದ ರೀತಿಯಾಗಿದೆ. 

ಯಾವುದಾದರೂ ಒಂದು ವಿಷಯ ನಿಮಗೆ ಪವಿತ್ರ ಮತ್ತು ಇನ್ನೊಂದು ಪವಿತ್ರವಲ್ಲದೆ ಹೋದರೆ, ನೀವು ಮೂಲ ವಿಷಯದಲ್ಲೇ ತಪ್ಪಿದ್ದೀರಿ. ಈ ಹೊಸ ವರ್ಷವನ್ನು ನೀವು ಪ್ರತಿ ಮನುಷ್ಯನಲ್ಲೂ ಅಡಗಿರುವ ದೈವತ್ವವನ್ನು ಗುರುತಿಸಲು ಒಂದು ಸಾಧ್ಯತೆಯಾಗುವಂತೆ ಮಾಡಿಕೊಳ್ಳಿ.

Love & Blessings

ಸಂಪಾದಕರ ಟಿಪ್ಪಣಿ: ಸದ್ಗುರುಗಳ ಈ ಲೇಖನ ಸಂಗ್ರಹಣೆಯಲ್ಲಿ ಭಾರತೀಯ ಸಂಸ್ಕೃತಿಯ ಅದ್ಭುತ ವೈವಿಧ್ಯತೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.

Indian Culture