ಮಕ್ಕಳು ಅರಳಿ ಹೂವಾಗಲು ಸರಿಯಾದ ವಾತಾವರಣವನ್ನು ಸೃಷ್ಟಿಸೋಣ
ಸದ್ಗರು ಮತ್ತು ಅಮೇರಿಕಾದ ಪ್ರತಿಷ್ಠಿತ ಮೆನ್ಲೋ ಸ್ಕೂಲ್-ನ ಟ್ರಸ್ಟೀಸ್ ಮಂಡಳಿಯ ಸದಸ್ಯರಾದ ಜೋನಾಥನ್ ಕಾಸ್ಲೆಟ್-ರವರ ನಡುವೆ ನಡೆದ ಇತ್ತೀಚಿನ ಸಾಂಭಾಷಣೆಯೊಂದರಲ್ಲಿ, ನಮ್ಮ ಯುವ ಜನರು ಎದುರಿಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಒತ್ತಡಗಳ ಬಗೆಗಿನ ಒಂದು ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ.
ಪ್ರಶ್ನೆ: ಯುವಕರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಬಹಳಷ್ಟು ಒತ್ತಡದಲ್ಲಿದ್ದಾರೆ. ಮಕ್ಕಳು ತಮ್ಮ ಶಾಲೆಗಳಲ್ಲಿ ಪಡೆಯಬೇಕಾದ ಅಂಕಗಳನ್ನು ಪಡೆಯುವ ಜೊತೆಗೆ ಜೀವನದಲ್ಲಿ ಅವರಿಗೆ ಮುಂದುವರೆಯಲು ಬೇಕಾದ ಸಮತೋಲನವನ್ನು ಹೇಗೆ ತಂದುಕೊಳ್ಳಬಹುದು? ಹಾಗೆಯೇ, ಅವರು ಇಷ್ಟಪಡುವ ಮತ್ತವರಿಗೆ ಖುಷಿ ನೀಡುವಂತಹ ದಾರಿಯನ್ನು ಹೇಗೆ ಸಾಧಿಸಬಹುದು?
ಸದ್ಗುರು: ಒಂದು ಮಗುವು ಪಡೆಯುವ ಶಿಕ್ಷಣವನ್ನು ನೀವು ಗಮನಿಸಿದರೆ, ಅದು ಅಕ್ಷರಗಳನ್ನು ಕಲಿಯಲು ಕೆಲವು ವರ್ಷಗಳನ್ನು ಕಳೆಯುತ್ತದೆ. ವಾಕ್ಯಗಳನ್ನು ಓದಲು ಮತ್ತು ಬರೆಯಲು ಅದು ಕೆಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಒಂದು ನಿರ್ದಿಷ್ಟ ಪ್ರಮಾಣದ ಗಣಿತವನ್ನು ಕಲಿಯಲು, ಅದು ಕೆಲವು ವರ್ಷಗಳ ಕಾಲವನ್ನು ಹೂಡಬೇಕಾಗುತ್ತದೆ. ಆದರೆ ನೀವು ನಿಮ್ಮ ಆಂತರ್ಯದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತೀರಿ ಎಂಬುದನ್ನು ಕಲಿಯಲು ಯಾವುದೇ ಸಮಯಾವಕಾಶವನ್ನೂ ಏಕೆ ನೀಡಲಾಗುವುದಿಲ್ಲ? ಏಕೆಂದರೆ ಅದು ಮುಖ್ಯವಲ್ಲವೆಂಬ ಒಂದು ಆದ್ಯತೆಯನ್ನು ಸಮಾಜದಲ್ಲಿ ನಾವು ಸ್ಥಾಪಿಸಿದ್ದೇವೆ. ನಾನಿದನ್ನು ತುಂಬ ನೋವಿನಿಂದ ಹೇಳುತ್ತಿದ್ದೇನೆ – ಅಮೇರಿಕಾದಲ್ಲಿ ಪ್ರತಿದಿನ ಮೂರು ಸಾವಿರಕ್ಕಿಂತ ಹೆಚ್ಚಿನಷ್ಟು ಮಕ್ಕಳು ಆತ್ಮಹತ್ಯೆಗೆ ಯತ್ನಿಸುತ್ತಾರೆ ಎಂದು ನನಗೆ ಹೇಳಲಾಯಿತು. ಭಾರತದಲ್ಲಿ, ಪ್ರತಿವರ್ಷ ಹತ್ತು ಸಾವಿರಕ್ಕೂ ಹೆಚ್ಚಿನ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ. ಬದುಕಿನ ಈ ಅಂಶವನ್ನು ನಾವು ಹೇಗೆ ಕಡೆಗಣಿಸಲು ಸಾಧ್ಯ? ನಾವೇನು ನಮ್ಮ ಪ್ರಜ್ಞೆಯನ್ನು ಕಳೆದುಕೊಂಡಿದ್ದೇವೆಯೇ?
ಮಗುವಿಗೆ ಒಂದು ಉತ್ತಮ ಪರಿಸರ ವ್ಯವಸ್ಥೆ ಬೇಕು
ಕೇವಲ ಮಕ್ಕಳೊಂದಿಗೆ ಕೆಲಸ ಮಾಡುವ ಮೂಲಕ ನೀವಿದನ್ನು ಸರಿಪಡಿಸಲಾಗುವುದಿಲ್ಲ. ಒಂದು ಮಗುವಿಗೆ ಉತ್ತಮ ಪರಿಸರ ವ್ಯವಸ್ಥೆಯ ಅಗತ್ಯವಿದೆ. ಆದರೆ ಜಗತ್ತಿನಲ್ಲಿಂದು ನಾವಿದನ್ನು ಸಂಪೂರ್ಣವಾಗಿ ಮರೆತಿದ್ದೇವೆ. ಇತ್ತೀಚೆಗೆ, ಯಾರೋ ಒಬ್ಬರು ನನಗೊಂದು ಉಡುಗೊರೆಯನ್ನು ಕಳುಹಿಸಿದ್ದರು. ಅದು ಒಳ್ಳೆ ಬ್ಯಾಕ್ಟೀರಿಯಾಗಳಿರುವ ಒಂದು ಸ್ಪ್ರೇಯಾಗಿತ್ತು. ನಾನದನ್ನು ನನ್ನ ಮೇಲೆ ಸಿಂಪಡಿಸಿಕೊಳ್ಳಬೇಕಿತ್ತು. ಅದನ್ನು ಚರ್ಮದ ಮೇಲೆ ಅಥವಾ ಕೂದಲಿನ ಮೇಲೆ ಸಿಂಪಡಿಸಿಕೊಂಡರೆ, ಅವು ಆರೋಗ್ಯದಿಂದಿರುತ್ತವೆ ಎಂದು ನನಗವರು ಹೇಳಿದರು! ನನಗೇಕೆ ಬ್ಯಾಕ್ಟೀರಿಯಾಗಳು ಬೇಕು? ನಾನೇನು ಪ್ರಯೋಗಾಲಯದಲ್ಲಿ ಬೆಳೆಯಲಿಲ್ಲ. ನಾನು ಬೆಳೆದಿದ್ದೇ ಬ್ಯಾಕ್ಟೀರಿಯಾಗಳು ತುಂಬಿದ ಈ ಜಗತ್ತಿನಲ್ಲಿ. ನಾನು ಹೇಳುತ್ತಿರುವುದೇನಂದರೆ, ನಿಮ್ಮ ಜೀವನವು ಪ್ರತ್ಯೇಕತೆಯಲ್ಲಿ ನಡೆಯುವುದಿಲ್ಲ. ಈ ಜೀವನ ಸಾಗುವುದೇ ಒಳಗೂಡಿಸಿಕೊಳ್ಳುವಿಕೆಯಲ್ಲಿ. ಎಲ್ಲವನ್ನೂ ಹೊಸಕಿಹಾಕುವ ಮೂಲಕ ನಾವು ಚೆನ್ನಾಗಿ ಬದುಕಬಹುದೆಂಬ ನಮ್ಮ ಭಾವನೆಯಿಂದಾಗಿಯೇ ಇಂದು ಪರಿಸರ ವಿಕೋಪಗಳು ಜಾಸ್ತಿಯಾಗಿರುವುದು. ಬದುಕು ಈ ರೀತಿಯಾಗಿ ನಡೆಯುವುದಿಲ್ಲ. ಅದಕ್ಕೆ ಒಂದು ಪರಿಸರ ವ್ಯವಸ್ಥೆಯ ಅವಶ್ಯಕತೆ ಇದೆ.
ನಿಮ್ಮ ಮಗುವಿಗೂ ಸಹ ಇದೇ ಅನ್ವಯಿಸುತ್ತದೆ. ಅದಕ್ಕೊಂದು ಉತ್ತಮ ವಾತಾವರಣವನ್ನು ಸೃಷ್ಟಿಸಬೇಕು. ಅವರು ಯಾವ ರೀತಿಯ ವಿಷಯಗಳಿಗೆ ತೆರೆದುಕೊಳ್ಳುತ್ತಿದ್ದಾರೆ, ಅವರ ಜೀವನದೊಂದಿಗೆ ಅವರೇನು ಮಾಡುತ್ತಿದ್ದಾರೆ ಮತ್ತು ನಾವವರನ್ನು ಯಾವ ದಿಕ್ಕಿನ ಕಡೆಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದೇವೆ? ಒಂದು ಮಗುವೆಂದರೆ, ವಿಶೇಷವಾಗಿ ಯುವಕರೆಂದರೆ, ಮಾನವತೆಯು ನಿರ್ಮಾಣವಾಗುತ್ತಿರುವ ಸಮಯವೆಂದು ನಾವು ಅರ್ಥ ಮಾಡಿಕೊಳ್ಳಬೇಕು. ಕೇವಲ ಒಂದು ಕಾರ್-ನ ವಿಷಯಕ್ಕೆ ಬಂದಾಗ, ಮುಂದೆ ಬರುವ ಮಾದರಿಯು ಈಗಿರುವ ಮಾದರಿಗಿಂತ ಉತ್ತಮವಾಗಿರಬೇಕು ಎಂದು ನೀವು ಬಯಸುತ್ತೀರಲ್ಲವೇ? ಆ ಕಾರಿನ ಸಂಸ್ಥೆ, ಪ್ರತಿವರ್ಷವೂ ಅದೇ ಹಳೇ ಮಾದರಿಯ ಕಾರನ್ನು ತಯಾರಿಸುತ್ತಿದ್ದರೆ, ನೀವದನ್ನು ಖರೀದಿಸುತ್ತೀರ? ಅದೇ ರೀತಿ, ನಿಮ್ಮ ಮುಂದಿನ ಪೀಳಿಗೆಯು ನಿಮ್ಮದೇ ಯೋಚನೆ, ಭಾವನೆ ಮತ್ತು ವರ್ತನೆಗಳನ್ನು ಅನುಕರಿಸಬಾರದು. ಹಾಗೆ ನಿರೀಕ್ಷಿಸುವುದು ಸರಿಯಲ್ಲ. ಆದರೆ ಅದೇ ಸಮಯದಲ್ಲಿ, ಮಕ್ಕಳು ಅವರ ಯೋಗಕ್ಷೇಮದ ಕಡೆಗೆ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎನ್ನುವುದು ಖಂಡಿತವಾಗಿಯೂ ತಂದೆತಾಯಿಗಳಿಗೆ ಒಂದು ಕಳವಳದ ಸಂಗತಿಯಾಗಿರುತ್ತದೆ.
ಒಂದು ಮಗುವನ್ನು ಸರಿಮಾಡುವ ಮೂಲಕವಷ್ಟೇ ನಾವದರ ಹಿತವನ್ನು ಕಾಪಾಡಲಾಗುವುದಿಲ್ಲ. ಅದಕ್ಕೆ ಒಂದು ಒಳ್ಳೆಯ ಪರಿಸರ ಬೇಕಾಗುತ್ತದೆ. ಏಕೆಂದರೆ ತಾನು ಬೆಳೆಯುವ ವಾತಾವರಣದಿಂದ ಅದು ಸ್ವತಂತ್ರವಾಗಿರುವುದಿಲ್ಲ. ನಿಜವಾಗಿ ಹೇಳಬೇಕೆಂದರೆ, ಒಂದು ಮಗುವು ತಾನು ಬೆಳೆಯುವ ವಾತಾವರಣದ ಫಲಿತಾಂಶ. ನಾವು ಆ ವಾತಾವರಣವನ್ನು ಸೃಷ್ಟಿಸಬೇಕು. ನಮಗೆ ಹೂಗಳು ಬೇಕೆಂದರೆ, ನಾವು ಅಂತಹ ವಾತಾವರಣವನ್ನು ಪೋಷಿಸಬೇಕು. ಏನನ್ನೂ ಮಾಡದೆ, ಸುಮ್ಮನೆ ಗಿಡದಿಂದ ಹೂವನ್ನು ಎಳೆದುಕೊಳ್ಳಲಾಗುವುದಿಲ್ಲ. ಅದು ಆ ರೀತಿಯಾಗಿ ಕೆಲಸ ಮಾಡುವುದಿಲ್ಲ. ನಾವೇನಾದರೂ ಹಾಗೆ ಮಾಡಲು ಪ್ರಯತ್ನಿಸಿದ್ದೇ ಆದರೆ, ಕೊನೆಯಲ್ಲಿ ನಮಗೆ ಸಿಗುವುದು ಪ್ಲಾಸ್ಟಿಕ್ ಹೂಗಳಷ್ಟೆ.
ಗುಲಾಬಿ ಹೂಗಳನ್ನು ನಿರೀಕ್ಷಿಸಬೇಡಿ...
ಬಹಳಷ್ಟು ತಂದೆತಾಯಿಗಳು ತಮ್ಮ ಮಕ್ಕಳ ಪ್ರತಿಭೆಯನ್ನು ಪೋಷಿಸುವ ಬದಲಾಗಿ ಅವರನ್ನು ಒಂದು ನಿರ್ದಿಷ್ಟ ದಿಕ್ಕಿನ ಕಡೆಗೆ ದೂಡಲು ಯತ್ನಿಸುತ್ತಿದ್ದಾರೆ. ಹಾಗೆ ತಳ್ಳಬೇಡಿ. ಗುಲಾಬಿ ಗಿಡವಲ್ಲದ ಒಂದು ಗಿಡದಿಂದ ನೀವು ಗುಲಾಬಿ ಹೂವನ್ನು ಪಡೆಯಲು ಸಾಧ್ಯವಿಲ್ಲ. ಅದು ಬೇರೆಯೇ ರೀತಿಯ ಹೂಗಳನ್ನು ಬಿಡುತ್ತದೆ. ನಿಮಗೆ ಗುಲಾಬಿ ಹೂಗಳಿಷ್ಟ ಎಂದಮಾತ್ರಕ್ಕೆ ನೀವು ಎಲ್ಲದರಿಂದ ಅದನ್ನೇ ನಿರೀಕ್ಷಿಸಬಾರದು. ನಿಮ್ಮ ಮನೆಯಲ್ಲಿ ನೂತನವಾದ ಮತ್ತು ನಿರ್ಮಲವಾದ ಜೀವವೊಂದಿದೆ. ಅದರಿಂದ ಏನು ಅರಳುತ್ತದೆ ಎಂದು ನಮಗೆ ಗೊತ್ತಿಲ್ಲ.
ನಾನು ಯುವಕನಾಗಿದ್ದಾಗ, ಯಾರಾದರೂ ನನಗೆ ಅದು ಇದು ಮಾಡಲು ಹೇಳಿದರೆ, ಅದಕ್ಕೇನಾದರೂ ಅರ್ಥವಿದೆ ಎಂದು ನನಗನಿಸದ ಹೊರತು, ನಾನದನ್ನು ಮಾಡುತ್ತಿರಲಿಲ್ಲ. ನನ್ನ ಬದುಕಿನಲ್ಲಿ ಲಾಭದಾಯಕವಾದ ಒಂದೇ ಒಂದು ವಿಷಯವೆಂದರೆ, ನಾನು ಯಾರ ಪ್ರಭಾವಕ್ಕೂ ಒಳಗಾಗಲಿಲ್ಲ, ಅದು ನನ್ನ ಕುಂಟುಂಬ, ಸಮಾಜ, ಧಾರ್ಮಿಕ ಅಥವಾ ರಾಜಕೀಯ ವಾತಾವರಣ ಯಾವುದೇ ಆಗಿದ್ದರೂ ಸಹ. ನಾನು ನನ್ನನ್ನು ಕೇವಲ ಆ ಸೃಷ್ಟಿಕರ್ತ ಸೃಷ್ಟಿಸಿದ ರೀತಿಯಲ್ಲಷ್ಟೇ ಇಟ್ಟುಕೊಂಡೆ. ನಾನು ಎಲ್ಲದರಿಂದ ಸ್ವಲ್ಪ ಅಂತರವನ್ನಿಟ್ಟುಕೊಂಡಿದ್ದೆ, ಮತ್ತು ಮೆಲ್ಲಗೆ ನನ್ನ ಅರಿವಿಗೆ ಬಂದಿದ್ದೇನೆಂದರೆ, ಕೇವಲ ಜೀವಂತವಾಗಿರುವುದರಲ್ಲಿ ಒಂದು ರೀತಿಯಾದ ಬುದ್ಧಿವಂತಿಕೆ ಇದೆ ಎಂದು.
ಇದಕ್ಕಾಗಿಯೇ ನಾನು ಜನರಿಗೆ ಹೇಳುವುದು ಒಂದು ಮಗುವನ್ನು ಹೆತ್ತು, ಅದನ್ನು ಬೆಳೆಸಲು, ಒಂದೋ, ನಿಮಲ್ಲಿ ಅಗಾಧವಾದ ಧೈರ್ಯವಿರಬೇಕು ಅಥವಾ ಅಪಾರವಾದ ಜಾಣ್ಮೆಯಿರಬೇಕು. ಏಕೆಂದರೆ ಒಂದು ಹೊಸ ಜೀವವೆನ್ನುವುದು ಸಣ್ಣ ವಿಷಯವೇನಲ್ಲ. ನಿಮ್ಮ ದೇಹದ ಕೇವಲ ಎರಡು ಅಣುಗಳು ಒಂದಾಗಿ, ನಿಮ್ಮ ಕಣ್ಮುಂದೆ ಬೆಳೆದು, ರೂಪವನ್ನು ತಾಳುತ್ತಿರುವ ಒಂದು ಅಸಾಧಾರಣವಾದ ಪ್ರಕ್ರಿಯೆಯಾಗಿ ನೀವಿದನ್ನು ನೋಡಿದರೆ - ಅದನ್ನು ಅತ್ಯಂತ ಬೆರಗಿನಿಂದ ಕಂಡು, ಅದಕ್ಕೆ ಸರಿಯಾದ ವಾತಾವರಣವನ್ನು ಸೃಷ್ಟಿಸಿದರೆ, ನಿಮ್ಮ ಮಗುವು ಅದ್ಭುತವಾಗಿ ಬೆಳೆಯುತ್ತದೆ. ಆದರೆ ನೀವು ನಿರೀಕ್ಷಿಸಿದ ಗುಲಾಬಿ ಹೂವು ಅದಾಗಿರದೇ ಇರಬಹುದು. ನೀವು ನಿರೀಕ್ಷಿಸಿದಂತೆ ಅವರಾಗಬೇಕಾದ ಅವಶ್ಯಕತೆ ಇಲ್ಲ ಏಕೆಂದರೆ ನಿಮ್ಮ ನಿರೀಕ್ಷೆಗಳು ಗತಕಾಲದ ಸಮಾಧಿಯಿಂದ ಬರುತ್ತವೆ. ಆದರೆ ನಿಮ್ಮ ಮಕ್ಕಳು ಭವಿಷ್ಯಕ್ಕೆ ಸೇರುತ್ತಾರೆ.
ಮಕ್ಕಳು ನಿಮ್ಮ ಆಸ್ತಿಯಲ್ಲ ಮತ್ತು ಅವರು ನಿಮ್ಮಿಂದ ಬರುವುದಿಲ್ಲ. ಅವರು ಕೇವಲ ನಿಮ್ಮ ಮೂಲಕ ಬರುತ್ತಾರಷ್ಟೇ. ನಾವು ಇದನ್ನು ಆದರಿಸಿ ಆನಂದಿಸಬೇಕಾದ ಒಂದು ಸುಯೋಗವೆಂದು ತಿಳಿಯಬೇಕೇ ವಿನಃ, ಅವರೆಲ್ಲಿ ಹೋಗಬೇಕು, ಏನು ಮಾಡಬೇಕು ಎಂದು ನಿರ್ಧರಿಸುವುದು ನಮ್ಮ ಹಕ್ಕು ಎಂದು ಭಾವಿಸಬಾರದು. ಅವರು ತಮ್ಮ ಯೋಗಕ್ಷೇಮದ ಕಡೆಗೆ ಗಮನಹರಿಸುತ್ತಿದ್ದು, ತಮ್ಮ ಜೀವನಕ್ಕೆ ವಿರುದ್ಧವಾದಂತಹ ಯಾವುದೇ ಕೆಲಸಗಳನ್ನೂ ಮಾಡುತ್ತಿಲ್ಲವೆಂದಾದರೆ, ನೀವು ಸುಮ್ಮನೆ ಕಾಯಬೇಕು. ನಿಮ್ಮ ಮಗು ಪೂರ್ತಿ ಇಪ್ಪತ್ತೊಂದು ವರ್ಷಗಳನ್ನು ದಾಟುವವರೆಗೂ, ನೀವಿನ್ನೂ ಗರ್ಭಿಣಿಯಂದು ಭಾವಿಸಬೇಕು. ಅದು ನಿಮ್ಮ ಹೊಟ್ಟೆಯೊಳಗಿದ್ದಾಗ, ನೀವೇನೂ ಮಾಡಲಿಲ್ಲ, ಅಲ್ಲವೇ? ಕೇವಲ ನಿಮ್ಮ ಉತ್ತಮ ಆರೈಕೆಯನ್ನು ಮಾಡಿಕೊಂಡು ಕಾದಿರಿ ಅಷ್ಟೇ. ಅದೇ ರೀತಿ, ನಿಮ್ಮ ಮಗುವಿಗೂ ಸಹ ಉತ್ತಮ ವಾತಾವರಣವನ್ನು ನೀಡಿ ಮತ್ತು ಕಾಯಿರಿ.
ಸಂಪಾದಕರ ಟಿಪ್ಪಣಿ: ಮಕ್ಕಳ ಪಾಲನೆಯ ಬಗ್ಗೆ ಸದ್ಗುರುಗಳ ಇನ್ನಷ್ಟು ಸಲಹೆಗಳಿಗಾಗಿ “Inspire Your Child, Inspire the World” ಉಚಿತ ಇಬುಕ್-ಅನ್ನು ಡೌನ್-ಲೋಡ್ ಮಾಡಿ.