ರಾವಣನ ಮೇಲೆ ಗಣೇಶನ ಚಾತುರ್ಯ
ಗಣಪತಿಯು ಚಾಣಾಕ್ಷತನಕ್ಕೆಂದೇ ಹೆಸರುವಾಸಿಯಾಗಿರುವವನು. ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ, ಒಂದು ಗಣಪತಿಯ ವಿಗ್ರಹವಿದೆ, ಆ ವಿಗ್ರಹವನ್ನು ಗಮನಿಸಿದರೆ, ತಲೆಯ ಮೇಲೆ ತಗ್ಗಾಗಿರುವುದನ್ನು ಕಾಣಬಹುದು, ಇದಕ್ಕೆ ಕಾರಣ ರಾವಣ. ಒಂದು ಸಂದರ್ಭದಲ್ಲಿ ಗಣಪತಿಯ ಬುದ್ಧಿವಂತಿಕೆಯನ್ನು ತಿಳಿಯಲಾರದೇ ಹೋಗಿದ್ದ ರಾವಣ, ಗಣಪತಿಯನ್ನು ಮುಖಾಮುಖಿಯಾದ ಕಥೆಯನ್ನು ಸದ್ಗುರುಗಳಿಂದ ಕೇಳಿ:
ತನ್ನ ಕೈಗಳನ್ನು ಕೈಲಾಸ ಪರ್ವತದ ಕೆಳಗೆ ಸಿಲುಕಿಸಿಕೊಂಡ ರಾವಣ, ಶಿವನ ಮೇಲಿನ ತನ್ನ ಪ್ರೀತಿಯನ್ನು ವಿವಿಧ ಸುಂದರವಾದ ಸ್ತುತಿಗೀತೆಗಳಲ್ಲಿ ವರ್ಣಿಸತೊಡಗಿದನು. ಅವನು ಸಂಪೂರ್ಣ ಪ್ರೀತಿ ಮತ್ತು ಶರಣಾಗತಿಯ 1001 ಸ್ತುತಿಗೀತೆಗಳನ್ನು ಜಪಿಸಿದ ನಂತರ, ಶಿವನು ಅವನನ್ನು ಬಿಡುಗಡೆ ಮಾಡಿ, “ನೀನೊಂದು ವರವನ್ನು ಪಡೆಯಬಹುದು. ನಿನಗೇನು ಬೇಕು ಕೇಳು ” ಎಂದನು. ಮತ್ತೊಮ್ಮೆ ರಾವಣನ ದುಷ್ಟ ಸ್ವಭಾವವು ಸ್ಪಷ್ಟವಾಗಿ ಗೋಚರಿಸಿ, "ನಾನು ಪಾರ್ವತಿಯನ್ನು ಮದುವೆಯಾಗಲು ಬಯಸುತ್ತೇನೆ" ಎಂದು ಕೇಳಿದನು. ಅದಕ್ಕೆ ಶಿವ “ಸರಿ, ಪಾರ್ವತಿ ಮಾನಸ ಸರೋವರದಲ್ಲಿದ್ದಾಳೆ. ನೀನು ಹೋಗಿ ಅವಳನ್ನು ಮದುವೆಯಾಗಬಹುದು” ಎಂದನು. ಶಿವನ ಗಣಗಳು ಉದ್ರೇಕಕ್ಕೊಳಗಾದರು, “ಅದು ಹೇಗೆ ಸಾಧ್ಯ? ರಾವಣನು ಎಂದಾದರೂ ಪಾರ್ವತಿಯನ್ನು ಮುಟ್ಟಬಹುದೇ?!! ಇದು ಸಾಧ್ಯವೇ ಇಲ್ಲ” ಎನ್ನುತ್ತಾ ಅವರೆಲ್ಲರೂ ಮಾನಸ ಸರೋವರದಲ್ಲಿದ್ದ ಪಾರ್ವತಿಯಲ್ಲಿಗೆ ಹೋಗಿ, “ರಾವಣನು ಬರುತ್ತಿದ್ದಾನೆ. ನಿಮ್ಮನ್ನು ಮದುವೆಯಾಗಲು ಶಿವ ಅವನಿಗೆ ಅನುಮತಿ ಕೊಟ್ಟಿದ್ದಾನೆ” ಎಂದು ತಿಳಿಸಿದರು.
ಪಾರ್ವತಿ ಕಪ್ಪೆಗಳ ರಾಣಿಯಾದ ಮಾಂಡೂಕಳನ್ನು ಕರೆದು ಒಂದು ಸುಂದರ ಮಹಿಳೆಯನ್ನಾಗಿ ಪರಿವರ್ತಿಸಿದಳು. ರಾವಣನು ಪಾರ್ವತಿಯನ್ನು ಎಂದಿಗೂ ನೋಡಿರಲಿಲ್ಲ, ಮಾಂಡೂಕ ಎಂಬ ಮಹಿಳೆಯನ್ನು ನೋಡಿದಾಗ ಅವನು ಅವಳತ್ತ ಆಕರ್ಷಿತನಾಗಿ, ಅವಳನ್ನೇ ಮದುವೆಯಾದನು. ಆ ಮಹಿಳೆಯೇ ಮಂಡೋದರಿ.
ನಂತರ, ರಾವಣನು ಅತ್ಯಂತ ಕಠಿಣ ಸಾಧನೆ ಮಾಡಿ, ಸ್ವತಃ ಶಿವನಿಂದಲೇ ಶಕ್ತಿಯುತವಾದ ಜ್ಯೋತಿರ್ಲಿಂಗವನ್ನು ಪಡೆದನು. ಸಮಾಜದಲ್ಲಿ ಯಾವುದಾದರೂ ಅಂಗೀಕೃತವಾಗಿದೆಯೋ ಇಲ್ಲವೋ ಎಂಬುದನ್ನು ಶಿವ ಎಂದಿಗೂ ಚಿಂತಿಸುವುದಿಲ್ಲ. ಪ್ರಾಮಾಣಿಕವಾದ ಯಾವುದಾದರೂ ಸರಿ, ಶಿವನು ಪ್ರೀತಿಸುತ್ತಾನೆ. ಅವನ ಭಕ್ತಿಗೆ ಮೆಚ್ಚಿ ಜ್ಯೋತಿರ್ಲಿಂಗವನ್ನು ಕೊಟ್ಟು, ರಾವಣನು ಅದನ್ನು ಎಲ್ಲಿ ಇಟ್ಟರೂ ಅದು ಅಲ್ಲೇ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದನು. ಹಾಗಾಗಿ ಜ್ಯೋತಿರ್ಲಿಂಗವನ್ನು ಬೇರೆಲ್ಲಿಯೂ ಕೆಳಗಿಡುವ ಹಾಗಿರಲಿಲ್ಲ, ಏಕೆಂದರೆ ಅದನ್ನು ಎಲ್ಲಿ ಇಟ್ಟರೂ ಅದು ಅಲ್ಲಿಯೇ ಸ್ಥಾಪಿತವಾಗುತ್ತದೆ.
ರಾವಣನು ಜ್ಯೋತಿರ್ಲಿಂಗವನ್ನು ಬಹಳ ಎಚ್ಚರಿಕೆಯಿಂದ ತನ್ನ ಮಹತ್ತಾದ ಬಲದಿಂದ ಹೊತ್ತೊಯ್ದನು. ಆ ಮನುಷ್ಯನು ಎಂತಹ ಯೋಗಿಯಾಗಿದ್ದನೆಂದರೆ, ಕೈಲಾಸದಿಂದ ಸುಮಾರು 3000 ಕಿಲೋಮೀಟರ್ ದೂರದಲ್ಲಿ ಕರ್ನಾಟಕದ ಗೋಕರ್ಣ ಎಂಬ ಸ್ಥಳಕ್ಕೆ ತಲುಪುವವರೆಗೂ ಅವನು ಏನನ್ನೂ ತಿನ್ನಲಿಲ್ಲ, ಮೂತ್ರ ವಿಸರ್ಜಿಸಲಿಲ್ಲ, ಪ್ರತಿಯೊಬ್ಬ ಮನುಷ್ಯನಿಗೂ ಕಡ್ಡಾಯವಾದ ಯಾವ ಕೆಲಸವನ್ನೂ ಮಾಡಲಿಲ್ಲ. ಆ ಕಾರಣ, ಅವನು ದುರ್ಬಲಗೊಂಡಿದ್ದನು. ಗೋಕರ್ಣದ ಹತ್ತಿರ ಅವನು ಮೂತ್ರ ವಿಸರ್ಜಿಸಲು ಬಯಸಿದನು. ಅವನು ಯಾವುದೇ ಆಹಾರವನ್ನು ತೆಗೆದುಕೊಳ್ಳದ ಕಾರಣ ಕೇವಲ ನೀರು ಕುಡಿಯುತ್ತಿದ್ದನು. ಅವನ ಮೂತ್ರಕೋಶವು ತುಂಬಿ ಹೋಗಿತ್ತು ಮತ್ತು ಅವನಿಗೆ ಅದನ್ನು ಇನ್ನು ಹಿಡಿದಿಡಲು ಸಾಧ್ಯವಾಗಲಿಲ್ಲ! ಆದರೆ ಅವನು ಲಿಂಗವನ್ನೂ ಕೆಳಗಿಳಿಸುವಂತಿರಲಿಲ್ಲ. ರಾವಣನಂತಹ ಭಕ್ತ ಕೈಯಲ್ಲಿ ಜ್ಯೋತಿರ್ಲಿಂಗವನ್ನು ಇಟ್ಟುಕೊಂಡು ಮೂತ್ರವಿಸರ್ಜನೆಯಂತಹ ದೈಹಿಕ ಕ್ರಿಯೆಯನ್ನು ಮಾಡಲು ಬಯಸುವುದಿಲ್ಲ.
ಹಾಗಾಗಿ ರಾವಣ ಸುತ್ತಲೂ ನೋಡಿದಾಗ, ತುಂಬಾ ಮುದ್ದಾದ ಮತ್ತು ಮುಗ್ಧವಾದ ಒಬ್ಬ ದನ ಮೇಯಿಸುವ ಹುಡುಗನನ್ನು ಕಂಡ. ಹುಡುಗ ಸಾಕಷ್ಟು ಮಂದವಾಗಿಯೂ ಸಹ ಕಾಣುತ್ತಿದ್ದ. ಚಾಣಾಕ್ಷರಾಗಿರುವ ಯಾರಿಗಾದರೂ ನೀವು ಅಮೂಲ್ಯವಾದ ವಸ್ತುವನ್ನು ನೀಡಿದರೆ, ಅವರು ಅದರೊಂದಿಗೆ ಓಡಿಹೋಗಬಹುದು. ಹುಡುಗ ಸಾಕಷ್ಟು ಮಂದವಾಗಿ ಕಾಣುತ್ತಿದ್ದ, ಆದ್ದರಿಂದ ರಾವಣ ಅವನಿಗೆ, “ಕೆಲವು ನಿಮಿಷಗಳ ಕಾಲ ಇದನ್ನು ನಿನ್ನ ಕೈಯಲ್ಲಿ ಹಿಡಿದುಕೊಂಡರೆ ನಾನು ನಿನಗೆ ಒಂದು ಆಭರಣವನ್ನು ಕೊಡುಗೆಯಾಗಿ ನೀಡುತ್ತೇನೆ. ಆದರೆ ಅದನ್ನು ಕೆಳಗಿಳಿಸಬಾರದು” ಎಂದ. ಆ ಹುಡುಗ, “ಆಯಿತು” ಎಂದು ಲಿಂಗವನ್ನು ತೆಗೆದುಕೊಂದು ನಿಂತ. ರಾವಣನು ಮೂತ್ರ ವಿಸರ್ಜಿಸಲು ಹೊರಟ. ಈ ಹುಡುಗ ವಾಸ್ತವವಾಗಿ ಗಣಪತಿಯಾಗಿದ್ದು, ರಾವಣನು ಲಿಂಗವನ್ನು ಲಂಕಾಕ್ಕೆ ಕೊಂಡೊಯ್ಯುವುದನ್ನು ಬಯಸುತ್ತಿರಲಿಲ್ಲ, ಏಕೆಂದರೆ ಅವನು ಹಾಗೆ ಮಾಡಿದರೆ, ರಾವಣ ಸಂಪೂರ್ಣವಾಗಿ ಅತಿಮಾನುಷ ಶಕ್ತಿಯನ್ನು ಹೊಂದಬಹುದಾಗಿತ್ತು. ಆದ್ದರಿಂದ ಗಣಪತಿ ಲಿಂಗವನ್ನು ಕೆಳಗೆ ಇಟ್ಟ ಮತ್ತು ಅದು ಭೂಮಿಯಲ್ಲಿ ಸ್ಥಾಪಿತವಾಯಿತು. ಇಂದಿಗೂ ನೀವು ಗೋಕರ್ಣಕ್ಕೆ ಹೋದರೆ, ಕೇವಲ ಒಂದು ಸಣ್ಣ ರಂಧ್ರದ ಮೂಲಕ ನೀವು ನಿಮ್ಮ ಬೆರಳನ್ನು ಹಾಕಿದರೆ, ಲಿಂಗವಿರುವ ಅನುಭವ ಗೊತ್ತಾಗುತ್ತದೆ ಏಕೆಂದರೆ ಅದು ಒಳಗೆ ಹೂತುಹೋಗಿದೆ.
ರಾವಣನು ತುಂಬಾ ಕೋಪಗೊಂಡು, ಆ ಹುಡುಗನ ತಲೆಗೆ ಹೊಡೆದ. ಹಾಗಾಗಿಯೇ ಗೋಕರ್ಣದಲ್ಲಿ ತಲೆ ಚಪ್ಪಟೆಯಾಗಿರುವ ಗಣಪತಿ ಪ್ರತಿಮೆಯನ್ನು ನೀವು ಕಾಣುತ್ತೀರಿ. ರಾವಣನಿಗೆ ಕೈಲಾಸಕ್ಕೆ ಹಿಂತಿರುಗಿ ಮತ್ತೆ ಆ ಕೆಲಸವನ್ನು ಮಾಡುವ ಶಕ್ತಿ ಇರಲಿಲ್ಲ. ಆದ್ದರಿಂದ ಬಹಳ ನಿರಾಶೆ ಮತ್ತು ಕೋಪದಿಂದ ಅವನು ಶ್ರೀಲಂಕಾಕ್ಕೆ ಹೊರಟುಹೋದ.
ನೀವು ಒಳ್ಳೆಯವರಾಗಿರಲಿ ಅಥವಾ ಕೆಟ್ಟವರಾಗಿರಲಿ, ನೀವು ಸಿದ್ಧರಿದ್ದರೆ, ದೈವತ್ವ ಯಾವಾಗಲೂ ಎಲ್ಲರಿಗೂ ಲಭ್ಯವಿರುತ್ತದೆ. ಆದರೆ ಅದನ್ನು ಶಾಪವನ್ನಾಗಲಿ ಅಥವಾ ವರವನ್ನಾಗಲಿ ಪರಿವರ್ತಿಸುವುದು ನೀವು ಯಾವ ರೀತಿಯಾಗಿ ಅದನ್ನು ಇಟ್ಟುಕೊಳ್ಳುತ್ತೀರಿ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಯಾವ ರೀತಿಯಲ್ಲಿ ನಿಮ್ಮ ವರ್ತನೆ ಮತ್ತು ಮನಸ್ಸನ್ನು ಬೆಳೆಸಿಕೊಳ್ಳುತ್ತೀರಿ ಎಂಬುದು ನೀವು ಹೇಗೆ ಅಸ್ತಿತ್ವದಲ್ಲಿ ಆ ದೈವತ್ವವನ್ನು ಬಳಸಿಕೊಳ್ಳುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ.
Editor’s Note: Get the latest updates from the Isha Blog. Twitter, facebook, rss or browser extensions, take your pick.