ರೋಗ ನಿರೋಧಕ ಶಕ್ತಿ ಹೆಚ್ಚಿಸಲು 17 ಸಲಹೆಗಳು
ಈ ಸವಾಲಿನ ಸಮಯದಲ್ಲಿ ರೋಗ ನಿರೋಧಕ ಶಕ್ತಿಯು ಅತ್ಯಂತ ಪ್ರಮುಖವಾಗಿದ್ದು ನೈಸರ್ಗಿಕವಾಗಿ ಅದನ್ನು ಹೆಚ್ಚಿಸಿಕೊಳ್ಳಲು ಸದ್ಗುರುಗಳು ನೀಡಿರುವ 17 ಸಲಹೆಗಳು ಇಲ್ಲಿವೆ.
ದೇಶಾದ್ಯಂತ ಕೋವಿಡ್ -19 ಹರಡುತ್ತಿರುವಾಗ, ಜಗತ್ತಿನೆಲ್ಲೆಡೆ ವೈರಸ್ಸನ್ನು ಹಾಗೂ ಅದರ ಹರಡುವಿಕೆಯನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ. ರೋಗ ನಿರೋಧಕ ಶಕ್ತಿ ಅಧಿಕವಿರುವ ಜನರು ಈ ಕೊರೋನ ವೈರಸನ್ನು ಸಮರ್ಥವಾಗಿ ಎದುರಿಸಬಲ್ಲರು ಎಂದು ವೈದ್ಯರೂ ಒಪ್ಪಿಕೊಂಡಿದ್ದಾರೆ. ಹಾಗಾಗಿ ಮನೆಯಲ್ಲಿಯೇ ಅದನ್ನು ಹೆಚ್ಚಿಸಿಕೊಳ್ಳಲು ಕೆಲವು ಸಲಹೆಗಳನ್ನು ಸದ್ಗುರುಗಳು ಇಲ್ಲಿ ನೀಡಿದ್ದಾರೆ.
ಸದ್ಗುರು: ವೈರಸ್‍ಗಳು ನಮ್ಮ ಜೀವನದಲ್ಲಿ ಹೊಸದಾಗಿ ಬಂದಿದ್ದಲ್ಲ. ನಾವು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಸಾಗರದಲ್ಲೇ ಬದುಕುತ್ತಿದ್ದೇವೆ. ಮುಖ್ಯವಾದ ವಿಷಯವೆಂದರೆ ಈ ನಿರ್ದಿಷ್ಟ ವೈರಸ್ ನಮ್ಮ ಜೀವವ್ಯವಸ್ಥೆಗೆ ಹೊಸದಾಗಿದ್ದರಿಂದ ಅದರೊಂದಿಗೆ ಏಗಲು ನಮ್ಮ ದೇಹ ಕಷ್ಟ ಪಡುತ್ತಿದೆ. ಉಳಿದ ಎಲ್ಲವನ್ನೂ ನಿರ್ವಹಿಸಲು ಸಮರ್ಥರಾಗಿರುವ ಹಾಗೇ, ಇದಕ್ಕೆ ಅವಶ್ಯವಿರುವ ಪ್ರತಿಕಾಯಗಳನ್ನು (antibodies) ದೇಹ ಉತ್ಪತ್ತಿ ಮಾಡಿಕೊಂಡು ಇದನ್ನ ನಿರ್ವಹಿಸಲು ಸಶಕ್ತವಾಗುವವರೆಗೆ ಕೆಲವೊಂದಿಷ್ಟನ್ನು ನಾವು ಮಾಡಬಹುದು. ಇದು ಕೊರೋನಾಗೆ ಪರಿಹಾರವಲ್ಲ. ಆದರೆ ಈ ಸರಳ ಸಂಗತಿಗಳನ್ನು ಅಭ್ಯಾಸ ಮಾಡುವುದರಿಂದ, ಆರರಿಂದ ಎಂಟು ವಾರಗಳಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿ ಕೊನೇಪಕ್ಷ ಒಂದಿಷ್ಟು ಪ್ರತಿಶತ ಹೆಚ್ಚಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ನಿಮಗೆ ಹಾಗೂ ನಿಮ್ಮ ಸುತ್ತಲಿನವರಿಗೆ ಪ್ರಾಣಾಪಾಯ ತಂದುಕೊಳ್ಳದಿರಲು ಇದಿಷ್ಟನ್ನು ಮಾಡಬೇಕಾಗಿದೆ.1. ಬೇವು
ನಿಮ್ಮ ಬೆಳಗಿನ ಸಾಧನವನ್ನು ಆರಂಭಿಸುವ ಮುನ್ನ, ಖಾಲಿ ಹೊಟ್ಟೆಯಲ್ಲಿ ಎಂಟರಿಂದ ಹತ್ತು ಬೇವಿನ ಎಲೆಗಳನ್ನು ಬಾಯಲ್ಲಿ ಅಗಿದು ಹಾಗೆ ಇಟ್ಟುಕೊಳ್ಳಬೇಕು. ಅದನ್ನು ಹಾಗೇ ಬಾಯಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ, ಆಗಲೇ ಪರಿಣಾಮಕಾರಿ. ಒಂದರಿಂದ ಎರಡು ಗಂಟೆ ಅಗಿಯಿರಿ, ಬಾಯಿ ತೊಳೆಯುವುದು ಅಥವಾ ನುಂಗುವುದು ಮಾಡಬೇಡಿ, ಬಾಯಲ್ಲಿ ಹಾಗೆಯೇ ಇರಲಿ. ಅದರೊಂದಿಗೆ ಸಾಧನವನ್ನು ಮಾಡಿ.
2. ಅರಿಶಿನ
ಪ್ರತಿದಿನ ಬೆಳಿಗ್ಗೆ ಅರಿಶಿನವನ್ನು ಸೇವಿಸಿ ಹಾಗೂ ಆಹಾರವನ್ನು ಸೇವಿಸುವುದಕ್ಕೂ ಮೊದಲು ಕನಿಷ್ಟ ಒಂದು ಗಂಟೆಯವರೆಗಾದರೂ ಹೊಟ್ಟೆಯಲ್ಲಿರುವಂತೆ ನೋಡಿಕೊಳ್ಳಿ. ಇದು ನಿಮಗೆ ಅದ್ಭುತಗಳನ್ನೇ ಮಾಡಬಹುದು. ಸಾವಯವ ಅರಿಶಿನ ಬಳಸುವುದು ಸೂಕ್ತ.
3. ಮಹಾಬಿಲ್ವ ಪತ್ರೆ
ಮಹಾಬಿಲ್ವ ಪತ್ರೆ ಎನ್ನುವ ಎಲೆಗಳು ಸಾಮಾನ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಂಡುಬರುತ್ತದೆ. ಪ್ರತಿದಿನ ಬೆಳಿಗ್ಗೆ ಮೂರರಿಂದ ಐದು ಎಲೆಗಳನ್ನು ತಿಂದರೆ ಅದು ನಿಮ್ಮ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ.
4. ನಿಲವೆಂಬು ಕಷಾಯ
ನಾವು ಈಶಾ ಯೋಗ ಕೇಂದ್ರದ ಸುತ್ತಲಿನ ಹಳ್ಳಿಗಳಲ್ಲಿ ನಿಲವೆಂಬು ಕಷಾಯವನ್ನು ಹಂಚುತ್ತಿದ್ದು, ನಾವು ಕೆಲಸ ಮಾಡುತ್ತಿರುವ ತಮಿಳುನಾಡಿನ ಈ ಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ಯಾವುದೇ ಕೇಸ್ ಕಂಡುಬಂದಿಲ್ಲ. ಅಧಿಕಾರಿಗಳು ಹಾಗೂ ನಾವು, ಜನರಲ್ಲಿ ಸಾಮಾಜಿಕ ಅಂತರ ಇರುವಂತೆ ಪರಿಣಾಮಕಾರಿಯಾಗಿ ನೋಡಿಕೊಳ್ಳುತ್ತಿರುವುದು ಹಾಗೂ ನಿಲವೆಂಬು ಕಷಾಯ ಕೂಡ ಇದರಲ್ಲಿ ಒಂದು ಕಾರಣ. ನೀವು ಈ ಶಿಷ್ಟಾಚಾರಗಳನ್ನು ಪಾಲಿಸಿದರೆ, ಬಹಳ ಸರಳವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಯಾಕೆಂದರೆ ನಮ್ಮ ಬಳಿ ಇರುವ ಕಟ್ಟಕಡೆಯ ರಕ್ಷಣೆ ಅದೊಂದೇ ಆಗಿದೆ.
Ishalife.com ನಲ್ಲಿ ಮಾತ್ರೆ ಮತ್ತು ಪುಡಿಯ ರೂಪಗಳಲ್ಲಿ ಲಭ್ಯವಿದೆ.
5. ಬಿಸಿ ಪಾನೀಯಗಳು
ದಿನಕ್ಕೆ ಐದರಿಂದ ಆರು ಬಾರಿ ಬಿಸಿ ನೀರನ್ನು ಕುಡಿಯಿರಿ. ಅದು ಕೇವಲ ಬಿಸಿನೀರಾಗಿದ್ದರೂ ಸರಿ ಅಥವಾ ಅದಕ್ಕೆ ಸ್ವಲ್ಪ ಧನಿಯಾ ಅಥವಾ ಪುದಿನ ಸೇರಿಸಿಕೊಳ್ಳಬಹುದು. ನೀವು ಒಂದು ಚಿಟಿಕೆ ಅರಿಶಿನ ಅಥವಾ ಸ್ವಲ್ಪ ನಿಂಬೆರಸವನ್ನು ಕೂಡ ಸೇರಿಸಿ ನಿಯಮಿತವಾಗಿ ಕುಡಿಯಬಹುದು.
4 ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಗೂ ವೈರಸ್ ಸೋಂಕುಗಳನ್ನು ತಡೆಯಲು ನೆರವಾಗುವ ಪಾನೀಯಗಳು
6. ನೆಲ್ಲಿಕಾಯಿ
ನಾವು ಕನ್ನಡದವರು ಬೆಟ್ಟದ ನೆಲ್ಲಿಕಾಯಿ ಅಂತೀವಿ. ಗಾಲ್ಪ್ ಚೆಂಡಿನ ಹಾಗೆ ದೊಡ್ಡದಾಗಿರುವ ನೆಲ್ಲಿಕಾಯಿ ಅಲ್ಲ. ಅದೆಲ್ಲ ಹೈಬ್ರಿಡ್ ನೆಲ್ಲಿ, ಬೇರೆ ಸಿಗದಿದ್ದರೆ ಇದೂ ಕೂಡ ಬಳಸಬಹುದು. ಆದರೆ ಬೆಟ್ಟದಲ್ಲಿ ಸಣ್ಣ ಗಾತ್ರದ ನೆಲ್ಲಿಕಾಯಿ ಬೆಳೆಯುತ್ತದೆ. ಆ ಒಂದು ನೆಲ್ಲಿಕಾಯಿಯನ್ನು ಜಜ್ಜಿ, ಸ್ವಲ್ಪ ಉಪ್ಪು ಹಾಕಿ ಅಗಿಯಿರಿ. ಇದನ್ನು ಒಂದರಿಂದ ಎರಡು ಗಂಟೆ ಬಾಯಲ್ಲಿಯೇ ಇಟ್ಟುಕೊಂಡರೆ ಹೆಚ್ಚು ಪರಿಣಾಮಕಾರಿ.
7. ಜೇನುತುಪ್ಪ ಮತ್ತು ಕಾಳುಮೆಣಸಿನ ಜೊತೆ ನೆಲ್ಲಿಕಾಯಿ
ನೆಲ್ಲಿಕಾಯಿಯನ್ನು ಜೇನುತುಪ್ಪ ಹಾಗೂ ಒಡೆದ ಕಪ್ಪು ಅಥವಾ ಹಸಿರು ಕಾಳುಮೆಣಸಿನ ಜೊತೆ ರಾತ್ರಿಯಿಡಿ ನೆನಸಿಡಿ. ಇದನ್ನು ದಿನಕ್ಕೆ ಮೂರು ಬಾರಿ ಮೂರು ಚಮಚಗಳಷ್ಟು ಸೇವಿಸಿ. ಖಾಲಿ ಹೊಟ್ಟೆಯಲ್ಲಿ, ನೀವು ಅದನ್ನೇ ಮೊದಲು ಸೇವಿಸಿದರೆ, ಅದು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.. ಇದನ್ನು ಸೇವಿಸಿದರೆ ನಾಲ್ಕರಿಂದ ಎಂಟು ವಾರಗಳಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬರುತ್ತದೆ.
8. ಮಾವಿನಕಾಯಿ
ಮಾವನ್ನು ಹಣ್ಣಾಗುವವರೆಗೆ ಕಾಯದೆ, ಕಾಯಿಯಿದ್ದಾಗಲೇ ತಿನ್ನಿ. ಅದು ಕೊರೋನ ವೈರಸ್ಸನ್ನು ತಡೆಯುತ್ತದೆ ಎಂದಲ್ಲ ಆದರೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
9. ಚ್ಯವನಪ್ರಾಶ್
ಸಾಂಪ್ರದಾಯಿಕ ಕೊಡುಗೆಗಳಾಗಿ ಬಂದಿರುವ ಜೀವ ಲೇಹ್ಯಂ ಅಥವಾ ಚ್ಯವನಪ್ರಾಶ್ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಮನೆಯಲ್ಲಿ ಅರವತ್ತಕ್ಕಿಂತ ಹೆಚ್ಚು ವಯಸ್ಸಿನವರಿದ್ದರೆ, ಅವರು ಲೇಹ್ಯವನ್ನು ಸೇವಿಸುವುದು ಒಳ್ಳೆಯದು.
10. ಭೈರವಿ ರಕ್ಷಾ
ನಾವು ’ಭೈರವಿ ರಕ್ಷಾ’ ಎನ್ನುವುದನ್ನು ರಚಿಸುತ್ತಿದ್ದೇವೆ. ರಸವೈದ್ಯ ಎನ್ನುವ ವಿಜ್ಞಾನದೊಂದಿಗೆ ಇದನ್ನು ಮಾಡುತ್ತಿದ್ದೇವೆ ಮತ್ತು ಒಂದು ನಿರ್ದಿಷ್ಟ ವಿಧಾನದಲ್ಲಿ ತಯಾರಾಗುವ ಇದನ್ನು ನಿಮ್ಮ ತೋಳುಗಳಲ್ಲಿ ಬ್ರೇಸ್ಲೆಟ್‍ನಂತೆ ಧರಿಸಬಹುದು. ಬೇರೆ ಬೇರೆ ಅಳತೆಗಳಲ್ಲಿ ಸಿಗುತ್ತಿದ್ದು ನೀವು ಬೇಕಿದ್ದರೆ ಇದನ್ನು ಮೀನಖಂಡಗಳಲ್ಲೂ ಧರಿಸಬಹುದು. ಇದು ಪ್ರಾಣಪ್ರತಿಷ್ಥಿತ ವಸ್ತುವಾಗಿದ್ದು, ಖಂಡಿತವಾಗಿಯೂ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
IshaLife.com ನಲ್ಲಿ ಭೈರವಿ ರಕ್ಷಾ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಬಹುದು
11. ಪೃಥ್ವಿ ಪ್ರೇಮ ಸೇವಾ
ಹಲವಾರು ಜನ ಮಣ್ಣಿನೊಂದಿಗೆ ಸಾವಿನ ನಂತರವೇ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ, ಆದರೆ ಬದುಕಿದ್ದಾಗಲೇ ಅದರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ವೈರಸ್ ಬಂದಿರುವ ಈ ಸಮಯದಲ್ಲಿ! ನಾವಿದನ್ನ ಪೃಥ್ವಿ ಪ್ರೇಮ ಸೇವಾ ಎನ್ನುತ್ತೇವೆ. ಅದರರ್ಥ ಮಣ್ಣಿನೊಂದಿಗೆ ಬಹಳ ಪ್ರೀತಿಯಿಂದ ತೊಡಗಿಕೊಳ್ಳುವುದು ಎಂದು. ಹೀಗೆ ಮಾಡುವುದರಿಂದ ನಿಮ್ಮ ಜೀವದ ಮೇಲೆ ಉಂಟಾಗುವ ಇಂತಹ ದಾಳಿಗಳನ್ನು ತಡೆಯಬಲ್ಲ ನಿಮ್ಮ ಸಾಮರ್ಥ್ಯವು ಅಪಾರವಾಗಿ ಹೆಚ್ಚಾಗುವುದು. ಕೇವಲ ಜೀವಂತವಿದ್ದರಷ್ಟೇ ಸಾಲದು, ನೀವು ಸದೃಢವಾಗಿ ಬದುಕುವುದೂ ಮುಖ್ಯ.
ನಿಮ್ಮಲ್ಲಿ ಸಣ್ಣ ಉದ್ಯಾನವಿದ್ದರೆ ಅಲ್ಲಿದನ್ನು ಮಾಡಬಹುದು ಅಥವಾ ಬೇರೆಯವರ ಉದ್ಯಾನದಲ್ಲಿಯೂ ಕೆಲಸ ಮಾಡಬಹುದು. ಅವರಿಗೆ ಉಚಿತವಾಗಿ ಕೆಲಸಗಾರರು ಸಿಕ್ಕ ಹಾಗೆ ಆಗುತ್ತದೆ, ಹಾಗಂತ ಅವರಿಗೆ ಲಾಭವಯಿತು ಎಂದು ಯೋಚಿಸಬೇಡಿ. ಅವರಿಗಿಂತ ನಿಮಗೆ ಹೆಚ್ಚು ಲಾಭ ಏಕೆಂದರೆ ನೀವು ಮಣ್ಣಿನೊಂದಿಗೆ ಸಂಪರ್ಕ ಹೊಂದಿದಾಗ ನಿಮ್ಮ ದೇಹ ಕೆಲಸ ಮಾಡುವ ರೀತಿಯಲ್ಲಿ ಅದ್ಭುತವಾದ ಬದಲಾವಣೆ ಕಂಡುಬರುತ್ತದೆ. ಪ್ರತಿಯೊಬ್ಬರೂ ಎಲ್ಲಿಯಾದರೂ ಇದರ ಲಾಭ ಪಡೆಯಬೇಕು – ಕೊನೆಪಕ್ಷ ಹೋಗಿ ಬೀದಿಗಳನ್ನು ಸ್ವಚ್ಛಗೊಳಿಸಿ. ಏನನ್ನಾದರೂ ಮಾಡಿ! ಮಣ್ಣಲ್ಲಿ ನಿಮ್ಮ ಕೈಯನ್ನು ಹಾಕುವುದು ಬಹಳ ಮುಖ್ಯ. ತುಂಬಾ ಸ್ಥಿತಿವಂತರು ಯಾವುದೇ ಕೆಲಸ ಮಾಡುತ್ತಾ ಕಾಣಿಸಿಕೊಂಡರೆ ನಿಮ್ಮ ಹೆಮ್ಮೆಗೆ ಧಕ್ಕೆಯಾಗುವುದು ಎನ್ನುವವರು ಮಡ್ ಬಾತ್ (mud bath) ಮಾಡಬಹುದು! ಹೌದು ಅದೂ ಒಂದು ವಿಧಾನ.
12. ಉಷ್ಣವನ್ನು ಉಂಟುಮಾಡಲು ಯೋಗ ಯೋಗ ಯೋಗೇಶ್ವರಾಯ ಮಂತ್ರವನ್ನು ಪಠಿಸಿ
ಯೋಗ ಯೋಗ ಯೋಗೇಶ್ವರಾಯ ಮಂತ್ರವು ನಿಮ್ಮ ಜೀವವ್ಯವಸ್ಥೆಯಲ್ಲಿ ಸಮತ್ ಪ್ರಾಣ ಅಥವಾ ಉಷ್ಣವನ್ನು ಉತ್ಪತ್ತಿ ಮಾಡುವುದರ ಕುರಿತಾಗಿದೆ. ನೀವು ಜೀವವ್ಯವಸ್ಥೆಯಲ್ಲಿ ಸಾಕಷ್ಟು ಪ್ರಮಾಣದ ಸಮತ್ ಪ್ರಾಣವನ್ನು ಉತ್ಪತ್ತಿ ಮಾಡಿ ಉಷ್ಣವನ್ನು ಉಂಟುಮಾಡಿದರೆ ನಿಮ್ಮ ರೋಗನಿರೋಧಕ ಶಕ್ತಿ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಮಂತ್ರವು ಉಷ್ಣವನ್ನು ಉತ್ಪತ್ತಿ ಮಾಡುವುದರಿಂದ ನಿಮ್ಮ ಪ್ರತಿರೋಧ ವ್ಯವಸ್ಥೆಯಲ್ಲಿ ಒಂದಿಷ್ಟು ಬಲವನ್ನು ಉಂಟುಮಾಡುತ್ತದೆ.
ಇದು ಕೊರೋನಾಗೆ ಚಿಕಿತ್ಸೆಯೂ ಅಲ್ಲ, ನಿವಾರಣೆಯೂ ಅಲ್ಲ ಎನ್ನುವುದು ಸ್ಪಷ್ಟವಾಗಲಿ. “ನಾನು ಪಠಿಸಿದ್ದೇನೆ ಹಾಗಾಗಿ ಹೊರಗೆ ಹೋಗಿ ಬೇಜವಾಬ್ದಾರಿಯುತ ಕೆಲಸಗಳನ್ನು ಮಾಡಬಹುದು” – ಇದು ಹೀಗೆ ಕೆಲಸ ಮಾಡಲ್ಲ. ಇದನ್ನು ನೀವು ಒಂದಿಷ್ಟು ಕಾಲಾವಧಿ ಮಾಡಿದಾಗ ನಿಮ್ಮ ಜೀವವ್ಯವಸ್ಥೆ ಸದೃಢವಾಗಿ, ಮುಂದಿನ ವೈರಸ್ ಬಂದಾಗ, ಅದನ್ನು ನಿರ್ವಹಿಸುವಲ್ಲಿ ಕೊಂಚ ಹೆಚ್ಚು ಸಮರ್ಥರಾಗಿರುತ್ತೀರಿ.
13. ಈಶಾ ಕ್ರಿಯಾವನ್ನು ಅಭ್ಯಾಸ ಮಾಡಿ
ನಾವು ಮಾಡಿರುವ ಮೂಲಭೂತ ತಪ್ಪು ಎಂದರೆ, ‘ನಾನು’ ಮತ್ತು ‘ನನ್ನದು’ ಎನ್ನುವುದರ ನಡುವೆ ವ್ಯತ್ಯಾಸ ಇಟ್ಟುಕೊಳ್ಳದೇ ಇರುವುದು. ನಾನೇನು ಶೇಖರಿಸಿದ್ದೇನೆ ಅದು ನನ್ನದಾಗಬಹುದು, ಅದರ ಬಗ್ಗೆ ವಾದ ಮಾಡುತ್ತಿಲ್ಲ, ಆದರೆ ಅದು ‘ನಾನು’ ಅಂತಾಗುವುದಿಲ್ಲ. ಈ ಬಟ್ಟೆ ನಾನು ಅಂತ ಹೇಳಿದರೆ ಖಂಡಿತವಾಗಿಯೂ ನನ್ನಲ್ಲೇನೋ ಸಮಸ್ಯೆಯಾಗಿದೆ ಅಂತ. ಅದೇ ರೀತಿ, ನಾನು ಶೇಖರಿಸಿರುವ ದೇಹ ಹಾಗೂ ಮನಸ್ಸಿನ ವಿಷಯಗಳು, ಗೊತ್ತಿರೋದು ಗೊತ್ತಿಲ್ಲದೇ ಇರೋದೆಲ್ಲ ‘ನಾನು’ ಎಂದರೆ, ಆಗ ನನ್ನಲ್ಲಿ ಸಮಸ್ಯೆ ಇದೆ ಅಂತರ್ಥ. ಪ್ರತಿನಿತ್ಯ ನಿಮ್ಮ ಜೀವನದಲ್ಲಿ ಇದು ಹಾವಳಿ ಮಾಡುತ್ತಿರುತ್ತದೆ. ಅದರಲ್ಲೂ ಇಂತಹ ಸಂಕಷ್ಟದ ಸನ್ನಿವೇಶಗಳಲ್ಲಿ ಇನ್ನೂ ಪ್ರಬಲವಾಗಿ ನಿಮ್ಮ ಮುಂದೆ ಬರಬಹುದು. ಇದಕ್ಕೆ ನಮ್ಮ ಬಳಿ ಸರಳವಾದ ಒಂದು ಪರಿಹಾರವಿದೆ: ಈಶಾ ಕ್ರಿಯಾ , ಯಾವುದು ನೀವು ಮತ್ತು ಯಾವುದು ನೀವಲ್ಲ ಎನ್ನುವುದನ್ನ ಸರಳವಾಗಿ ಬೇರ್ಪಡಿಸುವ ವಿಧಾನ. ಅದು ಉಚಿತವಾಗಿ ಲಭ್ಯವಿದ್ದು ಎಲ್ಲರೂ ಬಳಸಬಹುದು. ಯಾವುದು ನಾನು ಯಾವುದು ನಾನಲ್ಲ ಎನ್ನುವ ಅರಿವನ್ನ ನಿಮ್ಮೊಳಗೆ ತಂದುಕೊಂಡರೆ ಇಂತಹ ಕಠಿಣ ಸಮಯವನ್ನು ಎದುರಿಸುವುದು ಸುಲಭವಾಗಬಹುದು.
14. ಸಿಂಹ ಕ್ರಿಯಾ ಅಭ್ಯಾಸ ಮಾಡಿ
ಸಿಂಹ ಕ್ರಿಯಾ ಸರಳವಾದ ಯೋಗಾಭ್ಯಾಸವಾಗಿದ್ದು ಶಕ್ತಿಚ ಲನ ಕ್ರಿಯಾದಂತಹ ಪ್ರಬಲ ಪ್ರಕ್ರಿಯೆಗಳನ್ನು ಅಭ್ಯಾಸ ಮಾಡದೇ ಇರುವವರಿಗೆ ಅತ್ಯಂತ ಮಹತ್ವದ್ದ. ಸಿಂಹ ಕ್ರಿಯಾ ಶ್ವಾಸಕೋಶದ ಸಾಮರ್ಥ್ಯವನ್ನು ವರ್ಧಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನೀವು ಇದನ್ನ ಮುಂದಿನ ಐದು ದಿನವಗಳವರೆಗೆ ಮಾಡಲು ಸಾಧ್ಯವಾಗಿ ನಂತರ ಇದ್ದಕ್ಕಿದ್ದಂತೆ ಒಂದು ದಿನ ಮಾಡಲು ಸಾಧ್ಯವಾಗದಿದ್ದರೆ, ನಿಮಗೆ ಖಂಡಿತವಾಗಿಯೂ ಉಸಿರಾಟದ ತೊಂದರೆ ಇದೆ ಎಂದರ್ಥ. ಅದು ಕೊರೋನ ಅಲ್ಲದಿರಬಹುದು, ಬೇರೆಯೂ ಏನಾದರೂ ಇರಬಹುದು.
15. ಸಾಧನವನ್ನು ಮುಂದುವರೆಸಿ
ನಮಗೆ ಗೊತ್ತಿರುವ ಒಂದೇ ವಿಷಯವೆಂದರೆ ಯಾರಿಗೆ ರೋಗನಿರೋಧಕ ಶಕ್ತಿ ಹೆಚ್ಚಿದೆಯೋ ಅವರು ಉಳಿಯುತ್ತಾರೆ, ಇಲ್ಲದವರು ಕೋವಿಡ್‍ನ ದುಷ್ಪರಿಣಾಮಕ್ಕೆ ಒಳಗಾಗುತ್ತಾರೆ. ಇದನ್ನ ಬಿಟ್ಟು ವೈರಸ್ ಬಗ್ಗೆ ಹೆಚ್ಚಿಗೆ ಇನ್ನೇನೂ ತಿಳಿದಿಲ್ಲ. ಹಾಗಾಗಿ ಆ ಒಂದು ಕಾರಣಕ್ಕೆ ನಿಮ್ಮ ಸಾಧನೆಯನ್ನು ನಿರಂತರವಾಗಿ ಮುಂದುವರೆಸಿ, ಅದು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿರುವಂತೆ ನೋಡಿಕೊಳ್ಳುತ್ತದೆ. ಇಂಡಿಯಾನ ವಿಶ್ವವಿದ್ಯಾನಿಲಯ, ವರ್ಜಿನೀಯಾ ವಿಶ್ವವಿದ್ಯಾನಿಲಯ, ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಇತ್ಯಾದಿ ಈಶಾ ಯೋಗ ಅಭ್ಯಾಸಗಳ ಮೇಲೆ ಅಧ್ಯಯನ ನಡೆಸಿ ಆ ಹಂತದಲ್ಲಿ ಏನಾಗುವುದು ಎನ್ನುವುದನ್ನ ಪ್ರಕಟಗೊಳಿಸಿದ್ದಾರೆ, ಅದರಂತೆ ಇನ್’ಫ್ಲಾಮೇಟರಿ, ಬಿಡಿಎನ್‍ಎಫ್ ಹಾಗೂ ಇತರ ಸೂಚಕಗಳು ಸಾಧನ ಮಾಡುತ್ತಿರುವ ಜನರಲ್ಲಿ ರೋಗ ನಿರೋಧಕ ಶಕ್ತಿ ಅತ್ಯಧಿಕವಾಗಿರುವುದನ್ನ ತೋರಿಸಿದೆ. ಪ್ರತಿಯೊಬ್ಬರೂ ತಮ್ಮ ಸಾಧನವನ್ನು ನಿತ್ಯ ಮುಂದುವರೆಸಿ.
16. ಸಾಕಷ್ಟು ದೈಹಿಕ ಚಟುವಟಿಕೆಗಳನ್ನು ಮಾಡಿ
ಈಗ ಜನರು ಮನೆಯಲ್ಲಿದ್ದಾರೆ. ಸುಮ್ಮನೆ ಕುಳಿತರೆ, ದಿನವಿಡೀ ತಿನ್ನುವುದು ಹಾಗೂ ಆಲ್ಕೋಹಾಲ್ ಸೇವನೆ ಮಾಡಿ ತಮ್ಮನ್ನು ತಾವು ಇನ್ನಷ್ಟು ದುರ್ಬಲ ಮಾಡಿಕೊಳ್ಳುತ್ತಾರೆ. ಒಂದು ಸುಲಭ ವಿಧಾನವೆಂದರೆ ದೈಹಿಕವಾಗಿ ಚುರುಕಾಗಿರುವುದು. ಈ ಕೆಲವು ವಾರಗಳನ್ನು ದೇಹಾರೋಗ್ಯಕ್ಕೆ ಬಳಸಿಕೊಳ್ಳುವುದು ಉತ್ತಮ. ಬೇರೇನೂ ಗೊತ್ತಿಲ್ಲವೆಂದರೆ ಪ್ರತಿದಿನ ನಿಂತ ಜಾಗದಲ್ಲೇ ಬೇರೆ ಬೇರೆ ಸಮಯಗಳಲ್ಲಿ ಜಾಗ್ ಮಾಡಿ – ಒಂದು ಸಲಕ್ಕೆ ಹದಿನೈದು ನಿಮಿಷಗಳಂತೆ, ದಿನಕ್ಕೆ ಐದು –ಆರು ಬಾರಿ ಮಾಡುವುದು. ದೇಹ ಆಗ ಎಲ್ಲವನ್ನೂ ಚೆನ್ನಾಗಿ ನಿರ್ವಹಿಸುವ ಪ್ರಯತ್ನ ಮಾಡುತ್ತದೆ.
17. ನಿಮ್ಮನ್ನು ಖುಷಿಯಾಗಿಟ್ಟುಕೊಳ್ಳಿ
ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಂಗತಿಗಳಲ್ಲಿ ಮಾನಸಿಕ ಒತ್ತಡವೂ ಒಂದು. ಸಂಪೂರ್ಣ ಉಲ್ಲಸಿತರಾಗಿ, ಆನಂದವಾಗಿ, ಉತ್ಸಾಹಭರಿತರಾಗಿರುವುದು, ನಿಮ್ಮ ಪ್ರತಿರೋಧಕ ವ್ಯವಸ್ಥೆ ಹಾಗೂ ದೇಹ ಮತ್ತಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಸರಳ ವಿಧಾನ.
ಎಲ್ಲದರ ಕುರಿತು ಅತ್ಯಂತ ಗಂಭೀರವಾಗಿರುವ ವ್ಯಕ್ತಿಗಳಿಗಿಂತ ಖುಷಿಯಾಗಿ, ವಿವೇಕಯುತ ಹಾಗೂ ಜವಾಬ್ದಾರಿಯುತವಾದ ವ್ಯಕ್ತಿಗಳು ಪರಿಸ್ಥಿತಿಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ನೀವು ಆತಂಕದಲ್ಲಿದ್ದರೆ ದುರ್ಬಲರಾಗುವಿರಿ. ನೀವು ಸಕ್ಷಮವಾಗಿದ್ದು, ದೇಹ ಮತ್ತು ಮಿದುಳು ಸರಿಯಾಗಿ ಸ್ಪಂದಿಸಬೇಕಿರುವುದು ಬಹಳ ಮುಖ್ಯ.
ಸಂಪಾದಕರ ಟಿಪ್ಪಣಿ: ‘ಇನ್ನರ್ ಇಂಜಿನಿಯರಿಂಗ್ ಆನ್ಲೈನ್’ ಮೂಲಕ ನಿಮ್ಮನ್ನು ನೀವು ಆನಂದಮಯ ಹಾಗೂ ಉತ್ಸಾಹಭರಿತರಾಗಿ ಇಟ್ಟುಕೊಳ್ಳಿ. ಈಗಲೇ ನೋಂದಾಯಿಸಿ!