ವೈಕಲ್ಯತೆ ಆನಂದವನ್ನು ಕಿತ್ತುಕೊಳ್ಳಬಾರದು
ನಾವೆಲ್ಲಾ ಬೇರೆ ಬೇರೆ ಸಾಮರ್ಥ್ಯ ಇರುವವರಾದರೂ, ನಮ್ಮ ಸಮಾಜದಲ್ಲಿ ಇನ್ನೂ ಹಲವಾರು ಜನ ತಮ್ಮ ದಿನನಿತ್ಯದ ಕೆಲಸಗಳಿಗೂ ಬೇರೆಯರನ್ನು ಅವಲಂಬಿಸುತ್ತಾರೆ. ನಮ್ಮ ಸಮಾಜದಲ್ಲಿ ಇಂದಿಗೂ ಅಂಗವಿಕಲರು ಅನುಭವಿಸುತ್ತಿರುವ ನಾನಾ ರೀತಿಯ ತೊಂದರೆಗಳನ್ನು ನಿವಾರಿಸಿ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುವ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ.
ಸದ್ಗುರು: ಇಂದು, ನಾವು ಜನರನ್ನು “ವಿಕಲಾಂಗರು” ಎಂದು ಗುರುತಿಸುದಿಲ್ಲ. ನಾವು ಅವರನ್ನು ವಿಶೇಷ ಮಕ್ಕಳು ಅಥವಾ ವಿಶೇಷ ವ್ಯಕ್ತಿಗಳು ಎನ್ನುತ್ತೇವೆ. ಅವರು ಖಂಡಿತ ವಿಶಿಷ್ಟರು, ಹಾಗಾಗಿಯೇ ನೀವು ಅವರಿಗೆ ಬೇರೆಯವರಿಗಿಂತ ಹೆಚ್ಚಾಗಿ ನಿಮ್ಮ ಸಮಯ ಮತ್ತು ಸಹಕಾರ ಕೊಡಬೇಕು. ನಿಮ್ಮ ಮಾನವೀಯತೆಯನ್ನು ಸದ್ವಿನಿಯೋಗಿಸಲು ಮತ್ತು ಜೀವನದ ಸೂಕ್ಷ್ಮತೆಯನ್ನು ಅರಿಯಲು ನಿಮಗೆ ಇದು ಸದವಕಾಶ. ಇದೆಲ್ಲಾ ಜನರಿಗೆ ಸ್ವಾಭಾವಿಕವಾಗಿಯೇ ಬರಬೇಕೇ ಹೊರತು ಯಾವುದೋ ಅಧ್ಯಾತ್ಮ ಅಥವಾ ದೈವಿಕ ಮಾರ್ಗ ದರ್ಶನದಿಂದಲ್ಲ.
ಖಾಯಿಲೆಗಳು, ಗಾಯಗಳು, ಜನ್ಮದೋಷಗಳು - ಇವೆಲ್ಲಾ ಜೀವನದ ವಾಸ್ತವತೆ. ಎಲ್ಲರಿಗೂ ಕಾಲುಗಳಿರಬೇಕೆಂಬುದನ್ನು ನಾವು ನೋಡಬಯಸುತ್ತೇವೆ ಎಂಬುದು ನಿಜ. ಆದರೆ, ಯಾರಿಗಾದರೂ ಇಲ್ಲವೆಂದರೆ, ಅದು ಅವರಿಗೆ ಒಂದು ದುರವಸ್ಥೆಯಾಗಬಾರದು. ಅವರು ಸಹಜವಾಗಿ ಜೀವನ ನಡೆಸಲು ಜನರು ಸಹಕರಿಸಬೇಕು. ಇದು ಪರಿಹರಿಸಲೇ ಬೇಕಾದ ಸಮಸ್ಯೆ, ಇದು ಒಂದು ವ್ಯಕ್ತಿಗತ ಸಮಸ್ಯೆಗಿಂತ ಹೆಚ್ಚು ಸಾಮಾಜಿಕ ಸಮಸ್ಯೆ.
ಸಮಾನತೆಯಲ್ಲ, ಸಮಾನ ಅವಕಾಶ ಇರಬೇಕು
ವಿವಿಧ ಜನರಿಗೆ ವಿವಿಧ ರೀತಿಯ ಸಾಮರ್ಥ್ಯ ಇರುತ್ತದೆ. ನಾವೆಲ್ಲರೂ 9 ಸೆಕೆಂಡ್ ಗಳಲ್ಲಿ 100ಮೀಟರ್ ಓಡಲು ಸಾಧ್ಯವಿಲ್ಲ. ಹಾಗೆಂದು ನಾವು ವಿಕಲಾಂಗರೇ ? ಅದನ್ನು ಸಾಧಿಸಿದವನ ಜೊತೆ ಹೋಲಿಸಿಕೊಂಡರೆ ಹೌದು. ಹಾಗಾಗಿ “ಅಂಗವೈಕಲ್ಯ” ಎಂಬುದು ತುಲನಾತ್ಮಕವಾಗುತ್ತದೆ. ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ಪ್ರತಿಯೊಬ್ಬರಿಗೂ ಬೇರೆ ಬೇರೆ ಮಟ್ಟದಲ್ಲಿರುತ್ತದೆ. ಆದರೆ, ನಮ್ಮ ಸಮಾಜ ಸಾಧ್ಯವಾದಷ್ಟೂ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬಹುದು. ಜನರನ್ನೇ ಸಮಾನರಾಗಿ ನೋಡಲು ಬಯಸಿದರೆ, ಅದು ಕ್ರೌರ್ಯವಾಗುತ್ತದೆ. ಒಬ್ಬನಿಗೆ ಕಾಲಿಲ್ಲವೆಂದು ಎಲ್ಲರ ಕಾಲನ್ನೂ ಕತ್ತರಿಸಲು ಸಾಧ್ಯವಿಲ್ಲ, ಅಲ್ಲವೇ? ಹಾಗೆ ಮಾಡುವುದು ಸಮಾನತೆಯೇ? ಸಮಾನತೆ ಎಂಬುದು ಮೂರ್ಖ ಆಲೋಚನೆ. ಆದರೆ ಎಲ್ಲರಿಗೂ ಸಮಾನ ಅವಕಾಶ ಎನ್ನುವುದನ್ನು ಪ್ರತಿಯೊಂದು ಸಮಾಜವೂ ರೂಢಿಸಿಕೊಳ್ಳಲೇಬೇಕಾದಂತಹ ವಿಷಯ.
ಹಿಂದೊಮ್ಮೆ ಬಹಳ ಜನರು ಪೋಲಿಯೋಗೆ ತುತ್ತಾಗಿ ಬಳಲುತ್ತಿದ್ದರು. ಆದರೆ ಈಗ ಸಾರ್ವಜನಿಕ ಅರೋಗ್ಯ ಮತ್ತು ಸಾಮಾಜಿಕ ಕಾಳಜಿಯ ಬಗ್ಗೆ ಅರಿವನ್ನು ಬೆಳೆಸಿಕೊಂಡಿರುವ ಸರ್ಕಾರ, ಸಂಸ್ಥೆಗಳು, ಮತ್ತು ಜನಸಾಮಾನ್ಯರು ಪ್ರತಿಯೊಂದು ಮಗುವೂ ಪೋಲಿಯೋ ಲಸಿಕೆಯನ್ನು ಹಾಕಿಸಿಕೊಳ್ಳುವಲ್ಲಿ ಯಶಸ್ವಿ ಪಾತ್ರ ವಹಿಸುತ್ತಿದ್ದಾರೆ. ಆದರೂ ಯಾರಾದರೂ ಪೋಲಿಯೋದಿಂದ ಬಳಲಿದರೆ, ಅವರು ಸಂಪೂರ್ಣ ಜೀವನ ನಡೆಸಲು ಬೇಕಾದ ಅವಕಾಶಗಳನ್ನು ಕೊಟ್ಟು ಸಹಕರಿಸಬೇಕು. ಸಾರ್ವಜನಿಕ ಸಾರಿಗೆ ಬಳಸಲು, ಸಾರ್ವಜನಿಕ ಸ್ಥಳಗಳಲ್ಲಿ, ಹೀಗೆ ಸಾಧ್ಯವಾದಲ್ಲೆಲ್ಲ. ಹಲವಾರು ದೇಶಗಳಲ್ಲಿ ಈ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ತಕ್ಕನಾದ ವ್ಯವಸ್ಥೆಯನ್ನು ಮಾಡಿಲ್ಲ. ಸಧ್ಯಕ್ಕೆ ಹೇಗಾಗಿದೆ ಎಂದರೆ, ನಾವು ಮಾಡಿರುವುದೆಲ್ಲವೂ ಅವರಿಗೆ ಅಡಚಣೆಗಳಾಗಿಯೇ ಇವೆ.
ನಿಮ್ಮ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಬಳಸುವುದು
ನೀವು ಒಂದಂತೂ ಅರ್ಥಮಾಡಿಕೊಳ್ಳಬೇಕು. ಅಂಗವಿಕಲತೆ ಇಲ್ಲದವರನ್ನೂ ಕೂಡ ಅವರ ಕೆಲವು ಅಸಮರ್ಥತೆಗಳಿಗೆ ಜನ ಅಪಹಾಸ್ಯ ಮಾಡಿ ನಗುತ್ತಾರೆ. ನಾವೆಲ್ಲರೂ ಎಲ್ಲವನ್ನೂ ಒಂದೇ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ. ನೀವು ಸುಶ್ರಾವ್ಯವಾಗಿ ಹಾಡಬಹುದು, ಅದೇ ನಾನು ಹಾಡಿದರೆ, ಕೆಟ್ಟದಾಗಿ ಹಾಡಿ ನಗೆಪಾಟಲಾಗಬಹುದು. ನಮ್ಮ ಸಮಾಜವೇ ಮಾನಸಿಕ ಅಂಗವೈಕಲ್ಯದಿಂದ ಬಳಲುತ್ತಿದೆ. ನೀವೇನಾದರೂ ಹುಟ್ಟುವಾಗಲೇ ವಿಚಿತ್ರ ಮೂಗನ್ನು ಹೊಂದಿದ್ದರೆ, ಜನ ಅಪಹಾಸ್ಯ ಮಾಡಿ ನಗುತ್ತಾರೆ. ನಿಮಗಿಂತ ತಾನು ಉತ್ತಮ ಎಂದುಕೊಳ್ಳುವ ಒಬ್ಬನು ಇದ್ದೇ ಇರುತ್ತಾನೆ. ನಿಮ್ಮಲ್ಲಿರುವ ಒಳ್ಳೆಯದನ್ನು ಹೇಗೆ ಬಳಸಬಹುದು ಎಂಬುದನ್ನು ನೀವು ಆಲೋಚಿಸಬೇಕೇ ಹೊರತು ನಿಮ್ಮ ಬಗ್ಗೆ ಬೇರೆಯವರು ಏನು ಆಲೋಚಿಸುತ್ತಿದ್ದಾರೆ? ಏಕೆ ನಗುತ್ತಿದ್ದಾರೆ ಎಂಬುದರ ಬಗ್ಗೆ ಅಲ್ಲ. ನಿಮಗೆ ಬೇಕಾದನ್ನು ನೀವು ಮಾಡಿಕೊಂಡು ನಿಮಗೆ ನೀವೇ ಸಂತಸದ ಮೂಲವಾಗಿರಲು ಪ್ರಯತ್ನಿಸಬೇಕು.
ಬೇರೆಯವರು ಏನು ಬೇಕಾದರೂ ಹೇಳಿಕೊಳ್ಳಲಿ, ನಿಮ್ಮನ್ನು ನೀವು ಶಾಂತಿ, ನೆಮ್ಮದಿಯಿಂದ ಇರಿಸಿಕೊಳ್ಳುವುದು ಮತ್ತು ನಿಮ್ಮ ದೇಹ, ಮನಸ್ಸುಗಳು ಮತ್ತು ಭಾವನೆಗಳನ್ನು ಹೇಗೆ ನೆಮ್ಮದಿಯಿಂದ ಇರಿಸಿಕೊಳ್ಳಬೇಕು ಎಂದು ತಿಳಿಸುವ ಒಂದು ವಿಜ್ಞಾನವೇ ಇದೆ. ಅದನ್ನೇ ನಾವು `ಯೋಗ’ ಎನ್ನುತ್ತೇವೆ. ನಿಮ್ಮನ್ನು ನೀವಾಗಿರುಸುವ ಒಂದು ತಂತ್ರ ಅದು. ಆಗ “ನೀವು” ಎಂಬುದು ಇನ್ನು ಸಮಸ್ಯೆಯಾಗಿರುವುದಿಲ್ಲ, ಸಮಸ್ಯೆಗಳು ಏನೇ ಇದ್ದರೂ ಹೊರಗಿನ ಪ್ರಪಂಚದ್ದು ಅಷ್ಟೇ. ನಾವಿರುವ ಬಾಹ್ಯ ಪ್ರಪಂಚದ ಸಮಸ್ಯೆಗಳನ್ನು ನಮಗಿರುವ ವಾಸ್ತವತೆಯ ತಿಳುವಳಿಕೆಯಿಂದ ಬಗೆಹರಿಸಿಕೊಳ್ಳಬಹುದು. ಆದರೆ, ನೀವೇ ಒಂದು ಸಮಸ್ಯೆಯಾದರೆ, ನೀವು ಹೊರಗಿನ ಸಮಸ್ಯೆಯನ್ನು ಕೂಡ ಬಗೆಹರಿಸುವಲ್ಲಿ ಅಸಮರ್ಥರಾಗುತ್ತೀರಿ. ಒಬ್ಬ ಮನುಷ್ಯನು ತನ್ನ ಕೈಲಾಗದ್ದನ್ನು ಮಾಡದೇ ಇದ್ದರೇ, ಅದು ಪರವಾಗಿಲ್ಲ. ಆದರೆ ತನ್ನಿಂದ ಸಾಧ್ಯವಾಗುವುದನ್ನೂ ಮಾಡಲಾಗದಿದ್ದರೆ, ಅದಕ್ಕಿಂತ ದುರಂತ ಬೇರೊಂದಿಲ್ಲ. ಹಾಗೆ ಆಗಬಾರದು.
ಸಂಪಾದಕರ ಟಿಪ್ಪಣಿ: “ಪರಿವರ್ತನೆಗಾಗಿ 5-ನಿಮಿಷಗಳ ಯೋಗ ಸಾಧನಗಳು” – ಆನಂದ, ನೆಮ್ಮದಿ, ಸೌಖ್ಯ, ಯಶಸ್ಸು ಮುಂತಾದವುಗಳನ್ನು ಸಾಧಿಸಲು ಸರಳ ಈಶ ಉಪಯೋಗ ಅಭ್ಯಾಸಗಳ - ಇಲ್ಲಿ ಕಲಿಯಿರಿ.
A version of this article was originally published in The Week.
www.theweek.in/columns/sadhguru/disability-should-not-take-away-inner-joy.html