ಧ್ಯಾನ: ತರ್ಕವನ್ನು ಮೀರಿಹೋಗುವುದು
ತರ್ಕ ಎನ್ನುವುದು ಬಾಹ್ಯ ಸನ್ನಿವೇಶಗಳನ್ನು ನಿರ್ವಹಿಸಲು ಉಪಯುಕ್ತವಾದರೂ, ಜೀವನದ ಗುಣಮಟ್ಟವನ್ನು ಅದು ವರ್ಧಿಸುವುದಿಲ್ಲ ಎನ್ನುವುದನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ಪರಿಣಾಮಕಾರಿಯಾಗಿ ಇದ್ದುಕೊಂಡೇ ತರ್ಕದ ಹಿಡಿತವನ್ನು ಮೀರಿಹೋಗುವುದು ಧ್ಯಾನದ ವೈಶಿಷ್ಟ್ಯ: "ಆಧ್ಯಾತ್ಮದ ಮಾರ್ಗದಲ್ಲಿ ನೀಡಲಾಗುವ ಎಲ್ಲಾ ಸಾಧನೆಗಳು, ಎಲ್ಲಾ ರೀತಿಯ ಧ್ಯಾನದ ವಿಧಾನಗಳೂ ಕೂಡ ಮೂಲಭೂತವಾಗಿ, ನಿಮ್ಮೊಳಗೆ ನಿರ್ದಿಷ್ಟ ಮಟ್ಟದ ಒತ್ತಡವನ್ನು ಹೇರುತ್ತಿರುವ ನಿಮ್ಮ ತಾರ್ಕಿಕ ಮನಸ್ಸನ್ನು ನಿರ್ವಹಿಸುವುದಕ್ಕಾಗಿಯೇ ಆಗಿದೆ... ಹಾಗಾಗಿ ಧ್ಯಾನವು ಈ ಒತ್ತಡವನ್ನು ಸಡಿಲಿಸುವ ಒಂದು ವಿಧಾನವಾಗಿದೆ. ಅಂದರೆ ತಾರ್ಕಿಕತೆಯ ವಿರೂಪಗಳನ್ನು ಅಳವಡಿಸಿಕೊಳ್ಳದೆಯೇ, ಮನಸ್ಸನ್ನು ಅದರಷ್ಟಕ್ಕೇ ಇರಲು ಬಿಡುವುದು."
ತರ್ಕ ಎನ್ನುವುದು ಬಾಹ್ಯ ಸನ್ನಿವೇಶಗಳನ್ನು ನಿರ್ವಹಿಸಲು ಉಪಯುಕ್ತವಾದರೂ, ಜೀವನದ ಗುಣಮಟ್ಟವನ್ನು ಅದು ವರ್ಧಿಸುವುದಿಲ್ಲ ಎನ್ನುವುದನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ಪರಿಣಾಮಕಾರಿಯಾಗಿ ಇದ್ದುಕೊಂಡೇ ತರ್ಕದ ಹಿಡಿತವನ್ನು ಮೀರಿಹೋಗುವುದು ಧ್ಯಾನದ ವೈಶಿಷ್ಟ್ಯ.
ಸದ್ಗುರು: ಮನಸ್ಸೆನ್ನುವುದು ಯಾವಾಗಲೂ ಸಹ ನೀವು ಸಂಗ್ರಹಿಸಿರುವ ಗತಕಾಲದ ಅನುಭವಗಳ ಕುರಿತದ್ದಾಗಿದೆ; ಅದು ಎಂದಿಗೂ ವರ್ತಮಾನದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆಯಾಗಿರುವುದಿಲ್ಲ. ಬದುಕಿನ ಪ್ರಾಪಂಚಿಕ ವಿಷಯಗಳನ್ನು ನಿರ್ವಹಿಸುವಲ್ಲಿ ಮನಸ್ಸು ಒಂದು ಉಪಯುಕ್ತ ಸಾಧನ ಆದರೆ ನಿಮ್ಮ ಇಡೀ ಜೀವನವನ್ನು ನಿರ್ವಹಿಸಲು ನೀವದನ್ನು ಬಳಸಿಕೊಂಡರೆ, ಅದು ಎಲ್ಲವನ್ನೂ ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿಬಿಡುತ್ತದೆ. ತಾರ್ಕಿಕವಾಗಿ ನೋಡಿದರೆ - ನೀವು ಮುಂಜಾನೆ ಹಾಸಿಗೆಯಿಂದ ಎದ್ದೇಳುವುದೂ ಸಹ ಒಂದು ದೊಡ್ಡ ಸಾಧನೆಯಂತೆ ಭಾಸವಾಗುತ್ತದೆ. ಅದಾದ ಮೇಲೆ ನೀವು ನಿಮ್ಮ ಹಲ್ಲುಗಳನ್ನು ಉಜ್ಜಬೇಕು, ತಿನ್ನಬೇಕು, ಕೆಲಸಮಾಡಬೇಕು, ತಿನ್ನಬೇಕು, ಕೆಲಸಮಾಡಬೇಕು, ತಿನ್ನಬೇಕು, ಮಲಗಬೇಕು; ಮರುದಿನ ಮುಂಜಾನೆ ಮತ್ತದೇ ಪುನರಾವರ್ತನೆ. ಜೀವನಪರ್ಯಂತ ನೀವು ಪದೇ ಪದೇ ಇದನ್ನೇ ಮಾಡುತ್ತಿರಬೇಕು. ತಾರ್ಕಿಕವಾಗಿ ಯೋಚಿಸಿದಲ್ಲಿ ಇದು ನಿಮಗೆ ಉಪಯುಕ್ತವೆಂದು ತೋರುತ್ತದೆಯೇ? ಖಂಡಿತವಾಗಿಯೂ ಇಲ್ಲ, ಅಲ್ಲವೇ? ನೀವು ನಿಮ್ಮ ಜೀವನದ ಅನುಭವವನ್ನು ಅವಲೋಕಿಸಿ ನೋಡಿದಾಗ, ನೀವು ನೋಡಿರಬಹುದಾದ ಸೂರ್ಯೋದಯ ನಿಮಗೆ ಅಮೂಲ್ಯವಾದದ್ದಾಗಿರುತ್ತದೆ. ಆಕಾಶದಲ್ಲಿ ಹಕ್ಕಿಗಳು ಹಾರಾಡುವುದನ್ನು ನೋಡಿದ ಕ್ಷಣ, ನಿಮ್ಮ ಉದ್ಯಾನದಲ್ಲಿ ಹೂಗಳು ಅರಳುವುದನ್ನು ನೋಡಿದ ಕ್ಷಣ ಅಥವಾ ನಿಮ್ಮ ಮಗುವಿನ ಮುಖವನ್ನು ನೋಡಿದ ಕ್ಷಣಗಳೆಲ್ಲವೂ ಅಮೂಲ್ಯ ಹಾಗೂ ಉಪಯುಕ್ತವಾಗಿ ಕಾಣಬಹುದು. ಆದರೆ ನೀವಿದನ್ನು ತಾರ್ಕಿಕವಾಗಿ ನೋಡಿದರೆ, ಅತಿಯಾದ ತರ್ಕದ ಕ್ಷಣಗಳು ಆತ್ಮಹತ್ಯೆಯ ಕ್ಷಣಗಳಾಗಿ ತೋರುತ್ತವೆ.
ನೀವು ಅತಿಯಾದ ತಾರ್ಕಿಕ ಮನಃಸ್ಥಿತಿಯವರಾದರೆ, ನೀವು ಖಿನ್ನತೆಗೊಳಗಾಗುತ್ತೀರಿ ಹಾಗೂ ಸ್ವಯಂ ವಿನಾಶಕಾರಿಯಾಗುತ್ತೀರಿ. ಸದ್ಯದಲ್ಲಿ ನೀವು ನಿಮ್ಮ ತಾರ್ಕಿಕ ಮನೋವೃತ್ತಿಯಿಂದ ಈ ಜೀವನದ ಸ್ವರೂಪವನ್ನು ತಿಳಿಯಲು ಪ್ರಯತ್ನಿಸುತ್ತಿದ್ದೀರಿ. ನೀವು ಎಷ್ಟೇ ಪ್ರಯತ್ನಿಸಿದರೂ ಸಹ ಅದು ನಿಮಗೆ ಅರ್ಥವಾಗುವುದಿಲ್ಲ. ನಿಮ್ಮ ಜೀವನದ ಸ್ವರೂಪವನ್ನು ನೀವು ಅರಿಯಬೇಕೆಂದಾದರೆ, ತಾರ್ಕಿಕ ಮನಸ್ಸಿನ ಮಿತಿಗಳಿಂದಾಚೆಗೆ ನೋಡಲು ನೀವು ಸಿದ್ಧರಿರಬೇಕು. ಇಲ್ಲವಾದಲ್ಲಿ ಇದೊಂದು ದೊಡ್ಡ, ಕೊನೆಯೇ ಇಲ್ಲದ, ಫಲಪ್ರದವಾಗದ ಹೋರಾಟವಾಗುತ್ತದೆ ಅಷ್ಟೆ. ಅದು ನಿಮ್ಮನ್ನೆಂದಿಗೂ ಯಾವುದೇ ಪರಿಹಾರದತ್ತ ಕೊಂಡೊಯ್ಯುವುದಿಲ್ಲ. ಅದೇನಿದ್ದರೂ ಕೇವಲ ಸಮಸ್ಯೆಯ ಜಟಿಲತೆಯನ್ನು ಹೆಚ್ಚಿಸಬಹುದಷ್ಟೆ.
ನಿಮ್ಮ ಜೀವನದ ಎಲ್ಲಾ ಅಂಶಗಳನ್ನು ಮಾಡುವ ಪ್ರಯತ್ನದಲ್ಲಿ ನೀವು ಬಳಸಿಕೊಳ್ಳುತ್ತಿರುವ ಮೂಲಭೂತ ಸಾಧನವಾದ ನಿಮ್ಮ ತಾರ್ಕಿಕ ಮನಸ್ಸು, ಕೇವಲ ಈ ಅಸ್ತಿತ್ವದ ಉಭಯತ್ವವನ್ನು (ದ್ವಂದ್ವವನ್ನು) ನಿಭಾಯಿಸುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ. ನೀವು ಒಂದು ಜೀವಿಯಾಗಿ ದ್ವಂದ್ವದಲ್ಲಿದ್ದರೆ, ನಿರಂತರವಾದ ಪ್ರಯಾಸವನ್ನು ಅನುಭವಿಸುತ್ತೀರಿ. ಒಮ್ಮೆ ಈ ಒತ್ತಡವನ್ನು ನೀವು ಸೃಷ್ಟಿಸಿಕೊಂಡ ಮೇಲೆ, ಮತ್ತು ಅದರ ಬಗ್ಗೆ ತಾರ್ಕಿಕವಾಗಿ ಯೋಚಿಸಿದಷ್ಟೂ, ನೀವು ಇನ್ನೂ ಹೆಚ್ಚಿನ ಉದ್ವಿಗ್ನತೆಗೆ ಒಳಗಾಗುತ್ತೀರಿ.
ಆಧ್ಯಾತ್ಮದ ಮಾರ್ಗದಲ್ಲಿ ನೀಡಲಾಗುವ ಎಲ್ಲಾ ಸಾಧನೆಗಳು, ಎಲ್ಲಾ ರೀತಿಯ ಧ್ಯಾನದ ವಿಧಾನಗಳೂ ಕೂಡ ಮೂಲಭೂತವಾಗಿ, ಒಂದು ನಿರ್ದಿಷ್ಟ ಮಟ್ಟದ ಒತ್ತಡವನ್ನು ನಿರ್ಮಿಸುತ್ತಿರುವ ನಿಮ್ಮೊಳಗಿನ ತಾರ್ಕಿಕ ಮನಸ್ಸನ್ನು ನಿರ್ವಹಿಸುವುದಕ್ಕಾಗಿಯೇ ಆಗಿದೆ. ನಿರಂತರವಾಗಿ ಅದನ್ನು ಬಿಗಿದು ಕಟ್ಟಿದ್ದೇ ಆದಲ್ಲಿ, ನಿಮ್ಮೊಳಗಿನ ಪ್ರಾಣಶಕ್ತಿಯೇ ದುರ್ಬಲವಾಗುತ್ತದೆ ಮತ್ತು ಕಾಲ ಕಳೆದಂತೆ ಅದು ಅದರ ತೀವ್ರತೆ ಹಾಗೂ ಹುರುಪನ್ನು ಕಳೆದುಕೊಳ್ಳುತ್ತದೆ.
ಈಸೋಪನ ಜೀವನದಲ್ಲಿ ನಡೆದ ಒಂದು ಸುಂದರವಾದ ಘಟನೆ ಪ್ರಚಲಿತದಲ್ಲಿದೆ. ಈಸೋಪ ಗ್ರೀಕ್ ದೇಶದ ಒಬ್ಬ ರಾಜನ ಗುಲಾಮರುಗಳಲ್ಲಿ ಒಬ್ಬನಾಗಿದ್ದ ಮತ್ತು ಅವನು ನೀತಿ ಕಥೆಗಳನ್ನು ಬರೆಯುತ್ತಿದ್ದ. ಒಂದು ದಿನ ಅವನು ಕೆಲವು ಮಕ್ಕಳೊಡಗೂಡಿ ಬಿಲ್ಲು-ಬಾಣ ಆಟವನ್ನು ಆಡುತ್ತಿದ್ದ. ಈಸೋಪನಿಗೆ ಮಕ್ಕಳೊಡನೆ ಆಡುವುದೆಂದರೆ ತುಂಬಾ ಇಷ್ಟವಾಗುತಿತ್ತು. ಗಂಭೀರವಾಗಿ ಕಾಣುವ ವಿವೇಕಿ ವ್ಯಕ್ತಿಯೊಬ್ಬ ಅವನು ಮಕ್ಕಳೊಂದಿಗೆ ಆಡುವುದನ್ನು ನೋಡಿ, "ವಯಸ್ಕನಾಗಿ ನೀನು ಈ ರೀತಿ ಮಕ್ಕಳೊಡನೆ ಆಡುತ್ತ ಎಷ್ಟೊಂದು ಕಾಲ ಹರಣ ಮಾಡುತ್ತಿದ್ದೀಯ! ಮಕ್ಕಳೊಂದಿಗೆ ಆಡುತ್ತ ಇಡೀ ಜೀವನವನ್ನು ಈ ರೀತಿ ವ್ಯರ್ಥಮಾಡುವುದರ ಉದ್ದೇಶವಾದರೂ ಏನು?" ಎಂದು ಕೇಳಿದ. ಅವರಿಗೊಂದು ಸಂದೇಶವನ್ನು ಕೊಡಬೇಕೆಂದು ಈಸೋಪನಿಗೆ ಅನ್ನಿಸಿತು, ಆದ್ದರಿಂದ ಅವನು ಬಿಗಿದು ಕಟ್ಟಿದ್ದ ಬಿಲ್ಲನ್ನು ತೆಗೆದುಕೊಂಡು, ದಾರವನ್ನು ಸಡಿಲಿಸಿ, ಅದನ್ನು ನೆಲದ ಮೇಲಿಡುತ್ತ, "ಉದ್ದೇಶ ಇದೇ." ಎಂದು ಹೇಳಿದ. ಅದಕ್ಕೆ ಆ ವಿವೇಕಿ ಮನುಷ್ಯ, "ನನಗೆ ನಿನ್ನ ಸಂದೇಶ ಅರ್ಥವಾಗುತ್ತಿಲ್ಲ." ಎಂದ. ಆಗ ಈಸೋಪ, "ನಿನ್ನ ಬಿಲ್ಲನ್ನು ನೀನು ನಿರಂತರವಾಗಿ ಬಿಗಿದಿಟ್ಟರೆ, ಅದು ಸ್ವಲ್ಪ ಸಮಯದ ನಂತರ ಅದರ ಶಕ್ತಿ ಹಾಗೂ ತೀವ್ರತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಆಗ, ಅದು ಒಳ್ಳೆಯ ಬಿಲ್ಲಾಗಿ ಉಳಿಯುವುದಿಲ್ಲ. ನಿನ್ನ ಬಿಲ್ಲಿನ ಶಕ್ತಿ ಮತ್ತು ತೀವ್ರತೆಯನ್ನು ಉಳಿಸಿಕೊಳ್ಳಬೇಕೆಂದರೆ, ನೀನು ಆಗಾಗ ಅದರ ದಾರವನ್ನು ಸಡಿಲಗೊಳಿಸುತ್ತಿರಬೇಕು. ಆಗ ಮಾತ್ರ ನಿನಗೆ ಬೇಕೆಂದಾಗ ಅದು ಬಳಕೆಗೆ ಸಿದ್ಧವಾಗಿರುತ್ತದೆ." ಎಂಬುದಾಗಿ ವಿವರಿಸಿದ. ಆದ್ದರಿಂದ ಇಲ್ಲಿ ಉದ್ದೇಶ ಇಷ್ಟೆ. ನಿಮ್ಮನ್ನು ಸಡಿಲಿವಾಗಿಸುವ ಸಲುವಾಗಿಯೇ ಧ್ಯಾನ.
ನಿಮ್ಮೊಳಗೆ ಈ ತರ್ಕ ಸೃಷ್ಟಿಸುತ್ತಿರುವ ಉದ್ವೇಗದಿಂದ ನಿಮ್ಮನ್ನು ನೀವು ಬಿಡಿಸಿಕೊಳ್ಳಬೇಕು. ಪ್ರತಿ ಬಗೆಯ ತರ್ಕವೂ ಕೂಡ ಒಂದು ನಿರ್ದಿಷ್ಟವಾದ ಒತ್ತಡವನ್ನು ನಿರ್ಮಿಸುತ್ತದೆ. ತರ್ಕವಿರುವ ಕಡೆ ವಾದ ವಿವಾದಗಳಿಗೆ ಆಸ್ಪದವಿರುತ್ತದೆ, ಅಲ್ಲವೇ? ನೀವೇನಾದರೂ ಅತಿಯಾಗಿ ತಾರ್ಕಿಕರಾದರೆ, ನೀವು ನಿಮ್ಮ ಜೀವನದ ಪ್ರತಿಯೊಂದು ವಿಷಯದ ಬಗ್ಗೆ ಅಸಹನೀಯ ರೀತಿಯಲ್ಲಿ ವಾದಿಸುವವರಾಗುತ್ತೀರಿ. ಹಾಗಾಗಿ ಧ್ಯಾನವೆನ್ನುವುದು ತಾರ್ಕಿಕ ವಿರೂಪಗಳನ್ನು ಬಳಸದೆಯೇ, ಮನಸ್ಸನ್ನು ಸುಮ್ಮನೆ ಇರಲು ಅವಕಾಶ ಮಾಡಿಕೊಡುವ ಹಾಗೂ ತರ್ಕ ಪ್ರವೃತ್ತಿಯಿಂದ ಬಿಡಿಸಿಕೊಳ್ಳುವ ಒಂದು ವಿಧಾನವಾಗಿದೆ. ನಿಮ್ಮ ಮನಸ್ಸೇನಾದರೂ ಸುಮ್ಮನೆ ಸಹಜವಾಗಿರುವುದನ್ನು ಕಲಿತರೆ, ಅದೊಂದು ಕನ್ನಡಿಯಂತಾಗುತ್ತದೆ. ಕನ್ನಡಿಯ ವಿಶೇಷತೆ ಏನೆಂದರೆ, ಅದಕ್ಕೆ ತನ್ನದೇ ಆದ ಮುಖವೆನ್ನುವುದಿಲ್ಲ. ಆದರೆ ತರ್ಕಕ್ಕೆ ಅದರದ್ದೇ ಆದ ಒಂದು ಮುಖವಿದೆ. ಮತ್ತು ಎಲ್ಲರೂ ತಮ್ಮದೇ ಆದ ತರ್ಕವನ್ನು ಹೊಂದಿರುತ್ತಾರೆ. ಇಬ್ಬರು ವ್ಯಕ್ತಿಗಳು ಒಂದೇ ಸಮಸ್ಯೆಯ ಬಗ್ಗೆ ಅಂತ್ಯವಿಲ್ಲದಂತೆ ವಾದಿಸಬಹುದು, ಏಕೆಂದರೆ ಪ್ರತಿಯೊಬ್ಬರ ತರ್ಕಕ್ಕೂ ತನ್ನದೇ ಆದ ಸ್ವಂತ ಮುಖವೊಂದಿರುತ್ತದೆ. ಆದರೆ ಕನ್ನಡಿಗೆ ಮುಖವಿಲ್ಲ, ಒಂದು ಚಿಕ್ಕ ಕನ್ನಡಿಯ ತುಂಡಿನಲ್ಲಿ, ನೀವು ಇಡೀ ಪರ್ವತವನ್ನೇ ಪ್ರತಿಬಿಂಬಿಸಬಹುದು; ಆ ಸೂರ್ಯನನ್ನೂ ಸಹ ಆ ಕನ್ನಡಿಯಲ್ಲಿ ಹಿಡಿದಿಡಬಹುದು. ಒಮ್ಮೆ ನಿಮ್ಮ ಮನಸ್ಸು ತರ್ಕದ ದ್ವಂದ್ವವನ್ನು ಮೀರಿಹೋದರೆ, ಅದು ಇಡೀ ಅಸ್ತಿತ್ವ, ಸೃಷ್ಟಿ ಹಾಗೂ ಸೃಷ್ಟಿಕರ್ತ ಎಲ್ಲವನ್ನೂ ತನ್ನೊಳಗೆ ಹಿಡಿದಿಟ್ಟುಕೊಳ್ಳಬಹುದಾದ ಒಂದು ಕನ್ನಡಿಯಂತಾಗುತ್ತದೆ. ಆಧ್ಯಾತ್ಮಿಕ ಮಾರ್ಗದಲ್ಲಿ ನೀಡಲಾಗುವ ಎಲ್ಲಾ ಸಾಧನೆಗಳು ಈ ಉದ್ದೇಶಕ್ಕಾಗಿಯೇ ಆಗಿದೆ.
ಮೂಲಭೂತವಾಗಿ ಎಲ್ಲಾ ಆಧ್ಯಾತ್ಮಿಕ ಸಾಧನೆಗಳ ಗುರಿ ತಾರ್ಕಿಕ ಮನಸ್ಸನ್ನು ಅಂತ್ಯಗೊಳಿಸಿ, ನಿಮ್ಮನ್ನು ಒಂದು ಕನ್ನಡಿಯ ತುಣುಕಾಗುವಂತೆ ಮಾಡುವುದೇ ಆಗಿದೆ. ಒಮ್ಮೆ ನೀವು ಕನ್ನಡಿಯಂತಾದರೆ, ನೀವು ಏನನ್ನು ಬೇಕಾದರೂ ಪ್ರತಿಬಿಂಬಿಸಬಹುದು. ಅಕಸ್ಮಾತ್ ಆ ದೇವರೇ ನಿಮ್ಮೆದುರಿಗೆ ಬಂದರೆ, ಅವನನ್ನೂ ಸಹ ನಿಮ್ಮೊಳಗೆ ಹಿಡಿದಿಟ್ಟುಕೊಳ್ಳಬಹುದು. ಆಗಸದಲ್ಲಿನ ಸೂರ್ಯ ಬಂದರೆ, ಅವನನ್ನೂ ನಿಮ್ಮೊಳಗೆ ಹೊಂದಬಹುದು. ನಿಮಗೆ ನಿಮ್ಮದೇ ಆದ ಮುಖವು ಇಲ್ಲದಿರುವುದರಿಂದ, ಏನನ್ನು ಬೇಕಾದರೂ ನಿಮ್ಮೂಳಗೆ ಒಳಗೊಳ್ಳಬಹುದು. ಆಧ್ಯಾತ್ಮಿಕ ಸಾಧನೆಯೆಂದರೆ ನೀವು ಸದ್ಯದಲ್ಲಿ ಏನಾಗಿರುವಿರೊ ಅದನ್ನು ಬಿಟ್ಟು, ಬೇರೆ ಇನ್ನೇನೋ ಆಗಿ ನಿಮ್ಮನ್ನು ನೀವು ಮಾರ್ಪಡಿಸಿಕೊಳ್ಳುವುದಲ್ಲ. ಆಧ್ಯಾತ್ಮಿಕ ಸಾಧನೆಯೆಂದರೆ ನೀವು ನಿಮಗಾಗಿ ಸೃಷ್ಟಿಸಿಕೊಂಡಿರುವ ಸುಳ್ಳು ಮುಖವಾಡಗಳನ್ನು ಅಳಿಸಿಹಾಕುವುದಾಗಿದೆ. ಹಾಗಾದಾಗ, ಮನಸ್ಸು ಯಾವುದೇ ವಿರೂಪಗಳಿಲ್ಲದೆ, ಎಲ್ಲವನ್ನೂ ಅವುಗಳಿರುವ ರೀತಿಯಲ್ಲಿಯೇ ಪ್ರತಿಬಿಂಬಿಸುವ ಕನ್ನಡಿಯಂತಾಗುವುದು.
ಸಂಪಾದಕರ ಟಿಪ್ಪಣಿ: Isha Kriya, a free, online guided meditation ಈಶ ಕ್ರಿಯ - ಉಚಿತ ಆನ್‌ಲೈನ ಮಾರ್ಗದರ್ಶಿತ ಧ್ಯಾನವನ್ನು ಸದ್ಗುರುಗಳು ನಮಗಾಗಿ ನೀಡಿದ್ದಾರೆ ಮತ್ತಿದು ಆರೋಗ್ಯ ಹಾಗೂ ಸೌಖ್ಯವನ್ನು ಹೊಂದಲು ಸಹಕಾರಿಯಾಗಿದೆ. ಪ್ರತಿನಿತ್ಯ ಈ ಹನ್ನೆರಡು ನಿಮಿಷಗಳ ಸರಳ ಹಾಗೂ ಪರಿಣಾಮಕಾರಿ ಪ್ರಕ್ರಿಯೆಯ ಅಭ್ಯಾಸದಿಂದ ನಿಮ್ಮ ಜೀವನ ಪರಿವರ್ತನೆಯಾಗಬಹುದು.