ಸುಖ-ದುಃಖದ ಏರಿಳಿತಗಳನ್ನು ಹೇಗೆ ನಿಭಾಯಿಸುವುದು
ಜೀವನದ ಏಳು-ಬೀಳುಗಳ ಪ್ರಶ್ನೆಗೆ ಉತ್ತರಿಸುತ್ತಾ , ಜೀವನದ ಹಾದಿಯಲ್ಲಿ ಒಂದು ಆನಂದದ ಮಧ್ಯಮ ಮಾರ್ಗವನ್ನು ಉಂಟುಮಾಡುವ ಸ್ಥಿರ ವೇದಿಕೆಯನ್ನು ಸೃಷ್ಟಿಸುವ ಬಗ್ಗೆ ಸದ್ಗುರುಗಳು ಇಲ್ಲಿ ತಿಳಿಸಿಕೊಡುತ್ತಾರೆ.
ಜೀವನದ ಏಳು-ಬೀಳುಗಳ ಪ್ರಶ್ನೆಗೆ ಉತ್ತರಿಸುತ್ತಾ , ಜೀವನದ ಹಾದಿಯಲ್ಲಿ ಒಂದು ಆನಂದದ ಮಧ್ಯಮ ಮಾರ್ಗವನ್ನು ಉಂಟುಮಾಡುವ ಸ್ಥಿರ ವೇದಿಕೆಯನ್ನು ಸೃಷ್ಟಿಸುವ ಬಗ್ಗೆ ಸದ್ಗುರುಗಳು ಇಲ್ಲಿ ತಿಳಿಸಿಕೊಡುತ್ತಾರೆ.
ಪ್ರಶ್ನೆ: ಸದ್ಗುರು, ಕೆಲವು ದಿನಗಳು ನಾನು ಬಹಳ ಸಂತೋಷವಾಗಿರುತ್ತೇನೆ, ಮತ್ತು ಇನ್ನೂ ಕೆಲವು ದಿನಗಳು ಬಹಳ ಖಿನ್ನನಾಗಿರುತ್ತೇನೆ. ಈ ಏಳು-ಬೀಳುಗಳನ್ನು ಹೇಗೆ ನಿಭಾಯಿಸುವುದು?
ಸದ್ಗುರು: ದಕ್ಷಿಣ ಭಾರತದಲ್ಲಿ ಯಾರಾದರೂ ತುಂಬಾ ನಕ್ಕರೆ, "ಅಷ್ಟೊಂದು ನಗಬೇಡ. ಏನಾದರೂ ದುಃಖ ಹಿಂಬಾಲಿಸುತ್ತದೆ" ಎಂದು ಹೇಳುತ್ತಾರೆ. ದುರದೃಷ್ಟವಶಾತ್ ಇಂತಹ ಜ್ಞಾನವನ್ನು ಅವರವರ ಅನುಭವದಿಂದ ಸಂಪಾದಿಸಿರುತ್ತಾರೆ. ಇಂದು ಬಹಳ ಸುಖವನ್ನು ಅನುಭವಿಸಿದರೆ ನಾಳೆ ಅಳುವುದು ಖಚಿತವೆಂದು ಅವರು ನಂಬುತ್ತಾರೆ. ಇದು ಯಾಕೆಂದರೆ ಜನರು ಅತಿಯಾಗಿ ಚಿಂತಿಸುತ್ತಾರೆ. ಸಂತೋಷ ಮತ್ತು ದುಃಖ - ಇವು ಎರಡನ್ನೂ ಕೂಡ ತಮ್ಮ ಮನಸ್ಸುಗಳಲ್ಲಿ ದೊಡ್ಡದು ಮಾಡಿ ಯೋಚಿಸುತ್ತಾರೆ. ಹೀಗೆ ಮಾಡದೇ ಇದ್ದರೆ, ಜೀವನದಲ್ಲಿ ಸೌಂದರ್ಯ ಎಲ್ಲಿ ಎಂದು ನೀವು ಕೇಳಬಹುದು. ಜೀವನವನ್ನು ಇದ್ದ ಹಾಗೆಯೇ ನೋಡಬೇಕು. ಆಗ ಸೌಂದರ್ಯ ಕಾಣುತ್ತದೆ. ಅದಕ್ಕೆ ಮೇಕಪ್ ಮಾಡುವ ಅಗತ್ಯವಿಲ್ಲ.
ಇದು ಏಕೆಂದರೆ ನೀವು ಜೀವನದ ಅಂಶಗಳ ಬಗ್ಗೆ ಗಮನ ಕೊಡುವುದಿಲ್ಲ. ನೀವು ಕಟ್ಟಿಕೊಂಡ ನಿಮ್ಮದೇ ಲೋಕದಲ್ಲಿ ನೀವು ಕಳೆದುಹೋಗಿರುವಿರಿ. ನೀವು ಯಾರೆಂಬ ಶಾರೀರಿಕ ಮತ್ತು ಮಾನಸಿಕ ಅಂಶಗಳ ಬದಲಾವಣೆ ಆವರ್ತನಗಳಲ್ಲಿ ಆಗುತ್ತದೆ. ಇಂದು ನೀವು ಬಹಳ ಉತ್ಸಾಹಭರಿತರಾಗಿರಬಹುದು ಆದರೆ ನಾಳೆ ನೀವು ನಿಸ್ತೇಜರಾಗಿರಬಹುದು. ಹೆಚ್ಚಿನಂಶ ಎಲ್ಲರಲ್ಲೂ ಈ ಏರುಪೇರುಗಳು ಆಗುತ್ತಿರುತ್ತವೆ. ಈ ಏರಿಳಿತಗಳಿಗೆ ಹೊರಗಿನ ಕಾರಣವನ್ನು ನೀವು ಕೊಡಬಹುದು. ಆದರೆ ನಿಮ್ಮನ್ನು ಒಂದು ಕೋಣೆಯಲ್ಲಿ ಬಂಧಿಸಿ ಯಾರಿಗೂ ನಿಮ್ಮನ್ನು ಭೇಟಿ ಮಾಡಲು ಕೊಡದೇ ಇದ್ದರೂ ಕೂಡ ಈ ಶಾರೀರಿಕ ಮತ್ತು ಮಾನಸಿಕ ಏರಿಳಿತಗಳ ಆವರ್ತನಗಳು ನಿಮ್ಮಲ್ಲಿ ಆಗುತ್ತಿರುತ್ತವೆ. ಈ ಏರಿಳಿತಗಳು ಪರಸ್ಪರ ಪ್ರಭಾವ ಬೀರಬಹುದು.
ಈ ಬದಲಾವಣೆಗಳ ಆವರ್ತನಗಳ ಬಗ್ಗೆ ಜನರು ಅವರದೇ ಆದ ನಂಬಿಕೆಗಳನ್ನು ಬೆಳೆಸಿಕೊಂಡಿದ್ದಾರೆ. ತಮಗೆ ಸಂಕಟ ಬಂದೇ ಬರುತ್ತದೆ ಎಂದು ನಂಬುತ್ತಾರೆ. ಹಾಗೆಯೇ ಆಗುತ್ತದೆ. ನಿಮ್ಮ ಸಂತೋಷ ಮತ್ತು ದುಃಖಕ್ಕೆ ನೀವೇ ಕಾರಣಕರ್ತರು ಎಂದು ನೀವು ಅರಿತರೆ ಏನು ತೊಂದರೆ ಇಲ್ಲ. ಜನರು ಮಾಡುವ ದೊಡ್ಡ ತಪ್ಪು ಏನೆಂದರೆ, ಸಂತೋಷವಾಗಿ ಇರಲು ಪ್ರಯತ್ನ ಮಾಡುವುದು. ಅದು ಬರೀ ಸಂತೋಷದಿಂದ ಇರುವುದಲ್ಲ – ಇತರರಿಗಿಂತ ಹೆಚ್ಚು ಸಂತೋಷದಿಂದ ಇರಲು ಪ್ರಯತ್ನ ಪಡುವುದು. ಇದು ಗಂಭೀರ ಸಮಸ್ಯೆ. ಸಂತೋಷದಿಂದ ಇರಲು ಪ್ರಯತ್ನಿಸಬೇಡಿ. ನಿಮ್ಮೊಳಗೆ ಆಗುತ್ತಿರುವುದಕ್ಕೆಲ್ಲ ನೀವೊಬ್ಬರೇ ಕಾರಣಕರ್ತರು ಎಂದು ಒಂದು ಸಲ ಅನುಭವ ಆದರೆ, ನೀವು ಪರಮಸುಖಿ ಆಗುವಿರಿ. ನೀವು ಹಾರುವುದಿಲ್ಲ ಅಥವಾ ಮುಳುಗುವುದಿಲ್ಲ. ಕೇವಲ ಆನಂದದಿಂದ ಇರುವಿರಿ. ಈ ಸ್ಥಿತಿಯಲ್ಲಿ ಎಷ್ಟು ಆಹ್ಲಾದಕಾರವಾಗಿರಬಹುದು ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗುತ್ತದೆ. ನಿಮ್ಮಲ್ಲಿರುವ ಶಕ್ತಿ ಮತ್ತು ತೀವ್ರತೆಯ ಮೇಲೆ ಅವಲಂಬಿಸಿರುತ್ತದೆ. ಆದರೆ ಇದರಲ್ಲಿ ಸ್ಥಿರತೆ ಇದೆ. ನಿಮಗೆ ಉನ್ಮಾದ ಸ್ಥಿತಿ ಬೇಕೆಂದರೆ, ಮೇಲೇರಿ ವಾಪಸ್ ಬರಬಹುದು. ಖೇದದ ಸ್ಥಿತಿ ಬೇಕೆಂದರೆ, ಕೆಳಗಿಳಿದು ವಾಪಸ್ ಬರಬಹುದು.
ಸುವರ್ಣ ಮಾಧ್ಯಮ ಮಾರ್ಗ
ಈ ಪರಮಸುಖದ ಮಧ್ಯಮ ಸ್ಥಿತಿಯ ಅನುಭವವನ್ನು ಸುವರ್ಣ ಮಧ್ಯಮ ಮಾರ್ಗವೆನ್ನುತ್ತಾರೆ. ಇದೇ ಮಾರ್ಗದ ಬಗ್ಗೆ ಗೌತಮ ಬುದ್ಧ ಹಾಗು ಇತರ ಜ್ಞಾನಿಗಳು ಮಾತನಾಡಿದ್ದಾರೆ. ವಿವಿಧ ಜನರು ಭಿನ್ನ ಭಿನ್ನ ಮಧ್ಯಮ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಇದು ನಿಷ್ಕ್ರಿಯ ಸ್ಥಿತಿಯಲ್ಲ. ಇದು ಸುಂದರ ಮುಂಜಾವಿನ ಹಾಗೆ ಉತ್ಸಾಹಭರಿತ ಮತ್ತು ಆಹ್ಲಾದಕರ. ಮಿಂಚು ಗುಡುಗು ಇರುವುದಿಲ್ಲ. ಬದಲಾಗಿ ಎಲ್ಲವೂ ಆರಾಮಾಗಿ ನಡೆಯುತ್ತದೆ. ಇಂತಹ ಮನಸ್ಥಿತಿಯಿಂದಲೇ "ಗುಡ್ ಮಾರ್ನಿಂಗ್!" ಎಂಬ ಉದ್ಗಾರ ಬಂದಿದ್ದು. ಕೆಲ ಸಮಯ ಜಗತ್ತಿನ ಜಂಜಾಟದಿಂದ ದೂರವಾಗಿ ಬೆಳಿಗ್ಗೆ ಎದ್ದಾಗ, ಎಷ್ಟು ಖುಷಿಯಾಗುತ್ತದೆ! ಮಧ್ಯಾಹ್ನ, ಸಂಜೆ, ಮತ್ತು ರಾತ್ರಿ ಎಲ್ಲವೂ ಸುಂದರವಾಗಿ ಕಾಣುತ್ತದೆ. ಆದರೆ ಇದನ್ನು ಗಮನಿಸಲು ನೀವು ಅದರಿಂದ ಸ್ವಲ್ಪ ದೂರವಿರಬೇಕು. ಇದು ಹೇಗೆಂದರೆ, ಐದು ದಿನ ಕೇವಲ ಗಂಜಿ ಕುಡಿದು, ನಂತರ ಮತ್ತೆ ರೂಢಿಯ ಆಹಾರ ಶುರು ಮಾಡಿದ ಕೂಡಲೇ ಅದನ್ನು ಹೆಚ್ಚು ಪ್ರಶಂಸಿಸುತ್ತೀರ. ಪ್ರತಿಯೊಂದು ಕ್ಷಣವೂ ಚೆನ್ನ. ಸ್ವಲ್ಪ ದೂರವಿದ್ದಾಗ, ಆ ಕ್ಷಣವನ್ನು ಗಮನಿಸುವಿರಿ.
ಈ ಸುವರ್ಣ ಮಧ್ಯಮ ಮಾರ್ಗವೆಂದರೆ ನಿಷ್ಕ್ರಿಯರಾಗಿರುವುದಲ್ಲ. ನಿಮಗೆ ಬೇಕಾದರೆ ನೀವು ಏರಬಹುದು ಅಥವಾ ಕೆಳಗಿಳಿಯಬಹುದು. ಆದರೆ ಆ ಪರಮಸುಖದ ಮಟ್ಟವನ್ನು ಕಾದುಕೊಳ್ಳುವಿರಿ. ಈ ಪರಮಸುಖವನ್ನು ಸಂಘಟಿಸುವುದು ನಿಮ್ಮ ಕ್ರಿಯಾಭ್ಯಾಸ. ನೀವು ನಿಮ್ಮ ಕ್ರಿಯಾ ವನ್ನು ಸರಿಯಾಗಿ ಮಾಡಿದರೆ, ಈ ಸುವರ್ಣ ಸ್ಥಿತಿಯನ್ನು ತಲುಪಿ ಅದನ್ನು ಕಾಯ್ದುಕೊಳ್ಳಬಹುದು. ಅಲ್ಲಿಂದ ಈ ಮಾರ್ಗವನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಏರಿಸಬಹುದು. ನಿಮ್ಮಲ್ಲಿಯ ಉತ್ಸಾಹ ಹಾಗು ಶಕ್ತಿಯ ಮೇಲೆ ಈ ಮಧ್ಯಮ ಮಾರ್ಗದ ಮಟ್ಟ ಅವಲಂಬಿಸಿರುತ್ತದೆ. ಯಾವ ಮಟ್ಟದಲ್ಲಿಯೇ ಇರಲಿ, ಇದು ಒಂದು ಸುಂದರ ಅನುಭವವನ್ನು ಕೊಡುತ್ತದೆ. ಇದು ಉಕ್ಕೇರುವ ಭಾವಪರವಶತೆಯಂತೂ ಅಲ್ಲ ಯಾಕೆಂದರೆ ನಿರ್ವಹಿಸುವುದು ಕಷ್ಟವಾಗುತ್ತದೆ. ಭಾವಪರವಶತೆಯಿಂದ ಮತ್ತೇರಿದ ಸ್ಥಿತಿಗೆ ತಲುಪಿದರೆ, ಪ್ರಾಪಂಚಿಕ ಕಾರ್ಯಗಳಲ್ಲಿ ಭಾಗವಹಿಸಲು ಆಗುವುದಿಲ್ಲ. ನೀವು ಏನು ಮಾಡಬೇಕೋ ಅದನ್ನ ಮಾಡಲು ಆಗುವುದಿಲ್ಲ.
ಈ ಜಗತ್ತಿನಲ್ಲಿ ನೀವು ಪ್ರಭಾವಶಾಲಿ ಆಗಿರಬೇಕೆಂದರೆ, ಈ ಆನಂದದ ಮಟ್ಟವನ್ನು ಕಾಪಾಡಿಕೊಳ್ಳಬೇಕು. ಆನಂದ ಎಂದರೆ ಒಳಗಿನ ಶಾಂತತೆ ಮತ್ತು ಸಂತೋಷದ ಸಂಯೋಗ. ಬೆಳಿಗ್ಗೆ ಎದ್ದು ಕೆಲಸ ಮಾಡುತ್ತಾ ನಿಮಗೆ ಗೊತ್ತಿಲ್ಲದೆ ನೀವು ಹಾಡು ಗುನಿಗುನಿಸುವುದು ಪರಮಸುಖದ ಸಂಕೇತ. ಈ ಸ್ಥಿತಿಯಲ್ಲಿದ್ದಾಗ ನಿಮಗೆ ಕಾರಣ ಗೊತ್ತಿಲದೆ ಸಂತೋಷವಾಗಿ ಇರುವಿರಿ. ಆಹ್ಲಾದತೆಯ ವಿಪರೀತ ಸ್ಥಿತಿ ಭಾವೋತ್ಕರ್ಷತೆ. ಈ ಸ್ಥಿತಿಯಲ್ಲಿ ಇರಲು ನಿಮಗೆ ಒಂದು ರೀತಿಯ ಶಕ್ತಿ ಬೇಕಾಗುತ್ತದೆ. ಕೆಲ ಯೋಗಿಗಳು ಯಾವ ಮಟ್ಟದ ಭಾವೋತ್ಕರ್ಷೆಯಲ್ಲಿ ಇರುವರು ಅಂದರೆ ಅವರಿಗೆ ಹಸಿವಿನ ಅರಿವು ಕೂಡ ಆಗುವುದಿಲ್ಲ. ಅಂಥವರಿಗೆ ಅವಧೂತರು ಎನ್ನುತ್ತಾರೆ. ಅವರು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಆಹಾರ ನೀಡಲು, ಶೌಚಾಲಯಕ್ಕೆ ಕರೆದುಕೊಂಡು ಹೋಗಲು ಕೂಡ ಯಾರಾದರೂ ಬೇಕು. ಈಗಿನ ಕಾಲದಲ್ಲಿ ಹೀಗೆ ಸಹಾಯ ಮಾಡಲು ಯಾರು ಸಿಗುವುದಿಲ್ಲ. ಹಾಗಾಗಿ ಅಂತಹ ಸ್ಥಿತಿಯಿಂದ ಕೆಳಗೆ ಇಳಿಯುವುದು ಒಳ್ಳೆಯದು.
ಒಂದು ಸ್ಥಿರ ವೇದಿಕೆ
ನಿಮ್ಮ ಮಧ್ಯಮ ಮಾರ್ಗವನ್ನು ನೀವೇ ಕಂಡುಕೊಳ್ಳಬೇಕು. ನಿಮಗೆ ಎಷ್ಟೇ ಮಂಡಿ ಊದಿಕೊಳ್ಳಲಿ, ಪಾದದ ನೋವು ಬರಲಿ, ನೀವು ಸುಮ್ಮನೆ ಕುಳಿತುಕೊಳ್ಳಬೇಕು. ನೀವು ಆನಂದಮಯರಾಗಿರುವಿರಿ. ಈ ಒಂದು ಸ್ಥಿರತೆ ನಿಮ್ಮಲ್ಲಿ ಇರದೆ ನೀವು ಯಾವುದಾದರೂ ಚಟುವಟಿಕೆಯಲ್ಲಿ ಪಾಲ್ಗೊಂಡರೆ, ನೀವು ಕಳೆದುಹೋಗುವಿರಿ. ಇಂದಿನ ಕಾಲದಲ್ಲಿ ಎಲ್ಲರ ಜೀವನವು ಬಹಳ ನಿಯಂತ್ರಿತವಾಗಿದೆ. ವೈಪರೀತ್ಯಕ್ಕೆ ನೀವು ಎಂದೂ ಹೋಗುವುದಿಲ್ಲ. ಒಂದು ವೇಳೆ ನೀವು ಸ್ವಚ್ಛಂದವಾದ ವಾತಾವರಣದಲ್ಲಿ ಬೆಳೆದಿದ್ದರೆ, ಈ ಆನಂದಮಯ ಸ್ಥಿತಿ ನಿಮ್ಮನ್ನು ಎಚ್ಚರವಾಗಿರಿಸುತ್ತದೆ ಮತ್ತು ನಿಮ್ಮ ಉಳಿವಿನ ಸಂಭವತೆ ಹೆಚ್ಚುತ್ತದೆ.
ಒಂದು ವೇಳೆ ನೀವು ಖಿನ್ನತೆಗೆ ಒಳಗಾಗಿದ್ದರೆ, ನಿಮಗೆ ಉಳಿಯುವುದು ಬೇಕಿಲ್ಲ. ಎಲ್ಲವನ್ನೂ ಮುಗಿಸಿ ಹುಲಿಯ ಆಹಾರವಾಗಲು ನೀವು ಸಿದ್ಧವಾಗಿರುವಿರಿ. ಒಂದು ವೇಳೆ ನೀವು ಭಾವೋತ್ಕರ್ಷದ ಸ್ಥಿತಿಯಲ್ಲಿದ್ದರೆ ನೀವು ಹುಲಿಯ ಆಹಾರವಾದರೂ ನಿಮಗೆ ಪರಿವೆ ಇಲ್ಲ. ನೀವು ಮಾಧ್ಯಮ ಮಾರ್ಗವನ್ನು ಆಯ್ದುಕೊಂಡಿದ್ದರೆ ಮಾತ್ರ ನಿಮ್ಮಲ್ಲಿ ಬದುಕುವ ಛಲ, ಕೆಲಸ ಮಾಡುವ ಉತ್ಸಾಹ, ಮತ್ತು ಆಹ್ಲಾದಕರತೆ ಇರುತ್ತದೆ. ಕೇವಲ ನಿಮ್ಮ ಬಗ್ಗೆ ಒಂದೇ ಅಲ್ಲ, ಸುತ್ತಲಿನವರ ಬಗ್ಗೆ ಕೂಡ ಆಹ್ಲಾದಕರತೆ ಇರುತ್ತದೆ. ಜೀವನಕ್ಕೆ ಇದು ಬಹಳ ಮುಖ್ಯ. ಭಾವೋತ್ಕರ್ಷೆಯಲ್ಲಿ ನೀವು ಮುಳುಗಿದರೆ, ನಿಮಗೆ ಸುತ್ತಮುತ್ತಲಿನ ಪರಿವೆ ಇರುವುದಿಲ್ಲ. ನಿಮ್ಮ ಚಿಪ್ಪಿನೊಳಗೆ ನೀವು ಹೋಗುವಿರಿ. ಇಂತಹ ಜನರು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ. ಸಣ್ಣ ವಯಸ್ಸಿನಲ್ಲಿಯೇ ತೀರಿಕೊಳ್ಳುತ್ತಾರೆ. ಆ ಉನ್ಮಾದದ ಸ್ಥಿತಿಯಲ್ಲಿರುವ ಅವರ ಜೀವನ ಯಾವಾಗಲಾದರೂ ಕೊನೆಗೊಳ್ಳಬಹುದು. ಐವತ್ತು ವರ್ಷಗಳವರೆಗೆ ಬದುಕುವ ಬದಲು ಭಾವೋತ್ಕರ್ಷತೆಯ ಐದು ವರ್ಷಗಳು ಅವರಿಗೆ ಸಾಕಾಗುತ್ತದೆ. ಮನುಷ್ಯನ ಅನುಭವದಲ್ಲಿ ಏನೇನು ನೋಡಬೇಕೋ ಅವನ್ನೆಲ್ಲ ಅವರು ನೋಡಿರುತ್ತಾರೆ. ಮತ್ತೇನು ಮಾಡುವುದು ಇರುವುದಿಲ್ಲ. ಹಾಗಾಗಿ ಅವರಿಗೆ ಚಿಂತೆ ಇಲ್ಲ.
ಈಶಾ ಭಾವ ಸ್ಪಂದನ ಕಾರ್ಯಕ್ರಮದಲ್ಲಿ ಇಂತಹ ಭಾವೋತ್ಕರ್ಷದ ಸ್ಥಿತಿಯನ್ನು ತಲುಪಬಹುದು ಎಂದು ತೋರಿಸುತ್ತೇವೆ. ಆದರೆ ಆ ಸ್ಥಿತಿಯನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟ. ಆಹ್ಲಾದಕರ ಸ್ಥಿತಿಯಲ್ಲಿ ನಿಮಗೆ ಇರಬೇಕಾದರೆ, ನೀವು ಸ್ಥಿರವಾಗಿರಬೇಕು. ನಿಮ್ಮ ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕು. ವರ್ಷದಲ್ಲಿ ಕೆಲವು ದಿನಗಳಿಗೆ ಮಾತ್ರ ಧ್ಯಾನ ಮಾಡಿದರೆ ಸಾಕಾಗುವುದಿಲ್ಲ. ನಿಮ್ಮ ಜೀವನದಲ್ಲಿ ಸಾಧನೆಯನ್ನು ಅಳವಡಿಸಿಕೊಳ್ಳಬೇಕು. ನೀವು ಸಾಧನೆಗೆ ನಿಮ್ಮನ್ನು ಅರ್ಪಿಸಿಕೊಂಡರೆ, ನಾನು ನಿಮ್ಮ ಬದುಕಿನಲ್ಲಿ ಜೀವಂತ ವಾಸ್ತವವಾಗಿರುತ್ತೇನೆ. ಸದ್ಯಕ್ಕೆ, ನಾನು ನಿಮ್ಮ ನಿಮ್ಮ ಮನಸ್ಸಿನಲ್ಲಿ ಒಂದು ಆಲೋಚನೆ ಅಥವಾ ನೆನಪು. ನಾನು ನಿಮ್ಮ ಬದುಕಲ್ಲಿ ಜೀವಂತ ವಾಸ್ತವವಾಗಿರಬೇಕಾದರೆ, ನೀವು ಯಾರೆಂದು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಮಯ ಕೊಡಬೇಕು. ನೀವು ಯಾರೆಂದು ನಿಮ್ಮಲ್ಲಿ ಸ್ಪಷ್ಟತೆ ಇಲ್ಲದಿದ್ದಲ್ಲಿ, ನಿಮ್ಮ ಜೀವನದಲ್ಲಿ ನನ್ನ ಅಸ್ತಿತ್ವವನ್ನು ನೋಡಲಾಗುವುದಿಲ್ಲ. ಸೃಷ್ಟಿಕರ್ತನ ಅನುಗ್ರಹ ಮುಟ್ಟದ ಯಾವುದೇ ಜಾಗ ಅಥವಾ ಮೂಲೆ ಇಲ್ಲ. ಆದರೆ ನಿಮ್ಮಲ್ಲಿ ಸ್ಪಷ್ಟತೆ ಇಲ್ಲದಿದ್ದರೆ, ನಿಮಗೆ ಇದು ಕಾಣಿಸುವುದಿಲ್ಲ. ಇದನ್ನು ನೀವು ಸರಿಪಡಿಸಿದರೆ, ಇದ್ದಕಿದ್ದ ಹಾಗೆ ಬದುಕು ಹೊಸದಾಗಿ ಕಾಣಿಸುತ್ತದೆ.
Editor's Note: This article is based on an excerpt from the July 2014 issue of Forest Flower. Pay what you want and download. (set ‘0’ for free). Print subscriptions are also available.