ಭಾರತದ ಕೃಷಿ ಭವಿಷ್ಯ
ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗಿನ ಸಂಭಾಷಣೆಯಲ್ಲಿ, ಪುರಾತನ ಕಾಲದಿಂದಲೂ ಆಕ್ರಮಣ ಮತ್ತು ವ್ಯಾಪಾರಗಳಿಂದಾಗಿ ಭಾರತದ ಕೃಷಿಯಲ್ಲಾದ ಬದಲಾವಣೆಗಳನ್ನು ಮತ್ತು ಆ ಬದಲಾವಣೆಗಳ ಪರಿಣಾಮವನ್ನು ನಮ್ಮ ರೈತರು ಇಂದಿಗೂ ಸಹ ಅನುಭವಿಸುತ್ತಿರುವ ಚಿತ್ರಣವನ್ನು ಸದ್ಗುರುಗಳು ನೀಡುತ್ತಾರೆ. ಆಧುನಿಕ ರೈತರ ಜೀವನವನ್ನು ಸುಧಾರಿಸಲು ಮತ್ತು ನಮ್ಮ ದೇಶದ ಕೃಷಿ ಭವಿಷ್ಯವನ್ನು ಭದ್ರಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ರೂಪರೇಖೆಯನ್ನು ಸದ್ಗುರುಗಳು ವಿವರಿಸುತ್ತಾರೆ.
ಪ್ರಶ್ನೆ: ಸದ್ಗುರು, ನಾವು ಕೃಷಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವುದರಿಂದ ನಮ್ಮ ಪ್ರಶ್ನೆಯು ಕೃಷಿಗೆ ಸಂಬಂಧಪಟ್ಟದ್ದಾಗಿದೆ. ಮಧ್ಯಕಾಲೀನ ಯುಗದಲ್ಲಿ ಕೃಷಿಯು GDPಗೆ ಶೇಕಡ ಮೂವತ್ತಕ್ಕಿಂತ ಹೆಚ್ಚಿನಷ್ಟು ಕೊಡುಗೆಯನ್ನು ನೀಡುತ್ತಿದ್ದ ಒಂದು ಉದ್ಯಮವಾಗಿತ್ತು. ಆದರೆ ಈಗ, ಅದು ಶೇಕಡ ಹದಿನಾರು ಅಥವಾ ಹದಿನೇಳರಷ್ಟಕ್ಕೆ ಇಳಿದಿದೆ. ಇಂದಿನ ಸನ್ನಿವೇಶವನ್ನು ಗಮನಿಸಿದರೆ, ಕೃಷಿಯು ನಮ್ಮ ಮೂರರಲ್ಲಿ ಎರಡರಷ್ಟು ಜನಸಂಖ್ಯೆಗೆ ಉದ್ಯೋಗವನ್ನು ಒದಗಿಸುತ್ತಿರುವ ಏಕೈಕ ಉದ್ಯಮವುವಾಗಿದೆ. ಈ ವಿರೋಧಾಭಾಸವು ದೇಶದ ಆರ್ಥಿಕ ಅಭಿವೃದ್ಧಿಗೆ ನಿರ್ಬಂಧವನ್ನು ಸೃಷ್ಟಿಸುತ್ತಿಲ್ಲವೇ?
ಸದ್ಗುರು: ಕೃಷಿಯನ್ನು ಉದ್ಯಮವೆಂದು ಪರಿಗಣಿಸುತ್ತಿರುವುದು ಬಹಳ ಪ್ರಗತಿಪರವಾಗಿದೆ. ಮನುಷ್ಯನ ಕೃಷಿ ಮಾಡುವ ಸಾಮರ್ಥ್ಯವು ನಮ್ಮ ನಾಗರಿಕತೆಯ ಅಡಿಪಾಯ. ನಾವು ಬೇಟೆಯಾಡಿ ಸಂಗ್ರಹಿಸುವವರಾಗಿದ್ದರೆ, ಈ ನಾಗರಿಕತೆಯನ್ನು ಬೆಳೆಸಲು ನಮಗಾಗುತ್ತಿರಲಿಲ್ಲ. ಮಣ್ಣಿನಿಂದ ಅನ್ನವನ್ನು ತೆಗೆಯುವ ನಮ್ಮ ಸಾಮರ್ಥ್ಯದಿಂದಲೇ ನಾವು ನಗರ ಮತ್ತು ಪಟ್ಟಣಗಳನ್ನು ನಿರ್ಮಿಸಿ ನೆಲೆನಿಂತೆವು ಹಾಗೂ ಹಲವು ಬಗೆಯ ಕಲೆ, ವಿಜ್ಞಾನಗಳು ಮತ್ತೆಲ್ಲವೂ ಬೆಳೆದವು. ನಾವಿನ್ನೂ ಯಾವುದಾದರು ಪ್ರಾಣಿಯನ್ನು ಕೊಲ್ಲಲು ಅದರ ಹಿಂದೆ ಓಡುವಂತಿರುತ್ತಿದ್ದರೆ, ಈಗಿರುವ ನಾಗರಿಕತೆಯನ್ನು ನಾವೆಂದೂ ನಿರ್ಮಿಸುತ್ತಿರಲಿಲ್ಲ.
ಕೃಷಿ ಎಂಬ ಕೈಚಳಕ
ಕೃಷಿಯು ನಮ್ಮ ನಾಗರಿಕತೆಯ ಅಡಿಪಾಯ. ನಾವಿದನ್ನು ಮರೆಯಬಾರದು. ಇದು ಒಂದು ರೀತಿಯ ಕೈಚಳಕ. ನೀವು ಮೆಟ್ಟುತ್ತಿರುವ ಮಣ್ಣನ್ನು ಆಹಾರವನ್ನಾಗಿ ಪರಿವರ್ತಿಸಲಾಗುತ್ತಿದೆ. ನಾನು ಯಾವ ಕೈಚಳಕದ ಬಗ್ಗೆ ಮಾತನಾಡುತ್ತಿರುವೆ ಎಂದು ನಿಮಗೆ ಅರ್ಥವಾಗದಿದ್ದರೆ, ಇಂದಿನ ನಿಮ್ಮ ರಾತ್ರಿಯ ಊಟದಲ್ಲಿ ಉಪ್ಪಿನಕಾಯಿಯ ಬದಲು ಸ್ವಲ್ಪ ಮಣ್ಣನ್ನು ತಟ್ಟೆಯಲ್ಲಿರಿಸಿಕೊಳ್ಳಿ ಮತ್ತು ಊಟಕ್ಕೆ ಅದನ್ನು ನೆಂಚಿಕೊಂಡು ತಿನ್ನಿ. ನೀವು ಮಣ್ಣನ್ನು ತಿನ್ನುಬೇಕಾಗಿದಿದ್ದರೆ ಎಷ್ಟು ಕೆಟ್ಟದಾಗಿರುತ್ತಿತ್ತು ಎಂದು ಆಗ ಗೊತ್ತಾಗುತ್ತದೆ. ಆದರೆ ಅದೇ ತಿನ್ನಲಾಗದ ಮಣ್ಣನ್ನು ನಾವು, ನಮ್ಮನ್ನು ಪೋಷಿಸುವಂತಹ ಅದ್ಭುತ ಆಹಾರವನ್ನಾಗಿ ಪರಿವರ್ತಿಸುತ್ತೇವೆ. ಇದು ಸಾಮಾನ್ಯ ವಿಷಯವಲ್ಲ.
ಮಣ್ಣನ್ನು ಆಹಾರವನ್ನಾಗಿ ಪರಿವರ್ತಿಸುವುದೇ ಕೃಷಿ. ಈ ಅಪೂರ್ವವಾದ ಪ್ರಕ್ರಿಯೆಯನ್ನು ಮನುಷ್ಯರು ಗಿಡಗಳ ಬೆಳವಣಿಗೆಯನ್ನು ಗಮನಿಸುವ ಮತ್ತು ಉಪಯೋಗಿಸಿಕೊಳ್ಳುವ ಮೂಲಕ ಕಂಡುಕೊಂಡರು. ನನಗೆ ತಿಳಿದಿರುವ ಪ್ರಕಾರ, ದಕ್ಷಿಣ ಅಮೇರಿಕದ ಕೆಲವು ಭಾಗಗಳನ್ನು ಹೊರತುಪಡಿಸಿ, ಹನ್ನೆರಡು ಸಾವಿರ ವರ್ಷಗಳಷ್ಟು ಕೃಷಿ ಇತಿಹಾಸವನ್ನು ಹೊಂದಿರುವ ಏಕೈಕ ದೇಶವೆಂದರೆ ನಮ್ಮದೇ. ನೀವು ಕಾಲೇಜಿನಲ್ಲಿ ಓದುತ್ತಿದ್ದೀರಿ, ನಾನೇನಾದರು ತಪ್ಪಾಗಿ ಹೇಳುತ್ತಿದ್ದರೆ ತಿಳಿಸಿ. ದಕ್ಷಿಣ ಭಾರತದ ತಮಿಳುನಾಡಿನಲ್ಲಿ, ನಾವು ಹನ್ನೆರಡು ಸಾವಿರ ವರ್ಷಗಳಷ್ಟು ಕಾಲ ಅದೇ ನೆಲವನ್ನು ಉಳುತ್ತಿದ್ದೇವೆ. ಅಮೇರಿಕದಲ್ಲಿ ಮಣ್ಣನ್ನು “ಕಸ” ಎಂದು ಕರೆಯುತ್ತಾರೆ. ಇಲ್ಲಿ, ನಾವದನ್ನು ತಾಯಿ ಮಣ್ಣು ಎಂದು ಕರೆಯುತ್ತೇವೆ ಏಕೆಂದರೆ ಮಣ್ಣಿನೊಂದಿಗೆ ನಾವೊಂದು ಆಳವಾದ ಸಂಬಂಧವನ್ನು ಹೊಂದಿದ್ದೇವೆ.
ಬದುಕುಳಿಯಲು ಕೃಷಿಯತ್ತ ಬದಲಾವಣೆ
ಸುಮಾರು ನೂರೆಪ್ಪತ್ತು, ನೂರೆಂಬತ್ತು ವರ್ಷಗಳ ಹಿಂದೆ, ಭಾರತವು ಬಹಳ ಕೈಗಾರಿಕೀಕರಣಗೊಂಡ ದೇಶವಾಗಿತ್ತು. ಮುನ್ನೂರು ವರ್ಷಗಳ ಹಿಂದೆ, ನಾವು ಬಹುಶಃ ಭೂಮಿಯ ಮೇಲೆ ಅತಿ ಹೆಚ್ಚು ಕೈಗಾರಿಕೀಕರಣಗೊಂಡ ದೇಶವಾಗಿದ್ದೆವು. ಜವಳಿ ಉದ್ದಿಮೆಯು ಪ್ರಮುಖ ಕೈಗಾರಿಕೆಗಳಲ್ಲೊಂದಾಗಿತ್ತು. ಈ ದೇಶದಿಂದ ನಾವು ಪ್ರಪಂಚದ ಶೇಕಡ ಅರವತ್ತರಷ್ಟು ಜವಳಿಯನ್ನು ರಫ್ತು ಮಾಡುತ್ತಿದ್ದೆವು. 1800 ರಿಂದ 1860ನೇ ಇಸವಿಯ ನಡುವೆ ಕೇವಲ ಬಟ್ಟೆಯನ್ನು ಖರೀದಿಸಲು ಬೃಹತ್ ಪ್ರಮಾಣದ ಯುರೋಪಿಯನ್ ಹಣವು ಭಾರತಕ್ಕೆ ಬರುತ್ತಿರುವುದನ್ನು ಬ್ರಿಟಿಷರು ಗಮನಿಸಿದರು. ಅರಬ್-ನವರು ಭಾರತೀಯ ಬಟ್ಟೆಯನ್ನು ಖರೀದಿಸಿ, ಯುರೋಪಿನಲ್ಲಿ ಅದನ್ನು ಹತ್ತು ಪಟ್ಟು ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದರು. ಹಾಗಾಗಿ, ಅವರಲ್ಲಿನ ಚಿನ್ನ ಮತ್ತು ಬೆಳ್ಳಿ ಎಲ್ಲವೂ ಭಾರತಕ್ಕೆ ಬರುತ್ತಿತು. ಈ ಕಾರಣಕ್ಕಾಗಿಯೆ ಯುರೋಪಿಯನ್ನರು ತಮ್ಮ ದಂಡಯಾತ್ರೆಗಳನ್ನು ಪ್ರಾರಂಭಿಸಿದರು - ಕೊಲಂಬಸ್, ವಾಸ್ಕೊ-ಡಾ-ಗಾಮಾ ಮತ್ತು ಇನ್ನಿತರರು. ಅರಬ್ಬರು ಎಲ್ಲವನ್ನೂ ಹತ್ತು ಪಟ್ಟು ಹಣಕ್ಕೆ ಮಾರುವುದನ್ನು ತಪ್ಪಿಸಲು, ಪ್ರತಿಯೊಬ್ಬರೂ ಸಹ ಕಡಲ ಮಾರ್ಗವನ್ನು ಕಂಡುಕೊಳ್ಳವ ಸಾಹಸವನ್ನು ಮಾಡಲಾರಂಭಿಸಿದರು.
ಅವರಿಲ್ಲಿಗೆ ಬಂದಾಗ, ಜವಳಿ ಉದ್ದಿಮೆಯು ಎಷ್ಟು ಸರಳ ಹಾಗೂ ಕುಶಲತೆಯಿಂದ ಕೂಡಿತ್ತು ಎನ್ನುವುದನ್ನು ನೋಡಿದರು. ಕೈಮಗ್ಗದವರು ಮಾಡುವುದನ್ನು ಯಂತ್ರಗಳ ಸಹಾಯದಿಂದ ಮಾಡಬಹುದೆಂದು ಯೋಚಿಸಿ, ಯಂತ್ರೋಪಕರಣಗಳನ್ನು ಸ್ಥಾಪಿಸಲು ಅವರು ಪ್ರಾರಂಭಿಸಿದರು. ಇದಾದ ಕೇವಲ ಅರವತ್ತು ವರ್ಷಗಳಲ್ಲಿ, ದೇಶದ ಜವಳಿ ರಫ್ತು ಶೇಕಡ ತೊಂಬತ್ತೆಂಟರಷ್ಟು ಕಡಿಮೆಯಾಯಿತು. ಶೇಕಡ ಎರಡರಷ್ಟು ಮಾತ್ರ ಉಳಿದುಕೊಂಡಿತು, ಏಕೆಂದರೆ ಅವರು ಜವಳಿ ಉತ್ಪನ್ನಗಳ ಮೇಲೆ ಭಾರೀ ತೆರಿಗೆಗಳನ್ನು ವಿಧಿಸಿದರು ಮತ್ತು ಉತ್ತಮವಾದ ಬಟ್ಟೆಯನ್ನು ತಯಾರಿಸುತ್ತಿದ್ದ ಕೆಲವು ಸ್ಥಳಗಳಲ್ಲಿ ಕೈಮಗ್ಗದವರ ಹೆಬೆಟ್ಟನ್ನು ಕತ್ತರಿಸಿಹಾಕಿ ಅವರ ಕೈಮಗ್ಗಗಳನ್ನು ನಾಶಪಡಿಸಿದರು.
1830ನೇ ಇಸವಿಯ ಸಮಯದಲ್ಲಿ ಬ್ರಿಟಿಷ್ ಗವರ್ನರ್ ಜನರಲ್-ಗಳಲ್ಲೊಬ್ಬರು, "ಭಾರತದ ಹೊಲ ಗದ್ದೆಗಳನ್ನು, ಕೈಮಗ್ಗದವರ ಮೂಳೆಗಳಿಂದ ಶುಭ್ರಗೊಳಿಸಲಾಗಿದೆ" ಎಂದು ಹೇಳಿದ್ದರು. ಜವಳಿ ಉದ್ಯಮವು ನಾಶವಾದ ಕಾರಣ ಅದರಲ್ಲಿ ತೊಡಗಿದ್ದ ಲಕ್ಷಾಂತರ ಜನರು ಹಸಿವಿನಿಂದ ಸಾವನ್ನಪ್ಪಿದರು. ಈ ಸಮಯದಲ್ಲಿ ಜನಸಂಖ್ಯೆಯ ದೊಡ್ಡ ಭಾಗವು ಕೃಷಿಗೆ ಹಿಂದಿರುಗಿತು. ಕೃಷಿಯು ಮುಖ್ಯವಾಗಿ ಅವರ ಜೀವನೋಪಾಯವಾಯಿತು; ಕೇವಲ ಅವರಿಗೆ ಮತ್ತು ಅವರ ಕುಟುಂಬಗಳಿಗೆ ಆಹಾರವನ್ನು ಉತ್ಪಾದಿಸಲು ಅವರು ಭೂಮಿಯನ್ನು ಉಳಲು ಪ್ರಾರಂಭಿಸಿದರು. ಆದ್ದರಿಂದ, 1947ನೇ ಇಸವಿಯ ಹೊತ್ತಿಗೆ, ಭಾರತದ ಜನಸಂಖ್ಯೆಯ ಶೇಕಡ ಎಪ್ಪತ್ತೇಳರಷ್ಟು ಜನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.
ನಮ್ಮ ಮಾನವ ಸಂಪನ್ಮೂಲದ ಸಂಘಟನೆ
ಇಂದು ಇದು ಶೇಕಡ ಅರವತ್ತಕ್ಕೆ ಇಳಿದಿದೆ. ಇದರರ್ಥ, ಹತ್ತು ಮಂದಿ ತಿನ್ನಬೇಕೆಂದರೆ, ಆರು ಮಂದಿ ಬೆಳೆ ತೆಗೆಯತ್ತಿದ್ದಾರೆ. ಇದು ಮಾನವ ಸಂಪನ್ಮೂಲವನ್ನು ಬಳಸಲು ಸಮರ್ಥವಾದ ಮಾರ್ಗವಲ್ಲ. ವಾಸ್ತವವಾಗಿ, ನಮ್ಮ ದೇಶದಲ್ಲಿರುವು ನಿಜವಾದ ಸಂಪನ್ಮೂಲವೆಂದರೆ ಮಾನವ ಸಂಪನ್ಮೂಲ. ನಮ್ಮಲೇನೂ ಹೆಚ್ಚಿಗೆ ಇಲ್ಲ, ಆದರೆ ನಮ್ಮಲ್ಲಿ ಜನಸಮೂಹವಿದೆ. ಈ ಜನಸಂಖ್ಯೆಗೆ ತರಬೇತಿಯನ್ನು ನೀಡಿ, ಅವರಿಗೆ ಗಮನ ಮತ್ತು ಪ್ರೇರಣೆಯನ್ನು ನೀಡಿದರೆ, ನಾವೊಂದು ದೊಡ್ಡ ಪವಾಡ ಸದೃಶ ದೇಶವಾಗಬಹುದು. ಅದನ್ನು ಮಾಡಲು ನಾವು ವಿಫಲರಾದಲ್ಲಿ, ನಾವೊಂದು ದೊಡ್ಡ ಅನರ್ಥವಾಗುತ್ತೇವೆ.
ದೇಶದ ಶೇಕಡ ಅರವತ್ತರಷ್ಟು ಜನ ಕೃಷಿಯಲ್ಲಿರುವುದು ಸರಿಯಾದ ವಿಷಯವಲ್ಲ. ನಾವು ಈ ಜನಸಮೂಹವನ್ನು ಬೇರೆ ವಿಷಯಗಳಲ್ಲಿ ತೊಡಗಿಸಬೇಕಾಗಿದೆ. ಇದರರ್ಥ ಅವರನ್ನು ನಗರಗಳಿಗೆ ವರ್ಗಾಯಿಸುವುದಲ್ಲ ಆದರೆ ಅವರನ್ನು ಬೇರೆ ವೃತ್ತಿ, ವ್ಯಾಪಾರ, ಕರಕುಶಲತೆ ಮತ್ತು ಕೌಶಲ್ಯಗಳೆಡೆಗೆ ಪ್ರೇರೇಪಿಸಬೇಕು. ಆದರೆ ಈ ನಿಟ್ಟಿನಲ್ಲಿ, ಯಾವುದೇ ಖಚಿತವಾದ ಮತ್ತು ಸಂಘಟಿತ ಪ್ರಯತ್ನಗಳು ನಡೆದಿಲ್ಲ.
ಒಂದು ಹಿಂದುಳಿದ ಮಾನವಕುಲ
ಕೃಷಿಯು ಸಂಪೂರ್ಣ ರೀತಿಯಲ್ಲಿ ನಡೆಯುತ್ತಿಲ್ಲ ಏಕೆಂದರೆ ಸಂಘಟಿತವಾಗಿ ನಾವದನ್ನು ಮಾಡಲಿಲ್ಲ. ಈ ಕಾರಣದಿಂದಾಗಿ, ನೀವು ಗಮನಿಸಬಹುದಾದ ಒಂದು ವಿಷಯವೆಂದರೆ, ಗ್ರಾಮೀಣ ಜನತೆಯು ಅತೀವ ಅಪೌಷ್ಟಿಕತೆಯಲ್ಲಿರುವುದು. ನಲವತ್ತು ವರ್ಷಗಳ ಹಿಂದೆ ನೀವೊಂದು ಹಳ್ಳಿಗೆ ಹೋಗಿದ್ದರೆ, ಅಲ್ಲಿ ಎಲ್ಲರೂ ಹರಿದ ಬಟ್ಟೆಗಳನ್ನು ಧರಿಸಿರುತ್ತಿದ್ದರು, ಕುಡಿಯುವ ನೀರು ಇರುತ್ತಿರಲಿಲ್ಲ, ಎಮ್ಮೆಗಳು ಕುಡಿಯುವ ಕೊಳದಿಂದಲೇ ಅವರು ಕೂಡ ನೀರು ಕುಡಿಯುತ್ತಿದ್ದರು, ಬೇರೆಲ್ಲ ರೀತಿಯ ಸಮಸ್ಯೆಗಳಿದ್ದವು, ಆದರೆ ಪುರುಷರು ಮತ್ತು ಮಹಿಳೆಯರು ಸದೃಢವಾಗಿದ್ದರು. ಇಂದು ನೀವೊಂದು ಹಳ್ಳಿಗೆ ಹೋಗಿ ನೋಡಿದರೆ, ಶೇಕಡ ಅರವತ್ತರಷ್ಟು ಗ್ರಾಮೀಣ ಜನರಲ್ಲಿ, ಅವರ ಅಸ್ಥಿಪಂಜರದ ವ್ಯವಸ್ಥೆಯು ಪೂರ್ಣ ಗಾತ್ರಕ್ಕೆ ಬೆಳೆದಿರುವುದಿಲ್ಲ. ಜೀವನಾಧಾರಕ್ಕೆಂದು ಇದ್ದ ಕೃಷಿಯಿಂದ ನಗದು ಕೃಷಿಯೆಡೆಗೆ ಬದಲಾಗಿದ್ದರಿಂದ, ಅವರು ಕುಗ್ಗಿಹೋಗಿದ್ದಾರೆ.
ಅವರು ಜೀವನಾಧಾರಕ್ಕೆ ಕೃಷಿಯನ್ನು ಮಾಡುತ್ತಿದ್ದಾಗ, ಅವರು ಬಳಿ ಹಣವಿರುತ್ತಿರಲಿಲ್ಲ, ಆದರೆ ಅವರು ವಿವಿಧ ತೆರನಾದ ಆಹಾರವನ್ನು ತಿನ್ನುತ್ತಿದ್ದರು. ಇಂದು, ದಕ್ಷಿಣ ಭಾರತದಲ್ಲಿನ ಪ್ರಧಾನ ಆಹಾರವು ಅಕ್ಕಿ, ಹುಣಸೆ, ಈರುಳ್ಳಿ ಮತ್ತು ಮೆಣಸಿನಕಾಯಿಯಾಗಿ ಮಾರ್ಪಟ್ಟಿದೆ. ಇದಷ್ಟನ್ನೇ ಬಳಸಿ ರುಚಿಯಾಗಿ ಏನನ್ನಾದರೂ ತಯಾರಿಸುವುದು ಹೇಗೆಂದು ಅವರಿಗೆ ತಿಳಿದಿದೆ: ಅನ್ನ ರಸಂ ಇದ್ದರೆ ಸಾಕು. ಉತ್ತರದಲ್ಲಿ, ಇದು ಕೇವಲ ಗೋಧಿ, ಮೆಣಸಿನಕಾಯಿ ಮತ್ತು ಈರುಳ್ಳಿಯಾಗಿದೆ. ಈ ಕಾರಣದಿಂದ, ಪೋಷಣೆಯ ಮಟ್ಟವು ಬಹಳವಾಗಿ ಕುಸಿದಿದೆ. ಇದೊಂದು ಗಂಭೀರ ಕಾಳಜಿಯ ವಿಷಯವಾಗಿದೆ ಮತ್ತಿದರ ಕಾರಣದಿಂದಾಗಿ ಅಭಿವೃದ್ಧಿಯಿಂದ ಕುಂಠಿತವಾದ ಒಂದು ಪೀಳಿಗೆಯನ್ನು ನಾವು ಸೃಷ್ಟಿಸುತ್ತಿದ್ದೇವೆ.
ಈ ದೇಶದ ಜನಸಂಖ್ಯೆಯಲ್ಲಿನ ಬಹಳಷ್ಟು ಜನರು ತಮ್ಮ ಜೀವನದ ಆರಂಭಿಕ ಹಂತಗಳಲ್ಲಿ ಒಳ್ಳೆಯ ಆಹಾರವನ್ನು ತಿಂದಿಲ್ಲ ಮತ್ತವರಿಗೆ ನಂತರದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ದೇಹ ಮತ್ತು ಮೆದುಳಿನ ಬೆಳವಣಿಗೆಯು ನಿಂತುಹೋಗಿರುತ್ತದೆ. ಇದೀಗ ನಡೆಯಬೇಕಾದ ಪ್ರಮುಖ ವಿಷಯವೆಂದರೆ, ಕೃಷಿಯನ್ನು ಸಂಘಟಿಸುವುದು, ತಂತ್ರಜ್ಞಾನವನ್ನು ಬಳಸುವುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ದೊಡ್ಡ ಮಟ್ಟದ ಆರ್ಥಿಕತೆಯ ಅಗತ್ಯವಿದೆ. ಈಗ, ಸರಾಸರಿ ಭೂಮಿ ಹಿಡುವಳಿ ಒಂದು ಹೆಕ್ಟೇರ್ ಅಥವಾ ಎರಡೂವರೆ ಎಕರೆ ಆಗಿದೆ. ಇಷ್ಟು ಸಣ್ಣ ಭೂಮಿ ಹಿಡುವಳಿಗಳೊಂದಿಗೆ ನೀವು ದೊಡ್ಡದಾಗಿ ಏನನ್ನೂ ಮಾಡಲಾರಿರಿ. ಆದ್ದರಿಂದ, ಇದಕ್ಕೆ ನಾವೊಂದು ಪ್ರಮಾಣವನ್ನು ತರಲು, ರೈತ ಉತ್ಪನ್ನ ಒಕ್ಕೂಟ ಮತ್ತು ಇತರ ಅನೇಕ ವಿಷಯಗಳನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ. ಕೃಷಿ, ನೀರಾವರಿ ಮತ್ತು ಮಾರುಕಟ್ಟೆಯ ಉದ್ದೇಶಕ್ಕಾಗಿ ದೊಡ್ದ ಪ್ರಮಾಣದ ಅಗತ್ಯವಿದೆ. ಕೃಷಿ ಉತ್ಪಾದನೆಗಳು ತುಂಬಾ ಸಣ್ಣ ಪ್ರಮಾಣದಲ್ಲಿರುವ ಕಾರಣ, ಇದಕ್ಕೆ ಯಾವುದೇ ಪರಿಹಾರವಿಲ್ಲ.
ಪರಿಹಾರಕ್ಕಾಗಿ ಕಾರ್ಯವಿಧಾನ
Rally for Rivers-ನ ಭಾಗವಾಗಿ, ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಗಂಭೀರವಾದ ಒಂದು ಪ್ರಯತ್ನ ನಡೆಯುತ್ತಿದೆ. ನೀವು ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ, ಐದರಿಂದ ಆರು ವರ್ಷಗಳ ಅವಧಿಯಲ್ಲಿ ನಿಮ್ಮ ಆದಾಯವನ್ನು ಮೂರರಿಂದ ಎಂಟರಷ್ಟು ಹೆಚ್ಚಿಸಿಕೊಳ್ಳಬಹುದು. ಜಲ ಸಂಪನ್ಮೂಲಗಳನ್ನು ಸರಿಯಾಗಿ ಬಳಸುವುದು, ಪ್ರಾಣಿಗಳನ್ನು ಮರಳಿ ಹೊಲಗಳಿಗೆ ತರುವುದು, ನೀರಾವರಿ ಪದ್ಧತಿಗಳ ಸಂಯೋಜನೆ – ಇವೆಲ್ಲವೂ ಬಹಳ ಮುಖ್ಯ. ಒಂದು ಟ್ರಾಕ್ಟರ್ ಭೂಮಿಯನ್ನು ಉಳುತ್ತದೆಯೇ ಹೊರತು ಅದುನ್ನು ಫಲವತ್ತಾಗಿಸುವುದಿಲ್ಲ. ಅದಕ್ಕಾಗಿ, ಪ್ರಾಣಿಗಳು ಬೇಕು. ಪ್ರಾಣಿಗಳಿಲ್ಲದೆ, ಭವಿಷ್ಯದಲ್ಲಿ ಕೃಷಿಯನ್ನು ಮಾಡುಲು ಸಾಧ್ಯವಿಲ್ಲ.
ಈ ಪ್ರಯತ್ನಗಳನ್ನೆಲ್ಲಾ ಮಾಡಲಾಗುತ್ತಿದೆ, ಆದರೆ, ಇದೊಂದು ದೊಡ್ಡ ಹಾಗೂ ವಿಭಿನ್ನತೆಯಿಂದ ಕೂಡಿದ ದೇಶ - ಪ್ರತಿಭಟನೆ ಮತ್ತು ಪ್ರಕ್ಷುಬ್ಧತೆಯಿಲ್ಲದೆ, ಸಕಾರಾತ್ಮಕ ಅಥವಾ ನಕಾರಾತ್ಮಕ ವಿಷಯಗಳೇನೂ ನಡೆಯುವುದಿಲ್ಲ. ಪ್ರತಿ ಸಣ್ಣ ವಿಷಯಕ್ಕೂ ಪ್ರಯಾಸವಿರುತ್ತದೆ, ಆದರೆ ನಾವೀಗ ಇದನ್ನು ಮಾಡದಿದ್ದರೆ ಭಾರತದ ಕೃಷಿಯು ಅಪಾಯದ ಸ್ಥಿತಿಗೆ ತಲುಪಬಹದು. ನೀವು ರೈತರ ಸಮೀಕ್ಷೆಯೊಂದನ್ನು ಮಾಡಿದರೆ, ಅವರಲ್ಲಿ ಎಷ್ಟು ಜನ, ತಮ್ಮ ಮಕ್ಕಳು ಬೇಸಾಯ ಮಾಡಬೇಕೆಂದು ಬಯಸುತ್ತಾರೆ? ನನ್ನನ್ನು ನಂಬಿ, ಅದು ಶೇಕಡ ಎರಡರಿಂದ ಐದರಷ್ಟಿದೆ, ಅದಕ್ಕಿಂತ ಹೆಚ್ಚಿಗೆ ಇಲ್ಲ. ಅದು ದೇಶಕ್ಕೆ ಒಳ್ಳೆಯದಲ್ಲ.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.