ಸುರಿಯುವ ಮಳೆ ಮತ್ತು ಕೆಮ್ಮಣ್ಣು
ಈ ವಾರದ ಸ್ಪಾಟ್ ಲೇಖನದಲ್ಲಿ, ಸದ್ಗುರುಗಳು ಮುಂಗಾರನ್ನು ಬರಮಾಡಿಕೊಳ್ಳುತ್ತ, ಮಳೆಯ ಬಗ್ಗೆ ತಮಗಿರುವ ಪ್ರೀತಿಯನ್ನು ಮತ್ತು ಅದು ಒದಗಿಸುವ ಆಧ್ಯಾತ್ಮಿಕ ಅವಕಾಶದ ಬಗ್ಗೆ ಮಾತನಾಡುತ್ತಾರೆ. "ನೀವು ಮಳೆಯಲ್ಲಿ ಸಂಪೂರ್ಣವಾಗಿ ನೆನೆದಾಗ, ನಿಮ್ಮ ಮತ್ತು ನಿಮ್ಮ ಸುತ್ತಲಿರುವ ಪಂಚಭೂತಗಳ ನಡುವೆ ಹೆಚ್ಚಿನ ವ್ಯತ್ಯಾಸವೇನಿಲ್ಲ ಎಂದು ನೀವು ಮನಗಾಣುತ್ತೀರಿ. ನಿಮ್ಮ ಮೈ ಒಣಗಿರುವಾಗ, ಅದು ನಿಮ್ಮ ಅರಿವಿಗೆ ಬರುವುದಿಲ್ಲ; ನೀವು ತೊಯ್ದಿದ್ದಾಗ, ನಿಮಗದು ಅರಿವಾಗುತ್ತದೆ." ಲೇಖನದ ಕೊನೆಯಲ್ಲಿ "ಮಳೆಗಾಲ" ಕವಿತೆಯನ್ನು ಓದಿ. ಆನಂದಿಸಿ!
ಇದು ನನಗೆ ಅರ್ಥವೇ ಆಗದ ವಿಷಯ. ಮಳೆ ಬಂದಾಕ್ಷಣ, ಎಲ್ಲರೂ ತಾವು ಸಕ್ಕರೆ ಅಥವಾ ಉಪ್ಪಿನಿಂದ ಮಾಡಲ್ಪಟ್ಟವರಂತೆ, ಮಳೆಯಲ್ಲಿ ನೆನೆದರೆ ಕರಗಿ ಹೋಗುತ್ತಾರೆ ಎನ್ನುವಂತೆ ಓಡುತ್ತಾರೆ. ನಾನೊಂದು ತರಬೇತಿ ಶಿಬಿರ ಅಥವಾ ಸಾರ್ವಜನಿಕ ಕಾರ್ಯಕ್ರಮದಲ್ಲಿದ್ದರೆ, ನಾನು ಸಹ ಸ್ವಲ್ಪ ಓಡುತ್ತೇನೆ, ಏಕೆಂದರೆ ಆ ಕಾರ್ಯಕ್ರಮಕ್ಕೆ ನೆನೆದುಕೊಂಡು ಹೋಗಲು ನನಗೆ ಇಷ್ಟವಿಲ್ಲ. ಅದು ಬಿಟ್ಟರೆ, ಬಾಲ್ಯದಿಂದಲೂ, ಜನರು ಮಳೆ ಬಂದರೆ ಏಕೆ ಓಡುತ್ತಾರೆಂದು ನನಗೆ ಅರ್ಥವೇ ಆಗಿಲ್ಲ. ನಾನು ಕೇವಲ ನಾಲ್ಕು ವರ್ಷ ವಯಸ್ಸಿನವನಾಗಿದ್ದಾಗ, ಮಳೆ ಬಂದ ಕೂಡಲೇ, ನನ್ನ ತಂದೆ ತಾಯಿ ಮತ್ತು ಉಳಿದವರೆಲ್ಲರೂ, ಬೆಂಕಿ ಬಿದ್ದಿದೆಯೇನೋ ಎಂಬಂತೆ “ಓಡಿ, ಓಡಿ, ಓಡಿ!” ಎಂದು ಕಿರುಚುತ್ತಿದ್ದರು. ನಾವಿದ್ದಿದ್ದು ಬಯಲುಸೀಮೆಯಲ್ಲಿ ಮತ್ತು ನಮ್ಮ ಸ್ಥಳ ಹಲವು ಎಕರೆಗಳಷ್ಟು ದೊಡ್ಡದಾಗಿತ್ತು. ಅಲ್ಲದೆ ಮೈಸೂರಿನಲ್ಲಿ ಮುಂಗಾರು ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಮಳೆ ಜೋರಾಗಿ ಸುರಿಯುತ್ತಿದ್ದಾಗಲೂ ನಾನು ಅಲ್ಲಿಯೇ ನಿಂತಿರುತ್ತಿದ್ದೆ.
ನನಗೆ, ಬೇಸಿಗೆಯಲ್ಲಿ ಬರುವ ಮೊದಲ ಮಳೆಯೆಂದರೆ ಹರ್ಷೋತ್ಕರ್ಷ. ಮಳೆಯ ಹನಿಗಳು ನನ್ನ ಮೇಲೆ ಬಿದ್ದಾಗ ನಾನು ಹಿಗ್ಗಿ ನಲಿದಾಡುತ್ತಿದ್ದೆ. ವಿಶೇಷ ಅನುಭವವೊಂದು ನನ್ನ ಜೀವನವನ್ನು ಬದಲಿಸಿದ ನಂತರ, ಇದು ಇನ್ನಷ್ಟು ಗಾಢವಾಯಿತು. ಮೊದಲು, ನಾನು ಮಳೆಯನ್ನು ಕೇವಲ ಆನಂದಿಸುತ್ತಿದ್ದೆ; ಅದು ನನ್ನನ್ನೊಂದು ರೀತಿಯಲ್ಲಿ ಸಂತೋಷಗೊಳಿಸುತ್ತಿತ್ತು. ಆದರೆ ನಂತರ, ಮಳೆಯಲ್ಲಿ ನೆನೆಯುವುದು ನನಗೊಂದು ಬಹುದೊಡ್ಡ ಅನುಭವವಾಯಿತು. ಇದಕ್ಕಾಗಿಯೇ ನನ್ನ ಮನೆಯೊಳಗೊಂದು ಚೌಕಾಂಗಳವಿದೆ. ಮಳೆ ಬಂದರೆ ಸಾಕು, ನಾನು ಅಲ್ಲಿ ಹೋಗಿ ನಿಂತು ಬಿಡುತ್ತೇನಷ್ಟೆ.
ನಿಮ್ಮ ದೇಹದಲ್ಲಿ 72% ಕ್ಕಿಂತ ಹೆಚ್ಚು ನೀರಿದೆ. ನೀವು ನಿಜವಾಗಿಯೂ ಒಂದು ನೀರಿನ ಬಾಟಲ್. ಇದು ನಿಮ್ಮ ಜೀವನದ ಅತ್ಯಂತ ಪ್ರಮುಖ ಜಲಾಶಯ. ಈ ಅಂಶವನ್ನು ನೀವು “ನಾನು” ಎಂದು ಅನುಭವಿಸಬಹುದಾದರೆ, ಮುಂಗಾರು ನಿಮಗೆ ಅದ್ಭುತವಾದ ಸಮಯ; ನಿಮಗೆ ಪ್ರಕೃತಿಯೊಂದಿಗೆ ಭಾರಿ ಸಾಮರಸ್ಯವಿರುತ್ತದೆ, ಏಕೆಂದರೆ ಮಳೆ ನಿಮ್ಮನ್ನು ಪ್ರಕೃತಿಯೊಂದಿಗೆ ಸಂಪರ್ಕಿಸುತ್ತದೆ. ಮಳೆ ನಿಮಗೊಂದು ಸಂಪರ್ಕ, ಏಕೆಂದರೆ ಮಳೆಯಾಗಿ ನಿಮ್ಮ ಮೇಲೆ ಸುರಿಯುತ್ತಿರುವುದು ನೀವೇ, ಬೇರಿನ್ನೇನಲ್ಲ. ಆದ್ದರಿಂದ ನನಗೆ, ಮಳೆ ಬಹಳ ಶಕ್ತಿಯುತವಾದ ಆಧ್ಯಾತ್ಮಿಕ ಅನುಭವವಾಗಿದೆ. ಯಾವಾಗಲೂ.
ಈಶ ಹೋಮ್ ಸ್ಕೂಲ್ ಪ್ರಾರಂಭವಾದಾಗ, ಅದು ಮಳೆಗಾಲವಾದ್ದರಿಂದ ದೊಡ್ಡ ಚಂಡಮಾರುತಗಳಿದ್ದವು. ಶಿಕ್ಷಕರು, “ಮಕ್ಕಳನ್ನು ಹೇಗೆ ರಕ್ಷಿಸುವುದು?” ಎಂದು ಕೇಳಿದರು. ಅದಕ್ಕೆ ನಾನು, “ಅವರನ್ನು ಮಳೆಯಲ್ಲಿ ಹೊಳೆಗೆ ಕರೆದೊಯ್ಯಿರಿ, ಅವರು ಮಳೆಯನ್ನು ಅದಿರುವ ರೀತಿಯಲ್ಲೇ ಅನುಭವಿಸಲಿ.” ಎಂದು ಹೇಳಿದೆ. ನೀವು ಮಳೆಯಲ್ಲಿ ಸಂಪೂರ್ಣವಾಗಿ ನೆನೆದಾಗ, ನಿಮ್ಮ ಮತ್ತು ನಿಮ್ಮ ಸುತ್ತಲಿರುವ ಪಂಚಭೂತಗಳ ನಡುವೆ ಹೆಚ್ಚಿನ ವ್ಯತ್ಯಾಸವೇನಿಲ್ಲ ಎಂದು ನೀವು ಮನಗಾಣುತ್ತೀರಿ. ನಿಮ್ಮ ಮೈ ಒಣಗಿರುವಾಗ, ಅದು ನಿಮ್ಮ ಅರಿವಿಗೆ ಬರುವುದಿಲ್ಲ; ನೀವು ತೊಯ್ದಿದ್ದಾಗ, ನಿಮಗದು ಅರಿವಾಗುತ್ತದೆ. ಈ ಕಾರಣಕ್ಕಾಗಿಯೇ, ನೀವು ಭಾರತೀಯ ದೇವಸ್ಥಾನವನ್ನು ಪ್ರವೇಶಿಸುವ ಮುನ್ನ ಪುಷ್ಕರಿಣಿಯಲ್ಲಿ ಮುಳುಗು ಹಾಕಬೇಕಿತ್ತು. ದುರದೃಷ್ಟವಶಾತ್, ಈ ಕೊಳಗಳೆಲ್ಲ ಈಗ ಇಲ್ಲವಾಗಿವೆ. ಪುಷ್ಕರಿಣಿಯಲ್ಲಿ ಮುಳುಗು ಹಾಕಬೇಕಿತ್ತು, ಏಕೆಂದರೆ ದೈವವನ್ನು ಗ್ರಹಿಸುವ ಮತ್ತು ದೈವದೊಂದಿಗೆ ಸಂಪರ್ಕ ಹೊಂದುವ ನಿಮ್ಮ ಸಾಮರ್ಥ್ಯವು ಎಷ್ಟೋ ಹೆಚ್ಚಾಗುತ್ತಿತ್ತು. ತೀರ್ಥಕುಂಡಗಳ ಹಿಂದಿರುವ ಒಂದು ಕಾರಣವಿದು. ನೀರನ್ನು ಒಂದು ರೀತಿಯಲ್ಲಿ ಚೈತನ್ಯೀಕರಿಸಿ ಪವಿತ್ರೀಕರಿಸಲಾಗಿದೆಯಾದರೂ ಅದು ನೀರೇ.
ಧ್ಯಾನಲಿಂಗವು ಪ್ರಾಣ ಪ್ರತಿಷ್ಠಾಪಿತ ಸ್ಥಳವಾಗಿದೆ, ಆದರೆ ಅದು ನಿಮ್ಮ ಅನುಭವಕ್ಕೆ ಬರಲು ನೀವು ಸೂಕ್ಷ್ಮವಾಗಿರಬೇಕು, ಏಕೆಂದರೆ ಅಲ್ಲಿರುವುದು ಕೇವಲ ಗಾಳಿ. ಜನರಿಗೆ ನೀರನ್ನು ಅನುಭವಕ್ಕೆ ತಂದುಕೊಳ್ಳುವುದು ಬಹಳ ಸುಲಭ. ಧ್ಯಾನಲಿಂಗ ಕೆಲವರಿಗೆ ಶಕ್ತಿಯುತ ಅನುಭವವಾಗಿದ್ದರೂ, ಇತರರು ಸುಮ್ಮನೆ ಕುಳಿತು ಅಲ್ಲಿ ಇಲ್ಲಿ ನೋಡುತ್ತಿರುತ್ತಾರೆ. ಅಲ್ಲಿ ಏನಾಗುತ್ತಿದೆ ಎಂದವರಿಗೆ ಅರ್ಥವಾಗುವುದಿಲ್ಲ; ಅವರಿಗೆ ಆ ಅನುಭವವನ್ನು ಗ್ರಹಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ತೀರ್ಥಕುಂಡಗಳನ್ನು ನಿರ್ಮಿಸಿದ್ದೇವೆ. ಮೊದಲು ಜನರು ನೀರನ್ನು ಅನುಭವಕ್ಕೆ ತಂದುಕೊಳ್ಳಲಿ; ತದನಂತರ, ಸ್ಥಳವನ್ನು ಅನುಭವಿಸುವುದು ಸುಲಭವಾಗುತ್ತದೆ. ಇದು ಪೂರ್ವಭಾವಿ ಹೆಜ್ಜೆಯಾಗಿದೆ, ಆದರೆ ದುರದೃಷ್ಟವಶಾತ್ ತೀರ್ಥಕುಂಡಗಳು ಧ್ಯಾನಲಿಂಗಕ್ಕಿಂತ ಹೆಚ್ಚು ಜನಪ್ರಿಯವಾಗುತ್ತಿವೆ!
ಮುಂಗಾರನ್ನು ಎಷ್ಟು ಸಾಧ್ಯವೋ ಅಷ್ಟು ಆನಂದಿಸಿ. ಮಳೆಯಲ್ಲಿ ತೊಯ್ದು ಸೃಷ್ಟಿಯ ಪಂಚಭೂತಗಳ ಚಮತ್ಕಾರದೊಂದಿಗೆ ಒಂದಾಗಿ. ಜೀವನವನ್ನು ನಿಮ್ಮ ಭೌತಿಕತೆಯ ಗಡಿಗಳನ್ನು ಮೀರಿ ಅರಿತುಕೊಳ್ಳಿ. ದೇಹದ ವಿವಶತೆಗಳನ್ನು ಮುರಿದು ಅದನ್ನು ಮೀರಿ ಹೋಗಲು ಇದೊಂದು ಅವಕಾಶ. ಸೃಷ್ಟಿಯ ಆಲಿಂಗನದ ಸಂತೋಷವನ್ನೂ, ಸೃಷ್ಟಿಯ ಮೂಲದೊಂದಿಗಿನ ಪ್ರೀತಿಯ ಅನ್ಯೋನ್ಯತೆಯನ್ನೂ ಅರಿಯಿರಿ.
ಮುಂಗಾರಿನ ಮಳೆಯೊಂದಿಗೆ ಒಂದಾಗಿ, ತೊಟ್ಟಿಕ್ಕುವ ಹರ್ಷೋತ್ಕರ್ಷವನ್ನು ಅನುಭವಿಸಿ.
ರೇನ್ ರೇನ್ ಗೋ ಅವೇ ಎಂದು ನೀವೆಂದೂ ಹೇಳದಿರಿ!
ಪ್ರಣಯಿಗಳಂತೆ ಒಂದಾಗಿ ಬೆರೆಯುತಿಹರು
ಮಂಜಿನಿಂದ ಉನ್ಮತ್ತವಾದ ಅನುರಾಗದಲಿ
ತನ್ನನ್ನು ಇಲ್ಲವಾಗಿಸಿಕೊಳ್ಳುವ ಏಕಾಗ್ರಚಿತ್ತತೆಯಲಿ
ವಿಲೀನವಾಗಿ ಒಬ್ಬರನ್ನೊಬ್ಬರು ಅರಿಯಲು
ತನ್ನನ್ನು ನಾಶಪಡಿಸಿಕೊಳ್ಳುವ ಹಾತೊರೆತದಲಿ
ಇನ್ನೊಂದರಲ್ಲಿ ಕಳೆದು ಹೋಗುವ ತವಕದಲಿ
ಆ ಸನಾತನ ಹಸ್ತವು ಇವನ್ನು ಬೇರ್ಪಡಿಸಿದ್ದೇ
ನಶ್ವರ ಕೈಗೊಂಬೆಗಳಂತೆ ಅವನ್ನು ಒಂದಾಗಿಸಲು
ಕೆಮ್ಮಣ್ಣು ಮತ್ತು ಸುರಿಯುವ ಮಳೆ
ಒಂದಾದದ್ದು ಬರೀ ಕೆಸರಾಗಿ ಉಳಿಯಲಲ್ಲ
ಬದಲಾಗಿ ಜೀವಕ್ಕೆ ಚೇತನವನ್ನು ತುಂಬಲು
ಮಡಿದುದನ್ನು ಅಡಿಗೆ ಸರಿಸಲು
ಮರ, ಹೂವು, ಅಥವಾ ಹಣ್ಣಾಗಲು.
ಭೂ ಗಗನಗಳು ಮುತ್ತಿಕ್ಕಿ ಒಂದುಗೂಡಲು
ಜೀವವು ಉಕ್ಕಿ ಹರಿಯುವುದು ಜಗದಲಿ
ದೈವವು ಕುಣಿದು ನಲಿದಾಡುವುದು ಇದರಲಿ