ಮಾನವ ಜೀವಿಯಾಗಿರುವುದೇ ಅದ್ಭುತ!
ಸದ್ಗುರುಗಳು, ‘ಗಲ್ಫ್ ನ್ಯೂಸ್’ಗೆ ನೀಡಿರುವ ಒಂದು ಸಂದರ್ಶನದಲ್ಲಿ, ಮಾನವ ಅನುಭವಗಳ ರೀತಿನೀತಿಗಳನ್ನು ಗಮನಿಸುತ್ತಾ, ಹೇಗೆ ಅದರ ಮೇಲೆ ಪ್ರಭುತ್ವ ಪಡೆಯಬಹುದು ಎಂಬುದನ್ನು ವಿವರಿಸುತ್ತಾರೆ
ಪ್ರಶ್ನೆ: ನಮಗೇಕೆ ಇನ್ನರ್ ಇಂಜಿನಿಯರಿಂಗ್ ಮೇಲೆ ಒಂದು ಪುಸ್ತಕದ ಅಗತ್ಯವಿದೆ? ಜನರು ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ನಿರಂತರವಾಗಿ ಅರಿವು ಮೂಡಿಸುವ ಅಗತ್ಯವಾದರೂ ಏನು?
ಸದ್ಗುರು: ಹಲ್ಲನ್ನು ಉಜ್ಜುವಂತಹ ಸಣ್ಣ ಚಟುವಟಿಕೆಯನ್ನೂ ಕೂಡ ನಿಮ್ಮ ತಾಯಿತಂದೆಯರು ಹೇಳಿಕೊಟ್ಟರಲ್ಲವೇ? ಅವರು ಇವುಗಳನ್ನು ನಿಮಗೆ ಕಲಿಸಿಕೊಡಲಿಲ್ಲದಿದ್ದರೆ, ಕೆಲವು ಜನ ತಮಗೆ ತಾವೇ ಅದರ ಬಗ್ಗೆ ಅರಿವು ಮೂಡಿಸಿಕೊಳ್ಳುತ್ತಿದ್ದರು. ಆದರೆ, ಬಹುಪಾಲು ಜನ ಅದರ ಅರಿವು ಇಲ್ಲದೆಯೇ ಉಳಿಯುತ್ತಿದ್ದರು. ಜೀವನದ ಆಳವಾದ ಆಯಾಮಗಳ ವಿಷಯಕ್ಕೆ ಬಂದಾಗ, ಕೆಲವರು ಮಾತ್ರವೇ ತಮಗೆ ತಾವೇ ಅದರ ಬಗೆಗಿನ ಅರಿವು ಮೂಡಿಸಿಕೊಳ್ಳುತ್ತಾರೆ, ಆದರೆ ಬಹುಪಾಲು ಜನರಿಗೆ ಅದು ಸಾಧ್ಯವಾಗುವುದಿಲ್ಲ.
ನಮ್ಮ ಜೀವದಲ್ಲಿ ಬಾಹ್ಯ ಪ್ರಪಂಚದ ಎಲ್ಲ ಅಂಶಗಳನ್ನೂ ಎಲ್ಲ ತರಹದ ತಂತ್ರಜ್ಞಾನ ಬಳಸಿ ವೈಜ್ಞಾನಿಕವಾಗಿ ಅರಿತುಕೊಳ್ಳುತ್ತೇವೆ. ಅದೇ ರೀತಿ, ನಮ್ಮ ಆಂತರಿಕ ಯೋಗಕ್ಷೇಮವನ್ನು ಕೂಡ ಅದಕ್ಕಾದ ತಂತ್ರಜ್ಞಾನವನ್ನು ಬಳಸಿ ವೈಜ್ಞಾನಿಕವಾಗಿ ಅರಿತುಕೊಳ್ಳುವುದು ಬಹಳ ಮುಖ್ಯ.
ದೀರ್ಘಕಾಲದವರೆಗೆ, ಜನರು ಆಂತರಿಕ ಯೋಗಕ್ಷೇಮವನ್ನು ನಂಬಿಕೆಗಳು, ಸಿದ್ಧಾಂತಗಳು, ಮತ್ತೆಲ್ಲಾ ರೀತಿಯ ಮೂಢನಂಬಿಕೆಗಳ ಮೂಲಕ ನಿಭಾಯಿಸಬಹುದು ಎಂದುಕೊಂಡಿದ್ದರು. ವ್ಯಕ್ತಿನಿಷ್ಠ ತಂತ್ರಜ್ಞಾನಗಳನ್ನು ಬಳಸಿಕೊಂಡು ನಾವು ನಮ್ಮ ಆಂತರಿಕತೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿಭಾಯಿಸುವ ಸಮಯವಿದು.
ಇನ್ನರ್ ಇಂಜಿನಯರಿಂಗ್ ಹಲವು ವಿಧಾನಗಳಲ್ಲಿ ಲಭ್ಯವಿದೆ - ಕಾರ್ಯಕ್ರಮದ ಮೂಲಕ, ಆನ್ಲೈನ್ ನಲ್ಲಿ ಮತ್ತು ಈಗ ಪುಸ್ತಕ ರೂಪದಲ್ಲಿಯೂ ಸಹ.
ಪ್ರಶ್ನೆ: ಪರಿವರ್ತನೆಗಾಗಿ ಬೇಕಾದ ಸಾಧನಗಳು ಯಾವುವು?
ಸದ್ಗುರು: ನಾವು ಪರಿವರ್ತನೆಯ ಸಾಧನಗಳು ಎಂದಾಗ ಇದನ್ನು ನಾವು ಹಲವು ರೀತಿಯಲ್ಲಿ ಕಾರ್ಯರೂಪಕ್ಕೆ ತರಬಹುದು. ಮನುಷ್ಯರ ಎಲ್ಲಾ ರೀತಿಯ ಅನುಭವಗಳು - ಅದು ಶಾಂತತೆ, ಪ್ರಕ್ಷುಬ್ಧತೆ, ಒತ್ತಡ, ಆತಂಕ, ದುಃಖ, ಸಂತೋಷ, ಭಾವಪರವಶತೆ, ಸಂಕಟ – ಯಾವುದೇ ಆಗಿರಲಿ ಅದಕ್ಕೆ ತನ್ನದೇ ಆದ ರಾಸಾಯನಿಕ ಮೂಲವೊಂದಿರುತ್ತದೆ.
ಇದನ್ನು ನಿಭಾಯಿಸುವ ಒಂದು ವಿಧವೆಂದರೆ, ಹೊರಗಿನಿಂದ ರಾಸಾಯನಿಕವನ್ನು ನಿಮ್ಮ ವ್ಯವಸ್ಥೆಯೊಳಗೆ ತಗೆದುಕೊಳ್ಳುವುದು. ಈ ವಿಧಾನವನ್ನು ನಾವು ಇಂದು ಭಾರಿ ಪ್ರಮಾಣದಲ್ಲಿ ಕಾಣುತ್ತಿದ್ದೇವೆ. ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಲು ರಾಸಾಯನಿಕವನ್ನು ಸೇವಿಸುತ್ತಾರೆ, ಶಾಂತರಾಗಲು ರಾಸಾಯನಿಕವನ್ನು ಸೇವಿಸುತ್ತಾರೆ, ಆನಂದದಿಂದಿರಲು ಮತ್ತೊಂದು ಬಗೆಯ ರಾಸಾಯನಿಕವನ್ನು ಸೇವಿಸುತ್ತಿದ್ದಾರೆ.
ಅತ್ಯಂತ ಕ್ಲಿಷ್ಟಕರ ಪ್ರಕ್ರಿಯೆಗಳನ್ನೊಳಗೊಂಡ ರಾಸಾಯನಿಕ ಕಾರ್ಖಾನೆ ಈ ಮಾನವ ದೇಹ ಎಂಬ ಸತ್ಯವನ್ನು ನಾವು ಮರೆಯುತ್ತಿದ್ದೇವೆ. ನಾವು ಇದನ್ನು ಸಮರ್ಥವಾಗಿ ನಿಭಾಯಿಸಿದೆವೆಂದರೆ, ನಿಮ್ಮ ಕಾರ್ಖಾನೆಗೆ ನೀವೇ ಮಾಲೀಕರಾಗುತ್ತೀರಿ ಮತ್ತು ನಿಮ್ಮೊಳಗಿನ ರಾಸಾಯನಿಕ ವ್ಯವಸ್ಥೆಯನ್ನು ಆನಂದವಾಗಿರಿಸಲು ಬಳಸಿಕೊಳ್ಳುತ್ತೀರಿ.
ಒಮ್ಮೆ ನಿಮ್ಮಷ್ಟಕ್ಕೆ ನೀವೇ ಆನಂದಪರವಶತೆಯನ್ನು ಹೊಂದಿದರೆ, ನಿಮ್ಮಲ್ಲಿ ಯಾವುದೇ ರೀತಿಯ ನರಳಾಟದ ಭಯವಿರುವುದಿಲ್ಲ. ಯಾವಾಗ ನರಳಾಟದ ಭಯವಿರುವುದಿಲ್ಲವೋ, ನಿಮ್ಮ ಜೀವನದ ಆಯಾಮವನ್ನು ಪರಿಪೂರ್ಣವಾಗಿ ಮತ್ತು ಆಳವಾಗಿ ಅನ್ವೇಷಿಸಲು ಧೈರ್ಯ ಮಾಡುವಿರಿ. ಇಲ್ಲವಾದರೆ, ನೀವು ತುಂಬಾ ನಿರ್ಬಂಧನೆಗಳಿಂದ ತುಂಬಿದ ಜೀವನವನ್ನು ನಡೆಸುತ್ತೀರಿ ಅಷ್ಟೇ.
ಪ್ರಶ್ನೆ: ನಿಮ್ಮ ಪುಸ್ತಕದಲ್ಲಿ, ಪರಿವರ್ತನೆಗಾಗಿ ಯೋಗ ಒಂದು ಉತ್ತಮ ಸಾಧನ ಎಂದು ತಿಳಿಸಿದ್ದೀರಿ. ಜಗತ್ತಿನಾದ್ಯಂತ ಇರುವ ಮತ್ತೆಲ್ಲಾ ಯೋಗ ಅಭ್ಯಾಸಗಳಿಗಿಂತ, ಈಶಾ ಯೋಗ ಯಾವ ರೀತಿಯಲ್ಲಿ ವಿಭಿನ್ನ?
ಸದ್ಗುರು: ಪಾಶ್ಚಿಮಾತ್ಯ ದೇಶಗಳಲ್ಲಿ, ಯೋಗವನ್ನು ದೈಹಿಕ ವ್ಯಾಯಾಮ ಎಂದು ಪರಿಗಣಿಸಿದ್ದಾರೆ. ಇದು ತಪ್ಪು ಗ್ರಹಿಕೆ. ಯೋಗ ಪದದ ಅರ್ಥ “ಐಕ್ಯತೆ”. ಅಂದರೆ ನೀವು ಒಂದಲ್ಲ ಒಂದು ವಿಧದಲ್ಲಿ ವೈಯಕ್ತಿಕ ಎಲ್ಲೆಗಳನ್ನು ಮೀರಿ ಹೋಗಬಯಸುತ್ತೀರಿ. ನಿಮ್ಮಲ್ಲಿ ಈಗ ಉಸಿರಾಟ ನಡೆಯುತ್ತಿರುವುದರಿಂದಲೇ, ನೀವ ಜೀವಂತವಾಗಿದ್ದೀರಿ. ನಿಮ್ಮ ಮತ್ತು ಹೊರಗಿನ ಪ್ರಪಂಚದ ನಡುವೆ ನೀವೊಂದು ಸ್ಪಷ್ಟವಾದ ಗಡಿಯನ್ನು ನಿಗದಿಪಡಿಸಿದ ಕ್ಷಣ, ನೀವಿರುವುದಿಲ್ಲ.
ಇದು ಕೇವಲ ಉಸಿರಾಟಕ್ಕಷ್ಟೇ ಸೀಮಿತವಲ್ಲ. ನಿಮ್ಮ ದೇಹದ ಪ್ರತಿಯೊಂದು ಕಣವೂ ಸಹ ವಿಶ್ವದೊಂದಿಗೆ ನಿರಂತರ ಸಂವಹನೆಯಲ್ಲಿರುತ್ತದೆ. ಜೀವನವು ಸಂಭವಿಸುವ ರೀತಿಯೇ ಇದು. ಅನುಭವಾತ್ಮಕವಾಗಿ ನೀವಿದನ್ನು ಕಂಡುಕೊಂಡರೆ, ನೀವು ಯೋಗದಲ್ಲಿದ್ದೀರಿ ಎಂದು ನಾವು ಹೇಳುತ್ತೇವೆ. ಮನುಷ್ಯರು ಎಲ್ಲವನ್ನೂ ತಮ್ಮಲ್ಲಿ ಅಂತರ್ಗತ ಮಾಡಿಕೊಂಡರೆ, ಯಾವುದನ್ನೂ ಸಂರಕ್ಷಿಸಲು ಕಲಿಯುವುದರ ಅಗತ್ಯತೆ ಇರುವುದಿಲ್ಲ.
ನೀವೊಂದು ಬಾಳೇಹಣ್ಣನ್ನು ತಿಂದರೆ, ಅದು ನಮ್ಮ ದೇಹದಲ್ಲಿ ಮಿಳಿತಗೊಂಡು ಅದು ನೀವಾಗಿಯೇ ಮಾರ್ಪಡುತ್ತದೆ. ಇದು ಕೇವಲ ಭೌತಿಕ ಮಟ್ಟದಲ್ಲಷ್ಟೇ ಸತ್ಯವಲ್ಲ. ನೀವು ಇಡೀ ಬಹ್ಮಾಂಡವನ್ನೇ ನೀವಾಗಿ ಕಾಣಬಹುದು. ಆಗಷ್ಟೇ, ನೀವು ಸಂಪೂರ್ಣ ಅಂತರ್ಗತ ಸ್ಥಿತಿಯಲ್ಲಿರುತ್ತೀರಿ.
ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಒಂದು ಬಾಳೆಯಹಣ್ಣು ಅಥವಾ ರೊಟ್ಟಿಯನ್ನು ಮನುಷ್ಯನ್ನಾಗಿ ಪರಿವರ್ತಿಸುವ ಬುದ್ದಿವಂತಿಕೆಯಿದೆ. ಈ ಜ್ಞಾನದ ಒಂದು ಹನಿಯಷ್ಟನ್ನಾದರೂ ನಿಮ್ಮ ಅರಿವಿಗೆ ತಂದುಕೊಂಡಿರೆಂದರೆ, ನಿಮ್ಮ ಜೀವನ ಚಮತ್ಕಾರದಿಂದ ತುಂಬುತ್ತದೆ. ಅದು ನಿಮ್ಮ ಆರೋಗ್ಯವೇ ಆಗಲಿ, ಆನಂದವೇ ಆಗಲಿ, ಅದಕ್ಕೆ ಮೂಲ ಕಾರಣ ನೀವೇ ಆಗುತ್ತೀರಿ. ಈಗಲೂ ಸಹ, ನೀವೇ ಅದಕ್ಕೆಲ್ಲಾ ಮೂಲ ಕಾರಣ, ಆದರೆ ಬಾಹ್ಯಪ್ರಪಂಚದಿಂದ ಪ್ರಚೋದನೆಗಾಗಿ ಕಾಯುತ್ತಿದ್ದೀರಿ ಅಷ್ಟೇ. ಅಂದರೆ, ನೀವೀಗ ಪುಶ್-ಸ್ಟಾರ್ಟ್(ಕಡ್ಡಾಯದ) ಸ್ಥಿತಿಯಲ್ಲಿದ್ದೀರಿ. ಅದರಿಂದ ನಿಮ್ಮನ್ನು ಅನುಭವಾತ್ಮಕವಾಗಿ ಸೆಲ್ಪ್-ಸ್ಟಾರ್ಟ್ (ಪ್ರಜ್ಞಾವಂತ) ಸ್ಥಿತಿಗೆ ನಾವು ಕರೆದೊಯ್ಯಬಹುದು.
ಪ್ರಶ್ನೆ: ನಮ್ಮ ಸುತ್ತಲೂ ನಾವು ಸಂಗ್ರಹಿಸಿರುವ ಸಂಪತ್ತು, ಖ್ಯಾತಿ, ಸ್ಥಾನಮಾನ, ಸಂತೋಷ ಇತ್ಯಾದಿಗಳ ಬಲೆಗೆ ಸಿಕ್ಕಿಕೊಳ್ಳದೆ, ಒಬ್ಬ ಮನುಷ್ಯ ತನ್ನ ಅಸ್ತಿತ್ವವನ್ನು ಹೇಗೆ ಅನುಭವಿಸಬಹುದು?
ಸದ್ಗುರು: ನಮ್ಮ ಬಳಿ ಏನಿದೆಯೋ ಅದು ನಮ್ಮ ಬಳಕೆಗಷ್ಟೇ ಸೀಮಿತ, ಅದನ್ನು ನಿಮ್ಮ ತಲೆಯಲ್ಲಿ ಹೊತ್ತು ತಿರುಗುವ ಅವಶ್ಯಕತೆಯಿರುವುದಿಲ್ಲ. ಅವುಗಳನ್ನು ಬಳಸಿಕೊಂಡರೆ, ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಒಮ್ಮೆ ನಾವು ನಮ್ಮನ್ನು ಅದರೊಂದಿಗೆ ಗುರುತಿಸಿಕೊಂಡೆವೆಂದರೆ, ಅದು ಸಮಸ್ಯೆಯಾಗಿ ಹೊರಹೊಮ್ಮುತ್ತದೆ ಮತ್ತು ನಮಗೆ ನೋವನ್ನುಂಟು ಮಾಡುತ್ತದೆ. ನೀವು ತಲೆಯಿಂದ ಪಾದದವರೆಗೂ ಅಂಟನ್ನು ಬಳಿದುಕೊಂಡಿದ್ದರೆ, ನೀವು ಏನನ್ನೆಲ್ಲಾ ಮುಟ್ಟುತ್ತೀರೋ, ಆದೆಲ್ಲ ನಿಮಗೆ ಅಂಟಿಕೊಳ್ಳುತ್ತದೆ. ಎರಡೇ ದಿನಗಳಲ್ಲಿ, ನೀವೊಂದು ಗೊಂದಲಗಳ ಗುಡ್ಡವಾಗಿ ಬದಲಾಗುತ್ತೀರಿ. ಇದೀಗ ಬಹಳಷ್ಟು ಜನರಿಗೆ ಆಗುತ್ತಿರುವುದು ಇದೇ. ಇನ್ನರ್ ಇಂಜಿನಿಯರಿಂಗ್ ನಿಮ್ಮಲ್ಲಿನ ಅಂಟನ್ನು ತೊಳೆದುಕೊಳ್ಳಬಹುದಾದ ಒಂದು ವಿಧಾನ. ನಿಮ್ಮ ಬಳಿ ಇರುವ ಎಲ್ಲ ವಿಷಯಗಳನ್ನೂ ಬಳಸಿಕೊಳ್ಳುತ್ತೀರಿ ಆದರೆ ಅದನ್ನು ನಿಮ್ಮ ತಲೆಗೇರಿಸಿಕೊಳ್ಳುವುದಿಲ್ಲ.
ಪ್ರಶ್ನೆ: ಮನುಷ್ಯರು ತಮ್ಮ ಜೀವನದಲ್ಲಿ ಆಧ್ಯಾತ್ಮಿಕತೆ ಮತ್ತು ಸಾಂಸಾರಿಕ ಜೀವನದಲ್ಲಿ ಸಮತೋಲನ ಬೆಳೆಸಿಕೊಂಡು, ಅದರ ಹೊರತಾಗಿಯೂ ಸಹ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಬಹುದೆ? ಅದಕ್ಕೆ ಯಾವುದಾದರೂ "ಸೂತ್ರ"ವಿದೆಯೇ
ಸದ್ಗುರು: ಆಧ್ಯಾತ್ಮಿಕವಾಗಿರುವುದು ಮತ್ತು ಯಶಸ್ವಿಯಾಗಿರುವುದು, ಈ ಎರಡನ್ನೂ ವ್ಯತಿರಿಕ್ತವಾಗಿ ಏಕೆ ಕಾಣಲಾಗುತ್ತದೆ? ಆಧ್ಯಾತ್ಮಿಕತೆ ಒಂದು ರೀತಿಯ ಅಂಗವಿಕಲತೆ ಅಥವಾ ದುರ್ಬಲತೆ ಎಂಬ ತಪ್ಪು ಕಲ್ಪನೆಯಿರುವುದರಿಂದ ಜನರು ಹೀಗೆ ಯೋಚಿಸುತ್ತಾರೆ.
ಆಧ್ಯಾತ್ಮಿಕತೆ ಒಂದು ಅದ್ಭುತ ಸಬಲೀಕರಣ. ನಿಮ್ಮ ಯಶಸ್ಸಿನ ಕ್ಷೇತ್ರ ಯಾವುದು ಎಂಬುದನ್ನು ನೀವು ಆರಿಸಿಕೊಳ್ಳಬೇಕು. ನೀವು ಮತ್ತೊಬ್ಬರ ರೀತಿ ಯಶಸ್ವಿಯಾಗಲು ಸಾಧ್ಯವಿಲ್ಲ, ಆದರೆ ನೀವು ಬೇರೆಯದೇ ವಿಶಿಷ್ಟ ರೀತಿಯಲ್ಲಿ ಯಶಸ್ಸನ್ನು ಕಾಣಬಹುದು. ಒಂದು ವಿಷಯದ ಬಗ್ಗೆ ನೀವು ಹೆಚ್ಚು ತಿಳಿದುಕೊಂಡಷ್ಟೂ, ನೀವು ಆ ವಿಷಯವನ್ನು ಸರಿಯಾಗಿ ಬಳಸಿಕೊಳ್ಳಬಹುದು. ಅದೇ ರೀತಿ, ನೀವು ನಿಮ್ಮ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಷ್ಟೂ ನೀವು ಹೆಚ್ಚೆಚ್ಚು ಸಮರ್ಥರಾಗುತ್ತೀರಿ. ಇದು ಒಬ್ಬರು ಅತಿ-ಮಾನವರಾಗುವ ಬಗ್ಗೆಯಲ್ಲ – ಮಾನವರಾಗಿರುವುದೇ ಅತ್ಯಂತ ಅದ್ಭುತ ಎಂದು ತಿಳಿದುಕೊಳ್ಳುವ ಬಗ್ಗೆ!
ಪ್ರಶ್ನೆ: ಮಾನವ ದೇಹ ಒಂದು ಸಂಕೀರ್ಣವಾದ ಸೃಷ್ಟಿ ಮತ್ತು ಇದರ "ಬಳಕೆದಾರರ ಕೈಪಿಡಿ"ಯನ್ನು ಓದಿ ತಿಳಿಯದೆಯೇ ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳುತ್ತೀರಿ. ಆ ಕೈಪಿಡಿ ಎಲ್ಲಿದೆ?
ಸದ್ಗುರು: ಅದು ನಮ್ಮೊಳಗೆಯೇ ಇದೆ. ಲಕ್ಷಾಂತರ ವಿಷಯಗಳಿವೆ ಮತ್ತು ಅದರಲ್ಲಿ ಕೆಲವನ್ನು ಅರಿತುಕೊಂಡರೂ ಸಹ ನಿಮ್ಮ ಜೀವನವು ಅದ್ಭುತವಾಗಿ ಬದಲಾಗುತ್ತದೆ. ಅದು ವರ್ಣಮಾಲೆ ಮತ್ತು ಭಾಷೆಯನ್ನು ಕಲಿಯುವ ಹಾಗೆ. ಒಮ್ಮೆ ಅದನ್ನು ನೀವು ಕಲಿತರೆಂದರೆ, ನೀವು ನಿಮ್ಮೊಳಗೆಯೇ ಬಳಕೆ ಮಾಡಬಹುದಾದ ವಿಧಿವಿಧಾನಗಳನ್ನು ಅರಿಯಬಹುದು ಮತ್ತು ಅದರಂತೆ ನಿಮ್ಮ ಜೀವನವನ್ನು ಸಾಗಿಸಬಹುದು
ಪ್ರಶ್ನೆ: ಮನುಷ್ಯನು ಪರಿಸರಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳದೆ ಸಹಬಾಳ್ವೆ ನಡೆಸುವಂತೆ ಸಂಬಂಧವನ್ನು ಸುಸ್ಥಿರಗೊಳಿಸಲು ಏನು ಮಾಡಬೇಕು?
ಸದ್ಗುರು: ನಾವು ಯಾವಾಗಲೂ ಜಗತ್ತನ್ನು ಶಾಂತಿಯುತವಾಗಿರಿಸಲು ಪ್ರಯತ್ನಿಸುತ್ತಿರುತ್ತೇವೆ. ಆದರೆ, ಒಂದು ತೊಂದರೆಯೆಂದರೆ, ಮನುಷ್ಯರು ತಾವು ಶಾಂತಿಯುತವಾಗಿರುವುದಿಲ್ಲ. ನೀವೇ ಶಾಂತಿಯುತವಾಗಿಲ್ಲದಿದ್ದರೆ, ಶಾಂತಿಯುತ ಜಗತ್ತನ್ನು ಹೇಗೆ ತಾನೆ ಆಶಿಸಬಹುದು?
ಮನುಷ್ಯರು ಶಾಂತಿಯುತವಾಗಿರುವುದು ಎಂದರೆ ಏನು ಎಂಬುದರ ನಿಜವಾದ ಅರ್ಥವನ್ನೇ ತಿಳಿಯದಿದ್ದರೆ, ಅದಕ್ಕಾದ ಸಾಧ್ಯತೆಯಾದರೂ ಎಲ್ಲಿರುತ್ತದೆ? ಅವರು ಶಾಂತಿಯುತ ಜಗತ್ತು ಎಂದರೆ ಕೆಲವು ಘೋಷಣೆಗಳನ್ನು ಕೂಗಿ, ಮನೆಗೆ ಮರಳಿ ಚೆನ್ನಾಗಿ ನಿದ್ರಿಸುವುದು ಎಂದುಕೊಂಡಿದ್ದಾರೆ.
ಜನಸಮೂಹದ ಜೊತೆ ಇದನ್ನು ಮಾಡಲು ಸಾಧ್ಯವಿಲ್ಲ. ವೈಯಕ್ತಿಕ ಪರಿವರ್ತನೆಗಾಗಿ ಒಂದು ಬದ್ಧವಾದ ಕಾರ್ಯರೂಪದ ಅಗತ್ಯತೆಯಿರುತ್ತದೆ. ಇದು ಜೀವನ ಪರ್ಯಂತ ಇರಬೇಕಾದಂತಹ ಬದ್ಧತೆ. ಈ ರೀತಿಯ ಬದ್ಧತೆ ಎಲ್ಲಿಯೂ ಕಾಣುತ್ತಿಲ್ಲ.
ನಾವು ಒಂದು ಮಗುವಿಗೆ ಅಕ್ಷರಮಾಲೆಯನ್ನು ಹೇಳಿಕೊಡುವ ರೀತಿಯಲ್ಲಿ, ಜನರು ತಮ್ಮೊಳಗೆ ಹೇಗೆ ಶಾಂತಿಯುತವಾಗಿ ಇರಬಹುದು ಎಂಬುದನ್ನು ಪ್ರತಿ ಮಕ್ಕಳಿಗೂ ಚಿಕ್ಕ ವಯಸ್ಸಿನಿಂದಲೇ ಹೇಳಿಕೊಟ್ಟರೆ, ಈ ಜಗತ್ತು ಒಂದು ಸುಂದರವಾದ ಸ್ಥಳವಾಗುವುದನ್ನು ಕಾಣಬಹುದು. ಇದು ಬಹಳ ಕಠಿಣ ಕೆಲಸ ಮತ್ತು ನಾವು ಇದಕ್ಕಾಗಿ ವ್ಯಕ್ತಿಗತವಾಗಿಯಾಗಲೀ ಅಥವಾ ಮಾನವ ಮೂಲಸೌಕರ್ಯದಲ್ಲಿಯೇ ಆಗಲಿ ಸರಿಯಾದ ಹೂಡಿಕೆ ಮಾಡಿಲ್ಲ.
ಪ್ರಶ್ನೆ: ಅರಬ್ ದೇಶ ಸಂತೋಷಕ್ಕಾಗಿಯೇ ಒಂದು ಸಚಿವಾಲಯ ನಿರ್ಮಿಸಿದೆ ಮತ್ತು ಇದರ ಮೂಲಕ ಅಲ್ಲಿನ ನಿವಾಸಿಗಳು ಸಂತೋಷವಾಗಿರುವುದಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ನಿಮ್ಮ ಸಂತೋಷದ ಪರಿಕಲ್ಪನೆಯ ಜೊತೆ ಇದು ಹೊಂದಿಕೊಳ್ಳುತ್ತದೆಯೇ?
ಸದ್ಗುರು: ಸಂತೋಷ ಒಂದು ಪರಿಕಲ್ಪನೆಯಲ್ಲ. ಅದು ಮನುಷ್ಯನ ಅನುಭವ. ಒಂದು ದೇಶವು ತನ್ನ ನಿವಾಸಿಗಳ ಸಂತೋಷಕ್ಕಾಗಿ ಇಟ್ಟಿರುವ ಬದ್ಧತೆ ಒಂದು ಅದ್ಭುತ ವಿಷಯವೇ. ಅದರ ಯಶಸ್ಸು ಹಲವು ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ಅದರಲ್ಲಿ ಒಂದು ಸದುದ್ದೇಶವಿದೆ, ಇದು ಅದ್ಭುತ.
ಸಂಪಾದಕರ ಟಿಪ್ಪಣಿ: ಸದ್ಗುರುಗಳ ಪುಸ್ತಕ “ಅಂತರಂಗದ ವಿಜ್ಞಾನ – ಆನಂದಕ್ಕೆ ಯೋಗಿಯ ಕೈಪಿಡಿ" ಭಾರತದಲ್ಲಿ ಯಶಸ್ವಿಯಾಗಿ ಮಾರಾಟವಾಗುತ್ತಿದೆ. ನಿಮ್ಮ ಪುಸ್ತಕಕ್ಕಾಗಿ ಇಂದೇ ಆರ್ಡರ್ ಮಾಡಿ!