ಸಂಖ್ಯೆಗಳಿಲ್ಲದಿದ್ದರೆ ನಮ್ಮ ಜೀವನ ಉತ್ತಮವಾಗಿರುತ್ತಿತ್ತೇ?
ಸಂಖ್ಯೆಗಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಿ – ಗಡಿಯಾರದಲ್ಲಿರುವ ಗಂಟೆಯ ಬಗ್ಗೆ, ಕ್ಯಾಲೆಂಡರಿನಲ್ಲಿರುವ ದಿನಾಂಕದ ಬಗ್ಗೆ ಅಥವಾ ನಮ್ಮ ಜನ್ಮ ಪ್ರಮಾಣಪತ್ರದಲ್ಲಿರುವ ವರ್ಷದ ಬಗ್ಗೆ ಚಿಂತೆಯಿರದ ಜಗತ್ತು. ನಾವು ಹೆಚ್ಚು ಸಹಜವಾಗಿ ಹಾಗೂ ಸಂತೋಷದಿಂದ ಜೀವಿಸುತ್ತಿದ್ದೆವೆ? ಪ್ರಸೂನ್ ಜೋಷಿಯವರು ಈ ಕುತೂಹಲಕಾರಿ ಪ್ರಶ್ನೆಯನ್ನು ಸದ್ಗುರುಗಳ ಮುಂದಿಡುತ್ತಾರೆ.
ಪ್ರಸೂನ್ ಜೋಷಿ: ಸದ್ಗುರು, ಜೀವನದಲ್ಲಿ ಸಂಖ್ಯೆಗಳೇ ಇಲ್ಲದಿದ್ದರೆ, ನಮ್ಮ ಜೀವನವು ಉತ್ತಮವಾಗಿರುತ್ತಿತ್ತೇ? ನಮ್ಮ ವಯಸ್ಸೆಷ್ಟು, ಈಗ ಸಮಯವೆಷ್ಟು, ಅಥವಾ ನಾವೆಷ್ಟು ಹೊತ್ತು ಮಲಗಿದ್ದೆವು ಎಂಬುದರ ಬಗ್ಗೆ ಯೋಚನೆಯಿರುತ್ತಿರಲಿಲ್ಲ. ನಮಗೆ ಸಂಖ್ಯೆಗಳ ಪರಿಕಲ್ಪನೆಯಿಲ್ಲದಿದ್ದರೆ, ನಾವು ಪ್ರಕೃತಿ ಮತ್ತು ಜೀವನದ ಜೊತೆ ಹೆಚ್ಚು ಲಯಬದ್ಧವಾಗಿರುತ್ತಿದ್ದೆವೆ?
ಸದ್ಗುರು: ನಮಸ್ಕಾರ ಪ್ರಸೂನ್. ನೀವು ಪದಗಳ ಮಾಂತ್ರಿಕನೆಂದು ನನಗೆ ತಿಳಿದಿದೆ, ನಿಮಗೆ ಸಂಖ್ಯೆಗಳನ್ನು ಕಂಡರೆ ಇಷ್ಟವಿಲ್ಲ! ನೋಡಿ, ಒಮ್ಮೆ ನೀವು “ನಾನು” ಮತ್ತು “ನೀನು” ಎಂದಾಗ, ಅಲ್ಲಿ ಎರಡಾಯಿತು. ನೀವು ಬರೀ “ನಾನು” ಎಂದರೂ, ಅಲ್ಲಿ “ಒಂದು” ಇದೆ. “ಒಂದು” ಅನ್ನುವುದಿದ್ದ ಮೇಲೆ, ಹತ್ತು, ನೂರು, ಸಾವಿರ, ಲಕ್ಷವು ಸ್ವಾಭಾವಿಕವಾಗಿಯೇ ಹುಟ್ಟಿಕೊಳ್ಳುತ್ತದೆ. ಸಂಖ್ಯೆ ಅನ್ನುವುದು ನಿಮ್ಮ ವಯಸ್ಸೆಷ್ಟು, ಈಗ ಸಮಯವೆಷ್ಟು, ಅಥವಾ ನಾವೆಷ್ಟು ಹೊತ್ತು ಮಲಗಿದ್ದೆವು ಅಥವಾ ಎಷ್ಟು ಹೊತ್ತಿಗೆ ನಾವು ಎದ್ದೆವು ಎನ್ನುವುದರ ಬಗ್ಗೆಯಲ್ಲ. ”ನೀವು” ಮತ್ತು “ನಾನು” ಅನ್ನುವುದೇ ಎರಡು ಸಂಖ್ಯೆಗಳು.
ನೀವು “ನಾನು” ಎಂದು ಹೇಳಿದೊಡನೆಯೇ, ನೀವೊಂದು ಸಂಖ್ಯೆಯನ್ನು ಸೃಷ್ಟಿಸಿಯಾಯ್ತು. ಸಂಖ್ಯೆಗಳನ್ನು ಮೀರಲಿರುವ ಒಂದೇ ಮಾರ್ಗವೆಂದರೆ, ಶೂನ್ಯದಲ್ಲಿರುವುದು. ನೀವು ಯೋಗದಲ್ಲಿದ್ದರೆ, ನೀವು “ಶಿವ”ನಂತೆ – ಶಿವ ಎಂದರೆ “ಯಾವುದಿಲ್ಲವೋ ಅದು” ಅಥವಾ “ಶೂನ್ಯ” – ಇದರರ್ಥ ನೀವು ಇಲ್ಲ.
ಯೋಗದ ಅರ್ಥ “ಐಕ್ಯತೆ” ಎಂದು. ಇದು ನಿಮ್ಮ ಪ್ರತ್ಯೇಕ ವ್ಯಕ್ತಿತ್ವದ ಎಲ್ಲೆಗಳನ್ನು ನಿರ್ನಾಮ ಮಾಡುವ ವಿಜ್ಞಾನ. ಮೂಲಭೂತ ಸಂಖ್ಯೆಯಾದ “ಒಂದು”, ಎಂದರೆ “ನಾನು” ಅನ್ನುವುದು ನಿರ್ನಾಮವಾಗುತ್ತದೆ. ಒಮ್ಮೆ, ಒಂದನ್ನು ತೆಗೆದುಬಿಟ್ಟಿರಿ ಎಂದರೆ, ಲಕ್ಷ, ದಶಲಕ್ಷ, ಕೋಟಿ, ಇವುಗಳಿಗೆ ಬೆಲೆಯಿರುವುದಿಲ್ಲ. ಎಲ್ಲವೂ ಶೂನ್ಯವಾಗುತ್ತದೆ. ಐಕ್ಯತೆ ಎಂದರೆ “ನಾನು ಮತ್ತು ನೀನು” ಅನ್ನುವುದಿರುವುದಿಲ್ಲ. “ಅನೇಕ” ಇರುವುದಿಲ್ಲ, “ಏಕ” ಮಾತ್ರವಿರುತ್ತದೆ. ಅದರೆ, ನಿಜವಾಗಿಯೂ ಅಲ್ಲಿ “ಒಂದು” ಕೂಡ ಇರುವುದಿಲ್ಲ – ಅಲ್ಲಿ ಏನೂ ಉಳಿಯುವುದಿಲ್ಲ. ಇದನ್ನು ಹಲವಾರು ವಿಧಗಳಲ್ಲಿ ಉಲ್ಲೇಖಿಸುತ್ತಾರೆ. ಶೂನ್ಯವೆಂದು, ಶಿವನೆಂದು ಕರೆಯುತ್ತಾರೆ. ಯಾವುದಿದೆಯೋ, ಅದು ಮಾತ್ರ ಸಂಖ್ಯೆಗಳನ್ನು ಹೊಂದಿರಬಹುದು. ಯಾವುದು ಇಲ್ಲವೋ, ಅದು ಸಂಖ್ಯೆಗಳನ್ನು ಹೊಂದಿರಲಾರದು.
ಸಂಖ್ಯೆಗಳು ಭೌತಿಕ ಅಸ್ತಿತ್ವದ ಸ್ವಾಭಾವಿಕ ಪರಿಣಾಮ, ಯಾಕೆಂದರೆ ಭೌತಿಕ ಅಸ್ತಿತ್ವವು ಸಹಜವಾಗಿಯೇ ಎಲ್ಲೆಗಳನ್ನು ಹೊಂದಿರುತ್ತದೆ. ಭೌತಿಕವಾಗಿ ಮತ್ತು ಮಾನಸಿಕವಾಗಿ “ನೀವು” ಎಂದು ಕರೆಯುವ ಒಂದು ಗಡಿಯಿದೆ, ಮತ್ತು ನೀವು “ನಾನು” ಎಂದು ಕರೆಯುವ ಒಂದು ಗಡಿಯಿದೆ – ಇದರಿಂದಾಗಿಯೆ “ನಾನು ಮತ್ತು ನೀನು” ಎನ್ನುವುದಿರುವುದು. ಇದರಲ್ಲೇ ಎರಡು ಸಂಖ್ಯೆಗಳಿವೆ. ಇದರ ನಂತರ, ಕೂಡುವುದು, ಗುಣಿಸುವುದು – ಇದೆಲ್ಲವೂ ಇದೆ.
ಭೌತಿಕ ಅಸ್ತಿತ್ವವನ್ನು ಅತಿಶಯಿಸಿದಾಗ ಮಾತ್ರ, ಸಂಖ್ಯಾರಹಿತ ಅಸ್ತಿತ್ವದ ಸಾಧ್ಯತೆಯಿರುತ್ತದೆ. ಐಕ್ಯತೆಯಲ್ಲಿ ಅನೇಕ ಅನ್ನುವುದಿರುವುದಿಲ್ಲ, ಅಲ್ಲಿ “ಒಂದು” ಕೂಡ ಇರುವುದಿಲ್ಲ, ಅಲ್ಲಿ ಏನೂ ಉಳಿಯವುದಿಲ್ಲ. ನಾವು ಅಪರಿಮಿತ ಅಥವಾ ಅಸೀಮಿತ ಎಂದಾಗ, ಅದು ಸಂಖ್ಯಾರಹಿತವೆಂದೂ ಹೇಳುತ್ತಿದ್ದೇವೆ. ನನ್ನ ಜೀವನದ ಪ್ರಯತ್ನವಿದೇ – ಜನರನ್ನು ಆ ಸಂಖ್ಯಾರಹಿತ ಅನುಭೂತಿಯ ಕಡೆಗೆ ಕರೆದೊಯ್ಯುವುದು.
ಪದಗಳ ಮೋಡಿಯ ಹಾಗೆ, ಗಣಿತಶಾಸ್ತ್ರದ ರೂಪದಲ್ಲಿ ಸಂಖ್ಯೆಗಳ ಮೋಡಿಯೂ ಬಹಳ ಸುಂದರವಾಗಿರುತ್ತದೆ. ಪದಗಳು ಮತ್ತು ಸಂಖ್ಯೆಗಳು ಎರಡು ಪ್ರತ್ಯೇಕ ವಿಷಯಗಳಲ್ಲ – ಯಾಕೆಂದರೆ, ಒಂದು ಪದವಿದ್ದರೆ, ಹಲವಾರು ಪದಗಳಿರುತ್ತವೆ; ಒಂದು ಸಂಖ್ಯೆಯಿದ್ದರೆ, ಹಲವಾರು ಸಂಖ್ಯೆಗಳಿರುತ್ತವೆ. ಇವೆಲ್ಲವೂ ಅಸ್ತಿತ್ವದ ಭೌತಿಕ ಅಭಿವ್ಯಕ್ತಿಯ ಪರಿಣಾಮ. ಯಾರಾದರೂ ಭೌತಿಕತೆಯನ್ನು ಅತಿಶಯಿಸಿದರೆ, ಆಗ, “ಆಧ್ಯಾತ್ಮಿಕತೆ" ಅನ್ನುವ ಬಹಳ ಭ್ರಷ್ಟವಾಗಿರುವ ಪದವನ್ನು ಬಳಸುತ್ತೇವೆ. ಆಧ್ಯಾತ್ಮಿಕತೆ ಎಂದರೆ, “ಸಂಖ್ಯಾರಹಿತ” ಅಸ್ತಿತ್ವ.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.