ಒಂದು ಝೆನ್ ಕಥೆ : ಎಮ್ಮೆಯ ಬಾಲ
ತಮ್ಮ ಝೆನ್ ಗುರುಗಳ ಬಳಿ ಒಂದು ಕಥೆ ಹೇಳುವಂತೆ ಕಾತರದಿಂದ ಕೂಡಿದ ಶಿಷ್ಯರು ವಿನಂತಿಸಿಕೊಂಡರು. ಗುರುಗಳು ಹೇಳಿದ ಕಥೆಯನ್ನವರು ಗಮನವಿಟ್ಟು ಕೇಳುತ್ತಿದ್ದರು, ಏಕೆಂದರೆ ಕಥೆಯ ಕೊನೆಯಲ್ಲಿ ಪ್ರಶ್ನೆಯೊಂದು ಕಾದಿತ್ತು. ಆದರೆ ಕಥೆಯ ಅಂತ್ಯ ಏಕೋ ಅವರಿಗೆ ಸರಿಕಾಣಲಿಲ್ಲ. ಸದ್ಗುರುಗಳು ಅದರ ಹಿಂದೆ ಅಡಗಿರುವ ಸಂದೇಶವನ್ನು ಇಲ್ಲಿ ಬಿಚ್ಚಿಡುತ್ತಾರೆ.
ಕಥೆ: ಒಂದು ದಿನ ಶಿಷ್ಯಂದಿರೆಲ್ಲಾ ತಮ್ಮ ಝೆನ್ ಗುರುಗಳ ಸುತ್ತ ಕುಳಿತಿದ್ದರು. ಅವರಲ್ಲೊಬ್ಬ ಶಿಷ್ಯ "ಹೇ ಗುರುದೇವ! ದಯವಿಟ್ಟು ಇಂದು ನಮಗೊಂದು ಕಥೆಯನ್ನು ಹೇಳಿ!" ಎಂದು ಕೇಳಿಕೊಂಡನು.
ಅದಕ್ಕೆ ಗುರುಗಳು, "ಸರಿ, ಖಂಡಿತವಾಗಿಯೂ ಹೇಳುತ್ತೇನೆ, ಆದರೆ ಅದರ ಕೊನೆಯಲ್ಲಿ ನಾನೊಂದು ಪ್ರಶ್ನೆಯನ್ನು ಕೇಳುತ್ತೇನೆ." ಎಂದರು.
ಕಥೆಯನ್ನು ಕೇಳುವ ಉತ್ಸಾಹದಲ್ಲಿದ್ದ ಶಿಷ್ಯಂದಿರು "ಸರಿ! ನಾವು ತಯಾರಿದ್ದೇವೆ." ಎಂದು ಹೇಳಿದರು.
ಗುರುಗಳು ಕಥೆಯನ್ನು ಹೇಳಲು ಪ್ರಾರಂಭಿಸಿದರು. "ಒಂದು ಹಳ್ಳಿಯಲ್ಲಿ ದೊಡ್ಡದೊಂದು ಎಮ್ಮೆ ಇದ್ದಿತು. ಪ್ರತಿದಿನ ಅದು ಮೇಯಲು ಹೋಗುವ ದಾರಿಯಲ್ಲಿ ಒಂದು ಗುಡಿಸಲಿನ ಮುಂದೆ ಹಾದು ಹೋಗುತಿತ್ತು. ಆ ಗುಡಿಸಲಿನ ಒಳಭಾಗ ತಣ್ಣಗಿರಲೆಂದು ಅದರ ಮೇಲ್ಛಾವಣಿಯ ಮೇಲೆ ಬಹಳಷ್ಟು ಹುಲ್ಲಿನ ಕಂತೆಗಳನ್ನು ಜೋಡಿಸಿಡಲಾಗಿತ್ತು.
ಆ ಎಮ್ಮೆ ನಿತ್ಯವೂ ತನಗೆ ಎಟುಕುವಷ್ಟು ಹುಲ್ಲಿನ ಕಂತೆಗಳನ್ನು ಎಳೆದುಕೊಂಡು ತಿನ್ನುತ್ತಿತ್ತು. ದಿನ ಕಳೆದಂತೆ ಹೆಚ್ಚಿನ ಹುಲ್ಲಿನ ಕಂತೆಗಳು ಅದಕ್ಕೆ ಎಟುಕದೇ ಹೋದಾಗ, "ಈ ಗುಡಿಸಲಿನ ಮೇಲ್ಛಾವಣಿಯ ಮೇಲೇ ಇಷ್ಟೊಂದು ಹುಲ್ಲು ಇರಬೇಕಾದರೆ, ಒಳಗಿನ್ನೆಷ್ಟಿರಬಹುದು?" ಎಂದದು ಯೋಚಿಸತೊಡಗಿತು. ಆದರೆ, ಗುಡಿಸಲಿನ ಕಿಟಕಿ ಸದಾ ಮುಚ್ಚಿರುತಿದ್ದ ಕಾರಣ ಒಳಗೇನಿದೆ ಎಂದು ನೋಡಲು ಎಮ್ಮೆಗೆ ಸಾಧ್ಯವಾಗಲಿಲ್ಲ.
ಒಂದು ದಿನ ಎಂದಿನಂತೆ ಅದು ಮೇಯಲು ಹೊರಟಾಗ, ಅದರ ಕಣ್ಣು ಅಚ್ಚರಿಯಿಂದ ಕಂಗೊಳಿಸಿತು. ಏಕೆಂದರೆ ಗುಡಿಸಲಿನ ಕಿಟಕಿ ತೆರೆದಿತ್ತು! ಸಡಗರದಿಂದ ಎಮ್ಮೆ ಕಿಟಕಿಯ ಬಳಿ ಹೋಗಿ, ತನ್ನ ಕೋಡುಗಳು ಅಡ್ಡಬಾರದಂತೆ, ಬಹಳ ಎಚ್ಚರಿಕೆಯಿಂದ ತನ್ನ ತಲೆಯನ್ನು ಕಿಟಕಿಯೊಳಕ್ಕೆ ತೂರಿಸಿ ನೋಡಿತು. ಅದು ಅಂದುಕೊಂಡತೆಯೇ ಸಾಕಷ್ಟು ಹುಲ್ಲಿನ ಕಂತೆಗಳನ್ನು ಗುಡಿಸಲಿನ ಒಂದು ಮೂಲೆಯಲ್ಲಿ ಗುಡ್ಡೆಮಾಡಿ ಇಡಲಾಗಿತ್ತು.
ತನ್ನ ಕುತ್ತಿಗೆಯನ್ನು ಎಷ್ಟೇ ಉದ್ದಕ್ಕೆ ಚಾಚಿದ್ದರೂ ಸಹ ಆ ಎಮ್ಮೆಗೆ ಹುಲ್ಲು ನಿಲುಕಲಿಲ್ಲ. ಹಾಗಾಗಿ ಅದು ತನ್ನ ಇಡೀ ದೇಹವನ್ನು ಆ ಕಿಟಕಿಯಿಂದ ಒಳತೂರಿಸಲು ಪ್ರಯತ್ನಿಸಿತು. ಕೋಡು, ಮುಖ, ಕುತ್ತಿಗೆ ಎಲ್ಲವನ್ನು ಒಳತೂರಿಸಿದರೂ ಸಹ, ಹುಲ್ಲು ಮಾತ್ರ ಅದರ ಬಾಯಿಗೆಟುಕಲೇ ಇಲ್ಲ.
ಮೆಲ್ಲನೆ ಅದು ತನ್ನ ಮುಂಗಾಲುಗಳನ್ನು ಕಿಟಕಿಯೊಳಗೆ ತೂರಿಸಿತು. ಕಾಲುಗಳನ್ನು ಗೋಡೆಗೊರಗಿಸಿ ತನ್ನ ದೇಹವನ್ನು ನಿಧಾನವಾಗಿ ಒಳಗೆಳೆದುಕೊಳ್ಳಲು ಪ್ರಾರಂಭಿಸಿತು. ಸ್ವಲ್ಪ ಸ್ವಲ್ಪವಾಗಿ, ಅದರ ದೈತ್ಯ ದೇಹ ಕಿಟಕಿಯ ಸರಳುಗಳನ್ನು ಮುರಿದು ಒಳನುಸುಳತೊಡಗಿತು ಮತ್ತು ಅದರ ದೇಹದ ಅತಿ ದೊಡ್ಡ ಭಾಗಗಳಾದ ಬೆನ್ನು ಮತ್ತು ಹೊಟ್ಟೆ ಒಳಗೆ ಹೋದವು. ಇನ್ನುಳಿದದ್ದು ಹಿಂಗಾಲುಗಳು ಮಾತ್ರ. ನಿಧಾನವಾಗಿ ಒಂದರ ನಂತರ ಇನ್ನೊಂದರಂತೆ ಅದು ತನ್ನ ಹಿಂಗಾಲುಗಳನ್ನೂ ಸಹ ಒಳಕ್ಕಿರಿಸಿ ಗಟ್ಟಿಯಾಗಿ ನಿಂತಿತು.
ತಾನು ಸಂಪೂರ್ಣವಾಗಿ ಒಳಕ್ಕೆ ಬಂದಿದ್ದೇನೆಂದು ನಂಬಿದ ಎಮ್ಮೆ, ತನ್ನ ಸಾಧನೆಯನ್ನು ಮೆಚ್ಚಿ, ಜೋರಾಗಿ ಅರಚುತ್ತ. ಹುಲ್ಲನ್ನು ತಿನ್ನಲು ಕುತ್ತಿಗೆಯನ್ನು ಚಾಚಿತು. ಆದರೆ ಅದಕ್ಕೆ ಹುಲ್ಲಿನ ರಾಶಿಯನ್ನು ಎಟುಕಲು ಸಾಧ್ಯವಾಗಲಿಲ್ಲ, ಏಕೆಂದರೆ ಅದರ ಬಾಲ ಇನ್ನೂ ಕಿಟಕಿಯಲ್ಲೇ ಸಿಕ್ಕಿಹಾಕಿಕೊಂಡಿತ್ತು.
ಗುರುಗಳು ಕಥೆಯನ್ನು ಇಲ್ಲಿಗೇ ನಿಲ್ಲಿಸಿದರು.
"ಈ ಕಥೆ ನಡೆಯಲು ಸಾಧ್ಯವಿದೆಯೋ ಇಲ್ಲವೋ?" ಎಂದವರು ಶಿಷ್ಯರನ್ನು ಪ್ರಶ್ನಿಸಿದರು.
"ಹಾಗಾಗಲು ಸಾಧ್ಯವೇ ಇಲ್ಲ." ಎಂದು ಶಿಷ್ಯರೆಲ್ಲಾ ಹೇಳಿದರು.
"ಏಕೆ?" ಎಂದು ಗುರುಗಳು ಕೇಳಿದರು.
"ಎಮ್ಮೆಯ ಅತಿ ಸಣ್ಣ ಅಂಗವೆಂದರೆ ಅದರ ಬಾಲ". ಅದು ತನ್ನ ತಲೆ ಮತ್ತು ಹೊಟ್ಟೆಯನ್ನು ಒಳತೂರಿಸಲು ಸಾಧ್ಯವಿದೆ ಎಂದಾದರೆ, ಅದರ ಬಾಲವನ್ನೇಕೆ ಅದು ಒಳತೂರಿಸಲು ಸಾಧ್ಯವಿಲ್ಲ?" ಎಂದು ಶಿಷ್ಯರು ಕೇಳಿದರು.
ಅದಕ್ಕೆ ಗುರುಗಳು, "ನಿಮ್ಮಲ್ಲಿ ಬಹಳಷ್ಟು ಎಮ್ಮೆಗಳಿವೆ" ಎಂದು ಹೇಳಿದರು.
ಸದ್ಗುರುಗಳ ವಿವರಣೆ:
ಸದ್ಗುರು: ಬಾಹುಬಲಿಯ ಬಗ್ಗೆ ಅದ್ಭುತವಾದ ಕಥೆಯೊಂದಿದೆ. ಬಾಹುಬಲಿ ಅನೇಕ ಯುದ್ಧಗಳನ್ನು ಮಾಡಿದ್ದ. ಒಂದು ಹಂತದಲ್ಲಿ, ಅವನು ತನ್ನ ಸ್ವಂತ ಸಹೋದರನ ವಿರುದ್ಧವೇ ಯುದ್ಧ ಮಾಡಬೇಕಾಗಿ ಬಂತು. ಆ ಯುದ್ಧದಲ್ಲಿ ಅನೇಕ ಸೈನಿಕರು ಸಾವನಪ್ಪಿದರು ಮತ್ತು ಯುದ್ಧಭೂಮಿಯ ತುಂಬೆಲ್ಲಾ ಮೃತ ದೇಹಗಳು ಮತ್ತು ರಕ್ತದ ನದಿಯೇ ಹರಿದಿತ್ತು.
ಇದೆಲ್ಲವನ್ನೂ ಕಂಡ ಬಾಹುಬಲಿಗೆ ಆಘಾತವಾಯಿತು. ಅವನೊಳಗೆ ಒಂದು ಪರಿವರ್ತನೆ ಸಂಭವಿಸಿತು. "ನಾನೇಕೆ ಇಷ್ಟೊಂದು ಜೀವಗಳನ್ನು ಬಲಿ ತೆಗೆದುಕೊಂಡೆ?" ಎಂಬ ಪ್ರಶ್ನೆ ಅವನಲ್ಲಿ ಉದ್ಭವಿಸಿತು. ಆದರೆ ಅವನಿಗೆ ಉತ್ತರ ಸಿಗಲಿಲ್ಲ. ಆ ಮರು ಕ್ಷಣವೇ ಅವನು ಯುದ್ಧ ಹಾಗೂ ಅವನು ಮಾಡುತ್ತಿದ್ದ ಎಲ್ಲಾ ಕೆಲಸಗಳನ್ನೂ ತ್ಯಜಿಸಿದ. ತದೇಕಚಿತ್ತನಾಗಿ, ಒಂದು ಇಂಚೂ ಕದಲದಂತೆ, ಬಾಹುಬಲಿ ಹದಿನಾಲ್ಕು ವರ್ಷಗಳ ಕಾಲ ಆಳವಾದ ಧ್ಯಾನದಲ್ಲಿ ಒಂದೇ ಕಡೆ ನಿಂತುಬಿಟ್ಟ. ಆ ಸಾಧನೆಯ ತೀವ್ರತೆಯಿಂದಾಗಿ, ಅವನು ಅಂಟಿಕೊಂಡಿದ್ದಂತಹ ಅನೇಕ ವಿಷಯಗಳಿಂದ ಅವನಿಗೆ ಮುಕ್ತಿ ದೊರೆಯಿತು.
ಇಡೀ ಜಗತ್ತನ್ನೇ ಗೆಲ್ಲಲು ಬಯಸಿದ್ದಂತಹ ಆ ವ್ಯಕ್ತಿ, ಒಂದು ಕತ್ತೆಗೂ ಸಹ ನಮಸ್ಕರಿಸಲು ಸಿದ್ಧನಾಗಿ, ಅಸಾಧಾರಣವಾದ ನಮ್ರತೆಯಿಂದ ನಿಂತನು. ಆದರೆ ಅವನಿಗೆ ಜ್ಞಾನೋದಯವಾಗಲಿಲ್ಲ.
ಆ ಹದಿನಾಲ್ಕು ವರ್ಷಗಳಲ್ಲಿ, ಅವನು ಯಾರ ಬಳಿಯೂ ಒಂದು ಮಾತನ್ನೂ ಸಹ ಆಡಿರಲಿಲ್ಲ, ಮತ್ತು ಯಾವುದೇ ಕಾರಣಕ್ಕೂ ತಾನು ನಿಂತ ಜಾಗದಿಂದ ಕದಲಿರಲಿಲ್ಲ. ಆದರೆ ತನಗೇಕೆ ಜ್ಞಾನೋದಯವಾಗಲಿಲ್ಲ ಎನ್ನುವುದು ಅವನಿಗೆ ಅರ್ಥವಾಗಲಿಲ್ಲ. ಆಗ ಆ ದಿಕ್ಕಿನಲ್ಲಿ ನಡೆಯುತ್ತಾ ಬಂದ ಒಬ್ಬ ಯೋಗಿ ಬಾಹುಬಲಿಯನ್ನು ನೋಡಿದ. "ಜ್ಞಾನೋದಯವನ್ನು ಹೊಂದಲು ನಾನಿನ್ನೇನನ್ನು ಮಾಡಬೇಕು?" ಎಂದು ಯೋಗಿಯನ್ನು ಕೇಳಬೇಕೆಂದು ಬಾಹುಬಲಿ ಹಂಬಲಿಸಿದ. ಆದರೆ ಹದಿನಾಲ್ಕು ವರ್ಷಗಳಿಂದ ಮೌನವಾಗಿ ನಿಂತಿದ್ದ ಅವನಿಗೆ ತನ್ನ ಬಾಯಿಯನ್ನು ತೆರೆದು ಪ್ರಶ್ನೆ ಕೇಳುವ ಮನಸ್ಸು ಬರಲಿಲ್ಲ. ಬದಲಾಗಿ ಅವನ ಎಡಗಣ್ಣಿನಿಂದ ಕಣ್ಣೀರಿನ ಹನಿಯೊಂದು ಕೆಳಕ್ಕುರುಳಿತು:
"ನಾನು ನನ್ನ ರಾಜ್ಯವನ್ನು ಬಿಟ್ಟುಕೊಟ್ಟಿದ್ದೇನೆ. ನನ್ನ ಕುಟುಂಬ, ಅರಮನೆ ಮತ್ತು ನನ್ನ ಎಲ್ಲಾ ಸುಖ-ಸೌಕರ್ಯಗಳನ್ನು ತ್ಯಜಿಸಿದ್ದೇನೆ. ಒಂದು ಚಿಕ್ಕ ಕೀಟಕ್ಕೂ ತಲೆಬಾಗುವ ಮಟ್ಟಿಗೆ ನಾನು ಕರಗಿಹೋಗಿದ್ದೇನೆ. ಮಾಡಲು ನನಗಿನ್ನೇನು ಉಳಿದಿದೆ?"
"ನೀನೊಬ್ಬ ಅದ್ಭುತ ಮನುಷ್ಯನಾಗಿ ಮಾರ್ಪಟ್ಟಿದ್ದೀಯ. ಒಂದು ಹುಳ ಅಥವಾ ಕೀಟಕ್ಕೆ ನೀನು ತಲೆಬಾಗಲು ಸಿದ್ಧನಿದ್ದೀಯ, ಆದರೆ ನಿನ್ನ ಸಹೋದರನಿಗೆ ಅದೇ ರೀತಿಯಲ್ಲಿ ನಮಸ್ಕರಿಸಲು ನೀನು ಸಿದ್ಧನಿದ್ದೀಯಾ? ಇಲ್ಲ. ಅದೇ ನಿನ್ನನ್ನು ತಡೆಹಿಡಿದಿರುವುದು" ಎಂದು ಆ ಯೋಗಿ ಹೇಳಿದ.
ಬಾಹುಬಲಿಗೆ ತನ್ನ ಸ್ಥಿತಿಯ ಅರಿವಾಯಿತು. ತನ್ನನ್ನು ಬಂಧಿಸಿದ್ದ ತನ್ನ ಸಹೋದರನ ಮೇಲಿನ ದ್ವೇಷವನ್ನು ಕೈಬಿಟ್ಟ ಮರುಕ್ಷಣವೇ ಅವನು ಆತ್ಮಸಾಕ್ಷಾತ್ಕಾರವನ್ನು ಪಡೆದ.
ಇದೇ ರೀತಿಯಲ್ಲಿ, ಅನೇಕ ಜನ ತಮ್ಮ ಮನೆ, ಆಸ್ತಿ ಮತ್ತು ಕುಟುಂಬದ ಸೌಕರ್ಯಗಳನೆಲ್ಲಾ ತ್ಯಜಿಸಿ ಈಶ ಯೋಗ ಕೇಂದ್ರಕ್ಕೆ ಬರುತ್ತಾರೆ. ಅನೇಕರು ತಮ್ಮ ಯೌವನದ ಸುಖಭೋಗಗಳನ್ನು ಬಿಟ್ಟು, ಚಿಕ್ಕ ವಯಸ್ಸಿನಲ್ಲಿಯೇ ಬಂದುಬಿಡುತ್ತಾರೆ. ತಾವು ಬಯಸಿದ್ದನ್ನು ಅವರು ತಿನ್ನುವುದಿಲ್ಲ, ಮಾದಕ ವಸ್ತುಗಳನ್ನವರು ಉಪಯೋಗಿಸುವುದಿಲ್ಲ, ಕಾಮಕ್ಕೆ ಗುಲಾಮರಾಗಿರುವುದಿಲ್ಲ. ಯಾವುದೇ ಅಹಂ ಇಲ್ಲದೆ, ಹಗಲು ರಾತ್ರಿ ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿರುತ್ತಾರೆ. ಆದರೆ ಅವರಿಗೇ ತಿಳಿಯದಂತೆ, ಯಾವುದೋ ಒಂದು ವಿಷಯಕ್ಕೆ ಅವರು ಜೋತುಬಿದ್ದಿರುತ್ತಾರೆ!
ಕೆಲವೊಮ್ಮೆ ನಾನದನ್ನು ಗಮನಿಸಿದಾಗ, "ಅವರೇಕೆ ಅಷ್ಟು ಚಿಕ್ಕ ವಿಷಯಕ್ಕೆ ಅಂಟಿಕೊಂಡಿದ್ದಾರೆ?" ಎಂದು ನನಗೆ ತುಂಬಾ ದುಃಖವಾಗುತ್ತದೆ.
ಒಂದು ಆಯಾಮದಿಂದ ಇನ್ನೊಂದು ಆಯಾಮಕ್ಕೆ ಪರಿವರ್ತನೆಗೊಳ್ಳುವಾಗ, ಏನೂ ಗೊತ್ತಿಲ್ಲದಂತಹ ಒಂದು ಸ್ಥಿತಿಗೆ ಪ್ರವೇಶಿಸುವಾಗ, ಜನರು ತಮಗೇ ಅರಿವಿಲ್ಲದಂತೆ, ತಮಗೆ ಪರಿಚಿತವಾಗಿರುವ ಯಾವುದೋ ಒಂದಕ್ಕೆ ಅಂಟಿಕೊಳ್ಳುತ್ತಾರೆ, ಮತ್ತು ಅದನ್ನು ಬಿಟ್ಟುಕೊಡಲು ನಿರಾಕರಿಸುತ್ತಾರೆ. ಹಿಂದಿನದನ್ನೋ, ಅಥವಾ ಅವರು ಕಲಿತ ಯಾವುದನ್ನೋ ಅಥವಾ ಇಷ್ಟಪಟ್ಟ ಯಾವುದನ್ನಾದರೂ ಹಿಡಿದು, ಅದಕ್ಕೆ ಜೋತಾಡುತ್ತಿರುತ್ತಾರೆ.
ನೀವವರನ್ನು ಸ್ವರ್ಗಕ್ಕೆ ಕರೆದುಕೊಂಡು ಹೋದರೂ ಸಹ, ಅವರ ಕಿರುಬೆರಳು ಇನ್ನೂ ಯಾವುದಕ್ಕಾದರು ಬಿಗಿಯಾಗಿ ಸುತ್ತಿಕೊಂಡೇ ಇರುತ್ತದೆ. ಅದು ಅವರ ಸೆಲ್ಫೋನ್ ಅಥವಾ ಅವರು ಬಳಸುವ ಬೆಡ್ಶೀಟ್ನಂತಹ ಸಾಮಾನ್ಯ ವಿಷಯಗಳಾಗಿರಬಹುದು. ಅಥವಾ ಅವರೊಂದು ನಿರ್ದಿಷ್ಟ ಸ್ಥಳವನ್ನು ತಮ್ಮದೇ ಎಂದು ಭಾವಿಸುತ್ತ, ಆ ಸ್ಥಳದಲ್ಲಿ ಮಾತ್ರ ಧ್ಯಾನ ಮಾಡಲು ಕುಳಿತುಕೊಳ್ಳುತ್ತಿರಬಹುದು.
ಇಡೀ ದೇಹವೇ ಒಳಹೋದರೂ ಸಹ, ಬಾಲ ಮಾತ್ರ ಹೀಗೆ ಸಿಕ್ಕಿಹಾಕಿಕೊಂಡಿರುತ್ತದೆ. ಸರಿಯಾದ ಸಮಯದಲ್ಲಿ ಬಾಲವನ್ನು ಕತ್ತರಿಸಿದರೆ, ಅವರಿಗೆ ಜ್ಞಾನೋದಯವಾಗುತ್ತದೆ.