ಕೇಶಮುಂಡನ ಮಾಡಿಸಿಕೊಳ್ಳುವುದರ ಮಹತ್ವವೇನು?
ತಲೆಯನ್ನು ಬೋಳಿಸಿಕೊಳ್ಳುವುದು ಅಥವಾ ಕೂದಲನ್ನು ಕತ್ತರಿಸದೆ ಹಾಗೆಯೇ ಬಿಡುವುದು ಆಧ್ಯಾತ್ಮದ ಮಾರ್ಗದಲ್ಲಿ ಯಾವೆಲ್ಲಾ ರೀತಿಗಳಲ್ಲಿ ಪರಿಣಾಮಗಳನ್ನು ಬೀರುತ್ತದೆ ಎನ್ನುವುದರ ಬಗ್ಗೆ ಸದ್ಗುರುಗಳು ಇಲ್ಲಿ ಮಾತನಾಡುತ್ತಾರೆ.
ಪ್ರಶ್ನೆ: ಆಶ್ರಮದ ಒಳಗೆ ಮತ್ತು ಹೊರಗಿನ ಬಹಳಷ್ಟು ಕಡೆಗಳಲ್ಲಿ, ತಮ್ಮ ಕೇಶಮುಂಡನವನ್ನು ಮಾಡಿಸಿಕೊಳ್ಳುವ ಅನೇಕ ಸನ್ಯಾಸಿಗಳಿದ್ದಾರೆ. ಹಾಗೆಯೇ, ತಮ್ಮ ದೇಹದ ಮೇಲಿರುವ ಒಂದೇ ಒಂದು ಕೂದಲನ್ನೂ ಕತ್ತರಿಸದೆ ಇರುವವರಿದ್ದಾರೆ. ಇವೆರಡು ಅಂಶಗಳ ನಡುವಿನ ವ್ಯತ್ಯಾಸವೇನು?
ಸದ್ಗುರು: ನೀವು ಒಂದು ಮರದ ರೆಂಬೆ ಕೊಂಬೆಗಳನ್ನು ಕತ್ತರಿಸಿದರೆ, ಆ ಮರವು ತನ್ನ ಶಕ್ತಿಯನ್ನು ಆ ಕತ್ತರಿಸಿದ ಭಾಗಗಳ ಕಡೆಗೆ ಕೇಂದ್ರೀಕರಿಸುತ್ತದೆ ಮತ್ತು ಮುಂದಿನ ಹದಿನೈದರಿಂದ ಮೂವತ್ತು ದಿನಗಳಲ್ಲಿ ಆ ಕತ್ತರಿಸಿದ ಭಾಗಗಳಲ್ಲಿಯೇ ಅತಿ ಹೆಚ್ಚು ಎಲೆಗಳು ಚಿಗುರುತ್ತವೆ ಎನ್ನುವುದನ್ನು ನೀವು ಗಮನಿಸಿದ್ದೀರ? ಮರವು ತನ್ನ ಶಕ್ತಿಯನ್ನು ಕತ್ತರಿಸಿದ ಭಾಗಗಳ ಕಡೆಗೆ ನಿರ್ದೇಶಿಸುವುದರಿಂದ ಹೀಗಾಗುತ್ತದೆ. ಇದೇ ರೀತಿ ನಿಮ್ಮ ದೇಹದಲ್ಲಿಯೂ ಆಗುತ್ತದೆ. ನೀವು ಇದ್ದಕ್ಕಿದ್ದಂತೆ ಕೂದಲನ್ನು ತೆಗೆದುಹಾಕಿದರೆ, ನಿಮ್ಮ ಪ್ರಾಣಶಕ್ತಿಗಳು ಆ ದಿಕ್ಕಿನೆಡೆಗೆ ಚಲಿಸುವುದನ್ನು ನೀವು ನೋಡುವಿರಿ. ಕೆಲವು ತರಹದ ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಿರುವವರು ಹಾಗಾಗಬೇಕು ಎಂದು ಬಯಸುತ್ತಾರೆ. ಹಾಗೆಂದ ಮಾತ್ರಕ್ಕೆ ತಮಗೆ ಇಷ್ಟ ಬಂದಾಗಲೆಲ್ಲಾ ಅವರು ತಮ್ಮ ಶಿರಮುಂಡನವನ್ನು ಮಾಡಿಸಿಕೊಳ್ಳುವುದಿಲ್ಲ. ಅಮಾವಾಸ್ಯೆಯ ಹಿಂದಿನ ದಿನವಾದ ಶಿವರಾತ್ರಿಯಂದು ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳುತ್ತಾರೆ, ಏಕೆಂದರೆ ಅಮಾವಾಸ್ಯೆಯ ಹಿಂದಿನ ದಿನ, ಅಮಾವಾಸ್ಯೆಯ ದಿನ ಹಾಗೂ ಪಾಡ್ಯದಂದು ಮಾನವನ ಜೀವವ್ಯವಸ್ಥೆಯಲ್ಲಿ ಪ್ರಾಣಶಕ್ತಿಯ ಉತ್ಕರ್ಷವಾಗುತ್ತದೆ. ನಾವು ಇದನ್ನು ಇನ್ನೂ ಸ್ವಲ್ಪ ವರ್ಧಿಸಬೇಕೆಂದು ಬಯಸುತ್ತೇವೆ.
ಆ ದಿನದಂದು ಕೂದಲನ್ನು ತೆಗೆಯುವುದು ಅಂದಿನ ದಿನ ಮಾಡಲಾಗುವ ಸಾಧನೆಯ ಕಾರಣದಿಂದಾಗಿ. ಯಾವುದೇ ಸಾಧನೆ ಇಲ್ಲದಿದ್ದರೆ ಅದು ಅಷ್ಟೊಂದು ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ನಿಮ್ಮಲ್ಲಿ ಕೆಲವರಿಗೆ ಇದು ತಿಳಿದಿರಬಹುದು - ತಮ್ಮ ಜೀವನದಲ್ಲೆಂದೂ ಕೇಶಮುಂಡನ ಮಾಡಿಸಿಕೊಂಡಿರದ ಮಹಿಳೆಯರೇನಾದರೂ ತಮ್ಮ ಕೂದಲನ್ನು ಸಂಪೂರ್ಣವಾಗಿ ತೆಗೆಸಿಕೊಂಡುಬಿಟ್ಟರೆ, ಅವರು ಮಾನಸಿಕ ಅಸಮತೋಲನವನ್ನು ಅನುಭವಿಸುತ್ತಾರೆ, ಏಕೆಂದರೆ ಆ ದಿಕ್ಕಿನಲ್ಲಿ ಹರಿಯುವ ಮಿತಿಮೀರಿದ ಶಕ್ತಿಯನ್ನು ಸಂಭಾಳಿಸಲು ಅವರು ಅಸಮರ್ಥರಾಗಿರುತ್ತಾರೆ. ಈಗಾಗಲೇ ಒಂದು ಸಣ್ಣ ಅಸಮತೋಲನವೇನಾದರು ಇದ್ದರೆ, ಅದು ಇನ್ನೂ ಹೆಚ್ಚಾಗುತ್ತದೆ. ಆದರೆ ಅದನ್ನು ಸರಿಹೊಂದಿಸಿ, ಅದನ್ನು ಬೆಂಬಲಿಸುವ ಅಗತ್ಯವಾದ ಸಾಧನೆಯಿದ್ದರೆ, ಅದು ನಿಮಗೆ ಲಾಭವನ್ನು ತಂದುಕೊಡುತ್ತದೆ. ಒಬ್ಬ ಆಧ್ಯಾತ್ಮಿಕ ಸಾಧಕನು ತನ್ನ ಆಧ್ಯಾತ್ಮಿಕ ಒಳಿತನ್ನು ಮಾತ್ರವೇ ಅರಸುವುದಲ್ಲದೇ, ದೊಡ್ಡದೊಂದು ಸಾಧ್ಯತೆಯೆಡೆಗೆ ಒಂದು ಉಪಕರಣವಾಗಲು ಪ್ರಯತ್ನಿಸುತ್ತಿರುವಾಗ ಪ್ರಕೃತಿಯಲ್ಲಿನ ಪ್ರತಿಯೊಂದು ಸಣ್ಣ ಬೆಂಬಲವನ್ನೂ ಆತ ಬಳಸಿಕೊಳ್ಳಲು ಇಚ್ಛಿಸುತ್ತಾನೆ. ಶಿರಮುಂಡನ ಮಾಡಿಸಿಕೊಳ್ಳುವುದು ಅದರ ಒಂದು ಭಾಗವಾಗಿದೆ.
ತಮ್ಮ ಪ್ರಾಣಶಕ್ತಿಯು ಶಿರದಿಂದ ಹೊರಹೊಮ್ಮುತ್ತಿರುವ ಸ್ಥಿತಿಗೆ ಯಾರಾದರೂ ತಲುಪಿದಾಗ, ಅವರು ಭೌತಿಕ ಶರೀರದ ಹೊರಗಿರುವಂತಹ ಎರಡು ಚಕ್ರಗಳನ್ನು ಸಕ್ರಿಯಗೊಳಿಸಿದರೆ, ಅಂತಹವರು ತಮ್ಮ ತಲೆಯನ್ನು ಬೋಳಿಸುವುದಿಲ್ಲ. ವಾಸ್ತವದಲ್ಲಿ, ಆ ಚಕ್ರಗಳನ್ನು ರಕ್ಷಿಸಲು ಮತ್ತು ಪೋಷಿಸಲು ನಾವು ನಮ್ಮ ಕೂದಲನ್ನು ಬೆಳಸಿ ಅದನ್ನು ಮೇಲೆತ್ತಿ ಕಟ್ಟಿಕೊಳ್ಳುವುದಕ್ಕೆ ಇಷ್ಟ ಪಡುತ್ತೇವೆ. ಸಾಕಷ್ಟು ಕೂದಲು ಇಲ್ಲದೇ ಹೋದರೆ, ನಾವು ಬಟ್ಟೆಯನ್ನು ಬಳಸುತ್ತೇವೆ. ಒಮ್ಮೆ ದೇಹದ ಹೊರಗಿರುವ ಎರಡು ಚಕ್ರಗಳು ಸಕ್ರಿಯವಾದರೆ, ಅದೊಂದು ಅಮೋಘವಾದ ಸಾಧ್ಯತೆಯಾದರೂ ಸಹ, ಅದು ದೇಹವನ್ನು ಸ್ವಲ್ಪ ಮಟ್ಟಿಗೆ ದುರ್ಬಲಗೊಳಿಸುತ್ತದೆ. ಈ ಎರಡು ಚಕ್ರಗಳು ಬೇಕಿರುವುದಕ್ಕಿಂತ ಹೆಚ್ಚಿನ ಶಕ್ತಿಯನ್ನು ಎಳೆದುಕೊಳ್ಳುತ್ತದೆ. ಈ ಕಾರಣದಿಂದಲೇ ಅನೇಕ ಯೋಗಿಗಳು ಅವರಿಗೆ ಮೂವತ್ತೈದು ವರ್ಷವಾಗುವ ಹೊತ್ತಿಗೆ ಸಾವನ್ನಪ್ಪುತ್ತಾರೆ, ಏಕೆಂದರೆ ಅವರು ನಿರ್ದಿಷ್ಟ ಮಟ್ಟದ ಶಕ್ತಿಯನ್ನು ಪಡೆದುಕೊಂಡಿದ್ದರೂ ಕೂಡ, ಅವರಿಗೆ ಶರೀರದ ಎಲ್ಲಾ ಅಂಶಗಳ ಬಗ್ಗೆ ತಿಳಿದಿರುವುದಿಲ್ಲ; ಅವರು ಮಾನವ ವ್ಯವಸ್ಥೆಯ ಕಾರ್ಯವೈಖರಿಯನ್ನು ಚೆನ್ನಾಗಿ ತಿಳಿದಿರುವುದಿಲ್ಲ. ಮಾನವ ದೇಹವು ಅತ್ಯಂತ ಜಟಿಲವಾದ ಹಾಗೂ ಸಂಕೀರ್ಣವಾದ ಯಂತ್ರ. ಸೃಷ್ಟಿಕರ್ತನು ಈ ದೇಹವನ್ನು ಹಾಗೆ ರಚಿಸಿದ್ದಾನೆ. ಅದು ಸಂಕೀರ್ಣವಾಗಿರುವುದು ಅದನ್ನು ಜಟಿಲವಾಗಿಸುವ ಉದ್ದೇಶದಿಂದಷ್ಟೇ ಅಲ್ಲ, ಅದು ಸಂಕೀರ್ಣವಾಗಿದೆ ಎಂದು ನಾವು ಹೇಳಿದಾಗ ಅದು ಸಾಮಾನ್ಯ ಯಂತ್ರಕ್ಕಿಂತ ಹೆಚ್ಚು ಸಾಧ್ಯತೆಗಳನ್ನು ಹೊಂದಿದೆ ಎಂದರ್ಥ.
ನೀವು ನಿಮ್ಮ ಭೌತಿಕತೆಯಲ್ಲಿ ಸರಿಯಾಗಿ ಬೇರೂರಿಲ್ಲದಿದ್ದರೆ, ಉನ್ನತ ಸಾಧ್ಯತೆಗಳು ನಿಮ್ಮನ್ನು ಭೌತಿಕತೆಯಿಂದ ದೂರಾಗಿಸುತ್ತವೆ. ಭೌತಿಕತೆಯಿಂದ ದೂರಾಗಿಸುವುದು ಎಂದರೆ ದೈಹಿಕವಾಗಿ ಕಡಿಮೆ ಸಾಮರ್ಥ್ಯವನ್ನು ಹೊಂದುವುದು ಅಥವಾ ದೇಹವನ್ನೇ ತೊರೆಯುವುದು ಎಂದರ್ಥ. ಈ ಕಾರಣದಿಂದಾಗಿಯೇ ಹಠಯೋಗವು ಮುಖ್ಯವಾಗಿರುವುದು: ನೀವು ಉನ್ನತ ಸಾಧ್ಯತೆಗಾಗಿ ಪ್ರಯತ್ನಿಸುವ ಮುನ್ನ, ನಿಮ್ಮ ಪ್ರಾಣಶಕ್ತಿಗಳು ನಿಮ್ಮ ಭೌತಿಕತೆಯಲ್ಲಿ ಗಟ್ಟಿಯಾಗಿ ಬೇರೂರುವಂತೆ ಮಾಡಲು ಹಠಯೋಗವು ನಿಮ್ಮ ದೇಹವನ್ನು ಸಿದ್ಧಪಡಿಸುತ್ತದೆ.