ಶಾಸ್ತ್ರೀಯ ಯೋಗ : ಸೂರ್ಯ ಕ್ರಿಯಾ ಮತ್ತು ಸೂರ್ಯ ಶಕ್ತಿ
ಶಾಸ್ತ್ರೀಯ ಯೋಗದ ಈ ನಮ್ಮ ಸರಣಿಗಳಲ್ಲಿ, ಶಕ್ತಿಯ ಆಗರವಾದ ಸೂರ್ಯನ ಜೊತೆಗೆ ನಮ್ಮನ್ನು ನಾವು ಹೊಂದಿಸಿಕೊಳ್ಳಬಹುದಾದ ಹಲವು ರೀತಿಗಳ ಬಗ್ಗೆ ತಿಳಿದುಕೊಳ್ಳೋಣ.
ಈಶದ ಉದ್ದೇಶ ಶಾಸ್ತ್ರೀಯ ಯೋಗವನ್ನು ಅದರ ಪರಿಶುದ್ಧ ರೀತಿಯಲ್ಲಿ ಮರಳಿ ತರುವುದೇ ಆಗಿದೆ. ಸ್ಟುಡಿಯೋ ಯೋಗ , ಪುಸ್ತಕ ಯೋಗ ಅಥವಾ ಯೋಗದ ಮೂಲ ತತ್ವಗಳನ್ನು ಅರ್ಥ ಮಾಡಿಕೊಳ್ಳದೆ ಪ್ರಪಂಚದಾದ್ಯಂತ ಇಂದು ಹೇಳಿಕೊಡಲಾಗುತ್ತಿರುವ ಹಲವು ನವೀನ ರೀತಿಯ ಯೋಗದ ಅವತರಣಿಕೆಗಳಂತಾಗಿರದೆ, ಅಸಾಧಾರಣ ಶಕ್ತಿಶಾಲಿ ವಿಜ್ಞಾನವಾದ ಶಾಸ್ತ್ರೀಯ ಯೋಗವನ್ನು ಸರಿಯಾದ ರೀತಿಯಲ್ಲಿ ಹೇಳಿಕೊಡಲು ನಾವು ಪ್ರಯತ್ನಿಸುತ್ತಿದ್ದೇವೆ. ಯೋಗವು ಉನ್ನತವಾದ ಆಯಾಮಗಳನ್ನು ತಲುಪಲು ಬಹಳ ನಿಖರವಾಗಿ ಮತ್ತು ಸೂಕ್ಷ್ಮವಾಗಿ ರೂಪಿಸಲ್ಪಟ್ಟಿರುವಂತಹ ಒಂದು ವ್ಯವಸ್ಥೆಯಾಗಿದೆ.
ನಮ್ಮ ವ್ಯವಸ್ಥೆಯನ್ನು ಭೂಮಿಯ ಶಕ್ತಿಯ ಮೂಲವಾದ ಸೂರ್ಯನೊಂದಿಗೆ ಅಳವಡಿಸಿಕೊಳ್ಳುವುದು ಹೇಗೆಂದು ಇಲ್ಲಿ ತಿಳಿದುಕೊಳ್ಳೋಣ.
ಭೂಮಿ ಹಾಗು ಚಂದ್ರ, ಅವು ಜೀವಿಗಳ ಮೇಲೆ ಪರಿಣಾಮವನ್ನು ಬೀರುವ ರೀತಿಯಿಂದಾಗಿ ತಮ್ಮದೇ ಆದ ಮಹತ್ವವನ್ನು ಹೊಂದಿವೆ, ಆದರೆ ಸೂರ್ಯನೇ ಎಲ್ಲಾ ಶಕ್ತಿಗಳಿಗೂ ಮೂಲ. “ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳದೆ ಹೋದಲ್ಲಿ, ಜೀವ ವಿಕಸನಕ್ಕೆ ಇಲ್ಲಿ ಯಾವುದೇ ಆಸ್ಪದವಿಲ್ಲ, ಎಲ್ಲಾ ಅಂತ್ಯವಾಗುತ್ತದೆ. ಈ ಕ್ಷಣಕ್ಕೆ ಸೂರ್ಯನು ಕಣ್ಮರೆಯಾದರೆ, ಕೆಲವೇ ಗಂಟೆಗಳಲ್ಲಿ ಎಲ್ಲವೂ ಹಿಮಗಟ್ಟಿಹೋಗುತ್ತದೆ. ಮಹಾ ಸಮುದ್ರಗಳು, ನಿಮ್ಮೊಳಗೆ ಹರಿಯುತ್ತಿರುವ ರಕ್ತ, ಎಲ್ಲವೂ ಸಹ ಹೆಪ್ಪುಗಟ್ಟಿ ಹಿಮಗಲ್ಲುಗಳಾಗಿ ಬಿಡುತ್ತವೆ. ನಿಮ್ಮ ಶರೀರದೊಳಗೂ ಸಹ ಸೌರ ಶಕ್ತಿಯೇ ಮೂಲಾಧಾರ. ನಿಮ್ಮ ಶರೀರ ಒಂದು ನಿಶ್ಚಿತವಾದ ತಾಪಮಾನವನ್ನು ಕಾಯ್ದುಕೊಳ್ಳುತ್ತಿದೆಯೆಂದರೆ, ತಕ್ಷಣಕ್ಕೆ ಅದು ಬೇರೆ ವ್ಯವಸ್ಥೆಯೆಂದೆನಿಸಬಹುದು, ಆದರೆ, ಮೂಲತಃ ಈ ಗ್ರಹದ ಮೇಲಿನ ಎಲ್ಲಾ ಶಾಖೋತ್ಪನ್ನವು - ಅದು ಜೀವಿಗಳಿರಬಹುದು ಅಥವಾ ನಿರ್ಜೀವ ವಸ್ತುಗಳಲ್ಲಿರಬಹುದು, ಎಲ್ಲದಕ್ಕೂ ಮೂಲ ಸೌರ ಶಕ್ತಿಯೇ ಆಗಿದ್ದು. ಹಲವಾರು ರೀತಿಗಳಲ್ಲಿ ಅದು ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ ಅಷ್ಟೆ.“ ಎಂದು ಸದ್ಗುರುಗಳು ಹೇಳುತ್ತಾರೆ.
ಶಾರೀರಿಕ ಬಗೆಯ ಎಲ್ಲಾ ಆಧ್ಯಾತ್ಮ ಸಾಧನೆಗಳ ಮೂಲ ಉದ್ದೇಶವೇ ನಮ್ಮನ್ನು ಪ್ರಕೃತಿಯ ಚಕ್ರಗಳೊಂದಿಗೆ ಹೊಂದಿಕೊಳ್ಳುವಂತೆ ಮಾಡುವುದಾಗಿದೆ. ಸದ್ಗುರುಗಳು ಹೇಳುತ್ತಾರೆ “ನೀವು ಸೂರ್ಯನ ಆವರ್ತಗಳೊಂದಿಗೆ ಲಯದಲ್ಲಿದ್ದರೆ, ನೀವು ದೈಹಿಕ ಆರೋಗ್ಯ, ಸೌಖ್ಯ, ಚೈತನ್ಯಶೀಲತೆ, ಶಕ್ತಿ - ಇವುಗಳ ಬಗ್ಗೆ ಚಿಂತೆಸಬೇಕಾಗಿಲ್ಲ. ಸಹಜವಾಗಿಯೇ ಅವು ನಿಮ್ಮಲ್ಲಿರುತ್ತವೆ.”
ಒಂದು ಸೌರ ಚಕ್ರದ ಕಾಲಾವಧಿ ಸುಮಾರು ಹನ್ನೆರಡು ಕಾಲು ವರ್ಷಗಳಾಗಿರುತ್ತದೆ. ನಿಮ್ಮ ಶಾರೀರಿಕ ಚಕ್ರಗಳು ಸೂರ್ಯನ ಚಕ್ರಗಳ ಜೊತೆ ಲಯದಲ್ಲಿದ್ದರೆ, ದೈಹಿಕ ಆರೋಗ್ಯ ಅತ್ಯುತ್ತಮವಾಗಿರುತ್ತದೆ, ಮಾನಸಿಕ ಸಮತೋಲನ ತುಂಬಾ ಚೆನ್ನಾಗಿರುತ್ತದೆ ಹಾಗೂ ಜೀವನವು ಸುಲಲಿತವಾಗಿ ಸಾಗುತ್ತದೆ. ಹಾಗಾದರೆ, ನಾವು ಸೂರ್ಯನೊಂದಿಗೆ ಲಯದಲ್ಲಿರುವ ಮೂಲಕ ನಮ್ಮ ಚಕ್ರಗಳನ್ನು ಸಹ ಹನ್ನೆರಡು ವರ್ಷಗಳ ಚಕ್ರಗಳನ್ನಾಗಿ ಮಾಡಿಕೊಳ್ಳುವುದು ಹೇಗೆ?
ಸೂರ್ಯನೊಂದಿಗೆ ಹೊಂದಿಕೆಯಲ್ಲಿರಲು ಸದ್ಗುರುಗಳು ಮೂರು ಪ್ರಕ್ರಿಯೆಗಳ ಬಗ್ಗೆ ತಿಳಿಸಿಕೊಡುತ್ತಾರೆ, ಅವುಗಳಲ್ಲಿ ಪ್ರಮುಖವಾದುದೆಂದರೆ ಸೂರ್ಯ ಕ್ರಿಯಾ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಗುರುಗಳು, ಸೂರ್ಯ ನಮಸ್ಕಾರವನ್ನು ಸೂರ್ಯ ಕ್ರಿಯಾದ “ದೇಸೀ ಸಂಬಂಧಿ” ಎಂದು, ಹಾಗೂ ಮತ್ತೊಂದು ಪ್ರಕ್ರಿಯೆಯಾದ ಸೂರ್ಯ ಶಕ್ತಿಯನ್ನು ಅದರ “ದೂರದ ಸಂಬಂಧಿ” ಎಂದೂ ಕರೆಯುತ್ತಾರೆ. “ನೀವು ಕೇವಲ ದೈಹಿಕವಾಗಿ ಬಲಶಾಲಿಯಾಗಲು ಇದನ್ನು ಬಳಸಬೇಕೆಂದರೆ, ನೀವು ಸೂರ್ಯ ಶಕ್ತಿಯನ್ನು ಅಭ್ಯಾಸ ಮಾಡಿ. ನೀವು ದೈಹಿಕವಾಗಿ ಸದೃಢವಾಗಿ, ಏರೋಬಿಕ್ ವ್ಯಾಯಾಮವನ್ನೂ ಮಾಡುತ್ತಾ, ಹೃದಯವನ್ನೂ ಬಲಗೊಳಿಸಬೇಕೆಂದಾದರೆ, ಮತ್ತು ಅದರ ಜೊತೆ ಒಂದು ಆಧ್ಯಾತ್ಮಿಕ ಅಂಶವನ್ನೂ ಸೇರಿಸಬೇಕೆಂದುಕೊಂಡರೆ, ನೀವು ಸೂರ್ಯ ನಮಸ್ಕಾರವನ್ನು ಮಾಡಿ. ಆದರೆ ನೀವು ಮಾಡುವ ಶಾರೀರಿಕ ಪ್ರಕ್ರಿಯೆಯಲ್ಲಿ ಒಂದು ಪ್ರಬಲವಾದ ಆಧ್ಯಾತ್ಮಿಕ ಪ್ರಕ್ರಿಯೆಯೂ ಬೇಕೆಂದು ನೀವು ಬಯಸುವುದಾದರೆ ನೀವು ಸೂರ್ಯ ಕ್ರಿಯಾವನ್ನು ಮಾಡಿ.” ಎಂದವರು ವಿಸ್ತಾರವಾಗಿ ವಿವರಿಸುತ್ತಾರೆ.
ನಮ್ಮೊಳಗಿರುವ ಸೂರ್ಯನನ್ನು ಸಕ್ರಿಯಗೊಳಿಸಲು ಇರುವ ಒಂದು ಪ್ರಬಲವಾದ ಪ್ರಕ್ರಿಯೆ ಮತ್ತು ಮೂಲಭೂತವಾದ ಅಭ್ಯಾಸವೆಂದರೆ - ಅದು ಸೂರ್ಯ ಕ್ರಿಯಾ. ಇದು ಪರಿಷ್ಕೃತವಾದಂತಹ ಒಂದು ಪ್ರಕ್ರಿಯೆಯಾಗಿದ್ದು, ಶರೀರದ ಜ್ಯಾಮಿತಿಯ ದೃಷ್ಟಿಯಿಂದ ಇದಕ್ಕೆ ಅಪಾರವಾದ ಗಮನ ಬೇಕಾಗುತ್ತದೆ. ಸೂರ್ಯ ನಮಸ್ಕಾರವು ಸೂರ್ಯ ಕ್ರಿಯಾದಿಂದ ಹುಟ್ಟಿರುವಂತದ್ದು. ಎರಡರ ತುಲನೆಯಲ್ಲಿ “ಸೂರ್ಯ ನಮಸ್ಕಾರವು ಹೆಚ್ಚಿನಂಶ ಸೂರ್ಯನಿಗೆ ವಂದಿಸುವುದು ಹಾಗೂ ಇಡ ಮತ್ತು ಪಿಂಗಳದ ನಡುವೆ ಸಮತೋಲನವನ್ನು ತರುವುದರ ಬಗ್ಗೆಯಾಗಿದೆ. ಅದು ನಮ್ಮ ಶರೀರದಲ್ಲಿನ ಸೂರ್ಯ ಶಕ್ತಿಯ ಅಭಿವ್ಯಕ್ತಿಯಾದ ಸಮತ್ ಪ್ರಾಣವನ್ನೂ ಸಹ ಸಕ್ರಿಯಗೊಳಿಸುತ್ತದೆ. ಆದರೆ ಸೂರ್ಯ ಕ್ರಿಯಾ ಹೆಚ್ಚಿನ ಆಧ್ಯಾತ್ಮ ಉದ್ದೇಶಗಳನ್ನು ಹೊಂದಿದ್ದು, ಬಹಳಷ್ಟು ಒಳಾರ್ಥಗಳು ಅದು ಹೊಂದಿರುವ ಕಾರಣ, ಅದನ್ನು ತುಂಬಾ ಎಚ್ಚರಿಕೆಯಿಂದ ಹೇಳಿಕೊಡಬೇಕಾಗುತ್ತದೆ ಮತ್ತು ಒಂದು ಮಟ್ಟದ ತೊಡಗಿಸಿಕೊಳ್ಳುವಿಕೆಯಿಂದ ನಾವದನ್ನು ಕಲಿಯಬೇಕಾಗುತ್ತದೆ. ಅದನ್ನು ಬಹಳ ಎಚ್ಚರಿಕೆಯಿಂದ ಅಭ್ಯಾಸ ಮಾಡುವುದು ತುಂಬಾ ಮುಖ್ಯ ಏಕೆಂದರೆ ಶಕ್ತಿಯುತವಾದ ಯಾವುದನ್ನೇ ಆದರೂ ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು, ಇಲ್ಲದಿದ್ದರೆ ಅದರ ನಿರ್ವಹಣೆ ಅಪಾಯಕಾರಿಯಾಗಿ ಪರಿಣಮಿಸಬಹುದು.“ ಎಂದು ಸದ್ಗುರುಗಳು ಹೇಳುತ್ತಾರೆ.
ಸಂಪಾದಕರ ಟಿಪ್ಪಣಿ: ಈಶ ಹಠ ಯೋಗ ಕಾರ್ಯಕ್ರಮಗಳು ಶಾಸ್ತ್ರೀಯ ಹಠ ಯೋಗದ ಒಂದು ವ್ಯಾಪಕ ಪರಿಶೋಧನೆಯಾಗಿದ್ದು, ಇಂದಿನ ದಿನಗಳಲ್ಲಿ ಬಹುತೇಕವಾಗಿ ಕಣ್ಮರೆಯಾಗಿರುವ ಈ ಪ್ರಾಚೀನ ವಿಜ್ಞಾನದ ನಾನಾ ಆಯಾಮಗಳನ್ನು ಅದು ಪುನಃಶ್ಚೇತನಗೊಳಿಸುತ್ತದೆ. ಈ ಕಾರ್ಯಕ್ರಮಗಳು ಪ್ರಬಲವಾದ ಯೋಗಾಭ್ಯಾಸದ ಪ್ರಕ್ರಿಯೆಗಳಲ್ಲಿ ಕೆಲವು ಪ್ರಕ್ರಿಯೆಗಳಾದ ಉಪ-ಯೋಗ, ಅಂಗಮರ್ದನ, ಸೂರ್ಯಕ್ರಿಯಾ, ಸೂರ್ಯ ಶಕ್ತಿ, ಯೋಗಾಸನ ಮತ್ತು ಭೂತಶುದ್ಧಿ ಮುಂತಾದ ಶಕ್ತಿಯುತವಾದ ಯೋಗದ ಅಭ್ಯಾಸಗಳನ್ನು ಅನ್ವೇಷಿಸಲು ಒಂದು ಅದ್ಭುತವಾದ ಅವಕಾಶವನ್ನು ಒದಗಿಸುತ್ತವೆ.