ಪ್ರಶ್ನೆ: ಸದ್ಗುರುಗಳೇ, ನೀವು ಒಂದು ದಿನ ಕರ್ಮದ ಬಗ್ಗೆ ಮಾತನಾಡುತ್ತಿದ್ದಾಗ, ಮನಸ್ಸು, ಶರೀರ ಅಥವಾ ಪ್ರಾಣಶಕ್ತಿಯಾಗಿರಬಹುದು, ಕರ್ಮವನ್ನು ದಾಖಲಿಸಲು ಜೀವನದಲ್ಲಿ ಅನೇಕ ಬೆಂಬಲಿತ ಪ್ರಕ್ರಿಯೆಗಳಿವೆ ಎಂದು ಹೇಳಿದ್ದಿರಿ. ಮನಸ್ಸು ಇಲ್ಲವಾದಾಗಲೂ ಕರ್ಮವು ದೇಹ ಮತ್ತು ಪ್ರಾಣಶಕ್ತಿಯಲ್ಲಿ ಅಚ್ಚೊತ್ತಿರುತ್ತದೆ. ಇದು ಎಲ್ಲವನ್ನೂ ದುಃಖದ ಕೂಪದಲ್ಲಿಡಲು ಬಹಳ ವಿಸ್ತಾರವಾದ ಮತ್ತು ದುಷ್ಟ ತಂತ್ರದಂತೆ ತೋರುತ್ತದೆ. ಇದು ಯಾಕೆ ಹೀಗೆ?  

ಸದ್ಗುರು: ನೋಡಿ, ನಾನು ಮಾತನಾಡುವಾಗಲೆಲ್ಲಾ, ನನ್ನ ಕರ್ಮವನ್ನು ದಾಖಲಿಸಲು ನಿಮಗೆ ಮೂರು ರೆಕಾರ್ಡರ್‌ಗಳಿವೆ; ನನ್ನ ಮಾತನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ಖಚಿತಪಡಿಸಿಕೊಳ್ಳಲೊಂದು ದುಷ್ಟ ತಂತ್ರ. ಎಚ್ಚರವಿಲ್ಲದ ಕ್ಷಣದಲ್ಲಿ ನಾನೇನಾದರೂ ವಾಗ್ದಾನ ಮಾಡಿದರೆ, ಕೊಟ್ಟ ಮಾತನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ಖಚಿತಪಡಿಸಿಕೊಳ್ಳಲೊಂದು ನಿಮ್ಮ ಬಳಿ ಮೂರು ದಾಖಲಾತಿಗಳಿವೆ.
 
ಕರ್ಮವು ನೀವು ಅರ್ಥಮಾಡಿಕೊಂಡಂತಲ್ಲ. ಅದರ ಬಗ್ಗೆ ದುಷ್ಟವಾದುದೇನೂ ಇಲ್ಲ. ನಿಮ್ಮ ಕರ್ಮದಿಂದಾಗಿಯೇ ನೀವು ನೀವಾಗಿರುವುದು. ನೀವು ಹುಟ್ಟಿದ ಕ್ಷಣದಿಂದ ಈ ಕ್ಷಣದವರೆಗೆ, ನೀವು ಮಾಡಿದ, ಯೋಚಿಸಿದ, ಅನುಭವಿಸಿದ ಮತ್ತು ನಿಮಗೆ ಅನಿಸಿದ ಎಲ್ಲವೂ, ನಿಮ್ಮ ಕರ್ಮವೇ. ಈಗ ನೀವೇನಾಗಿರುವಿರೋ, ಅದರ ಕಾರಣ ನಿಮ್ಮ ಕರ್ಮ. ಅದೇ ನಿಮ್ಮನ್ನು ಈ ಸ್ಥಳಕ್ಕೆ ಕರೆ ತಂದಿರುವುದು. ಹಾಗಾಗಿ, ಕರ್ಮವೊಂದು ದುಷ್ಟ ತಂತ್ರವಲ್ಲ. ನಿಜ, ಅದೊಂದು ಬಂಧನ, ಆದರೆ ಅದೊಂದು ರಕ್ಷಣೆ ಕೂಡ. ನಿಮ್ಮ ಭೌತಿಕ ಅಸ್ತಿತ್ವದ ಆಧಾರವೇ ಕರ್ಮ. ಕರ್ಮವಿಲ್ಲದಿದ್ದರೆ ನಿಮ್ಮನ್ನು ಈ ಶರೀರಕ್ಕೆ ಬಿಗಿಯುವಂತದ್ದೇನೂ ಇರುವುದಿಲ್ಲ. ಆದ್ದರಿಂದ, ನಿಮ್ಮ ಶರೀರ, ನಿಮ್ಮ ಮನಸ್ಸು, ನಿಮ್ಮ ಸಂವೇದನೆ ಮತ್ತು ನಿಮ್ಮ ಪ್ರಾಣಶಕ್ತಿಯ ಮಟ್ಟದಲ್ಲಿ, ನಿಮ್ಮದು ಎನ್ನುವುದ್ಯಾವುದೂ ಕಳೆದುಹೋಗದಿರಲಿ ಎಂದು ಖಚಿತಪಡಿಸಿಕೊಳ್ಳಲು ಎಲ್ಲವೂ ದಾಖಲಾಗುತ್ತಿವೆ.
 
ನಿಮ್ಮಲ್ಲಿರುವ ಅತ್ಯಂತ ಮೂಲಭೂತ ಪ್ರವೃತ್ತಿಯೆಂದರೆ ಸ್ವಯಂ-ಸಂರಕ್ಷಣೆ. ನಿಮ್ಮನ್ನು ಕಾಪಾಡಿಕೊಳ್ಳಲು, ನೀವು ನಿಮ್ಮ ಸುತ್ತಲೂ ಒಂದು ಗೋಡೆಯನ್ನು ಕಟ್ಟಿಕೊಂಡಿರಿ, ಮತ್ತು ಈ ಗೋಡೆ ಮತ್ತು ಅದು ನಿಮಗೆ ನೀಡಿದ ರಕ್ಷಣೆಯನ್ನು ನೀವು ನಿರ್ದಿಷ್ಟ ಸಮಯದವರೆಗೆ ಆನಂದಿಸಿದಿರಿ. ಆದರೆ ನಿಮ್ಮಲ್ಲಿ ಯಾವಾಗಲೂ ಅನಿಯಮಿತ ರೀತಿಯಲ್ಲಿ ವಿಸ್ತರಿಸಲು ಹಾತೊರೆಯುತ್ತಿರುವ ಇನ್ನೊಂದು ಭಾಗವಿದೆ. ನಿಮ್ಮ ಆ ಆಯಾಮವು ಇದ್ದಕ್ಕಿದಂತೆ ಈ ಗೋಡೆ ಒಂದು ಜೈಲು ಎಂದು ಹೇಳಲು ಆರಂಭಿಸುತ್ತದೆ. ಅದಕ್ಕೆ ಗೋಡೆಯನ್ನು ಒಡೆದು ಹೊರ ಹೋಗಬೇಕು ಎಂದೆನಿಸುತ್ತದೆ. ಆದರೆ ಸ್ವಯಂ-ಸಂರಕ್ಷಣೆಗಾಗಿ ಹೆಣಗಾಡುತ್ತಿರುವ ನಿಮ್ಮ ಒಂದು ಭಾಗ ಗೋಡೆಯನ್ನು ಬಲವಾಗಿಸಲು ನೋಡುತ್ತಿರುತ್ತದೆ. ಆ ಗೋಡೆಯನ್ನದು ಮತ್ತಷ್ಟು ದಪ್ಪನಾಗಿ ಮಾಡಲು ಬಯಸುತ್ತದೆ. ನಾವು ಚಾರ್ಲ್ಸ್ ಡಾರ್ವಿನ್-ರವರ ಪ್ರಕಾರ ಯೋಚಿಸಿದರೂ, ನಿಮ್ಮ ಇತಿಹಾಸವು ಮೃಗ-ಪ್ರಕೃತಿಯದಾಗಿತ್ತು. ಆದರೆ ನಿರಂತರವಾಗಿ ವಿಸ್ತರಿಸಲು ಹಾತೊರೆಯುತ್ತಿರುವುದೇನೋ ನಿಮ್ಮೊಳಗಿದೆ. ನೀವು ಈ ಹಾತೊರೆತವನ್ನು ಅವಲೋಕಿಸಿದರೆ, ಅದಕ್ಕೊಂದು ಕೊನೆಯಿಲ್ಲವೆಂದು ನೀವು ಮನಗಾಣುವಿರಿ. ನೀವು ಅಸೀಮಿತವಾಗುವವರೆವಿಗೂ ಅದಕ್ಕೆ ತೃಪ್ತಿಯಾಗುವುದಿಲ್ಲ.   

ಕರ್ಮದ ಮಹಲು

ನಿಮ್ಮ ಇತಿಹಾಸವು ಮೃಗತ್ವವಾದರೆ ನಿಮ್ಮ ಭವಿಷ್ಯವು ದೈವತ್ವವಾಗಿದೆ. ಈಗ ನೀವು ಇವೆರಡರ ನಡುವೆ ತೂಗಾಡುವ ಲೋಲಕದಂತಿರುವಿರಿ. ನಿಮ್ಮ ಅತ್ಯಂತ ಪ್ರಬಲವಾದ ಪ್ರವೃತ್ತಿ ಸ್ವಯಂ-ಸಂರಕ್ಷಣೆಯದ್ದು. ನಿಮ್ಮ ಇನ್ನೊಂದು ಭಾಗವು ಎಲ್ಲಾ ಮಿತಿಗಳನ್ನು ಮುರಿಯಲು ಹಾತೊರೆಯುತ್ತಿದೆ. ಕರ್ಮವೆನ್ನುವುದು ಸಂರಕ್ಷಣೆಯ ಗೋಡೆ. ಒಂದು ಹಂತದಲ್ಲಿ ನೀವದನ್ನು ಬಹಳ ಕಾಳಜಿಯಿಂದ ಕಟ್ಟಿದಿರಿ, ಆದರೆ ಈಗ ನಿಮಗೆ ಆತ್ಮಬಂಧನದ ಅನುಭವವಾಗುತ್ತಿದೆ. ಕರ್ಮವು ಸ್ವಯಂ ಸೆರೆವಾಸದ ಮಹಲು. ಅದಿಲ್ಲದೆ ನಿಮಗಿರಲು ಸಾಧ್ಯವಿಲ್ಲ. ಅದೇ ಸಮಸ್ಯೆಯಾಗಿರುವುದು. ಹಾಗಾಗಿ ನೀವು ಈಗ ನಿಮ್ಮ ಜೈಲಿನ್ನು ವಿಸ್ತರಿಸಲು ಪ್ರಯತ್ನಿಸುತ್ತೀರಿ. ನಾವು ನಿಮ್ಮನ್ನು 5 x 5-ರ ಸಣ್ಣ ಕೋಣೆಯಲ್ಲಿ ಬಂಧಿಸಿಟ್ಟಿದ್ದೀವಿ, ಆದರೆ ಅದು ನಿಮ್ಮ ಆಯ್ಕೆಯಲ್ಲ ಎಂದೆಣಿಸೋಣ. ಆಗ ನೀವು ಸ್ವಾತಂತ್ರ್ಯಕ್ಕೆ ಹಾತೊರೆಯುವಿರಿ. ಸ್ವಾತಂತ್ರ್ಯದ ನಿಮ್ಮ ಕಲ್ಪನೆಯು ಆಶ್ರಮದ ಗೋಡೆಗಳಾಗಿರುತ್ತದೆ, ಬೇಲಿಗಳಾಗಿರುತ್ತದೆ. ನಾವು ನಿಮ್ಮನ್ನು ಹೊರಗೆ ಬಿಟ್ಟರೆ, ನಿಮಗದು ಅಪಾರ ಸ್ವಾತಂತ್ರ್ಯ ಎಂದೆನಿಸುತ್ತದೆ. ನೀವು ಪರ್ವತ, ಆಕಾಶವನ್ನು ಮತ್ತು ಆಶ್ರಮದ ಪ್ರವೇಶದ್ವಾರವನ್ನು ನೋಡುತ್ತೀರಿ. ಮೂರು ದಿನಗಳೊಳಗೆ ಸ್ವಾತಂತ್ರ್ಯದ ನಿಮ್ಮ ಕಲ್ಪನೆಯು ಆಶ್ರಮದ ಪ್ರವೇಶದ್ವಾರದಿಂದ ಮತ್ತಿನ್ಯಾವುದಕ್ಕೋ ವಿಸ್ತರಿಸುತ್ತದೆ. ನಾವು, "ಸರಿ, ಹತ್ತಿರದ ಹಳ್ಳಿಯವರೆಗೂ ಹೋಗಿ ಬನ್ನಿ." ಎಂದರೆ, ಸ್ವಲ್ಪ ಸಮಯದವರೆಗೆ ಅದು ಅದ್ಭುತವಾದ ಸ್ವಾತಂತ್ರ್ಯದಂತೆ ಕಾಣುತ್ತದೆ. ಆದರೆ, ನಂತರ ನಿಮಗೆ ಕೊಯಮತ್ತೂರಿಗೆ ಹೋಗಬೇಕು ಎಂದೆನಿಸುತ್ತದೆ. ನೀವು ಕೊಯಮತ್ತೂರಿಗೆ ಸಾಕಷ್ಟು ಬಾರಿ ಹೋಗಿ ಬಂದರೆ, ಆಗ ನಿಮಗೆ ಕೊಯಮತ್ತೂರು ಸಾಲದು ಎಂದೆನಿಸುತ್ತದೆ. ಸಾಂಪ್ರದಾಯಿಕ ಆಧ್ಯಾತ್ಮಿಕತೆಯಿಂದ ಹೆಚ್ಚು ಪ್ರಭಾವಿತರಾದ ನಿಮ್ಮಲ್ಲಿ ಕೆಲವರು ಹಿಮಾಲಯಕ್ಕೆ ಹೋಗಲು ಬಯಸುತ್ತಾರೆ. ಇಲ್ಲದಿದ್ದರೆ, ನೀವು ದೊಡ್ಡ ನಗರಕ್ಕೊ ಅಥವಾ ಇನ್ನೆಲ್ಲಿಗಾದರೂ ಹೋಗಬೇಕು ಎಂದುಕೊಳ್ಳುತ್ತೀರಿ. ಆದ್ದರಿಂದ ಬಂಧನದ ನಿಮ್ಮ ಕಲ್ಪನೆಯು ನಿರಂತರವಾಗಿ ಬದಲಾಗುತ್ತಿದೆ. ನಿಮ್ಮ ಸ್ವಾತಂತ್ರ್ಯದ ಕಲ್ಪನೆಯೂ ಸಹ ನಿರಂತರವಾಗಿ ವಿಕಸನಗೊಳ್ಳುತ್ತಿದೆ. 
 
ಜೀವನವನ್ನು ಹಂತ ಹಂತವಾಗಿ ಅರ್ಥಮಾಡಿಕೊಳ್ಳಲು ಜೀವಿತಾವಧಿಯನ್ನು ಏಕೆ ಕಳೆದು ಕೊನೆಯಲ್ಲಿ ಮೂರ್ಖರಂತೇಕೆ ಸಾಯುವುದು? ಇದರ ಬಗ್ಗೆ ಗಮನಹರಿಸಬೇಕಾದ ಸಮಯವಿದು. ಸ್ವಾತಂತ್ರ್ಯದ ನಿಮ್ಮ ಕಲ್ಪನೆ ಅಸೀಮತೆ. ಅಸೀಮತೆಯನ್ನಲ್ಲದೆ ನಿಮ್ಮ ಚೇತನವು ಯಾವುದಕ್ಕೂ ತೃಪ್ತಿಪಟ್ಟುಕೊಳ್ಳುವುದಿಲ್ಲ. ನಿಮ್ಮನ್ನು ನೀವು ನೋಡಿಕೊಂಡರೆ ಅದು ಸ್ಪಷ್ಟವಾಗುತ್ತದೆ. ನೀವು ಅಸೀಮರಾಗಲು ಬಯಸಿದರೆ, ಭೌತಿಕ ಅಡೆತಡೆಗಳನ್ನು ಮುರಿಯುವುದರಿಂದ ನೀವು ಅಸೀಮರಾಗಲು ಸಾಧ್ಯವೇ ಇಲ್ಲ; ಏಕೆಂದರೆ ಭೌತಿಕತೆಯು ಎಂದಿಗೂ ಅಸೀಮವಾಗಿರುವುದಿಲ್ಲ. ನೀವು ಭೌತಿಕ ವಾಸ್ತವದ ಮಿತಿಗಳನ್ನು ಮೀರಿದರೆ ಮಾತ್ರ, ನೀವು ಭೌತಿಕ ಅಸ್ತಿತ್ವವನ್ನೇ ಮೀರಿದರೆ, ಅಸೀಮತೆಯ ಸಾಧ್ಯತೆಯಿದೆ. 

ಆಯ್ಕೆಯ ಜೀವನ

ಭೌತಿಕದಲ್ಲಿ ನಿಮ್ಮನ್ನು ಬೇರೂರಿಸುವುದೇ ಕರ್ಮ. ಅದಿಲ್ಲದೆ, ಬೇರೂರಲು ಯಾವುದೇ ಮಾರ್ಗವಿಲ್ಲ. ಆದ್ದರಿಂದ ನಿಮಗೆ ಕಾರ್ಯಗೈಯಲು ಸಾಧ್ಯವಾಗಲು ನಿಮಗೊಂದು ತಳಹದಿ ಇದೆಯೆಂದು ಪ್ರಕೃತಿ ಖಚಿತಪಡಿಸಿಕೊಳ್ಳುತ್ತಿದೆ ಅಥವಾ ಸೃಷ್ಟಿಕರ್ತ ಖಚಿತಪಡಿಸಿಕೊಳ್ಳುತ್ತಾನೆ. ಶರೀರವಿರದೆ ಯಾವುದೇ ಅನ್ವೇಷಣೆಯಿಲ್ಲ. ಶರೀರವಿಲ್ಲದವರು ಆಯ್ಕೆಯಿಂದ ಅರಸಲು ಸಾಧ್ಯವಿಲ್ಲ. ಅಂತಹವರು ಒಂದು ನಿರ್ದಿಷ್ಟ ಹಂತಕ್ಕೆ ವಿಕಸನಗೊಳ್ಳದ ಹೊರತು ತಮ್ಮ ಪ್ರವೃತ್ತಿಯಿಂದ ಮಾತ್ರ ಅರಸಬಹುದು, ಆಯ್ಕೆಯಿಂದಲ್ಲ. ಆದರೆ ಶರೀರವಿರುವ ಚೇತನಕ್ಕೆ, ಪ್ರತಿ ಕ್ಷಣವೂ ಒಂದು ಆಯ್ಕೆ. ನಿಮ್ಮ ಜೀವನದಲ್ಲಿ ನೀವು ಪ್ರಜ್ಞಾಪೂರ್ವಕರಾಗಿದ್ದರೆ, ಪ್ರತಿಯೊಂದು ಕ್ಷಣವೂ ಆಯ್ಕೆ.  

ನಿಮ್ಮದು ಯಾವ ರೀತಿಯ ಕರ್ಮವೆನ್ನುವುದು ಗಣ್ಯವಲ್ಲ - ಈ ಕ್ಷಣದ ಕರ್ಮ ಯಾವಾಗಲೂ ನಿಮ್ಮ ಕೈಯಲ್ಲಿರುತ್ತದೆ.

 
ಬ್ರಹ್ಮಚರ್ಯ ಅಥವಾ ಸನ್ಯಾಸವೆಂದರೆ ನೀವು ಆಯ್ಕೆಯಿಂದ ಬದುಕುತ್ತಿದ್ದೀರಿ ಎಂದರ್ಥ. ಈ ಆಯ್ಕೆಯ ಪ್ರಕ್ರಿಯೆಯನ್ನೊಂದು ಜೀವಂತ ವಾಸ್ತವವಾಗಿಸಲು, ನಾವು ಯೋಗದಲ್ಲಿ ಅನೇಕ ವಿಷಯಗಳನ್ನು ರೂಪಿಸಿದ್ದೇವೆ. ಬೆಳಿಗ್ಗೆ ಹಾಸಿಗೆಯಲ್ಲಿ ನಿಮಗೆ ಉರಳಾಡಬೇಕು ಎಂದೆನಿಸುತ್ತದೆ. ಅದು ದೇಹದ ಸ್ವಾಭಾವಿಕ ಪ್ರವೃತ್ತಿ, ಆದರೆ ಈಗ ನೀವು ಬೆಳಿಗ್ಗೆ ಆಸನಗಳನ್ನು ಮಾಡುತ್ತೀರಿ. ನೀವು ಅರಿವಿಲ್ಲದೆ ಹಾಸಿಗೆಯಲ್ಲಿ ಉರಳಾಡಬಹುದು, ಆದರೆ ನೀವು ಅರಿವಿಲ್ಲದೆ ಬೆಳಿಗ್ಗೆ ಆಸನಗಳನ್ನು ಮಾಡಲು ಸಾಧ್ಯವಿಲ್ಲ. ಸಹಜವಾಗಿ ಶರೀರದ ಚಲನೆಯ ಸಂಪೂರ್ಣ ಪ್ರಕ್ರಿಯೆಯು ಪ್ರಜ್ಞಾಪೂರ್ವಕವಾಗುತ್ತದೆ. ಪ್ರಜ್ಞಾಪೂರ್ವಕ ಕ್ರಿಯೆಯ ಆ ಅಂಶವನ್ನು ನಿಮ್ಮ ಜೀವನದಲ್ಲಿ ತರಬೇಕು - ಪ್ರಜ್ಞಾಪೂರ್ವಕ ಯೋಚನೆ, ಪ್ರಜ್ಞಾಪೂರ್ವಕ ಭಾವನೆ, ಇಲ್ಲಿರಲು ಪ್ರಜ್ಞಾಪೂರ್ವಕವಾದ ದಾರಿ. ಜೀವ ಚೈತನ್ಯವೇ ಪ್ರಜ್ಞಾಪೂರ್ವಕವಾಗುತ್ತಿದೆ ಏಕೆಂದರೆ ನಿಮಗೆ ಅರಿವು ಮೂಡಿದಾಗಲೇ, ನಿಮ್ಮ ಜೀವನವು ಆಯ್ಕೆಯಿಂದ ನಡೆಯುತ್ತದೆ. ಇಲ್ಲದಿದ್ದರೆ ನಿಮ್ಮ ಜೀವನವು ವಿವಶತೆಯಿಂದ ನಡೆಯುತ್ತದೆ. ಸ್ವಾತಂತ್ರ್ಯ ಮತ್ತು ಬಂಧನದ ನಡುವಿನ ವ್ಯತ್ಯಾಸವಿದು: ಒಂದೋ ನೀವು ವಿವಶರಾಗಿ ಕಾರ್ಯನಿರ್ವಹಿಸುತ್ತಿರಿ ಅಥವಾ ಆಯ್ಕೆಯಿಂದ ಕಾರ್ಯನಿರ್ವಹಿಸುತ್ತಿರಿ. 
 ಮಾನವರಿಗೆ ವಿವಿಧ ರೀತಿಯ ಕರ್ಮಗಳಿವೆ. ಕರ್ಮ ಫಲವು ಇದ್ದದ್ದೇ, ಆದರೆ ನೀವು ಅದರಿಂದ ಕ್ಷಣದಿಂದ ಕ್ಷಣಕ್ಕೆ ನೀವೇನು ಮಾಡುತ್ತೀರಿ ಎಂಬುದು ಯಾವಾಗಲೂ ನಿಮ್ಮ ಕೈಯಲ್ಲಿದೆ. ನಿಮ್ಮದು ಯಾವ ರೀತಿಯ ಕರ್ಮವೆನ್ನುವುದು ಗಣ್ಯವಲ್ಲ - ಈ ಕ್ಷಣದ ಕರ್ಮ ಯಾವಾಗಲೂ ನಿಮ್ಮ ಕೈಯಲ್ಲಿರುತ್ತದೆ. ಈ ಕ್ಷಣದಲ್ಲಿ, ನೀವು ಪ್ರಜ್ಞಾಪೂರ್ವಕವಾಗಿರಲು ಸಿದ್ಧರಿದ್ದರೆ ನೀವು ಸಂತೋಷ ಅಥವಾ ದುಃಖದಲ್ಲಿರುವುದು 100% ಆಯ್ಕೆಯಿಂದಾಗಿದೆ. ಆದ್ದರಿಂದ, ಕರ್ಮವನ್ನು ದಾಖಲಿಸಲಾಗುತ್ತಿದೆ. ನಾನು ಹೇಳಿದ್ದನ್ನು ದಾಖಲಿಸಲು ನೀವು ಮೂರು ಕಾರ್ಯವಿಧಾನಗಳನ್ನು ಬಳಸುವುದು ಸಮಸ್ಯೆಯಲ್ಲ ಏಕೆಂದರೆ ನಾನು ಎಂದಿಗೂ ನನ್ನ ಮಾತನ್ನು ಹಿಂತೆಗೆದುಕೊಳ್ಳುವುದಿಲ್ಲ. ಹೀಗಿದ್ದಾಗ ನನಗ್ಯಾವ ಸಮಸ್ಯೆ? ಬೇಕಿದ್ದರೆ 300 ರೆಕಾರ್ಡರ್‌ಗಳನ್ನು ಬಳಸಿ. ನೀವು ರೆಕಾರ್ಡ್ ಮಾಡುವುದು ಅದೇ ವಿಷಯವನ್ನೇ. ಪ್ರಕೃತಿ ಲಕ್ಷಾಂತರ ರೀತಿಯಲ್ಲಿ ದಾಖಲಿಸುತ್ತದೆ. ಅದರಲ್ಲಿ ನಿಮ್ಮ ಸಮಸ್ಯೆ ಏನು? ನೀವು ಮುಂದೆ ಮಾತ್ರ ಹೋಗಬಹುದು, ಹಿಂತಿರುಗಲು ಸಾಧ್ಯವಿಲ್ಲ. ಆದ್ದರಿಂದ, ಅವರು ದಾಖಲಿಸಲಿ. ದೇವದೂತರು, ದೆವ್ವಗಳು ಮತ್ತೆಲ್ಲರೂ ದಾಖಲಿಸಲಿ. ಮರಗಳು, ಪ್ರಾಣಿಗಳು ಮತ್ತು ಕೀಟಗಳೂ ನಿಮ್ಮ ಕರ್ಮವನ್ನು ದಾಖಲಿಸಲಿ. ಅದರಲ್ಲಿ ನಿಮ್ಮ ಸಮಸ್ಯೆ ಏನು?

ಸಂಪಾದಕರ ಟಿಪ್ಪಣಿ: “Of Mystics and Mistakes.” ಎಂಬ ಪುಸ್ತಕದಲ್ಲಿ ಸದ್ಗುರು ಅವರ ಹೆಚ್ಚಿನ ಒಳನೋಟಗಳನ್ನು ಪಡೆಯಿರಿ. preview chapter ಅಧ್ಯಾಯವನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ  Isha Downloads ನಲ್ಲಿ ಇ-ಬುಕ್ ಅನ್ನು ಖರೀದಿಸಿ