Video transcript

ಪ್ರಶ್ನೆ: ಸದ್ಗುರುಗಳೇ, ನಿಮ್ಮ ಪ್ರಕಾರ ಸಂರಕ್ಷಣೆ ಮತ್ತು ಪರಿಸರವನ್ನು ಕುರಿತು ಈ ರೀತಿಯ ಕಾಳಜಿಯನ್ನು ಹುಟ್ಟಿಸಲು ಯಾವ ರೀತಿಯ ನಾಯಕತ್ವದ ಅಗತ್ಯವಿದೆ ಎನ್ನುವುದರ ಬಗ್ಗೆ ಮಾತನಾಡಬೇಕೆಂದು ಕೇಳಿಕೊಳ್ಳುತ್ತೇನೆ.

ಸದ್ಗುರು: ಆರ್ಥಿಕ ಯೋಗಕ್ಷೇಮಕ್ಕಾಗಿರುವ ಎಲ್ಲಾ ಯೋಜನೆಗಳಿಗೆ ಪರಿಸರವಾದಿಗಳು ವಿರೋಧವನ್ನು ವ್ಯಕ್ತಪಡಿಸುವ ಮನೋಭಾವವನ್ನು ಹೊಂದಿರುವುದಿಂದಲೇ ಪರಿಸರ ಸಂರಕ್ಷಣೆಯ ಕಾಳಜಿಯು ಎಲ್ಲರ ಕಾಳಜಿಯಾಗದಿರುವುದಕ್ಕೆ ಕಾರಣವೆಂದು ನನ್ನ ಅನಿಸಿಕೆ. ನಾವು ಯಾವಾಗಲೂ ಆರ್ಥಿಕ ಸ್ಥಿತಿಯನ್ನು ಪರಿಸರ ಸಂರಕ್ಷಣೆಯ ವಿರುದ್ಧ ಎತ್ತಿ ಕಟ್ಟಿದ್ದೇವೆ. ಭಾರತದಲ್ಲಿ ನಾನು ಬದಲಿಸಲು ಬಯಸುವ ಮೂಲಭೂತ ವಿಷಯವಿದು. ನಾನೊಂದು ಬಾರಿ ಇದನ್ನು ಹೇಳಿದ್ದೆ, "ಆರ್ಥಿಕತೆ ಮತ್ತು ಪರಿಸರ, ಇವರಿಬ್ಬರ ಮದುವೆಯನ್ನು ನಾನು ಮಾಡುತ್ತೇನೆ." ಇವೆರಡೂ ಒಂದಕ್ಕೊಂದು ವಿರುದ್ಧವಾಗಿರಲು ಸಾಧ್ಯವಿಲ್ಲ. ಅದನ್ನು ಮಾಡಲು ಯಾವುದೇ ದಾರಿಯಿಲ್ಲ. ಎರಡೂ ಒಟ್ಟಿಗಿರಬೇಕು. ಈ ಮೂಲಭೂತ ಹಾಗೂ ಪ್ರಧಾನವಾದ ಸಂದೇಶವನ್ನು ನಾವು ಜನತೆಗೆ ನೀಡಬೇಕು - ನಾವು ವ್ಯಾಪಾರ ವ್ಯವಹಾರವನ್ನು ಹಾಳುಗೆಡವುವ ಅಗತ್ಯವಿಲ್ಲ, ನಾವದನ್ನು ಮಾರ್ಪಡಿಸಬೇಕಾಗಿದೆಯಷ್ಟೆ. ವ್ಯಾಪಾರ ವ್ಯವಹಾರವನ್ನು ಮಾರ್ಪಡಿಸಲು ಅಗತ್ಯವಿರುವ ಸಮಯ, ಸ್ಥಳ ಮತ್ತು ಕಾರ್ಯನೀತಿಯ ಬೆಂಬಲದ ಅವಶ್ಯಕತೆಯಿದೆ.

ಆಧ್ಯಾತ್ಮಿಕ ಪ್ರಕ್ರಿಯೆಯು ಪರಿಸರ ಸಂರಕ್ಷಣೆಯನ್ನು ಗುರಿಯಾಗಿರಿಸಿಕೊಂಡಿಲ್ಲ, ಆದರೆ ಪರಿಸರ ಸಂರಕ್ಷಣೆಯು ನಮ್ಮ ಅಸ್ತಿತ್ವದ ಒಂದು ಭಾಗವಷ್ಟೆ.

ಕೃಷಿಯ ರೂಪಾಂತರ

ಪರಿಸರದ ಸಂರಕ್ಷಣೆಯೆಂದಾಗ ನಗರಗಳಿಂದ, ಕಾರ್ಖಾನೆಗಳಿಂದ ಅಥವಾ ಮತ್ತಿನ್ಯಾವುದರಿಂದಲೋ ಆಗುವ ಮಾಲಿನ್ಯವೆಂದೇ ಎಲ್ಲರೂ ಅರ್ಥೈಸುತ್ತಾರೆ. ಆದರೆ ಭೂಮಿಯ ಮೇಲಿನ ಅತಿ ದೊಡ್ಡ ದುರಂತವಾದ ಕೃಷಿಯ ಬಗ್ಗೆ ಎಲ್ಲರೂ ಮರೆತುಬಿಡುತ್ತಾರೆ. ನಿಜವಾದ ಸಮಸ್ಯೆ ಮಣ್ಣಿನ ಸಾರಹರಣ(degradation). ಬೇರೆಲ್ಲವನ್ನೂ ಹಲವು ದಶಕಗಳಲ್ಲಿ ಸಂಬಾಳಿಸಿ ಅವನ್ನು ಹಿಂದಿದ್ದ ಸ್ಥಿತಿಗೆ ಮರಳಿಸಬಹುದು. ಅದರೆ ಜಗತ್ತಿನಾದ್ಯಂತದ ನಡೆಯುತ್ತಿರುವ ಮಣ್ಣಿನ ಸಾರಹರಣವನ್ನು ನಿರ್ಲಕ್ಷಿಸುವಂತಹ ವಿಷಯವಲ್ಲ; ಅದನ್ನು ಸರಿ ಮಾಡಲು ಐವತ್ತರಿಂದ ನೂರು ವರ್ಷ ಬೇಕಾಗುತ್ತದೆ. ಮಣ್ಣಿನ ಪುನಶ್ಚೇತನಕ್ಕೆ ಕೇವಲ ಎರಡೇ ಮಾರ್ಗಗಳಿರುವುದು. ಒಂದು: ಮರಗಿಡಗಳಿಂದ ಭೂಮಿಗೆ ಬೀಳುವ ಎಲೆಗಳು; ಎರಡು: ಪ್ರಾಣಿ ಮತ್ತು ಮನುಷ್ಯರ ಮಲ ಅಥವಾ ತ್ಯಾಜ್ಯ. ಮರಗಳನ್ನು ನಾವು ಕಳೆದುಕೊಂಡು ಕಾಲವಾಯಿತು. ಈಗಿರುವ ಪರಿಹಾರವೆಂದರೆ, ಪ್ರಾಣಿಗಳ ತ್ಯಾಜ್ಯ. ಪ್ರಾಣಿಗಳಿಲ್ಲದೇ ನೀವು ಮಣ್ಣನ್ನು ಉತ್ಕೃಷ್ಟಗೊಳಿಸಲು ಸಾಧ್ಯವಿಲ್ಲ. ರಾಸಾಯನಿಕ ಗೊಬ್ಬರದ ಚೀಲದ ಮೂಲಕ ಮಣ್ಣನ್ನು ಉತ್ಕೃಷ್ಟಗೊಳಿಸಲು ಸಾಧ್ಯವಿಲ್ಲ.

ಪರಿಸರ ಮತ್ತು ಆಧ್ಯಾತ್ಮ

ಪ್ರಶ್ನೆ: ನಮ್ಮ ಸುತ್ತಲಿರುವ ಪರಿಸರ ವ್ಯವಸ್ಥೆಯಲ್ಲಿನ ಸಂಬಂಧಗಳಲ್ಲಿ, ಪರಿಸರವನ್ನು ಸಂರಕ್ಷಿಸುವಲ್ಲಿ ನೀವು ಕೆಲವು ಆಧ್ಯಾತ್ಮಿಕ ಪ್ರಕ್ರಿಯೆಗಳನ್ನು ಕಾಣುತ್ತೀರೇ?

ಸದ್ಗುರು: ಮೂಲಭೂತವಾಗಿ, ಆಧ್ಯಾತ್ಮಿಕತೆಯ ಅರ್ಥವೆಂದರೆ - ಜೀವನದ ನಿಮ್ಮ ಅನುಭೂತಿಯು ನಿಮ್ಮ ಭೌತಿಕತೆಯನ್ನು ಮೀರಿ ಹೋಗಿದೆ ಎಂದು. ಆದ್ದರಿಂದ, ನೀವು ನಿಮ್ಮ ಶರೀರವನ್ನೂ ಮೀರಿದ ಅನುಭೂತಿಯನ್ನು ಹೊಂದಿದರೆ, ನಿಮ್ಮ ಅನುಭವ ಏನಾಗಿರುತ್ತದೆ? ಸ್ವಾಭಾವಿಕವಾಗಿ, ಅದು ನಿಮ್ಮ ಸುತ್ತಲಿರುವು ಜೀವನದೊಂದಿಗೆ ಒಳಗೂಡಿಸಿಕೊಳ್ಳುವಿಕೆಯಾಗಿರುತ್ತದೆ.

ನಾವು ಉಸಿರಿನ ಮೂಲಕ ಹೊರಬಿಡುವುದನ್ನು ಮರಗಳು ಒಳತೆಗೆದುಕೊಳ್ಳುತ್ತಿವೆ; ಮರಗಳು ಹೊರಬಿಡುವುದನ್ನು ನಮ್ಮ ಜೀವನದ ಪ್ರತಿ ಕ್ಷಣ ನಾವು ಒಳತೆಗೆದುಕೊಳ್ಳುತ್ತಿದ್ದೇವೆ. ಆದರೆ ಹೇಗೋ ಏನೋ, ನಾವಿದರ ಬಗ್ಗೆ ಪ್ರಜ್ಞೆಯಿಲ್ಲದೆ ಬದುಕುತ್ತಿದ್ದೇವೆ. ಆಧ್ಯಾತ್ಮಿಕ ಪ್ರಕ್ರಿಯೆಯು ಪರಿಸರ ಸಂರಕ್ಷಣೆಯನ್ನು ಗುರಿಯಾಗಿರಿಸಿಕೊಂಡಿಲ್ಲ, ಆದರೆ ಪರಿಸರ ಸಂರಕ್ಷಣೆಯು ನಮ್ಮ ಅಸ್ತಿತ್ವದ ಒಂದು ಭಾಗವಷ್ಟೆ. ದೊಡ್ಡ ಪ್ರಮಾಣದಲ್ಲಿ ಈ ಅರಿವನ್ನು ಜನರು ಅನುಭವಿಸುವಂತೆ ಮಾಡುವುದು ಬಹಳ ಮುಖ್ಯ. ಏಕೆಂದರೆ, ನೀವು ಜನರಿಗೆ ಎಷ್ಟಾದರೂ ಕಲಿಸಬಹುದು, ನೀವು ಎಷ್ಟಾದರೂ ಅಭಿಯಾನವನ್ನು ಮಾಡಬಹುದು, ಆದರೆ ಜನರು ತಮ್ಮ ಅನುಭವಕ್ಕನುಗುಣವಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ. ವಿಶೇಷವಾಗಿ, ಜವಾಬ್ದಾರಿಯುತ ಮತ್ತು ಅಧಿಕಾರದ ಸ್ಥಾನಗಳನ್ನು ಹೊಂದಿರುವ ಜನರು. ಇವರು ಜಗತ್ತಿನಲ್ಲಿ ಬದಲಾವಣೆಗಳನ್ನು ತರುವಂತಹವರು - ಇವರ ಬದುಕು ಈಗಿರುವುದಕ್ಕಿಂತ ಹೆಚ್ಚು ಒಳಗೂಡಿಸಿಕೊಳ್ಳುವಂತಹದಾಗಿರಬೇಕು. ಈ ಸಣ್ಣ ಉದಾಹರಣೆಯನ್ನು ನಿಮಗೆ ಹೇಳಲೇಬೇಕು. 

ಇಪ್ಪತ್ತೇಳು ವರ್ಷಗಳ ಕಾಲ ನಾನು ನನ್ನ ಊರಿಗೆ ಹೋಗಿರಲಿಲ್ಲ. ನನ್ನ ಕುಟುಂಬದವರನ್ನು ಭೇಟಿ ಮಾಡಲು ಹೋಗುತ್ತಿದ್ದೆಯಾದರೂ ಅಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಿರಲಿಲ್ಲ;  ಏಕೆಂದರೆ ನನಗೆ ನನ್ನ ಊರಿನಲ್ಲಿ  ಅನಾಮಧೇಯನಾಗಿರಬೇಕಿತ್ತು. ಅದೇನು ಫಲಪ್ರದವಾಗಲಿಲ್ಲ. ಸುಮಾರು ಹತ್ತು, ಹನ್ನೆರಡು ವರ್ಷಗಳ ಹಿಂದೆ, ಅವರು ಒತ್ತಾಯ ಮಾಡಿದ್ದರಿಂದ, ಅಲ್ಲೊಂದು ಕಾರ್ಯಕ್ರಮವನ್ನು ನೆಡೆಸಿದೆ. ಅಲ್ಲಿಗೆ ಎಲ್ಲರೂ ಬಂದಿದ್ದರು, ನನ್ನ ಸಹಪಾಠಿಗಳು, ನನ್ನ ಶಾಲೆಯ ಶಿಕ್ಷಕರು, ನನ್ನ ಕಾಲೇಜಿನ ಶಿಕ್ಷಕರು, ನನಗೆ ಬಹಳ ಕಾಲದಿಂದ ಪರಿಚಯವಿದ್ದ ಅನೇಕ ಜನರು. ಕಾರ್ಯಕ್ರಮ ಮುಗಿದ ನಂತರ ನನಗೆ ಇಂಗ್ಲೀಷ್ ಪಾಠ ಮಾಡುತ್ತಿದ್ದ ಶಿಕ್ಷಕರು, ನನ್ನನ್ನು ತಬ್ಬಿಕೊಂಡು ಹೀಗೆಂದರು, "ರಾಬರ್ಟ್ ಫ್ರಾಸ್ಟ್-ನ ಬಗ್ಗೆ ಕಲಿಸಲು ನೀನ್ಯಾಕೆ ಬಿಡಲಿಲ್ಲವೆಂದು ನನಗೀಗ ತಿಳಿಯಿತು." ನಾನೆಂದೆ, "ನಾನ್ಯಾಕೆ  ನಿಮಗೆ ರಾಬರ್ಟ್ ಫ್ರಾಸ್ಟ್-ನ ಬಗ್ಗೆ ಕಲಿಸಲು ಬಿಡಲಿಲ್ಲ? ನನಗೆ ಫ್ರಾಸ್ಟ್ ಎಂದರೆ ಇಷ್ಟ, ನಾನು ಅವರ ಊರಿಗೂ ಹೋಗಿದ್ದೆ, ಅವರದೇ ಧ್ವನಿಯಲ್ಲಿರುವ ಅವರ ಕವನ ಸಂಕಲನ ನನ್ನ ಬಳಿಯಿದೆ, ರಾಬರ್ಟ್ ಫ್ರಾಸ್ಟ್-ನ ಬಗ್ಗೆ ಕಲಿಸಲು ನಾನ್ಯಾಕೆ ಬಿಡಲಿಲ್ಲ?" ಅದಕ್ಕವರು, "ನಿನಗೆ ನೆನಪಿಲ್ಲವೇ?" ಎಂದು ಹೇಳಿ ಹಳೆಯದನ್ನು ನನಗೆ ನೆನಪು ಮಾಡಿದರು. ಏನಾಗಿತ್ತೆಂದರೆ, ನಾವು ಇಂಗ್ಲೀಷ್ ಕವಿಗಳ ಬಗ್ಗೆ ಓದುತ್ತಿದ್ದಾಗ, ನಮ್ಮ ಶಿಕ್ಷಕರು ಅಮೇರಿಕಾದ ಕವಿತೆಗಳನ್ನು ಪರಿಚಯಿಸಿದರು. ರಾಬರ್ಟ್ ಫ್ರಾಸ್ಟ್-ನ ಬಗ್ಗೆ ಮಾತನಾಡಲು ಆರಂಭಿಸಿ, ಅವರೊಬ್ಬ ಮಹಾನ್ ಕವಿ ಎಂದು ಹೇಳಿದರು. ರಾಬರ್ಟ್ ಫ್ರಾಸ್ಟ್-ನ ಕವಿತೆಯನ್ನು, "Woods are lovely, dark and deep…” ಎಂದು ಶುರುಮಾಡಿದರು. ನಾನು, "ನಿಲ್ಲಿಸಿ ಅದನ್ನು, ಮರವನ್ನು ಕಟ್ಟಿಗೆ ಎಂದು ಕರೆಯುವ ಇವನ ಕವಿತೆಯನ್ನು  ನನಗೆ ಇದನ್ನು ಕೇಳಲು ಸಾಧ್ಯವಿಲ್ಲ." ಎಂದೆ. ಅದಕ್ಕವರು, "ಇಲ್ಲ, ಇಲ್ಲ, ರಾಬರ್ಟ್ ಫ್ರಾಸ್ಟ್ ಒಬ್ಬ ಮಹಾನ್ ಕವಿ." ಎಂದರು. ನಾನೆಂದೆ, "ಅವನು ಎಷ್ಟೇ ದೊಡ್ಡ ಕವಿಯಿರಬಹುದು, ಒಂದು ಮರವನ್ನು ಕಟ್ಟಿಗೆ ಎಂದು ಕರೆಯುವವನ ಕವಿತೆಯನ್ನು ನಾನು ಕೇಳಲಾರೆ."

ಇದು ಹೇಗೆಂದರೆ, ಒಂದು ಹುಲಿ ನಿಮ್ಮನ್ನು ನೋಡಿ, "ಬೆಳಗಿನ ತಿಂಡಿ!" ಎಂದುಕೊಂಡಂತೆ. ಇದು ನಮ್ಮ ಮನಸ್ಸಿನಲ್ಲಿ ಬದಲಾಗಬೇಕು. ಒಂದು ’ಮರವೆಂದರೆ’ ಒಂದು ಟೇಬಲ್ ಅಥವಾ ಕುರ್ಚಿಯೋ, ಇನ್ಯಾವುದೋ ಫರ್ನಿಚರ್ ಅಲ್ಲ. ಒಂದು ಮರ ಅತ್ಯದ್ಭುತವಾದ ಜೀವ, ಅದು ನಮ್ಮ ಜೀವನದ ಆಧಾರ ಸ್ವರೂಪ. ಈ ವಿಚಾರವು ಪ್ರತಿಯೊಬ್ಬರ ಜೀವಂತ ಅನುಭೂತಿಯಾಗಬೇಕು. ಹಾಗಾದಾಗ ಮಾತ್ರ ಸುಸ್ಥಿರತೆ ಸಾಧ್ಯವಾಗುತ್ತದೆ.

ವೈಯಕ್ತಿಕ ಪ್ರಭಾವ

ಪ್ರಶ್ನೆ: ಪ್ರತಿಯೊಬ್ಬರು ಬಳಸುವ, ವ್ಯಯಿಸುವ ಬಗ್ಗೆ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆಯೇ? ಅಥವಾ ಇದನ್ನು ಸರಿಮಾಡಲು ದೊಡ್ಡ ಪರಿಹಾರಗಳು ಬೇಕೇ?
 

ಸದ್ಗುರು: ವ್ಯಕ್ತಿಗತ ಜನರು ಇಂದು ಬಹಳ ಪ್ರಬಲರಾಗಿದ್ದಾರೆ. ಸಾಮಾಜಿಕ ಮಾಧ್ಯಮವಿರುವ ಕಾರಣ ಮನೆಯಲ್ಲಿ ಕುಳಿತು ಬಹಳಷ್ಟು ಕೆಲಸವನ್ನವರು ಮಾಡಬಹುದು. ಅವರೆಲ್ಲಿಯೂ ಹೋಗುವ ಅಗತ್ಯವಿರುವುದಿಲ್ಲ; ಅವರು ಜಗತ್ತನ್ನು ಹಲವು ವಿಧಗಳಲ್ಲಿ ಪ್ರಭಾವಿಸಬಹುದು. ಅದಲ್ಲದೆ, ಭೂಮಿಯಲ್ಲಿನ ಅನೇಕ ದೇಶಗಳು ಪ್ರಜಾಪ್ರಭುತ್ವಗಳು. ನಾಗರಿಕರು ಇದನ್ನು ಅಭಿವ್ಯಕ್ತಿಸದಿದ್ದರೆ, ಇದನ್ನು ಸ್ಪಷ್ಟಪಡಿಸದಿದ್ದರೆ, ಪ್ರಜಾಸತ್ತೀಯವಾಗಿ ಚುನಾಯಿಸಲ್ಪಟ್ಟ ಸರ್ಕಾರ ಏನನ್ನೂ ಮಾಡುವುದಿಲ್ಲ; ಅವರು ಜನಪ್ರಿಯ ಯೋಜನೆಗಳನ್ನಷ್ಟೆ ಮಾಡುತ್ತಾರೆ. “ಸಮಗ್ರ ಮತ್ತು ಧೀರ್ಘಕಾಲದ ಒಳಿತಿಗಾಗಿ ನಾವು ಕೆಲ ಅನುಕೂಲಗಳನ್ನು ತ್ಯಾಗ ಮಾಡಲು ಸಿದ್ಧರಿದ್ದೇವೆ” - ಇದನ್ನು ನಾವು ವ್ಯಕ್ತಪಡಿಸದಿದ್ದರೆ, ಯಾವುದೇ ಸರ್ಕಾರವು ಯಾವುದೇ ಕಾರ್ಯನೀತಿಯನ್ನು ರೂಪಿಸುವುದಿಲ್ಲ.

ಸರ್ಕಾರಿ ಪ್ರಭಾವ

ಸರ್ಕಾರಗಳು ತಮ್ಮದೇ ಗತಿಯಲ್ಲಿ ಚಲಿಸುತ್ತದೆ. ದೊಡ್ಡದಾದ, ಭಾರಿ ಸರಕಿನ ಹಡಗು ಇದ್ದಕ್ಕಿದ್ದ ಹಾಗೆ ಯು-ಟರ್ನ್ ಮಾಡುತ್ತದೆಯೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ನನಗಿದು ಸ್ಪಷ್ಟವಾಗಿ ತಿಳಿದಿದೆ. ನಾನು ಕೇವಲ ಒಂದು ಡಿಗ್ರಿ ಆವರ್ತನೆಯನ್ನು ಮಾತ್ರ ನಿರೀಕ್ಷಿಸುತ್ತಿದ್ದೇನೆ. ನೀವು ಒಂದು ಡಿಗ್ರಿ ಆವರ್ತನೆಯನ್ನು ಮಾಡಿ ಅದನ್ನು ಹಿಡಿದಿಟ್ಟುಕೊಂಡರೆ,  ಯು-ಟರ್ನ್ ಆಗುತ್ತದೆ.

ಪ್ರಶ್ನೆ: ಹಿಂದೆಂದೂ ಭೇಟಿಯಾಗದ ಭಾರತೀಯ ಸರ್ಕಾರದ ವಿಭಾಗಗಳನ್ನು ಒಂದುಗೂಡಿಸಲು ನಿಮ್ಮ ಸಫಲ ಪ್ರಯತ್ನದ ಬಗ್ಗೆ ನೀವು ಬೆಳಿಗ್ಗೆ ಪ್ರಸ್ತಾಪಿಸಿದಿರಿ.

ಸದ್ಗುರು: ವಿವಿಧ ಸಚಿವಾಲಯಗಳಾದ ಜಲ ಸಂಪನ್ಮೂಲ ಸಚಿವಾಲಯ, ನೀರಾವರಿ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಕೃಷಿ ಸಚಿವಾಲಯಗಳು ಎಂದೂ ಒಟ್ಟಿಗೆ ಸಭೆ ಸೇರುತ್ತಿರಲಿಲ್ಲ. ನಾವು ಇವರನ್ನೆಲ್ಲ ಮೊದಲ ಬಾರಿಗೆ ಸೇರಿಸಿ, ಅವರು ಒಟ್ಟಾಗಿ ಏನು ಮಾಡಲು ಸಾಧ್ಯವೆಂದು ನೋಡಿದೆವು. ಅದೇ ದೊಡ್ಡ ವ್ಯತ್ಯಾಸವನ್ನು ಮಾಡಿತು. ಇಂದು ನೀತಿ ಆಯೋಗ ಎಂದು ಕರೆಯಲ್ಪಡುವು ಯೋಜನಾ ಮಂಡಳಿಯು ಭಾರತದ ಎಲ್ಲ 29 ರಾಜ್ಯಗಳಿಗೆ ಈ ರ‍್ಯಾಲೀ ಫಾರ್ ರಿವರ್ಸ್-ನ(Rally for Rivers) ನೀತಿಯೇ ನೀವು ಜಾರಿಗೊಳಿಸಬೇಕಾದ ಅಧಿಕೃತ ನೀತಿಯೆಂದು ಅಧಿಸೂಚನೆಯನ್ನು ಕಳುಹಿಸಿತು. ಹಲವು ರಾಜ್ಯಗಳು ಇದನ್ನಾಗಲೇ ಎತ್ತಿಕೊಂಡಿದೆ. ಕೆಲವು ರಾಜ್ಯಗಳಲ್ಲಿ ನಾವು ನೇರವಾಗಿ ಭಾಗವಹಿಸುತ್ತಿದ್ದೇವೆ; ಉಳಿದ ರಾಜ್ಯಗಳಿಗೆ ನಾವು ಸಲಹಾಗಾರರಾಗಿದ್ದೇವೆ.

ಪರಿಹಾರಗಳಿಗಾಗಿ ಒಗ್ಗೂಡುವಿಕೆ 

ನಾನು ಅನೇಕ ಪರಿಸರವಾದಿಗಳೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ. ಅವರು ಪ್ರತಿಭಟಿಸುತ್ತಿರುವ ಸಮಸ್ಯೆಗಳಿಗೆ, ಮೊದಲನೆಯದಾಗಿ, ಅವರು ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವೇ ಎಂದು ಕೇಳುತ್ತಿದ್ದೇನೆ. ಅದರ ಬಗ್ಗೆ ಯೋಚಿಸಿ. ಸಮಸ್ಯೆಯ ವಿರುದ್ಧ ಕೇವಲ ಪ್ರತಿಭಟನೆ ಮಾಡದೇ,  ನಿಮಗೊಂದು ಪರಿಹಾರ ಮಾರ್ಗ ತೋಚಿದರೆ, ಅದನ್ನು ಸೂಚಿಸಿ. ಈ ತಂಪು ಪಾನೀಯ ತಯಾರಕರು ಬಳಸುತ್ತಿರುವ ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಬಾಟಲ್-ಗಳ ಉದಾಹರಣೆಯನ್ನು ತೆಗೆದುಕೊಳ್ಳಿ. ಅವರಿಗೆ ಹೆಚ್ಚು ಅನುಕೂಲಕರವಾಗಿದ್ದರಿಂದ ಗಾಜಿನ ಬಾಟಲ್-ಗಳ ಬದಲು ಪ್ಲಾಸ್ಟಿಕ್ ಬಾಟಲ್-ಗಳನ್ನು ಬಳಸಲು ಆರಂಭಿಸಿದರು. ಈ ಬಾಟಲಿನ ಮೇಲೊಂದು ಪೇಪರಿನ ಲೇಬಲ್ ಇರುವುದರಿಂದ, ಇದನ್ನು ಸುಲಭವಾಗಿ ಮರುಬಳಕೆ ಮಾಡಲು ಸಾಧ್ಯವಿಲ್ಲ. ಹಾಗಾಗಿ, ನಾವು ಇದರ ಬಗ್ಗೆ ಸಣ್ಣಾದಾಗೊಂದು ಸಂಶೋಧನೆಯನ್ನು ಮಾಡಲು ಆರಂಭಿಸಿದೆವು - ಇದಕ್ಕೆ ಪರಿಹಾರವೇನು, ಇದನ್ನು ಹೇಗೆ ಮುದ್ರಿಸುವುದು. ಚಿಕಾಗೋದಲ್ಲೊಂದ ಕಾರ್ಖಾನೆಯಿದೆ - ಇವರೊಂದು ರೀತಿಯ ಬಣ್ಣವನ್ನು ತಯಾರು ಮಾಡುತ್ತಾರೆ. ಈ ಬಣ್ಣವು ಪೇಪರಿನ ಲೇಬಲ್ ಮಾದರಿಯಲ್ಲಿ ಪ್ಲಾಸ್ಟಿಕ್ ಮೇಲೆಯೂ ಮಾಡುತ್ತದೆ. ಇದೊಂದನ್ನು ನೀವು ಮಾಡಿದರೆ, ಈ ಎಲ್ಲಾ ಪ್ಲಾಸ್ಟಿಕ್ ಬಾಟಲ್-ಗಳನ್ನು ಮರು ಸಂಸ್ಕರಣಾ ಘಟಕಗಳಿಗೆ ಕಳುಹಿಸಬಹುದು.

ಇದು ಪರಿಸರವನ್ನು ಮಲಿನಗೊಳಿಸುತ್ತಿದೆ ಎಂಬ ಅರಿವಿರುವ ಪ್ಲಾಸ್ಟಿಕ್ ಬಾಟಲ್-ಗಳನ್ನು ಬಳಸುತ್ತಿರುವ ಒಂದು ವ್ಯಾಪಾರೋದ್ಯಮವು, ಸೂಚಿಸಬಹುದು, “ನೋಡಿ, ಇದು ಸುಧಾರಿತ ತಂತ್ರಜ್ಞಾನ. ನೀವು ನಮಗೇನಾದರೂ ಸವಲತ್ತುಗಳನ್ನು ಕೊಟ್ಟರೆ ನಾವು ನಮ್ಮ ಕಾರ್ಯವಿಧಾನವನ್ನು ಬದಲಿಸುತ್ತೇವೆ.” ಆದ್ದರಿಂದ ವ್ಯಾಪಾರೋದ್ಯಮಗಳು ಸರ್ಕಾರದೊಂದಿಗೆ ಸಹಕರಿಸಿ ಹೀಗೇನಾದರೂ ಸೂಚಿಸಬೇಕು: “ನಾವು ಇಂತಹ ಇಂತಹ ಬದಲಾವಣೆಗಳನ್ನು ಮಾಡಲು ಬಯಸುತ್ತೇವೆ. ಆದರೆ ಇದನ್ನು ಮಾಡಲು ನಮಗೆ ಈ ಶಾಸನದ ಲಾಭ ಬೇಕು.

ಸುಸ್ಥಿರತೆಯ ವ್ಯಾಪಾರೋದ್ಯಮ

ಲಾಭವೆಂದರೇನು ಹಾಗೂ ಸಫಲ ವ್ಯಾಪಾರ ಯಾವುದು ಎನ್ನುವುದರ ಬಗೆಗಿನ ನಮ್ಮ ವಿಚಾರವು ರೂಪಾಂತರಗೊಳ್ಳಬೇಕು. ಇದು ಒಂದು ದಿನದಲ್ಲಾಗುವ ಕೆಲಸವಲ್ಲ. ಇದು ಕಾಲಕ್ರಮೇಣ ನಡೆಯುವಂತಹ ಕೆಲಸ. ಖಂಡಿತವಾಗಿಯೂ ಇದು ನಡೆಯುತ್ತಿದೆ. ಇಂದು, ಒಂದಿಡೀ ವ್ಯಾಪಾರೋದ್ಯಮಗಳು ಪರಿಸರ ಸಂರಕ್ಷಣೆಗೆ ಅವರೇನು ಮಾಡಬಹುದೆಂದು, ಅವರು ಹೇಗೆ ಪ್ರಭಾವ ಬೀರಬಹುದೆಂದು ನೋಡುತ್ತಿದ್ದಾರೆ. 25 ವರ್ಷಗಳ ಹಿಂದೆ ಇದು ಸಾಧ್ಯವಿರಲಿಲ್ಲ. ಈ ನಿಟ್ಟಿನಲ್ಲಿ ಅವರು ಹೂಡಿಕೆಯನ್ನು ಮಾಡುತ್ತಿದ್ದಾರೆ. ಜನರು ಒಮ್ಮೆ ತಮ್ಮ ಹಣವನ್ನು ಯಾವುದರಲ್ಲಿಯಾದರೂ ಹೂಡಿದರೆಂದರೆ, ಅವರಿಗೆ ಸದುದ್ದೇಶವನ್ನು ಹೊಂದಿದ್ದಾರೆಂದು ನೀವು ನಂಬಬಹುದು.

ಈ ಪೀಳಿಗೆಯ ಜನರಿಗೊಂದು ಜವಾಬ್ದಾರಿಯಿದೆ - ಮುಂದಿನ ಹತ್ತು ಹದಿನೈದು ವರ್ಷಗಳ ಕಾಲದಲ್ಲಿ, ಕೊನೆಪಕ್ಷ ಕಾರ್ಯನೀತಿಯ ಸ್ತರದಲ್ಲಿ ಎಲ್ಲ ಸರಿಯಾದ ವಿಷಯಗಳನ್ನು ರೂಪಿಸುವ ಜವಾಬ್ದಾರಿ.

ನೋಡಿ, ನಮ್ಮ ತಪ್ಪುಗಳನ್ನು ಹೇಗೆ ಸರಿ ಪಡಿಸುತ್ತೇವೆ ಎಂಬ ವಿಷಯದಲ್ಲಿ ಮುಂದಿನ ಇಪ್ಪತ್ತೈದು ವರ್ಷಗಳು, ಪ್ರಾಯಶಃ, ಮಾನವತೆಯ ಇತಿಹಾಸದಲ್ಲಿ ಬಹಳ ನಿರ್ಣಾಯಕವಾದದು. ನಾವು ಮಣ್ಣು, ನದಿ, ಕಾಡು, ಕೃಷಿ, ಮನುಷ್ಯರ ಆರೋಗ್ಯದ ಕಡೆ ನಿಗಾ ವಹಿಸಿದರೆ, ಎಲ್ಲವನ್ನೂ ಸರಿಮಾಡಿದಂತೆ. ನಾವಿದನ್ನು ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಬದಲಾಯಿಸಿದರೆ, ನಾವು ಮುಂದಿನ ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಸರಿಯಾದದನ್ನು ಮಾಡಿದರೆ,  ಪ್ರಮುಖ ಬದಲಾವಣೆಗಳು ಧನಾತ್ಮಕ ರೀತಿಯಲ್ಲಿ ಸಂಭವಿಸುತ್ತದೆ ಎಂದು ನನ್ನ ನಂಬಿಕೆ.

ನಾವು ಇನ್ನೊಂದು ಇಪ್ಪತ್ತೈದರಿಂದ ಮೂವತ್ತು ವರ್ಷಗಳ ಕಾಲ ಏನೂ ಮಾಡಲಿಲ್ಲ, ನಂತರ ಬದಲಾಯಿಸಲು ಪ್ರಯತ್ನಿಸಿದರು ಎಂದಿಟ್ಟುಕೊಳ್ಳಿ. ಆಗ, ನನ್ನ ಅಂದಾಜಿನ ಪ್ರಕಾರ, ಆ ಬದಲಾವಣೆಗೆ ನೂರರಿಂದ ನೂರೈವತ್ತು ವರ್ಷಗಳ ಕಾಲ ಬೇಕಾಗುತ್ತದೆ. ಏಕೆಂದರೆ ನಾವೊಂದು ಗೆರೆಯನ್ನು ದಾಟುತ್ತಿದ್ದೇವೆ. ನೀವು ಆ ಗೆರೆಯನ್ನು ದಾಟಿದರೆ, ಹಿಂದಿದ್ದ ಪರಿಸ್ಥಿತಿಗೆ ಮರಳುವುದು ಬಹಳ ಕಷ್ಟಕರವಾಗುತ್ತದೆ. ಹಾಗಾಗಿ ಈ ಪೀಳಿಗೆಯ ಜನರಿಗೊಂದು ಜವಾಬ್ದಾರಿಯಿದೆ - ಮುಂದಿನ ಹತ್ತು ಹದಿನೈದು ವರ್ಷಗಳ ಕಾಲದಲ್ಲಿ, ಕೊನೆಪಕ್ಷ ಕಾರ್ಯನೀತಿಯ ಸ್ತರದಲ್ಲಿ ಎಲ್ಲ ಸರಿಯಾದ ವಿಷಯಗಳನ್ನು ರೂಪಿಸುವ ಜವಾಬ್ದಾರಿ.

ಒಂದು ಕಾರ್ಯನೀತಿಯಿದ್ದಾಗ ಮಾತ್ರ ಬಜೆಟ್ ಹಂಚಿಕೆಯಿರುತ್ತದೆ ಎನ್ನುವ ಕಾರಣಕ್ಕಾಗಿಯೇ ನಾನು ಕಾರ್ಯನೀತಿಗಾಗಿ ಒತ್ತಾಯಿಸುತ್ತಿದ್ದೇನೆ. ಯೋಜನೆಗಳಿಗೆ ಹಣವಿದ್ದಾಗ, ಅದು ಮುಂದುವರಿಸಿಕೊಂಡು ಹೋಗುತ್ತದೆ. ವಿಶೇಷವಾಗಿ, ಅಪಾರ ಜನಸಂಖ್ಯೆಯಿರುವ ದೇಶಗಳಾದ ಅಮೇರಿಕಾ, ಯುರೋಪ್, ಚೀನಾ ಮತ್ತು ಭಾರತದಂತಹ ದೇಶಗಳಲ್ಲಿ ನಾವು ಮುಂದಿನ ಕೆಲ ವರ್ಷಗಳಲ್ಲಿ ನೀತಿಗಳನ್ನು ರೂಪಿಸಿದರೆ, ಬಳಿಕ ವಿಶ್ವದ ಉಳಿದ ದೇಶಗಳೂ ಇದನ್ನು ಅನುಸರಿಸುತ್ತವೆ.

“ಒಂದೇ ಕಟ್ಟಡದ ನಗರ”

ಏಷ್ಯಾದ ಒಂದು ಪ್ರಮುಖ ಅನುಕೂಲವೆಂದರೆ, ನಮ್ಮಲ್ಲಿ ಸೂರ್ಯನ ಬೆಳಕು ಬಹಳವಾಗಿದೆ. ಆದ್ದರಿಂದ ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳುವುದು ಒಂದು ಪ್ರಮುಖ ವಿಷಯ. ತಂತ್ರಜ್ಞಾನವು ಇನ್ನೂ ಮುಂದುವರೆಯಬೇಕಿದೆ, ಆದರೆ ಅನೇಕ ಪರಿಹಾರಗಳು ಕಾಣತೊಡಗಿವೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ  ನಾವು ಸ್ಥಾಪಿಸಿದ ವಿದ್ಯುತ್ ವಿತರಣೆಯ ಜಾಲ - ಇದನ್ನು ನಾವು ನಿಲ್ಲಿಸಬೇಕು. ವಿದ್ಯುತ್ತಿನ ಅಗತ್ಯ ಎಲ್ಲಿದೆಯೋ ಅದನ್ನಲ್ಲೆಯೇ ಉತ್ಪಾದಿಸಬೇಕು.  

ಮೂಲತಃ, ಜೀವನದ ಜೊತೆ ಮತ್ತು ಜೀವನವನ್ನು ಪಾಲಿಸಿ ಪೋಷಿಸುವ ಎಲ್ಲದರ ಜೊತೆ ಮಾನವರು ಸಂಬಂಧವನ್ನು ಕಡಿದುಕೊಂಡಿರುವುದೇ ಇಂದಿನ ಬಹು ಮುಖ್ಯ ಸಮಸ್ಯೆ

ನಾನು ನಿನ್ನೆ ರಾತ್ರಿ ಒಂಭತ್ತು ಗಂಟೆಗೆ ಕೌಲಾಲಂಪುರ್-ಗೆ ಬಂದೆ. ಇದ್ದಬದ್ದ ರಸ್ತೆಗಳೆಲ್ಲ ಜಾಮ್ ಆಗಿದ್ದವು. ಪ್ರತಿಯೊಂದು ನಗರಗಳಲ್ಲಿ ಇದೇ ಆಗುತ್ತಿರುವುದು - ಅಲ್ಲಿ ವಾಸಿಸುವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ವಾಸಿಸುವವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಯಾಕೆಂದು ನನಗರ್ಥವಾಗುವುದಿಲ್ಲ. ನಾವು ಕೆಲ ಸರಳ ಬದಲಾವಣೆಗಳನ್ನು ಮಾಡಬಹುದು. ನಾನು "ಒಂದು ಕಟ್ಟಡದ ನಗರ" ಎನ್ನುವುದನ್ನು ವಿನ್ಯಾಸ ಮಾಡಿದೆ. ನಾವಿದನ್ನು ನಗರಗಳೆಂದೇ ಕರೆಯುತ್ತೇವೆ. ಐವತ್ತೆಕರೆಯ ಜಾಗದಲ್ಲಿ ಕೇವಲ ಒಂದು ಎಕರೆಯಲ್ಲಿ ಮಾತ್ರ ಐವತ್ತು ಅಂತಸ್ತಿನ ಕಟ್ಟಡವನ್ನು ಕಟ್ಟಿ ಉಳಿದ ನಲವೊತ್ತೊಂಬತ್ತು ಎಕರೆಗಳನ್ನು ಖಾಲಿ ಬಿಡಿ. ಅದನ್ನು ಅರಣ್ಯೀರಕರಿಸಿ, ಅದನ್ನು ಜಲಪ್ರದೇಶವನ್ನಾಗಿ ಮಾಡಿ. ಈ ಜಾಗದಿಂದ ಯಾವುದೇ ತ್ಯಾಜ್ಯ ಹೊರಹೋಗುವುದಿಲ್ಲ. ಇದನ್ನು ಸುಲಭವಾಗಿ ಮಾಡಬಹುದು.

ಜನರು ಉತ್ತಮವಾಗಿ ಬಾಳುತ್ತಾರೆ. ಎಲ್ಲವೂ ಅಲ್ಲಿಯೇ ಇರುತ್ತದೆ. ಅವರು ಅಲ್ಲಿಯೇ ವಾಸಿಸಬಹುದು, ಅಲ್ಲಿಯೇ ಕೆಲಸ ಮಾಡಬಹುದು; ಅವರ ಮಕ್ಕಳು ಅಲ್ಲಿಯೇ ಶಾಲೆಗೆ ಹೋಗಬಹುದು; ಅಲ್ಲಿಯೇ ಎಲ್ಲವನ್ನೂ ಖರೀದಿಸಬಹುದು. ವಾರಕ್ಕೊಮ್ಮೆ ಹೊರಹೋಗಬೇಕೆಂದರೆ ಹೋಗಬಹುದು. ಆದರೆ ದಿನಂಪ್ರತಿ ನಿಮ್ಮ ಗಾಡಿಯನ್ನು ಹೊರತೆಗೆಯುವ ಪ್ರಮೇಯವಿರುವುದಿಲ್ಲ.

ಜಲ ಮತ್ತು ಸಸ್ಯರಾಶಿ

ನಾವು ರ‍್ಯಾಲೀ ಫಾರ್ ರಿವರ್ಸ್-ಅನ್ನು ಆರಂಭಿಸುವ ಮುನ್ನ, ನಮ್ಮ ’ಪ್ರಾಜೆಕ್ಟ್ ಗ್ರೀನ್ ಹ್ಯಾಂಡ್ಸ್’ ಯೋಜನೆಯು 330 ಲಕ್ಷ ಮರಗಳನ್ನು ನೆಟ್ಟಿತ್ತು. ಇದು ಒಂದು ರಾಜ್ಯದ ಹಸಿರು ಹೊದಿಕೆಯನ್ನು ಬದಲಾಯಿಸಿದೆ. ಆದರೀಗ ರ‍್ಯಾಲೀ ಫಾರ್ ರಿವರ್ಸ್-ನ ಜೊತೆ, ಮುಂದಿನ 8 ವರ್ಷಗಳಲ್ಲಿ 700 ಕೋಟಿ ಮರಗಳನ್ನು ನೆಡಲು ನಾವು 6 ರಾಜ್ಯಗಳೊಂದಿಗೆ ತಿಳುವಳಿಕೆಯ ನಿವೇದಾನ ಪತ್ರಕ್ಕೆ ಸಹಿ ಹಾಕಿದ್ದೇವೆ.  ಸರ್ಕಾರಗಳು ಇದಕ್ಕೆ ಬಂಡವಾಳ ಹಾಕುತಿದ್ದು, ಹೆಚ್ಚಿನವುಗಳನ್ನು ಸರ್ಕಾರವೇ ಕಾರ್ಯಾನುಷ್ಠಾನಗೊಳಿಸುತ್ತವೆ.

ಹಲವು ರಾಜ್ಯಗಳು ಈಗಾಗಲೇ ನದಿದಡದ ಉದ್ದಕ್ಕೂ ಒಂದು ಕಿಲೋಮೀಟರ್ ಅಗಲದ ಭೂಪ್ರದೇಶದಲ್ಲಿ ಮರಗಳನ್ನು ನೆಡಲು ಆರಂಭಿಸಿದ್ದಾರೆ. ಆದರೆ ಇಂದು ಸುಮಾರು 62ರಿಂದ 64% ರಷ್ಟು ಭೂಮಿಯು ರೈತರ ಒಡೆತನದಲ್ಲಿದೆ. ಅವರ ಬಳಿ ನಿಮಗೆ ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಏಕೆಂದರೆ ಅವರು ಹೊಟ್ಟೆಪಾಡಿಗಾಗಿ ಹರಸಾಹಸ ಮಾಡುತ್ತಿದ್ದಾರೆ. ಆದ್ದರಿಂದ ನಾವು ಅರಣ್ಯ ಕೃಷಿ ಎಂದು ಕರೆಯಲಾಗುವುದನ್ನು ಸೃಜಿಸಿದ್ದೇವೆ. ನೀವು ಕೃಷಿ ವಿಧಾನವನ್ನು ಹೀಗೆ ಬದಲಿಸಿಕೊಂಡರೆ, ಸುಲಭವಾಗಿ ನಿಮ್ಮ ಆದಾಯವನ್ನು 3 ರಿಂದ 5 ಪಟ್ಟು ಹೆಚ್ಚಾಗಿಸಬಹುದೆಂದು ತೋರಿಸಿಕೊಟ್ಟಿದ್ದೇವೆ.

ಮೂಲತಃ, ಜೀವನದ ಜೊತೆ ಮತ್ತು ಜೀವನವನ್ನು ಪಾಲಿಸಿ ಪೋಷಿಸುವ ಎಲ್ಲದರ ಜೊತೆ ಮಾನವರು ಸಂಬಂಧವನ್ನು ಕಡಿದುಕೊಂಡಿರುವುದೇ ಇಂದಿನ ಬಹು ಮುಖ್ಯ ಸಮಸ್ಯೆ. ಪರಿಸರ ವಿನಾಶದ ರೂಪದಲ್ಲಿ ನಾವು ತಂದಿಟ್ಟುಕೊಂಡಿರುವ ವಿಪತ್ತಿದು. ನಾವು ಜೀವಿತ ಸ್ತರದಲ್ಲಿರದೇ ಮಾನಸಿಕ ಸ್ತರದಲ್ಲಿದ್ದೇವೆ. ನಾವು ಜೀವವಿರುವ ಅಸ್ತಿತ್ವವಾಗಿ ಪರಿವರ್ತನೆಗೊಳ್ಳಬೇಕು.

Love & Grace