ನಿಮ್ಮ ನಿದ್ರೆಯನ್ನು ಕಡಿಮೆ ಮಾಡಲು 10 ಆರೋಗ್ಯಕರ ಸಲಹೆಗಳು
ತಮ್ಮ ನಿದ್ರೆಯ ಅವಧಿಯನ್ನು ಕಡಿಮೆ ಮಾಡಲು ಬಯಸುವವರಿಗೆ ಸದ್ಗುರುಗಳು ಸಲಹೆಗಳನ್ನು ನೀಡುತ್ತಾ, ನಿದ್ರೆ, ಆಹಾರ ಮತ್ತು ವಿಶ್ರಾಂತಿಯ ನಡುವಿನ ಸಂಬಂಧವನ್ನಿಲ್ಲಿ ವಿವರಿಸುತ್ತಾರೆ.
# 1 ಜೀವನದೊಂದಿಗೆ ಹೋರಾಡಬೇಡಿ
ಸದ್ಗುರು: ದೇಹಕ್ಕೆ ಬೇಕಿರುವುದು ವಿಶ್ರಾಂತಿ, ನಿದ್ರೆ ಅಲ್ಲ. ಹೆಚ್ಚಿನವರ ಅನುಭವದಲ್ಲಿ, ನಿದ್ರೆ ಎಂಬುದು ಅವರಿಗೆ ತಿಳಿದಿರುವ ವಿಶ್ರಾಂತಿಯ ಆಳವಾದ ರೀತಿಯಾಗಿದೆ, ಆದ್ದರಿಂದ ಅವರು ನಿದ್ರೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಮೂಲಭೂತವಾಗಿ, ದೇಹ ಬೇಡುತ್ತಿರುವುದು ನಿದ್ರೆಯನ್ನಲ್ಲ, ಬದಲಾಗಿ ವಿಶ್ರಾಂತಿಯನ್ನು. ರಾತ್ರಿಯಲ್ಲಿ ನಿಮಗೆ ವಿಶ್ರಾಂತಿ ಸಿಗದಿದ್ದರೆ, ನಿಮ್ಮ ಬೆಳಿಗ್ಗೆಯು ಬಹಳ ಕೆಟ್ಟದಾಗಿರುತ್ತದೆ. ಆದ್ದರಿಂದ ವ್ಯತ್ಯಾಸವನ್ನುಂಟು ಮಾಡುವುದು ನಿದ್ರೆಯಲ್ಲ, ವಿಶ್ರಾಂತಿ.
ನೀವು ದಿನವಿಡೀ ನಿಮ್ಮ ದೇಹವನ್ನು ಆರಾಮವಾಗಿರಿಸಿದರೆ, ಅಂದರೆ ನಿಮ್ಮ ಕೆಲಸ, ವ್ಯಾಯಾಮ ಮತ್ತಿತರ ಎಲ್ಲ ಚಟುವಟಿಕೆಗಳು ನಿಮಗೆ ವಿಶ್ರಾಂತಿ ನೀಡುವ ರೂಪದಲ್ಲಿದ್ದರೆ, ನಿಮ್ಮ ನಿದ್ರೆಯ ಅವಧಿ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಎಲ್ಲವನ್ನು ಕಠಿಣವಾಗಿ, ಉದ್ವೇಗದಿಂದ ಮಾಡಲು ಜನರಿಗೆ ಕಲಿಸಿರುವುದೇ ಇಂದಿನ ಸಮಸ್ಯೆ. ಜನರು ಪಾರ್ಕ್-ನಲ್ಲಿ ತುಂಬಾ ಉದ್ವೇಗದಿಂದ ನಡೆದಾಡುವುದನ್ನು ನಾನು ನೋಡುತ್ತೇನೆ. ಈ ರೀತಿಯಾದ ವ್ಯಾಯಾಮವು ಸ್ವಾಸ್ಥ್ಯವನ್ನು ಉಂಟುಮಾಡುವುದಕ್ಕಿಂತ ಹೆಚ್ಚಾಗಿ ಹಾನಿಯಾನ್ನುಂಟುಮಾಡುತ್ತದೆ. ಎಲ್ಲವೂ ಒಂದು ಯುದ್ಧವೇನೋ ಎಂಬಂತೆ ವರ್ತಿಸಬೇಡಿ. ನೀವು ನಡೆದಾಡುತ್ತಿರಲಿ, ಜಾಗಿಂಗ್ ಮಾಡುತ್ತಿರಲಿ ಅಥವಾ ವ್ಯಾಯಾಮ ಮಾಡುತ್ತಿರಲಿ, ನೀವದನ್ನು ಸಲೀಸಾಗಿ, ಸಂತೋಷದಿಂದ ಮಾಡಬಾರದೇಕೆ?
ಜೀವನದೊಂದಿಗೆ ಹೋರಾಡಬೇಡಿ. ನಿಮ್ಮನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳುವುದು ಒಂದು ಯುದ್ಧವೇನಲ್ಲ. ಆಟ ಆಡಿ, ಈಜಿ, ನಡೆದಾಡಿ, ನಿಮಗೇನು ಇಷ್ಟವೋ ಅದನ್ನು ಮಾಡಿ. ನಿಮಗೆ ಕೇವಲ ಜಾಮೂನನ್ನು ತಿನ್ನುವುದು ಇಷ್ಟವಾದರೆ ಮಾತ್ರ ನಿಮಗೆ ಸಮಸ್ಯೆ ಇರುತ್ತದೆ! ಇಲ್ಲದಿದ್ದರೆ, ಯಾವುದೇ ಚಟುವಟಿಕೆ ಮಾಡುವಾಗ ಆರಾಮದಿಂದ ಇರುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ.
# 2 ಯೋಗಾಭ್ಯಾಸಗಳು - ಶಾಂಭವಿ ಮಹಾಮುದ್ರ
ನಿಮ್ಮ ಜೀವನದಲ್ಲಿ ಶಾಂಭವಿ ಮಹಾಮುದ್ರದಂತಹ ಕೆಲ ಯೋಗಾಭ್ಯಾಸಗಳನ್ನು ಅಳವಡಿಸಿಕೊಂಡರೆ, ನೀವು ನೋಡುವ ಮೊದಲ ಬದಲಾವಣೆಗಳಲ್ಲಿ ಒಂದು ನಿಮ್ಮ ನಾಡಿ ಬಡಿತದಲ್ಲಿರುತ್ತದೆ. ಉದಾಹರಣೆಗೆ, ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮವನ್ನು ಮುಗಿಸಿ ಶಾಂಭವಿಯನ್ನು ಆರಂಭಿಸಿರುವ ಯಾರಾದರೂ ಊಟದ ಮೊದಲು ಮತ್ತು ನಂತರ ತಮ್ಮ ನಾಡಿ ಬಡಿತವನ್ನು ಪರೀಕ್ಷಿಸಿಕೊಳ್ಳಲಿ. ನಂತರ ಆರು ವಾರಗಳವರೆಗೆ ಶಾಂಭವಿಯನ್ನು ದಿನಕ್ಕೆ ಎರಡು ಬಾರಿ ಅಭ್ಯಾಸ ಮಾಡಿದ ಬಳಿಕ ತಮ್ಮ ನಾಡಿ ಬಡಿತವನ್ನು ಮತ್ತೆ ಪರಿಶೀಲಿಸಿದರೆ, ಅದು ಎಂಟರಿಂದ ಹದಿನೈದರಷ್ಟು ಕಡಿಮೆಯಾಗಿರುತ್ತದೆ. ನೀವು ಶಾಂಭವಿ ಕ್ರಿಯೆಯಲ್ಲಿ ನಿಜವಾಗಿಯೂ ವಿಶ್ರಾಂತಿಗೆ ಆಳವಾಗಿ ಮುಳಗಿದರೆ, ನಾಡಿ ಬಡಿತವು ಮತ್ತಷ್ಟು ಕಡಿಮೆಯಾಗುತ್ತದೆ.
12 ರಿಂದ 18 ತಿಂಗಳ ಅಭ್ಯಾಸದೊಂದಿಗೆ, ವಿಶ್ರಾಂತಿಯ ಸ್ಥಿತಿಯಲ್ಲಿ ನಿಮ್ಮ ನಾಡಿ ಬಡಿತವನ್ನು ಸುಮಾರು ಐವತ್ತು ಅಥವಾ ಅರವತ್ತರವರೆಗೆ ತರಬಹುದು. ಹೀಗಾದರೆ, ನಿಮ್ಮ ನಿದ್ರೆಯ ಅವಧಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಏಕೆಂದರೆ ದೇಹವು ಸಾಮಾನ್ಯವಾಗಿ ದಿನವಿಡೀ ವಿಶ್ರಾಂತಿಯಿಂದಲೇ ಇರುತ್ತದೆ. ನೀವು ಯಾವುದೇ ಚಟುವಟಿಕೆಯನ್ನು ಮಾಡುತ್ತಿದ್ದರೂ, ಅದು ಆರಾಮವಾಗಿರುತ್ತದೆ, ಆದ್ದರಿಂದ ಹೆಚ್ಚು ನಿದ್ರೆಯನ್ನದು ಕೇಳುವುದಿಲ್ಲ.
# 3 ಯೋಗಾಭ್ಯಾಸಗಳು - ಶೂನ್ಯ ಧ್ಯಾನ
ನಾವು ಕಲಿಸುವ, ಶೂನ್ಯ ಎಂದು ಕರೆಯಲಾಗುವ ಒಂದು ಧ್ಯಾನವಿದೆ. ದಕ್ಷಿಣ ಭಾರತ ಮತ್ತು ಅಮೇರಿಕಾದ ಈಶ ಕೇಂದ್ರಗಳಲ್ಲಿ ಮಾತ್ರ ನಾವು ನಡೆಸುವ ಕಾರ್ಯಕ್ರಮದಲ್ಲಿ ಇದನ್ನು ಕಲಿಸಲಾಗುತ್ತದೆ. ನಾವದನ್ನು ಬೇರೆಡೆ ಕಲಿಸುವುದಿಲ್ಲ ಏಕೆಂದರೆ ಇದಕ್ಕೆ ನಿರ್ದಿಷ್ಟವಾದ ವಾತಾವರಣ, ತರಬೇತಿ ಮತ್ತು ಇತರ ಪ್ರಕ್ರಿಯೆಗಳು ಬೇಕಾಗುತ್ತವೆ. ಶೂನ್ಯ ನಿಮ್ಮ ನಿದ್ರೆಯ ಅವಧಿಯನ್ನು ಗಮನಾರ್ಹವಾಗಿ ತಗ್ಗಿಸಬಹುದು. ಇದು ಕೇವಲ ಹದಿನೈದು ನಿಮಿಷಗಳ ಧ್ಯಾನ. ನೀವು ಈ ಧ್ಯಾನ ಪ್ರಕ್ರಿಯೆಯನ್ನು ಸರಿಯಾಗಿ ಮಾಡಿದರೆ, ನಿಮ್ಮ ಮೆಟಬಾಲಿಸಮ್ ಇಪ್ಪತ್ನಾಲ್ಕು ಪ್ರತಿಶತದವರೆಗೆ ಇಳಿಯುತ್ತದೆ ಎಂಬುದನ್ನು ನೀವು ನೋಡುತ್ತೀರಿ. ಧ್ಯಾನದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ, ಇಪ್ಪತ್ನಾಲ್ಕು ಪ್ರತಿಶತದಷ್ಟೇ ಕಡಿಮೆಯಾಗಬಹುದು. ನೀವು ಅದನ್ನು ಮೀರಿ ಹೋದರೆ, ನಿಮಗೆ ಪ್ರಜ್ಞೆಯಿರುವುದಿಲ್ಲ. ಒಂದು ಹಂತದವರೆಗೆ ವಿಶ್ರಾಂತಿಯಿಂದಿದ್ದು, ನಂತರ ಪ್ರಜ್ಞಾಪೂರ್ವಕವಾಗಿ ಹೊರಬರಲು, ನೀವು ಇಪ್ಪತ್ನಾಲ್ಕು ಪ್ರತಿಶತವನ್ನು ಮೀರಿ ಹೋಗಲು ಸಾಧ್ಯವಿಲ್ಲ.
ಈ ಹದಿನೈದು ನಿಮಿಷಗಳ ಧ್ಯಾನವು ವಿಶ್ರಾಂತಿಯ ದೃಷ್ಟಿಯಿಂದ ಎರಡು ಮೂರು ಗಂಟೆಗಳ ನಿದ್ರೆಗೆ ಸಮಾನವಾಗಿರುತ್ತದೆ ಎಂದು ನೀವು ನೋಡಬಹುದು. ದೇಹದಲ್ಲಿ ಇಂತಹ ತೀವ್ರವಾದ ದೈಹಿಕ ಬದಲಾವಣೆಗಳು ಇರುವುದರಿಂದ, ವಿಶೇಷವಾಗಿ ನಿಮ್ಮ ರಕ್ತದ ಮಟ್ಟದಲ್ಲಿ, ಮಹತ್ತರವಾದ ವಿಷಯಗಳು ಬದಲಾಗುತ್ತವೆ - ಅದಕ್ಕಾಗಿಯೇ ಇದನ್ನು ಬಹಳ ನಿಯಂತ್ರಿತ, ಕೇಂದ್ರೀಕೃತ ಪರಿಸ್ಥಿತಿಗಳಲ್ಲಿ ಕಲಿಸಬೇಕಾಗುತ್ತದೆ.
# 4 ನಿಮ್ಮ ಆಹಾರದಲ್ಲಿ ನೈಸರ್ಗಿಕ ಆಹಾರವನ್ನು ಅಳವಡಿಸಿಕೊಳ್ಳಿ
ನೀವು ದಿನಕ್ಕೆ ಎಂಟು ಅಥವಾ ಒಂಬತ್ತು ಗಂಟೆಗಳ ಕಾಲ ನಿದ್ದೆ ಮಾಡುತ್ತಿದ್ದರೆ, ನೀವು ಗಮನಹರಿಸಬೇಕಾದ ಒಂದು ವಿಷಯವೆಂದರೆ ಆಹಾರ. ನಿಮ್ಮ ಸಾಮಾನ್ಯ ಸ್ವಾಸ್ಥ್ಯಕ್ಕಾಗಿ ನೀವು ಕನಿಷ್ಠ ಒಂದು ನಿರ್ದಿಷ್ಟ ಪ್ರಮಾಣದ ಸಸ್ಯಾಹಾರಿ ಆಹಾರ, ವಿಶೇಷವಾಗಿ ನೈಸರ್ಗಿಕ, ಬೇಯಿಸದ ಸ್ಥಿತಿಯಲ್ಲಿ ತಿನ್ನಬಹುದಾದ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ನೀವು ಆಹಾರವನ್ನು ಬೇಯಿಸಿದಾಗ, ದೊಡ್ಡ ಪ್ರಮಾಣದಲ್ಲಿ ಅದರಲ್ಲಿನ ಪ್ರಾಣ ಅಥವಾ ಜೀವಶಕ್ತಿಯು ನಾಶವಾಗುತ್ತದೆ. ಆಲಸ್ಯವು ದೇಹಕ್ಕೆ ಸೇರಿಕೊಳ್ಳಲು ಇದು ಒಂದು ಕಾರಣ. ನೀವು ಒಂದು ನಿರ್ದಿಷ್ಟ ಪ್ರಮಾಣದ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿದರೆ, ಅನೇಕ ಪ್ರಯೋಜನಗಳಿವೆ, ಆದರೆ ನೀವು ತಕ್ಷಣ ಗಮನಿಸುವ ಒಂದು ವಿಷಯವೆಂದರೆ ನಿಮ್ಮ ನಿದ್ರೆಯ ಅವಧಿಯು ಕಡಿಮೆಯಾಗುತ್ತದೆ.
# 5 ಒಲೆಯಿಂದ ಬೇಗ ತಟ್ಟೆಗೆ ಹಾಕಿ
ಭಾರತೀಯ ಸಂಸ್ಕೃತಿಯಲ್ಲಿ, ಸಾಂಪ್ರದಾಯಿಕವಾಗಿ ಯಾವುದೇ ಬೇಯಿಸಿದ ಆಹಾರವನ್ನು 1.5 ರಿಂದ 2 ಗಂಟೆಗಳ ಒಳಗೆ ತಿನ್ನಬೇಕು ಎಂದು ಹೇಳಲಾಗುತ್ತದೆ. ಬೇಯಿಸಿದ ಆಹಾರವನ್ನು ದೀರ್ಘಕಾಲದವರೆಗೆ ಫ್ರಿಜ್ನಲ್ಲಿ ಇಟ್ಟು, ನಂತರ ಅದನ್ನು ತಿನ್ನುವುದು ನಿಮ್ಮ ನಿದ್ರೆಯ ಅವಧಿಯನ್ನು ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಇನ್ನೂ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸಿದ್ಧ ಆಹಾರಕ್ಕೂ (canned food) ಇದು ಅನ್ವಯಿಸುತ್ತದೆ. "ತಮಸ್ಸು" ಎನ್ನುವುದೊಂದಿದೆ, ಇದರ ಅರ್ಥ "ಜಡತ್ವ" ಎಂದು. ಈ ರೀತಿ ಇಟ್ಟ ಆಹಾರದಲ್ಲಿ ಬಹಳ ’ತಮಸ್ಸು’ ಇರುತ್ತದೆ, ಅದು ನಿಮ್ಮ ಮಾನಸಿಕ ಚುರುಕುತನ ಮತ್ತು ಜಾಗೃತಿಯನ್ನು ಕಡಿಮೆ ಮಾಡುತ್ತದೆ.
style type="text/css">.embed-container { position: relative; padding-bottom: 56.25%; height: 0; overflow: hidden; max-width: 100%; } .embed-container iframe, .embed-container object, .embed-container embed{ position: absolute; top: 0; left: 0; width: 100%; height: 100%; }
# 6 ಎಷ್ಟು ತಿನ್ನಬೇಕು
ನಿಮ್ಮ ಪ್ರಾಣಶಕ್ತಿಯನ್ನು ನೀವು ಎಷ್ಟು ಉತ್ಸಾಹದಿಂದ ನಿರ್ವಹಿಸುತ್ತೀರಿ ಎಂಬುದು ನಿಮ್ಮ ಚುರುಕುತನವನ್ನು ನಿರ್ಧರಿಸುತ್ತದೆ. ಧ್ಯಾನ ಮಾಡಲು, ಚುರುಕುತನವು ಮನಸ್ಸಿನಲ್ಲಿ ಮಾತ್ರವಲ್ಲದೆ ನಿಮ್ಮ ಪ್ರಾಣಶಕ್ತಿಯಲ್ಲೂ ಇರಬೇಕು. ಇದಕ್ಕೆ ಸಹಾಯ ಮಾಡಲು, ಯೋಗದ ಪಥದಲ್ಲಿರುವ ಜನರಿಗೆ, ಕೇವಲ ಇಪ್ಪತ್ನಾಲ್ಕು ತುತ್ತುಗಳಷ್ಟು ಮಾತ್ರ ತಿನ್ನಬೇಕು ಮತ್ತು ತಿನ್ನುವ ಪ್ರತಿ ತುತ್ತನ್ನೂ ಕನಿಷ್ಠ ಇಪ್ಪತ್ನಾಲ್ಕು ಬಾರಿ ಅಗಿಯಬೇಕು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಆಹಾರ ಒಳಗೆ ಹೋಗುವ ಮೊದಲೆ ನಿಮ್ಮ ಬಾಯಿಯಲ್ಲಿ ಜೀರ್ಣವಾಗುವುದನ್ನು ಖಚಿತಪಡಿಸುತ್ತದೆ, ಮತ್ತು ಹೀಗಾದಾಗ, ಅದು ಆಲಸ್ಯಕ್ಕೆ ಕಾರಣವಾಗುವುದಿಲ್ಲ.
ಸಂಜೆ ಊಟದ ಹೊತ್ತಿನಲ್ಲಿ ನೀವಿದನ್ನು ಮಾಡಿದರೆ, ನಿಮಗೆ ಬೆಳಿಗ್ಗೆ 3:30-ಕ್ಕೆ ಸುಲಭವಾಗಿ ಎಚ್ಚರವಾಗುತ್ತದೆ. ಯೋಗ ಪದ್ಧತಿಯಲ್ಲಿ ಈ ಅವಧಿಯನ್ನು ಬ್ರಹ್ಮ ಮುಹೂರ್ತ ಎನ್ನಲಾಗುತ್ತದೆ. ನಿಮ್ಮ ಸಾಧನೆಗೆ ಆ ಸಮಯದಲ್ಲಿ ಪ್ರಕೃತಿಯಿಂದ ಹೆಚ್ಚುವರಿ ಬೆಂಬಲ ಇರುವುದರಿಂದ ಯೋಗಾಭ್ಯಾಸ ಮಾಡಲು ಇದು ಸೂಕ್ತವಾದ ಸಮಯ.
# 7 ಬಲವಂತವಾಗಿ ನಿದ್ರೆಗೆಡಬೇಡಿ
ನಿಮ್ಮ ದೇಹಕ್ಕೆ ಎಷ್ಟು ನಿದ್ರೆ ಬೇಕು ಎಂಬುದು ನೀವು ಮಾಡುವ ದೈಹಿಕ ಚಟುವಟಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ. ಆಹಾರ ಅಥವಾ ನಿದ್ರೆಯ ಪ್ರಮಾಣವನ್ನು ಸರಿಪಡಿಸುವ ಅಗತ್ಯವಿಲ್ಲ. ನಿಮ್ಮ ಚಟುವಟಿಕೆಯ ಮಟ್ಟಗಳು ಕಡಿಮೆಯಾದಾಗ, ನೀವು ಕಡಿಮೆ ತಿನ್ನುತ್ತೀರಿ. ಅವು ಅಧಿಕವಾಗಿದ್ದಾಗ, ನೀವು ಹೆಚ್ಚು ತಿನ್ನಬಹುದು. ಅದೇ ನಿದ್ರೆಗೂ ಅನ್ವಯಿಸುತ್ತದೆ. ದೇಹಕ್ಕೆ ಚೆನ್ನಾಗಿ ವಿಶ್ರಾಂತಿ ಸಿಕ್ಕಾಕ್ಷಣ ಅದು ಎಚ್ಚರಗೊಳ್ಳುತ್ತದೆ, ಅದು ಬೆಳಿಗ್ಗಿನ 3 ಗಂಟೆಯಾಗಿರಲಿ ಅಥವಾ 8 ಗಂಟೆಯಾಗಿರಲಿ. ನಿಮ್ಮ ದೇಹವು ಅಲಾರ್ಮ್-ಗೆ ಎಚ್ಚರಗೊಳ್ಳಬಾರದು. ಅದಕ್ಕೆ ಸಾಕಷ್ಟು ವಿಶ್ರಾಂತಿ ಸಿಕ್ಕಿದೆ ಎಂದೆನಿಸಿದರೆ, ಅದಕ್ಕೆ ಎಚ್ಚರವಾಗಬೇಕು.
ನೀವು ಬಲವಂತವಾಗಿ ನಿದ್ದೆಗೆಟ್ಟರೆ, ನಿಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳು ಕಡಿಮೆಯಾಗುತ್ತದೆ. ನೀವು ಅದನ್ನು ಎಂದಿಗೂ ಮಾಡಬಾರದು. ದೇಹಕ್ಕೆ ಎಷ್ಟು ನಿದ್ರೆ ಬೇಕೋ, ಅಷ್ಟನ್ನು ನೀವು ನೀಡಬೇಕು.
ಆದರೆ ದೇಹವು ಹಾಸಿಗೆಯನ್ನು ಗೋರಿಯಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅದು ಎದ್ದೇಳಲು ಬಯಸುವುದಿಲ್ಲ. ಯಾರಾದರೂ ನಿಮ್ಮನ್ನು ಸಾವಿನಿಂದ ಬಡಿದು ಎಬ್ಬಿಸಬೇಕಾಗುತ್ತದೆ! ಇದು ನಿಮ್ಮ ಜೀವನವನ್ನು ನೀವು ಹೇಗೆ ನಿರ್ವಹಿಸುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನೀವು ಜೀವನದಿಂದ ದೂರವಾಗಬೇಕೆಂಬ ಮಾನಸಿಕ ಸ್ಥಿತಿಯಲ್ಲಿದ್ದರೆ, ನೀವು ಸ್ವಾಭಾವಿಕವಾಗಿ ಹೆಚ್ಚು ತಿನ್ನುವ ಮತ್ತು ಹೆಚ್ಚು ಮಲಗುವುದರ ಕಡೆಗೆ ಒಲವು ತೋರುತ್ತೀರಿ.
# 8 ತಿಂದ ತಕ್ಷಣ ನಿದ್ರೆ ಮಾಡಬೇಡಿ
ಕೆಲವರು ಎಂತಹ ಮಾನಸಿಕ ಸ್ಥಿತಿಯಲ್ಲಿರುತ್ತಾರೆಂದರೆ, ಹೊಟ್ಟೆ ಬಿರಿಯುವಷ್ಟು ತಿಂದು ತಮ್ಮ ದೇಹವನ್ನು ಜಡಗೊಳಿಸದ ಹೊರತು ಅವರಿಗೆ ಮಲಗಲು ಸಾಧ್ಯವಿರುವುದಿಲ್ಲ. ನೀವು ನಿದ್ದೆ ಮಾಡುವ ಮೊದಲು, ಜೀರ್ಣಕ್ರಿಯೆ ನಡೆಯಲು ಸಾಕಷ್ಟು ಸಮಯವನ್ನು ನೀಡಬೇಕು. ತಿಂದ ಎರಡು ಗಂಟೆಗಳೊಳಗೆ ನೀವು ನಿದ್ರಿಸಿದರೆ, ನೀವು ತಿಂದ 80% ನಷ್ಟು ಆಹಾರ ವ್ಯರ್ಥವಾಗುತ್ತದೆ. ಹೊಟ್ಟೆ ಸಂಪೂರ್ಣವಾಗಿ ತುಂಬಿರದ ಹೊರತು ನಿಮಗೆ ಮಲಗಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರೆ, ನೀವು ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಇದಿರುವುದು ನಿದ್ರೆಯ ಬಗ್ಗೆ ಅಲ್ಲ, ಇದೊಂದು ರೀತಿಯ ಮಾನಸಿಕ ಅವ್ಯವಸ್ಥೆ.
style type="text/css">.embed-container { position: relative; padding-bottom: 56.25%; height: 0; overflow: hidden; max-width: 100%; } .embed-container iframe, .embed-container object, .embed-container embed{ position: absolute; top: 0; left: 0; width: 100%; height: 100%; }
# 9 ನಿದ್ರೆ ಮಾಡಲು ಸರಿಯಾದ ಭಂಗಿ
ದೇಹವು ಅಡ್ಡಡ್ಡವಾಗಿದ್ದಾಗ, ನಿಮ್ಮ ನಾಡಿ ಬಡಿತ ಇಳಿಯುವುದನ್ನು ನೀವು ತಕ್ಷಣವೇ ಗಮನಿಸಬಹುದು. ದೇಹವು ಈ ಹೊಂದಾಣಿಕೆ ಮಾಡಿಕೊಳ್ಳುತ್ತದೆ, ಏಕೆಂದರೆ ರಕ್ತವನ್ನು ಅದೇ ಶಕ್ತಿಯಿಂದ ಪಂಪ್ ಮಾಡಿದರೆ, ನಿಮ್ಮ ತಲೆಗೆ ಹೆಚ್ಚು ರಕ್ತ ಹೋಗಿ ಹಾನಿಯುಂಟಾಗುತ್ತದೆ. ದೇಹದ ಕೆಳಭಾಗಕ್ಕೆ ಹೋಲಿಸಿದಲ್ಲಿ ದೇಹದ ಮೇಲ್ಭಾಕ್ಕೆ ಹೋದಂತೆಲ್ಲ ರಕ್ತನಾಳಗಳು ಹೆಚ್ಚು ಸೂಕ್ಷ್ಮವಾಗುತ್ತವೆ. ಮೆದುಳಿನಲ್ಲಿ ರಕ್ತನಾಳಗಳು ಬಹುತೇಕ ಕೂದಲಿನಂತಿರುತ್ತದೆ; ಎಷ್ಟರ ಮಟ್ಟಿಗೆಂದರೆ, ಅವುಗಳು ಹೆಚ್ಚುವರಿಯಾಗಿ ಒಂದು ರಕ್ತದ ಹನಿಯನ್ನೂ ತೆಗೆದುಕೊಳ್ಳಲು ಸಾಧ್ಯವಿರುವುದಿಲ್ಲ.
ನೀವು ನಿದ್ದೆ ಮಾಡುವಾಗ, ನಿಮ್ಮ ತಲೆಯನ್ನು ಉತ್ತರದ ಕಡೆಗೆ ಇರಿಸಿ, 5 ರಿಂದ 6 ಗಂಟೆಗಳ ಕಾಲ ಹಾಗೆಯೇ ಇದ್ದರೆ, ಭೂಮಿಯ ಆಯಸ್ಕಾಂತೀಯ ಸೆಳೆತವು ನಿಮ್ಮ ಮೆದುಳಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಏಕೆಂದರೆ ನಿಮ್ಮ ರಕ್ತದಲ್ಲಿ ಕಬ್ಬಿಣವು ಒಂದು ಪ್ರಮುಖ ಅಂಶವಾಗಿದೆ. ನೀವು ಈ ರೀತಿ ಮಲಗಿದರೆ ಸಾಯುತ್ತೀರಿ ಎಂದಲ್ಲ. ಆದರೆ ನೀವು ಇದನ್ನು ಪ್ರತಿದಿನ ಮಾಡಿದರೆ, ತೊಂದರೆಯನ್ನು ನೀವೇ ಬರಮಾಡಿಕೊಳ್ಳುತ್ತಿದ್ದೀರಿ. ನೀವು ನಿರ್ದಿಷ್ಟ ವಯಸ್ಸನ್ನು ಮೀರಿದ್ದರೆ ಮತ್ತು ನಿಮ್ಮ ರಕ್ತನಾಳಗಳು ದುರ್ಬಲವಾಗಿದ್ದರೆ, ಅದು ರಕ್ತಸ್ರಾವ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ನಿಮ್ಮ ಜೀವವ್ಯವಸ್ಥೆ ಗಟ್ಟಿಮುಟ್ಟಾಗಿದ್ದರೆ, ಮೆದುಳಿನಲ್ಲಿ ಬೇಕಿರುವುದಕ್ಕಿಂತ ಹೆಚ್ಚು ರಕ್ತಪರಿಚಲನೆ ಇರುವ ಕಾರಣ ನೀವು ಚೆನ್ನಾಗಿ ನಿದ್ರೆ ಮಾಡದೇ ಇರಬಹುದು.
ನೀವು ಉತ್ತರ ಗೋಳಾರ್ಧದಲ್ಲಿದ್ದರೆ, ನಿದ್ದೆ ಮಾಡುವಾಗ ನೀವು ಪೂರ್ವ ದಿಕ್ಕಿಗೆ ತಲೆ ಹಾಕುವುದು ಅತ್ಯುತ್ತಮ. ಈಶಾನ್ಯವಾದರೂ ಸರಿ; ಪಶ್ಚಿಮವಾದರೂ ಸರಿ. ಬೇರೆ ದಾರಿಯಿಲ್ಲವೆಂದರೆ ದಕ್ಷಿಣ. ಉತ್ತರ ದಿಕ್ಕಿಗೆ, ಬೇಡವೇ ಬೇಡ. ದಕ್ಷಿಣ ಗೋಳಾರ್ಧದಲ್ಲಿ, ನಿಮ್ಮ ತಲೆಯನ್ನು ದಕ್ಷಿಣಕ್ಕೆ ಹಾಕಿ ಮಲಗಬೇಡಿ.
# 10 ನಿಮ್ಮ ಜೀವವ್ಯವಸ್ಥೆಯನ್ನು ಶುದ್ಧವಾಗಿರಿಸಿಕೊಳ್ಳಿ
ಮನುಷ್ಯನ ಸ್ವಭಾವವು ಎಂತಹುದೆಂದರೆ, ಪ್ರತಿಯೊಂದು ಜೀವಿಯೂ ತಾನಿರುವ ಪರಿಸ್ಥಿತಗಳಿಗೆ ಹೊಂದಿಕೊಂಡರೆ, ಮನುಷ್ಯನಿಗೆ ತಾನು ಬಯಸಿದ ಪರಿಸ್ಥಿತಿಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಅದುವೇ ನಮ್ಮನ್ನು ವಿಶಿಷ್ಟರಾಗಿಸುವುದು. ನಿಮ್ಮ ಬಗ್ಗೆ ನಿಮಗೆ ಯಾವುದೇ ರೀತಿಯ ಕಾಳಜಿ ಇದ್ದರೆ, ನಿಮ್ಮ ಜೀವವ್ಯವಸ್ಥೆಗೆ ಏನಾಗುತ್ತದೆ ಎಂಬುದರ ಬಗ್ಗೆ ನೀವು ಜಾಗೃತರಾಗಿರಬೇಕು.
ಪ್ರಶ್ನೆ ನೀವು ಎಷ್ಟು ದಿನ ಬದುಕಿರುತ್ತೀರಿ ಎನ್ನುವುದಲ್ಲ ಆದರೆ ನೀವು ಎಷ್ಟು ಚೆನ್ನಾಗಿ ಬದುಕುತ್ತೀರಿ ಎಂದು. ನೀವು ಏನು ಕೇಳುತ್ತೀರಿ, ಏನು ಹೇಳುತ್ತೀರಿ, ಹೇಗೆ ತಿನ್ನುತ್ತೀರಿ - ಈ ವಿಷಯಗಳನ್ನು ಯೋಗದಲ್ಲಿ ಅಭ್ಯಾಸ ಮಾಡಲಾಗುತ್ತದೆ ಏಕೆಂದರೆ ಪರಿಸರ, ನಮ್ಮ ಮಾತು, ನಮ್ಮ ಮನಸ್ಸು ಮತ್ತು ದೇಹವನ್ನು ಶುದ್ಧವಾಗಿರಿಸುವುದರ ಮೂಲಕ, ನಿಮ್ಮ ಇರುವಿಕೆಗೆ ಒಂದು ನಿರ್ದಿಷ್ಟ ಸ್ವಾತಂತ್ರ್ಯ, ಬುದ್ಧಿವಂತಿಕೆ ಮತ್ತು ಆನಂದವಿರುತ್ತದೆ.
ನಾನು ನಿಮಗೊಂದು ಜೋಕ್ ಹೇಳುತ್ತೇನೆ. ಇಬ್ಬರು ಪ್ರೆಸ್ಬಿಟೇರಿಯನ್ ಸನ್ಯಾಸಿನಿಯರು ಮೊಂಟಾನಾ ಗ್ರಾಮಾಂತರದಲ್ಲಿ ವಾಹನದಲ್ಲಿ ಹೋಗುತ್ತಿರುವಾಗ ವಾಹದಲ್ಲಿ ಪೆಟ್ರೋಲ್ ಖಾಲಿಯಾಯಿತು. ಹಾಗಾಗಿ ಅವರು ಐದು ಮೈಲಿ ದೂರದಲ್ಲಿದ್ದ ಜಮೀನಿಗೆ ನಡೆದುಕೊಂಡು ಹೋದರು. ಅವರು ಅಲ್ಲಿದ ರೈತನನ್ನು ನೋಡಿ, "ನಮಗೆ ಸ್ವಲ್ಪ ಪೆಟ್ರೋಲ್ ಬೇಕು" ಎಂದು ಕೇಳಿದರು. ಅವನೋ, ಕುಡಿದ ಅಮಲಿನಲ್ಲಿದ್ದ. "ನನ್ನ ಟ್ರ್ಯಾಕ್ಟರ್ನಿಂದ ಪೆಟ್ರೋಲ್ ತೆಗೆದುಕೊಳ್ಳಿ" ಎಂದನು. ಇವರು ಟ್ರ್ಯಾಕ್ಟರ್ಗೆ ಹೋದರು, ಆದರೆ ಅವರಿಗೆ ಕ್ಯಾನ್ ಇರಲಿಲ್ಲ. ಆಗ ಅಲ್ಲಿ ಅವರಿಗೊಂದು ಹಳೆಯ ಚೇಂಬರ್ ಪಾಟ್ ನೋಡಿದರು. ಅವರು ಟ್ರ್ಯಾಕ್ಟರ್ನಿಂದ ಪೆಟ್ರೋಲನ್ನು ಚೇಂಬರ್ ಪಾಟ್-ಗೆ ಹಾಕಿ ಅದನ್ನು ಕಾರಿಗೆ ಕೊಂಡೊಯ್ದು ಅದನ್ನು ನಿಧಾನವಾಗಿ ಕಾರಿಗೆ ಹಾಕುತ್ತಿದ್ದರು. ಅದೇ ದಾರಿಯಲ್ಲಿ ಬ್ಯಾಪ್ಟಿಸ್ಟ್ ಪಾದ್ರಿಯೊಬ್ಬರು ಹಾದುಹೋಗುತ್ತಿದ್ದರು. ಈ ಸನ್ಯಾಸಿನಿಯರು ಚೇಂಬರ್ ಪಾಟ್-ನಿಂದ ಟ್ಯಾಂಕ್ಗೆ ಏನೋ ಸುರಿಯುವುದನ್ನು ಅವರು ನೋಡಿದರು. ಮುಂದೆ ಹೋಗುತ್ತಿದ್ದವರು ನಿಂತು, ಹಿಂದೆ ಬಂದು, “ಸಹೋದರಿಯರೇ, ನಾನು ನಿಮ್ಮ ನಂಬಿಕೆಯನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ, ಆದರೆ ನನ್ನನ್ನು ನಂಬಿರಿ, ಅದು ಹಾಗೆ ಕೆಲಸ ಮಾಡುವುದಿಲ್ಲ” ಎಂದು ಹೇಳಿದರು.
ನೀವು ಇಲ್ಲಿ ಅಲ್ಲಿ ಕೆಲವು ವಿಷಯಗಳನ್ನು ತೆಗೆದುಕೊಂಡು ಅದನ್ನು ನಿಮ್ಮ ಜೀವವ್ಯವಸ್ಥೆಗೆ ಸೇರಿಸಿದರೆ, ಅದು ಅಷ್ಟೇನೂ ಒಳ್ಳೆಯದಲ್ಲ.
ಸಂಪಾದಕರ ಟಿಪ್ಪಣಿ: ""ಫುಡ್ ಬಾಡಿ"" ಪುಸ್ತಕವು ಯಾವ್ಯಾವ ಆಹಾರಗಳು ದೇಹಕ್ಕೆ ಹೆಚ್ಚು ಆರಾಮದಾಯಕವಾದುದು ಎಂದು ನೋಡುತ್ತದೆ ಮತ್ತು ಅಂತಹ ಆಹಾರವನ್ನು ಸೇವಿಸುವ ಅತ್ಯಂತ ಸೂಕ್ತವಾದ ವಿಧಾನಗಳನ್ನು ಪರಿಶೋಧಿಸುತ್ತದೆ. 33 ಪುಟಗಳ ಕಿರುಪುಸ್ತಕವು ನಿಮ್ಮ ದೇಹವನ್ನು ಸರಿಹೊಂದಿಸಲು ಮತ್ತು ನಿಮಗೆ ಯಾವ ಆಹಾರ ಸೂಕ್ತವಾಗಿದೆ ಎಂಬುದನ್ನು ಕಂಡುಹಿಡಿಯಲು ಮೊದಲ ಹೆಜ್ಜೆಯಾಗಿದೆ. The book is available on a “name your price” basis. Pay as you wish or click “Claim for Free”.