ಜೆನ್ ಮತ್ತು ಯೋಗಕ್ಕೆ ಸಂಬಂಧವಿದೆಯೇ?
ಸದ್ಗುರುಗಳು ಜೆನ್ ಎಂದರೇನು, ಮತ್ತು ಅದು ಪರಮ ಸ್ವರೂಪದೆಡಗಿನ ಪರಿಣಾಮಕಾರಿ ಸಾಧನ ಹೇಗಾಯಿತು ಎಂಬುದನ್ನು ವಿವರಿಸುತ್ತಾರೆ.
ಸದ್ಗುರು: “ಜೆನ್” ಎಂಬ ಪದವು “ಧ್ಯಾನ” ಎಂಬ ಸಂಸ್ಕೃತ ಪದದಿಂದ ಬಂದಿದೆ. ಗೌತಮ ಬುದ್ಧನು ಧ್ಯಾನವನ್ನು ಕಲಿಸಿದನು. ಬೋಧಿಧರ್ಮ ಧ್ಯಾನವನ್ನು ಚೀನಾಕ್ಕೆ ಕೊಂಡೊಯ್ದರು, ಅಲ್ಲಿ ಅದು ಚಾನ್ ಆಯಿತು. ಈ ಚಾನ್ ಮತ್ತಷ್ಟು ದೂರದ ಪೂರ್ವ ಏಷ್ಯಾದ ದೇಶಗಳಿಗೆ ಹೋಯಿತು, ಅಲ್ಲಿ ಅದು ಜೆನ್ ಆಗಿ ಮಾರ್ಪಟ್ಟಿತು.
ಜೆನ್ ಎಂಬುದು ಯಾವುದೇ ಧರ್ಮಗ್ರಂಥಗಳು, ಪುಸ್ತಕಗಳು, ನಿಯಮಗಳು ಅಥವಾ ನಿರ್ದಿಷ್ಟ ಅಭ್ಯಾಸಗಳನ್ನು ಹೊಂದಿರದ ಒಂದು ಆಧ್ಯಾತ್ಮಿಕ ಮಾರ್ಗವಾಗಿದೆ. ಅದೊಂದು ಅಜ್ಞಾತ ಮಾರ್ಗ. ಇದು ಯೋಗಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ನಾವು ಯಾವುದನ್ನು ಯೋಗ ಎಂದು ಕರೆಯುತ್ತೇವೋ, ಅವರು ಅದನ್ನು ಜೆನ್ ಎಂದು ಕರೆಯುತ್ತಾರೆ. ಯೋಗದಲ್ಲಿ ನಾವು ಅದನ್ನೆ ವಿಜ್ಞಾನದ ರೂಪದಲ್ಲಿ ಪ್ರಸ್ತುತಪಡಿಸುತ್ತೇವೆ; ಜೆನ್‌ನಲ್ಲಿ ಅದನ್ನು ಕಲಾ ಪ್ರಕಾರವಾಗಿ ಪ್ರಸ್ತುತಪಡಿಸುತ್ತಾರೆ. ಕಲೆಯನ್ನು ಶ್ಲಾಘಿಸಲು, ನೀವೊಂದು ನಿರ್ದಿಷ್ಟ ರೀತಿಯಲ್ಲಿ ವಿಕಸನಗೊಳ್ಳಬೇಕು. ಆದರೆ ಪ್ರತಿಯೊಬ್ಬರೂ ವಿಜ್ಞಾನದ ಫಲವನ್ನು ಆನಂದಿಸಬಹುದು.
ನೋಂದಣಿ ಲಿಂಕ್: kannada.sadhguru.org/ieo
ಒಂದು ನಿರ್ದಿಷ್ಟ ಸಮಯದಲ್ಲಿ ಅದ್ಭುತವಾದ ಗುರುಗಳ ಪೀಳಿಗೆಯು ಬಂದ ಕಾರಣ ಜೆನ್ ಜನಪ್ರಿಯವಾಯಿತು. ಸುಮಾರು ನಾಲ್ಕೈದು ಶತಮಾನಗಳವರೆಗೆ, ನಿರಂತರವಾಗಿ, ಅಸಾಧಾರಣವಾದ ಗುರುಗಳು ಹುಟ್ಟಿ ಬಂದಿದ್ದು ಒಂದು ಪವಾಡವೇ. ಅವರ ಕಾರಣದಿಂದಾಗಿ ಜೆನ್ ವಿಭಿನ್ನ ರೀತಿಯ ಪ್ರಭೆ ಮತ್ತು ಗುಣಮಟ್ಟವನ್ನು ಪಡೆದುಕೊಂಡಿತು. ಒಬ್ಬರ ನಂತರ ಒಬ್ಬರು ಬಂದ ಇಂತಹ ಗುರುಗಳ ಕಾರಣದಿಂದಾಗಿ ಅದು ವಿಭಿನ್ನ ಆಯಾಮವನ್ನು ಪಡೆದುಕೊಂಡಿದೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಜೆನ್ ಅನ್ನು ಬೆಳೆಸಿದರು ಮತ್ತು ಅದನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಕಲಿಸಿದರು ಅಥವಾ ಪ್ರಸರಿಸಿದರು. ಅಂತಹ ಪೀಳಿಗೆಯು ಬಹುಕಾಲದಲ್ಲಿ ಒಮ್ಮೆ ಮಾತ್ರ ಸಂಭವಿಸುತ್ತದೆ. ಸಂಪೂರ್ಣವಾಗಿ ಪ್ರಬುದ್ಧವಾದ ಅನೇಕ ಗುರುಗಳು ಬಂದು ಈ ಜ್ಞಾನವನ್ನು ಪ್ರಸರಿಸುವ ಅದ್ಭುತ ವಿಧಾನಗಳನ್ನುರಚಿಸಿದರು. ಇದನ್ನು ಮತ್ತೆ ಪುನರಾವರ್ತಿಸಲಾಗುವುದಿಲ್ಲ. ನೀವು ಅದನ್ನು ಪುನರಾವರ್ತಿಸಿದರೆ, ಜೆನ್ ಅರ್ಥಹೀನವಾಗಿರುತ್ತದೆ. ಜೆನ್ ಎಂಬುದು ತಾನಾಗಿಯೇ ಸಂಭವಿಸುವಂತಹುದು.
ಜೆನ್ ಪಥದಲ್ಲಿ ’ಹ್ಯೂಟ್ಟಿ’ ಎಂಬುವವರಿದ್ದರು. ಅವರು ಯಾರಿಗೂ ಜೆನ್ ಕಲಿಸಿದ್ದಿರಲಿಲ್ಲ, ಆದರೂ ಅವರನ್ನು ಗುರು ಎಂದು ಕರೆಯಲಾಗುತ್ತಿತ್ತು. ಅವರು ಭುಜದ ಮೇಲೆ ಒಂದು ದೊಡ್ಡ ಚೀಲವನ್ನು ಹೊತ್ತು ನಡೆಯುತ್ತಿದ್ದರು. ಅದರಲ್ಲಿ ಬಹಳಷ್ಟು ವಸ್ತುಗಳಿದ್ದವು, ಮತ್ತು ಅವುಗಳಲ್ಲಿ ಕೆಲವು ಸಿಹಿತಿಂಡಿಗಳಾಗಿದ್ದವು. ಅವರು ಹೋದ ಪ್ರತಿಯೊಂದು ಊರು ಮತ್ತು ಹಳ್ಳಿಯಲ್ಲಿ ಮಕ್ಕಳು ಅವರ ಸುತ್ತಲೂ ಸೇರುತ್ತಿದ್ದರು. ಅವರು ಸಿಹಿತಿಂಡಿಗಳನ್ನು ವಿತರಿಸಿದ ನಂತರ ಹೊರಡುತ್ತಿದ್ದರು. ಅವರು ಮಾಡುತ್ತಿದ್ದದ್ದು ಅಷ್ಟೇ! ಜನರು ಬಂದು ತಮಗೆ ಬೋಧನೆಯನ್ನು ನೀಡೆಂದು ಕೇಳುತ್ತಿದ್ದರು. ಅವರು ಸುಮ್ಮನೆ ನಕ್ಕು ಹೊರಟು ಹೋಗುತ್ತಿದ್ದರು.
ಒಂದು ದಿನ, ’ಎನ್‌ಬಾನಿನ್’ ಎಂಬ ಪ್ರಸಿದ್ಧ ಜೆನ್ ಗುರುಗಳು ’ಹ್ಯೂಟ್ಟಿ’ಯನ್ನು ಭೇಟಿಯಾದರು. ’ಹ್ಯೂಟ್ಟಿ’ ನಿಜವಾಗಿಯೂ ಜೆನ್ ಗುರಗಳೋ-ಇಲ್ಲವೋ ಎಂದು ಅವರಿಗೆ ತಿಳಿಕೊಳ್ಳಬೇಕಿತ್ತು. ಆದ್ದರಿಂದ ಅವರು, “ಜೆನ್ ಎಂದರೇನು?” ಎಂದು ಕೇಳಿದರು. ತಕ್ಷಣ, ’ಹ್ಯೂಟ್ಟಿ’ ಚೀಲವನ್ನು ಕೈಬಿಟ್ಟು ನೇರವಾಗಿ ನಿಂತರು. ನಂತರ ಅವರು, “ಜೆನ್‌ನ ಗುರಿ ಏನು?” ಎಂದು ಕೇಳಿದರು. ’ಹ್ಯೂಟ್ಟಿ’ ಚೀಲವನ್ನು ಹೆಗಲ ಮೇಲೆ ಹಾಕಿಕೊಂಡು ಹೊರನಡೆದರು.
ಯೋಗವಿರುವುದೂ ಇದರ ಬಗ್ಗೆಯೇ; ಪ್ರತಿ ಆಧ್ಯಾತ್ಮಿಕ ಸಾಧನೆಯಿರುವುದೂ ಇದರ ಬಗ್ಗೆಯೇ. ನೀವು ಯೋಗ ಅಥವಾ ಜೆನ್ ಅನ್ನು ಸಿದ್ಧಿಸಿಕೊಳ್ಳಬೇಕಿದ್ದರೆ, ನೀವು ನಿಮ್ಮ ಹೊರೆಯನ್ನು ಕಳಚಬೇಕು, ನಿಮ್ಮ ದಾರಿಯಲ್ಲಿರುವ ಎಲ್ಲವನ್ನೂ ತ್ಯಜಿಸಬೇಕು, ಮುಕ್ತರಾಗಿ ನೇರವಾಗಿ ನಿಲ್ಲಬೇಕು. ಇದು ಮುಖ್ಯ. ನಿಮ್ಮ ಹೊರೆಯೊಂದಿಗೆ ನಿಮಗೆ ಅದನ್ನು ಮಾಡಲು ಎಂದಿಗೂ ಸಾಧ್ಯವಾಗುವುದಿಲ್ಲ. ಬೆನ್ನಿನ ಮೇಲೆ ಹೊರೆಯಿಟ್ಟುಕೊಂಡು ಕೂಡ ಇದನ್ನು ಮಾಡಬಹುದು, ಆದರೆ ಅದು ತುಂಬಾ ಅಪರೂಪ. ಅಂತಹ ವ್ಯಕ್ತಿ ಎಷ್ಟು ಕೋಟಿಗೊಬ್ಬರು ಎಂದು ನನಗೆ ತಿಳಿದಿಲ್ಲ. ಯೋಗದ ಗುರಿ ಏನು? ನಂತರ, ಇಡೀ ಹೊರೆಯನ್ನು ಮತ್ತೊಮ್ಮೆ ಹೊತ್ತುಕೊಳ್ಳಿ! ಆದರೆ ಈಗ ಅದು ಹೊರೆಯಲ್ಲ; ಅದು ಹೊರೆಯಂತೆ ಭಾಸವಾಗುವುದಿಲ್ಲ ಏಕೆಂದರೆ ನಿಮಗೆ ಗೊತ್ತು ಅದು ಸಂಪೂರ್ಣವಾಗಿ ಇದೆ, ಆದರೂ ವಾಸ್ತವಾಗಿ ಇಲ್ಲ ಎಂದು.
Editor’s Note: Sadhguru explores the realm of the enlightened in "Encounter the Enlightened." Purchase the ebook.