ಮೂರು ರೀತಿಯ ಯೋಗಿಗಳು
ಸದ್ಗುರುಗಳು ಮಂದ, ಮಧ್ಯಮ ಮತ್ತು ಉತ್ತಮ ಎಂಬ ಮೂರು ವರ್ಗದ ಯೋಗಿಗಳ ಬಗ್ಗೆ ಮಾತನಾಡುತ್ತಾರೆ
ಸದ್ಗುರು : ಕೆಲವು ಯೋಗ ಪರಂಪರೆಗಳಲ್ಲಿ, ಯೋಗಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸುತ್ತಾರೆ. ಇವರನ್ನು ಮಂದ, ಮಧ್ಯಮ ಮತ್ತು ಉತ್ತಮ ಎಂದು ಕರೆಯಲಾಗುತ್ತದೆ.
ಮಂದಯೋಗಿಗಳು – ಅಸ್ಥಿರ ಗ್ರಹಿಕೆ
ಮಂದ ಎಂದರೆ ಅರಿವಿನಿಂದ ಇರುವುದು ಎಂದರೇನು ಎಂಬುದರ ರುಚಿ ನೋಡಿದ ಯೋಗಿ. ಅವರು ‘ಸೃಷ್ಟಿಯ ಮೂಲ’ದ ರುಚಿ ನೋಡಿದ್ದಾರೆ, ಆದರೆ ಅದನ್ನು ದಿನವಿಡೀ ಹಿಡಿದಿಡಲಾರರು. ಆ ಸ್ಥಿತಿಯನ್ನು ಆಗಾಗ ನೆನಪಿಸಿಕೊಳ್ಳುತ್ತಿರಬೇಕು. ಅರಿವಿನಿಂದ ಇದ್ದಾಗ ಆ ಸ್ಥಿತಿಯಲ್ಲಿರುತ್ತಾರೆ. ಅರಿವಿಲ್ಲದಾಗ ಆ ಇಡೀ ಅನುಭವವನ್ನು ಕಳೆದುಕೊಳ್ಳುತ್ತಾರೆ. ಇದು ಶಾಂತಿಯಿಂದ ಅಥವಾ ಸಂತೋಷದಿಂದ ಇರುವುದರ ಕುರಿತಾದುದಲ್ಲ. ಇದು ಹೆಸರಿಲ್ಲದ ಆನಂದಗಳ ಸ್ಥಿತಿಯಲ್ಲಿರುವುದು. ಹಾಗಾಗಿ ಯೋಗಿಗಳ ಮೊದಲ ವರ್ಗವು ಅದನ್ನು ತಿಳಿದಿದೆ, ಆದರೆ ಅವರಿಗೆ ಅದನ್ನು ನೆನಪಿಸುತ್ತಿರಬೇಕು ಅಥವಾ ಅವರು ತಾನೇ ನೆನಪಿಸಿಕೊಳ್ಳುತ್ತಿರಬೇಕಾಗುತ್ತದೆ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅವರ ಗ್ರಹಿಕೆ ಯಾವಾಗಲೂ ಒಂದೇ ಆಗಿರುವುದಿಲ್ಲ.
ನೀವು ಅರಿವನಲ್ಲಿದ್ದಾಗ ಗ್ರಹಿಸುತ್ತೀರಿ, ಸಣ್ಣದರಿಂದ ದೊಡ್ಡ ಸಂಗತಿಗಳ ಸಹಿತ ಎಲ್ಲವೂ ಅಲ್ಲಿರುತ್ತದೆ. ನೀವು ಸಾಕಷ್ಟು ಅರಿವಿನಲ್ಲಿ ಇರದಿದ್ದರೆ, ನಿಮ್ಮ ಗ್ರಹಿಕೆ ಕಡಿಮೆಯಾಗುತ್ತದೆ, ಅವು ಅಲ್ಲಿರುವುದಿಲ್ಲ. ನಿಮ್ಮ ಗ್ರಹಿಕೆ ಅತ್ಯಂತ ಕಡಿಮೆಯಾದಾಗ, ನೀವು ನಿದ್ರೆ ಮಾಡಿದ್ದೀರಿ ಎಂದುಕೊಳ್ಳೋಣ, ಆಗ ನೀವು ಜಗತ್ತನ್ನೂ ಗ್ರಹಿಸಲಾಗುವುದಿಲ್ಲ. ಅದು ನಿಮ್ಮ ಅನುಭವದಲ್ಲಿ ಮಾಯವಾಗಿರುತ್ತದೆ. ಹಾಗಾಗಿ, ಅದೇ ರೀತಿಯಲ್ಲಿ, ಒಂದು ವಿಷಯ ಹೆಚ್ಚು ಸೂಕ್ಷ್ಮವಾದಂತೆಲ್ಲಾ, ನಿಮಗೆ ಉತ್ತಮವಾದ ಅಥವಾ ಹೆಚ್ಚಿನ ಅರಿವಿನ ಮಟ್ಟದ ಗ್ರಹಿಕೆ ಬೇಕಾಗುತ್ತದೆ. ಯಾರೂ ಸಹ ಇಪ್ಪತ್ತನಾಲ್ಕು ಗಂಟೆಗಳೂ ಪ್ರಯತ್ನಪೂರ್ವಕವಾಗಿ ಪ್ರಜ್ಞಾವಸ್ಥೆಯಲ್ಲಿ ಇರಲು ಸಾಧ್ಯವಿಲ್ಲ. ನೀವು ಪ್ರಯತ್ನಪಟ್ಟರೆ, ನೀವದನ್ನು ಕೆಲ ಕ್ಷಣಗಳು ಅಥವಾ ನಿಮಿಷಗಳ ಕಾಲ ಸಾಧಿಸಲು ಸಾಧ್ಯವಾದರೆ, ಅದೇ ದೊಡ್ಡ ಸಂಗತಿ. ಅಲ್ಲವಾದರೆ, ಅದು ಎಲ್ಲೆಡೆ ಹರಡಿಹೋಗುತ್ತದೆ. ಹಾಗಾಗಿ ಮೊದಲ ಹಂತದ ಯೋಗಿಯನ್ನು ಮಂದ ಎಂದು ಕರೆಯಲಾಗುತ್ತದೆ. ಮಂದವೆಂದರೆ ದಿನನಿತ್ಯದ ಜೀವನದಲ್ಲಿ ಮಂದ ಎಂದರ್ಥವಲ್ಲ, ಅದು ಗ್ರಹಿಕೆಯಲ್ಲಿನ ಮಂದತೆಯಾಗಿದೆ.
ಮಧ್ಯಮ ಯೋಗಿಗಳು – ನೀಮ್ ಕರೋಲಿ ಬಾಬಾ
ಯೋಗಿಗಳಲ್ಲಿ ಎರಡನೇ ವರ್ಗ ಅಥವಾ ಎರಡನೇ ಹಂತವನ್ನು ಮಧ್ಯಮ ಎಂದು ಕರೆಯಲಾಗುತ್ತದೆ. ಅಂತಹವರಿಗೆ, ಒಳಗಿನ ಆಯಾಮ ಮತ್ತು ಅತೀತದ ಆಯಾಮಗಳು ನಿರಂತರವಾಗಿ ಗ್ರಹಿಕೆಯಲ್ಲಿರುತ್ತವೆ, ಆದರೆ ಈ ಭೌತಿಕ ಆಯಾಮವನ್ನು ನಿರ್ವಹಿಸಲು ಆಗುವುದಿಲ್ಲ. ಇಂದಿಗೂ ಆರಾಧಿಸಲ್ಪಡುತ್ತಿರುವ ಅನೇಕ ಯೋಗಿಗಳಿದ್ದಾರೆ, ಆದರೆ ಅವರು ತಮ್ಮ ಜೀವನವನ್ನು ನಡೆಸಲು ಸಂಪೂರ್ಣವಾಗಿ ಅಸಮರ್ಥರಾಗಿರುತ್ತಾರೆ. ಅವರ ಜೀವನಗಳ ಕೆಲವು ನಿರ್ದಿಷ್ಟ ಹಂತಗಳಲ್ಲಿ, ಅವರಿಗೆ ಆಹಾರ ಸೇವಿಸಲೂ, ಶೌಚಕ್ಕೆ ಹೋಗಲೂ ನೆನಪಿಸಬೇಕಾಗುತ್ತದೆ. ಅವರು ತಮ್ಮೊಳಗೆ ಅದ್ಭುತವಾದ ಸ್ಥಿತಿಯಲ್ಲಿರುತ್ತಾರೆ, ಆದರೆ ಎಳೆಯ ಮಕ್ಕಳಂತೆ ಇರುತ್ತಾರೆ, ಬಾಹ್ಯದ ಸಂಪರ್ಕವನ್ನು ಕಳೆದುಕೊಂಡಿರುತ್ತಾರೆ.
ನೀಮ್ ಕರೋಲಿ ಬಾಬಾ ಅಂತಹ ಒಬ್ಬ ವ್ಯಕ್ತಿ, ಅವರಿಗೆ ಶೌಚಕ್ಕೆ ಹೋಗಬೇಕು ಎನ್ನುವುದರ ಪರಿವೆಯೂ ಇರಲಿಲ್ಲ. ಅವರು ಸುಮ್ಮನೆ ಕುಳಿತಿರುತ್ತಿದ್ದರು. “ನೀವು ಇಷ್ಟು ಗಂಟೆಗಳಿಂದ ಶೌಚಕ್ಕೆ ಹೋಗಿಲ್ಲ, ಈಗ ಹೋಗಬೇಕು” ಎಂದು ಯಾರಾದರೂ ಅವರಿಗೆ ಹೇಳಬೇಕಾಗಿತ್ತು. ಅವರ ಪ್ರಜ್ಞೆಯಲ್ಲಿ ಶಾರೀರಿಕ ಕಾರ್ಯಕ್ರಮಗಳು, ಲೌಕಿಕ ಚಟುವಟಿಕೆಗಳು ಸಂಪೂರ್ಣವಾಗಿ ಇಲ್ಲವಾಗಿರುತ್ತವೆ. ಅವರು ಒಂದು ಅದ್ಭುತವಾಗಿ ಸ್ಥಿತಿಯಲ್ಲಿರುತ್ತಾರೆ ಆದರೆ ಅದು ಎಷ್ಟು ಅದ್ಭುತವಾಗಿದ್ದರೂ, ನೀವು ಆ ಸ್ಥಿತಿಯಲ್ಲೇ ಇರಲಾಗುವುದಿಲ್ಲ ಏಕೆಂದರೆ ನೀವು ಭೌತಿಕ ಪ್ರಪಂಚದೊಂದಿಗೆ ಸಂಪರ್ಕವನ್ನು ಕಡಿದುಕೊಂಡರೆ, ನೀವು ಭೌತಿಕ ಶರೀರದಲ್ಲಿರುವುದಿಲ್ಲ.
ಉತ್ತಮ ಯೋಗಿಗಳು – ಗುರು ದತ್ತಾತ್ರೇಯರ ಕಥೆ
ಮೂರನೇ ಹಂತದ ಯೋಗಿಗಳು ನಿರಂತರವಾಗಿ ಪರಮಸ್ಥಿತಿಯಲ್ಲಿರುತ್ತಾರೆ, ಅದೇ ಸಮಯದಲ್ಲಿ ಅವರು ಹೊರಗಿನ ವ್ಯವಹಾರಗಳಲ್ಲೂ ಪರಿಪೂರ್ಣವಾಗಿ ತೊಡಗಿಕೊಂಡಿರುತ್ತಾರೆ. ಅದು ಎಷ್ಟರಮಟ್ಟಿಗೆ ಎಂದರೆ ಅವರು ನಿಜವಾಗಿಯೂ ಯೋಗಿಯೋ ಅಲ್ಲವೋ ಎಂಬುದು ನಿಮಗೆ ತಿಳಿಯುವುದಿಲ್ಲ. ಇದಕ್ಕೆ ಒಂದು ಉದಾಹರಣೆಯೆಂದರೆ ದತ್ತಾತ್ರೇಯರು. ಅವರೊಂದಿಗಿದ್ದ ಜನರು ಅವರನ್ನು ಶಿವ, ವಿಷ್ಣು ಮತ್ತು ಬ್ರಹ್ಮ ಮೂವರೂ ಏಕೀಭವಿಸಿದ ಅವತಾರ ಎನ್ನುತ್ತಿದ್ದರು. ಇದು ಜನರು ಅದನ್ನು ಅಭಿವ್ಯಕ್ತಿಸುವ ರೀತಿಯಾಗಿದೆ. ಏಕೆಂದರೆ ದತ್ತಾತ್ರೇಯರು ಮನುಷ್ಯರೂಪದಲ್ಲಿದ್ದರೂ, ಅವರಲ್ಲಿ ಮನುಷ್ಯನ ಯಾವ ಗುಣವೂ ಇರಲಿಲ್ಲ ಎಂಬುದನ್ನು ಜನರು ಕಂಡರು. ಅದರರ್ಥ ಅವರು ಕ್ರೂರಿಯಾಗಿದ್ದರಿಂದಲ್ಲ, ಆದರೆ ಅವರು ಖಂಡಿತ ‘ಮನುಷ್ಯ’ರಾಗಿರಲಿಲ್ಲ. ಹಾಗಾಗಿ, ಜನರು ಅಂತಹ ಗುಣಗಳನ್ನು ಕಂಡಾಗ, ಅವರು ದತ್ತಾತ್ರೇಯರನ್ನು ಶಿವ, ವಿಷ್ಣು ಮತ್ತು ಬ್ರಹ್ಮರಿಗೆ ಮಾತ್ರ ಹೋಲಿಸಲು ಸಾಧ್ಯ. ಅವರು ತ್ರಿಮೂರ್ತಿಗಳ ಅವತಾರ ಎಂದು ಜನರು ಹೇಳಿದರು.
ಆದ್ದರಿಂದ, ನೀವು ದತ್ತಾತ್ರೇಯರ ಚಿತ್ರಗಳನ್ನು ನೋಡಿದರೆ ಅದರಲ್ಲಿ ಮೂರು ಮುಖಗಳಿರುವ ವ್ಯಕ್ತಿಯನ್ನು ತೋರಿಸಲಾಗಿರುತ್ತದೆ ಏಕೆಂರೆ ಅವರು ತ್ರಿಮೂರ್ತಿಗಳ ಅವತಾರ ಎಂದು ಪರಿಗಣಿಸಲಾಗಿದೆ.
ದತ್ತಾತ್ರೇಯರು ಅತ್ಯಂತ ನಿಗೂಢ ಬದುಕನ್ನು ಬಾಳಿದರು. ಇಂದಿಗೂ, ಕೆಲವು ನೂರು ತಲೆಮಾರುಗಳ ನಂತರವೂ ದತ್ತಾತ್ರೇಯರ ಆರಾಧಕರು ಒಂದು ಶಕ್ತಿಯುತ ಪಂಗಡವಾಗಿದ್ದಾರೆ. ನೀವು ‘ಕಣಪತ’ರ ಬಗ್ಗೆ ಕೇಳಿರಬಹುದು. ಇಂದಿಗೂ ಅವರು ಕಪ್ಪು ನಾಯಿಗಳನ್ನು ತಮ್ಮೊಂದಿಗಿಟ್ಟುಕೊಂಡಿರುತ್ತಾರೆ. ದತ್ತಾತ್ರೇಯರು ನಾಯಿಯನ್ನು ಒಂದು ವಿಭಿನ್ನ ಹಂತಕ್ಕೆ ತೆಗೆದಕೊಂಡು ಹೋದರು ಮತ್ತು ಅವರು ಸಂಪೂರ್ಣವಾಗಿ ಕಡುಕಪ್ಪು ಬಣ್ಣದ ನಾಯಿಗಳನ್ನು ತಮ್ಮೊಂದಿಗಿರಿಸಿಕೊಂಡಿದ್ದರು. ಇಂದಿಗೂ, ಕಣಪತರು ಈ ದೊಡ್ಡ ನಾಯಿಗಳನ್ನು ಜೊತೆಗಿರಿಸಿಕೊಂಡಿರುತ್ತಾರೆ. ಅವರು ತಮ್ಮ ನಾಯಿಗಳನ್ನು ನಡೆಯಲು ಬಿಡುವುದಿಲ್ಲ. ಅವರು ಅವುಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಾರೆ ಏಕೆಂದರೆ ಅದು ದತ್ತಾತ್ರೇಯ ಪ್ರೀತಿಯ ಪ್ರಾಣಿ. ಹಾಗಾಗಿ, ಅವರು ಅದನ್ನು ವಿಶೇಷ ಕಾಳಜಿವಹಿಸಿ ನೋಡಿಕೊಳ್ಳುತ್ತಾರೆ. ದತ್ತಾತ್ರೇಯರು ಹಾಕಿಕೊಟ್ಟ ಪರಂಪರೆ ಇಂದಿಗೂ ಚಾಲ್ತಿಯಲ್ಲಿದೆ ಮತ್ತು ಅದು ಆಧ್ಯಾತ್ಮಿಕ ಸಾಧಕ ಅತಿದೊಡ್ಡ ಪಂಗಡವಾಗಿದೆ.
ಪರಶುರಾಮರು ಗುರುವನ್ನರಸಿ ಹೋಗುತ್ತಾರೆ.
ಪರಶುರಾಮರು ಮಹಾಭಾರತ ಕಾಲದ ಮಹಾನ್ ಯೋಧ ಋಷಿಯಾಗಿದ್ದರು. ಅನೇಕ ವಿಧಗಳಲ್ಲಿ, ಪರಶುರಾಮರು ಯುದ್ಧದಲ್ಲಿ ಭಾಗವಹಿಸದೆಯೇ ಕುರುಕ್ಷೇತ್ರ ಯುದ್ಧದ ವಿಧಿಯನ್ನು ನಿರ್ಧರಿಸಿದರು. ಅವರು ಕರ್ಣನನ್ನು ಪ್ರಾರಂಭದಲ್ಲೇ ಅಂತ್ಯಗಾಣಿಸಿದರು. ಹಾಗಾಗಿ, ಅವರಿಗೆ ಅಸಾಧಾರಣವಾದ ಸಾಮರ್ಥ್ಯಗಳಿದ್ದವು, ಆದರೆ ಅವರ ಭಾವನಾತ್ಮಕ ಚಂಚಲತೆಯು ಅವರ ಜೀವನದ ಪ್ರತಿಕ್ಷಣದಲ್ಲೂ ದೈವಿಕತೆಯನ್ನು ಗ್ರಹಿಸಲು ಅನುವು ಮಾಡಿಕೊಡಲಿಲ್ಲ. ಅವರು ಹೆಚ್ಚಿನ ಸಮಯ ಏರುಪೇರಿನ ಭಾವನಾತ್ಮಕ ಸ್ಥಿತಿಯಲ್ಲಿರುತ್ತಿದ್ದರು – ಬಹುತೇಕ ಸಮಯ ಕೆಟ್ಟ ವಾತಾವರಣ ಇರುತ್ತಿತ್ತು.
ಆದ್ದರಿಂದ, ಅವರು ಅನೇಕ ಗುರುಗಳು ಅಥವಾ ಶಿಕ್ಷಕರ ಬಳಿಗೆ ಹೋಗುತ್ತಾರೆ. ಅವರಲ್ಲಿ ತಾನು ತಿಳಿಯಬೇಕಾದದ್ದು ಇಲ್ಲವೆಂದು ತಿಳಿದ ಕೂಡಲೇ ಪರಶುರಾಮರು ತನ್ನ ಕೊಡಲಿಯಿಂದ ಆ ವ್ಯಕ್ತಿಯನ್ನು ಕತ್ತರಿಸಿಹಾಕುತ್ತಿದ್ದರು. ಕೊನೆಗೆ, ಅವರು ದತ್ತಾತ್ರೇಯರಲ್ಲಿಗೆ ಬಂದರು. “ದತ್ತಾತ್ರೇಯರೇ ನಿಮಗೆ ಉತ್ತರ” ಎಂದು ಅವರಿಗೆ ಜನರು ಹೇಳುತ್ತಿದ್ದರು. ಅವರು ದತ್ತಾತ್ರೇಯರಲ್ಲಿಗೆ ಬಂದರು, ಅವರ ಕೈಯಲ್ಲಿ ಕೊಡಲಿ ಇತ್ತು. ಅವರು ದತ್ತಾತ್ರೇಯರ ಕಡೆಗೆ ಬರುತ್ತಿದ್ದರು, ಅಲ್ಲಿ ಇತರ ಅನೇಕ ಆಧ್ಯಾತ್ಮಿಕ ಸಾಧಕರು ಸೇರಿದ್ದರು. ಅವರು ಪರಶುರಾಮರನ್ನು ನೋಡಿ ಓಡತೊಡಗಿದರು!
ಪರಶುರಾಮರು ದತ್ತಾತ್ರೇಯರ ಕುಟೀರಕ್ಕೆ ಬಂದಾಗ, ಅವರು ಅಲ್ಲಿ ಒಬ್ಬ ವ್ಯಕ್ತಿ ತನ್ನ ಒಂದು ತೊಡೆಯ ಮೇಲೆ ಒಂದು ಕುಡಿಕೆ ಮದ್ಯ ಮತ್ತು ಇನ್ನೊಂದು ತೊಡೆಯ ಮೇಲೆ ಒಬ್ಬ ಯುವತಿಯನ್ನು ಕುಳ್ಳಿರಿಸಿಕೊಂಡಿರುವುದನ್ನು ಕಂಡರು. ಪರಶುರಾಮರು ಸುಮ್ಮನೆ ನೋಡಿದರು. ದತ್ತಾತ್ರೇಯರು ಮತ್ತರಾಗಿರುವುದನ್ನು ಕಂಡರು. ಪರಶುರಾಮರು ದತ್ತಾತ್ರೇಯರನ್ನು ನೋಡಿ, ತನ್ನ ಕೊಡಲಿಯನ್ನು ಕೊನೆಯ ಬಾರಿಗೆ ಕೆಳಗಿರಿಸಿದರು ಮತ್ತು ಸಾಷ್ಟಾಂಗ ನಮಸ್ಕಾರವನ್ನು ಮಾಡಿದರು. ಎಲ್ಲರೂ ಹೊರಟುಹೋದರು. ಅವರು ಸಾಷ್ಟಾಂಗ ನಮಸ್ಕಾರ ಹಾಕಿದ ಕೂಡಲೇ ಮದ್ಯದ ಕುಡಿಕೆ ಮತ್ತು ಹೆಂಗಸು ಮಾಯವಾಯಿತು, ದತ್ತಾತ್ರೇಯರು ತನ್ನ ನಾಯಿಯೊಂದಿಗೆ ಅಲ್ಲಿ ಕುಳಿತಿದ್ದರು. ಪರಶುರಾಮರು ದತ್ತಾತ್ರೇಯರಲ್ಲಿ ಮುಕ್ತಿಯನ್ನು ಕಂಡರು.
ದತ್ತಾತ್ರೇಯರು ಅರಿವಿನ ಅತ್ಯುನ್ನತ ಸ್ಥಿತಿಯಲ್ಲಿದ್ದರೂ, ಪ್ರಪಂಚದಲ್ಲಿ ಏನು ಬೇಕಾದರೂ ಮಾಡಬಲ್ಲವರಾಗಿದ್ದರು ಮತ್ತು ಇದು ಪರಶುರಾಮರಿಗೆ ಒಂದು ನಿದರ್ಶನವಾಗಿತ್ತು, ಏಕೆಂದರೆ ಅವರೊಬ್ಬ ಅಸಾಧಾರಣ ಸಾಮರ್ಥ್ಯವುಳ್ಳ ವ್ಯಕ್ತಿಯಾಗಿದ್ದರು, ಆದರೆ ಅವರ ಸಾಮರ್ಥ್ಯ ಕೋಪದಲ್ಲಿ ಅಭಿವ್ಯಕ್ತಗೊಳ್ಳುತ್ತಿತ್ತು, ಭಾವನಾತ್ಮಕ ಅಸ್ಥಿರತೆಯ ಸ್ಥಿತಿಯಲ್ಲಿ ಯಾವಾಗಲೂ ನೇತ್ಯಾತ್ಮಕ ಅಭಿವ್ಯಕ್ತಿಯನ್ನು ಪಡೆಯುತ್ತಿತ್ತು. ಹಾಗಾಗಿ, ದತ್ತಾತ್ರೇಯರು ಒಂದು ಉಪಾಯವನ್ನು ಹೂಡಿದರು, ಮತ್ತು ಪರಶುರಾಮರು ಮದ್ಯ ಮತ್ತು ಹೆಂಗಸನ್ನು ಮೀರಿ ದತ್ತಾತ್ರೇಯರು ನಿರಂತರವಾಗಿ ದೈವಿಕತೆಯ ಸಂಪರ್ಕದಲ್ಲಿದ್ದುದನ್ನು ಕಂಡರು, ಅದು ಅವರ ಮುಕ್ತಿಯ ಕ್ಷಣವಾಯಿತು. ಅವರಿಗೆ ಆ ದೃಷ್ಟಿಕೋನ ಹಿಂದೆ ಇದ್ದಿದ್ದರೆ, ಅನೇಕ ಜನರು ಅವರ ಕೊಡಲಿಯಿಂದ ಪಾರಾಗಿರುತ್ತಿದ್ದರು!